ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಮಾಗಡಿ ಗ್ರಾಮದಲ್ಲಿನ ಸುಮಾರು ೭೦ ಹೆಕ್ಟೇರ್ ವಿಸ್ತೀರ್ಣದ ಮಳೆಯಾಧಾರಿತ ಕೆರೆಯೇ ಪಕ್ಷಿಧಾಮವಾಗಿ ರೂಪಿತಗೊಂಡಿದೆ. ಈ ಪಕ್ಷಿಧಾಮವು ಶಿರಹಟ್ಟಿಯಿಂದ ೮ ಕೀ.ಮಿ, ಹಾಗೂ ಗದಗದಿಂದ ೨೭ ಕೀ.ಮೀ ದೂರದಲ್ಲಿದೆ.‌ ಇಲ್ಲಿಗೆ ಚಳಿಗಾಲದಲ್ಲಿ, ಪ್ರಮುಖವಾಗಿ ಮಂಗೋಲಿಯಾ ದೇಶದಿಂದ ಪಟ್ಟೆತಲೆ ಹೆಬ್ಬಾತು ಯಾ ಪರ್ವತಹಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿ (೫೦೦೦ಕ್ಕೂ ಅಧಿಕ; ಇಡೀ ವಿಶ್ವದಲ್ಲಿ ಇರುವುದು ೧.೨ ಲಕ್ಷ) ವಲಸೆ ಬರುವುದರಿಂದ ಪಕ್ಷಿಧಾಮವನ್ನಾಗಿ ಘೋಷಿಸಲಾಗಿದೆ. ಇಲ್ಲಿಗೆ ಹತ್ತಿರವಿರುವ ೧೨೦ ಹೆಕ್ಟೇರ್ ವಿಸ್ತೀರ್ಣದ ಶೆಟ್ಟಿಕೆರೆಗೆ ಚಳಿಗಾಲದಲ್ಲಿ ಕ್ರೌಂಚ ಪಕ್ಷಿಗಳು (ಡೊಮೆಸಿಲ್ ಕ್ರೆನ್) ಹೆಚ್ಚಿನ ಸಂಖ್ಯೆಯಲ್ಲಿ ( ೪೦೦೦ ಕ್ಕೂ ಅಧಿಕ; ಇಡೀ ವಿಶ್ವದಲ್ಲಿ ಇರುವುದು ೨.೫ ಲಕ್ಷ) ಕಾಣಿಸಿಕೊಂಡಿದ್ದರಿಂದ ಒಟ್ಟಾಗಿ - ಮಾಗಡಿ ಮತ್ತು ಶೆಟ್ಟಿಕೆರೆ ಜೌಗುಪ್ರದೇಶ ಒಂದು ಪ್ರಮುಖ ಹಕ್ಕಿತಾಣವೆಂದು ಗುರುತಿಸಲಾಗಿದೆ (೨೦೧೬)[].

ನವೆಂಬರ್‌ ತಿಂಗಳಿನಲ್ಲಿ ಆಗಮಿಸಲಾರಂಭಿಸುವ ಹೆಬ್ಬಾತುಗಳು ಡಿಸೆಂಬರ್‌ ಎರಡನೇ ವಾರದ ಹೊತ್ತಿಗೆ ಸಂಪೂರ್ಣ ಕೆರೆಯ ನೀರ ಮೇಲೆಲ್ಲಾ ಹರಡಿ ತೇಲುತ್ತಿರುತ್ತವೆ. ಇವುಗಳು ಹಗಲು ಹೊತ್ತಿನಲ್ಲಿ ವಿಶ್ರಮಿಸಿ ಸಂಜೆಯಾಗುತ್ತಿದ್ದಂತೆ ಚಿಗುರೆಲೆ, ಧವಸ, ಧಾನ್ಯಗಳಂತಹ ಆಹಾರವನ್ನು ಅರಸಿ ಬೆಳೆ ಇರುವ ಕೃಷಿ ಭೂಮಿಯತ್ತ ಹೊರಡುತ್ತವೆ, ಮುಂಜಾನೆ ಮರಳಿ ಬರುತ್ತವೆ. ಅಧಿಕ ಸಂಖ್ಯೆಯಲ್ಲಿ ಬಂದ ಹೆಬ್ಬಾತುಗಳು ಇಲ್ಲಿಯೇ ನೆಲೆನಿಲ್ಲುವುದಿಲ್ಲ, ಕೆಲದಿನಗಳಲ್ಲಿ ದೊರೆಯುವ ಆಹಾರಕ್ಕನುಗುಣವಾಗಿ ಚದುರಿದಂತೆ ದಕ್ಷಿಣ ದಿಕ್ಕಿನತ್ತ ಹರಡುತ್ತಾ ಹೋಗುತ್ತವೆ. ವಲಸೆಯ ಅಧ್ಯಯನಕ್ಕಾಗಿ ಮಂಗೋಲಿಯಾದಲ್ಲಿ ತೊಡಿಸಿರುವ ಕೊರಳ ಪಟ್ಟಿಯಿರುವ ಹೆಬ್ಬಾತುಗಳು ಮತ್ತದೇ ಪ್ರದೇಶಕ್ಕೆ ಪದೇ ಪದೇ ಆಗಮಿಸುತ್ತಿರುವುದು ತಿಳಿದುಬಂದಿದೆ[].

ಪಟ್ಟೆತಲೆ ಹೆಬ್ಬಾತು (ಬಾರ್ ಹೆಡೆಡ್ ಗೂಸ್)

ಇದುವರೆಗೂ ಇಲ್ಲಿ ಸುಮಾರು ೧೬೬ ವಿವಿಧ ಜಾತೀಯ ಹಕ್ಕಿಗಳನ್ನು ಗುರುತಿಸಲಾಗಿದೆ‌[]. ಇವುಗಳಲ್ಲಿ ಸುಮಾರು ೪೪ ವಲಸೆಬರುವಂತಹವು. ಪಟ್ಟೆತಲೆ ಹೆಬ್ಬಾತುಗಳಲ್ಲದೆ ಬೂದು ಹೆಬ್ಬಾತು (ಗ್ರೇಲಾಗ್‌ ಗೂಸ್)‌, ಕಂದು ಬಾತು (ಬ್ರಾಹ್ಮಿಣಿ ಶೆಲ್ಡ್‌ಕ್), ಸೂಜಿಬಾಲದ ಬಾತು (ನಾರ್ದರ್ನ್‌ ಪಿನ್ಟೇಲ್)‌, ಚಲುಕ ಬಾತು (ನಾರ್ದರ್ನ್‌ ಷೋವೆಲರ್), ನಾಮದ ಬಾತು (ಯೂರೇಷಿಯನ್‌ ವಿಜನ್)‌, ಬಿಳಿಹುಬ್ಬಿನ ಬಾತು (ಗಾರ್ಗನಿ), ಕಂದುತಲೆ ಬಾತು (ಕಾಮನ್‌ ಪೊಚ್ಚರ್ಡ್)‌ ಮುಂತಾದ ಬಾತುಕೋಳಿಗಳೂ ಸಹ ಇಲ್ಲಿಗೆ ವಲಸೆ ಬರುತ್ತವೆ. ಸುತ್ತಲಿನ ಕೃಷಿ ಭೂಮಿ ಸಾಕಷ್ಟು ಸ್ಥಳೀಯ ಮತ್ತು ವಲಸೆ ಹಕ್ಕಿಗಳಿಗೆ ಆಶ್ರಯ ನೀಡಿದೆ. ವಿವಿಧ ನೀರಃಕ್ಕಿ, ನೀರ್ನಡಿಗೆ, ನೆಲವಾಸಿ, ಮರವಾಸಿ ಹಕ್ಕಿಗಳನ್ನು ಹತ್ತಿರದಿಂದ ಇಲ್ಲಿ ನೋಡಬಹುದಾಗಿದೆ.

ಪಕ್ಷಿಧಾಮಕ್ಕೆ ಭೇಟಿ ಕೊಡಲು ನವೆಂಬರ್ ತಿಂಗಳ ಎರಡನೇ ವಾರದಿಂದ ಮಾರ್ಚ್‌ ಮೂರನೇ ವಾರದವರೆಗಿನ ಅವಧಿ ಅತಿ ಉತ್ತಮ. ಹೆಬ್ಬಾತುಗಳು ಗುಂಪಿನಲ್ಲಿ ಆಹಾರವನ್ನರಸಿ ಹೋಗುವ ಹಾಗೂ ನಂತರ ಬರುವ ನೋಟ ಆನಂದದಾಯಕ, ಆದ್ದರಿಂದ ಮುಂಜಾನೆ ಸುಮಾರು ೮.೩೦ಯ ಹೊತ್ತಿಗೆ ಅವುಗಳು ಬರುವ ಸಮಯದಲ್ಲಿ ಇಲ್ಲಿದ್ದರೆ ಉತ್ತಮ, ಸಂಜೆ ೪ರ ನಂತರ ಇಲ್ಲಿಂದ ಹೊರಡಲು ಶುರುಮಾಡುತ್ತವೆ. ಹೆಬ್ಬಾತುಗಳು ಬರುವ ಮತ್ತು ಹೊರಡುವ ನಡುವಿನ ಸಮಯವನ್ನು ಸಮರ್ಪಕವಾಗಿ ಉಪಯೋಗಿಸಲು, ಹತ್ತಿರದಲ್ಲಿರುವ ಮತ್ತೊಂದು ವಿವಿಧ ಹಕ್ಕಿಗಳ ನೆಲೆ ಶೆಟ್ಟಿಕೆರೆಗೆ ಭೇಟಿಕೊಡಬಹುದು ಇಲ್ಲವೇ ಗಿಡಮರ, ಚಿಟ್ಟೆ ಮತ್ತು ಹಕ್ಕಿಗಳ ವೈವಿಧ್ಯತೆಯ ಬಂಢಾರ ಕಪ್ಪತ ಗುಡ್ಡಕ್ಕೆ ಭೇಟಿ ಕೊಟ್ಟು ಮರಳಿ ಸಂಜೆ ಹೆಬ್ಬಾತುಗಳು ನಿರ್ಗಮಿಸುವುದನ್ನು ಕಾಣಬಹುದು. ಸಂಪೂರ್ಣ ಕೆರೆಯನ್ನು ತೀರದಲ್ಲೇ ನಡೆದು ನೋಡಬಹುದಿದ್ದು, ಅರಣ್ಯ ಇಲಾಖೆಯ ವೀಕ್ಷಣಾ ಗೋಪುರ ಉತ್ತಮ ನೋಟವನ್ನು ಒದಗಿಸುತ್ತದೆ. ಇಲ್ಲಿನ ನುರಿತ, ಅನುಭವಿ ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ಸಾಕಷ್ಟು ಮಾಹಿತಿ ದೊರೆಯುವುದು ಇಲ್ಲಿನ ವಿಶೇಷ.


ಮಾಗಡಿ ಪಕ್ಷಿಧಾಮ

ಮಾಗಡಿ ಕೆರೆಯಲ್ಲಿ ಪಟ್ಟೆತಲೆ ಹೆಬ್ಬಾತುಗಳು

ಉಲ್ಲೇಖಗಳು

ಬದಲಾಯಿಸಿ


http://www.bnhsenvis.nic.in/Database/Important-Bird-And-Biodiversity-Areas-In-India_18738.aspx [೧] https://ebird.org/hotspot/L4161947

  ಈ ವಾರದ ಸಹಯೋಗ



  ಮಾಗಡಿ ಪಕ್ಷಿಧಾಮ : ಲೇಖನದಲ್ಲಿ ಮಾಡಬೇಕಾದ ಕೆಲಸಗಳು

ಈ ಪಟ್ಟಿಯನ್ನು ಬದಲಿಸಿ

ಮಾಗಡಿ ಪಕ್ಷಿಧಾಮ/to do