ಮಂದಿ
ಮಂದಿ ಮಾಂಸ, ಅನ್ನ, ಮತ್ತು ಸಂಬಾರ ಪದಾರ್ಥಗಳಿಂದ ತಯಾರಿಸಲಾದ ಯೆಮೆನ್‍ನ ಒಂದು ಸಾಂಪ್ರದಾಯಿಕ ಖಾದ್ಯ. ಇದನ್ನು ಕೆಲವು ಗಲ್ಫ್ ರಾಷ್ಟ್ರಗಳಲ್ಲೂ ತಿನ್ನಲಾಗುತ್ತದೆ. ಇದು ಕೇರಳದ ಮಲಬಾರ್ ಪ್ರದೇಶ, ಕರ್ನಾಟಕದ ಭಟ್ಕಳ, ಮತ್ತು ಹೈದರಾಬಾದ್ ಸುತ್ತಲಿನ ಪ್ರದೇಶಗಳಲ್ಲೂ ಜನಪ್ರಿಯವಾಗಿದೆ. "ಮಂದಿ" ಶಬ್ದ ಅರಬ್ಬೀ ಶಬ್ದ ನಡಾದಿಂದ ವ್ಯುತ್ಪನ್ನವಾಗಿದೆ, ಇದರರ್ಥ ಇಬ್ಬನಿ, ಮತ್ತು ಮಾಂಸದ ತೇವವಾದ, ಇಬ್ಬನಿ ಮುಸುಕಿರುವಂಥ ರಚನೆಯನ್ನು ಪ್ರತಿಬಿಂಬಿಸುತ್ತದೆ.
ಮಂದಿಯನ್ನು ಸಾಮಾನ್ಯವಾಗಿ ಅನ್ನ, ಮಾಂಸ (ಕುರಿಮರಿ ಮಾಂಸ ಅಥವಾ ಕೋಳಿಮಾಂಸ), ಮತ್ತು ಸಂಬಾರ ಪದಾರ್ಥಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. ರುಚಿಯನ್ನು ಮತ್ತಷ್ಟು ಹೆಚ್ಚಿಸಲು ಎಳೆ ಮತ್ತು ಸಣ್ಣ ಗಾತ್ರದ ಕುರಿಮರಿಯು ಸಾಮಾನ್ಯವಾಗಿ ಬಳಸಲಾದ ಮಾಂಸವಾಗಿರುತ್ತದೆ. ಮಂದಿಯನ್ನು ಇತರ ಮಾಂಸದ ಭಕ್ಷ್ಯಗಳಿಂದ ವ್ಯತ್ಯಾಸಮಾಡುವ ಮುಖ್ಯ ಸಂಗತಿಯೆಂದರೆ ಮಾಂಸವನ್ನು ಒಂದು ವಿಶೇಷ ಬಗೆಯ ಒಲೆಯಾದ ತಂದೂರ್‌ನಲ್ಲಿ ಬೇಯಿಸಲಾಗುತ್ತದೆ. ತಂದೂರ್ ಎಂದರೆ ಸಾಮಾನ್ಯವಾಗಿ ನೆಲದಲ್ಲಿ ಅಗೆದ ರಂಧ್ರವಾಗಿರುತ್ತದೆ ಮತ್ತು ಒಳಗೆ ಆವೆಮಣ್ಣಿನಿಂದ ಲೇಪನ ಮಾಡಲಾಗಿರುತ್ತದೆ.[೧] ಮಂದಿಯನ್ನು ಬೇಯಿಸಲು, ತಂದೂರ್‌ನಲ್ಲಿ ಒಣ ಕಟ್ಟಿಗೆಯನ್ನು ಇಟ್ಟು ಹೊತ್ತಿಸಲಾಗುತ್ತದೆ. ಇದು ಇದ್ದಲಾಗಿ ಪರಿವರ್ತನೆಗೊಂಡು ಬಹಳ ಶಾಖವನ್ನು ಉತ್ಪಾದಿಸುತ್ತದೆ. ನಂತರ ಮಾಂಸವನ್ನು ತಂದೂರ್‌ನ ಒಳಗೆ ಕಲ್ಲಿದ್ದಲನ್ನು ಸ್ಪರ್ಶಿಸದಂತೆ ಜೋತುಬಿಡಲಾಗುತ್ತದೆ. ಅದರ ನಂತರ, ಇಡೀ ತಂದೂರನ್ನು ಮುಚ್ಚಲಾಗುತ್ತದೆ, ಆದರೆ ಹೆಚ್ಚಿನ ಹೊಗೆಯನ್ನು ತೆಗೆಯಲು ಒಂದು ಗಾಳಿಕಿಂಡಿಯನ್ನು ಬಿಡಲಾಗುತ್ತದೆ. ಒಬ್ಬರ ರುಚಿಗೆ ತಕ್ಕಂತೆ ಅನ್ನಕ್ಕೆ ಒಣದ್ರಾಕ್ಷಿಗಳು, ಪೈನ್ ಬೀಜಗಳು, ಅಥವಾ ಕಡಲೇಕಾಯಿಯನ್ನು ಸೇರಿಸಬಹುದು.
ಮೊದಲು ಮಾಂಸವನ್ನು ಇಡೀ ಮಸಾಲೆಗಳೊಂದಿಗೆ ಮೃದುವಾಗುವವರೆಗೆ ಬೇಯಿಸಲಾಗುತ್ತದೆ. ಮಸಾಲೆಭರಿತ ಸ್ಟಾಕ್ ಅನ್ನು ನಂತರ ಬಾಸ್ಮತಿ ಅಕ್ಕಿಯನ್ನು ಬೇಯಿಸಲು ಬಳಸಲಾಗುತ್ತದೆ. ನಂತರ ಬೆಂದ ಮಾಂಸವನ್ನು ತಂದೂರ್‌ನಲ್ಲಿ ಸುಟ್ಟು ಬೇಯಿಸಲು ಮತ್ತು ಗರಿಗರಿಯಾಗಲು ಇಡಲಾಗುತ್ತದೆ. ಅಕ್ಕಿ ಬೆಂದ ಮೇಲೆ ಅಂತಿಮ ಘಟ್ಟವೆಂದರೆ ಅನ್ನಕ್ಕೆ ಹೊಗೆಯಾಡಿಸುವುದು. ಇದರಲ್ಲಿ ಒಂದು ಲೋಹದ ತಟ್ಟೆ ಮೇಲೆ ಸ್ವಲ್ಪ ಅಡಿಗೆ ಎಣ್ಣೆ ಹಾಕಿ ಅದರ ಮೇಲೆ ಕೆಂಪು ಇದ್ದಲಿನ ತುಂಡು ಸೇರಿಸಿ ಅನ್ನದಲ್ಲಿ ಇಡಲಾಗುತ್ತದೆ ಮತ್ತು ಹೊಗೆಯಾಡಲು ಸುಮಾರು ೧೦ ನಿಮಿಷಗಳ ಕಾಲ ಮುಚ್ಚಲಾಗುತ್ತದೆ.
ಮಂದಿಯನ್ನು ಮುಖ್ಯ ಭಕ್ಷ್ಯವೆಂದು ಪರಿಗಣಿಸಿ ಈದ್, ಮದುವೆಗಳು ಮತ್ತು ಹಬ್ಬದೂಟಗಳಂತಹ ವಿಶೇಷ ಸಂದರ್ಭಗಳಲ್ಲಿ ಬಡಿಸಲಾಗುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ Tracy, Kathleen (2011-03-31). We Visit Saudi Arabia (in ಇಂಗ್ಲಿಷ್). Mitchell Lane Publishers, Inc. ISBN 9781612280851.