'ಭೂಪೇನ್ ಹಝಾರಿಕಾ,' (Assamese: ভূপেন হাজৰিকা;

'ಬರ್ಲಿನ್ನಿನಲ್ಲಿ ಭೂಪೇನ್ ಹಝಾರಿಕಾ'

(೮, ಸೆಪ್ಟೆಂಬರ್, ೧೯೨೬- ೫, ನೊವೆಂಬರ್, ೨೦೧೧)

'ಭಾರತ ದೇಶ'ದ ಪೂರ್ವೋತ್ತರ ಮೂಲೆಯಿಂದ ಬಂದ ಮೊಟ್ಟಮೊದಲ ಸುಪ್ರಸಿದ್ಧ ಸಂಗೀತಗಾರ, ಹಾಡುಗಾರ, ಸಂಗೀತ ನಿರ್ದೇಶಕ,ಕವಿ,ಪತ್ರಕರ್ತ, ಗೀತ ರಚನಕಾರ, ಹಾಗು ಸಿನಿಮಾ ನಿರ್ಮಾಪಕನೆಂಬ ಕೀರ್ತಿಗೆ ಪಾತ್ರರಾದ 'ಡಾ.ಭೂಪೇನ್ ಹಝಾರಿಕಾ' ತಮ್ಮ ಅನುಪಮ ಕೃತಿ,'ಗಂಗಾ ಬೆಹ್ತಿ ಹೊ ಕ್ಯೊಂ' ಗೀತೆಯನ್ನು ಹಾಡುವ ಮೂಲಕ ದೇಶದಾದ್ಯಂತ ಹೆಸರನ್ನುಗಳಿಸಿ ಚಿರಪರಿಚಿತರಾದರು. ಅಸ್ಸಾಮಿ ಭಾಷೆಯಲ್ಲಿ ತಾವೇ ನಿರ್ಮಿಸಿದ 'ಇರಾ ಭಾತರ್ ಸುರ್,' ಮುಂತಾದ ಚಿತ್ರಗಳಿಗೆ ಸಂಗೀತ ನಿರ್ದೇಶಿಸಿದರು. ಅವರ ೪೦ ವರ್ಷಗಳ ದೀರ್ಘ ಕಾಲೀನ ಜೀವನ ಸಂಗಾತಿ, 'ಕಲ್ಪನಾ ಲಾಜ್ಮಿ'ಯವರ 'ರುಡಾಲಿ,' ಏಕ್ ಪಲ್, ದರ್ಮಿಯಾನ್, ದಮನ್, ಹಾಗೂ ಸಾಯಿ ಪರಂಜಪೆಯವರ ಪಪಿಯಾ, ಸಾಜ್, ಮಿಲ್ ಗಯೇ ಮಂಝಿಲ್ ಮುಝೇ, ಮತ್ತು ಎಮ್.ಎಫ್.ಎಸ್. ಹುಸೇನ್ ರವರ 'ಗಜಗಾಮಿನಿ' ಮುಂತಾದ ಹಿಂದಿ ಚಿತ್ರಗಳಿಗೆ 'ಹಝಾರಿಕಾ'ರವರ ಸಿರಿಕಂಠ ಮೋಡಿಮಾಡಿತು.

'ಜನನ, ಬಾಲ್ಯ, ಹಾಗೂ ವಿದ್ಯಾಭ್ಯಾಸ'

ಬದಲಾಯಿಸಿ

'ಭೂಪೇನ್ ಹಝಾರಿಕಾ,' ಸನ್, ೧೯೨೬ ರಲ್ಲಿ 'ಅಸ್ಸಾಂ ರಾಜ್ಯ'ದ 'ಸಾದಿಯಾ ಗ್ರಾಮ'ದಲ್ಲಿ ಜನಿಸಿದರು. ಅವರ ತಂದೆ ನೀಲಕಾಂತ ಹಝಾರಿಕಾ, ಮತ್ತು ತಾಯಿ ಶಾಂತಿಪ್ರಿಯ ಹಝಾರಿಕಾ. ಗೌಹಾಟಿಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ಸನ್, ೧೯೪೨ ರಲ್ಲಿ ’ಕಾಟನ್ ಕಾಲೇಜ್' ನಿಂದ, 'ಇಂಟರ್ ಮೀಡಿಯೇಟ್ ಆರ್ಟ್ಸ್ ಪರೀಕ್ಷೆ'ಯಲ್ಲಿ ಉತ್ತೀರ್ಣರಾದರು. ಮುಂದೆ ಬೆನಾರೆಸ್ ಹಿಂದು ವಿಶ್ವವಿದ್ಯಾಲಯದಲ್ಲಿ ೧೯೪೪ ರಲ್ಲಿ, 'ಬಿ.ಎ.ಪದವಿ'ಯನ್ನು ಗಳಿಸಿದರು. ೧೯೪೬ ರಲ್ಲಿ 'ಪೊಲಿಟಿಕಲ್ ಸೈನ್ಸ್' ನಲ್ಲಿ 'ಎಮ್.ಎ.ಪದವಿ'ಗಳಿಸಿದರು. ೧೯೫೨ ರಲ್ಲಿ 'ಅಮೆರಿಕದ ನ್ಯೂಯಾರ್ಕ್ ನ ಕೊಲಂಬಿಯಾ ವಿಶ್ವವಿದ್ಯಾಲಯ'ದಿಂದ 'ಪಿ.ಎಚ್.ಡಿ.ಪದವಿ' ಗಳಿಸಿದರು. ಅವರಿಗೆ 'ಲಿಸ್ಲೆ ಫೆಲೋಷಿಪ್' ದೊರೆತಿತ್ತು. 'ಭೂಪೇನ್ ಹಝಾರಿಕ'ರವರು, ತಮ್ಮ 'ಪಿ.ಎಚ್.ಡಿ'.ಗೆ ಆರಿಸಿಕೊಂಡ ವಿಷಯ, "Proposals for Preparing India's Basic Education to Use Audio-Visual Techniques in Adult Education". ಸುಮಾರು ಒಂದು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ರಚಿಸಿ ಅದಕ್ಕೆ ಸಂಗೀತ ಅಳವಡಿಸಿದ್ದಲ್ಲದೆ, 'ಹಝಾರಿಕ'ರವರು, ಕೆಲವಾರು 'ಅಸ್ಸಾಮಿ ಚಲನಚಿತ್ರ'ಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. 'ಶಕುಂತಲಾ'(೧೯೬೦),'ಪ್ರತಿಧ್ವನಿ,'(೧೯೬೪)'ಲೋಟಿ ಘೋಟಿ,'(೧೯೬೭) ಅಸ್ಸಾಮಿ ಚಿತ್ರಗಳಿಗೆ 'ರಾಷ್ಟ್ರಪತಿ ಪದಕ' ದೊರೆತಿದೆ.'ಇಂಡಿಯನ್ ಪೀಪಲ್ಸ್ ಥಿಯೇಟರ್ ಮೂವ್ ಮೆಂಟ್', ಜೊತೆ ಗುರುತಿಸಿಕೊಳ್ಳುವ ಬಯಕೆಯಿಂದ ಬೊಂಬಾಯಿಗೆ ಆಗಮಿಸಿದಾಗ, ಅಲ್ಲಿನ ಹೆಸರಾಂತ ರಂಗ ಕರ್ಮಿಗಳಾದ 'ಸಲೀಲ್ ಚೌಧರಿ', 'ಬಲರಾಜ್ ಸಹಾನಿ', ಮತ್ತಿತರ ಗೆಳೆತನ ದೊರೆಯಿತು.

ಡಾ.ಭೂಪೇನ್ ಹಝಾರಿಕ ಕೆನಡದೇಶದ ಪ್ರಿಯಂವದ ಪಟೀಲ್ ರನ್ನು ಮದುವೆಯಾಗಿ, ಈ ದಂಪತಿಗಳಿಗೆ ತೇಝ್ ಹಝಾರಿಕಾ ಎಂಬ ಮಗನಿದ್ದಾನೆ. ತೇಝ್ ಈಗ ನ್ಯೂಯಾರ್ಕ್ ನಗರದಲ್ಲಿ ವಾಸಿಸುತ್ತಿದ್ದಾರೆ. ಭೂಪೇನ್ ದಾ, ಪ್ರಿಯಂವದರವರ ಜೊತೆ ಸಂಬಂಧವನ್ನು ಮುಂದುವರೆಸದೆ, ಸುಮಾರು ೧೩ ವರ್ಷಗಳ ನಂತರ, 'ಕಲ್ಪನಾ ಲಾಜ್ಮಿ'ಯವರ ಜೊತೆಗೆ ವಾಸಿಸಲು ಆರಂಭಿಸಿದರು. ಈಗಾಗಲೇ ೪ ದಶಕಗಳಾಗಿದ್ದರೂ, ಅವರು 'ಕಲ್ಪನಾ ಲಾಜ್ಮಿ'ಯವರನ್ನು ವಿವಾಹವಾಗಿಲ್ಲ.

ಪ್ರಶಸ್ತಿ ಪುರಸ್ಕಾರಗಳು

ಬದಲಾಯಿಸಿ
  • ೧೯೭೫ ರ, '೨೩ ನೆಯ ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ ಸಮಾರಂಭ'ದಲ್ಲಿ 'ಚಮೇಲಿ ಮೇಮ್ ಸಾಬ್' ಚಿತ್ರಕ್ಕೆ 'ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ' ದೊರೆಯಿತು. ಅದಕ್ಕೆ 'ಭೂಪೇನ್ ಹಝಾರಿಕ' ಸಂಗೀತ ಒದಗಿಸಿ ಕೊಟ್ಟಿದರು.
  • 'ರುಡಾಲಿ ಚಿತ್ರ'ಕ್ಕೆ, ಅಂತಾರಾಷ್ಟ್ರೀಯ ವಲಯದಲ್ಲಿ ೧೯೯೩ ರ, 'ಏಶಿಯಾ ಪೆಸಿಫಿಕ್ ಫಿಲ್ಮ್ ಫೆಸ್ಟಿವಲ್ ಅಟ್ ಜಪಾನ್' ವತಿಯಿಂದ, 'ಪ್ರಥಮ ಭಾರತೀಯ ಸಂಗೀತ ನಿರ್ದೇಶರೆಂಬ ಪ್ರಶಸ್ತಿ' ದೊರೆಯಿತು.
  • ೧೯೭೯ ರಲ್ಲಿ 'ಆಲ್ ಇಂಡಿಯ ಕ್ರಿಟಿಕ್ ಅಸೋಸಿಯೇಷನ್ ಅವಾರ್ಡ್, ಫಾರ್ ಬೆಸ್ಟ್ ಪರ್ಫಾರ್ಮಿಂಗ್ ಫೋಕ್ ಆರ್ಟ್',
  • 'ಪದ್ಮ ಭೂಷಣ ಪ್ರಶಸ್ತಿ' (೨೦೦೧)
  • 'ಭೂಪೇನ್ ಹಝಾರಿಕ'ರವರು, ೧೯೯೩ ರಲ್ಲಿ 'ಅಸ್ಸಾಂ ಸಾಹಿತ್ಯ ಸಭೆಗೆ ಅಧ್ಯಕ್ಷ'ರಾಗಿ ಆಯ್ಕೆಯಾದರು.
  • 'ಪ್ರತಿಷ್ಠಿತ ಬಾಬಾ ಸಾಹೇಬ್ ಫಾಲ್ಕೆ ಪ್ರಶಸ್ತಿ'(೧೯೯೨)
  • 'ಅಸೊಮ್ ರತ್ನ' (೨೦೦೯)
  • 'ಸಂಗೀತ ನಾಟಕ ಅಕಾಡೆಮಿ ಅವಾರ್ಡ್' (೨೦೦೯)
  • ಭಾರತ ರತ್ನ ಪ್ರಶಸ್ತಿ 2019

ಸಂಗೀತದಲ್ಲಿ ಅಪ್ಪಟ ಗ್ರಾಮೀಣ ಪ್ರತಿಭೆ ಎದ್ದು ಕಾಣುತ್ತಿತ್ತು

ಬದಲಾಯಿಸಿ

ಹಿಂದಿ, ಅಸ್ಸಾಮಿ, ಬಂಗಾಳಿ,ಮುಂತಾದ ಹಲವಾರು ಭಾಷೆಗಳಲ್ಲಿ ಸಂಗೀತವನ್ನು ನೀಡಿದ್ದ 'ಭೂಪೇನ್ ಹಝಾರಿಕಾ' ರವರು, ಬಾಲ್ಯದಲ್ಲೇ ಸಂಗೀತದ ಬಗ್ಗೆ ಒಲವು ಉಳ್ಳವರಾಗಿದ್ದರು. ಸಂಗೀತದ ಅ.ಆ.ಇ.ಈ ಗಳನ್ನು ಕಲಿತದ್ದು ಅವರ ತಾಯಿಯವರಿಂದ. ಅಸ್ಸಾಂನ ಬುಡಕಟ್ಟು ಜನರ ಹಾಡುಗಳನ್ನು ಹತ್ತಿರದಿಂದ ಕೇಳಿ ಹಾಡಿ,ನಲಿಯುತ್ತಾ ಬೆಳೆದರು. ಆದುದರಿಂದ 'ಭೂಪೇನ್ ಹಝಾರಿಕಾ'ರವರ ಸಂಗೀತದಲ್ಲಿ ಗಾಢವಾದ 'ಅಸ್ಸಾಮಿನ ಜಾನಪದ ಭಾಷೆಯ ಸೊಗಡ'ನ್ನು ಕಾಣುತ್ತೇವೆ. 'ಹಝಾರಿಕಾ' ಪಾದರ್ಪಣೆಮಾಡಿದ ಮೊಟ್ಟಮೊದಲ ಚಿತ್ರ, ಸನ್, ೧೯೩೯ ರಲ್ಲಿ ತಯಾರಾದ, 'ಇಂದ್ರಾ ಮಲತಿ' ಎಂಬ ಚಿತ್ರದಿಂದ. ಅಸ್ಸಾಂನ ಎರಡನೆಯ ಸಿನಿಮಾ 'ಬಿಸ್ವ ಬಿಜೊಯ್ ನೊ ಜವಾನ್' ಚಿತ್ರದಲ್ಲಿ ತಮ್ಮ ಹಾಡುಗಳಿಂದ ರಸಿಕರ ಮನ ತಣಿಸಿದ್ದರು. ಈ ಚಿತ್ರದ ಗೀತೆಗಳ ಮೂಲಕ ಅವರು ತಮ್ಮ ಗಾಯನದ ಬದುಕಿಗೆ ಮುನ್ನುಡಿ ಬರೆದರು. ಅವರದು ಅಪ್ಪಟ ಗ್ರಾಮೀಣ ಪ್ರತಿಭೆ. ಗ್ರಾಮೀಣ ಪರಿಸರದ ಜಾನಪದ ಸನ್ನಿವೇಷಗಳು ಅವರನ್ನು ಹೆಚ್ಚು ಹೆಚ್ಚು ಅಭ್ಯಾಸಮಾಡಲು ಮತ್ತು ಹಾಡಲು ಪ್ರೇರೇಪಿಸಿದವು. 'ಭೂಪಾಲಿ ರಾಗ' ಅವರ ಪ್ರೀತಿಯ ರಾಗವಾಗಿತ್ತು. ಇದಾದ ತರುವಾಯ ಅವರು ಯಶಸ್ಸಿನ ಪಧದಲ್ಲಿ ಮುಂದೆ ಸಾಗಿದರು. 'ಅರುಣಾಚಲ ಪ್ರದೇಶ'ದಲ್ಲಿ 'ಕಲರ್ ಫಿಲ್ಮ್' ಗಳು ಬರುವುದಕ್ಕೆ 'ಹಝಾರಿಕಾ'ರವರೇ ಕಾರಣಕರ್ತರೆನ್ನುವಷ್ಟು ಹೆಸರುಮಾಡಿದರು. ಸನ್, ೧೯೭೭ ರಲ್ಲಿ ತೆರೆಕಂಡ ಚಲನಚಿತ್ರ, 'ಮೇರಾ ಧರಮ್ ಮೇರಿ ಮಾ' ದಲ್ಲಿ ಅವರ ಕಾರ್ಯವೈಖರಿಯನ್ನು ಕಾಣಬಹುದು. ಇದೇ ರೀತಿ ಮತ್ತೊಂದು ಹಿಂದಿ ಚಿತ್ರ, 'ಏಕ್ ಪಲ್'ಇದಕ್ಕೆ ಹಲವರು ಪ್ರಶಸ್ತಿಗಳು ಅವರನ್ನು ಅರಸಿ ಬಂದವು. 'ರುಡಾಲಿ' ಚಿತ್ರದ ಜನಪ್ರಿಯತೆಯಿಂದ 'ಭೂಪೇನ್ ಹಝಾರಿಕ' ಮುಂಬೈನಲ್ಲಿ ಮನೆಮಾತಾದರು. ಈ ಚಿತ್ರ ಹಲವಾರು ಪ್ರಶಸ್ತಿಗಳನ್ನು 'ಹಾಸಿಲ್' ಮಾಡಿದೆ.ಸುಮಾರು ೩೬ ಅಸ್ಸಾಮಿ ಚಲನಚಿತ್ರಗಳಿಗೆ ಗೀತೆ ರಚಿಸಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಬೆಂಗಾಲಿ ಚಿತ್ರಗಳಾದ 'ಜಿಬನ್ ತ್ರಿಷ್ಣ', 'ಜೊಸಕಿರ್ ಆಲೋ', 'ಮಾಹಿತ್ ಬಂಧುರೆ', 'ಕರಿ ಓ ಕೋಮನ್', 'ಎ ಖಾನೆ ಪಿಂಚಾರ್', 'ದಂಪತಿ',ಮುಂತಾದ ಚಿತ್ರಗಳಿಗೆ ಸಂಗೀತ ಒದಗಿಸಿದ್ದಾರೆ. ಇದಲ್ಲದೆ ಅಸ್ಸಾಮಿನ ಪ್ರಮುಖ ಚಿತ್ರಗಳಿಗೆ ಸಂಗೀತ ನಿರ್ದೇಶನಮಾಡಿ ಹೆಸರುಪಡೆದಿದ್ದಾರೆ. ಅವುಗಳು ಹೀಗಿವೆ.

  • ಎರ್ ಬತರ್ ಸುರ್(೧೯೫೬),
  • ಮಾಹುತ್ ಬಂಧುರೆ(೧೯೫೮)
  • ಪ್ರತಿಧ್ವನಿ(೧೯೬೪)
  • ಶಕುಂತಲಾ( ೧೯೬೦)
  • ಲೋಟಿ ಘೋಟಿ(೧೯೬೭)
  • ಚಿಕ್ ಮಿಕ್ ಬಿಜುಲಿ(೧೯೭೦)
  • ಮೋನ್ ಪ್ರಜಾಪತಿ(೧೯೭೮)
  • ಸಿರಾಜ್(೧೯೮೮)

'ಗಾಂಧಿ ಟು ಹಿಟ್ಲರ್ ಚಲನಚಿತ್ರ'

ಬದಲಾಯಿಸಿ

'ಮಹಾತ್ಮಾ ಗಾಂಧಿ'ಯವರಿಗೆ ಅತ್ಯಂತ ಪ್ರಿಯವಾದ ಗೀತೆಗಳಲ್ಲೊಂದಾದ, 'ವೈಷ್ಣವ ಜನತೊ ತೇನೆ ಕಹಿಯೆ', ಭಜನೆಯನ್ನು ಹಾಡಿದ್ದು .'ಭೂಪೇನ್ ಹಝಾರಿಕರವರ ಕೊನೆಯ ಚಲನಚಿತ್ರ,'ಗಾಂಧಿ ಟು ಹಿಟ್ಲರ್' ಚಿತ್ರದಲ್ಲಿ.

ಡಾ.'ಭೂಪೇನ್ ಹಝಾರಿಕರವರ ಮರೆಯಲಾರದ ಕೃತಿಗಳು'

ಬದಲಾಯಿಸಿ
  • 'ದಿಲ್ ಹೂಂ ಹೂಂ ಕರೆ' (ರುಡಾಲಿ)
  • 'ಜರಾ ಧೀರೆ ಜರ ಧೀಮೆ'(ಏಕ್ ಪಲ್)
  • 'ನೈನೋಂ ಮೆ ದರ್ಪನ್ ಹೈ'(ಆರೂಪ್)
  • 'ಮೊಯ್ ಎತಿ ಜಜ ಬೋರ್'(ಸ್ವಂತ)
  • 'ಗಂಗಾ ಬೆಹ್ತಿ ಹೊ ಕ್ಯೊಂ' (ಸ್ವಂತ)

'ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ,' ಸಂಗೀತ ನಿರ್ದೇಶಕ, ಹಿರಿಯ ಗಾಯಕ, 'ಡಾ.ಭೂಪೇನ್ ಹಝಾರಿಕಾ'ರವರು, 'ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ'ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಲವು ದಿನಗಳಿಂದ 'ಬಹು ಅಂಗಾಂಗ ವೈಫಲ್ಯತೆ'ಯಿಂದ ಬಳಲುತ್ತ ಸುದೀರ್ಘಕಾಲ ಹಾಸಿಗೆಯಲ್ಲೇ ಮಲಗಿದ್ದ ೮೫ ವರ್ಷ ಪ್ರಾಯದ 'ಹಝಾರಿಕಾ'ರವರು, ಮತ್ತೆ ಚೇತರಿಸಿಕೊಳ್ಳಲೇ ಇಲ್ಲ. ಶನಿವಾರ, ೫ ನವೆಂಬರ್, ೨೦೧೧ ರಂದು, ಸಾಯಂಕಾಲ ೪-೩೦ ಕ್ಕೆ, ಕೊನೆಯುಸಿರೆಳೆದರು.

ಡಾ.ಭೂಪೇನ್ ಹಝಾರಿಕರವರ ಅಂತ್ಯಕ್ರಿಯೆಗಳು

ಬದಲಾಯಿಸಿ

ಪೂರ್ವೋತ್ತರ ವಿಭಾಗದಿಂದ ಭಾರತವನ್ನು ಪ್ರತಿನಿಧಿಸುತ್ತಿರುವ 'ಭೂಪೇನ್ ಹಝಾರಿಕಾ'ರವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲು ಸೋಮವಾರದಂದು, ಸುಮಾರು ೨ ಲಕ್ಷಕ್ಕೂ ಹೆಚ್ಚುಮಂದಿ ಭಾರತದ ಹಲವೆಡೆಗಳಿಂದ ಬಂದಿದ್ದರು. ಹಾಗಾಗಿ ಹಝಾರಿಕಾರವರ ಪಾರ್ಥಿವ ಶರೀರವನ್ನು ವೀಕ್ಷಿಸಲು ಜನರಿಗೆ ಅನುಕೂಲವಾಗುವಂತೆ ಗಾಜಿನ ಪೆಟ್ಟಿಗೆಯಲ್ಲಿ ಗೌರವ ಪೂರ್ವಕವಾಗಿ ಇರಿಸಲಾಯಿತು. ಅಂತ್ಯಕ್ರಿಯೆಗಳನ್ನು ವಿಧಿಪೂರ್ವಕವಾಗಿ ಬುಧವಾರ(೦೯-೧೧-೨೦೧೧)ರಂದು ನೆರವೇರಿಸಲಾಗುವುದೆಂದು ಮುಖ್ಯಮಂತ್ರಿ ತರುಣ್ ಗೊಗಾಯ್ ರವರು ಘೋಷಿಸಿದರು. ಭೂಪೇನ್ ರವರ ಒಬ್ಬನೇ ಮಗ, ತೇಝ್ ಭೂಪೇನ್ ಹಝಾರಿಕಾ, ಮಂಗಳವಾರ ಸಾಯಂಕಾಲ, ಅಮೆರಿಕದಿಂದ ಬಂದರು. 'ಗೌಹಾಟಿ ವಿಶ್ವವಿದ್ಯಾಲಯದ ಪ್ರಾಂಗಣ'ದಲ್ಲಿ ಅಂತಿಮ ಕ್ರಿಯೆಗಳನ್ನು ಬೆಳಿಗ್ಯೆ ೧೦-೩೦ ಕ್ಕೆ ಸಕಲ ಸರಕಾರಿ ಗೌರವ ವಿಧಾನಗಳಿಂದ ನೆರವೇರಿಸಲಾಯಿತು.