ಭಾರತೀಯ ವಾಸ್ತುಶಿಲ್ಪ
ತಾಜ್ ಮಹಲ್ (pronounced /tɑdʒ məˈhɑl/; ಹಿಂದಿ: ताज महल ; ಪರ್ಷಿಯನ್/ಉರ್ದು: تاج محل ) ಭಾರತದ ಆಗ್ರಾದಲ್ಲಿರುವ ಭವ್ಯ ಸಮಾಧಿಯಾಗಿದೆ. ಇದನ್ನು ಮೊಘಲ್ ಚಕ್ರವರ್ತಿ ಷಹ ಜಹಾನ್ ತನ್ನ ಮೆಚ್ಚಿನ ಪತ್ನಿ ಮಮ್ತಾಜ್ ಮಹಲ್‌ಳ ನೆನಪಿಗಾಗಿ ಕಟ್ಟಿಸಿದನು.
ಪರ್ಷಿಯನ್, ಭಾರತೀಯ ಮತ್ತು ಮುಸ್ಲಿಂ ವಾಸ್ತುಶೈಲಿಗಳ ಸಮ್ಮಿಶ್ರಣವಾದ ಮೊಘಲ್ ವಾಸ್ತುಶೈಲಿಗೆ ತಾಜ್ ಮಹಲ್ ("ತಾಜ್" ಎಂದೂ ಕರೆಯಲ್ಪಡುತ್ತದೆ) ಅತ್ಯುತ್ತಮ ಉದಾಹರಣೆಯೆಂದು ಪರಿಗಣಿಸಲಾಗಿದೆ.[೧][೨] 1983ರಲ್ಲಿ ತಾಜ್ ಮಹಲ್ UNESCOದ ವಿಶ್ವ ಪರಂಪರೆ ತಾಣವಾಗಿ ಗುರುತಿಸಲ್ಪಟ್ಟಿತು ಮತ್ತು ಇದನ್ನು "ಭಾರತದಲ್ಲಿರುವ ಮುಸ್ಲಿಂ ಕಲೆಯ ಅನರ್ಘ್ಯ ರತ್ನ ಮತ್ತು ಜಾಗತಿಕವಾಗಿ ಮೆಚ್ಚುಗೆಯನ್ನು ಪಡೆದ ವಿಶ್ವ ಪರಂಪರೆಯ ಮೇರುಕೃತಿಗಳಲ್ಲಿ ಒಂದು" ಎಂದು ಉಲ್ಲೇಖಿಸಲಾಗಿದೆ.
ತಾಜ್ ಮಹಲ್ ವಾಸ್ತವವಾಗಿ ಅನೇಕ ಸಂರಚನೆಗಳ ಒಂದು ಸಮಗ್ರ ಸಂಕೀರ್ಣವಾಗಿದ್ದು, ಗೌರವರ್ಣದ ಗುಮ್ಮಟಾಕಾರದ ಅಮೃತಶಿಲೆಯ ಭವ್ಯ ಸಮಾಧಿಯು ಇದರ ಅತ್ಯಂತ ಸುಪರಿಚಿತ ಭಾಗವಾಗಿದೆ. ಈ ಕಟ್ಟಡದ ನಿರ್ಮಾಣ ಕಾರ್ಯವು 1632ರಲ್ಲಿ ಪ್ರಾರಂಭವಾಗಿ, ಸರಿಸುಮಾರು 1653ರ ಹೊತ್ತಿಗೆ ಪೂರ್ಣಗೊಂಡಿತು. ಈ ಭವ್ಯ ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ಸಾವಿರಾರು ಕುಶಲಕರ್ಮಿಗಳು ಮತ್ತು ನುರಿತ ಕೆಲಸಗಾರರನ್ನು ಬಳಸಿಕೊಳ್ಳಲಾಗಿತ್ತು.[೩] ತಾಜ್ ಮಹಲ್‌ನ ನಿರ್ಮಾಣ ಕಾರ್ಯದ ಮೇಲ್ವಿಚಾರಣೆಗೆ ಅಬ್ದ್ ಉಲ್-ಕರೀಮ್ ಮಾಮುರ್ ಖಾನ್, ಮಖ್ರಾಮತ್ ಖಾನ್ ಮತ್ತು ಉಸ್ತಾದ್ ಅಹ್ಮದ್ ಲಹೌರಿ ಸೇರಿದಂತೆ ಇನ್ನೂ ಕೆಲವರನ್ನು ಒಳಗೊಂಡಂತೆ ವಾಸ್ತುಶಿಲ್ಪಿಗಳ ಮಂಡಳಿಗೆ ನೇಮಿಸಲಾಗಿತ್ತು.[೪][೫] ಅವರಲ್ಲಿ ಲಹೌರಿರವರನ್ನು ತಾಜ್ ಮಹಲ್ ನಿರ್ಮಾಣದ ಪ್ರಧಾನ ಶಿಲ್ಪಿ ಎಂದು ಸ್ಥೂಲವಾಗಿ ಪರಿಗಣಿಸಲಾಗಿದೆ