ಇಂದು ನಾವು ಬಳಸುವ ವಿದ್ಯುನ್ಮಾನ (ಎಲೆಕ್ಟ್ರಾನಿಕ್) ಉಪಕರಣಗಳಲ್ಲಿ ಬ್ಯಾಟರಿಯ ಬಳಕೆ ಸರ್ವೇಸಾಮಾನ್ಯ. ಮೊಬೈಲ್ ಫೋನ್, ಲ್ಯಾಪ್ ಟಾಪ್, ಎಲೆಕ್ಟ್ರಿಕ್ ಕಾರ್ ಇವೆಲ್ಲವೂ ವಿದ್ಯುತ್ಛಕ್ತಿಗಾಗಿ  ಬ್ಯಾಟರಿಗಳನ್ನು ಆಧರಿಸಿವೆ.   ಬ್ಯಾಟರಿ ಎಂದರೆ ಎಲೆಕ್ಟ್ರೋಕೆಮಿಕಲ್ ಸೆಲ್ ಗಳ ಸಮುಚ್ಚಯ.  ಎಲೆಕ್ಟ್ರೋ ಕೆಮಿಕಲ್  ಸೆಲ್    ರಾಸಾಯನಿಕಗಳಲ್ಲಿರುವ  ಚೈತನ್ಯವನ್ನು  ವಿದ್ಯುತ್ ಚೈತನ್ಯವನ್ನಾಗಿ ಮಾರ್ಪಡಿಸುತ್ತದೆ.  ಒಂದು ಸೆಲ್ ಎರಡು ವಿಭಿನ್ನ ಲೋಹಗಳ ಎಲೆಕ್ಟ್ರೋಡ್ ಗಳನ್ನು ಹೊಂದಿರುತ್ತದೆ.  ಇವುಗಳನ್ನು ಆನೋಡ್ ಮತ್ತು ಕ್ಯಾಥೋಡ್ ಎಂದು ಕರೆಯುತ್ತಾರೆ.  ಇವೆರಡೂ ಎಲೆಕ್ಟ್ರೋಲೈಟ್ ಎಂಬ ರಾಸಾಯನಿಕದ ಸಂಪರ್ಕದಲ್ಲಿರುತ್ತವೆ. ಎಲೆಕ್ಟ್ರೋಲೈಟ್ ರಾಸಾಯನಿಕವು ಒಂದು ಲವಣ ಪದಾರ್ಥ. ಲವಣದ ಅಣುಗಳಲ್ಲಿ ಎಲೆಕ್ಟ್ರೋಲಿಟಿಕ್ ಬಾಂಡ್ ನೀರಿನ ಸಂಪರ್ಕದಲ್ಲಿ ಮುರಿದು ಬೀಳುತ್ತದೆ.  ಆಗ ಲವಣದ ಆನ್ ಅಯಾನ್ (anion, ಋಣಾತ್ಮಕ) ಮತ್ತು ಕ್ಯಾಟ್ ಅಯಾನ್ (cation, ಧನಾತ್ಮಕ) ಗಳು ಪರಸ್ಪರ ಪ್ರತ್ಯೇಕಿಸುತ್ತವೆ.  ಆನ್ ಅಯಾನುಗಳು ಆನೋಡ್ ಕಡೆಗೆ ಆಕರ್ಷಿತವಾಗುತ್ತವೆ. ಕ್ಯಾಟ್ ಅಯಾನುಗಳು ಕ್ಯಾಥೋಡ್ ಕಡೆಗೆ ಆಕರ್ಷಿತವಾಗುತ್ತವೆ.  ಹೀಗಾಗಿ ಆನೋಡ್ ಋಣಾತ್ಮಕವಾದ ಮತ್ತು ಕ್ಯಾಥೋಡ್ ಧನಾತ್ಮಕವಾದ ವಿದ್ಯುತ್ ಚಾರ್ಜುಗಳನ್ನು ಶೇಖರಿಸುತ್ತದೆ.  ಚಾರ್ಜ್ ಕಳೆದುಕೊಂಡಮೇಲೂ ರೀಚಾರ್ಜಬಲ್ ಬ್ಯಾಟರಿಗಳನ್ನು ಪುನಃ ಚಾರ್ಜ್ ಮಾಡಿ ಬಳಸಬಹುದು.  ಆದರೆ ಎಷ್ಟು ಸಲ ರೀಚಾರ್ಜ್ ಮಾಡಬಹುದು ಎಂಬುದಕ್ಕೆ ಮಿತಿ ಇದೆ.  ಬ್ಯಾಟರಿಗಳು ತಮ್ಮ ಚಾರ್ಜ್ ಸಂಪೂರ್ಣ ಕಳೆದುಕೊಂಡಾಗ ಅವುಗಳನ್ನು ಇ-ವೇಸ್ಟ್ ಎಂದು ಪರಿಗಣಿಸಿ ಭೂಮಿಯಲ್ಲಿ ಹುದುಗಿಸುವುದು ರೂಢಿ. ಬ್ಯಾಟರಿಗಳಲ್ಲಿರುವ ಕೆಲವು ಲೋಹಗಳು ವಿಷ ಪದಾರ್ಥಗಳು. ಇವು ಭೂಮಿಯಿಂದ ಬೆಳೆಗಳಿಗೆ ಸೇರಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. []

ಎಲೆಕ್ಟ್ರೋಲೈಟಿಕ್ ಸೆಲ್ - ಕ್ಯಾಥೋಡ್, ಆನೋಡ್ ಮತ್ತು ಎಲೆಕ್ಟ್ರೋಲೈಟ್ ಇವುಗಳನ್ನು ಗುರುತಿಸಬಹುದು.


ಈ ಬ್ಯಾಟರಿಗಳಲ್ಲಿ ಹಲವಾರು ವಿಧಗಳಿವೆ.

ಲಿಥಿಯಂ ಅಯಾನ್ ಬ್ಯಾಟರಿ

೧. ಲಿಥಿಯಂ ಅಯಾನ್ ಬ್ಯಾಟರಿ :  ಇಲ್ಲಿ ಆನೋಡ್ ಗ್ರಾಫೈಟ್ ಎಂಬ ಪದಾರ್ಥದಿಂದ ಮತ್ತು ಕ್ಯಾಥೋಡ್ ಲಿಥಿಯಂ ಆಕ್ಸೈಡ್ ಪದಾರ್ಥದಿಂದ ಸೃಷ್ಟಿಸಲಾಗುತ್ತದೆ. ಲಿಥಿಯಂ  ಅಯಾನುಗಳ ಓಡಾಟದಿಂದ ಸೆಲ್ ಚಾರ್ಜ್ / ಡಿಸ್ಚಾರ್ಜ್ ಆಗುತ್ತದೆ.  ಕಡಿಮೆ ಘನ ಅಳತೆಯಲ್ಲಿ (volume) ಹೆಚ್ಚಿನ ವಿದ್ಯುತ್ ಸಂಗ್ರಹವಾಗುವುದು ಈ ಬಗೆಯ ಬ್ಯಾಟರಿಯ ವಿಶಿಷ್ಟತೆ.  ಲಿಥಿಯಂ ಅಯಾನ್ ಬ್ಯಾಟರಿಗಳ ತೂಕ ಕಡಿಮೆ. ಅವುಗಳನ್ನು ಮತ್ತೆ ಅನೇಕ ಸಲ ರೀಚಾರ್ಜ್ ಮಾಡಿ ಬಳಸಬಹುದು; ತಾನಾಗಿ ಡಿಸ್ಚಾರ್ಜ್ ಆಗಲು ಬಹಳ ಕಾಲ ಬೇಕು;  ಹೀಗಾಗಿ ಇವುಗಳ ಬಾಳಿಕೆ ಹೆಚ್ಚು.  ಇವುಗಳ ತಾಪಮಾನ ಮಿತಿಮೀರಿದರೆ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಇರುತ್ತದೆ; ಹೀಗಾಗದಿರಲು ಪ್ರತ್ಯೇಕ ಸಂರಕ್ಷಣಾ ಸರ್ಕ್ಯೂಟ್ ಗಳನ್ನು (protection circuits) ಅಗತ್ಯ.  ಇವುಗಳನ್ನು ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಟ್ಯಾಬ್ಲೆಟ್, ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸುತ್ತಾರೆ.

೨. ಲಿಥಿಯಂ ಪಾಲಿಮರ್ (LiPo) ಬ್ಯಾಟರಿಗಳು

ಲಿಥಿಯಂ ಪಾಲಿಮರ್ ಬ್ಯಾಟರಿ

ಇವು ಲಿಥಿಯಂ-ಅಯಾನ್ ಬ್ಯಾಟರಿಗಳಂತೆಯೇ ಕೆಲಸ ಮಾಡುತ್ತವೆ. ಆದರೆ ಎಲೆಕ್ಟ್ರೋಲೈಟ್ ಸ್ಥಾನದಲ್ಲಿ ಜೆಲ್ ಮಾದರಿಯ ಪಾಲಿಮರ್ ಘನ ವಸ್ತುವನ್ನು ಬಳಸುತ್ತಾರೆ.  ಇವು ಲಿಥಿಯಂ ಅಯಾನ್ ಬ್ಯಾಟರಿಗಳಿಗಿಂತ ತೆಳ್ಳಗಿರುವುದು ಇವುಗಳ ಹೆಚ್ಚಳಿಕೆ. ಒಂದು ಘನ ಅಳತೆಯಲ್ಲಿ ಇವು ಕೂಡಿಡುವ ವಿದ್ಯುತ್ ಲಿಥಿಯಂ ಅಯಾನ್ ಬ್ಯಾಟರಿಗಳಿಗಿಂತ ಕಡಿಮೆ. ಇವು ಲೀಕ್ (ಸೋರಿಕೆ) ಆಗುವ ಸಂಭವ ಕಡಿಮೆ.  ವಿಪರೀತ ಹೆಚ್ಚಿನ ಚಾರ್ಜ್ ಶೇಖರಿಸಿ ತಾಪಮಾನ ಏರಿ ಅಪಘಾತವಾಗದಂತೆ ಸಂರಕ್ಷಣಾ ಸರ್ಕ್ಯೂಟ್ ಗಳನ್ನು ಬಳಸುವುದು ರೂಢಿ.  ಇವುಗಳನ್ನು ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ಡ್ರೋನ್, ವೇರಬಲ್ (ಧರಿಸಬಲ್ಲ) ಎಲೆಕ್ಟ್ರಾನಿಕ್ಸ್ ಮುಂತಾದ ಕಡೆಗಳಲ್ಲಿ ಬಳಸುತ್ತಾರೆ.

೩. ನಿಕಲ್-ಮೆಟಲ್ ಹೈಡ್ರೈಡ್ (NiMH) ಬ್ಯಾಟರಿಗಳು

NiMH ಬ್ಯಾಟರಿ

ಇವುಗಳಲ್ಲಿ ನಿಕಲ್ ಆಕ್ಸೈಡ್ ಹೈಡ್ರಾಕ್ ಸೈಡ್ ಪದಾರ್ಥವನ್ನು  ಕ್ಯಾಥೋಡ್ ಆಗಿ ಮತ್ತು ಹೈಡ್ರೋಜನ್ ಅನಿಲವನ್ನು ಹೀರಿಕೊಳ್ಳಬಲ್ಲ ಅಲಾಯ್ (alloy) ಪದಾರ್ಥವನ್ನು ಆನೋಡ್ ಆಗಿ ಬಳಸುತ್ತಾರೆ.  ಲಿಥಿಯಂ ಅಯಾನ್ ಬ್ಯಾಟರಿಗಳಿಗೆ ಹೋಲಿಸಿದರೆ ಇವುಗಳ ಕ್ಷಮತೆ ಮತ್ತು ಬಾಳಿಕೆ ಕಡಿಮೆ. ಬಳಸದೇ ಇದ್ದಾಗ ಇವು ಬೇಗ ಚಾರ್ಜ್ ಕಳೆದುಕೊಳ್ಳುತ್ತವೆ. ನಿಕಲ್ ಕ್ಯಾಡ್ಮಿಯಂ ಬ್ಯಾಟರಿಗಳಿಗೆ ಹೋಲಿಸಿದರೆ ಇವು ಅಷ್ಟು ವಿಷಮಯವಲ್ಲ.  ಇವುಗಳನ್ನು ರೀಚಾರ್ಜಬಲ್ AA ಮತ್ತು AAA ಬ್ಯಾಟರಿಗಳಲ್ಲಿ ಬಳಸುತ್ತಾರೆ.  

೪. ನಿಕಲ್ ಕ್ಯಾಡ್ಮಿಯಂ ಬ್ಯಾಟರಿಗಳು

ಇಲ್ಲಿ ನಿಕಲ್ ಆಕ್ಸೈಡ್ ಹೈಡ್ರಾಕ್ಸೈಡ್ ಕ್ಯಾಥೋಡಿನ ಪಾತ್ರವನ್ನೂ ಕ್ಯಾಡ್ಮಿಯಂ ಆನೋಡಿನ ಪಾತ್ರವನ್ನೂ ವಹಿಸುತ್ತವೆ. ಲಿಥಿಯಂ ಅಯಾನ್ ಬ್ಯಾಟರಿಗಳಿಗೆ ಹೋಲಿಸಿದರೆ ಇವುಗಳ ಕ್ಷಮತೆ ಕಡಿಮೆ. ಇವು ಬೇಗ ಡಿಸ್ ಚಾರ್ಜ್ ಆಗುತ್ತವೆ.  ಪೂರ್ಣ ಡಿಸ್ಚಾರ್ಜ್ ಆಗುವ ಮುನ್ನ ಚಾರ್ಜ್ ಮಾಡಿದರೆ ಇವುಗಳ ಕ್ಷಮತೆ ಕಡಿಮೆಯಾಗುತ್ತದೆ.  ಕ್ಯಾಡ್ಮಿಯಂ ಒಂದು ವಿಷಕಾರಿ ವಸ್ತು. ಹೀಗಾಗಿ ಇವುಗಳ ಬಳಕೆ ಅಷ್ಟು ಒಳ್ಳೆಯದಲ್ಲ. ಈನಡುವೆ ಇವುಗಳ ಬದಲು NiMH ಬ್ಯಾಟರಿಗಳನ್ನು ಬಳಸುವುದು ಹೆಚ್ಚಾಗಿದೆ.

೫. ಲೆಡ್ ಆಸಿಡ್ ಬ್ಯಾಟರಿಗಳು

ಲೆಡ್ ಆಸಿಡ್ ಬ್ಯಾಟರಿ

ಲೆಡ್ ಡೈಆಕ್ಸೈಡ್ ಒಂದು ಕ್ಯಾಥೋಡಿನ ಪಾತ್ರವನ್ನೂ ಮತ್ತು ಲೆಡ್ ಒಂದು ಆನೋಡಿನ ಪಾತ್ರವನ್ನೂ ವಹಿಸುತ್ತವೆ. ಸಲ್ಫ್ಯೂರಿಕ್ ಆಸಿಡ್ ಎಲೆಕ್ಟ್ರೋಲೈಟ್ ಆಗಿ ಕೆಲಸ ಮಾಡುತ್ತದೆ. ಇವು ಗಾತ್ರದಲ್ಲಿ ದೊಡ್ಡವು; ತೂಕ ಹೆಚ್ಚು. ವಿದ್ಯುತ್ ಚೈತನ್ಯ ಸಾಂದ್ರತೆ (ಎನರ್ಜಿ ಡೆನ್ಸಿಟಿ) ಕಡಿಮೆ. ಬೇಗ ಡಿಸ್ಚಾರ್ಜ್ ಆಗುತ್ತವೆ. ಇವು ದೀರ್ಘಕಾಲ ಬಾಳಿಕೆ ಬರುತ್ತವೆ. ಇವುಗಳ ಬೆಲೆ ಕಡಿಮೆ.  ಇವುಗಳ ಮುಖ್ಯ ಬಳಕೆಯು ವಾಹನಗಳಲ್ಲಿ ಸ್ಟಾರ್ಟರ್ ಬ್ಯಾಟರಿಯ ರೂಪದಲ್ಲಿ. ಇದಲ್ಲದೆ UPS (ಅನ್ ಇಂಟರಪ್ಟೆಡ್ ಪವರ್ ಸಪ್ಲೈ) ಗಳಲ್ಲಿ ಬಳಸುತ್ತಾರೆ.

೬. ಆಲ್ಕಲೈನ್ ಬ್ಯಾಟರಿಗಳು

ಆಲ್ಕಲೈನ್ ಬ್ಯಾಟರಿ

ಜಿಂಕ್ ಪುಡಿಯು ಆನೋಡ್ ಪಾತ್ರವನ್ನೂ ಮ್ಯಾಂಗನೀಸ್ ಡೈಆಕ್ಸೈಡ್ ಕ್ಯಾಥೋಡ್ ಪಾತ್ರವನ್ನೂ ವಹಿಸುತ್ತವೆ. ಪೊಟಾಸಿಯಂ ಹೈಡ್ರಾಕ್ಸೈಡ್ ಮಾದರಿಯ ಆಲ್ಕಲೈನ್ ಪದಾರ್ಥವು ಎಲೆಕ್ಟ್ರೋಲೈಟ್ ಆಗಿ ಕಾರ್ಯ ನಿರ್ವಹಿಸುತ್ತದೆ.  ಇವನ್ನು ರೀಚಾರ್ಜ್ ಮಾಡಲಾಗದು. ಇವುಗಳ ಎನರ್ಜಿ ಡೆನ್ಸಿಟಿ  ಹೆಚ್ಚು ಮತ್ತು ಇವು ಹೆಚ್ಚು ಬಾಳಿಕೆ ಬರುತ್ತವೆ. ತಾನಾಗಿ ಡಿಸ್ಚಾರ್ಜ್ ಆಗಲು ಸಾಕಷ್ಟು ಸಮಯ ಬೇಕು. ಬೆಲೆ ಕಡಿಮೆ. ಅನೇಕ ಗಾತ್ರಗಳಲ್ಲಿ ಲಭ್ಯ. ರಿಮೋಟ್ ಕಂಟ್ರೋಲ್, ಗಡಿಯಾರ, ಟಾರ್ಚ್, ಬೊಂಬೆಗಳು ಮುಂತಾದವುಗಳಲ್ಲಿ ಇದರ ಬಳಕೆಯಾಗುತ್ತದೆ.

೭. ಸಾಲಿಡ್ ಸ್ಟೇಟ್ ಬ್ಯಾಟರಿಗಳು (ಸಂಶೋಧನಾ ಸ್ಥಿತಿಯಲ್ಲಿ)

ಇವು ಲಿಥಿಯಂ ಅಯಾನ್ ಬ್ಯಾಟರಿಗಳಂತೆಯೇ ಇದ್ದರೂ ಮುಖ್ಯ ವ್ಯತ್ಯಾಸವೆಂದರೆ ಇದರ ಎಲೆಕ್ಟ್ರೋಲೈಟ್ ಒಂದು ಘನವಸ್ತು (solid). ಇವುಗಳ ಚೈತನ್ಯ ಸಾಂದ್ರತೆ ಅಥವಾ ಎನರ್ಜಿ ಡೆನ್ಸಿಟಿ ಲಿಥಿಯಂ ಅಯಾನ್ ಬ್ಯಾಟರಿಗಳನ್ನೂ ಮೀರಿದ್ದು. ಚಾರ್ಜ್ ಮಾಡುವಾಗ ತಾಪಮಾನ ಮಿತಿ ಮೀರಿ ಏರುವ ಸಂಭವ ಕಡಿಮೆ.  ಸದ್ಯಕ್ಕೆ ಇವು ಇನ್ನೂ ಸಂಶೋಧನಾ ಲ್ಯಾಬ್ ಗಳಲ್ಲಿದೆ. ಮುಂದೆ ಇವುಗಳನ್ನು ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸುವ ಸಾಧ್ಯತೆ ಇದೆ.

೮. ಫ್ಲೋ ಬ್ಯಾಟರಿಗಳು

ಫ್ಲೋ ಬ್ಯಾಟರಿ

ಇವು ದ್ರವ ಸ್ಥಿತಿಯಲ್ಲಿರುವ ಎಲೆಕ್ಟ್ರೊಲೈಟ್ ಗಳನ್ನು ಬಳಸುತ್ತವೆ. ಎಲೆಕ್ಟ್ರೋಲೈಟ್ ಗಳು ಒಂದು ಸೆಲ್ ನಿಂದ ಇನ್ನೊಂದಕ್ಕೆ ಹರಿಯುವ ಕಾರಣ ಇವುಗಳಿಗೆ ಫ್ಲೋ (ಹರಿವು) ಬ್ಯಾಟರಿಗಳು ಎಂದು ಹೆಸರು ಬಂದಿದೆ.   ಈ ಬ್ಯಾಟರಿಗಳ ವಿದ್ಯುತ್ಛಕ್ತಿ ಎಲೆಕ್ಟ್ರೋಲೈಟ್ ತುಂಬಿದ ಟ್ಯಾಂಕ್ ಗಳ ಗಾತ್ರವನ್ನು ಅವಲಂಬಿಸಿದೆ.   ಇವುಗಳ ಗಾತ್ರದ ಕಾರಣ ಇವನ್ನು ಸ್ಮಾರ್ಟ್ ಫೋನ್ ಮುಂತಾದ ಚಿಕ್ಕ ಸಾಧನಗಳಲ್ಲಿ ಅಳವಡಿಸುವುದು ಸಾಧ್ಯವಿಲ್ಲ. ಆದರೆ ದೊಡ್ಡ ಮೊತ್ತದ ವಿದ್ಯುತ್ತನ್ನು ಹೆಚ್ಚು ದಿನಗಳ ಕಾಲ ಶೇಖರಿಸಲು ಈ ಬ್ಯಾಟರಿಗಳು ಉಪಯುಕ್ತ. ಇವನ್ನು ಎಲೆಕ್ಟ್ರಿಕ್ ಗ್ರಿಡ್ ಗಳಲ್ಲಿ ವಿದ್ಯುತ್ ಶೇಖರಿಸಲು ಬಳಸುತ್ತಾರೆ.  ಇದೇ ರೀತಿ ಸೌರ ಚೈತನ್ಯವನ್ನು ವಿದ್ಯುತ್ತಿಗೆ ಮಾರ್ಪಡಿಸುವ ಸೋಲಾರ್ ಸೆಲ್ಲುಗಳಿಂದ ಲಬ್ಧವಾದ ವಿದ್ಯುತ್ತನ್ನು ಫ್ಲೋ ಬ್ಯಾಟರಿಗಳಲ್ಲಿ ಶೇಖರಿಸಬಹುದು.

ಯಾವ ಬ್ಯಾಟರಿ ಎಲ್ಲಿ ಬಳಸಬೇಕು

ಬ್ಯಾಟರಿಯ ಗಾತ್ರ, ತೂಕ, ಚೈತನ್ಯ ಸಾಂದ್ರತೆ, ಬೆಲೆ, ಬಾಳಿಕೆ ಮತ್ತು ಪರಿಸರದ ಮೇಲೆ ಅದರ ಪರಿಣಾಮ - ಈ ಎಲ್ಲವನ್ನೂ ಅನುಸರಿಸಿ ಸೂಕ್ತ ಬ್ಯಾಟರಿಯನ್ನು ಆಯ್ಕೆ ಮಾಡಿಕೊಳ್ಳಬೇಕು.  ದಿನಬಳಕೆಯ ಸಾಧನಗಳಾದ ಮೊಬೈಲ್, ಲ್ಯಾಪ್ ಟಾಪ್ ಮುಂತಾದವುಗಳಲ್ಲಿ ಲಿಥಿಯಂ ಅಯಾನ್ ಮತ್ತು ಲಿಥಿಯಂ ಪಾಲಿಮರ್ ಬ್ಯಾಟರಿಗಳನ್ನು ಬಳಸುವುದು ರೂಢಿ. ಎಲೆಕ್ಟ್ರಿಕ್ ವಾಹನಗಳಲ್ಲಿ ಲಿಥಿಯಂ ಬ್ಯಾಟರಿಗಳನ್ನು ಇಂದು ಬಳಸುತ್ತಿದ್ದಾರೆ, ಆದರೆ ವಿಭಿನ್ನ ರೀತಿಯ ಬ್ಯಾಟರಿಗಳಿಗಾಗಿ ಸಂಶೋಧನೆ ನಡೆಯುತ್ತಿದೆ.   ವಿದ್ಯುತ್ ಕಡಿತ ಉಂಟಾದಾಗ ನಾವು ಬಳಸುವ ಯೂಪಿಎಸ್ ಸಾಧನಗಳಲ್ಲಿ ಲೆಡ್ ಆಸಿಡ್ ಬ್ಯಾಟರಿಗಳು ಉಪಯೋಗವಾಗುತ್ತಿವೆ. ಸೌರ ಸೆಲ್ಲುಗಳಿಂದ, ಗಾಳಿ ಗಿರಣಿಗಳಿಂದ ಉತ್ಪನ್ನವಾದ ವಿದ್ಯುತ್ತನ್ನು ಶೇಖರಿಸಲು ಫ್ಲೋ ಬ್ಯಾಟರಿಗಳನ್ನು ಉಪಯೋಗಿಸುತ್ತಾರೆ.   ಹೊಸಬಗೆಯ ಬ್ಯಾಟರಿಗಳಿಗಾಗಿ ವಿಜ್ಞಾನಿಗಳು ನಿರಂತರವಾಗಿ  ಸಂಶೋಧನೆ ನಡೆಸುತ್ತಿದ್ದಾರೆ.

ಉಲ್ಲೇಖಗಳು

ಬದಲಾಯಿಸಿ
  1. "Battery".


"https://kn.wikipedia.org/w/index.php?title=ಬ್ಯಾಟರಿ&oldid=1259148" ಇಂದ ಪಡೆಯಲ್ಪಟ್ಟಿದೆ