ಬೆಂಜಮಿನ್ ಡಿಸ್ರೇಲಿ

ಬೆಂಜಮಿನ್ ಡಿಸ್ರೇಲಿ (21 ಡಿಸೆಂಬರ್ 1804 – 19 ಎಪ್ರಿಲ್ 1881) ಬ್ರಿಟಿಷ್ ರಾಜಕಾರಣಿ, ಲೇಖಕ. ಬೀಕನ್ಸ್‍ಫೀಲ್ಡಿನ ಆರ್ಲ್. ಬ್ರಿಟನ್ನಿನ ಪ್ರಧಾನಿಯಾಗಿದ್ದ (1868, 1874-80).

The Earl of Beaconsfield
ಬೆಂಜಮಿನ್ ಡಿಸ್ರೇಲಿ

Disraeli, photographed by Cornelius Jabez Hughes in 1878


ಅಧಿಕಾರದ ಅವಧಿ
20 February 1874 – 21 April 1880
ಪೂರ್ವಾಧಿಕಾರಿ William Ewart Gladstone
ಉತ್ತರಾಧಿಕಾರಿ William Ewart Gladstone
ಅಧಿಕಾರದ ಅವಧಿ
27 February 1868 – 1 December 1868
ಪೂರ್ವಾಧಿಕಾರಿ The Earl of Derby
ಉತ್ತರಾಧಿಕಾರಿ William Ewart Gladstone

ಅಧಿಕಾರದ ಅವಧಿ
21 April 1880 – 19 April 1881
ಪೂರ್ವಾಧಿಕಾರಿ The Marquess of Hartington
ಉತ್ತರಾಧಿಕಾರಿ William Ewart Gladstone
ಅಧಿಕಾರದ ಅವಧಿ
1 December 1868 – 17 February 1874
ಪೂರ್ವಾಧಿಕಾರಿ William Ewart Gladstone
ಉತ್ತರಾಧಿಕಾರಿ William Ewart Gladstone

ಜನನ (೧೮೦೪-೧೨-೨೧)೨೧ ಡಿಸೆಂಬರ್ ೧೮೦೪
Bloomsbury, Middlesex, England
ಮರಣ 19 April 1881(1881-04-19) (aged 76)
London, England
ರಾಜಕೀಯ ಪಕ್ಷ Conservative
ಜೀವನಸಂಗಾತಿ
(m. ೧೮೩೯; died ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".)
ಧರ್ಮ
ಹಸ್ತಾಕ್ಷರ


ಬಾಲ್ಯ ಮತ್ತು ವಿದ್ಯಾಭ್ಯಾಸ

ಬದಲಾಯಿಸಿ

ಐಸಾಕ್ ಡಿಸ್ರೇಲಿ ಮತ್ತು ಮರೀಯ ಬ್ಯಾಸೆವಿ ಇವರ ಹಿರಿಯ ಮಗ. 1804ರ ಡಿಸೆಂಬರ್ 21ರಂದು ಲಂಡನಿನಲ್ಲಿ ಜನನ. ಈತನ ತಾತ ಬೆಂಜಮಿನ್ ಡಿಸ್ರೇಲಿ ಇಟಲಿಯಿಂದ ಇಂಗ್ಲೆಂಡಿಗೆ ಬಂದು ನೆಲಸಿದ. ಡಿಸ್ರೇಲಿಯ ಅಜ್ಜಿ ಯೆಹೂದ್ಯ ವಂಶಸ್ಥೆ. ಡಿಸ್ರೇಲಿಯ ತಂದೆ 1817ರಲ್ಲಿ ತನ್ನ ಮಕ್ಕಳನ್ನು ಕ್ರೈಸ್ತ ಮತದ ಸಂಸ್ಕಾರಕ್ಕೆ ಒಳಪಡಿಸಿದ. ಇದರಿಂದಾಗಿ ಮುಂದೆ ಬೆಂಜಮಿನ್ ಡಿಸ್ರೇಲಿ ಬ್ರಿಟನಿನ ಪ್ರಧಾನಿಯಾಗುವುದು ಸಾಧ್ಯವಾಯಿತು. 1858ರ ವರೆಗೆ ಯಹೂದ್ಯರು ಅಲ್ಲಿಯ ಪಾರ್ಲಿಮೆಂಟಿನ ಸದಸ್ಯರಾಗುವಂತಿರಲಿಲ್ಲ.

ಡಿಸ್ರೇಲಿ 17ನೆಯ ವಯಸ್ಸಿನಲ್ಲಿ ಒಂದು ನ್ಯಾಯವಾದಿಗಳ ಸಂಸ್ಥೆಯಲ್ಲಿ ಗುಮಾಸ್ತೆಯಾಗಿ ಸೇರಿಕೊಂಡ. ಆದರೆ ಮಹಾಕಾಂಕ್ಷೆಯಿಂದ ಕೂಡಿದ್ದ ಆತ 1824ರಲ್ಲಿ ಸಟ್ಟಾ ವ್ಯವಹಾರವೊಂದರಲ್ಲಿ ಕೈಹಾಕಿದ. ಅದರ ಫಲವಾಗಿ ಇವನು ಭಾರಿಯ ಸಾಲದ ಹೊರೆ ಹೊರಬೇಕಾಯಿತು. ಬಹುಕಾಲ ಇದರಿಂದ ಇವನು ವಿಮೋಚನೆ ಹೊಂದಲಾಗಲಿಲ್ಲ. ಇದಕ್ಕೆ ಮುಂಚೆ ತನ್ನ ತಂದೆಯ ಮಿತ್ರ ಜಾನ್ ಮರೆಯನ್ನು ರೆಪ್ರೆಸೆಂಟೆಟಿವ್ ಎಂಬ ದಿನಪತ್ರಿಕೆಯೊಂದನ್ನು ಆರಂಭಿಸಲು ಒಪ್ಪಿಸಿದ್ದ. ಇದರ ಬಂಡವಾಳಕ್ಕೆ ತನ್ನ ಭಾಗದ ಹಣವನ್ನು ಡಿಸ್ರೇಲಿ ಕೊಡಲಾಗಲಿಲ್ಲ. ಇದರಿಂದ ಮರೆ ಮತ್ತು ಇತರರೊಂದಿಗೆ ಕಲಹ ಉಂಟಾಯಿತು. ಟೋರಿ ವಲಯದಲ್ಲಿ ಅವರು ಪ್ರಮುಖರಾಗಿದ್ದರು. 21ನೇಯ ವಯಸ್ಸಿನಲ್ಲಿ ವಿವಿಯನ್ ಗ್ರೇ ಎಂಬ ಐದು ಸಂಪುಟಗಳ ಕಾದಂಬರಿಯೊಂದನ್ನು ಬರೆದು ತನ್ನ ಹೆಸರು ಹಾಕದೆ ಪ್ರಕಟಿಸಿದ. ಇದರಲ್ಲಿ ಮರೆ ಮತ್ತು ಇತರರ ವಿಡಂಬನೆಯಿತ್ತು. ಇವನೇ ಅದರ ಲೇಖಕನೆಂಬುದು ಬಹುಕಾಲ ರಹಸ್ಯವಾಗಿ ಉಳಿಯಲಿಲ್ಲ. ಇವನು ವಿಮರ್ಶಕರ ಟೀಕೆಗೆ ಗುರಿಯಾದ.

ಇದರಿಂದಾಗಿ ಮುಂದಿನ ನಾಲ್ಕು ವರ್ಷಗಳನ್ನು ನಿಷ್ಕ್ರಿಯೆಯಲ್ಲಿ ಕಳೆದ. ಈ ಕಾಲದಲ್ಲಿ ಇವನು ಮಾಡಿದ ಒಂದೇ ಕೆಲಸವೆಂದರೆ ದಿ ಯಂಗ್ ಡ್ಯೂಕ್ ಎಂಬ ಇನ್ನೊಂದು ಕಾದಂಬರಿಯ ಲೇಖನ. ಮೂರು ಸಂಪುಟಗಳ ಈ ಕಾದಂಬರಿಯೇನೂ ಗುಣದಲ್ಲಿ ಮೊದಲನೆಯದಕ್ಕಿಂತ ಭಿನ್ನವಾಗಿರಲಿಲ್ಲ. 1830ರಲ್ಲಿ ತನ್ನ ಸೋದರಿಯ ವರನೊಂದಿಗೆ ಪಶ್ಚಿಮ ಏಷ್ಯದ ದೇಶಗಳಲ್ಲಿ ಸುತ್ತಾಡಿ ಅಮೂಲ್ಯ ಅನುಭವ ಗಳಿಸಿದ. ಆದರೆ ಕೈರೋದಲ್ಲಿ ಆ ವರ ತೀರಿಕೊಂಡ. ಈ ಅನುಭವಗಳನ್ನೆಲ್ಲ ಕಾಂಟಾರಿನಿ ಫ್ಲೆಮಿಂಗ್ ಹಾಗೂ ಅಲ್ರಾಯ್ ಕಾದಂಬರಿಗಳಲ್ಲಿ ಅಭಿವ್ಯಕ್ತಿಸಿದ. ಈ ಎರಡೂ ಕೃತಿಗಳು ಡಿಸ್ರೇಲಿಯ ಮಹತ್ವಾಕಾಂಕ್ಷೆಯನ್ನು ಸೂಚಿಸುತ್ತವೆ.

ರಾಜಕಾರಣ

ಬದಲಾಯಿಸಿ

ಸಾಹಿತಿ ಡಿಸ್ರೇಲಿ 1832ರಲ್ಲಿ ರಾಜಕಾರಣವನ್ನು ಪ್ರವೇಶಿಸಿದ. ಹೈ ವೈಕಮ್ ಕ್ಷೇತ್ರದ ಚುನಾವಣೆಯಲ್ಲಿ ಸ್ವತಂತ್ರ ತೀವ್ರಗಾಮಿ ಅಭ್ಯರ್ಥಿಯಾಗಿ ಮೂರು ಸಾರಿ ಸ್ಪರ್ಧಿಸಿ ಮೂರು ಸಾರಿಯೂ ಸೋತ. ಯಾವುದಾದರೊಂದು ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಸೂಕ್ತವೆಂಬುದು ಇವನಿಗೆ ಮನವರಿಕೆಯಾಯಿತು. ಟೋರಿ-ಕನ್ಸರ್ವೆಟಿವ್ ಪಕ್ಷದ ಧೋರಣೆಗಳು ಇವನ ಅಭಿಪ್ರಾಯಗಳಿಗೆ ಹೆಚ್ಚು ಭಿನ್ನವಾಗಿಲ್ಲವೆಂದು ಎನಿಸಿತು. ಇವನು ಆ ಪಕ್ಷದ ಕಡೆಗೆ ವಾಲಿದ. ರಾಜಕೀಯ ರಂಗದಲ್ಲಿ 1836ರ ಅನಂತರ ಒಳ್ಳೆಯ ದಿನಗಳು ಬಂದವು. ಮೆಲ್‍ಬರ್ನನ ನಾಯಕತ್ವದ ಹ್ವಿಗ್ ಸರ್ಕಾರವನ್ನು ಖಂಡಿಸಿ ಟೈಮ್ಸ್ ಪತ್ರಿಕೆಯಲ್ಲಿ ಬರೆದ ದಿ ರನ್ನಿಮೀಡ್ ಲೆಟರ್ಸ್, ಎ ವಿಂಡಿಕೇಷನ್ ಆಫ್ ದಿ ಇಂಗ್ಲಿಷ್ ಕಾನ್‍ಸ್ಟಿಟ್ಯೂಷನ್, ದಿ ಸ್ಪಿರಿಟ್ ಆಫ್ ಹ್ವಿಗಿಸ್‍ಮ್ ಲೇಖನಗಳಿಂದ ಡಿಸ್ರೇಲಿ ಖ್ಯಾತಿ ಪಡೆದ. ಜೊತೆಗೆ ಇವನು ಕಾದಂಬರಿಗಳ ಬರೆವಣಿಗೆಯನ್ನೂ ಮುಂದುವರಿಸಿದ. 1837ರಲ್ಲಿ 4ನೆಯ ವಿಲಿಯಮ್ ದೊರೆಯ ಮರಣ ಸಂಭವಿಸಿ, ವಿಕ್ಟೋರಿಯ ರಾಣಿ ಪಟ್ಟಕ್ಕೆ ಬಂದಳು. ಡಿಸ್ರೇಲಿ ಮೇಡ್‍ಸ್ಟನ್ ಕ್ಷೇತ್ರದಿಂದ ಕನ್ಸರ್ವೆಟಿವ್ ಪಕ್ಷದ ಅಭ್ಯರ್ಥಿಯಾಗಿ ಕಾಮನ್ಸ್ ಸಭೆ ಪ್ರವೇಶಿಸಿದ. ಈತ ಪ್ರಥಮವಾಗಿ ಪಾರ್ಲಿಮೆಂಟಿನಲ್ಲಿ ಮಾಡಲೆತ್ನಿಸಿದ ಭಾಷಣದಿಂದ ಅಪಹಾಸ್ಯಕ್ಕೆ ಗುರಿಯಾದ. ಆದರೂ ಸಭೆಯನ್ನು ಉದ್ದೇಶಿಸಿ, ನೀವು ನನ್ನ ಭಾಷಣವನ್ನು ಕೇಳಲೇಬೇಕಾದ ದಿನ ಬಂದೇ ಬರುತ್ತದೆ ಎಂದು ನುಡಿದು ಸುಮ್ಮನಾದ. 1839-1840ರ ವರೆಗೂ ನಡೆದ ಚಾರ್ಟಿಸ್ಟ್ ಚಳವಳಿಯ ಬಗ್ಗೆ ನಡೆದ ಚರ್ಚೆಯಲ್ಲಿ ಡಿಸ್ರೇಲಿ ತನ್ನ ವ್ಯಕ್ತಿತ್ವವನ್ನು ಪ್ರದರ್ಶಿಸಿದ. ತನ್ನ ಪಕ್ಷದ ಅಭ್ಯರ್ಥಿಯಾಗಿದ್ದ ವಿಂಡ್‍ಹ್ಯಮ್ ಲೂಯಿಯ ವಿಧವೆ ಶ್ರೀಮತಿ ಮೇರಿ ಆನ್ ಇವಾನ್ಸಳೊಂದಿಗೆ ವಿವಾಹವಾಗಿ ಸಮಾಜದಲ್ಲಿ ಪ್ರತಿಷ್ಠಿತನಾದನಲ್ಲದೆ ಸಾಕಷ್ಟು ಐಶ್ವರ್ಯವನ್ನೂ ಪಡೆದ.

ಮುಂದೆ ಕನ್ಸರ್ವೆಟಿವ್ ನಾಯಕ ಸರ್ ರಾಬರ್ಟ್ ಪೀಲನ ಸರ್ಕಾರದ ವಿರುದ್ಧ ತನ್ನ ಸ್ನೇಹಿತರೊಂದಿಗೆ ಸೇರಿ ಚಟುವಟಿಕೆಗಳನ್ನಾರಂಭಿಸಿದ. ಆತನ ರಾಜಕೀಯ ಧೋರಣೆಗಳನ್ನು ಟೀಕಿಸಿ ಮೂರು ಕಾದಂಬರಿಗಳನ್ನು ಬರೆದ. ಪೀಲ್ ಅನುಸರಿಸಿದ ಧಾನ್ಯನಿಯಂತ್ರಣ ನೀತಿ ವಿರೋಧಿಗಳ ಟೀಕೆಗೆ ಗುರಿಯಾಯಿತು. ಪೀಲ್ ರಾಜೀನಾಮೆ ನೀಡಿದ. ಆದರೂ 1846ರ ಜನವರಿಯಲ್ಲಿ ಪುನಃ ಅಧಿಕಾರಕ್ಕೆ ಬಂದು ಡಿಸ್ರೇಲಿ ಹಾಗೂ ಜಾರ್ಜ್ ಬೆಂಟಿಂಕರ ಪ್ರಬಲ ವಿರೋಧಕ್ಕೆ ಗುರಿಯಾದ. ಆ ವೇಳೆಗೆ ಡಿಸ್ರೇಲಿ ಟೋರಿ ಪಕ್ಷದ ಪ್ರಮುಖನೆನಿಸಿಕೊಂಡಿದ್ದ.

1848ರಲ್ಲಿ ಬೆಂಟಿಂಕ್ ಹೃದಯಾಘಾತದಿಂದ ಮಡಿದು, 1850ರಲ್ಲಿ ಪೀಲ್ ದುರ್ಮರಣಕ್ಕೀಡಾಗಿ, ಡಿಸ್ರೇಲಿಗೆ ರಾಜಕೀಯ ವೇದಿಕೆ ತೆರವಾಯಿತು. ಬಕಿಂಗ್‍ಹ್ಯಾಮ್ ಕ್ಷೇತ್ರದಿಂದ ಕಾಮನ್ಸ್ ಸಭೆಗೆ ಚುನಾಯಿತನಾಗಿದ್ದ ಡಿಸ್ರೇಲಿ ಪ್ರಬಲ ರಾಜಕಾರಣಿಯಾಗಿದ್ದ. ಆದರೂ ಈತ ಮುಕ್ತ ವ್ಯಾಪಾರ ನೀತಿಯ ವಿರೋಧಿ ಹಾಗೂ ಯೆಹೂದಿಯೆಂದು ಇವನ ಪಕ್ಷದಲ್ಲೇ ಕೆಲವರಿಗೆ ಈತನ ಬಗ್ಗೆ ಅಸಮಾಧಾನವಿತ್ತು. ಇದೇ ಸಮಯಕ್ಕೆ ಈತನ ಇನ್ನೊಂದು ರಾಜಕೀಯ ಕಾದಂಬರಿ ಪ್ರಕಟವಾಗಿ ಈ ಅಸಮಾಧಾನ ಬಲಗೊಂಡಿತ್ತು.

ರಸೆಲನ ಸರ್ಕಾರ 1852ರಲ್ಲಿ ಉರುಳಿ ಸ್ಟಾನ್ಲೆಯ ಸರ್ಕಾರ ಬಂದಾಗ ಡಿಸ್ರೇಲಿ ಚಾನ್ಸಲರ್ ಆಫ್ ದಿ ಎಕ್ಸ್‍ಚೆಕರ್ ಆದ. 1852ರ ಡಿಸೆಂಬರ್‍ನಲ್ಲಿ ಈತ ಮಂಡಿಸಿದ ರೈತರ ತೆರಿಗೆ ನಿವಾರಣೆಯ ಮಸೂದೆಯನ್ನು ಗ್ಲಾಡ್‍ಸ್ಟನ್ ಮತ್ತಿತರ ಹ್ವಿಗ್ ಪಕ್ಷೀಯರು ವಿರೋಧಿಸಿದರು. ಸ್ಟಾನ್ಲೆಯ ಮಂತ್ರಿಮಂಡಲ ಉರುಳಿತು. ಡರ್ಬಿಯ ಮಂತ್ರಿಮಂಡಲದಲ್ಲಿ ಡಿಸ್ರೇಲಿಯೂ ಸೇರಿಕೊಂಡ. ಡರ್ಬಿ 1868ರಲ್ಲಿ ರಾಜಕೀಯದಿಂದ ವಿರಮಿಸಿದ. ಆಗ ಡಿಸ್ರೇಲಿ ಇಂಗ್ಲೆಂಡಿನ ಪ್ರಧಾನಿಯಾದ. ಆದರೆ ಶೀಘ್ರದಲ್ಲೇ ಈತನ ಪ್ರತಿಸ್ಪರ್ಧಿ ಗ್ಲಾಡ್‍ಸ್ಟನ್ ಲಿಬರಲ್ ಸರ್ಕಾರವನ್ನು ಸ್ಥಾಪಿಸಿದ. ಆದ್ದರಿಂದ 1868ರಿಂದ 1874ರ ವರೆಗೂ ತನ್ನ ಬಲವನ್ನು ಕ್ರೋಡೀಕರಿಸುವುದರಲ್ಲಿಯೇ ಡಿಸ್ರೇಲಿ ನಿರತನಾದ. ಡಿಸ್ರೇಲಿಯ ಬರವಣಿಗೆಯೂ ಮುಂದುವರಿದಿತ್ತು. ಅವನ ಇನ್ನೊಂದು ಕಾದಂಬರಿ ಹೊರಬಂತು.

ಪ್ರಧಾನಿಯಾಗಿ

ಬದಲಾಯಿಸಿ

ಗ್ಲಾಡ್‍ಸ್ಟನನ ಲಿಬರಲ್ ಪಕ್ಷ 1874ರ ಮಹಾ ಚುನಾವಣೆಗಳಲ್ಲಿ ಪರಾಜಯಗೊಂಡು ಡಿಸ್ರೇಲಿಯ ಪಕ್ಷ ಪ್ರಚಂಡ ವಿಜಯ ಗಳಿಸಿತು. ಎರಡನೆಯ ಬಾರಿಗೆ ಡಿಸ್ರೇಲಿ ಇಂಗ್ಲೆಂಡಿನ ಪ್ರಧಾನಿಯಾದ. ಇವನು ಸಂಪುಟಕ್ಕೆ ಸಮರ್ಥರನ್ನು ಆರಿಸಿಕೊಂಡ. ಇದರೊಂದಿಗೆ ಡಿಸ್ರೇಲಿಯ ದೇಶಪ್ರೇಮ ಹಾಗೂ ಸ್ವಸಾಮಥ್ರ್ಯಗಳಿಗಾಗಿ ವಿಕ್ಟೋರಿಯ ರಾಣಿಯೂ ಈತನ ಬಗ್ಗೆ ಸಹಾನುಭೂತಿ ತಳೆದಿದ್ದಳು. ಆಕೆಗೆ ಭಾರತದ ಸಾಮ್ರಾಜ್ಞೆ ಎಂಬ ಬಿರುದನ್ನು 1876ರಲ್ಲಿ ದೊರಕಿಸಿಕೊಟ್ಟು ಆಕೆಯ ಕೃಪೆಗೆ ಇವನು ಪಾತ್ರನಾಗಿದ್ದ.

ಈಜಿಪ್ಟಿನ ಪಾಷನಿಂದ ಸೂಯೆಜ್ ಕಾಲುವೆಯ ಷೇರುಗಳನ್ನು ಕೊಂಡದ್ದು. 1876ರಲ್ಲಿ ಬಾಲ್ಕನ್ ಪ್ರದೇಶದಲ್ಲಿ ತುರ್ಕಿಯನ್ನು ರಕ್ಷಿಸುವ ನೀತಿಯನ್ನು ಅನುಸರಿಸಿ, ಬಾಸ್ಪೊರಸ್ ಮತ್ತು ಡಾರ್ಡನೆಲ್ಸ್ ಪ್ರದೇಶದಲ್ಲಿ ರಷ್ಯ ನೆಲೆಯೂರದಂತೆ ಮಾಡಿದ್ದು-ಇವು ಡಿಸ್ರೇಲಿಯ ಎರಡು ಪ್ರಮುಖ ಸಾಧನೆಗಳು. ಆದರೆ ಕಾನ್‍ಸ್ಟಾಂಟಿನೋಪಲ್ ಶಾಂತಿ ಮಾತುಕತೆಗಳು ವಿಫಲಗೊಂಡು ತುರ್ಕಿಯ ವಿರುದ್ಧ ರಷ್ಯ ಯುದ್ಧ ಹೂಡಿತು. ಈ ನಡುವೆ ಡಿಸ್ರೇಲಿ ಬೀಕನ್ಸ್‍ಫೀಲ್ಡ್‍ನ ಅರ್ಲ್ ಆಗಿ 1876ರಲ್ಲಿ ಹೌಸ್ ಆಫ್ ಲಾಡ್ರ್ಸ್ ಪ್ರವೇಶ ಮಾಡಿದ್ದ. ಇವನ ಮಂತ್ರಿಮಂಡಲದಲ್ಲಿ ಒಡಕುಂಟಾಗಿತ್ತು. ಆದರೂ ಪ್ರಷ್ಯದ ಬಿಸ್ಮಾರ್ಕನ ಸಹಾಯದಿಂದ ರಷ್ಯ ಇಂಗ್ಲೆಂಡಿನ ಕೆಲವು ಷರತ್ತುಗಳನ್ನು ಒಪ್ಪುವಂತಾಯಿತು. ಇದು ಡಿಸ್ರೇಲಿಯ ಅಂತಿಮ ವಿಜಯ. ಈತನ ಮಂತ್ರಿಮಂಡಲದ ಕೊನೆಗಾಲದಲ್ಲಿ ದಕ್ಷಿಣ ಆಫ್ರಿಕದಲ್ಲಿ ಜûೂಲುಗಳು ಇಂಗ್ಲಿಷರನ್ನು ನಿರ್ದಯೆಯಿಂದ ಕೊಂದರು. ಆಫ್ಘಾನಿಸ್ತಾನದಲ್ಲಿ ಬ್ರಿಟಿಷ್ ರೆಸಿಡೆಂಟನ ಕೊಲೆಯಾಯಿತು. ಇವುಗಳೊಂದಿಗೆ ಕೆಲವು ಆಂತರಿಕ ಬಿಕ್ಕಟ್ಟುಗಳು ತಲೆದೋರಿ ಡಿಸ್ರೇಲಿಯ ಪಕ್ಷ 1880ರ ಚುನಾವಣೆಗಳಲ್ಲಿ ಬಿದ್ದುಹೋಯಿತು.

ಡಿಸ್ರೇಲಿ ಮತ್ತೆ ಕಾದಂಬರಿಗಳ ರಚನೆಯಲ್ಲಿ ತೊಡಗಿದ. ಇವನ ಕೊನೆಯ ಕಾದಂಬರಿಯಾದ ಎಂಡಿಮಿಯಾನ್ ಮುಗಿದ (1880) ಅನಂತರ, 1881ರ ಮಾರ್ಚ್‍ನಲ್ಲಿ ಶೀತವ್ಯಾಧಿಗೆ ಗುರಿಯಾಗಿ ಏಪ್ರಿಲ್ ತಿಂಗಳ 19ರಂದು ನಿಧನ ಹೊಂದಿದ. ಈತನ ವ್ಯಕ್ತಿತ್ವದ ಬಗ್ಗೆ ಅನೇಕ ವಿರೋಧಾಭಿಪ್ರಾಯಗಳುಂಟು. ಆದರೂ ಈತನ ರಾಷ್ಟ್ರಪ್ರೇಮದ ಬಗ್ಗೆ ಯಾರೂ ಬೆರಳು ತೋರುವಂತಿಲ್ಲ. ಬ್ರಿಟಿಷ್ ರಾಜಕಾರಣದಲ್ಲಿ ಪರಮೋನ್ನತಿಗಳಿಸಿದ ಅತ್ಯಂತ ಅಸಾಧಾರಣ ವ್ಯಕ್ತಿಗಳ ಶ್ರೇಣಿಯಲ್ಲಿ ಡಿಸ್ರೇಲಿ ಸ್ಥಾನ ಗಳಿಸಿದ್ದಾನೆ.

ಕಾದಂಬರಿಗಳು

ಬದಲಾಯಿಸಿ

ಮೇಲೆ ಹೆಸರಿಸಿದವನ್ನಲ್ಲದೆ ಡಿಸ್ರೇಲಿ ಇನ್ನೂ ಕೆಲವು ಕಾದಂಬರಿಗಳನ್ನು ಬರೆದಿದ್ದಾನೆ: ವೆನೀಷಿಯ (1837), ಹೆನ್ರಿಯಟ್ಟ ಟೆಂಪಲ್ (1837), ಕಾನಿಂಗ್ಸ್ ಬಿ (1844), ಸಿಬಿಲ್ (1845), ಟ್ಯಾಂಕ್ರೆಡ್ (1847), ಲೋತೇರ್ (1879).

ರಾಜಕೀಯ ವಿಡಂಬನಕ್ಕೆ ಪ್ರಸಿದ್ಧನಾದ ಈತನ ಕೃತಿಗಳು ಸಾಮಾನ್ಯವಾಗಿ ಸ್ವಾರಸ್ಯವಾಗಿವೆ. ಒಂದೊಂದರಲ್ಲೂ ಗಮನ ಸೆಳೆಯುವ ಅಭಿಪ್ರಾಯಗಳು ಮೇಲಿಂದ ಮೇಲೆ ಬರುತ್ತವೆ. ಶಾಸ್ತ್ರಾಧ್ಯಯನ ಹಾಗೂ ಸ್ವಂತ ಅನುಭವದಿಂದ ತೇಲಿಬಂದ ತೀಕ್ಷ್ಣ ತತ್ತ್ವಗಳು, ಉಜ್ವಲ ವಾಕ್ಯಭಾಗಗಳು ಸಾಕಷ್ಟು ಕಾಣಸಿಗುತ್ತವೆ. ಆದರೆ ಅನೇಕ ಬಾರಿ ಈತನ ಬರೆವಣಿಗೆ ಕೃತಕವಾಗಿ ತೋರುತ್ತದೆಯಲ್ಲದೆ ವಾಗಾಡಂಬರ ಹೆಚ್ಚು ಅನ್ನಿಸುತ್ತದೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: