ಬಿ.ಡಿ.ಜತ್ತಿ

(ಬಿ ಡಿ ಜತ್ತಿ ಇಂದ ಪುನರ್ನಿರ್ದೇಶಿತ)

ಬಸಪ್ಪ ದಾನಪ್ಪ ಜತ್ತಿ(ಬಿ.ಡಿ.ಜತ್ತಿ) (ಸೆಪ್ಟೆಂಬರ್ 10,1912 - ಜೂನ್ 7, 2002) - ಭಾರತದ ಮಾಜಿ ಉಪರಾಷ್ಟ್ರಪತಿಗಳಲ್ಲೊಬ್ಬರು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಲ್ಲೊಬ್ಬರು. ಸ್ವಲ್ಪ ದಿನಗಳ ಕಾಲ ಹಂಗಾಮಿ ರಾಷ್ಟ್ರಪತಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕದ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮ ಪಂಚಾಯತಿಯಿಂದ ದೇಶದ ಹಂಗಾಮಿ ರಾಷ್ಟ್ರಪತಿ ಹುದ್ದೆಯವರೆಗೆ ತಲುಪಿದ ಏಕೈಕ ರಾಜಕಾರಣಿ ಬಿ.ಡಿ.ಜತ್ತಿ.

ಬಸಪ್ಪ ದಾನಪ್ಪ ಜತ್ತಿ
ಬಿ.ಡಿ.ಜತ್ತಿ


ಪ್ರಸಕ್ತ
ಅಧಿಕಾರ ಪ್ರಾರಂಭ 
ಫೆಬ್ರವರಿ 11, 1977
ಪೂರ್ವಾಧಿಕಾರಿ ಫಕ್ರುದ್ದೀನ್ ಅಲಿ ಅಹ್ಮದ್
ಉತ್ತರಾಧಿಕಾರಿ ನೀಲಂ ಸಂಜೀವ ರೆಡ್ಡಿ

ಜನನ ಸೆಪ್ಟೆಂಬರ್ 10,1912
ಸಾವಳಗಿ, ಜಮಖಂಡಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ, ಕರ್ನಾಟಕ
ಮರಣ June 7, 2002(2002-06-07) (aged 89)
ರಾಜಕೀಯ ಪಕ್ಷ ಪಕ್ಷೇತರ
ಧರ್ಮ ಹಿಂದು

ಜನನಸಂಪಾದಿಸಿ

ಕರ್ನಾಟಕಬಾಗಲಕೋಟೆ ಜಿಲ್ಲೆ(ಹಳೆಯ ವಿಜಯಪುರ)ಯ ಜಮಖಂಡಿ ತಾಲ್ಲೂಕಿನ ಸಾವಳಗಿ ಹತ್ತಿರದ ಕುರಗೊಡ(ತಾಯಿಯ ಊರು) ಎಂಬ ಚಿಕ್ಕ ಗ್ರಾಮದಲ್ಲಿ 1912ರ ಸೆಪ್ಟಂಬರ್ 10ರಂದು ಜನಿಸಿದರು. ತಂದೆ ದಾನಪ್ಪ ಜತ್ತಿ, ತಾಯಿ ಭಾಗವ್ವ. ದಾನಪ್ಪ ಜತ್ತಿಯವರು ಒಬ್ಬ ವ್ಯಾಪಾರಿ, ಅವರ ಮೂವರು ಗಂಡುಮಕ್ಕಳಲ್ಲಿ ಬಸಪ್ಪನವರು ಒಬ್ಬರು.ಗ್ರಾಮವು ಅಂದು ಮುಂಬೈ ಪ್ರಾಂತದ ಜಮಖಂಡಿ ಸಂಸ್ಥಾನಕ್ಕೆ ಸೇರಿತ್ತು. ತಂದೆ ದಾನಪ್ಪ, ತಾಯಿ ಭಾಗವ್ವ- ಇಬ್ಬರೂ ಶ್ರಮ ಜೀವಿಗಳು, ದೈವ ಭಕ್ತರು, ಗುರು ಹಿರಿಯರಲ್ಲಿ ಅಪಾರ ಗೌರವುಳ್ಳವರು. ಇವರ ಸದ್ಗುಣಗಳು ಬಸಪ್ಪನವರಿಗೆ ಬಳುವಳಿಕೆಯಾಗಿ ಬಂದವು.

ವಿದ್ಯಾಭ್ಯಾಸಸಂಪಾದಿಸಿ

ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅಭ್ಯಾಸದ ಅನಂತರ ಕೊಲ್ಲಾಪುರದ ರಾಜಾರಾಂ ಕಾಲೇಜಿನಲ್ಲಿ ವ್ಯಾಸಂಗಮಾಡಿ ಆಟ್ರ್ಸ್ ಪದವಿಯನ್ನೂ ಸೈಕ್ಸ್ ಲಾ ಕಾಲೇಜಿನಲ್ಲಿ ಎಲ್‍ಎಲ್.ಬಿ. ಪದವಿಯನ್ನೂ ಗಳಿಸಿ (1940) ಜಮಖಂಡಿಯಲ್ಲಿ ವಕೀಲರಾಗಿ ಜೀವನ ಆರಂಭಿಸಿದರು (1940-45). 1948ರಲ್ಲಿ ಜಮಖಂಡಿಯು ಮುಂಬಯಿಗೆ ಸೇರಿದ ನಂತರ ಮತ್ತೆ ಕಾನೂನು ವೃತ್ತಿಗೆ ವಾಪಸಾದರು

ವೃತ್ತಿ ಜೀವನಸಂಪಾದಿಸಿ

೧೯೪೦ರಲ್ಲಿ ನ್ಯಾಯವಾದಿಯಾಗಿ ಬದುಕು ಆರಂಭಿಸಿದ ಅವರು ರಾಜಕಾರಣಿಯಾಗಿ ಜೀವನವನ್ನು ಸಮಾಜ ಸೇವೆಗೆ ಅರ್ಪಿಸಿಕೊಂಡರು. ಬಸಪ್ಪನವರು 10 ವರ್ಷದ ಬಾಲಕನಾಗಿದ್ದಾಗಲೇ 5 ವರ್ಷದ ಬಾಲಕ ಸಂಗವ್ವಳೊಂದಿಗೆ ವಿವಾಹವಾಯಿತು. ತಂದೆಯ ಮರಣದ ನಂತರ ಕುಟುಂಬ ನಿರ್ವಹಣೆಯ ಹೊಣೆ ತಮ್ಮ ಮೇಲೆ ಬಿದ್ದುದರಿಂದ, ಬಸಪ್ಪನವರು ಕಾನೂನು ಶಿಕ್ಷಣವನ್ನು ಕೈಬಿಟ್ಟು ಸ್ವಗ್ರಾಮಕ್ಕೆ ಮರಳಿದರು. ಕುಟುಂಬದ ಹೊಣೆಯ ಜೊತೆಗೆ ತಮ್ಮ ಹಳ್ಳಿಯ ಸಾರ್ವಜನಿಕ ಸಮಸ್ಯೆಗಳನ್ನು ಬಿಡಿಸುವ ಹೊಣೆಯನ್ನೂ ವಹಿಸಿಕೊಂಡರು.ಗ್ರಾಮ ಪಂಚಾಯಿತಿ ಸ್ಥಾಪಿಸಿ, ಅದರ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಮೂರೂವರೆ ವರ್ಷ ಅದನ್ನು ಮುನ್ನಡೆಸಿದರು. ಇದು ಅವರ ಸಮಾಜ ಸೇವಾ ಕಾರ್ಯದ ಮೊದಲ ಹಂತ. ಗಾಂಧೀಜಿಯವರ ಆದರ್ಶಗಳಿಂದ ತುಂಬ ಪ್ರಭಾವಿತರಾಗಿದ್ದ ಬಸಪ್ಪನವರು ರಾಜಕೀಯ ಬೆಳವಣಿಗೆಗಳ ಬಗ್ಗೆ ಸದಾ ಜಾಗರೂಕರಾಗಿರುತ್ತಿದ್ದರು.

ಸುಧೀರ್ಘ ರಾಜಕೀಯಸಂಪಾದಿಸಿ

ಮುಂಬಯಿ ರಾಜ್ಯ ಶಾಸನ ಸಭೆಗೆ ಅವರನ್ನು ನಾಮ ನಿರ್ದೇಶನ ಮಾಡಲಾಗಿತ್ತು. ಒಂದೇ ವಾರದಲ್ಲಿ ಅವರನ್ನು ಸಂಸದೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು.

1952ರ ಸಾರ್ವತ್ರಿಕ ಚುನಾವಣೆಯಾದ ನಂತರ ಜತ್ತಿಯವರನ್ನು ಮುಂಬಯಿ ಸರ್ಕಾರದಲ್ಲಿ ಆರೋಗ್ಯ ಮತ್ತು ಕಾರ್ಮಿಕ ಮಂತ್ರಿಯನ್ನಾಗಿ ನೇಮಿಸಲಾಯಿತು. ಭಾಷಾವಾರು ಪ್ರಾಂತ್ಯಗಳು ರಚನೆಯಾದ ನಂತರ ಜತ್ತಿಯವರು ಮೈಸೂರಿ ಶಾಸನಸಭೆಯ ಅಧ್ಯಕ್ಷರೂ ಮತ್ತು ಭೂ ಸುಧಾರಣಾ ಸಮಿತಿಯ ಅಧ್ಯಕ್ಷರೂ ಆಗಿದ್ದರು.

ಕರ್ನಾಟಕದ ಮುಖ್ಯಮಂತ್ರಿಯಾಗಿ 1958ರಲ್ಲಿ ನೇಮಕಗೊಂಡು 1962ರ ತನಕ ಆಡಳಿತ ನಡೆಸಿದರು. 3ನೇ ಸಾರ್ವತ್ರಿಕ ಚುನಾವಣೆಯಲ್ಲಿ ಜಮಖಂಡಿ ಕ್ಷೇತ್ರದಿಂದ ಮರು ಚುನಾಯಿತರಾದರು. 1962ರಲ್ಲಿ ನಿಜಲಿಂಗಪ್ಪನವರ ಸಚಿವ ಸಂಪುಟದಲ್ಲಿ ಹಣಕಾಸು ಮಂತ್ರಿಯಾದರು. ಅದೇ ಕ್ಷೇತ್ರದಿಂದ ನಾಲ್ಕನೆಯ ಶಾಸನಸಭೆಗೆ ಮರು ಚುನಾವಣೆಯಲ್ಲಿ ಆಯ್ಕೆ ಯಾದರು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಂತ್ರಿಯಾದರು. ನಂತರ ಅವರು ರಾಷ್ಟ್ರ ರಾಜಕಾರಣಕ್ಕೆ ತೊಡಗಿಸಿಕೊಂಡು 1968ರಲ್ಲಿ ಪಾಂಡಿಚೆರಿಯ ಲೆಫ್ಟಿನೆಂಟ್‌ ಗವರ್ನರ್‌ ಆಗಿ ನೇಮಕಗೊಂಡರು. 1973ರಲ್ಲಿ ಒರಿಸ್ಸಾದ ರಾಜ್ಯಪಾಲರಾಗಿ, ನಂತರ 1974ರಲ್ಲಿ ಭಾರತದ ಉಪರಾಷ್ಟ್ರಾಧ್ಯಕ್ಷರಾಗಿ 1980ರ ವರೆಗೆ ಸೇವೆ ಸಲ್ಲಿಸಿದರು.

ರಾಜ್ಯದಲ್ಲಿ ಸಚಿವರಾಗಿ, ನಂತರ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿ, ಪಾಂಡಿಚೇರಿಯಲ್ಲಿ ಲೆ.ಗೌವರನರ್ ಆಗಿ ಸೇವೆ ಸಲ್ಲಿಸಿ, ಮುಂದೆ ಉಪರಾಷ್ಟ್ರಪತಿ ಮತ್ತು ಫಕ್ರುದ್ದಿನ್ ಅಹ್ಮದ್ ಅವರ ಅಕಾಲ ಮೃತ್ಯುವಿನ ನಂತರ ಕೆಲಕಾಲ ಹಂಗಾಮಿ ರಾಷ್ಟ್ರಪತಿಯಾಗಿ ಇವರು ಸೇವೆ ಸಲ್ಲಿಸಿದರು. ಉತ್ತಮ ಆಡಳಿತಗಾರ, ಸರಳ ಜೀವಿ ಮತ್ತು ರಾಜಕೀಯ "ಜಟ್ಟಿ"ಎಂದು ಜತ್ತಿ ಹೆಸರು ಗಳಿಸಿದ್ದಾರೆ.

ಜಮಖಂಡಿಯ ಪೌರಸಭೆಯ ಸದಸ್ಯರಾಗಿ ಎರಡುಬಾರಿ ಆಯ್ಕೆ ಹೊಂದಿದರಲ್ಲದೆ ಅದರ ಅಧ್ಯಕ್ಷರಾಗಿಯೂ ಇದ್ದರು (1940-45). ಜಮಖಂಡಿ ಸಂಸ್ಥಾನದ ಪ್ರಜಾ ಪರಿಷತ್ತಿನ ಪ್ರಮುಖ ಕಾರ್ಯಕರ್ತರಲ್ಲಿ ಇವರೂ ಒಬ್ಬರಾಗಿದ್ದರು. ಜಮಖಂಡಿಯಲ್ಲಿ ಪ್ರಜಾಪ್ರತಿನಿಧಿ ಸರ್ಕಾರ ಸ್ಥಾಪನೆಯಾದಾಗ ಮಂತ್ರಿಮಂಡಳ ರಚಿಸುವ ಹೊಣೆ ಇವರದಾಯಿತು. 1947ರಲ್ಲಿ ಭಾರತ ಸ್ವತಂತ್ರವಾದಾಗ ಸಂಸ್ಥಾನಗಳ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ದಕ್ಷಿಣ ಸಂಸ್ಥಾನಗಳ ಒಕ್ಕೂಟರಚನೆಯ ಪ್ರಯತ್ನಗಳು ನಡೆದಿದ್ದುವು. ಜತ್ತಿಯವರು ಜಮಖಂಡಿ ಸಂಸ್ಥಾನಿಕರ ಮನವೊಲಿಸಿ ಭಾರತ ಒಕ್ಕೂಟದಲ್ಲಿ ಆ ಸಂಸ್ಥಾನ ವಿಲೀನಗೊಳ್ಳುವಂತೆ ಮಾಡಲು ಶ್ರಮಿಸಿದರು. ವಿಲೀನಗೊಂಡ ಪ್ರದೇಶಗಳ ಪ್ರನಿನಿಧಿಯಾಗಿ ಜತ್ತಿಯವರು ಮುಂಬಯಿ ವಿಧಾನಸಭೆಗೆ ನಾಮಕರಣ ಹೊಂದಿದರು ಮತ್ತು ಅಲ್ಲಿಯ ಮುಖ್ಯಮಂತ್ರಿ ಬಿ.ಜಿ ಖೇರರ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡರು (1948). 1952ರ ಚುನಾವಣೆಯಲ್ಲಿ ಮುಂಬಯಿ ವಿಧಾನಸಭೆಗೆ ಚುನಾಯಿತರಾಗಿ ಆ ರಾಜ್ಯದ ಆರೋಗ್ಯ ಮತ್ತು ಕಾರ್ಮಿಕ ಉಪಮಂತ್ರಿಯಾದರು.

1956ರಲ್ಲಿ ರಾಜ್ಯ ಪುನರ್ರಚನೆಯಾದ ಅನಂತರ ಜತ್ತಿಯವರು ನೂತನ ಮೈಸೂರು ರಾಜ್ಯದ (ಈಗ ಕರ್ನಾಟಕ) ಭೂಸುಧಾರಣಾ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು. ರಾಜ್ಯದ ಭೂಸುಧಾರಣಾ ಕಾಯಿದೆಗಳಿಗೆ ಜತ್ತಿ ಸಮಿತಿಯ ವರದಿ ತಳಹದಿಯಾಯಿತು. 1957 ಮತ್ತು 1967ರ ಚುನಾವಣೆಗಳಲ್ಲಿ ಅವರು ರಾಜ್ಯವಿಧಾನಸಭೆಗೆ ಆಯ್ಕೆಯಾದರು.

ಮುಖ್ಯಮಂತ್ರಿಸಂಪಾದಿಸಿ

1958ರ ಜತ್ತಿಯವರು ಮೈಸೂರಿನ ವಿಧಾನ ಮಂಡಲ ಕಾಂಗ್ರೆಸ್ ಪಕ್ಷದ ನಾಯಕರಾಗಿ ಆಯ್ಕೆಯಾಗಿ ರಾಜ್ಯದ ಮುಖ್ಯಮಂತ್ರಿಯಾದರು. ಅನಿರೀಕ್ಷಿತವಾಗಿ ಬಂದ ಹೊಣೆಯನ್ನು ಜತ್ತಿಯವರು ದಕ್ಷತೆಯಿಂದ ನಿರ್ವಹಿಸಿದರು. 1962ರ ಚುನಾವಣೆಗಳ ಅನಂತರ ರಚಿತವಾದ ನಿಜಲಿಂಗಪ್ಪ ಮಂತ್ರಿಮಂಡಲದಲ್ಲಿ ಜತ್ತಿಯವರು ಹಣಕಾಸಿನ ಮಂತ್ರಿಯಾದರು-1965ರ ವರೆಗೆ ಆ ಹುದ್ದೆಯಲ್ಲಿದ್ದರು. ಅನಂತರ 1968ರ ವರೆಗೆ ಅವರು ಆಹಾರ ಮಂತ್ರಿಯಾಗಿದ್ದರು.

ರಾಜ್ಯಪಾಲಸಂಪಾದಿಸಿ

ಅವರು ಪುದುಚೇರಿಯ ಲೆ.ಗೌವರನರಾಗಿ ನೇಮಕವಾದ್ದು 1968ರಲ್ಲಿ. 1973ರಲ್ಲಿ ಅವರು ಒರಿಸ್ಸದ ರಾಜ್ಯಪಾಲರಾದರು. 1973-74ರಲ್ಲಿ ಆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದಾಗ ಜತ್ತಿಯವರು ಅದರ ಆಡಳಿತವನ್ನು ಯಶಸ್ವಿಯಾಗಿ ನಿರ್ವಹಿಸಿದರು.

ಉಪರಾಷ್ಟ್ರಪತಿ ಮತ್ತು ಹಂಗಾಮಿ ರಾಷ್ಟ್ರಪತಿಸಂಪಾದಿಸಿ

1977 ಫೆಬ್ರವರಿ 11ರಿಂದ ಜುಲೈ 25 1977ರ ವರೆಗೂ ಭಾರತದ ಹಂಗಾಮಿ ರಾಷ್ಟ್ರಪತಿಗಳಾಗಿದ್ದರು ಹಾಗೂ 5ನೇ ಉಪ ರಾಷ್ಟ್ರಪತಿಗಳಾಗಿದ್ದರು.

ತುರ್ತು ಪರಿಸ್ಥಿತಿಯ ನಂತರ ನೆಡೆದ ಚುನಾವಣೆಯಲ್ಲಿ ಜನತಾ ಪಕ್ಷ ಬಹುಮತದಿಂದ ಜಯಗೊಳಿಸಿದರೂ, ಮುರಾರ್ಜಿ ದೇಸಾಯಿಯವರನ್ನು ಪ್ರಧಾನಿ ಮಂತ್ರಿ ಹುದ್ದೆ ಸ್ವೀಕರಿಸಲು ಆಹ್ವಾನಿಸಲು, ಆಗ ಹಂಗಾಮಿ ರಾಷ್ಟ್ರಪತಿಗಳಾಗಿದ್ದ ಜತ್ತಿಯವರು ತಡ ಮಾಡಿದರೆಂದು ಅವರ ವಿರುದ್ಧ ದೆಹಲಿಯಲ್ಲಿ ಭಾರಿ ಪ್ರತಿಭಟನೆ ನೆಡೆದಿತ್ತು.ಇದರಿಂದಾಗಿ, ನಿಜಲಿಂಗಪ್ಪನವರು ರಾಷ್ಟ್ರಪತಿಯಾಗಲು ನಿರಾಕರಿಸಿದ ನಂತರ ಬಹುದಿನಗಳ ನಂತರ ಜತ್ತಿಯವರಿಗೆ ದೊರೆತಿದ್ದ ರಾಷ್ಟ್ರಪತಿ ಹುದ್ದೆ ಅವಕಾಶವು ಕೊನೆಗೆ ನೀಲಂ ಸಂಜೀವ ರೆಡ್ಡಿಯವರ ಪಾಲಾಯಿತೆಂದು ಆಗ ರಾಜಕೀಯ ಚರ್ಚೆ ನೆಡೆದಿತ್ತು. ಅದರ ಸತ್ಯಾಸತ್ಯತೆಗಳೇನೇ ಇರಲಿ, ಕನ್ನಡಿಗರಿಗೆ ರಾಷ್ಟ್ರಪತಿಯಾಗುವ ಅವಕಾಶ ದೂರವಾಗಿದ್ದು ಮಾತ್ರ ಸತ್ಯವಾಗಿದೆ.

ಅಧ್ಯಾತ್ಮಸಂಪಾದಿಸಿ

ಬಸವೇಶ್ವರರ ಉಪದೇಶ ಮತ್ತು ವಿಚಾರಗಳ ಪ್ರಚಾರದ ಉದ್ದೇಶದಿಂದ ರಚಿತವಾಗಿರುವ ಬಸವ ಸಮಿತಿಗೆ ಜತ್ತಿಯವರು ಪ್ರಾರಂಭದಿಂದಲೂ ಅಧ್ಯಕ್ಷರಾಗಿದ್ದಾರೆ. ಸಣ್ಣ ವಯಸ್ಸಿನಿಂದಲೂ ಅವರು ಆಧ್ಯಾತ್ಮದಲ್ಲಿ ಒಲವು ಬೆಳೆಸಿಕೊಂಡಿದ್ದಾರೆ.

ಬಸವ ಸಮಿತಿಯು ೧೯೬೪ರಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಡಾ. ಬಿ.ಡಿ. ಜತ್ತಿ ಅವರಿಂದ ಸ್ಥಾಪನೆಗೊಂಡು, ೧೨ನೇ ಶತಮಾನದ ಬಸವಣ್ಣವರ ಹಾಗು ಅವರ ಸಮಕಾಲೀನ ಶರಣರ ತತ್ವ ಸಂದೇಶಗಳನ್ನು ಪ್ರಪಂಚದಾದ್ಯಂತ ಸಾರುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಭಾರತದ ಮಾಜಿ ರಾಷ್ಟ್ರಪತಿ ಡಾ|| ಬಸಪ್ಪ ದಾನಪ್ಪ ಜತ್ತಿ ಅವರು ಬಸವಣ್ಣವರ ಹಾಗೂ ಶರಣರ ತತ್ವಗಳನ್ನು, ಶರಣ ಸಂಸ್ಕೃತಿಯನ್ನು ಶರಣರ ಸಮಾನತೆಯ ತತ್ವವನ್ನು ಸಾರುವ ಉದ್ದೇಶದಿಂದ ೧೯೬೪ರಲ್ಲಿ ಬಸವ ಸಮಿತಿಯನ್ನು ಸ್ಥಾಪಿಸಿದರು. ಅಂದಿನಿಂದ ಇಂದಿನವರೆಗೆ ಪಕ್ಷ, ಜಾತಿ ಭೇದವಿಲ್ಲದೆ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತ ಬಸವ ಸಂದೇಶಗಳನ್ನು ಹಾಗೂ ಶರಣರ ತತ್ವಗಳನ್ನು ಪ್ರಚಾರ ಮಾಡುತ್ತಿದೆ.

ಬಸವ ಸಮಿತಿಯು ಶರಣರ ಸಂಸ್ಕೃತಿಯನ್ನು ಪ್ರಚಾರ ಮಾಡುವ ಮತ್ತು ಎಲ್ಲಾ ಮಾನವರ ಕಲ್ಯಾಣಕ್ಕಾಗಿ (ಉದ್ಧಾರಕ್ಕಾಗಿ) ಶರಣರ ಕೊಟ್ಟ ಸಂದೇಶಗಳನ್ನು ಕಲುಷಿತಗೊಳಿಸದೆ ಇಂದಿನ ಆಧುನಿಕ ಸಮಾಜಕ್ಕೆ ಒಪ್ಪುವಂತೆ ನವೀಕರಿಸುವ ಉದ್ದೇಶ ಹೊಂದಿದೆ.

ಅನ್ನದಾನಯ್ಯ ಪುರಾಣಿಕ,ಕೆ.ಎಂ.ನಂಜಪ್ಪ,ವೈ.ಸಿ.ಬಸಪ್ಪ,ಗಂಗಪ್ಪ,ಬಿ.ಎಸ್.ಶಂಕರಪ್ಪಶೆಟ್ಟಿ, ಪಾವಟೆ ಮೊದಲಾದ ಗಣ್ಯರ ಜೊತೆಗೂಡಿ, ಬೆಂಗಳೂರಿನಲ್ಲಿ ಅಖಿಲ ಭಾರತ ಬಸವ ಸಮಿತಿ ಸ್ಥಾಪಿಸಿದರು. ಬಸವತತ್ವ ಪ್ರಚಾರಕ್ಕಾಗಿ ಮೀಸಲಾದ ಈ ಸಂಸ್ಥೆಯ ಅಭಿವೃದ್ಧಿಗಾಗಿ ಅಧ್ಯಕ್ಷರಾಗಿ ಜತ್ತಿ ಮತ್ತು 27 ವರ್ಷಗಳ ಕಾಲ ಗೌರವ ಕಾರ್ಯದರ್ಶಿಯಾಗಿ ಅನ್ನದಾನಯ್ಯ ಪುರಾಣಿಕನಿರಂತರ ಮತ್ತು ನಿಸ್ಪಾರ್ಥ ಸೇವೆ ಸಲ್ಲಿಸಿದ್ದಾರೆ.

ನಿರ್ವಹಿಸಿದ ಪ್ರಮುಖ ಹುದ್ದೆಗಳುಸಂಪಾದಿಸಿ

ಅವರು ಹೊಂದಿದ್ದ ಪ್ರಮುಖ ಹುದ್ದೆಗಳಲ್ಲಿ ಕೆಲವು:

 • ಸಾವಳಗಿಯ ಗ್ರಾಮ ಪಂಚಾಯ್ತಿ ಸದಸ್ಯ (೧೯೪೩)
 • ಮುಂಬಯಿ ವಿಧಾನಸಭೆಯ ಶಾಸಕ (೧೯೪೯)
 • ಮುಂಬಯಿ ರಾಜ್ಯದ ಉಪ ಮುಖ್ಯಮಂತ್ರಿ (೧೯೫೫)
 • ಭೂಸುಧಾರಣಾ ಮಂಡಲದ ಅಧ್ಯಕ್ಷ (೧೯೫೭)
 • ರಾಜ್ಯ ಪುನರ್ ವಿಂಗಡಣೆಯ ಬಳಿಕ ಕರ್ನಾಟಕದ ಮುಖ್ಯಮಂತ್ರಿ (೧೯೫೮)
 • ಮೈಸೂರ ರಾಜ್ಯದ ೫ನೇಯ ಮುಖ್ಯಮಂತ್ರಿ (ಮೇ ೧೬, ೧೯೫೮ ರಿಂದ ಮಾರ್ಚ್ ೯,೧೯೬೨)
 • ನಿಜಲಿಂಗಪ್ಪ ಮಂತ್ರಿಮಂಡಲದಲ್ಲಿ ಜತ್ತಿಯವರು ಹಣಕಾಸಿನ ಮಂತ್ರಿ-1965
 • ಮೈಸೂರ ರಾಜ್ಯ ಆಹಾರ ಮಂತ್ರಿ
 • ಪಾಂಡಿಚೇರಿಯ ಲೆಫ್ಟಿನೆಂಟ್ ಗವರ್ನರ್ (೧೯೬೮-೧೯೭೨)
 • ಒಡಿಶಾ ರಾಜ್ಯದ ರಾಜ್ಯಪಾಲ (೧೯೭೨ - ೧೯೭೭)
 • ಭಾರತದ ೫ನೇಯ ಉಪರಾಷ್ಟ್ರಪತಿ (ಅಗಸ್ಟ ೩೧, ೧೯೭೪ ರಿಂದ ಅಗಸ್ಟ ೩೦, ೧೯೭೯)
 • ಭಾರತದ ಹಂಗಾಮಿ ರಾಷ್ಟ್ರಪತಿ (೧೧-೦೨-೧೯೭೭ ರಿಂದ ೨೫-೦೭-೧೯೭೭)

ಆತ್ಮಕತೆಸಂಪಾದಿಸಿ

ಬಿ.ಡಿ.ಜತ್ತಿಯವರ ಆತ್ಮಕತೆ - ನನಗೆ ನಾನೇ ಮಾದರಿ.