ಬಿಳಿ ಅತ್ಯಂತ ತಿಳಿ ಬಣ್ಣವಾಗಿದೆ ಮತ್ತು ವರ್ಣರಹಿತವಾಗಿದೆ, ಏಕೆಂದರೆ ಅದು ಬೆಳಕಿನ ಎಲ್ಲ ಗೋಚರವಿರುವ ತರಂಗಾಂತರಗಳನ್ನು ಸಂಪೂರ್ಣವಾಗಿ ಪ್ರತಿಫಲಿಸುತ್ತದೆ ಮತ್ತು ಚೆದುರಿಸುತ್ತದೆ; ಅದು ತಾಜಾ ಹಿಮ, ಸೀಮೆಸುಣ್ಣ ಅಥವಾ ಹಾಲಿನ ಬಣ್ಣವಾಗಿದ್ದು, ಕಪ್ಪು ಪದದ ವಿರುದ್ಧಪದವಾಗಿದೆ.

ಹಾಲಿನ ಬಣ್ಣ ಬಿಳಿ

ಯೂರೋಪ್ ಮತ್ತು ಅಮೇರಿಕದಲ್ಲಿನ ಸಮೀಕ್ಷೆಗಳ ಪ್ರಕಾರ, ಬಿಳಿಯು ಬಹುತೇಕ ವೇಳೆ ಪರಿಪೂರ್ಣತೆ, ಶುಭ, ಪ್ರಾಮಾಣಿಕತೆ, ಸ್ವಚ್ಛತೆ, ಆರಂಭ, ನವೀನ, ತಟಸ್ಥತೆ ಮತ್ತು ನಿಖರತೆಯೊಂದಿಗೆ ಸಂಬಂಧಿಸಲಾದ ಬಣ್ಣವಾಗಿದೆ.[] ಬಿಳಿಯು ಬಹುತೇಕ ಎಲ್ಲ ವಿಶ್ವ ಧರ್ಮಗಳಿಗೆ ಒಂದು ಪ್ರಮುಖ ಬಣ್ಣವಾಗಿದೆ. ರೋಮನ್ ಕ್ಯಾಥೊಲಿಕ್ ಚರ್ಚ್‌ನ ಮುಖ್ಯಸ್ಥರಾದ ಪೋಪ್, ೧೫೬೬ರಿಂದ ಶುದ್ಧತೆ ಮತ್ತು ತ್ಯಾಗದ ಸಂಕೇತವಾಗಿ ಬಿಳಿ ವಸ್ತ್ರವನ್ನೇ ಧರಿಸಿದ್ದಾರೆ. ಇಸ್ಲಾಂ ಮತ್ತು ಜಪಾನ್‍ನ ಶಿಂಟೊ ಧರ್ಮದಲ್ಲಿ ಪ್ರಯಾಣಿಕರು, ಮತ್ತು ಭಾರತದಲ್ಲಿ ಬ್ರಾಹ್ಮಣರು ಬಿಳಿ ವಸ್ತ್ರ ಧರಿಸುತ್ತಾರೆ. ಪಾಶ್ಚಾತ್ಯ ಸಂಸ್ಕೃತಿಗಳಲ್ಲಿ ಮತ್ತು ಜಪಾನ್‍ನಲ್ಲಿ, ಶುದ್ಧತೆ ಮತ್ತು ಕನ್ಯತ್ವವನ್ನು ಸಂಕೇತಿಸುವ ಬಿಳಿಯು ಮದುವೆ ಉಡುಪುಗಳಿಗೆ ಅತ್ಯಂತ ಸಾಮಾನ್ಯ ಬಣ್ಣವಾಗಿದೆ. ಅನೇಕ ಏಷ್ಯನ್ ಸಂಸ್ಕೃತಿಗಳಲ್ಲಿ, ಬಿಳಿಯು ಶೋಕಾಚರಣೆಯ ಬಣ್ಣವೂ ಆಗಿದೆ.

ಕಣ್ಣಿನ ಒಳಬರುವ ಬೆಳಕು ಕಣ್ಣಿನಲ್ಲಿನ ಎಲ್ಲ ಮೂರು ಬಗೆಗಳ ವರ್ಣಸೂಕ್ಷ್ಮ ಕೋನ್ ಕೋಶಗಳನ್ನು ಸ್ಥೂಲವಾಗಿ ಸಮಾನ ಪ್ರಮಾಣಗಳಲ್ಲಿ ಉದ್ರೇಕಿಸಿದಾಗ, ಮಾನವ ದೃಷ್ಟಿ ವ್ಯವಸ್ಥೆಯು ಬೆಳಕನ್ನು ಬಿಳಿ ಎಂದು ಗ್ರಹಿಸುತ್ತದೆ. ಸ್ವತಃ ಅವೇ ಬೆಳಕನ್ನು ಹೊರಸೂಸದ ವಸ್ತುಗಳ ಮೇಲ್ಮೈಗಳು ಅವುಗಳ ಮೇಲೆ ಬೀಳುವ ಬೆಳಕಿನ ಬಹುತೇಕ ಭಾಗವನ್ನು ವಿಸ್ತೃತ ರೀತಿಯಲ್ಲಿ ಪ್ರತಿಫಲಿಸಿದಾಗ ಈ ವಸ್ತುಗಳು ಬಿಳಿಯಾಗಿ ಕಾಣುತ್ತವೆ.

೧೬೬೬ರಲ್ಲಿ, ಬಿಳಿ ಬಣ್ಣವನ್ನು ಅಶ್ರಗದ ಮೂಲಕ ಹಾಯಿಸಿ ಅದನ್ನು ಅದರ ಸಮ್ಮಿಳಿತ ಬಣ್ಣಗಳಾಗಿ ವಿಭಜಿಸಬಹುದೆಂದು, ನಂತರ ಎರಡನೇ ಅಶ್ರಗವನ್ನು ಬಳಸಿ ಅವುಗಳನ್ನು ಪುನಃ ಸೇರಿಸಬಹುದೆಂದು ಐಸ್ಯಾಕ್ ನ್ಯೂಟನ್ ತೋರಿಸಿಕೊಟ್ಟರು. ನ್ಯೂಟನ್‍ನ ಮೊದಲು, ಬಿಳಿಯು ಬೆಳಕಿನ ಮೂಲಭೂತ ಬಣ್ಣ ಎಂದು ಬಹುತೇಕ ವಿಜ್ಞಾನಿಗಳು ನಂಬಿದ್ದರು.

ಬಿಳಿ ಬೆಳಕನ್ನು ಸೂರ್ಯ, ನಕ್ಷತ್ರಗಳು, ಮತ್ತು ಪ್ರತಿದೀಪಕ ದೀಪಗಳು, ಬಿಳಿ ಎಲ್‍ಇಡಿಗಳು ಮತ್ತು ಪ್ರಕಾಶಮಾನ ದೀಪಗಳಂತಹ ಭೂಬದ್ಧ ಮೂಲಗಳು ಉತ್ಪನ್ನ ಮಾಡುತ್ತವೆ. ಬಣ್ಣದ ಟಿವಿ ಅಥವಾ ಕಂಪ್ಯೂಟರ್‍ನ ಪರದೆಯ ಮೇಲೆ, ಬೆಳಕಿನ ಪ್ರಾಥಮಿಕ ಬಣ್ಣಗಳಾದ ಕೆಂಪು, ಹಸಿರು ಮತ್ತು ನೀಲಿಯನ್ನು ಪೂರ್ಣ ತೀವ್ರತೆಯಲ್ಲಿ ಮಿಶ್ರಣಮಾಡಿ ಬಿಳಿ ಬಣ್ಣವನ್ನು ಉತ್ಪನ್ನ ಮಾಡಲಾಗುತ್ತದೆ. ಈ ಪ್ರಕ್ರಿಯೆಯನ್ನು ಸಂಯೋಜನೀಯ ಮಿಶ್ರಣ ಎಂದು ಕರೆಯಲಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Eva Heller (2000), Psychologie de la couleur – effets ets symboliques, pp. 130–46
"https://kn.wikipedia.org/w/index.php?title=ಬಿಳಿ&oldid=802020" ಇಂದ ಪಡೆಯಲ್ಪಟ್ಟಿದೆ