ಬಾಸೆಲ್ ಮಿಷನ್
ಬಾಸೆಲ್ ಮಿಷನ್ ( ಬಾಸೆಲ್ ಮಿಶನ್) ಕನ್ನಡ ನಾಡು ನುಡಿಗಳಿಗೆ 150 ವರ್ಷಗಳ ಅಪಾರ ಸೇವೆ ಸಲ್ಲಿಸಿದ ಕ್ರೈಸ್ತಮಿಷನರಿ ಸಂಸ್ಥೆ. ದಕ್ಷಿಣ ಕನ್ನಡ ಜಿಲ್ಲೆಯ ಸರ್ವಾಂಗೀಣ ಪ್ರಗತಿಗೆ ಮಹತ್ತರ ಸೇವೆಸಲ್ಲಿದೆ. ಧಾರ್ಮಿಕ, ಶೈಕ್ಷಣಿಕ, ಮುದ್ರಣ, ಪತ್ರಿಕೋದ್ಯಮ, ಸಾಹಿತ್ಯ, ವೈದ್ಯಕೀಯ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿ ನಾಡಿನ ಭವಿಷ್ಯವನ್ನು ರೂಪಿಸಿದೆ.
ಆರಂಭ
ಬದಲಾಯಿಸಿಬಾಸೆಲ್ ಮಿಷನ್ ಸಂಸ್ಥೆಯನ್ನು ಕ್ರೈಸ್ತ ಧರ್ಮಪ್ರಚಾರಾರ್ಥ ಸ್ವಿಟ್ಸರ್ಲೆಂಡಿನ ಬಾಸೆಲ್ ನಗರದಲ್ಲಿ 1815ರಲ್ಲಿ ಪ್ರವರ್ತಿಸಲಾಯಿತು. ಇದು 1834 ಅಕ್ಟೋಬರ್ 30ರಂದು ಭಾರತಕ್ಕೆ ಬಂದಿತು. ಸ್ಯಾಮುವೆಲ್ ಹೇಬಿಖ್, ಯೋಹಾನ್ ಕ್ರಿಸ್ತಿಯಾನ್‍ಲೇನರ್ ಮತ್ತು ಕ್ರಿಸ್ತಿಯಾನ್ ಲಿಯೊನಾರ್ಡ್ ಗ್ರೈನರ್ ಭಾರತದಲ್ಲಿ ಬಾಸೆಲ್ ಮಿಷನ್ನಿನ ಆದ್ಯ ಪ್ರವರ್ತಕರು. ಮಂಗಳೂರಿಗೆ ಬಂದಿಳಿದ ಇವರು ದಕ್ಷಿಣ ಕನ್ನಡವನ್ನು ತಮ್ಮ ಕಾರ್ಯಕ್ಷೇತ್ರವಾಗಿ ಆಯ್ದುಕೊಂಡರು.
ಸಾಧನೆಗಳು
ಬದಲಾಯಿಸಿಬಾಸೆಲ್ ಮಿಷನ್ ಹಲವು ಪ್ರಥಮಗಳ ರೂವಾರಿ. “ಮಂಗಳೂರು ಸಮಾಚಾರ” (೧೮೪೩)ಪತ್ರಿಕೆ ಆರಂಭಿಸಿ ಕನ್ನಡದ ಪ್ರಥಮ ಪತ್ರಿಕೆಯನ್ನು ಹೊರತಂದ ಕೀರ್ತಿ ಇವರದು. ಕನ್ನಡ ಪತ್ರಿಕೋದ್ಯಮಕ್ಕೆ ಇದು ನಾಂದಿಯಾಯಿತು. ಪುರಾಣೇತಿಹಾಸಗಳನ್ನು ಸಂಪಾದಿಸಿ ಅಚ್ಚು ಹಾಕಿಸಿದ್ದು ಇನ್ನೊಂದು ಪ್ರಥಮ ಸಾಹಸ. ತುಳು ವ್ಯಾಕರಣ ಗ್ರಂಥ ಈ ಸಂಸ್ಥೆಯ ಮೂಲಕ ಪ್ರಥಮವಾಗಿ ಬೆಳಕು ಕಂಡಿತು.
ಸಂದ 150 ವರ್ಷಗಳ ದೀರ್ಘಾವಧಿಯಲ್ಲಿ ಈ ಸಂಸ್ಥೆ ಭಾರತಕ್ಕೆ ಬಹುಮುಖ ಸೇವೆಸಲ್ಲಿಸಿದೆ. ಸ್ಯಾಮುವೆಲ್ ಹೇಬಿಖ್ 25 ವರ್ಷ ಪರ್ಯಂತ ಇಲ್ಲಿದ್ದು ಜನರ ಅಗತ್ಯಗಳನ್ನು ಗಮನಿಸಿ, ಅವಕ್ಕೆ ಅನುಗುಣವಾಗಿ ಸಂಸ್ಥೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವಿಸ್ಮರಣೀಯ.
ಶಿಕ್ಷಣ ಪ್ರಸಾರಕ್ಕಾಗಿ ಇವರು ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮಶಾಲೆಗಳನ್ನು ಆರಂಭಿಸಿದರು. ಬಾಲಿಕೆಯರಿಗೂ ಹಿಂದುಳಿದ ಜನಾಂಗದವರಿಗೂ ಶಾಲೆಗಳಲ್ಲಿ ಪ್ರವೇಶ ದೊರಕಿಸಿಕೊಟ್ಟು ಕ್ರ್ರಾಂತಿಯನ್ನೇ ಉಂಟುಮಾಡಿದರು. ಉತ್ತಮ ಮಟ್ಟದ ಪಠ್ಯಪುಸ್ತಕಗಳ ಹಾಗೂ ಕೈಪಿಡಿ ಗ್ರಂಥಗಳ ಪೂರೈಕೆಯ ಜವಾಬ್ದಾರಿಯನ್ನೂ ಹೊತ್ತರು.
ಬಾಸೆಲ್ ಮಿಷನಿನವರು ಕ್ರೈಸ್ತ ಮತ ಗ್ರಂಥಗಳ ಅನುವಾದದ ಜತೆಯಲ್ಲಿಯೇ ಪ್ರಾಚೀನ ಕನ್ನಡ ಕೃತಿಗಳ ಸಂಪಾದನೆಯನ್ನೂ ಪ್ರಕಾಶನವನ್ನೂ ಕೈಗೊಂಡರು. ಪಂಚಾಂಗದಿಂದ ಕೋಷ್ಟಕದವರೆಗೆ, ಕಾವ್ಯದಿಂದ ವಿಜ್ಞಾನದವರೆಗೆ ಅವರ ಪ್ರಕಟಣಾ ವ್ಯವಸಾಯ ಸಾಗಿತು. ಅನುವಾದ ಸಾಹಿತ್ಯ, ಪ್ರಾಚೀನ ಕಾವ್ಯ, ಶಬ್ದಕೋಶ, ಛಂದಸ್ಸು, ವ್ಯಾಕರಣ, ನಾನಾರ್ಥ ಕೋಶ, ಸಂಕಲನಗಳು, ಚಿತ್ರಮಯ ಪ್ರದೇಶ ಪರಿಚಯ, ಪಠ್ಯ ಪುಸ್ತಕಗಳು, ಚಿತ್ರಗಳು, ಪಟಗಳು, ಪಂಚಾಂಗಗಳು, ಕೋಷ್ಟಕಗಳು, ತುಳು ಕೃತಿಗಳು, ಬಾಲಸಾಹಿತ್ಯ-ಹೀಗೆ ಹತ್ತು ಹಲವು ಬಗೆಯ ಪ್ರಕಟಣೆಗಳನ್ನು ಇವರು ಯಶಸ್ವಿಯಾಗಿ ನೆರವೇರಿಸಿದರು.
ಬಡಜನರ ಕಷ್ಟ ನೀಗಲೆಂದು ಬಾಸೆಲ್ ಮಿಷನ್ ಸಂಸ್ಥೆ ಕೈಗಾರಿಕಾ ಕ್ಷೇತ್ರಕ್ಕೂ ಪ್ರವೇಶಿಸಿತು. ಕಮ್ಮಾರಶಾಲೆ, ಚಾಪೆ ಹೆಣೆಯುವುದು, ನೇಯ್ಗೆ, ಕಾರ್ಖಾನೆಗಳಿಂದ ಆರಂಭವಾಗಿ ಬಾಸೆಲ್ ಮಿಷನ್ ಕೈಗಾರಿಕಾ ಕ್ಷೇತ್ರದಲ್ಲಿ ವಿಕ್ರಮಗಳನ್ನು ಸ್ಥಾಪಿಸುವಷ್ಟು ಬೃಹತ್ತಾಗಿ ಬೆಳೆಯಿತು. ಹಂಚಿನ ಕಾರ್ಖಾನೆ, ಮುದ್ರಣಾಲಯ, ಬೈಂಡಿಂಗ್ ಕೈಗಾರಿಕೆಗಳು ತಲೆ ಎತ್ತಿದುವು. ತಮ್ಮ ಶ್ರೇಷ್ಟ ಗುಣಮಟ್ಟದ ಕಾರಣವಾಗಿ ಇವರ ತಯಾರಿಕೆಗಳು ಬಲುಬೇಗ ಜನಪ್ರಿಯವಾದುವು. ಖಾಕಿ ಬಟ್ಟೆ, ಮಂಗಳೂರು ಹಂಚು. ಇವರು ಪ್ರಕಟಿಸಿದ ಜೈಮಿನಿಭಾರತ, ಬಸವಪುರಾಣ, ದಶಪರ್ವ ಭಾರತ, ಚೆನ್ನಕೇಶವ ಪುರಾಣ ಮುಂತಾದ ಗ್ರಂಥಗಳು ಈ ಸಂಸ್ಥೆಗೆ ಯಶಸ್ಸಿನ ಮಹಾಪೂರವನ್ನೇ ಹರಿಸಿದುವು. ಕನ್ನಡ, ಸಂಸ್ಕøತ, ತಮಿಳು, ಮಲೆಯಾಳಂ, ತುಳು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪುಸ್ತಕಗಳನ್ನು ಪ್ರಕಟಿಸಿ ಸಾಹಿತ್ಯ ಸೇವೆಯನ್ನೂ ಮಾಡಿದರು.
ಈ ಸಂಸ್ಥೆ ತನ್ನ ಆಯಾಮವನ್ನು ಹಿಗ್ಗಿಸಿಕೊಂಡು ವೈದ್ಯಕೀಯ ನೆರವನ್ನು ನೀಡಲೂ ಮುಂದಾಯಿತು. ಆರೋಗ್ಯಧಾಮ ಕುಷ್ಟರೋಗ ಆಸ್ಪತ್ರೆ, ಕ್ಷಯ ರೋಗಿಗಳ ಆಸ್ಪತ್ರೆಗಳು ಆರಂಭವಾದುವು. ಜನರಿಗೆ ಆರೋಗ್ಯದ ಬಗ್ಗೆ ತಿಳಿವಳಿಕೆ ನೀಡಲು ಕರಪತ್ರಗಳನ್ನು ಪ್ರಕಟಿಸಿದರು. ಆಯುರ್ವೇದ, ಹೋಮಿಯೋಪತಿ ವಿಭಾಗಗಳೂ ಇದ್ದುವು.
ಸಮಾಜಸೇವೆಗೆ ಕೈಹಾಕಿ ಅನಾಥ ಬಾಲಕ ಬಾಲಕಿಯರಿಗೂ, ವಿಧವೆಯರಿಗೂ ಆಶ್ರಮಗಳನ್ನು ಸ್ಥಾಪಿಸಿದರು. ಬರಗಾಲದಲ್ಲಿ ನೊಂದವರಿಗೆ ಆಶ್ರಮಗಳಲ್ಲಿ ಆಶ್ರಯ ನೀಡಿದರು.
ಎರಡು ಮಹಾಯುದ್ಧಗಳಿಂದಾಗಿ ಸ್ವಲ್ಪ ತೊಂದರೆಯಾದರೂ ಈಗ ಭಾರತೀಯ ಕ್ರೈಸ್ತ ಸಭೆ ಬಾಸೆಲ್ ಮಿಶನಿನ ಹೊಣೆ ಹೊತ್ತು ಕೆಲಸ ನಿರ್ವಹಿಸುತ್ತಿದೆ.
ಮಾನವೀಯತೆ, ದಯೆ, ಅನುಕಂಪ, ಸೇವಾ ಮನೋಭಾವಗಳಿಂದ ಬಾಸೆಲ್ ಮಿಷನ್ ನೊಂದವರ ಆಶಾಪ್ರತೀಕವಾಗಿ ಬೆಳೆದು ನಿಂತಿದೆ.