ಬಾಳಾಸಾಹೇಬ್‌ ದೇವರಸ್

ಬಾಳಾಸಾಹೇಬ್‌ ದೇವರಸ್ (ದೇವನಾಗರಿ: मधुकर दत्तात्रय देवरस)ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂರನೆಯ ಸರಸಂಘಚಾಲಕರು. ಇವರ ಪೂರ್ಣ ಹೆಸರು ‌ಮಧುಕರ ದತ್ತಾತ್ರೇಯ ದೇವರಸ್. (11 ಡಿಸೆಂಬರ್ 1915 – 17 ಜೂನ್ 1996)

ಬಾಳಾಸಾಹೇಬ್‌ ದೇವರಸ್

ಬಾಲ್ಯ - ಶಿಕ್ಷಣ

ಬದಲಾಯಿಸಿ

ಬಾಳಾಸಾಹೇಬ್‌ ದೇವರಸ್‌ ಡಿಸೆಂಬರ್ 15, 1915 ರಂದು ನಾಗ್ಪುರದಲ್ಲಿ ಜನಿಸಿದರು. ಅವರ ಬಾಲ್ಯ ಜೀವನ ಆಂದ್ರಪ್ರದೇಶದಲ್ಲಿ ಕಳೆಯಿತು. ಅವರು ದತ್ತಾತ್ರೇಯ ಕೃಷ್ಣರಾವ್ ದೇವರಸ್ ಮತ್ತು ಪಾರ್ವತಿಬಾಯಿ ಅವರ ಎಂಟನೇ ಮಗು. ಇವರ ಕಿರಿಯ ಸಹೋದರ ಭಾವೂರಾವ್ ದೇವರಸ್(ಮುರುಳೀಧರ) ಸಹ ಆರ್.ಎಸ್.ಎಸ್.‌ ಪ್ರಚಾರಕರಾಗಿದ್ದರು. ಬಾಳಾಸಾಹೇಬರು 1938 ರಲ್ಲಿ ನಾಗ್ಪುರದ ಮೋರಿಸ್ ಕಾಲೇಜಿನಿಂದ ಪದವಿ ಪಡೆದರು ಮತ್ತು ನಾಗ್ಪುರ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಲಾದಲ್ಲಿ ತಮ್ಮ ಎಲ್ ಎಲ್ ಬಿ ಪದವಿ ಪಡೆದರು. ಡಾ. ಕೇಶವರಾವ್‌ ಬಲಿರಾಂಪಂತ್ ಹೆಡ್ಗೆವಾರ್ ಅವರಿಂದ ಸ್ಫೂರ್ತಿ ಪಡೆದ ಅವರು, ಆರ್‌ಎಸ್‌ಎಸ್‌ನೊಂದಿಗೆ ಪ್ರಾರಂಭದಿಂದಲೂ ಸಂಬಂಧ ಹೊಂದಿದ್ದರು ಮತ್ತು ತಮ್ಮ ಜೀವನವನ್ನು ಸಂಘಟನೆಗಾಗಿ ಅರ್ಪಿಸಲು ನಿರ್ಧರಿಸಿದರು.

ಸಂಘ ಜೀವನ

ಬದಲಾಯಿಸಿ

ಬಾಲ್ಯದಿಂದಲೇ ಸಂಘದ ಸ್ವಯಂಸೇವಕರಾಗಿದ್ದ ಬಾಳಾಸಾಹೇಬ್‌, ಕುಶ ಪಥಕ - ಬಾಲಕರ ಗುಂಪಿನ ಸದಸ್ಯರಾಗಿದ್ದರು. ತನ್ನ ಓರಗೆಯ ಹಲವು ಬಾಲಕರನ್ನು ಸಂಘದ ಶಾಖೆಗೆ ಕರೆತಂದರು. ಡಾ. ಹೆಡ್ಗೇವಾರ್‌ ಅವರ ಮಾರ್ಗದರ್ಶನದಿಂದ ಕುಶ ಪಥಕದ ಎಲ್ಲ ಬಾಲಕರು ಮುಂದೆ ಸಂಘದ ಪ್ರಚಾರಕರಾಗಿ ತಮ್ಮ ಜೀವನವನ್ನೇ ಸಂಘ ಕಾರ್ಯಕ್ಕೆ ಮುಡಿಪಾಗಿಟ್ಟರು. ಬಾಳಾಸಾಹೇಬರು ಬಂಗಾಲ ಪ್ರಾಂತದ ಮೊದಲ ಸಂಘ ಪ್ರಚಾರಕರಾಗಿದ್ದರು. ನಂತರ ನಾಗಪುರದಲ್ಲಿನ ಮರಾಠಿ ಪತ್ರಿಕೆ ತರುಣ್ ಭಾರತ್ ಮತ್ತು ಹಿಂದಿ ದಿನಪತ್ರಿಕೆಯಾದ ಯುಗಧರ್ಮದ ಪ್ರಕಟಣೆಯ ಜವಾಬ್ದಾರಿ ವಹಿಸಿಕೊಂಡರು. 1965 ರಲ್ಲಿ ಆರ್‌ಎಸ್‌ಎಸ್‌ನ ಪ್ರಧಾನ ಕಾರ್ಯದರ್ಶಿ(ಸರಕಾರ್ಯವಾಹ)ಯಾದರು. ಆರ್‌ಎಸ್‌ಎಸ್ ನ ಎರಡನೆಯ ಮುಖ್ಯಸ್ಥರಾಗಿದ್ದ ಎಂ.ಎಸ್. ಗೋಲ್ವಾಲ್ಕರ್ ಅವರ ನಿಧನದ ನಂತರ, ಬಾಳಾಸಾಹೇಬ್‌ ದೇವರಸ್ 1973 ರಲ್ಲಿ ಆರ್‌ಎಸ್‌ಎಸ್‌ನ ಸರಸಂಘಚಾಲಕರಾದರು. ಸಾಮಾಜಿಕ ಜೀವನದ ವಿವಿಧ ಕ್ಷೇತ್ರಗಳಲ್ಲಿ ಸ್ವಯಂಸೇವಕರು ಕಾರ್ಯ ನಿರ್ವಹಿಸುವ ದಿಕ್ಕಿನಲ್ಲಿ ಬಾಳಾಸಾಹೇಬರು ಹೆಚ್ಚಿನ ಆಸಕ್ತಿ ಹೊಂದಿದ್ದರು. ಸೇವಾ ಚಟುವಟಿಕೆ, ಅಸ್ಪೃಶ್ಯತೆ ನಿವಾರಣೆಯಂಥ ಕಾರ್ಯಗಳಲ್ಲಿ ಸ್ವಯಂಸೇವಕರು ಹೆಚ್ಚಾಗಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುತ್ತಿದ್ದರು. 1975 ರಲ್ಲಿ ಅಂದಿನ ಭಾರತದ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿ ಸಂಘಕ್ಕೆ ನಿಷೇಧ ಹೇರಿದರು. MISA[] DIR [] ನಂತಹ ಕರಾಳ ಕಾನೂನುಗಳ ಅಡಿಯಲ್ಲಿ ಸಾವಿರಾರು ಆರ್‌ಎಸ್‌ಎಸ್ ಸ್ವಯಂಸೇವಕರನ್ನು ಜೈಲಿನಲ್ಲಿರಿಸಲಾಯಿತು ಮತ್ತು ಹಿಂಸಿಸಲಾಯಿತು. ಬಾಳಾಸಾಹೇಬರ ಪ್ರೇರಣೆ ಮತ್ತು ಯಶಸ್ವಿ ಮಾರ್ಗದರ್ಶನದಲ್ಲಿ ಬೃಹತ್ ಸತ್ಯಾಗ್ರಹ ನಡೆಯಿತು. ಇದೇ ಸಂದರ್ಭದಲ್ಲಿ ಜಯಪ್ರಕಾಶ ನಾರಾಯಣರ ನೇತೃತ್ವದ ತುರ್ತು ಪರಿಸ್ಥಿತಿ ವಿರೋಧಿ ಚಳುವಳಿಯ "ಜೆಪಿ ಚಳವಳಿ" ಗೆ ಆರ್ ಎಸ್ ಎಸ್‌ ನ ಬೆಂಬಲ ಘೋಷಿಸಿದರು. 1977 ರಲ್ಲಿ ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಲಾಯಿತು ಮತ್ತು ಸಂಘದ ಮೇಲಿನ ನಿಷೇಧವನ್ನು ತೆಗೆದುಹಾಕಲಾಯಿತು.

1994ರಲ್ಲಿ ತಮ್ಮ ಅನಾರೋಗ್ಯದ ಕಾರಣದಿಂದ ಸರಸಂಘಚಾಲಕ ಸ್ಥಾನವನ್ನು ಪ್ರೊ.ರಾಜೇಂದ್ರಸಿಂಗ್(ರಜ್ಜೂಭಯ್ಯಾ)ರಿಗೆ ನೀಡಿದರು. ಹಿಂದುತ್ವ ತತ್ತ್ವಶಾಸ್ತ್ರದ ಅನುಯಾಯಿ ಹಾಗೂ ಸ್ವಯಂಸೇವಕನೊಬ್ಬ ಭಾರತದ ಪ್ರಧಾನ ಮಂತ್ರಿಯಾಗುವುದನ್ನು ನೋಡಲು ಸಾಕಷ್ಟು ಕಾಲ ಬದುಕಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರು ಮೇ 1996 ರಲ್ಲಿ ಭಾರತದ ಪ್ರಧಾನಿಯಾದರು. ದೇವರಸ್‌ರ ಆ‌ರೋಗ್ಯ ಕ್ಷೀಣಿಸಿ ಅಂತಿಮವಾಗಿ 17 ಜೂನ್ 1996 ರಂದು ಅವರ ನಿಧನವಾಯಿತು.

ದೇವರಸ್‌ರ ದೃಷ್ಟಿಕೋನ

ಬದಲಾಯಿಸಿ

ಬಾಳಾಸಾಹೇಬ್‌ ದೇವರಸರು, ಸಾವರಕರ ನೀಡಿದ ಹಿಂದುತ್ವದ ವ್ಯಾಖ್ಯೆ "ನಾವು ಒಂದು ಸಂಸ್ಕೃತಿ ಮತ್ತು ಒಂದು ರಾಷ್ಟ್ರ ಹಿಂದೂ ರಾಷ್ಟ್ರವನ್ನು ನಂಬುತ್ತೇವೆ. ಆದರೆ ಹಿಂದೂಗಳ ನಮ್ಮ ವ್ಯಾಖ್ಯಾನವು ಯಾವುದೇ ನಿರ್ದಿಷ್ಟ ರೀತಿಯ ನಂಬಿಕೆಗೆ ಸೀಮಿತವಾಗಿಲ್ಲ. ಹಿಂದೂಗಳ ನಮ್ಮ ವ್ಯಾಖ್ಯಾನವು ಒಂದು ಸಂಸ್ಕೃತಿಯಲ್ಲಿ ನಂಬಿಕೆ ಇಡುವವರನ್ನು ಒಳಗೊಂಡಿದೆ ಮತ್ತು ಎಲ್ಲರೂ ಹಿಂದೂ-ರಾಷ್ಟ್ರದ ಭಾಗವಾಗಬಹುದು. ನಾವು ಹಿಂದೂ ಪದವನ್ನು ವಿಶಾಲ ಅರ್ಥದಲ್ಲಿ ಬಳಸುತ್ತೇವೆ." ಇದನ್ನು ಬೆಂಬಲಿಸಿದ್ದರು.

1974 ರ ಮೇ ತಿಂಗಳಲ್ಲಿ ಪುಣೆಯಲ್ಲಿ ಏರ್ಪಡಿಸಿದ್ದ ವಸಂತ ವ್ಯಾಖ್ಯಾನ ಮಾಲಾ ಎಂಬ ಉಪನ್ಯಾಸ ಮಾಲೆಯ ವೇದಿಕೆಯಿಂದ ನೀಡಿದ ಒಂದು ಪ್ರಮುಖ ಭಾಷಣದಲ್ಲಿ, ದೇವರಸ್‌ರು ಅಸ್ಪೃಶ್ಯತೆಯ ಆಚರಣೆಯನ್ನು ಖಂಡಿಸಿದರು ಮತ್ತು ಆರ್‌ಎಸ್‌ಎಸ್ ಸ್ವಯಂಸೇವಕರಿಗೆ ಅಸ್ಪೃಶ್ಯತೆಯ ಪಿಡುಗನ್ನು ತೆಗೆದುಹಾಕುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಮನವಿ ಮಾಡಿದರು. ಇದೇ ಭಾಷಣದಲ್ಲಿ ಬಾಳಾಸಾಹೇಬರು : ಅಸ್ಪೃಶ್ಯತೆ ಪಾಪವಲ್ಲವಾದರೆ ಜಗತ್ತಿನಲ್ಲಿ ಯಾವುದೂ ಪಾಪವಲ್ಲ ಎಂದು ಉದ್ಗರಿಸಿದ್ದರು.[] ಹಿಂದೂ ಸಮಾಜದ ಪರಿಶಿಷ್ಟ ಜಾತಿಯ ಜನರ ಉನ್ನತಿಗಾಗಿ ಮೀಸಲಾಗಿರುವ ಸೇವಾ ಭಾರತಿ ಅಡಿಯಲ್ಲಿ ಆರ್‌ಎಸ್‌ಎಸ್ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಅಡಿಯಲ್ಲಿ, ಆರ್‌ಎಸ್‌ಎಸ್ ಸ್ವಯಂಸೇವಕರು ಶಾಲೆಗಳನ್ನು ಪ್ರಾರಂಭಿಸಿದ್ದಾರೆ, ಇದರಲ್ಲಿ ಸೇವಾಬಸ್ತಿ(ಕೊಳೆಗೇರಿ) ನಿವಾಸಿಗಳಿಗೆ ಮತ್ತು ತಥಾಕಥಿತ ಅಸ್ಪೃಶ್ಯರಿಗೆ ವೃತ್ತಿಪರ ಶಿಕ್ಷಣವನ್ನು ನೀಡುತ್ತಾರೆ ಮತ್ತು ಹಿಂದೂ ಧರ್ಮದ ಸದ್ಗುಣಗಳನ್ನು ಕಲಿಸುತ್ತಾರೆ.

ಬಾಳಾಸಾಹೇಬರ ಮೆದುಳಿನ ಕೂಸು, 1991 ರಲ್ಲಿ ಸ್ಥಾಪನೆಯಾದ ಸ್ವದೇಶಿ ಜಾಗರಣ ಮಂಚ್ ಸ್ವದೇಶಿಯನ್ನು ರಕ್ಷಿಸುವಲ್ಲಿ ಮತ್ತು ಸ್ವದೇಶಿ ಜಾಗೃತಿಯನ್ನು ಮೂಡಿಸುವ ಕಾರ್ಯನಿರ್ವಹಿಸುತ್ತಿದೆ.[]

ಸಾಹಿತ್ಯ ಕೃತಿಗಳು

ಬದಲಾಯಿಸಿ

ಬಾಳಾಸಾಹೇಬ್‌ ದೇವರಸ್‌ ಅವರು ಹಿಂದಿ ಹಾಗೂ ಇಂಗ್ಲೀಷ್‌ ನಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ.

  • ಪಂಜಾಬ್‌, ಪ್ರಾಬ್ಲಮ್‌ ಅಂಡ್‌ ಇಟ್ಸ್‌ ಸೊಲುಷನ್‌ (Punjab, problem and its solution (1984))
  • ಸೋಶಿಯಲ್‌ ಇಕ್ವಲಿಟಿ ಅಂಡ್‌ ಹಿಂದು ಕನ್ಸಾಲಿಡೇಶನ್‌ (Social equality and Hindu consolidation (1974))
  • ಹಿಂದು ಸಂಗಠನ ಔರ ಸತ್ತಾವಾದಿ ರಾಜನೀತಿ (Hindu sangathana aura sattavadi rajaniti (1997))
  • ಶ್ರೀ ಬಾಳಾಸಾಹೇಬ್‌ ದೇವರಸ್‌ ಆನ್ಸರ್ಸ್‌ ಅಂಡ್‌ ಕ್ವಶ್ಚನ್ಸ್‌ (Sri Balasaheb Deoras answers questions (1984))
  • ರೌಸ್‌ : ದ ಪಾವರ್‌ ಆಫ್‌ ಗುಡ್‌ (Rouse: The power of good (1975))

ಹೊರ ಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. https://en.wikipedia.org/wiki/Maintenance_of_Internal_Security_Act
  2. https://en.wikipedia.org/wiki/Defence_of_India_Act_1915#:~:text=The%20Defence%20of%20India%20Act%201915%2C%20also%20referred%20to%20as,of%20the%20First%20World%20War.
  3. "ರೇಡಿಯೋ ಗಿರ್ಮಿಟ್ ಸಂದರ್ಶನ". Archived from the original on 2020-07-15. Retrieved 2020-07-15.
  4. http://www.swadeshionline.in/

ಹೆಚ್ಚಿನ ಓದು

ಬದಲಾಯಿಸಿ
  • Klostermaier, Klaus K. (2007). A survey of Hinduism (3. ed.). Albany: State University of New York Press. ISBN 9780791480113.
  • Rajagopal, Arvind (2001). Politics after television religious nationalism and the reshaping of the Indian public. Cambridge, UK: Cambridge University Press. ISBN 9780511155956.
  • Bhatt, Chetan (2001). Hindu Nationalism Origins, Ideologies and Modern Myths. Oxford: Berg Publishers. ISBN 9781845209865.
  • Jaffrelot, Christophe (2007). Hindu nationalism : a reader. Princeton, NJ: Princeton University Press. ISBN 978-0-691-13097-2.
  • Hasan, Zoya, ed. (1994). Forging identities : gender, communities and the state in India (1. publ. ed.). Boulder u.a.: Westview Press. ISBN 0-8133-2333-9.
  • Malik, Yogendra K.; Singh, V.B. (1994). Hindu nationalists in India : the rise of the Bharatiya Janata Party. Boulder u.a.: Westview Press. ISBN 0-8133-8810-4.
  • Sharma, Arvind, ed. (1994). Today's woman in world religions. Albany: State Univ. of New York Press. ISBN 0-7914-1687-9.
  • Saha, Santosh C., ed. (2001). Religious fundamentalism in developing countries (1. publ. ed.). Westport, Conn. [u.a.]: Greenwood Press. ISBN 0-313-31155-2.