ಬಾಜೀರಾಯ 1 (1720-40) ಮರಾಠರ ಸಾಮ್ರಾಜ್ಯದ ಮುಖ್ಯಮಂತ್ರಿ ಪೇಶ್ವೆಯಾಗಿದ್ದ. ತಂದೆ ಪೇಶ್ವೆ ಬಾಲಾಜಿ ವಿಶ್ವನಾಥರ ಕಾಲಾನಂತರ ಇವನನ್ನು ಪೇಶ್ವೆಯಾಗಿ ರಾಜ ಸಾಹು ನೇಮಕ ಮಾಡಿದ (1720). ಬಾಜೀರಾಯನ ಮೊದಲ ಹೆಸರು ವಿಸಾಜಿ. ಬಾಜೀರಾಯ ಇಪ್ಪತ್ತು ವರ್ಷದ ತರುಣನಾಗಿದ್ದಾಗಲೇ ಪೇಶ್ವೆಯಾಗಿ ಮರಾಠ ಸಾಮ್ರಾಜ್ಯದ ಏಳಿಗೆಗೆ ಧೈರ್ಯದಿಂದ ನಿಂತ. ಚಿಕ್ಕಂದಿನಿಂದಲೂ ತಂದೆಯ ಮೂಲಕ ಅಂದಿನ ಪರಿಸ್ಥಿತಿಯ, ರಾಜಕಾರಣದ ಅನುಭವ ಬಾಜೀರಾಯನಿಗೆ ಆಗಿತ್ತು. ರಾಜಕಾರಣದಲ್ಲಿ ಆಡಬೇಕಾದ ಆಟಗಳ, ಹಿಡಿತಗಳ, ಅರಿವು ಬಾಜೀರಾಯನ ಅನುಭವಕ್ಕೆ ಬಂದಿದ್ದುವು. ಬಾಲ್ಯದಿಂದಲೇ ಆತ ಯುದ್ಧಾಸಕ್ತ. ಅನೇಕ ದಾಳಿಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದ.

Peshwa Baji Rao I riding horse.jpg

ಜೀವನಸಂಪಾದಿಸಿ

ಛತ್ರಪತಿ ಸಾಹು ಮಹಾರಾಜ ಎಲ್ಲ ಅಧಿಕಾರವನ್ನು ಬಾಜೀರಾಯನಿಗೆ ಕೊಟ್ಟು ತಾನು ಹೆಸರಿಗೆ ದೊರೆಯಾಗಿದ್ದ. ಬಾಜೀರಾಯನಿಗೆ ದಿಲ್ಲಿಯ ಮುಗಲರ ದಕ್ಷಿಣದ ಸುಬೇದಾರ ನಿಜಾಮರ ಉಪದ್ರವ ಆರಂಭವಾಯಿತು. ಮೊದಲು ಬಾಜೀರಾಯ ತನ್ನ ಸಹೋದ್ಯೋಗಿಗಳಾದ ಶಿಂಧೆ, ಹೋಳ್ಕರ್, ಪವಾರ ಮೊದಲಾದವರ ಸಹಕಾರದೊಂದಿಗೆ ಖಾನ್‍ದೇಶ, ಬಾಗಲಾಣ್ ಮತ್ತು ಮಾಳವ ಪ್ರಾಂತ್ರಗಳಲ್ಲಿ ತನ್ನ ಸತ್ತೆಯನ್ನು ಸ್ಥಾಪಿಸಿದ (1723). ಗುಜರಾತನ್ನು 1724ರಲ್ಲಿ ಗೆದ್ದುಕೊಂಡ. ಆ ಸಂದರ್ಭದಲ್ಲಿ ದಿಲ್ಲಿಯ ಮುಗಲಸಾಮ್ರಾಜ್ಯ ಅಸ್ತಮಿಸಲು ಬಂದಿದೆಯೆಂದು ಕಂಡುಕೊಂಡ. ಮುರಿದು ಬೀಳುತ್ತಿರುವ ಗಿಡದ ಕಾಂಡವನ್ನೇ ಕಡಿದುಹಾಕೋಣ, ಆಗ ಉಳಿದ ಶಾಖೆಗಳು ತನ್ನಷ್ಟಕ್ಕೆ ತಾನೆ ಉರುಳಿ ಬೀಳುತ್ತವೆ ಎಂದು ಹೇಳಿ ಕೃಷ್ಣಾ ತೀರದಿಂದ ಸಿಂಧೂ ನದಿಯ ದಡದವರೆಗೆ ಮರಾಠರ ಬಾವುಟ ನೆಡಲು ಹವಣಿಸಿದ. ಹಿಂದೂ ಸಾಮ್ರಾಜ್ಯ ಸ್ಥಾಪನೆಯ ಆದರ್ಶವನ್ನು ಮುಂದಿಟ್ಟು ಉತ್ತರದಲ್ಲಿ ಇದ್ದ ಹಿಂದೂ ಸಂಸ್ಥಾನಿಕರ ಮನಸ್ಸನ್ನು ಗೆದ್ದ. ಆದರೆ ಮಹಾರಾಷ್ಟ್ರದ ಒಳಗಡೆಯೆ ಇದ್ದ ಶತ್ರುಗಳು ಪ್ರಬಲರಾಗಿ ಸೇನಾಪತಿ ತ್ರಿಂಬಕರಾವ್ ಧಾಬಡೆ ಹಾಗೂ ಕೊಲ್ಲಾಪುರದ ರಾಜ ಇವರ ನೇತೃತ್ವದಲ್ಲಿ ಬಾಜೀರಾಯನನ್ನು ಧಬೋಯಿ ಬಳಿಯ ಬಿಲ್ಹಾಪುರದ ಮೈದಾನದಲ್ಲಿ ಎದುರಿಸಿದರು. ಈ ಯುದ್ಧದಲ್ಲಿ ತ್ರಿಂಬಕರಾವ್ ಧಾಬಡೆ ಸೋತು ಸತ್ತ, ಇದರಿಂದ ಬಾಜೀರಾಯನಿಗೆ ಅಂತರಂಗದ ವೈರಿಗಳ ಕಾಟ ತಪ್ಪಿತು. ನಿಜಾಮನ ಮೇಲೆ ದಂಡೆತ್ತಿ ಹೋಗಿ 1728ರಲ್ಲಿ ಪಾಲಖೇಡ ಎಂಬಲ್ಲಿ ಅವನನ್ನು ಸೋಲಿಸಿದ. ಆಗ ನಿಜಾಮ ಸಂಧಿ ಮಾಡಿಕೊಂಡ. ಕ್ರಿ.ಶ. 1729ರಲ್ಲಿ ಬುಂದೇಲಖಂಡ ರಾಜಾ ಛತ್ರಸಾಲನ ಆಹ್ವಾನದ ಮೇರೆಗೆ ದಂಡೆತ್ತಿಹೋಗಿ ಮಹಮ್ಮದ ವಂಗಶಾನನ್ನು ಸೋಲಿಸಿ ಛತ್ರಸಾಲನನ್ನು ರಕ್ಷಿಸಿದ. ಅನಂತರ ಬಾಜೀರಾಯ ಕೊಂಕಣ ಪ್ರಾಂತ್ಯವನ್ನು ಗೆದ್ದ. ಕ್ರಿ.ಶ. 1735ರ ಅನಂತರ ಮಾಳವ ಪ್ರಾಂತ್ಯದಿಂದ ಚೌಥವು ಬರದಿರಲು ಆ ಪ್ರಾಂತ್ಯದ ಮೇಲೆ ದಂಡೆತ್ತಿ ಹೋದ. ಈ ಯುದ್ಧ ಚಟುವಟಿಕೆ ಸುಮಾರು ಎರಡು ವರ್ಷ ನಡೆಯಿತು. ಮುಸಲ್ಮಾನ ಸರದಾರರೂ ನಿಜಾಮ ಮೊದಲಾದವರೂ ಮರಾಠರ ಅಭ್ಯುದಯವನ್ನು ಸಹಿಸದಾದರು. ಮುಗಲ ದೊರೆ ನಿಜಾಮನನ್ನು ಆಹ್ವಾನಿಸಿದ. ಬಾಜೀರಾಯನ ಬೆಳವಣಿಗೆಯನ್ನು ತಡೆಯಲು ಬಯಸಿದ ನಿಜಾಮನಿಗೆ ಇದೇ ಬೇಕಾಗಿತ್ತು. ಮತ್ತೆ ಭೂಪಾಲದ ಬಳಿಯಲ್ಲಿ ಸೋತ ನಿಜಾಮ ಮತ್ತೊಮ್ಮೆ ಒಪ್ಪಂದ ಮಾಡಿಕೊಂಡ. ಇದರಿಂದ ನಿಜಾಮನಿಗೆ ಕೆಲವು ಪ್ರದೇಶ ಬಿಟ್ಟು ಹೋಯಿತು. ಮರಾಠ ಸೈನ್ಯದ ವೆಚ್ಚಕ್ಕಾಗಿ 50 ಲಕ್ಷ ರೂಪಾಯಿಗಳನ್ನು ಮುಗಲ ಚಕ್ರವರ್ತಿ ಭರಿಸಲು ಒಪ್ಪಿಕೊಂಡ. ಇದರಿಂದ ಮರಾಠ ಶಕ್ತಿ ಇಮ್ಮಡಿಸಿ ಭಾರತದ ಬಹುಭಾಗ ಅವರ ಆಡಳಿತಕ್ಕೆ ಬಂದಿತು. ಕ್ರಿ.ಶ. 1739ರಲ್ಲಿ ಪೋರ್ಚುಗೀಸರಿಗೆ ಸೇರಿದ್ದ ಸಾಲ್‍ಸೆಟ್ ಮತ್ತು ಬೇಸಿನ್‍ಗಳನ್ನು ಗೆದ್ದುಕೊಂಡ. ಈ ಸಮಯಕ್ಕೆ ದಿಲ್ಲಿಯ ಮೇಲೆ ಪರ್ಷಿಯಾದಿಂದ ನಾದಿರ್ ಶಾಹ ದಂಡೆತ್ತಿ ಬಂದ. ಈ ಸುದ್ದಿ ಕೇಳಿದ ಬಾಜೀರಾಯ ಅಕ್ಕಪಕ್ಕದ ಮುಸ್ಲಿಮ್ ದೊರೆಗಳ ಜೊತೆಗಿನ ದ್ವೇಷವನ್ನು ಬದಿಗೊತ್ತಿ ಎಲ್ಲರೊಂದಿಗೆ ಬೆರೆತು ಪರ್ಷಿಯನ್ ವೈರಿಯನ್ನು ಎದುರಿಸಲು ಸನ್ನದ್ಧನಾದ. ಆದರೆ ತನ್ನ 42ನೆಯ ವಯಸ್ಸಿನಲ್ಲಿ (1740) ಮರಣ ಹೊಂದಿದ.

ಹೆಚ್ಚಿನ ಓದಿಗೆಸಂಪಾದಿಸಿ

  • Palsolkar, Col. R. D. Bajirao I: An Outstanding Indian Cavalry General, India: Reliance Publishers, 248pp, 1995, ISBN 81-85972-93-1.
  • Paul, E. Jaiwant. Baji Rao – The Warrior Peshwa, India: Roli Books Pvt Ltd, 184pp, ISBN 81-7436-129-4.
  • Kulkarni, Uday S. The Era of Baji rao, Mula-Mutha Publishers, 432pp.
  • Godse, D. G. Mastani, Popular Prakashan, 1989 (in Marathi)

ಹೊರಗಿನ ಕೊಂಡಿಗಳುಸಂಪಾದಿಸಿ

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: