ಬಂಡಿಹಬ್ಬ - ಕರ್ನಾಟಕದ ಬಂಡೀಹಬ್ಬ ಉತ್ತರ ಕನ್ನಡಕರಾವಳಿ ಸೀಮೆಯ ಊರು ಊರುಗಳಲ್ಲಿ, ಮೇ ತಿಂಗಳಲ್ಲಿ ಜರುಗುವ ಬಲು ಮೆರುಗಿನ ಹಬ್ಬ, ಸುಗ್ಗಿ ಮುಗಿದು ದವಸ ಧಾನ್ಯಗಳಿಂದ ಮನೆ ತುಂಬಿಸಿ, ಕೈಯಲ್ಲಿ ನಾಲ್ಕು ಕಾಸು ಓಡಾಡುವ ಸಂತಸದ ಕಾಲ. ಸುತ್ತಲೂ ಸಂಭ್ರಮದ ವಾತಾವರಣ, ಗುಮಟೆಯ ಪಾಂಗು, ಯಕ್ಷಗಾನ, ಆಟ ಸಭೆಸಮಾರಂಭ, ತಳಿರು-ತೋರಣ, ಎಲ್ಲೆಲ್ಲೂ ಉತ್ಸಾಹ, ಉಲ್ಲಾಸ! ವೀರ ದೈವಗಳು ಆರಾಧನೆಯ ಕಾಲ,ಕರಾವಳಿ ಸೀಮೆಗಳಲ್ಲಿ ಈ ಬಂಡಿಹಬ್ಬಗಳು ವಿಶೇಷ.

ಮೈಸೂರು ಜಾನಪದ

ಜನಪದ ಹಬ್ಬ, ಗ್ರಾಮದೇವತೆಯ ಹೆಸರಿನಲ್ಲಿ ನಡೆಸುವ ಈ ಹಬ್ಬವನ್ನು ಕೆಲವು ಕಡೆ ಹಸುರುಬಂಡಿ ಎಂದೂ ಕರೆಯುತ್ತಾರೆ. ಹಸುರೆಲೆಯ ತೋರಣ, ತೆಂಗಿನ ಗರಿ, ಅಡಕೆ, ಹೊಂಬಾಳೆ ಇವುಗಳಿಂದ ಬಂಡಿಯನ್ನು (ಎತ್ತಿನಗಾಡಿ ಅಥವಾ ರಥ) ಅಲಂಕರಿಸುವುದರಿಂದ ಇದಕ್ಕೆ ಈ ಹೆಸರು ಬಂದಿದೆ ಎನ್ನಲಾಗಿದೆ. ಹಬ್ಬದ ಆಚರಣೆಯಲ್ಲಿ ಸ್ಥಳದಿಂದ ಸ್ಥಳಕ್ಕೆ ಕೆಲವು ವೈಶಿಷ್ಟಗಳಿವೆ.

ಹಳೆಯ ಮೈಸೂರು ಪ್ರದೇಶದಲ್ಲಿ

ಬದಲಾಯಿಸಿ

ಹಳೆಯ ಮೈಸೂರು ಪ್ರದೇಶದಲ್ಲಿ ಈ ಹಬ್ಬ ನಡೆಯುವುದು ಸಾಧಾರಣವಾಗಿ ಮಂಗಳವಾರ. ಗ್ರಾಮದೇವತೆಯ ವಿಗ್ರಹವನ್ನು ತಾತ್ಕಾಲಿಕವಾಗಿ ಮಣ್ಣಿನಲ್ಲಿ ಬಹು ಸುಂದರವಾಗಿ ನಿರ್ಮಿಸಿರುತ್ತಾರೆ. ಅಕ್ಕಿ ತೆಂಗಿನಕಾಯಿ ರಾಶಿ ರಾಶಿ ಬಿದ್ದಿರಲಾಗಿ ಗ್ರಾಮದೇವತೆ ಒಕ್ಲೂನ ಹಾಸ್ಕೊಂಡು ಒಕ್ಲೂನ ಹೊದ್ದು ಕಿವಿಯಲ್ಲಿ ಮುತ್ತಿಕ್ಕಿದ ಓಲೆ ತೊಟ್ಟು ಕಿಡಗಣ್ಣಿಯಾಗಿ ಮೆರೆಯುತ್ತಾಳೆ. ಭಕ್ತರು ಬಾಗಿಲಿಗೆ ಛತ್ರಿ ಏರಿಸುತ್ತಾರೆ. ಏಳೂರು ಸಿಡಿಗಳು ಬರುತ್ತವೆ, ಹೆಡಗೇಲಿ ಹಣ್ಣು, ಗಡಿಗೇಲಿ ತುಪ್ಪ, ಇಡಗಾಯಿ, ಕುರಿಗಳ ಸಾಲು, ಮಡಲಕ್ಕಿ ಎಲ್ಲ ಬರುತ್ತವೆ. ಕೆಲವಾರು ಊರುಗಳಲ್ಲಿ ಕೊಂಡ ಸಹ ಹಾಯುತ್ತಾರೆ. ಮೆರವಣಿಗೆಯಲ್ಲಿ ದೊಡ್ಡ ದೊಡ್ಡ ಪಂಜುಗಳು ಉರಿಯುತ್ತವೆ. ಭಕ್ತರು ಭಕ್ತಿಯಿಂದ ದೇವತೆಯ ಮಹಿಮೆಯನ್ನು ಕುರಿತು ಹಾಡುತ್ತಾರೆ. ದೇವತೆಯನ್ನು ಬಂಡಿಯ ಮೇಲೆ ಮೆರವಣಿಗೆಯಲ್ಲಿ ಕೊಂಡೊಯ್ಯುವಾಗ ಅಕ್ಕಪಕ್ಕದಲ್ಲಿ ದಾಸ ಮತ್ತು ಪುರುಷ (ಧಾರ್ಮಿಕ ಪೂಜಾರಿ) ಇರುತ್ತಾರೆ. ದಾಸ ಹೆಗಲ ಮೇಲೆ ಕಿರುಗಂಟೆ ಕಟ್ಟಿದ ಒಂದು ಒನಕೆ, ಎಡ ಕಂಕುಳಲ್ಲಿ ಕೆಡಾಸು, ಬವನಾಸಿ, ಬಲ ಕಂಕುಳಲ್ಲಿ ತುತ್ತೂರಿ, ಬಾಂಕಿ ಶಂಖ ಎದೆಯ ಮೇಲೆ ಆನೆಯ ವಿಗ್ರಹ, ಬಲಗೈಯಲ್ಲಿ ಜಾಗಟಿ ಹಿಡಿದಿರುತ್ತಾನೆ. ಪುರುಷ ಭೈರವನ ಶಿಷ್ಯ. ಈತ ಕಬ್ಬಿಣದ ದೊಡ್ಡ ತ್ರಿಶೂಲ ಮತ್ತು ಬೆಳ್ಳಿಯ ಸಣ್ಣ ತ್ರಿಶೂಲಗಳನ್ನು ಸೇರಿಸಿದ ನವಿಲುಗರಿ ಕಂತೆಯನ್ನು ಹೆಗಲಮೇಲೆ ಇಟ್ಟುಕೊಂಡು ಕಂಕುಳಲ್ಲಿ ವಿಭೂತಿ ಚೀಲ, ಕೈಯಲ್ಲಿ ಜಿಂಕೆಯ ಕೊಂಬಿನ ವಾದ್ಯ, ತೀರ್ಥದ ಬಟ್ಟಲು ಹಿಡಿದಿರುತ್ತಾನೆ. ಸುಮಂಗಲಿಯರು ಐರಣ (ಪಂಚಕಲಶ) ಹೊತ್ತು ನಡೆಯುವರು. ಒಬ್ಬ ವ್ಯಕ್ತಿ ಬಣ್ಣ ಹಾಕಿದ ಮರದ ಕುದುರೆಯ ಕತ್ತನ್ನು ಕಂಕುಳಲ್ಲಿ ಹಿಡಿದುಕೊಂಡು ಕುಣಿಯುತ್ತಾನೆ. ಗ್ರಾಮದೇವತೆಗೆ ಹರಕೆ ಹೊತ್ತವರೆಲ್ಲ ತಮ್ಮ ಶಕ್ತ್ಯಾನುಸಾರ ಹರಕೆ ತಂದೊಪ್ಪಿಸುತ್ತಾರೆ. ಕುರಿ, ಕೋಳಿ ಆಡುಗಳ ಬಲಿಯನ್ನು ಅರ್ಪಿಸುತ್ತಾರೆ. ಕೋಲಾಟ, ದೊಣ್ಣೆವರಸೆ, ರಮ ಡೋಲು, ಬಾಣಬಿರುಸಿನ ಐಭೋಗ ನಡೆಯುತ್ತದೆ. ಅನಂತರ ಬಾಡೂಟದ ಔತಣ. ಔತಣದ ಅನಂತರ ಕೊಂಬು ಕಹಳೆ, ತುತ್ತೂರಿ, ಭಾಂಕೆ ಕುಣಿಮಿಣಿ, ತಾಳ ತಮಟೆ ಮೋರಿಗಳ ಕೋಲಾಹಲದೊಂದಿಗೆ ವೀರಗುಣಿತವಿರುತ್ತದೆ. ಈ ಕುಣಿತದ ಮುಕ್ತಾಯದೊಡನೆ ಹಬ್ಬದ ಆಚರಣೆ ಕೊನೆಗೊಳ್ಳುತ್ತದೆ.

ಕರಾವಳಿ ಉತ್ತರ ಕನ್ನಡ ಜಿಲ್ಲೆಯಲ್ಲಿ

ಬದಲಾಯಿಸಿ

ಬಂಡೀಹಬ್ಬ ಉತ್ತರ ಕನ್ನಡಕರಾವಳಿ ಸೀಮೆಯ ಊರು ಊರುಗಳಲ್ಲಿ, ಮೇ ತಿಂಗಳಲ್ಲಿ ಜರುಗುವ ಬಲು ಮೆರುಗಿನ ಹಬ್ಬ, ಸುಗ್ಗಿ ಮುಗಿದು ದವಸ ಧಾನ್ಯಗಳಿಂದ ಮನೆ ತುಂಬಿಸಿ, ಕೈಯಲ್ಲಿ ನಾಲ್ಕು ಕಾಸು ಓಡಾಡುವ ಸಂತಸದ ಕಾಲ. ಸುತ್ತಲೂ ಸಂಭ್ರಮದ ವಾತಾವರಣ, ಗುಮಟೆಯ ಪಾಂಗು, ಯಕ್ಷಗಾನ, ಆಟ ಸಭೆಸಮಾರಂಭ, ತಳಿರು-ತೋರಣ, ಎಲ್ಲೆಲ್ಲೂ ಉತ್ಸಾಹ, ಉಲ್ಲಾಸ! ಕಾರವಾರ, ಅಂಕೋಲಾ ಸೀಮೆ, ಗೋಕರ್ಣ ಸೀಮೆ, ಚಂದಾವರ ಸೀಮೆಗಳಲ್ಲಿ ಈ ಬಂಡಿಹಬ್ಬಗಳು ವಿಶೇಷ. ಇವುಗಳಲೆಲ್ಲ ಅಂಕೋಲೆಯ ಬಂಡಿಹಬ್ಬ ಬಲು ಪ್ರಸಿದ್ದ. ಈ ಸೀಮೆಯ ನಾಡದೇವತೆ ಶಾಂತಾದುರ್ಗಾ ಭೂಮಿತಾಯಿ. ಅವಳ ಹೆಸರಲ್ಲಿ ಎಲ್ಲಕ್ಕೂ ಮೊದಲು ಅಂಕೋಲೆಯ ಬಂಡಿಹಬ್ಬ ನಡೆಯಬೇಕು. ಅಕ್ಷಯ ತೃತೀಯೆಯ ದಿನ 'ಸೇಸೆ' ಹಾಕುವ ವಿಧಿಯಿಂದ ಪ್ರಾರಂಭವಾದ ಅಂಕೋಲೆಯ ಬಂಡಿಹಬ್ಬ ಹನ್ನೆರಡನೆ ದಿನ ವೈಶಾಖ ಶುದ್ಧ ಪೂರ್ಣಿಮೆಯಂದು ಮುಗಿಯುತ್ತದೆ. ಅಂಕೋಲೆಯ ಬಂಡಿಹಬ್ಬದ ಕೊನೆಯ ದಿನ ಮಾತ್ರ ಒಂದು ಮಹಾ ಜಾತ್ರೆ. ಈ ಜಾತ್ರೆ ಸೇರುವ ಪೇಟೆಯ ಸ್ಥಳ ‘ಬಂಡಿ ಬಜಾರ'ವೆಂದೇ ಹೆಸರಾಗಿದೆ. ಇಲ್ಲಿಯೇ ಹಬ್ಬದ ಕೊನೆಯ ದಿನ ಸಂಜೆ ಕಳಸ ದೇವರು ಉಯ್ಯಾಲೆ ಚಪ್ಪರದ ತೂಗುಯ್ಯಾಲೆಯ ಮೇಲೆ ಕುಳಿತು ಎತ್ತರಕ್ಕೆ ಏರಿ ಇಳಿದು ಸುತ್ತುವ ಸುಂದರ ದೃಶ್ಯವನ್ನು ನೋಡಲು ಸಾವಿರಾರು ಜನ ಅಕ್ಕಪಕ್ಕದ ಅಂಗಡಿಗಳ ಜಗುಲಿ, ಅಟ್ಟಗಳ ಮೇಲೆ, ಕಟ್ಟೆ, ರಸ್ತೆಗಳ ತುಂಬಾ ಮೈ ಮೈ ತಿಕ್ಕುವ ನೂಕುನುಗ್ಗಲಿನಲ್ಲಿ ನಿಂತು ಕಾದಿರುತ್ತಾರೆ. ಇನ್ನೂ ಸಾವಿರಾರು ಜನ 'ಜನ ಮರುಳೋ, ಜಾತ್ರೆ ಮರುಳೋ' ಎನ್ನುವಂತೆ ಆ ನೂಕು ನುಗ್ಗಲಿನಲ್ಲಿಯೆ 'ತಾ ಮುಂದೆ ನಾ ಮುಂದೆ' ಎಂದು ತಿವಿಯುತ್ತಾ, ತಿಕ್ಕುತ್ತ ತಿರುಗುವುದರಲ್ಲಿಯೇ ಸಂತೋಷ ಪಡುತ್ತಾರೆ. ರಸ್ತೆಯಂಚಿನಲ್ಲಿ ಚಪ್ಪರದ ಅಂಗಡಿಗಳು, ಜಾದು, ಸರ್ಕಸ್, ಡೊಂಬರಾಟಗಳು, ಮಕ್ಕಳ ಗಿರಿಗಿರಿ, ಮಾಕಡಛಾಪ್, ಫ‌-ಫರ್ ಎನ್ನುವ ಪುಗ್ಗೆಗಳು ಹಬ್ಬದ ಹುಚ್ಚನ್ನು ಹೆಚ್ಚಿಸುತ್ತವೆ, ಮತ್ತು  ಹೆಗಲ ಮೇಲೆ ಹೊಸ ಪಂಚೆ, ತಲೆಗೆ ರುಮಾಲು ಸುತ್ತಿರುವ ನಮ್ಮ ಕರಾವಳಿಯ ಶ್ರೀಸಾಮಾನ್ಯನ ಜೊತೆಯಲ್ಲಿಯೇ ಚೌಕುಡಿ ಬಟ್ಟೆ ತೊಟ್ಟು, ಇಳಿಮೀಸೆ, ಕೆದರುಗೂದಲಿನವರು, ಸರ್ಕಸ್ ಕೌನ್‌ಗಳಿಂತಿರುವ ಹಿಪ್ಪಿ ವೇಷದವರನ್ನೂ ಕಾಣುತ್ತೀರಿ. ಕಣ್ಣು ಕಟ್ಟುವಂಥ ವರ್ಣವೈವಿಧ್ಯದ ವೇಷಭೂಷಣಗಳ, ಯಕ್ಷಗಾನ ಬಯಲಾಟ ಹತ್ತು ಹಲವಾರು ನಮೂನೆಗಳು ಕರಾವಳಿಯ ಬಂಡೀಹಬ್ಬದ ಹೊಸ ಮೋಜು. 'ಖಾಜಿ' ಎಂಬುದು ಬಂಡೀ ಹಬ್ಬದ ಬಹು ಜನಪ್ರಿಯ ತಿಂಡಿ. ಎಣ್ಣೆಯಲ್ಲಿ ಹುರಿದ ಕಡ್ಲೆ ಹಿಟ್ಟಿನ ಕಡ್ಡಿಗಳನ್ನು ಬೆಲ್ಲದ ಪಾಕದಲ್ಲಿ ಅದ್ದಿ ಮಾಡಿದ ಒಂದು ಖಾದ್ಯ ವಿಶೇಷ ಈ ಖಾಜಮುಜಿ', ಮುಂಬಯಿ ಕಡೆ ನೆಲೆಸಿದ ಈ ಭಾಗದ ಜನ ಬಂಡೀಹಬ್ಬಕ್ಕೆ ಬಂದೇ ಬರುತ್ತಾರೆ. ಈ ಊರಿನ 'ಖಾಜಿ' ಮುಂಬಯಿಗೆ, ಮುಂಬಯಿ ಫ್ಯಾಶನ್ ಈ ಊರಿಗೆ ಈ ಸಂದರ್ಭದಲ್ಲಿ ವಿನಿಮಯವಾಗುವುದುಂಟು. ಅಂಕೋಲೆಯ ಬಂಡೀಹಬ್ಬವನ್ನು ಅನುಸರಿಸಿ ಸುತ್ತಲಿನ ಊರುಗಳಲ್ಲಿ ಬಂಡೀಹಬ್ಬದ ಸಂಭ್ರಮ ನಡೆಯುತ್ತದೆ. ಹಳ್ಳಿಗಳಲ್ಲಿ ಜರುಗುವ ಹಬ್ಬಗಳಿಗೆ ಅಂಕೋಲೆಯ ಹಬ್ಬದಂತೆ ಪೂರ್ವ ನಿಶ್ಚಿತ ತಿಥಿ ಮಿತಿ ಎಂಬ ಕಡ್ಡಾಯವಿಲ್ಲ. ದೇವರಿಗೆ ಎಣ್ಣೆ ಜಳಕ ಮಾಡಿ ಒಂದು ಹೊತ್ತಿಗೆ' ಹೇಳಿದ ಮೇಲೆ ಹಬ್ಬ ನಿಶ್ಚಯವಾದಂತೆ. ಪೂಜಾರಿಗಳು ಮತ್ತು ದೇವಸ್ಥಾನದ ಮೋಕ್ತಶ್ವರರು ಅಥವಾ ಗಾಂವ್ಕರರು ತಮ್ಮಲ್ಲಿ ಮಾತಾಡಿಕೊಂಡು ಬಂಡೀ ಹಬ್ಬದ ದಿನವನ್ನು ನಿಶ್ಚಯ ಮಾಡಿ ಗ್ರಾಮದ ಜನರಿಗೆ ಸುದ್ದಿ ಮಾಡುವ ಕ್ರಮಕ್ಕೆ "ಒಂದು ಹೊತ್ತಿಗೆ ಹೇಳುವುದು" ಎನ್ನುತ್ತಾರೆ. ಆ ದಿನ ದೇವರಿಗೆ ಎಣ್ಣೆ ಜಳಕ ಹಾಗೂ ಉಳಿದ ಭೂತಗಣಗಳಿಗೆ ಪೂಜೆ, ಉಪಾರ ಆಗಬೇಕು. ದೇವರ ಕಾರ್ಯಕ್ಕೆ ಸಂಬಂಧಪಟ್ಟವರಿಗೆ ಆ ದಿನ ಒಂದೇ ಊಟ. "ಒಂದು ಹೊತ್ತಿಗೆ" ಹೇಳಿದ ಮೇಲೆ ದೇವಕಾರ್ಯ ಪ್ರಾರಂಭವಾಗುತ್ತದೆ. ಬಂಡಿಹಬ್ಬ ನಡೆಯುವ ಊರುಗಳಲ್ಲಿ ಅದನ್ನು ನಡೆಸುವ ಮುನ್ನ ಪೂರ್ವಭಾವಿಯಾಗಿ ಆ ವರ್ಷದ ಅವಲ ಹಬ್ಬ' ಎಂಬ ವಿಶೇಷ ಹಬ್ಬವೊಂದು ನಡೆಯಲೇಬೇಕೆಂಬ ಕಡ್ಡಾಯ ವಿಧಿ ಇದೆ. "ಅವಲ ಹಬ್ಬ" ಹಿಂದೆಯೇ ಮುಗಿದಿರದಿದ್ದರೆ, 'ಒಂದು ಹೊತ್ತಿನ' ಮಾರನೆಯ ದಿನ, ಸೇಸೆ ಹಾಕುವ ಪೂರ್ವದಲ್ಲಿ ಅವಲ ಹಬ್ಬವನ್ನು ಆಚರಿಸುತ್ತಾರೆ. ಮಾರನೆಯ ದಿನ ಸೇಸೆ ಹಾಕಬೇಕು. ಅಂದಿನಿಂದ ೫, ೭,೯, ಅಥವಾ ೧೨ ನೆಯ ದಿನಗಳ ಅವಧಿಗೆ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಗ್ರಾಮಗಳಲ್ಲಿ ಬಂಡೀಹಬ್ಬದ ಕಳಸ ಉಯ್ಯಾಲೆ ಚಪ್ಪರ ಏರುವ ಜಾತ್ರೆ ದಿನವನ್ನು ಗೊತ್ತುಪಡಿಸಿಕೊಂಡಿರುತ್ತಾರೆ. ಅನುಕೂಲಕ್ಕೆ ತಕ್ಕಂತೆ ಅಂದರೆ ಬಂಡಿ ಜಾತ್ರೆಯ ಮಾರನೆ ದಿನದ ಕೋಳಿ- ಕುರಿ ಬಲಿ ಹಬ್ಬವು ಸೋಮವಾರ, ಶನಿವಾರ ದಿನಕ್ಕೆ ಬಾರದಂತೆ ಹಬ್ಬದ ಕಾಲಾವಧಿಯನ್ನು ಗೊತ್ತುಪಡಿಸಿಕೊಳ್ಳಬೇಕು. ಏಕೆಂದರೆ ಸೋಮವಾರ, ಶನಿವಾರ ಪ್ರಾಣಿವಧೆ, ಮಾಂಸಹಾರ ನಿಷಿದ್ಧ. ಅನೇಕ ಊರುಗಳಲ್ಲಿ ಪ್ರತಿ ವರ್ಷ ಬಂಡೀಹಬ್ಬಗಳು ಆಗದೇ ಇರುವುದೂ ಉಂಟು. ದೇವಸ್ಥಾನದ ಆಸ್ತಿ-ಪಾಸ್ತಿಗಳ ಮೇಲ್ವಿಚಾರಣೆಗಿರುವ ಊರಿನ ಗಾಂವ್ಕರರು ಮನೆತನಗಳು ನೋಡಿಕೊಳ್ಳುತ್ತಾರೆ. ಅಮ್ಮನವರ ದೇವಸ್ಥಾನವಿರುವ ಊರುಗಳಲ್ಲಿ, ಬಂಡೀಹಬ್ಬಗಳು ಜರುಗುತ್ತವೆ. ಇತರ ಗ್ರಾಮಗಳಲ್ಲಿ 'ಗಡೀಹಬ್ಬ'ಗಳಾಗುತ್ತವೆ. ಗಡೀಹಬ್ಬದಲ್ಲಿ ದೇವರ ಕಳಸ ಏಳುವುದಿಲ್ಲ.

ಗಡಿ ದೈವಗಳು ಭೂತಗಳ ಹಬ್ಬ

ಬಂಡೀಹಬ್ಬದ ಜಾತ್ರೆಯ ಮಾರನೆಯ ದಿನದ ಕೋಳಿ-ಕುರಿ ಹಬ್ಬದಂತೆ, ಇದು ಬಲಿಕೊಡುವ ಒಂದೇ ದಿನದ ಹಬ್ಬ, ಗಡೀಹಬ್ಬವು ಗಡಿ- ದೈವ ಗುತ್ತುಗಳಿಗೆ ಸಲ್ಲಿಸುವ ಪೂಜೆ. ಅಂದರೆ ಭೂ ಸೀಮೆಯ ಗಡಿ ಹಾಗೂ ಆ ಗಡಿ ರಕ್ಷಣೆಗಳ ಭಾರ ಹೊತ್ತ ಜಟ್ಟಿಗಳ ಗುತ್ತುಗಳಿಗೆ ಸಲ್ಲಿಸುವ ಪೂಜಾವಿಧಿ. ಗಡುವು ಅಂದರೆ ಒಂದು ಕಾಲಮಿತಿಯನ್ನು ಸೂಚಿಸುತ್ತದೆ. ಬೇಸಿಗೆ ಕಳೆದು ಮಳೆಗಾಲ ಆರಂಭವಾಗುವ ಮುನ್ನ ಈ ಹಬ್ಬಗಳು ಜರುಗಬೇಕು. ಮಳೆ - ಬೆಳೆಗಳು ಚೆನ್ನಾಗಿ ಆಗುವ ಬಗ್ಗೆ ದೇವರನ್ನು ಪ್ರಾರ್ಥಿಸಿ ಭೂತಗಣಕ್ಕೆ ಸಂತೃಪ್ತಿಯಾಗುವಂತೆ ಕೋಳಿ - ಕುರಿ ಬಲಿ ಕೊಡಬೇಕು ಎಂಬುದು ರೂಢಿಸಿಕೊಂಡು ಬಂದ ನಂಬುಗೆ.


ಶ್ರಾವಣ ಮಾಸದಲ್ಲಿ ಮಾಂಸಾಹಾರ ವರ್ಜ್ಯ. ಅಷ್ಟರೊಳಗೆ ಈ ಹಬ್ಬಗಳ ನಿಮಿತ್ತವಾಗಿ ಊರಿನ ಮನೆ - ಮನೆಯಲ್ಲಿ ದೊಡ್ಡ ಭೋಜನ ಸಮಾರಂಭಗಳು ನಡೆಯುತ್ತವೆ.  ಕಾರವಾರ - ಅಂಕೋಲಾ -ಗೋಕರ್ಣ ಸೀಮೆಯಲ್ಲಿ ನೆಲೆಸಿರುವ ನಾಡವರ ರಿಗೆ ಈ ಬಂಡೀ ಹಬ್ಬ, ಗಡಿ ಹಬ್ಬಗಳ 'ಕೋಳಿ ಆಸಿ ಸಂದರ್ಭ ತಮ್ಮ ಬಂಧು-ಬಾಂಧವರನ್ನು ನೆಂಟರಿಷ್ಟರನ್ನು ಸ್ನೇಹಿತರನ್ನು ಆಮಂತ್ರಿಸಿ ಆದರಾತಿಥ್ಯ ನೀಡುವುದಕ್ಕೆ ಒಂದು ವಿಶೇಷ ಅವಕಾಶವೆನ್ನಿಸಿದೆ. ಹಾಗೂ ಒಬ್ಬರ ಮನೆಯಿಂದ ಮತ್ತೊಂದು ಮನೆಗೆ "ಕೋಳಿ ಆಸಿ" ತಿನುಕ್ಕೆ  ಹೊತ್ತರ ಈ "ಕೋಳಿ ಆಸಿ ಚಂದ ಆತಿದ ಹಾ!!"  ಹಾಗೂ ಅನೇಕರ ಮನೆಯಲ್ಲಿ ನೂರಕ್ಕೂ ಹೆಚ್ಚು ಜನ ನೆಂಟರಾಗಿ ಊಟಕ್ಕೆ ಬರುವುದುಂಟು. ಈ ಊಟಕ್ಕಾಗಿ ಹತ್ತಾರು ಮೈಲು ದೂರ ನಡೆದು ಹೋಗಿ ಆ ರಾತ್ರಿಯೇ ಮನೆಗೆ ಹಿಂತಿರುಗುವವರೂ ಉಂಟು. ಈಗ ವಾಹನಗಳು ಬಂದು ಅನುಕೂಲವಾಗಿದೆ. ಉತ್ತರ ಕನ್ನಡದ ಕರಾವಳಿಯಲ್ಲಿ ಜರುಗುವ ಹನ್ನೆರಡು ದಿನಗಳ ಬಂಡಿಹಬ್ಬದ ವಿಧಿ ವಿಧಾನಗಳನ್ನು ಹೀಗೆ ಬಣ್ಣಿಸಬಹುದು. ಸೇಸೆ ಹಾಕಿದ್ದ ದಿನದಿಂದ ಬಂಡಿಹಬ್ಬದ ಕೊನೆಯ ದಿನ ಜಾಗರದ ದಿನದವರೆಗೆ ಸಾಯಂಕಾಲ ಗುನಗನ ತಲೆಯ ಮೇಲೆ ಕಳಶ ದೇವರನ್ನು ಹೊರಿಸಿಕೊಂಡು ವಾದ್ಯ-ವಾಲಗಗಳೊಂದಿಗೆ ಒಯ್ಯಲಾಗುತ್ತದೆ. ಈ ಕಳಸ ಹೊರುವ ಗುನಗರು ಸಾಮಾನ್ಯವಾಗಿ ಗುನಗ ಜಾತಿ (ಗುನಗತನಕ್ಕಾಗಿಯೇ ಇರುವ ಜಾತಿ ), ಹಾಲಕ್ಕಿ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ. ವಾದ್ಯ - ವಾಲಗದವರು ಆಗೇರ ಮತ್ತು ಹಳ್ಳೇರ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ ಈ ವಾದ್ಯದ ಶಬ್ದ ಅತ್ಯಂತ ಸುಂದರವಾಗಿರುತ್ತದೆ. ಈ ಮೆರವಣಿಗೆಯಲ್ಲಿ "ಕಟಗಿದಾರರು", ಗಾಂವ್ಕರರು,ಮೋಕ್ತಶ್ವರರು, "ನಾಡವರ ಸಮುದಾಯಕ್ಕೆ" ಸೇರಿದವರಾಗಿರುತ್ತಾರೆ, ಭಕ್ತಾದಿಗಳು ಮೆರವಣಿಗೆ ಕಳಸ ದೇವಸ್ಥಾನದಿಂದ ಹೊರಟು ಅಮ್ಮನವರ ದೇವಸ್ಥಾನ ಹಾಗೂ ಇತರ ಮುಖ್ಯ ದೇವಸ್ಥಾನಗಳಿಗೆ ಹೋಗಿ ಆಡುಕಟ್ಟೆಗೆ ಬಂದ ಮೇಲೆ ಅಲ್ಲಿ ಕಳಸ ದೇವರನ್ನು ಕೂಡ್ರಿಸಿ ಪೂಜಾ ವಿಧಿಗಳನ್ನು ನಡೆಸಲಾಗುತ್ತದೆ. ಕಟಗಿದಾರರು ವೃತ್ತಾಕಾರದಲ್ಲಿ ದೇವರ ಎದುರಿನಲ್ಲಿ ಚಲಿಸಿ ತಮ್ಮ ಕೈಯಲ್ಲಿರುವ ಬೆಳ್ಳಿ ಕಟ್ಟಿಗೆಯಿಂದ (ಬೆಳ್ಳಿ ಕಟ್ಟು ಹಾಕಿದ ಕೋಲು) ದೇವರಿಗೆ ವಂದನೆ ಸಲ್ಲಿಸುತ್ತಾರೆ. ಆ ಮೇಲೆ ಊರ ದೇವತೆಗಳ ಬಣ್ಣದ ಮುಖವರ್ಣಿಕೆಗಳ ಆಕರ್ಷಕ ಮುಖವಾಡಗಳನ್ನು ಒಂದೊಂದಾಗಿ ಧರಿಸಿ ಗುನಗನೊಬ್ಬ ವಾದ್ಯದ ಹಿನ್ನಲೆಯಲ್ಲಿ ನಿರ್ದಿಷ್ಟ ಕ್ರಮದಲ್ಲಿ ಹೆಜ್ಜೆಯಿಟ್ಟು ಮುಂದೆ ಹಿಂದೆ ಚಲಿಸಿ ಮುಖ ಆಡಿಸುತ್ತಾನೆ. ಅವನು ಬಲಗೈಯಲ್ಲಿ ಇರುವ ಕಿರು ಕಟ್ಟಿಗೆಯನ್ನು ( ಚಿಕ್ಕ ಬೆಳ್ಳಿ ಕೋಲು) ಆ ತಾಳಕ್ಕೆ ತಕ್ಕಂತೆ ಮುಖವಾಡದ ಚಲನೆಗೆ ಹೊಂದಿಸಿ ತಿರುಗಿಸುತ್ತಿರುತ್ತಾನೆ. ಅನಂತರ ಹಗರಣ ಪ್ರಾರಂಭವಾಗುತ್ತದೆ. ಮೊಟ್ಟ ಮೊದಲಿನ ಹಗರಣ ಬೇಸಾಯಕ್ಕೆ ಸಂಬಂಧಿಸಿದಂತೆ ಇರುತ್ತದೆ. ನೇಗಿಲು ಕಟ್ಟಿ ಉಳುವುದು, ಬೀಜ ಬಿತ್ತುವುದು, ಹಕ್ಕಿ ಕಾಯುವುದು ಇತ್ಯಾದಿ ಕೆಲಸದ ಅನುಕರಣೆ ಮಾಡಲಾಗುತ್ತದೆ. ಮನುಷ್ಯರೇ ಎತ್ತುಗಳಂತೆ, ಹಕ್ಕಿಗಳಂತೆ ನಟಿಸುತ್ತಾರೆ. ಅನಂತರದ ಹಗರಣಗಳಲ್ಲಿ ಊರಿನ ವಿದ್ಯಮಾನಗಳನ್ನು ಅತಿರಂಜಿಸುವುದರ ಮೂಲಕ ಹಾಸ್ಯಪೂರ್ಣವಾಗಿಯೂ,ವಿಡಂಬನಾತ್ಮಕವಾಗಿಯೂ ಅನುಕರಿಸಿ ತೋರಿಸುತ್ತಾರೆ. ಇಂಥ ಹಗರಣಗಳನ್ನು ಯಾವ ಸಮುದಾಯದವರು, ಯಾವ ಊರಿನವರು ಬೇಕಾದರೂ ಮಾಡುವುದಕ್ಕೆ ಅವಕಾಶವುಂಟು. ಗೇಲಿಗೆ ಕಾರಣವಾದ ವ್ಯಕ್ತಿಗಳು ಅಲ್ಲೇ ಇದ್ದರೂ ಅವರು "ಕೋಪಗೊಂಡು ಜಗಳ ತೆಗೆಯುವಂತಿಲ್ಲ". ಮುಯ್ಯಿ ತೀರಿಸುವ ಛಲ ಇದ್ದರೆ ತಮ್ಮನ್ನು ಗೇಲಿ ಮಾಡಿದವರ ಇಲ್ಲವೆ ಅಂಥವರ ಸಂಬಂಧಿಗಳ ಬದುಕಿನ ಸಂದರ್ಭಗಳನ್ನು ಆಯ್ದುಕೊಂಡು ಅತಿರಂಜಿಸಿ, ಅನುಕರಿಸಿ ಗೇಲಿ ಮಾಡಬಹುದು. ಈ ಹಗರಣದ ಕಾರ್ಯಕ್ರಮ ಹೆಚ್ಚಾಗಿ ಪರಿಚಿತ ವ್ಯಕ್ತಿಗಳಿಗೆ ಸಂಬಂಧಿಸಿದಂಥದೇ ಆಗಿರುವುದು ಸಾಮಾನ್ಯವಾದ್ದರಿಂದ ಸುತ್ತಮುತ್ತಲಿನ ಊರುಗಳ ಗಂಡಸರು, ಹೆಂಗಸರು, ಮಕ್ಕಳು ಎಲ್ಲರೂ ಬಹುಸಂಖ್ಯೆಯಲ್ಲಿ ಸೇರುತ್ತಾರೆ. ಪೂಜಾರಿ ಆಡಿಸುವ ಮುಖವಾಡಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತದೆ. ಆಯಾ ದಿನಗಳಲ್ಲಿ ಆಡಿಸಬೇಕಾದಷ್ಟು ಮುಖವಾಡಗಳನ್ನು ಆಡಿಸಿ ಮುಗಿಸಿದ ಮೇಲೆ ಹಗರಣಕ್ಕೆ ಅವಕಾಶವಿರುವುದಿಲ್ಲ. ಆದ್ದರಿಂದ ಒಂದು ಮುಖವಾಡ ಆಡಿಸುವುದಕ್ಕೂ ಇನ್ನೊಂದು ಮುಖವಾಡ ಆಡಿಸುವುದಕ್ಕೂ ನಡುವೆ ಹಗರಣಕ್ಕೆ ಅಗತ್ಯವಾದಷ್ಟು ಕಾಲಾವಕಾಶ ನೀಡಲಾಗುತ್ತದೆ. ಇನ್ನು ಅಂದಿನ ಹಗರಣಗಳು ಮುಗಿದವು ಎಂಬುದನ್ನು ತಿಳಿದುಕೊಂಡ ಮೇಲೆಯೇ ಆ ದಿನದ ಕೊನೆಯ ಮುಖವಾಡ ಆಡಿಸುತ್ತಾರೆ. ಈ ಹಗರಣಗಳು ಪ್ರತಿ ದಿನ ಸುಮಾರು ಮಧ್ಯರಾತ್ರಿಯವರೆಗೂ ನಡೆಯುತ್ತವೆ. ಬಂಡೀ ಜಾತ್ರೆಯ ಮೊದಲಿನ ದಿನ ಮಾತ್ರ ಇಡೀ ರಾತ್ರಿ ಜಾಗರಣೆ. ಆದ್ದರಿಂದ ಆ ದಿನವನ್ನು ‘ಜಾಗರಣೆ' ಎಂದೇ ಕರೆಯುತ್ತಾರೆ. ಆ ರಾತ್ರಿ ವಿಶೇಷ ಹಗರಣ ಮತ್ತು ಮಾಸ್ತಿ ಕೊಂಡ ಹಾಯುವ ವಿಧಿ ನಡೆಯುತ್ತದೆ. ಆ ರಾತ್ರಿ ಹುಲಿದೇವರು ದನ ಮುರಿಯುವುದನ್ನು ಅಭಿನಯಿಸುತ್ತಾರೆ. ಒಬ್ಬರು ದನವಾಗಿ ಅಭಿನಯಿಸುತ್ತಾರೆ. ಹುಲಿ ದನವನ್ನು ಕೊಂದು ರಕ್ತ ಕುಡಿದು ಹೋದ ಅಭಿನಯಿಸುತ್ತಾರೆ, ಕೊನೆಯದಾಗಿ ಮಾಸ್ತಿಕೊಂಡ ಹಾಯುವ ವಿಧಿ ಇರುತ್ತದೆ. ಕೆಲವು ಕಡೆಗಳಲ್ಲಿ ಕೆಂಡದ ರಾಶಿಯ ಮೇಲೆ ಹರಕೆ ಹೊತ್ತವರು ನಡೆಯುವುದೂ ಉಂಟು. ಬಂಡೀ ಜಾತ್ರೆಗೆ ಎರಡು ದಿನ ಮುನ್ನ ದೇವರು ಕರೆಯುವ ದಿನ'. ನೆರೆಯ ಗ್ರಾಮದ ದೇವರುಗಳನ್ನು ಹಬ್ಬಕ್ಕೆ ಆಮಂತ್ರಿಸಲು ಕಳಸ ದೇವರು ಮೆರವಣಿಗೆಯಲ್ಲಿ ಹೋಗುವ ದೃಶ್ಯ ಬಲು ಸುಂದರವಾದದ್ದು. ಈ ದಿನ ದೇವರನ್ನು ಹೊತ್ತ ಗುನಗನಿಗೆ ವಿಶೇಷ 'ಭಾರ' ಬರುವುದುಂಟು ಹಾಗೂ ಕೆಲವು ಸಂದರ್ಭದಲ್ಲಿ ಕಟಗೀದಾರರಿಗೂ "ಭಾರ" ಬರುವುದು ಉಂಟು. ಹೀಗೆ ದೇವರು ಮೈಮೇಲೆ ಬಂದಾಗ ಕೈ ಗಂಟೆಯನ್ನು ತೀವ್ರವಾಗಿ ಬಾರಿಸುತ್ತ ಕಲ್ಲು ಮುಳ್ಳುಗಳ ಪರಿವೆ ಇಲ್ಲದೆ ಬರಿಗಾಲಲ್ಲಿ ಓಡುತ್ತ ಇಡೀ ಮೆರವಣಿಗೆಯನ್ನೇ ಓಡುವಂತೆ ಮಾಡುವುದುಂಟು. ಕೈ ಬಿಟ್ಟು ಮೊಣಕಾಲಲ್ಲಿ ನಡೆಯುವುದುಂಟು. ದೇವರಿಗೆ ಇಂತಿಂಥಹರಕೆಗಳು ಸಲ್ಲಬೇಕು ಎಂದು ಅಪ್ಪಣೆ ಕೊಡಿಸುವುದುಂಟು. ಅಂಕೋಲಾಬಂಡೀ ಹಬ್ಬದಲ್ಲಿ ದೇವರು ಕರೆಯುವ ದಿನ ಅಮ್ಮನವರ ಕಳಸದ ಮೆರವಣಿಗೆ ಹೊರಟು ವಂದಿಗೆ, ಬೋಳೆ ಗ್ರಾಮಗಳ ಗಡಿಯಲ್ಲಿರುವ ಸುಂಗಾಳಿ ಮರದ ಕಟ್ಟೆಯಲ್ಲಿ ಬಂದು ಕೂಡುತ್ತದೆ. ಗಾಂವ್ಕರರು ಬೆಟ್ಟದ ಮೇಲಿರುವ ಬೋಳೆ ಬೊಮ್ಮಯ್ಯ ದೇವರ ಗುಡಿಗೆ ಹೋಗಿ ಹಬ್ಬಕ್ಕೆ ಆಹ್ವಾನಿಸಿ ಬರುತ್ತಾರೆ. (ಬೊಮ್ಮಯ್ಯ ದೇವರು ಭೂಮಿತಾಯಿ ದೇವರ ಅಣ್ಣ. ಹಾಗೂ ಬೋಳೆ ಬಿಳಿಗಿರಿಯಮ್ಮನ ಬಂಡೀ ಹಬ್ಬಕ್ಕೆ ದೇವರು ಕರೆಯುವುದಕ್ಕೆಂದು ಬಿಳಿಗಿರಿಯಮ್ಮನ ಕಳಸ ಭೂಮಿತಾಯಿ ದೇವಸ್ಥಾನಕ್ಕೆ ಹೋಗಿ ಬರುತ್ತದೆ). ಮಾರನೆಯ ದಿನ ಬೆಳಿಗ್ಗೆ ಅಮ್ಮನವರ ಕಳಸ ವಂದಿಗೆ ಮಾಸ್ತಿಕಟ್ಟೆಗೆ ಬಂದು ಪೂಜೆ ಆರತಿ ಸ್ವೀಕರಿಸಿ ಮಾಸ್ತಿಗೆ ಪೂಜೆ ಸಲ್ಲಿಸಿ ಮುಖ ಆಡಿಸುವ ವಿಧಿ ನಡೆಯುವ ಮೂಲಕ ಬಂಡೀ ಹಬ್ಬಕ್ಕೆ ಆಹ್ವಾನಿಸಲಾಗುತ್ತದೆ. ಇದಕ್ಕೆ ಮಾಸ್ತಿ ಕರೆಯುವುದು ಎನ್ನುತ್ತಾರೆ. ಮಾಸ್ತಿಕರೆಯುವುದು ಮತ್ತು ಜಾಗರದ ಮಾರನೆಯ ದಿನ ಬಂಡೀಹಬ್ಬ. ಆ ದಿನ ಬಗೆಬಗೆಯ ಹೂಮಾಲೆಗಳಿಂದ ಸಿಂಗರಿಸಿ, "ಕಟ್ಟಗಿದಾರರು", ಸ್ವಾಮಿ ಮಕ್ಕಳು ಛತ್ರ, ಚಾಮರ, ವಾದ್ಯ ಮೊದಲಾದವುಗಳೊಂದಿಗೆ ಕಲಶ ದೇವರನ್ನು ಮೆರವಣಿಗೆಯಲ್ಲಿ ಉಲಿಚಪ್ಪರಕ್ಕೆ ತರಲಾಗುತ್ತದೆ. ಉಲಿಚಪ್ಪರವು ಲಂಬವಾಗಿ ನಿಲ್ಲಿಸಿದ್ದ ಎರಡು ಬೃಹತ್ ಕಂಬಗಳಿಗೆ ಮಧ್ಯದಲ್ಲಿ ಕೊರೆದ ತೂತುಗಳಲ್ಲಿ ಅಡ್ಡವಾಗಿ ಹೊಗಿಸಿದ ಅಚ್ಚಿನಲ್ಲಿ ಕೆಳಗಿಂದ ಮೇಲೆ ಸುತ್ತುವ ಕಟ್ಟಿಗೆಯ ಚೌಕಟ್ಟಿನ ಹಂದರ. ಈ ಚೌಕಟ್ಟಿನಲ್ಲಿ ನಾಲ್ಕು ತೂಗು ಮಣೆಗಳನ್ನು ಜೋಡಿಸಲಾಗಿರುತ್ತದೆ. ತೂಗು ಮಣೆಯ ಮೇಲೆ ಗುನಗನು ಕಲಶ ದೇವರನ್ನು ತೊಡೆಯಮೇಲಿಟ್ಟುಕೊಂಡು ಕುಳಿತು ಒಂದು ಕೈಯಲ್ಲಿ ಗಂಟೆ ಬಾರಿಸುತ್ತಾ ಮೇಲೇರುವ ದೃಶ್ಯ ರೋಮಾಂಚಕಾರಿಯಾಗಿರುತ್ತದೆ. ಇನ್ನುಳಿದ ತೂಗು ಮಣೆಗಳ ಮೇಲೆ ಕಟಗಿದಾರರು ಗಂಟೆ ಬಾರಿಸುತ್ತ ಮೇಲೇರಲು ಕುಳಿತುಕೊಂಡಿರುತ್ತಾರೆ. ಆಮೇಲೆ ಸ್ವಾಮಿ ಮಕ್ಕಳೂ ಉಲಿಚಪ್ಪರ ಏರುತ್ತಾರೆ. ಸ್ವಾಮಿ ಮಕ್ಕಳು ಅಂದರೆ ದೇವರ ಮಕ್ಕಳು. ಇವರು ಮದುವೆಯಾಗದಿರುವ ಬಾಲಕರು, ಕಟಗಿದಾರರ ಇಲ್ಲವೆ ಗಾಂವ್ಕರರ ಮನೆಗಳಲ್ಲಿ ಆ ವಯಸ್ಸಿನ ಬಾಲಕರು ಇಲ್ಲದಿದ್ದಾಗ ಮಾತ್ರ ಬೇರೆ ಯಾರಾದರೂ ಬಾಲಕನಿಗೆ ಪ್ರತಿನಿಧಿಯಾಗಿ ಸ್ವಾಮಿ ಕಟ್ಟಿಸುತ್ತಾರೆ. ಈ ಸ್ವಾಮಿ ಮಕ್ಕಳೂ ಗುನಗ, ಕಟಗಿದಾರರಂತೆ ನೇಮದಿಂದಿರಬೇಕು. ಅಂಕೋಲೆಯ ಸಮೀಪದ ಕೊಗ್ರೆ ಗ್ರಾಮದ ಬಂಡೀ ಹಬ್ಬದಲ್ಲಿ ಎಲ್ಲ ಊರುಗಳ ಹಬ್ಬಕ್ಕಿಂತ ಹೆಚ್ಚು ಅಂದರೆ ನಾಲ್ಕು ಕಲಶ ದೇವರುಗಳು ಒಂದೇ ಬಾರಿಗೆ ಉಲಿಚಪ್ಪರದ ನಾಲ್ಕು ತೂಗುಮಣೆಗಳಲ್ಲಿ ಕುಳಿತು ಸುತ್ತುವ ದೃಶ್ಯ ರಮ್ಯವಾಗಿರುತ್ತದೆ.

ದೈವಗಳ ಆರಾಧನೆ ಕೊಂಕಣನಾಡಿನಲ್ಲಿ

ಹಾಗೂ ರಾಕೇಶ್ವರ ಮತ್ತು ರಣರಾಕೇಶ್ವರ ಎಂಬ ವೀರ ದೈವಗಳು ಇಲ್ಲಿ ನೆಲೆಸಿವೆ ಇವರಿಬ್ಬರೂ ಸಹೋದರರು ಎಂದು ಹೇಳಲಾಗುತ್ತದೆ.

ಉಲಿಚಪ್ಪರ ಏರುವುದರ ಹಿನ್ನಲೆ ಏನಿರಬಹುದು ? ಇದೊಂದು ಸ್ವರ್ಗಾರೋಹಣ ಅಥವಾ ದೇವಲೋಕಗಮನ ಸೂಚಿಸುವ ಸಾಂಕೇತಿಕ ಕ್ರಿಯೆಯಾಗಿರಬಹುದೆಂದು ಊಹಿಸಬಹುದು. ದೇವರು ಉಲಿಚಪ್ಪರ ಏರಿ ಸುತ್ತುತ್ತಿರುವಾಗ, ಹರಕೆ ಹೇಳಿಕೊಂಡಿರುವ ಕೆಲವರು ಕಣ್ಣಿಗೆ ದಟ್ಟವಾಗಿ ಕಾಡಿಗೆ ಹಚ್ಚಿಕೊಂಡು, ಕೇದಗೆ ಹೂವಿನ ಕಿರೀಟ ತೊಟ್ಟು, ಕೈಯಲ್ಲಿ ಕತ್ತಿ ಹಿಡಿದು, 'ಹುಯ್ಯಯ್ಯೋ' ಎಂದು ಆರಚುತ್ತ ಬರುತ್ತಾರೆ. ಆ ವರ್ಷವೇ ಮದುವೆಯಾದವರು ಮಾತ್ರ ಇಂಥ ಹರಕೆ ಹೊತ್ತುಕೊಳ್ಳುತ್ತಾರೆ. ಈ ಆಚರಣೆಯ ಹಿನ್ನೆಲೆ ತಿಳಿಯದು. ಬಂಡೀ ಹಬ್ಬದ ಮಾರನೆಯ ದಿನವೂ ಹಬ್ಬ, ಜಾತ್ರೆ ಇರುತ್ತದೆ. ಆ ದಿನವನ್ನು "ಕೋಳಿಕುರಿ" ಎಂದು ಕರೆಯುತ್ತಾರೆ. ಕೋಳಿ ಕುರಿಗಳನ್ನು ಆ ದಿನ ಊರಿನ ದೇವರುಗಳಿಗೆ ಬಲಿಕೊಡುತ್ತಾರೆ. ಊರಿನ ಎಲ್ಲ ಮನೆಗಳಲ್ಲಿ ಆ ದಿನ ಅಥಿತಿಗಳು ತುಂಬಿರುತ್ತಾರೆ. ಕೋಳಿ ಕುರಿಯ ದಿನ ಬೆಳಿಗ್ಗೆ, ದೇವರಿಗೆ ಹರಕೆ ಹೊತ್ತವರು ತುಲಾಭಾರ ಮಾಡಿಸಿ ಹರಕೆ ಸಲ್ಲಿಸುತ್ತಾರೆ. ಸಾಮಾನ್ಯವಾಗಿ ಹಲಸಿನ ಹಣ್ಣು, ತೆಂಗಿನ ಕಾಯಿಮುಂತಾದವುಗಳನ್ನು ತುಲಾಭಾರಕ್ಕೆ ಹಾಕುತ್ತಾರೆ. ಆದಿನವೂ ದೇವರಿಗೆ ಕಾಣಿಕೆ ಕೊಡುವವರು ಕೊಡುತ್ತಾರೆ. ಕಲಶ ಹೊತ್ತ ಗುನಗನ ಸೊಂಟದಲ್ಲಿ ಒಂದು ಕತ್ತಿ ಇರುತ್ತದೆ. ಆ ಕತ್ತಿಯನ್ನು ಸಾಮಾನ್ಯವಾಗಿ ಗುನುಗ ಬಳಸುವ ಪದ್ಧತಿಯೇನೂ ಇದ್ದಂತಿಲ್ಲ. ಆದರೆ ಆ ಕತ್ತಿಗೆ ಸಂಬಂಧಿಸಿದ ಪ್ರತೀತಿ ಸ್ವಾರಸ್ಯದ್ದಾಗಿದೆ. ಕಲಶ ದೇವರನ್ನು ಹೊತ್ತುಕೊಂಡಿದ್ದಾಗ ಗುನಗನೇನಾದರೂ ಎಡವಿ ಬಿದ್ದರೆ ಅಥವಾ ಅವನು ಹೊತ್ತ ಕಲಶ ನೆಲಕ್ಕೆ ಬಿದ್ದರೆ ಆಗ ಆತ ಕೂಡಲೆ ತನ್ನ ಸೊಂಟದಲ್ಲಿರುವ ಕತ್ತಿ ತೆಗೆದು ಅದರಿಂದ ತನ್ನನ್ನು ಇರಿದುಕೊಂಡು ಸಾಯಬೇಕೆಂದು ನಿಯಮ ಇದೆಯೆಂದು ಪ್ರತೀತಿ. ಬಂಡೀಹಬ್ಬಕ್ಕೆ ಈ ಹೆಸರು ಹೇಗೆ ಬಂತು? ಎನ್ನುವುದು ಕುತೂಹಲದ ಅಂಶ. ಹಿಂದೆ ದೇವರ ಉತ್ಸವಮೂರ್ತಿಗಳನ್ನು ನಾಲ್ಕು ಗಾಲಿಗಳ ಬಂಡಿಯಲ್ಲಿ ಸ್ಥಾಪಿಸಿ ಬಂಡಿ ಎಳೆಯುತ್ತಿದ್ದರಂತೆ. ಆ ಬಂಡಿಗಳ ಅವಶೇಷಗಳು ಈಗಲೂ ಕೆಲವು ದೇವಸ್ಥಾನಗಳಲ್ಲಿ ನೋಡ ಸಿಗುತ್ತವೆ. ಒಟ್ಟಾರೆ ಕರಾವಳಿ ಬಂಡೀ ಹಬ್ಬವು, ವೀರರಾಗಿ ಕಾದಾಡಿ ಮಡಿದ ಜಟ್ಟಿಗಳ ಆತ್ಮಾಹುತಿಯ ಸೃತಿ ವೈಭವವಾಗಿ ದೈವತ್ವಕ್ಕೇರಿದವರ ಕುರಿತ ಆರಾಧನಾ ವಿಧಿಯಾಗಿ ಮತ್ತು ದೈವದ ಕೋಪ - ತಾಪಗಳಿಂದ ಪಾರಾಗುವುದಕ್ಕಾಗಿ, ಅನುಗ್ರಹ ಸಂಪಾದನೆಗಾಗಿ, ಬಲಿ ಕೊಟ್ಟು ದೈವವನ್ನು ಸಂತೃಪ್ತಿಗೊಳಿಸಬೇಕೆಂಬ ನಂಬುಗೆಯ ಸಾಂಪ್ರದಾಯಿಕ ಆಚರಣೆಯ ವಿಧಿ ವಿಧಾನವಾಗಿ ಇಂದಿನ ಸ್ವರೂಪದಲ್ಲಿ ಬೆಳೆದಂತೆ ಕಾಣುತ್ತದೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: