ಇವರು 1787-1874ರ ಫ್ರಾನ್ಸಿನ ಒಬ್ಬ ರಾಜಕಾರಣಿ, ಇತಿಹಾಸಕಾರ, ಪ್ರೊಟೆಸ್ಟ್ಂಟ್ ಮತಸ್ಥ. ಸಂಪ್ರದಾಯವಾದಿ ರಾಜತ್ವದ ಪ್ರತಿಪಾದಕ. ನೆಪೋಲಿಯನ್ ಪ್ರಭುತ್ವವನ್ನು ವಿರೋಧಿಸಿದ. ರಾಜತ್ವದ ಪುನರ್ ಸ್ಥಾಪನೆಗೆ ಇವನ ಬೆಂಬಲವಿತ್ತು.

ಜನನ: 1787ರ ಅಕ್ಟೋಬರ್ 4ರಂದು, ನೀಮ್ನಲ್ಲಿ. ತಂದೆ ನ್ಯಾಯವಾದಿ; ಫ್ರಾನ್ಸಿನ ಕ್ರಾಂತಿಯ ಆರಂಭದಲ್ಲಿ ಸ್ಥಳೀಯ ಪೇಟ್ರೀಯಟ್ ಪಕ್ಷದ ನಾಯಕರಲೊಬ್ಬ. ಕನ್ವೆನ್ಷನ್ ವಿರುದ್ಧ ಒಕ್ಕೂಟವಾದಿ ಬಂಡಾಯವನ್ನೆಬ್ಬಿಸಿದ್ದಕ್ಕಾಗಿ ತಂದೆ ಮರಣದಂಡನೆಗೆ ಗುರಿಯಾದ. ತಾಯಿ ತನ್ನ ಮಕ್ಕಳೊಂದಿಗೆ ಜಿನೀವಕ್ಕೆ ಹೋದಳು. ಅಲ್ಲಿ ಗೀಜ಼ೋ ಲ್ಯಾಟಿನ್, ಗ್ರೀಕ್, ಇಟಾಲಿಯನ್ ಮತ್ತು ಜರ್ಮನ್ ಭಾಷೆಗಳನ್ನು ಕಲಿತ. ಇವನು ವಿಧ್ಯಾಭ್ಯಾಸ ಮಾಡಿ ಸ್ಥಳದ ವಾತಾವರಣ, ಇವನ ತಾಯಿಯ ಧೀಶಕ್ತಿ, ನಿಷ್ಠೆ ಗೀಜ಼ೋನ ಮೇಲೆ ಪ್ರಭಾವ ಬೀರಿದುವು. ಆರು ವರ್ಷಗಳ ಅನಂತರ ತಾಯಿ-ಮಕ್ಕಳು ನೀಮ್ಗೆ ಹಿಂದಿರುಗಿದರು. 1805ರಲ್ಲಿ ಗೀಜ಼ೋ ಪ್ಯಾರಿಸ್ಗೆ ನ್ಯಾಯಶಾಸ್ತ್ರ ಕಲಿಯಲು ಹೋದ. 1812ರಲ್ಲಿ ಪ್ಯಾರಿಸ್ ವಿಶ್ವವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕನಿಗೆ ಸಹಾಯಕನಾಗಿ ನೇಮಕವಾದ. ಅನಂತರ ಗೀಜ಼ೋಗಾಗಿ ಆಧುನಿಕ ಇತಿಹಾಸ ಪ್ರಾಧ್ಯಾಪಕ ಸ್ಥಾನವೊಂದು ನಿರ್ಮಿತವಾಯಿತು. ಇತಿಹಾಸದ ಅಧ್ಯಯನಕ್ಕೆ ಇವನ್ನೊಂದು ಹೊಸ ದೃಷ್ಟಿಯನ್ನು ಮೂಡಿಸಲು ಯತ್ನಿಸಿದ. 1814ರಲ್ಲಿ ನೆಪೋಲಿಯನನ ಪತನವಾದ ಅನಂತರ ಗೀಜ಼ೋ ಗೃಹಸಚಿವಾಲಯದಲ್ಲಿ ಮಹಾಕಾರ್ಯದರ್ಶಿಯಾಗಿ ನೇಮಕಗೊಂಡ. ಅನಂತರ ಇವನು ನ್ಯಾಯಸಚಿವಾಲಯದಲ್ಲಿ ಮಹಾಕಾರ್ಯದರ್ಶಿಯಾಗಿದ್ದ. 1816ರಲ್ಲಿ ಗೀಜ಼ೋ ಆ ಹುದ್ದೆಗೆ ರಾಜೀನಾಮೆ ನೀಡಿದ. 1819ರಲ್ಲಿ ಗೃಹಸಚಿವಾಲಯದಲ್ಲಿ ಸ್ಥಳೀಯ ಆಡಳಿತ ವಿಭಾಗದ ನಿರ್ದೇಶಕನಾಗಿದ್ದ. 1820ರಲ್ಲಿ ಈತ ವಿಶ್ವವಿದ್ಯಾಲಯಕ್ಕೆ ಮರಳಿ ಇತಿಹಾಸಕಾರನಾಗಿ ಪತ್ರಿಕೋದ್ಯಮಿಯಾಗಿ ಕೆಲಸ ಮುಂದುವರಿಸಿದ. ಇವನು ಪ್ರಸಿದ್ಧನಾಗಿರುವುದು ಈ ಕಾರ್ಯದಿಂದಾಗಿ.


1830ರಲ್ಲಿ ಈತ ಒಬ್ಬ ಪ್ರತಿನಿಧಿಯಾಗಿ ಶಾಸನಸಭೆಗೆ ಆಯ್ಕೆ ಹೊಂದಿದ. ಇವನ 18 ವರ್ಷಗಳ ರಾಜಕೀಯ ಚಟುವಟಿಕೆ ಆರಂಭವಾದದ್ದು ಆಗ. ದೊರೆ 10ನೆಯ ಚಾರಲ್ಸನ ಆಳ್ವಿಕೆಯ ಉದಾರವಾದಿ ಧೋರಣೆಗಳಲ್ಲಿ ಇವನಿಗೆ ನಂಬಿಕೆ ಹೋಯಿತು. ಲೂಯಿ ಫಿಲಿಪ್ಪನ ಆಡಳಿತದಲ್ಲಿ ಗೀಜ಼ೋ ಗೃಹಶಾಖಾ ಮಂತ್ರಿಯಾಗಿ (1830) ಮೂರು ತಿಂಗಳುಗಳ ಕಾಲ ಇದ್ದ. ಮತ್ತೆ 1832ರಲ್ಲಿ ಶಿಕ್ಷಣಮಂತ್ರಿಯಾಗಿ (ನಡುವೆ ಆರು ತಿಂಗಳ ವಿನಾ) 1839ರವರೆಗೂ ಆ ಸ್ಥಾನದಲ್ಲಿದ್ದು ಅನೇಕ ಶಿಕ್ಷಣ ಸುಧಾರಣೆಗಳನ್ನು ತಂದ. 1840ರಲ್ಲಿ ಇವನಿಗೆ ಲಂಡನಿನಲ್ಲಿ ರಾಯಭಾರಿ ಹುದ್ದೆ ಪ್ರಾಪ್ತವಾಯಿತು. ಬ್ರಿಟನಿನೊಂದಿಗೆ ಫ್ರಾನ್ಸಿನ ಸ್ನೇಹ ಸ್ಥಾಪಿಸಲು ಇವನು ಪ್ರಯತ್ನ ನಡೆಸಿದ. ಅದೇ ವರ್ಷ ಅಕ್ಟೋಬರ್ನಲ್ಲಿ ಮಾರ್ಷಲ್ ಸೌಲ್ಟನ ಸರ್ಕಾರದಲ್ಲಿ ವಿದೇಶಾಂಗ ಖಾತೆಯ ಮಂತ್ರಿಯಾಗಿದ್ದ. ಸೌಲ್ಟ ಮುದುಕನಾಗಿದ್ದುದರಿಂದ ತಾನೇ ಪ್ರಧಾನ ಮಂತ್ರಿಯ ಅಧಿಕಾರ ಚಲಾಯಿಸುತ್ತಿದ್ದ ಗೀಜ಼ೋ 1847ರಲ್ಲಿ ಪ್ರಧಾನಿಯಾಗಿದ್ದು, ಅನಂತರ ರಾಜೀನಾಮೆ ನೀಡಿದ. ರಾಜತ್ವವೂ ಕುಸಿಯಿತು.

ಗೀಜ಼ೋ ಬೆಲ್ಜಿಯಂನಲ್ಲೂ ಇಂಗ್ಲೆಂಡಿನಲ್ಲೂ ತಲೆಮರೆಸಿಕೊಂಡಿದ್ದು ಅನಂತರ ಫ್ರಾನ್ಸಿಗೆ ಮರಳಿದ. (1849). ತನ್ನ ಕೊನೆಯ 25 ವರ್ಷಗಳ ಅವಧಿಯಲ್ಲಿ ಇವನು ಆಂತರಿಕ ರಾಜಕೀಯದಲ್ಲಿ ಭಾಗವಹಿಸಲಿಲ್ಲ. ಗೀಜ಼ೋ ಅನೇಕ ಅಕಾಡೆಮಿಗಳ ಸದಸ್ಯನಾಗಿ ಆಯ್ಕೆ ಹೊಂದಿದ. ಇವನು ತೀರಿಕೊಂಡದ್ದು 1874ರ ಅಕ್ಟೋಬರ್ 12 ರಂದು.

ಕೃತಿಗಳು

ಬದಲಾಯಿಸಿ

ಗೀಜ಼ೋ ಅನೇಕ ಇತಿಹಾಸ ಗ್ರಂಥಗಳನ್ನು ರಚಿಸಿದ್ದಾನೆ. ಹಿಸ್ಟಾಯಿರ್ ದ ಲ ರೆವಲ್ಯೂಷನ್ ದ ಆಂಗ್ಲಟೆರ್, ಜನರಲ್ ಹಿಸ್ಟೊರಿ ಆಫ್ ಸಿವಿಲಿಸೇಷನ್ ಇನ್ ಮಾಡರ್ನ್ ಯುರೋಪ್-ಇವು ಇವನ ಮುಖ್ಯ ಕೃತಿಗಳು.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: