ಪ್ರೊ ಎನ್.ಅನಂತಾಚಾರ್ಯ

ಪ್ರೊ.ಎನ್. ಅನಂತಾಚಾರ್ಯ ಅವರು ಬೆಂಗಳೂರಿನ ಬಸವನಗುಡಿಯಲ್ಲಿರುವ ಆಚಾರ್ಯಪಾಠಶಾಲೆಯ ಸಂಸ್ಥಾಪಕರು. ಇದು ಆರಂಭವಾಗಿದ್ದು ಆಗಸ್ಟ್ ೧೫, ೧೯೩೫ ರಲ್ಲಿ. ಆರಂಭದ ದಿನಗಳಲ್ಲಿ ಈ ಶಾಲೆಯು ಗಾಂಧೀ ಬಜಾರನ ಬಳಿಯಿರುವ ಹರಿಕಥಾ ಭಜನ ಸಮಾಜ (ಎಚ್ . ಬಿ. ಸಮಾಜ ) ದಲ್ಲಿರುವ ಶಿವಾಲಯದ ಎದುರಿನ ಮನೆಯಲ್ಲಿ ಆರಂಭಗೊಂಡಿತ್ತು. ನಂತರದಲ್ಲಿ ಪೂರ್ವ ಆಂಜನೇಯನ ಬೀದಿಯಲ್ಲಿನ ಮೂಲೆ ಮನೆಯಲ್ಲಿ (ಇಂದಿನ ಲಂಕೇಶ ಪತ್ರಿಕೆ ಕಟ್ಟಡದ ಪಕ್ಕದ್ದು) ಕೆಲವು ವರ್ಷಗಳು ಶಾಲೆ ಮುಂದುವರೆಯಿತು. ಆನಂತರ ಬಸವಣ್ಣನ ದೇವಸ್ಥಾನದ ಹಿಂಬದಿಯ ಜಾಗದಲ್ಲಿ ಬರೀ ಕಲ್ಲು ಬಂಡೆಗಳು ಇದ್ದ ಜಾಗದಲ್ಲಿ ಶಾಲೆ ಆರಂಭಗೊಂಡಿತ್ತು. ಶಾಲೆಯ ಪ್ರತಿಯೊಂದು ಹಂತದಲ್ಲಿಯೂ ಸಂಸ್ಥಾಪಕ ಅನಂತಾಚಾರ್ಯ ಅವರ ದೇಹ ಮತ್ತು ಮನಸ್ಸು ಸಂಪೂರ್ಣವಾಗಿ ಈ ಉದ್ದೇಶಕ್ಕೆ ಮೀಸಲಾಗಿತ್ತು. ಇದರೊಂದಿಗೆ ಅಮೂಲ್ಯವಾದ ಧನಸಹಾಯವನ್ನು ಸಹ ಅವರ ಕಡೆಯಿಂದ ಒದಗಿಬಂತು. ಸಹೃದಯರ ಉತ್ತೇಜ, ಮಾಗದರ್ಶನ ಮತ್ತು ಸೇವೆ ಈ ಸಂಸ್ಥೆಯ ಪುರೋಭಿವೃದ್ಧಿಗೆ ಕಾರಣವಾಯಿತು. ಇದೀಗ, ಅಂದರೆ, ೨೦೧೦ ರಲ್ಲಿ ಅದಕ್ಕೆ ೭೫ ವರ್ಷಗಳು ತುಂಬಲಿದೆ. ಅನಂತಾಚಾರ್ಯ ಅವರು ಹುಟ್ಟಿದ ಊರು ಮೈಸೂರು. ಓದಿದ್ದು ಮೈಸೂರು ವಿಶ್ವವಿದ್ಯಾಲಯದಲ್ಲಿ . ಬಿ ಎ ಮತ್ತು ಎಂ ಎ ಇತಿಹಾಸ ಮತ್ತು ಪ್ರಾಚ್ಯ ಶಾಸ್ತ್ರದಲ್ಲಿ. ನಂತರ ಬೆಂಗಳೂರಿಗೆ ಬಂದು ನೆಲೆಸಿದರು. ಆಚಾರ್ಯಪಾಠಶಾಲೆಯ ಕಲೆ, ವಾಣಿಜ್ಯ ಮತ್ತು ವಿಜ್ಞಾನದ ಕಾಲೇಜಿನ ಮೊದಲ ಪ್ರಿನ್ಸಿಪಾಲರು ಸಹ ಆಗಿದ್ದರು. ಅವರು ದೈವಾಧೀನರಾದ ವರ್ಷ ೨೧ ಎಪ್ರಿಲ್ ೧೯೭೬.