ಪ್ರದೀಪ ಕುಮಾರ ಹೆಬ್ರಿ


ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಡಾ ಪ್ರದೀಪ ಕುಮಾರ ಹೆಬ್ರಿಯವರು ೦೧-೦೬-೧೯೫೮ರಲ್ಲಿ ಕಾರ್ಕಳ ತಾಲ್ಲೂಕಿನ ಹೆಬ್ರಿಯಲ್ಲಿ ಜನಿಸಿದರು. ವಿದ್ಯಾಭ್ಯಾಸದ ನಂತರ ಮಂಡ್ಯದಲ್ಲಿ ಕಳೆದ ಮೂವತ್ತು ವರ್ಷಗಳಿಂದ ನೆಲೆಸಿದ್ದಾರೆ. ಮಂಡ್ಯದಲ್ಲಿ ತಮ್ಮ "ದರ್ಶಿನಿ ಕ್ಲಿನಿಕಲ್ ಲ್ಯಾಬೋರೇಟರಿ" ಎಂಬ ತಮ್ಮ ವೈದ್ಯಕೀಯ ಪ್ರಯೋಗ ಶಾಲೆಯನ್ನು ನಡೆಸುತ್ತಿದ್ದಾರೆ. ಬಾಲ್ಯದಿಂದಲೂ ಸಂಗೀತ, ನೃತ್ಯ, ತಬಲ, ನಾಟಕ, ಯಕ್ಷಗಾನ, ಸಾಹಿತ್ಯ... ಹೀಗೆ ಹಲವಾರು ಕ್ಷೇತ್ರಗಳಲ್ಲಿ ಆಸಕ್ತಿ ತೋರುತ್ತಿದ್ದಾರೆ. ೧೯೮೯ರಲ್ಲಿ ಇವರ ಮೊದಲ ಕೃತಿ "ಈ ಬಾಳ ಪಯಣ" (ಕವನ ಸಂಕಲನ) ಪ್ರಕಟವಾಯಿತು. ಅಲ್ಲಿಂದ ಈ ತನಕ ೧೬೦ ಕೃತಿಗಳು ಪ್ರಕಟವಾಗಿವೆ. ನಾಲ್ಕು ಸಿ ಡಿ ಗಳೂ ಹೊರಬಂದಿವೆ. ಮಂಡ್ಯದಲ್ಲಿ ಅನೇಕ ಸಾಹಿತ್ಯಿಕ, ಸಾಮಾಜಿಕ ಸಂಘಟನೆಗಳ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ನಾಡಿನ ಹಲವಾರು ಸಂಘ ಸಂಸ್ಥೆಗಳು ಇವರ ಕೃತಿಗಳಿಗೆ ಬಹುಮಾನ ನೀಡಿ, ಪ್ರಶಸ್ತಿ ನೀಡಿ ಸನ್ಮಾನಿಸಿವೆ. ಮಂಡ್ಯ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ, ಮಂಡ್ಯ ನಗರ ಕನ್ನಡ ಸಾಹಿತ್ಯ ಸಮ್ಮೇಳನ, ಮದ್ದೂರು ತಾಲ್ಲೂಕು ಗಮಕ ಕಲಾ ಸಮ್ಮೇಳನಗಳ ಸಮ್ಮೇಳನಾಧ್ಯಕ್ಷರಾಗಿ ವಿಶಿಷ್ಟ ಹಿರಿಮೆಗೆ ಪಾತ್ರರಾಗಿದ್ದಾರೆ.

ಇವರು ಈಗ ಜಗಜ್ಯೋತಿ ಬಸವಣ್ಣನವರ ಬದುಕ ದರ್ಶನಕೆ ಸಂಬಂಧಿಸಿದಂತೆ "ಯುಗಾವತಾರಿ" ಎಂಬ ಮಹಾಕಾವ್ಯ ರಚಿಸುತ್ತಿದ್ದಾರೆ. ಇದು ಆರು ಸಂಪುಟಗಳಲ್ಲಿ ಸುಮಾರು ನಾಲ್ಕು ವರೆ ಸಾವಿರ ಪುಟಗಳ ಒಂದು ಲಕ್ಷ ಸಾಲುಗಳಲ್ಲಿ ಮುಕ್ತ ಛಂದಸ್ಸಿನಲ್ಲಿ ಬರಲಿದೆ. ನಾಲ್ಕು ಸಂಪುಟಗಳು ಈಗಾಗಲೇ ಪ್ರಕಟವಾಗಿದೆ.

ಆಚಾರ್ಯ ಮಧ್ವರ ಕುರಿತು ಮಹಾಕಾವ್ಯವನ್ನು ಸುಮಾರು ಒಂದು ಸಾವಿರ ಪುಟಗಳಲ್ಲಿ ನಾಲ್ಕು ಸಾವಿರದ ಇನ್ನೂರು ಪದ್ಯಗಳಲ್ಲಿ ಪಂಚಪದಿಯಲ್ಲಿ ರಚಿಸಿದ್ದಾರೆ. ಇದರೊಡನೆ ಈ ವರ್ಷ (೨೦೧೧) ಮಾನವ ಬದುಕಿನ ನೀತಿ ನಿಯಮಗಳಿಗೆ ಸಂಬಂಧಿಸಿದಂತೆ ಸುಮಾರು ಎರಡು ಸಾವಿರ ಪದ್ಯಗಳ ಮಹಾಕಾವ್ಯ "ಪ್ರಜ್ಯೋತಿ" ಎಂಬ ಹೆಸರಿನಲ್ಲಿ ಬರಲಿದೆ.

ಮುಕ್ತಕಗಳ ಸಂಕಲನ "ಪೆದ್ದಮಾರನ ಪದ್ಯ" ಸಾಹಿತ್ಯಾಸಕ್ತರ ಗಮನ ಸೆಳೆದಿದೆ. ಇದರಲ್ಲಿ ೧೧೩೬ ಪದ್ಯಗಳಿವೆ.