ಪ್ರತಿಧ್ವನಿ
ಪ್ರತಿಧ್ವನಿ ಎಂದರೆ ಸಾಕಷ್ಟು ಪರಿಮಾಣ ಹಾಗೂ ಕಾಲವಿಳಂಬ ಸಹಿತವಾಗಿ ಪ್ರತಿಫಲನಗೊಂಡ ಅಥವಾ ಬೇರೆತೆರನಾಗಿ ಹಿಂತಿರುಗಿಸಲ್ಪಟ್ಟ ಮತ್ತು ಆರಂಭದಲ್ಲಿ ನೇರವಾಗಿ ಪ್ರೇಷಿಸಿದ ಶಬ್ದತರಂಗಕ್ಕಿಂತ ಯಾವುದೊ ರೀತಿಯಲ್ಲಿ ಖಚಿತವಾಗಿ ಬೇರೆಯದೇ ಶಬ್ಧ ತರಂಗವೆಂದು ಗುರುತಿಸಬಹುದಾದ ಶಬ್ದತರಂಗ (ಇಕೊ). ಭಾರಿ ಕಟ್ಟಡದ ಮುಂದೆ ನಿಂತು ಹೋ ಎಂದು ಬೊಬ್ಬೆ ಹೊಡೆದರೆ ಆ ಶಬ್ದ ಸ್ವಲ್ಪ ಹೊತ್ತಾದ ಬಳಿಕ ಪುನಃ ಮರಳಿ ಬಂದು ಬಡಿಯುತ್ತದೆ. ಶಬ್ದದ ಆಕಾರದಿಂದ ಹೊರಟು ಶಬ್ದತರಂಗಗಳು ಪ್ರಸಾರವಾಗುವ ಪಥದಲ್ಲಿ ಯಾವುದಾದರೂ ಅಡಚಣೆ ಇದ್ದರೆ ಅಲ್ಲಿ ಅವು ಸೇರುತ್ತವೆ. ಇದೇ ಪ್ರತಿಧ್ವನಿ. ಶಬ್ದತರಂಗಗಳಿಗೆ ಮಾತ್ರವಲ್ಲ ಈ ಗುಣ ಇರುವುದು. ಗಿರಂಗವೇಗ (v) ಮತ್ತು ಆಕರದಿಂದ ಉಗಮಿಸಿದ ತರಂಗಗಳು ಮರಳಿ ಅಲ್ಲಿಗೇ ಬಂದು ಸೇರಲು ತೆಗೆದುಕೊಳ್ಳುವ ಕಾಲ (ಣ) ಗೊತ್ತಿದ್ದರೆ ಅಕರಸ್ಥಾನಕ್ಕೂ ಪ್ರತಿಫಲನವೇರ್ಪಟ್ಟ ಸ್ಥಾನಕ್ಕೂ (ಅಡಚಣೆ) ಇರುವ ದೂರವನ್ನು ಗಣಿಸಬಹುದು ಅದು vಣ/2. ಕೆಲವು ವೇಲೆ ಪ್ರತಿಫಲನ ಹಲವು ಸಾರಿ ಆಗಬಹುದು. ಆಗ ಪ್ರತಿಧ್ವನಿ ಪದೇ ಪದೇ ಸ್ವಲ್ಪ ಮೆತ್ತಮತ್ತಗೆ ಕೇಳಿಸಬಹುದು. ಈ ವಿದ್ಯಮಾನಕ್ಕೆ ಮರುಕೊಳಿಸುವ ಪ್ರತಿಧ್ವನಿಗಳೆಂದು ಹೆಸರು. ಪ್ರತಿಧ್ವನಿ ಉಂಟಾಗಲು ಕನಿಷ್ಟ 16 ಮೀಟರ್ ದೂರವಿರಬೇಕು.
ಸಾಮಾನ್ಯೋಷ್ಣತೆಯ ವಾಯುವಿನಲ್ಲಿ ಶಬ್ದತರಂಗಳ ವೇಗ ಸೆಕೆಂಡಿಗೆ ಸುಮಾರು 335 ಮೀ. ನೀರಿನೊಳಗೆ ಸೆಕೆಂಡಿಗೆ ಸುಮಾರು 1525ಮೀ. ಮೀನು ಹಿಡಿಯುವ ನಾವೆಯಿಂದ ಶಬ್ದ ತರಂಗವನ್ನು ಪ್ರೇಷಿಸಿದಾಗ ಕೇವಲ 0.1 ಸೆಕೆಂಡಿಗೆ ಅದರ ಪ್ರತಿಧ್ವನಿ ಮರಳಬಹುದು. ಆಗ ತಳ ಸುಮಾರು 76ಮೀ ಆಳದಲ್ಲಿದೆಯೆಂದು ತಿಳಿಯುತ್ತಾರೆ. 2 ಸೆಕೆಂಡು ಕಳೆದ ಬಳಿಕ ಮತ್ತೊಂದು ಮೆತ್ತನೆಯ ಪ್ರತಿಧ್ವನಿ ಕೇಳಿಸಿದರೆ ಸುಮಾರು 1,600 ಮೀ ದೂರದಲ್ಲಿ ಮೀನುಗಳ ಸಮೂಹವಿದೆಯೆಂದು ಹೇಳಬಹುದು. ಇದೇ ತತ್ತ್ವವನ್ನು ಅನುಸರಿಸಿ ಸಮುದ್ರದೊಳಗೆ ಜಲಾಂತರ್ಗಾಮಿಗಳಿದ್ದರೆ ಪತ್ತೆ ಹಚ್ಚುತ್ತಾರೆ. ನಾವೆಗಳಲ್ಲಿ ಸಾಮಾನ್ಯವಾಗಿ ಪ್ರತಿಧ್ವನಿಕಾರಕವನ್ನು ಅಳವಡಿಸಿರುತ್ತಾರೆ. ಇದಕ್ಕೆ ಆಳಮಾಪಕವೆಂದೂ ಹೆಸರಿದೆ. ಇದರ ಸಹಾಯದಿಂದ ನೀರಿನ ಆಳ ತಿಳಿಯುವುದರಿಂದ ಕಡಿಮೆ ಆಳವಿರುವ ಪ್ರದೇಶಗಳಿಂದ ದೂರವಿರಲು ಪ್ರಯತ್ನಿಸುತ್ತಾರೆ. ಅದೂ ಅಲ್ಲದೆ ಆಳ ನಕ್ಷೆಯ ಸಹಾಯದಿಂದ ತಮ್ಮ ನಾವೆ ಕಡಲಿನ ಮೇಲೆ ಯಾವ ಸ್ಥಾನದಲ್ಲಿದೆಯೆಂಬುದನ್ನೂ ತಿಳಿಯುತ್ತಾರೆ.
ರೇಡಿಯೋ ತರಂಗಗಳ ವೇಗ ಸೆಕೆಂಡಿಗೆ ಸುಮಾರು 3,00,000 ಕಿಮೀ, ಇವುಗಳ ಪ್ರತಿಧ್ವನಿಗಳನ್ನು ಪಡೆದು ಅಡಚಣೆಯ ದೂರವನ್ನು ಪಡೆಯಬಹುದು. ರೇಡಾರಿನ ತತ್ತ್ವವೇ ಇದು.
ಪ್ರತಿಧ್ವನಿ ತತ್ತ್ವವನ್ನು ಅಳವಡಿಸಿಕೊಂಡು ಅತಿಪರಾಸ್ವನಿಕ ತರಂಗಳ (ಅಲ್ಟ್ರಾಸಾನಿಕ್ ವೇವ್ಸ್) ನೆರವಿನಿಂದ ಲೋಹ ರಚನೆಯೊಳಗೆ ಅಡಗಿರುವ ಸಣ್ಣ ಬಿರುಕನ್ನಾಗಲಿ ದೋಷವನ್ನಾಗಲಿ ಪತ್ತೆ ಹಚ್ಚಬಹುದು. ಆ ಲೋಹದೊಳಕ್ಕೆ ಅತಿಪರಾಸ್ವನಿಕ ತರಂಗವನ್ನು ತೂರಿದಾಗ ಬಿರುಕಿನಿಂದ ಅದು ಪ್ರತಿಫಲಿಸಿ ತರಂಗದ ಮೂಲಸ್ಥಾನಕ್ಕೆ ಹಿಂತಿರುಗುತ್ತದೆ. ತರಂಗ ಹೊರಟದ್ದಕ್ಕೂ ಬಂದು ಸೇರುವುದಕ್ಕೂ ನಡುವೆ ಕಳೆದ ಕಾಲ ತಿಳಿಯುವುದರಿಂದ ದೋಷವಿರುವ ಸ್ಥಾನವನ್ನು ಪತ್ತೆ ಹಚ್ಚಬಹುದು. ಹೀಗೆಯೇ ಮಾನವನ ಮಿದುಳಿನಲ್ಲಿ ಏನಾದರೂ ವ್ರಣವಿದ್ದರೆ ಅದನ್ನೂ ಗುರುತಿಸಬಹುದು.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- More information on Chinon echo.
- Listen to Duck echoes and an animated demonstration of how an echo is formed. Archived 2013-10-11 ವೇಬ್ಯಾಕ್ ಮೆಷಿನ್ ನಲ್ಲಿ.