ಪೋಕಾಯೋಕೆ (ポカヨケ?) [poka yoke] ಅನ್ನುವುದು ಒಂದು ಜಪಾನಿ ಭಾಷೆಯ ಪದ. 'ತಪ್ಪಾಗದಂತೆ ತಡೆಯುವ' (mistake-proofing) ಎಂದು ಇದರ ಅರ್ಥ. ಯಾವುದೇ ಉತ್ಪಾದನಾ ಕೆಲಸದಲ್ಲಿ ಉಪಕರಣಗಳನ್ನು ಚಲಾಯಿಸುವವನು ಏನೂ ತಪ್ಪೆಸಗದಂತೆ ತಡೆಯುವ ತಂತ್ರ (ಮೆಕ್ಯಾನಿಸಂ) ಇದಾಗಿದೆ. ಮಾನವ ತಪ್ಪುಗಳನ್ನು ತಡೆಯುವ, ಸರಿಪಡಿಸುವ ಹಾಗೂ ಎಚ್ಚರಿಸುವ ಮೂಲಕ ಉತ್ಪನ್ನದ ದೋಷಗಳನ್ನು ನಿವಾರಿಸುವುದೇ ಇದರ ಉದ್ದೇಶ. ಈ ತಂತ್ರವು ಔಪಚಾರಿಕಗೊಳಿಸಲ್ಪಟ್ಟು ಟೊಯೊಟಾ ಪ್ರೊಡಕ್ಷನ್ ಸಿಸ್ಟಮ್ ನಲ್ಲಿ ಶಿಜಿಯೊ ಶಿಂಗೋ ಎನ್ನುವವರಿಂದ ಅಳವಡಿಸಲ್ಪಟ್ಟಿತು.[][] ಮೊದಲು ಇದು ಬಕಾಯೋಕೆ (ಅರ್ಥ: fool proofing, ಮೂರ್ಖತನ ತಡೆಯುವ) ಎಂದು ಹೇಳಲಾಗುತ್ತಿತ್ತು. ಅನಂತರ ಇದರ ಹೆಸರನ್ನು ತೀಕ್ಷ್ಣವಲ್ಲದ ಪದವಾದ 'ಪೋಕಾಯೋಕೆ' ಎಂದು ಹೆಸರಿಸಲಾಯಿತು.

 
ಪೋಕಾಯೋಕೆ ಉದಾಹರಣೆ: ಎತರ್ನೆಟ್ ಕೇಬಲ್ ಪ್ಲಗ್-ಇದನ್ನು ಒಂದು ಸರಿಯಾದ ರೀತಿಯಲ್ಲಿ ಮಾತ್ರ ಹಾಕಲು ಸಾಧ್ಯವಾಗುವಂತೆ ವಿನ್ಯಾಸ ಮಾಡಲಾಗಿದೆ

ಮೊದಲು ಉತ್ಪಾದನೆಯ ಕ್ಷೇತ್ರದಲ್ಲಿ ಬಳಕೆಯಾಗುತ್ತಿದ್ದ ಪೋಕಾಯೋಕೆ ವಿಧಾನವು ಈಗ ಸಾಮಾನ್ಯ ಬಳಕೆಯಲ್ಲೂ ಕೂಡ ಹಾಸುಹೊಕ್ಕಾಗಿದೆ. ಹಾಗಾಗಿ ಒಂದು ಪ್ರಕ್ರಿಯೆಯಲ್ಲಿ, ಕೆಲಸಗಾರನಿಂದ ಅಥವಾ ಬಳಕೆದಾರನಿಂದ ಯಾವುದೇ ತಪ್ಪುಗಳಾದಂತೆ ತಡೆಯುವ ವಿಧಾನವೇ ಪೋಕಾಯೋಕೆ ಎಂದು ವಿಶಾಲಾರ್ಥದಲ್ಲಿ ಹೇಳಬಹುದು.

ಒಂದು ಸರಳ ಉದಾಹರಣೆಯೆಂದರೆ, ಮ್ಯಾನುವಲ್ ಗೇರ್ ಹೊಂದಿರುವಂತಹ ಕಾರ್ ಒಂದನ್ನು ಸ್ಟಾರ್ಟ್ ಮಾಡುವುದಕ್ಕಿಂತ ಮುಂಚೆ ಚಾಲಕ ಕ್ಲಚ್ ಒತ್ತಬೇಕಾದಂತಹ ಪ್ರಕ್ರಿಯೆ. ಇದರಲ್ಲಿ ಕ್ಲಚ್ ಪೆಡಲ್ ಒತ್ತದಿದ್ದಲ್ಲಿ ಕಾರ್ ಸ್ಟಾರ್ಟ್ ಮಾಡಲು ಸಾಧ್ಯವಾಗುವುದಿಲ್ಲ. ಅಂದರೆ ಇದು ಆ ಪ್ರಕ್ರಿಯೆಯಲ್ಲಿ ತಪ್ಪು ಆಗುವುದನ್ನು ತಡೆಯುತ್ತದೆ. ಹಾಗಾಗಿ ಈ ಪ್ರಕ್ರಿಯೆಯ ಹಂತ ಪೋಕಾಯೋಕೆ ಅನ್ನಿಸಿಕೊಳ್ಳುತ್ತದೆ. ಈ ವ್ಯವಸ್ಥೆಯು ಕಾರಿನ ಅನಪೇಕ್ಷಿತ ಚಲನೆಯನ್ನು ತಡೆಗಟ್ಟುತ್ತದೆ. ಮತ್ತೊಂದು ಉದಾಹರಣೆಯೆಂದರೆ, ಸ್ವಯಂಚಾಲಿತ ಟ್ರಾನ್ಸ್ ಮಿಶನ್ ಹೊಂದಿರುವ ಕಾರು. ಇದರಲ್ಲಿ ಒಂದು ಸ್ವಿಚ್ ಇರುತ್ತದೆ. ಈ ಸ್ವಿಚ್ ‘ಪಾರ್ಕ್’ ಅಥವಾ ‘ನ್ಯೂಟ್ರಲ್’ ಇದ್ದಾಗ ಮಾತ್ರ ಕಾರನ್ನು ಸ್ಟಾರ್ಟ್ ಮಾಡಲು ಸಾಧ್ಯ. ಕೆಲವೊಂದು ಸ್ವಯಂಚಾಲಿತ ಟ್ರಾನ್ಸ್ ಮಿಶನ್ ಕಾರುಗಳಲ್ಲಿ ಸ್ಟಾರ್ಟ್ ಮಾಡುವುದಕ್ಕಿಂತ ಮೊದಲು ಬ್ರೇಕ್ ಪೆಡಲ್ ಕೂಡ ಒತ್ತಿಹಿಡಿದಿರಬೇಕಾಗುತ್ತದೆ. ಇಂತಹ ವ್ಯವಸ್ಥೆಗಳು ಪೋಕಾಯೊಕೆ ವಿಧಾನಗಳಾಗಿದ್ದು ತಪ್ಪುಗಳಾಗದಂತೆ ತಡೆದು ಕ್ರಮೇಣ ಬಳಕೆದಾರರಿಗೆ ಅಭ್ಯಾಸವಾಗುತ್ತವೆ.

ಇದೇ ರೀತಿ ಕಂಪ್ಯೂಟರ್ ಕೇಬಲ್ ಗಳನ್ನು, ಎಲೆಕ್ಟ್ರಾನಿಕ್ ಉಪಕರಣಗಳನ್ನು ಸರಿಯಾದ ರೀತಿಯಲ್ಲಿ ಮಾತ್ರ ಜೋಡಿಸಲು, ಅಳವಡಿಸಲು ಸಾಧ್ಯವಾಗುವ ರೀತಿಯಲ್ಲಿ ವಿನ್ಯಾಸ ಮಾಡುವುದು ಕೂಡ ಪೋಕಾಯೋಕೆ ತಂತ್ರವೇ ಆಗಿದೆ.

ಇತಿಹಾಸ

ಬದಲಾಯಿಸಿ

ಪೋಕಾಯೋಕೆ ಎಂಬ ವಿಚಾರ ೧೯೬೦ರಲ್ಲಿ ಶಿಜಿಯೋ ಶಿಂಗೋ ಎನ್ನುವವರಿಂದ ಉತ್ಪಾದನಾ ಪ್ರಕ್ರಿಯೆಗಳಲ್ಲಿ ಆಗುವ ಮಾನವದೋಷಗಳನ್ನು (human errors) ತಡೆಗಟ್ಟಲು ಅಳವಡಿಸಲ್ಪಟ್ಟಿತು.[] ಸಣ್ಣ ಸ್ವಿಚ್ ಜೋಡಣೆಯಲ್ಲಿ ಕಾರ್ಖಾನೆಯ ಕೆಲಸಗಾರರು ಸ್ವಿಚ್ ಬಟನ್ ಕೆಳಗೆ ಸ್ಪ್ರಿಂಗ್ ಒಂದನ್ನು ಅಳವಡಿಸಲು ಬಹಳ ಸಲ ತಪ್ಪಿಸುತ್ತಿದ್ದುದ್ದನ್ನು ಕಂಡ ಶಿಂಗೋ ಈ ಜೋಡಣಾ ಪ್ರಕ್ರಿಯೆಯನ್ನು ಮರುವಿನ್ಯಾಸಗೊಳಿಸಿದರು. ಅದರಲ್ಲಿ ಈ ಕೆಲಸವನ್ನು ಎರಡು ಹಂತಗಳಾಗಿ ವಿಂಗಡಿಸಿದರು. ಒಂದು ಹಂತದಲ್ಲಿ ಎರಡು ಸ್ಪ್ರಿಂಗ್ ಗಳನ್ನು ಒಂದು ಹೋಲ್ಡರ್ ನಲ್ಲಿ ಇಡುವುದು, ನಂತರದ ಹಂತದಲ್ಲಿ ಆ ಹೋಲ್ಡರ್ ನಿಂದ ಸ್ವಿಚ್ ಗೆ ಸ್ಪ್ರಿಂಗುಗಳನ್ನು ತೂರಿಸುವುದು. ಇದರಲ್ಲಿ ಮೊದಲನೇ ಹಂತ ಪಾಲಿಸದೇ ಎರಡನೇ ಹಂತಕ್ಕೆ ಹೋಗಲು ಸಾಧ್ಯವಿರಲಿಲ್ಲ, ಏಕೆಂದರೆ ಹೋಲ್ಡರ್ ನಲ್ಲಿ ಸ್ಪ್ರಿಂಗ್ ಉಳಿದುಹೋದರೆ ಕೆಲಸಗಾರರಿಗೆ ತಕ್ಷಣವೇ ತಿಳಿಯುತ್ತಿತ್ತು ಹಾಗೂ ಅದನ್ನು ಸರಿಪಡಿಸಬಹುದಾಗಿತ್ತು. ಹೀಗೆ ಮೂಲದಲ್ಲೇ ತಪ್ಪುಗಳಾಗುವುದನ್ನು ತಡೆಯಲು ಸಾಧ್ಯವಿತ್ತು.[]

ತಡೆಯಲು ಆಗದಂತಹ human errorsಗಳನ್ನು ಮತ್ತು ಉತ್ಪಾದನೆಯಲ್ಲಿ ಆಗುವ ದೋಷಗಳ ನಡುವೆಯ ವ್ಯತ್ಯಾಸಗಳನ್ನು ಶಿಂಗೋ ಅವರು ಪತ್ತೆಹಚ್ಚಿದರು. ಈ ಉತ್ಪಾದನಾ ಹಂತದ ತಪ್ಪುಗಳು ಬಳಕೆದಾರರನ್ನು ತಲುಪುವಂತಾದರೆ ಅದು ಉತ್ಪನ್ನದ ದೋಷವಾಗುತ್ತದೆ. ಪೋಕಾಯೋಕೆಯ ಗುರಿಯೆಂದರೆ ಮೂಲದಲ್ಲೇ ತಪ್ಪುಗಳನ್ನು ಕಂಡುಹಿಡಿದು ಸರಿಪಡಿಕೊಂಡು, ಪುನಃ ತಪ್ಪಾಗದಂತೆ ತಡೆದು ಉತ್ಪನ್ನದಲ್ಲಿ ಏನೂ ಕುಂದು ಉಂಟಾಗದಂತೆ ಮಾಡುವುದು.

ತಯಾರಿಕೆಯಲ್ಲಿ ಪೋಕಾಯೋಕೆ ಅಳವಡಿಕೆ ಹಾಗೂ ಕಾರ್ಯಗತಗೊಳಿಸುವಿಕೆ

ಬದಲಾಯಿಸಿ

ಉತ್ಪಾದನಾ ಪ್ರಕ್ರಿಯೆಯಲ್ಲಿ ತಪ್ಪುಗಳು ಆಗುತ್ತವೆ ಎಂದು ಅನ್ನಿಸುವ ಯಾವುದೇ ಹಂತದಲ್ಲೂ ಸಹ ಪೋಕಾಯೋಕೆ ವಿಧಾನವನ್ನು ಅಳವಡಿಸಿಕೊಳ್ಳಬಹುದು.[] ಉದಾಹರಣೆಗೆ Fixture ಒಂದರಲ್ಲಿ ಸರಿಯಾದ ಜಾಗ ಮತ್ತು ಸರಿಯಾದ ರೀತಿಯಲ್ಲಿ ಮಾತ್ರ ಜಾಬ್ ಪೀಸ್ ಕೂರಿಸಲು ಸಾಧ್ಯವಾಗುವಂತೆ ಮಾರ್ಪಡಿಸುವುದು, ಯಂತ್ರಭಾಗಗಳ ಜೋಡಣೆಯಲ್ಲಿ ಒಂದು ಭಾಗವನ್ನು ಸರಿಯಾದ ರೀತಿಯಲ್ಲಿ ಮಾತ್ರ ಜೋಡಣೆ ಮಾಡಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸುವುದು ಇತ್ಯಾದಿ.[]

ಭಾರಿ ಉತ್ಪಾದನೆಗಳಲ್ಲಿ (mass production) ತಪ್ಪುಗಳನ್ನು ಕಂಡುಹಿಡಿಯಲು ಮತ್ತು ತಡೆಗಟ್ಟಲು ಮೂರು ರೀತಿಯ ಪೋಕಾ-ಯೋಕೆ ವಿಧಾನಗಳನ್ನು ಶಿಂಗೋ ಅವರು ಗುರುತಿಸಿದರು.[][]

  1. ಉತ್ಪನ್ನದ ಆಕಾರ, ಗಾತ್ರ, ಬಣ್ಣ ಮುಂತಾದ ಭೌತಿಕ ಲಕ್ಷಣಗಳ ಪರೀಕ್ಷಿಸುವುದರ ಮೂಲಕ ಉತ್ಪನ್ನದ ದೋಷ ಕಂಡುಹಿಡಿಯುವ ವಿಧಾನ. (contact method)
  2. ನಿರ್ದಿಷ್ಟ ಸಂಖ್ಯೆಯ ಚಲನೆಗಳು ಆಗದಿದ್ದಲ್ಲಿ ನಡೆಸುಗ(ಆಪರೇಟರ್)ನನ್ನು ಎಚ್ಚರಿಸುವ ವಿಧಾನ. (fixed-value (or constant number) method)
  3. ಒಂದು ಪ್ರಕ್ರಿಯೆಯಲ್ಲಿ ನಿಗದಿತ ನಮೂನೆ ಮತ್ತು ಕ್ರಮದಲ್ಲಿ ಆಗಬೇಕಾದ ಹಂತಗಳು ಪಾಲನೆಯಾಗುತ್ತಿವೆಯೇ ಎಂಬುದನ್ನು ಪತ್ತೆಹಚ್ಚುವ ವಿಧಾನ. (motion-step (or sequence) method)

ಪೋಕಾಯೋಕೆ ತಂತ್ರದಲ್ಲಿ ತಪ್ಪುಗಳು ನಡೆಯುವ ಸಾಧ್ಯತೆ ಇರುವಾಗ ನಡೆಸುಗ(ಆಪರೇಟರ್)ನು ಎಚ್ಚರಿಸಲ್ಪಡುವ ವ್ಯವಸ್ಥೆ ಇರುತ್ತದೆ ಅಥವಾ ತಪ್ಪು ಆಗದಂತೆ ತಡೆಯುವ ಪೋಕಾಯೋಕೆ ಉಪಕರಣ ಇರುತ್ತದೆ. ಶಿಂಗೋ ಅವರು ಒಂದನ್ನು ‘ಮುನ್ಸೂಚನಾ ಪೋಕಾಯೋಕೆ’ ಮತ್ತು ಇನ್ನೊಂದನ್ನು ‘ನಿಯಂತ್ರಕ ಪೋಕಾಯೋಕೆ’ ಎಂದು ಕರೆದಿದ್ದಾರೆ.

ಯಾವುದೇ ತಯಾರಿಕೆಯೆ ಪ್ರಕ್ರಿಯೆಯಲ್ಲಿ ತಪ್ಪುಗಳಾಗದಂತೆ ಸಂಪೂರ್ಣವಾಗಿ ತಡೆಯಲು ಸಾಧ್ಯವಾಗುವುದಿಲ್ಲ, ಆದರೆ ಸರಿಯಾದ ಪೋಕಾಯೋಕೆ ವಿಧಾನಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ತಪ್ಪುಗಳನ್ನು ತಕ್ಷಣ ಕಂಡುಹಿಡಿದು ಅವು ಉತ್ಪನ್ನದ ದೋಷವಾಗದಂತೆ ತಡೆಯಬಹುದು ಎಂದು ಶಿಂಗೋ ಅವರು ಪ್ರತಿಪಾದಿಸಿದರು.[] ಮೂಲದಲ್ಲೇ ತಪ್ಪುಗಳನ್ನು ತಡೆಗಟ್ಟುವುದರಿಂದ ಅದಕ್ಕೆ ಸಂಬಂಧಿತ ವೆಚ್ಚವೂ ಕೂಡ ಕಡಿಮೆಯಾಗುತ್ತದೆ. ಪೋಕಾಯೋಕೆ ವಿಧಾನವನ್ನು ರಚಿಸಲು ಒಂದು ಪದ್ಧತಿಯನ್ನು ಅನುಸರಿಸಲಾಗುತ್ತದೆ. ಅದರಲ್ಲಿ ಮೂರು ಹಂತಗಳಿರುತ್ತವೆ.

  1. ಅಗತ್ಯತೆಯ ಪತ್ತೆಹಚ್ಚುವಿಕೆ ಅಂದರೆ ಏಕಾಗಿ ಬೇಕಾಗಿದೆ ಎಂದು ತಿಳಿದುಕೊಳ್ಳುವುದು.
  2. ತಪ್ಪುಗಳ ಸಾಧ್ಯತೆಯನ್ನು ಪತ್ತೆಹಚ್ಚುವುದು ಅಂದರೆ ಎಲ್ಲೆಲ್ಲಿ ಯಾವ ರೀತಿಯ ತಪ್ಪುಗಳು ಆಗುತ್ತವೆ ಎಂದು ತಿಳಿದುಕೊಳ್ಳುವುದು
  3. ಆ ತಪ್ಪುಗಳನ್ನು ನಿಯಂತ್ರಿಸಿ ನಿರ್ವಹಣೆ ಮಾಡುವದು.

ಸಮಸ್ಯೆಗೆ ಪರಿಣಾಮಕಾರಿ ಪರಿಹಾರಗಳನ್ನು ಕಂಡುಹಿಡಿಯುವಾಗ ಈ ಮೇಲಿನ ಕ್ರಮಬದ್ಧ ಮಾರ್ಗವನ್ನು ಬಳಸಿಕೊಳ್ಳಬಹುದು.

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ Shingo, Shigeo; Dillon, Andrew (1989). A study of the Toyota production system from an industrial engineering viewpoint. Portland, OR: Productivity Press. ISBN 0-915299-17-8. OCLC 19740349.
  2. John R. Grout, Brian T. Downs. "A Brief Tutorial on Mistake-proofing, Poka-Yoke, and ZQC". MistakeProofing.com. Archived from the original on ಮಾರ್ಚ್ 19, 2016. Retrieved May 4, 2009.
  3. H Robinson. "Using Poka-Yoke techniques for early defect detection". Archived from the original on ಡಿಸೆಂಬರ್ 27, 2014. Retrieved June 18, 2012.
  4. "The Sayings of Shigeo Shingo: Key Strategies for Plant Improvement". QualityCoach.Net. Retrieved August 20, 2012.
  5. ೫.೦ ೫.೧ "Poka Yoke or Mistake Proofing :: Overview". The Quality Portal. Retrieved May 5, 2009.
  6. Nikkan Kogyo Shimbun (1988). Poka-yoke: improving product quality by preventing defects. Productivity Press. p. 111. ISBN 978-0-915299-31-7.
  7. Ivan Fantin (2014). Applied Problem Solving. Method, Applications, Root Causes, Countermeasures, Poka-Yoke and A3. How to make things happen to solve problems. Milan, Italy: Createspace, an Amazon company. ISBN 978-1499122282


ಹೆಚ್ಚಿನ ಓದು

ಬದಲಾಯಿಸಿ

ಹೊರಕೊಂಡಿಗಳು

ಬದಲಾಯಿಸಿ

ಇವನ್ನೂ ನೋಡಿ

ಬದಲಾಯಿಸಿ