ಪೈಠಣಿ ಸೀರೆ
ಪೈಠಣಿ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ 'ಪೈಠಣ್' ಊರಿನಲ್ಲಿ ತಯಾರಾಗುವ ಒಂದು ವಿಶಿಷ್ಟ ತರಹದ ಸೀರೆ.[೧] 'ಪೈಠಣಿ' ಕೈಮಗ್ಗ ಸೀರೆಗಳ ಬಹುದೊಡ್ಡ ಕೇಂದ್ರ. ಕೈಮಗ್ಗದಲ್ಲಿ ನೇಯಲಾಗುವ ಈ ರೇಷ್ಮೆ ಸೀರೆಗಳು ಮಹಾರಾಷ್ಟ್ರದ ಅತಿ ಹೆಚ್ಚು ಬೆಲೆಯ ಸೀರೆಗಳಲ್ಲಿ ಒಂದು. ಉತ್ಕೃಷ್ಟ ಮಟ್ಟದ ರೇಷ್ಮೆಯಿಂದ ನೇಯಲಾಗುವ ಇಲ್ಲಿನ ಸೀರೆಗಳು ಮಹಾರಾಷ್ಟ್ರದಲ್ಲೇ ಅತ್ಯಂತ ಶ್ರೇಷ್ಟ ಗುಣಮಟ್ಟದ ಸೀರೆಗಳೆಂಬ ಖ್ಯಾತಿ ಪಡೆದಿವೆ. ಒಂದು ಸೀರೆ ನೇಯಲಿಕ್ಕೆ ೧೮ ರಿಂದ ೨೪ ತಿಂಗಳು ಹಿಡಿಯುತ್ತದೆ. ಈ ಸೀರೆಗಳ ಅಂಚು 'ಚೌಕಳಿ ವಿನ್ಯಾಸ'ವನ್ನು ಹೊಂದಿರುತ್ತದೆ. ಸೆರಗಿಗೆ ನವಿಲಿನ ಚಿತ್ರಗಳ ಸಾಂಗತ್ಯವಿರುತ್ತದೆ. ಸಾದಾ ಅಂಚಿನ ಸೀರೆಗಳೂ ಉಂಟು. ಅಲ್ಲಲ್ಲಿ ಚುಕ್ಕಿಗಳಿರುವ ವಿನ್ಯಾಸದ ಅಂಚುಗಳೂ ಇರುತ್ತವೆ. ಉದ್ದ ಹೆಣಿಗೆಗೆ ಒಂದು ಬಣ್ಣವಾದರೆ, ಅಡ್ಡ ಹೆಣಿಗೆಗೆ ಮತ್ತೊಂದು ಬಣ್ಣದ ಎಳೆಯನ್ನು ಬಳಸುತ್ತಾರೆ. ಇದು ಒಂದು ಸುಂದರ ವರ್ಣವಿನ್ಯಾಸಕ್ಕೆ ಎಡೆಮಾಡಿಕೊಡುತ್ತದೆ. ಬಂಗಾರ ವರ್ಣದ ಮಾದರಿ ಪ್ರಸಿದ್ಧಿ ಪಡೆದಿರುವುದರಿಂದ ಮೊದಲು ಹತ್ತಿ ಸೀರೆಗಳನ್ನು ನೇಯುತ್ತಿದ್ದ ನೇಕಾರರು ಈಗ ಹೆಚ್ಚುಹೆಚ್ಚಾಗಿ ರೇಷ್ಮೆ ಸೀರೆಗಳನ್ನೇ ತಮ್ಮ ಆಯ್ಕೆಮಾಡಿಕೊಂಡಿದ್ದಾರೆ. ಮೊದಲು ಅಡ್ಡ ಎಳೆಗೆ ರೇಷ್ಮೆ ಉಪಯೋಗವಾಗುತ್ತಿತ್ತು. ಸೀರೆಯ ಒಡಲಿನ ಭಾಗಕ್ಕೆ ಹತ್ತಿ ದಾರಗಳನ್ನು ಹಾಕಿ ನೇಯುತ್ತಿದ್ದರು. ಈಗ ಹತ್ತಿಯ ಬಳಕೆ ಇಲ್ಲವೇ ಇಲ್ಲವೆಂದು ಹೇಳಬಹುದು. ಉತ್ತಮ ಮಟ್ಟದ ರೇಷ್ಮೆ ನಮ್ಮ ದೇಶದಲ್ಲಿ ಸಿಗುವುದು ದುರ್ಲಭ. ಚೀನಾದಿಂದ ಆಮದುಮಾಡಿಕೊಳ್ಳುತ್ತಿದ್ದರು. ಇಂದಿನ ದಿನಗಳಲ್ಲಿ ಎವಲಾ ಮತ್ತು ಪೈಠಣದ ಕಾರೀಗರರು, ಬೆಂಗಳೂರಿನ ರೇಷ್ಮೆ ಆಯ್ಕೆಮಾಡಿಕೊಂಡಿದ್ದಾರೆ.
ರೇಷ್ಮೆದಾರಗಳ ವೈಖರಿ
ಬದಲಾಯಿಸಿಪೈಠಣಿ ಸೀರೆಗಳಿಗೆ ಬಳಸಲಾಗುವ ರೇಷ್ಮೆಯ ಗುಣಮಟ್ಟ.
- ಚರಖಾದಾರ - ಇದು ಅಗ್ಗದ ದಾರ. ಈ ದಾರವನ್ನು ಉಪಯೋಗಿಸಿ ತಯಾರಿಸಿದ ಸೀರೆಗಳೂ ಸೋವಿಯಾಗಿ ಸಿಗುತ್ತವೆ. ಬಣ್ಣವೂ ಸ್ವಲ್ಪ ಮಾಸಲು, ಸಮತಟ್ಟಾದ ಏಕಸ್ವರೂಪವಿರುವುದಿಲ್ಲ.
- ಶಿಡ್ಳಘಟ್ಟದದಾರ - ಚರಖಾದಾರಕ್ಕೆ ಹೋಲಿಸಿದರೆ, ಇದು ಸಮಮಟ್ಟದ ಬಣ್ಣದ ಏಕ-ಸ್ವರೂಪದ ಎಳೆಗಳನ್ನು ಹೊಂದಿದ, ಮೃದುವಾಗಿಯೂ ತೆಳುವಾಗಿಯೂ ಹೊಳಪನ್ನೂ ಪ್ರದರ್ಶಿಸುತ್ತವೆ. ಸಹಜವಾಗಿಯೇ ಇದರಿಂದ ತಯಾರಾದ ಬಟ್ಟೆಬರೆಗಳ ಬೆಲೆ ಹೆಚ್ಚಾಗಿಯೇ ಇರುವುದು ಕಂಡುಬರುತ್ತದೆ.
- ಚೀನಾದೇಶದ ದಾರ. ಈ ಮೂರೂ ವಿಧದ ದಾರಗಳು ಬಳಕೆಯಲ್ಲಿವೆ. ಇವೆರಡಕ್ಕೂ ಹೋಲಿಸಿದರೆ ಒಂದೇ ಸಮನಾಗಿರುವ ಮಹೀನ್ ದಾರಗಳನ್ನು ಒದಗಿಸುವ ಚೀನಾ ಎಳೆಗಳು ಬಹಳ ತುಟ್ಟಿ. ಬಂಗಾರದ ಜರಿಯನ್ನು ಸೂರತ್‍ನಿಂದ ತರಿಸಿಕೊಳ್ಳುತ್ತಾರೆ. ಪ್ರತಿ ೧೧.೬೬ ಗ್ರಾಂ ತೂಕದ(೧ ತೊಲೆ) ಲಡಿಯಲ್ಲಿ ೧,೨೦೦ ಗಜ ಉದ್ದದ ದಾರವಿರುತ್ತದೆ. ಇಂತಹ ೨ ದಾರಗಳನ್ನು ಹೊಸೆದುಗಟ್ಟಿ ಹೊಳಪಾದ ದಾರಗಳನ್ನು ತಯಾರಿಸಿಕೊಂಡು ಮಗ್ಗಗಳಲ್ಲಿ ಉಪಯೋಗಿಸುತ್ತಾರೆ. ಹೆಚ್ಚಿಗೆ ಒತ್ತಿ ಅಡಕವಾಗಿ ನೇಯುವ ವಿಧಾನದಿಂದ ತಯಾರದ ಸೀರೆಗಳು ಫಳ ಫಳ ಹೊಳೆಯುತ್ತಿರುತ್ತವೆ. ಏವಲಾದಲ್ಲಿ ಜರಿಯನ್ನು ತಯಾರಿಸಲಾಗುತ್ತದೆ. ಶುದ್ಧಬೆಳ್ಳಿಯಿಂದ ಈಗ ಸೂರತ್ ನಗರದಲ್ಲಿ ಜರಿಯನ್ನು ವ್ಯಾಪಕವಾಗಿ ತಯಾರಾಗಿಸಲಾಗುತ್ತಿದೆ. ಚಿನ್ನಕ್ಕೆ ಬದಲಾಗಿ ಬೆಳ್ಳಿ ಆ ಸ್ಥಾನವನ್ನು ಆಕ್ರಮಿಸಿದೆ.
ಸೀರೆಯ ಮೇಲಿನ ಅಲಂಕಾರಗಳು
ಬದಲಾಯಿಸಿಮಹಾರಾಷ್ಟ್ರದ ಅಜಂತಾ ಬೌದ್ಧ ಗುಹೆಗಳ ಭಿತ್ತಿ ಚಿತ್ರಗಳು ಸೀರೆಗಳ ವಿನ್ಯಾಸದಲ್ಲಿ ಬಳಕೆಯಾಗುತ್ತವೆ. ವೃತ್ತಗಳು, ನಕ್ಷತ್ರಗಳು, ಬಿದಿಗೆ ಚಂದ್ರ, ಬಳ್ಳಿಯ ಮೂರೆಲೆಗಳ ಗೊಂಚಲು, ಮುಂತಾದ ಮೋಟಿಫ್‍ಗಳನ್ನು ಸೀರೆಗಳ ಮೇಲೆ ಬಿಂಬಿಸುವ ಪ್ರಯತ್ನವಿರುತ್ತದೆ.[೨] ಮುನಿಯಾ ಎಂಬ ಗಿಳಿಯ ಚಿತ್ರವನ್ನು ಹಸಿರುಬಣ್ಣದಲ್ಲಿ ಸೀರೆಯ ಸೆರಗಿಗೆ ಸೇರಿಸುತ್ತಿದ್ದರು. ಕೊಕ್ಕಿಗೆ ಕೆಂಪು ಬಣ್ಣವನ್ನು ಸ್ಪರ್ಶಿಸಲಾಗುತ್ತಿತ್ತು.
ಪಾಂಚಾ
ಬದಲಾಯಿಸಿಹೂವಿನ ವಿನ್ಯಾಸ. ಹೊರಮೈಗೆ ಕೆಂಪುಬಣ್ಣದ ಲೇಪವಿರುವ ಜ್ಯಾಮಿತೀ ವಿಧದ ಹೂಗಳನ್ನು ಬಳಸಲಾಗುತ್ತದೆ.
ಬಾರ್‌ವಾ
ಬದಲಾಯಿಸಿ೧೨ ಎಳೆಗಳಲ್ಲಿ ಏಣಿಯ ಚಿತ್ರ. ಒಂದೊಂದು ಬದಿಯಲ್ಲೂ ಮೂರು ಮೂರು ಎಳೆಗಳು ಬಳಕೆಯಲ್ಲಿವೆ.
ಲೆಹರ್
ಬದಲಾಯಿಸಿಸೆರಗಿನ ಮೇಲಿನ ಜರಿಯನ್ನು ಆಧರಿಸುವ ಸಲುವಾಗಿ ಸೆರಗಿನ ಮಧ್ಯಭಾಗದಲ್ಲಿ ವಿಶೇಷ ವಿನ್ಯಾಸ.ಲೆಹರ್ ಅಥವಾ ಅಲೆಯ ವಿನ್ಯಾಸ ಸೀರೆಗಳಿಗೆ ಕಳೆಕಟ್ಟುತ್ತದೆ. ಒಂದು ಬಗೆಯ ಮುತ್ತದಾ ಜ್ಯಾಮಿತೀಯ ವಿನ್ಯಾಸದ ಮಾದರಿ.
ಅಸಾವಳಿ
ಬದಲಾಯಿಸಿಹೂದಾನಿಯಲ್ಲಿ ಅರಳಿ ನಿಂತ ಹೂಗಳನ್ನು ಹೊತ್ತಿರುವ ಗಿಡದ ವಿನ್ಯಾಸವನ್ನು ಸೂಚಿಸುವ ವಿನ್ಯಾಸ. ಅಂಚು ಸೆರಗಿಗೆ ನವಿಲಿನ ವಿನ್ಯಾಸ.
ಈಗ ಬೆಳ್ಳಿ ಜರಿಗಳೇ ಹೆಚ್ಚು ಬಳಕೆಯಲ್ಲಿವೆ. ಆದರೆ ಅವಕ್ಕೆ ಚಿನ್ನದ ಲೇಪ ಕೊಟ್ಟಿರುತ್ತಾರೆ. ಅಂಚುಗಳಿಗೆ ಬಣ್ಣದ ರೇಷ್ಮೆ ದಾರ ಅಥವಾ ಜರಿಗಳಿಂದ ತಯರಿಸಿದ ಅಡ್ಡ ಹೆಣಿಗೆಗಳು ಕಾರ್ಯದಲ್ಲಿವೆ.
ಅಂಚು, ಸೆರಗು
ಬದಲಾಯಿಸಿಪೇಶ್ವೆ ಆಡಳಿತದ ಕಾಲದಲ್ಲಿ ಈ ಸೀರೆಗಳ ಅಂಚು, ಸೆರಗುಗಳನ್ನು ಶುದ್ಧ ಚಿನ್ನದಲ್ಲಿ ಮಾಡಲಾಗುತ್ತಿದ್ದು, ಬಲ ಬರುವುದಕ್ಕೆಂದು ತಾಮ್ರವನ್ನು ಸೇರಿಸಲಾಗುತ್ತಿತ್ತು. ಜರಿ ಎಂದು ಕರೆಯಲಾಗುವ ಈ ಮಿಶ್ರಣದ ತೆಳ್ಳನೆಯ ತಂತಿಯಿಂದ ಸೀರೆಗಳನ್ನು ಹೆಣೆಯಲಾಗುತ್ತಿತ್ತು. ಈಗ ಜರಿಯನ್ನು ಚಿನ್ನದ ಲೇಪದ ಬೆಳ್ಳಿಯ ಜರಿಯನ್ನು ಉಪಯೋಗಿಸಲಾಗುತ್ತದೆ. (೧ ಕಿ.ಗ್ರಾಂ ಬಂಗಾರಕ್ಕೆ ೧ ತೊಲೆ ತಾಮ್ರ). ನಾರಳಿ ಮತ್ತು ಪಂಖಿ ಎಂಬ ಎರಡು ತರಹದ ಅಂಚುಗಳ ವಿನ್ಯಾಸವನ್ನು ಸಾಧಾರಣವಾಗಿ ಉಪಯೋಗಿಸಲಾಗುತ್ತದೆ.
ಪೈಠಣಿಯ ಪ್ರಕಾರಗಳು
ಬದಲಾಯಿಸಿಪೈಠಣಿಯನ್ನು ಸಂಕೇತ, ನೇಯ್ಗೆ, ಬಣ್ಣದ ಪ್ರಕಾರ ಮೂರು ವಿಧವಾಗಿ ವಿಂಗಡಿಸಬಹುದು
ಸಂಕೇತಗಳು
- ಬಾಂಗಡಿ ಮೋರ್ ಅಥವಾ ಬಳೆ ನವಿಲಿನ ಸಂಕೇತ. ಬಳೆಯ ಆಕಾರದಲ್ಲಿ ನವಿಲಿನ ಚಿತ್ರ ಇದರ ವೈಶಿಷ್ಟ್ಯ. ಈ ಚಿತ್ರಗಳನ್ನು ಸೆರಗಿನ ಭಾಗದಲ್ಲಿ ನೇಯಲಾಗುತ್ತದೆ. ಈ ವಿನ್ಯಾಸದ ಸೀರೆಗಳು ಸಾಧಾರಣವಾಗಿ ಬಹಳ ಬೆಲೆಯುಳ್ಳದ್ದಾಗಿರುತ್ತದೆ.
- ಮುನಿಯಾ ಕಲಾಪತ್ತು ಅಥವಾ ಗಿಳಿ ಸಂಕೇತದ ಸೀರೆಗಳು. ಗಿಳಿಯ ಚಿತ್ರಗಳನ್ನು ಅಂಚು, ಸೆರಗುಗಳಲ್ಲಿ ನೇಯಲಾಗುತ್ತದೆ. ಈ ಗಿಳಿಗಳ ನೇಯ್ಗೆಗೆ ಯಾವಾಗಲೂ ಎಲೆಹಸಿರು ಬಣ್ಣದ ದಾರವನ್ನೇ ಉಪಯೋಗಿಸಲಾಗುತ್ತದೆ. ಇವನ್ನು ತೋತಾ ಮೈನಾ ಎಂದೂ ಕರೆಯುವುದುಂಟು.
- ತಾವರೆ ಕಲಾಪತ್ತು: ತಾವರೆಯ ಚಿತ್ರದ ಸೀರೆಗಳು. ಇವನ್ನು ಸೆರಗಿನಲ್ಲಿ, ಕೆಲವೊಮ್ಮೆ ಅಂಚಿನಲ್ಲಿ ಕೂಡ ನೇಯಲಾಗುತ್ತದೆ. ೭-೮ ಬಣ್ಣದ ದಾರಗಳನ್ನು ಉಪಯೋಗಿಸಲಾಗುತ್ತದೆ.
ನೇಯ್ಗೆ
- ಕಡಿಯಾಲ್ ಅಂಚಿನ ಸೀರೆಗಳು.
- ಕಡ್ / ಏಕ್ಧೋತೀ ಸೀರೆಗಳು. ನಾರಳೀ ಅಂಚಿನ ಈ ಸೀರೆಗಳಲ್ಲಿ ಹಾಸು ಮತ್ತು ಹೊಕ್ಕಿಗೆ ಬೇರೆಬೇರೆ ಬಣ್ಣಗಳನ್ನು ಬಳಸುತ್ತಾರೆ. ಒಡಲಿನಲ್ಲಿ ಸರಳ ಬುಟ್ಟಾಗಳೂ ಇರುತ್ತವೆ.
ಬಣ್ಣ
- ಕಾಳೀಚಂದ್ರಕಲಾ: ಕೆಂಪಂಚಿನ ಕಪ್ಪು ಬಣ್ಣದ ಸೀರೆಗಳು
- ರಾಘು : ಗಿಳಿಹಸಿರಿನ ಬಣ್ಣದ ಸೀರೆಗಳು
- ಶಿರೋಡಕ್ : ಅಚ್ಚ ಬಿಳುಪು ಸೀರೆಗಳು
ಪೈಠಣಿ ಸೀರೆ ಉದ್ಯಮ
ಬದಲಾಯಿಸಿಪೈಠಣಿ ಸೀರೆಯ ಜನಪ್ರಿಯತೆ ದಿನದಿನಕ್ಕೂ ಹೆಚ್ಚುತ್ತಿದೆ.[೩] ಸೀರೆ ಈಗ ಪ್ರಮುಖ ಫ್ಯಾಶನ್ ಉಡುಪುಗಳಲ್ಲೊಂದಾಗಿದೆ. ಸಿನಿಮಾ ಮತ್ತು ಮೀಡಿಯಾದಲ್ಲಿ ಸೀರೆಗೆ ಬಹಳ ಬೇಡಿಕೆಯಿದೆ.
ಉಲ್ಲೇಖಗಳು
ಬದಲಾಯಿಸಿ- ↑ "Touch of class". Archived from the original on 2014-06-12. Retrieved 2014-06-04.
- ↑ Paithani with panache
- ↑ ಹಿಂದೂ ಪತ್ರಿಕೆಯ ವರದಿ : Paithani revival