ಪಾರ್ತಿಸುಬ್ಬ
ಪಾರ್ತಿಸುಬ್ಬ (೧೭೫೦-೧೮೩೦) ಕನ್ನಡ ಯಕ್ಷಗಾನ ಕವಿ.[೧] ಕೇರಳ ರಾಜ್ಯದ ಕಾಸರಗೋಡು ತಾಲ್ಲೂಕಿನ ಕುಂಬಳೆಯಲ್ಲಿದ್ದವ. ತಾಯಿ ಪಾರ್ವತಿ (ಪಾರ್ತಿ). ಆಕೆಯಿಂದಲೇ ಈತನಿಗೆ ಈ ಹೆಸರು ಬಂತು ಎಂದು ಊಹಿಸಲಾಗಿದೆ. ಕಣ್ಣೀಪುರ ಕೃಷ್ಣ ಕುಂಬಳೆ ಅರಸರ ಕುಲದೈವ.
ಅಂಕಿತನಾಮ
ಬದಲಾಯಿಸಿಸುಬ್ಬನ ಎಲ್ಲಾ ಕೃತಿಗಳಲ್ಲೂ ಕಣೀಪುರ ಕೃಷ್ಣ ಅಥವಾ ಕಣ್ವಪುರೇಶನ ಅಂಕಿತವಿದೆ. ಕಣೀಪುರಕ್ಕೆ ಸಮೀಪ ಪುರಾಣಪ್ರಸಿದ್ಧಿವಾದ ಮದಲೂರ ವಿಘ್ನೇಶ್ವರ ಕ್ಷೇತ್ರವಿದೆ. ಯಕ್ಷಗಾನದ ಪೂರ್ವರಂಗ ಪ್ರಯೋಗದಲ್ಲಿ ಈ ದೇವರ ಸ್ತುತಿ ನಡೆಯುತ್ತದೆ. ಸುಬ್ಬನ ಕೃತಿಗಳಲ್ಲೂ ಇದನ್ನು ಕಾಣಬಹುದು.
ವೃತ್ತಿ
ಬದಲಾಯಿಸಿಈತ ಕೇರಳದಲ್ಲಿ ವಿದ್ಯಾಭ್ಯಾಸ ಮಾಡಿದನೆಂದು ಕೆಲಸಮಯ ಅಲ್ಲಿಯ ಕಥಕಳಿಯಲ್ಲಿ ಭಾಗವತನಾಗಿದ್ದನೆಂದು ಅನಂತರ ಕನ್ನಡ ಯಕ್ಷಗಾನಗಳನ್ನು ರಚಿಸಿ ಕುಂಬಳೆಯ ಕಣಿಪುರ ಕೃಷ್ಣದೇವಸ್ಥಾನದಿಂದ ಪ್ರಸ್ಥಾಪಿತವಾದ ಕುಂಬ್ಳೆ ದಶಾವತಾರ ಮೇಳದಲ್ಲಿ ಭಾಗವತನಾಗಿದ್ದನೆಂದೂ ಪ್ರತೀತಿ. ಯಕ್ಷಗಾನ ಪ್ರಯೋಗವನ್ನು ಶಾಸ್ತ್ರೀಯವಾಗಿ ಸಂಸ್ಕರಿಸಿ ತನ ಎಂಬ ಪ್ರಶಸ್ತವಾದ ಯಕ್ಷಗಾನ ಪದ್ಧತಿಯನ್ನು ರೂಢಿಸಿದವ ಈತನೇ ಎಂಬ ಪ್ರಸಿದ್ಧಿ ಇದೆ. ಸಮಗ್ರ ರಾಮಾಯಣದ ಕಥೆಯನ್ನು ಯಕ್ಷಗಾನ ಪ್ರಬಂಧಗಳಾಗಿ ರಚಿಸಿದವರಲ್ಲಿ ಈತ ಮೊದಲಿಗ.
ಕೃತಿಗಳು
ಬದಲಾಯಿಸಿರಾಮಾಯಣದ ಕೃತಿಗಳು
ಬದಲಾಯಿಸಿ- ಪುತ್ರಕಾಮೇಷ್ಟಿ.
- ಸೀತಾಸ್ವಯಂವರ,
- ರಾಮ ಪಟ್ಟಾಭಿಷೇಕ,
- ಪಂಚವಟಿ-ವಾಲಿ ಸಂಹಾರ,
- ಉಂಗುರಸಂಧಿ,
- ಸೇತುಬಂಧನ,
- ಅಂಗದ ಸಂಧಾನ,
- ಕುಂಭಕರ್ಣಾದಿ ಕಾಳಗ,
- ಕುಶಲವರ ಕಾಳಗ.
ಇತರ ಕೃತಿಗಳು
ಬದಲಾಯಿಸಿಇವಲ್ಲದೆ ಶ್ರೀಕೃಷ್ಣ ಬಾಲಲೀಲೆಯಲ್ಲಿ ಕೃಷ್ಣಜನನದಿಂದ ಹಿಡಿದು ಗೋಪಿ ವಸ್ತ್ರಾಪಹರಣದವರೆಗಿನ ಕಥಾಭಾಗವನ್ನು ಕೃಷ್ಣಚರಿತೆ ಎಂಬ ಹೆಸರಿನಿಂದಲೂ ಯಕ್ಷಗಾನವಾಗಿ ರಚಿಸಿದ್ದಾನೆ. ಈತನ ಕೃತಿಗಳು ಹಲವು ಮುದ್ರಣಗಳನ್ನು ಕಂಡಿವೆ. ಯಕ್ಷಗಾನದ ಪೂರ್ವರಂಗಕ್ಕೆ ಸಂಬಂಧಿಸಿದಂತೆ ಈತ ರಚಿಸಿದ ಸಭಾಲಕ್ಷಣವೆಂಬ ಸಂಗ್ರಹಗ್ರಂಥವೂ ದೊರೆಯುತ್ತದೆ. ಮೊದಲ ಏಳು ರಾಮಾಯಣ ಕೃತಿಗಳನ್ನು ಕೇರಳದ ಕೊಟ್ಟರಕರ ಮಹಾರಾಜನಿಂದ ಕಥಕಳಿಯ ಆದ್ಯ ಪ್ರಬಂಧಗಳಾಗಿ ಮಲೆಯಾಳದಲ್ಲಿ ರಚಿಸಲ್ಪಟ್ಟ ಆಟ್ಟಕ್ಕಥ್ ಎಂಬ ರಾಮಾಯಣ ಪ್ರಬಂಧಗಳ ಮಾದರಿಯಲ್ಲಿ ರಚಿಸಿರುತ್ತಾನೆ. ಅನೇಕ ಪದ್ಯಗಳು ಅಲ್ಲಿಯ ಭಾಷಾಂತರವಾಗಿವೆ. ಅವುಗಳಲ್ಲಿ ಕೆಲವನ್ನು ವೆಂಕಯ್ಯ ಭಾಗವತ ಎಂಬುವವರು ತುಳು ಭಾಷೆಗೆ ಭಾಷಾಂತರಿಸಿದ್ದಾರೆ. ಈತನೇ ತುಳು ಭಾಷೆಯಲ್ಲಿ ರಚಿಸಿದ್ದ ಕೆಲವು ಬಿಡಿಪದ್ಯಗಳು ದೊರೆಯುತ್ತವೆ. ತನ್ನ ಐರಾವತ ಪ್ರಬಂಧದಲ್ಲಿ (೧೭೯೭) ಹೈಗರ ಕನ್ನಡ,ತುಳು, ಮಲಯಾಳ, ಕೊಂಕಣಿ. ಮರಾಠಿ,ತೆಲುಗು ಭಾಷೆಗಳಲ್ಲಿ ಸಹ ಈತ ಕೆಲವು ಪದ್ಯಗಳನ್ನು ರಚಿಸಿರುತ್ತಾನೆ. ಈತನ ಕೃಷ್ಣಚರಿತೆಯಲ್ಲಿ ಬ್ರಹ್ಮ ಕೊರವಂಜಿಯಾಗಿ ಬಂದು ದೇವಕಿಗೆ ಕೃಷ್ಣಜನನ ಸ್ಥಿತಿಯನ್ನು ಕಣಿ ಹೇಳುವ ಸ್ವಾರಸ್ಯವಾದ ಕಥಾಸಂದರ್ಭವೂ ಸೇರಿದೆ. ಈತನ ಕೃತಿಗಳಲ್ಲೆ ಸಂಗೀತರತ್ನಾಕರಾದಿ ಸಂಗೀತಲಕ್ಷಣ ಗ್ರಂಥಗಳಲ್ಲಿ ನಿರೂಪಿಸಿರುವ ತ್ರಿಪುರುಷ ಗಣಬದ್ಧವಾದ ಕನ್ನಡದ ಏಳು ಪ್ರಬಂಧ ಲಕ್ಷಣಕ್ಕೆ ಸಮನ್ವಯವಾದ ಪದ್ಯಬಂಧಗಳು ಕಾಣುತ್ತವೆ.[೨]