ಪರ್ಪಲೆ ಗುಡ್ಡೆ- ಕಾರ್ಕಳ

ಪರ್ಪಲೆ ಗುಡ್ಡೆ - ಕಾರ್ಕಳ [] PURPLE -ಪರ ಪಾಲೆ ಎಂದರೆ ತುಳು ಭಾಷೆಯಲ್ಲಿ ಭಾರೀ ಗಾತ್ರದ ಹಳೆಯ ಕಾಲದ ಹಾಳೆ ಮರಗಳು ಇದ್ದ ಪ್ರದೇಶ ಎಂದು ಅರ್ಥ. ಪರಪಾಲೆ ಗುಡ್ಡ ಕರೆಯಲ್ಪಡುವ ಕಾರ್ಕಳದ ಪಶ್ಚಿಮ ಭಾಗದಲ್ಲಿರುವ ಪರ್ಪಲೆ ಗುಡ್ಡೆಯು ನೋಡಲು ಸುಂದರವಾಗಿದೆಯಲ್ಲದೆ, ಚಾರಣಕ್ಕೂ ಹೇಳಿ ಮಾಡಿಸಿದ ಜಾಗ. ದೂರಕ್ಕೆ ನುಣುಪಾಗಿ ಕಾಣುವ ಇದರ ನಿರ್ಮಲ ಬೋಳು ಮೈ, ಗುಡ್ಡದ ಸುತ್ತ ಕಾಣುವ ಹಸಿರು ವನಸಿರಿ, ತುದಿಯಲ್ಲಿ ಹಿತವಾಗಿ ಬೀಸುವ ತಂಗಾಳಿ, ಎಲ್ಲವೂ ಮನಸ್ಸಿಗೆ ಮುದ ನೀಡುತ್ತದೆ. ಕಾರ್ಕಳದ ಗೋಮಟೇಶ್ವರ, ಚತುರ್ಮುಖ ಬಸದಿ, ರಾಮ ಸಮುದ್ರ, ಕರಿಯ ಕಲ್ಲು, ಆನೆಕೆರೆ, ಸಿಗಡೀ ಕೆರೆ, ಹಿರಿಯಂಗಡಿ ಮಾನಸ್ತಂಭ ಇವುಗಳೊಂದಿಗೆ ಪರ್ಪಲೆ ಗುಡ್ಡವು ಕಾರ್ಕಳದ ಮುಖ್ಯ ಹೆಗ್ಗುರುತುಗಳಲ್ಲಿ ಒಂದು. ಕಾರ್ಕಳ ಪೇಟೆಯ ಪಶ್ಚಿಮಕ್ಕೆ ಉತ್ತರದಿಂದ ದಕ್ಶಿಣಕ್ಕೆ ಚಾಚಿರುವ ಈ ಗುಡ್ಡ ಏರಲು ಹೊರಟರೆ, ನಮಗೆ ಮೊದಲು ಸಿಗುವುದು ಹಿರಿಯಂಗಡಿ. ಇಲ್ಲಿಯ ಮಾನಸ್ತಂಭ ಇತಿಹಾಸ ಪ್ರಸಿದ್ಧ. ಇದು ಒಂದು ಏಕಶಿಲಾ ಸ್ತಂಭ. ಇದರ ಎತ್ತರ ಸುಮಾರು ೫೭ ಅಡಿ. ಇಲ್ಲಿರುವ ಮುಖ್ಯ ಕುಡಿಯುವ ನೀರಿನ ಬಾವಿಯನ್ನು ಕಲ್ಲು ಚಪ್ಪಡಿಯಿಂದ ಮುಚ್ಚಿ ಬಾವಿ ಒಳಗೆ ಗಾಳಿ ಬೆಳಕನ್ನು ನಿಯಂತ್ರಿಸಿದಂತೆ ಕಾಣುತ್ತದೆ. ಇದನ್ನು ದಾಟಿ ಮುಂದೆ ಹೋದಾಗ ಗವಿ ಸಿಗುತ್ತದೆ. ಈ ಗವಿಯ ಒಳಗೆ ಯಾವಾಗಲೂ ನೀರಿನ ಹನಿಗಳು ತೊಟ್ಟಿಕ್ಕುತ್ತವೆ. ಇಲ್ಲಿಂದ ಮುಂದೆ ಗುಡ್ಡದ ತುದಿ ಇದೆ. ಇಲ್ಲಿ ಒಂದು ಕಟ್ಟೆ. ಅದರ ನಂತರ ವಿಶಾಲವಾದ ಸಮತಟ್ಟಾದ ಬೆಟ್ಟದ ಬೋಳು ಮೇಲ್ಭಾಗ. ಅಲ್ಲಿಂದ ಮುಂದೆ ಪಶ್ಚಿಮದಲ್ಲಿ ಇಳಿಯುವಾಗ, ಪ್ರಸಿದ್ಢ ಸಂತ ಲಾರೆನ್ಸರ ಇಗರ್ಜಿ ಇದೆ. ಈ ಅತ್ತೂರು ಇಗರ್ಜಿಯಲ್ಲಿ ಜನವರಿ ತಿಂಗಳ ಕೊನೆಯ ಮಂಗಳವಾರ, ಬುಧವಾರ, ಗುರುವಾರ ಸಾಂತ್ ಮಾರಿ ನಡೆಯುತ್ತದೆ. ಇದು ವಿಶ್ವ ಪ್ರಸಿದ್ಧವಾಗಿದೆ. ಇಗರ್ಜಿಯ ನಂತರ, ಮಿಶನ್ ಕಾಂಪೋಂಡ್ ಇದೆ. ಈ ವಿಶಾಲವಾದ ಜಾಗದಲ್ಲಿ ಹಿಂದೆ ಅನೇಕ ಕಾಡು ಪ್ರಾಣಿಗಳೂ ಇದ್ದವು. ಈ ಜಾಗದಲ್ಲೇ ಜರ್ಮನ್ ಮಿಶನರಿಗಳ ಬಂಗ್ಲೆ ಇದೆ.ಈ ಗುಡ್ಡದ ಮೇಲೆ ತುಳುವರ ಅನೇಕ ದೈವ ಸ್ಥಾನಗಳು ಇದ್ದ ಬಗ್ಗೆ ಕಾರ್ಕಳದ ಏಳು ನಾಡು ಹೆಗ್ಗಡೆಯ ಇತಿಹಾಸದಲ್ಲಿ ಉಲ್ಲೇಖವಿದೆ. ಇಲ್ಲಿರುವ ಗುಹೆಯು ನಾಥ ಪರಂಪರೆಯ ಜೋಗಿಗಳಿಗೆ ಸಂಬಂಧಿಸಿದ್ದಾಗಿದ್ದು ಇವರು ಆರಾಧಿಸಿದ ಹಲವಾರು ಶಿವ ಕ್ಷೇತ್ರಗಳು ಈ ಬೆಟ್ಟದ ತಪ್ಪಲಿನಲ್ಲಿವೆ. ಇದರ ಪೂರ್ವಭಾಗದಲ್ಲಿ 1213 ಇಸವಿಯಲ್ಲಿ ಕಟ್ಟಲಾದ ಕೃಷ್ಣ ದೇಗುಲವಿದ್ದು ಅದು ಈಗ ಜೀರ್ಣವಸ್ಥೆಗೆ ಜಾರಿದೆ. ಈ ದೇವಾಲಯದಿಂದಾಗಿ ಈ ಪ್ರದೇಶಕ್ಕೆ ಕೃಷ್ಣಗಿರಿ ಎಂಬ ಹೆಸರು ಬಂದಿದೆ. ಈ ಬೆಟ್ಟದಲ್ಲಿ ವ್ಯಾಪಾಕವಾಗಿ ಮುಳಿ ಹುಲ್ಲು ಬೆಳೆಯುತ್ತಿದ್ದ ಹಿನ್ನೆಲೆಯಲ್ಲಿ ದೂರ ದೂರದ ಜನರು ಇಲ್ಲಿಗೆ ಬಂದು ಮುಳಿಹುಲ್ಲು ಕೊಂಡು ಹೋಗುತ್ತಿದ್ದರು.

ಉಲ್ಲೇಖ

ಬದಲಾಯಿಸಿ