ಪಪ್ಪಾಯಿ

(ಪರಂಗಿ ಇಂದ ಪುನರ್ನಿರ್ದೇಶಿತ)

ಪರಂಗಿ ಕ್ಯಾರಿಕೇಸೀ ಕುಟುಂಬಕ್ಕೆ ಸೇರಿದ ಜನಪ್ರಿಯ ಫಲವೃಕ್ಷ (ಪಪಾಯ). ಪರಂಗಿಹಣ್ಣು, ಅಕ್ಕತಂಗಿಯರ ಹಣ್ಣು ಪರ್ಯಾಯನಾಮಗಳು. ಕ್ಯಾರಿಕ ಪಪಾಯ ಇದರ ಶಾಸ್ತ್ರೀಯ ಹೆಸರು.

ಪಪ್ಪಾಯಿ ತವರುಮನೆ ದಕ್ಷಿಣ ಅಮೆರಿಕ , ಪಶ್ಚೀಮ ವೆಸ್ಟ್ ಇಂಡೀಸ್‍ಗಳೆನ್ನಲಾಗಿದೆ. 16ನೆಯ ಶತಮಾನದ ಮಧ್ಯಭಾಗದಲ್ಲಿ ಭಾರತದೇಶಕ್ಕೆ ತರಲಾಯಿತೆಂದು ಹೇಳಲಾಗಿದೆ. ಈಗ ಭಾರತದ ಎಲ್ಲಾ ರಾಜ್ಯಗಳಲ್ಲೂ ಇದರ ಬೇಸಾಯವುಂಟು. ತಮಿಳುನಾಡು, ಮಹಾರಾಷ್ಟ್ರ, ಬಂಗಾಳ, ಬಿಹಾರ ಮತ್ತು ಒಡೀಸ್ಸಾ ರಾಜ್ಯಗಳಲ್ಲಿ ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ.

ಪಪ್ಪಾಯಿ ಸದಾ ಹಸುರಾಗಿರುವ ಸಣ್ಣ ಮರ. ಇದರ ಕಾಂಡ ಟೊಳ್ಳು. ಕಾಂಡದ ಮೇಲೆ ತುದಿಯ ಎಲೆಗಳ ಕಿರೀಟ ಇದೆ. ಕಾಂಡದಮೇಲುಭಾಗ ಬೂದಿಯ ಬಣ್ಣ. ಎಲೆಗಳು ಸರಳ; ಹಸ್ತಾಕಾರದವು; ಪ್ರತಿಯೊಂದಕ್ಕೂ ಟೊಳ್ಳಾದ ತೊಟ್ಟು ಉಂಟು. ಎಲೆಗಳಿಗೆ ವಯಸ್ಸಾದಂತೆ ಒಂದೊಂದಾಗಿ ಒಣಗಿ ಕಳಚಿ ಬೀಳುವುವು. ಕಾಂಡದ ಮೇಲೆ ಹೀಗೆ ಕಳಚಿಬಿದ್ದ ಎಲೆಗಳ ಬುಡದ ಕಲೆ ಉಳಿದಿರುವುದು ಕಾಣಬಹುದು.

ಪಪ್ಪಾಯಿಯಲ್ಲಿ ವಿಚಿತ್ರ ರೀತಿಯ ಲಿಂಗ ವ್ಯತ್ಯಾಸವನ್ನು ಕಾಣಬಹುದು. ಇದರಲ್ಲಿ ಹೂಗಳು ಹೆಣ್ಣು, ಗಂಡು ಮತ್ತು ದ್ವಿಲಿಂಗ ಹೀಗೆ ಮೂರು ತೆರನಾದವು. ಕೆಲವು ಬಾರಿ ಈ ಹೂಗಳು ಪ್ರತ್ಯೇಕವಾಗಿ ಬೇರೆ ಬೇರೆ ಮರಗಳಲ್ಲಿ ಇರುವುದುಂಟು. ಸಸಿಗಳನ್ನು ನೆಟ್ಟ ಐದು ತಿಂಗಳ ಅನಂತರ ಹೂವು ಬಿಡಲು ಪ್ರಾರಂಭವಾಗುತ್ತದೆ. ಹೂವು ಬಿಡುವವರೆಗೆ ಮರಗಳ ಲಿಂಗ ಏನೆಂದು ಹೇಳಲು ಸಾಧ್ಯವಿಲ್ಲ. ಆದಕಾರಣ ಪಪ್ಪಾಯಿ ಹೂಗಳನ್ನು ನೋಡಿ ಲಿಂಗ ಕಂಡುಹಿಡೀಯಬಹುದು.

ಹೆಣ್ಣು ಹೂವು ಗಾತ್ರದಲ್ಲಿ ದೊಡ್ಡದು ಮತ್ತು ಹಳದಿ ಬಣ್ಣದ್ದು. ಹೂವಿನಲ್ಲಿ 5 ಪುಷ್ಪ ಪತ್ರಗಳು ದಪ್ಪ ಹಾಗೂ ಮೆದುವಾಗಿರುವ 5 ದಳಗಳು ನೀಚಸ್ಥಾನದ ಅಂಡಾಶಯವೂ ಇವೆ. ಹೂ ಒಂಟಿಯಾಗಿರಬಹುದು ಅಥವಾ ಮೂರು ಹೂವುಗಳನ್ನುಳ್ಳ ಮಂಜರಿಗಳಲ್ಲಿರಬಹುದು. ಅಂಡಾಶಯ ಅಂಡಾಕಾರದ್ದು, ನಸು ಹಸುರು ಬಣ್ಣದಾಗಿರುತ್ತೆ. ಶಲಾಕಾಗ್ರ 5 ಕವಲುಗಳಿಂದ ಕೂಡಿದೆ. ಅಂಡಕೋಶದ ಒಳಗೆ ಅಸಂಖ್ಯ ಅಂಡಕಗಳುಂಟು.

ಗಂಡು ಹೂಗಳು ಹೆಣ್ಣು ಹೂಗಳಿಗಿಂತ ಚಿಕ್ಕವು ಮತ್ತು ಹಲವಾರು ಹೂಗಳನ್ನುಳ್ಳ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹೂಗೊಂಚಲುಗಳಿಗೆ ಉದ್ದ ತೊಟ್ಟುಗಳುಂಟು. ಪ್ರತಿ ಹೂವಿನಲ್ಲಿ 5 ಪುಷ್ಪ ಪತ್ರಗಳೂ 5 ದಳಗಳು 10 ಕೇಸರಗಳು ಇವೆ. ದಳಸಮೂಹ ತುತ್ತೂರಿ ಆಕಾರದ್ದು. ಕೇಸರಗಳು ದಳಸಮೂಹದ ಕಂಠಕ್ಕೆ ಅಂಟಿಕೊಂಡಿವೆ.

ದ್ವಿಲಿಂಗ ಹೂಗಳು ಗಾತ್ರ ಮತ್ತು ಆಕಾರದಲ್ಲಿ ಹೆಣ್ಣು ಹೂಗಳನ್ನು ಹೋಲುವುವು. ಈ ಹೂವಿನಲ್ಲಿ ಗಂಡು ಮತ್ತು ಹೆಣ್ಣು ಲಿಂಗಗಳೆರಡೂ ಉಂಟು. ಹೆಣ್ಣು ಹೂವಿನಿಂದ ಮೂಡುವ ಹಣ್ಣುಗಳು ಗುಂಡಾಗಿ ದಪ್ಪವಾಗಿವೆ ಆದರೆ ದ್ವಿಲಿಂಗ ಹೂಗಳಿಂದ ಬರುವ ಹಣ್ಣುಗಳು ಉದ್ದವಾದವೂ ಸಣ್ಣಗಾತ್ರದವೂ ಆಗಿ ಕೊಳವೆಯ ಆಕಾರದಲ್ಲಿರುತ್ತವೆ. ಫಲದ ದೃಷ್ಟಿಯಿಂದ ಬರಿಯ ಹೆಣ್ಣು ಹೂ ಬಿಡುವ ಮರಗಳು ಶ್ರೇಷ್ಠ.

ಶೇಕಡವಾರು ಲಿಂಗಭೇದ ಬಗೆಗಳನ್ನು ಅವಲಂಬಿಸಿದೆ. ಸಾಮಾನ್ಯವಾಗಿ ತೋಟಗಳಲ್ಲಿ ಹಣ್ಣು ಕೊಡುವ ಮರಗಳ ಪರಿಮಾಣ ಸುಮಾರು 40% ರಿಂದ 60%. ಹಲವು ಜಾತಿಯ ದ್ವಿಲಿಂಗ ಪಪ್ಪಾಯಿ ಮರಗಳು ತಮ್ಮ ಮುಂದಿನ ಪೀಳಿಗೆಯಲ್ಲಿ ದ್ವಿಲಿಂಗತನವನ್ನು ಮುಂದುವರಿಸಿಕೊಂಡು ಹೋಗುವುದು ಕಂಡುಬಂದಿದೆ. ಹಲವು ಬಾರಿ ಪಪ್ಪಾಯಿ ಮರದ ಲಿಂಗಭೇದ ಆಶ್ಚರ್ಯವನ್ನುಂಟು ಮಾಡುತ್ತದೆ. ಗಂಡು ಹೂಗಳನ್ನು ಬಿಡುವ ಮರ ಕಾಲಕ್ರಮೇಣ ಇದ್ದಕ್ಕಿದ್ದ ಹಾಗೆಯೇ ಫಲ ಕೊಡಲು ಪ್ರಾರಂಭಿಸುತ್ತದೆ. ಕೆಲವು ಹೂಗಳು ಹೆಣ್ಣು ಭಾಗವಾದ ಅಂಡಾಶಯವನ್ನು ಪಡೆಯುವುದೇ ಈ ಬದಲಾವಣೆಗೆ ಕಾರಣ. ಆದರೆ ಈ ರೀತಿಯಲ್ಲಿ ಬಿಟ್ಟ ಹಣ್ಣು ಆಕಾರದಲ್ಲಿ ವಿಚಿತ್ರವಾಗಿರುವುದು.

ಪಪ್ಪಾಯಿ ಉಷ್ಣವಲಯದ ವೃಕ್ಷ. ಇದು ಭಾರತದಲ್ಲಿ ಸಮುದ್ರಮಟ್ಟದಿಂದ ಹಿಡಿದು ಎತ್ತರವಾಗಿರುವ ಬೆಟ್ಟಪ್ರದೇಶಗಳಲ್ಲಿ ಕೂಡ ಬೆಳೆಯುತ್ತದೆ. ಇದಕ್ಕೆ ಬೇಸಿಗೆಯಲ್ಲಿ 1000 ಫ್ಯಾ. - 1100 ಫ್ಯಾ. ಉಷ್ಣತೆ ಮತ್ತು ಚಳಿಗಾಲದಲ್ಲಿ 400 ಫ್ಯಾ. ಹೆಚ್ಚು ಬಿಸಿ ಉಷ್ಣತೆ ಉತ್ಕøಷ್ಟ. ಹೆಚ್ಚು ಉಷ್ಣತೆ, ಹೆಚ್ಚು ಶೀತ, ಆಲಿಕಲ್ಲು ಮಳೆ, ಚಂಡ ಮಾರುತ ಇತ್ಯಾದಿಗಳನ್ನು ಸಹಿಸುವ ಸಾಮಥ್ರ್ಯ ಈ ಮರಕ್ಕೆ ಇಲ್ಲ. ಉತ್ತರ ಭಾರತದಲ್ಲಿ ಅತಿ ಮಳೆ, ಚಳಿ, ಬಿಸಿಲು ಮುಂತಾದವನ್ನು ತಡೆಯುವ ಏರ್ಪಾಡು ಇರುವ ಕಡೆಗಳಲ್ಲಿ ಇದರ ಬೇಸಾಯ ಮಾಡಬಹುದು.

ಜೌಗಿಲ್ಲದ ಫಲವತ್ತಾದ ಭೂಮಿಯಲ್ಲಿ ಇದನ್ನು ಬೆಳೆಯಬಹುದು. ಆಳವಾಗಿರುವ ಮತ್ತು ಫಲವತ್ತಾಗಿರುವ ಮೆಕ್ಕಲು ಮಣ್ಣು ಉತ್ತಮ. ದಕ್ಷಿಣ ಭಾರತದ ಕಪ್ಪು ಮಣ್ಣಿನಲ್ಲೂ ಪಶ್ಚಿಮಘಟ್ಟಗಳ ಜಂಬಿಟ್ಟಿಗೆ ಮಣ್ಣುಗಳಲ್ಲೂ ಇದು ಬೆಳೆಯುತ್ತದೆ. ಇದರ ಬೆಳವಣಿಗೆಗೆ ಮಣ್ಣಿನ ಆಳ ಮುಖ್ಯವಲ್ಲ, ಆದರೆ ಸುಲಭವಾಗಿ ನೀರು ಬಸಿದು ಹೊಗುವಂತದ್ದು ಭೂಮಿಯಲ್ಲಿ ಉತ್ತಮ ಗಾಳಿ ಆಡುವಂತೆ ಇರಬೇಕು. ಇದರ ಬೇರು ಭೂಮಿಯೊಳಕ್ಕೆ ಆಳವಾಗಿ ಹೋಗದೆ ಮೇಲುಭಾಗದಲ್ಲಿ ಇರುವುದರಿಂದ ಚೌಗು ಇದ್ದರೆ ಕೊಳೆತು ಹೋಗುವ ಸಂಭವ ಬಹೂ ಆಗಿರುತ್ತೆ. ಸ್ವಲ್ಪ ಚೌಗು ಇದ್ದರೂ ಮರದ ಬೆಳವಣಿಗೆ ಸರಿಯಾಗಿ ಆಗದೆ ಎಲೆಗಳು ಬಿಳಿಚಿಕೊಂಡು ಬಲಿಯುವುದಕ್ಕಿಂತ ಮುಂಚೆಯೆ ಉದುರುವುದು, ಫಲ ಕೊಡುವುದರಲ್ಲಿ ನಿಧಾನವಾಗುವುದು ಅಥವಾ ಫಲಕೊಡದೆ ಹೋಗುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುವುವು. ಜಿಗುಟು ಮಣ್ಣು ನೀರು ಬಸಿಯುವಿಕೆಗೆ ಅಡ್ಡಿಯುಂಟುಮಾಡುವುದರಿಂದ ಅಂಥ ಮಣ್ಣಿನಲ್ಲಿ ಇದರ ಬೇಸಾಯ ಸಾಧ್ಯವಿಲ್ಲ.

ಪಪ್ಪಾಯಿ ಬಗೆಗಳು

ಬದಲಾಯಿಸಿ

ಇಲ್ಲಿ ಮುಖ್ಯವಾದ ಕೆಲವು ಬಗೆಗಳನ್ನು ಮಾತ್ರ ವಿವರಿಸಲಾಗಿದೆ.

ವಾಷಿಂಗ್ಟನ್ : ಹೆಚ್ಚಿನ ಬೇಸಾಯದಲ್ಲಿರುವ ಬಗೆಗಳಲ್ಲಿ ಒಂದು. ಇದು ಸುಮಾರು 50 ವರ್ಷಕ್ಕೂ ಹೆಚ್ಚು ಕಾಲದಿಂದ ಬೇಸಾಯದಲ್ಲಿದೆ. ಇದರ ಎಳೆಯ ಕಾಂಡ, ಎಲೆಯ ತೊಟ್ಟುಗಳು ಮತ್ತು ಹಣ್ಣು ಕಡುಕೆಂಪು ಬಣ್ಣದವು. ಇದರ ಹಣ್ಣು ಉದ್ದುದ್ದವಾಗಿದ್ದು ತೊಟ್ಟಿನ ಸುತ್ತಲೂ ಕಡುಕೆಂಪು ಬಣ್ಣಕ್ಕಿರುತ್ತದೆ. ಹಣ್ಣಿನ ತಿರುಳು ಕಿತ್ತಲೆ ಬಣ್ಣದ್ದು ಮತ್ತು ಇದಕ್ಕೆ ವಿಶಿಷ್ಟ ವಾಸನೆಯುಂಟು.

ಹನಿ ಡ್ಯೂ : ಇದು ಕೂರ್ಗ್-ಹನಿ ಡ್ಯೂ ಎಂದು ಕರ್ನಾಟಕದಲ್ಲಿ ಹೆಸರುವಾಸಿಯಾಗಿದೆ. ಕೊಡಗಿನಲ್ಲಿ ಇದನ್ನು ಹೆಚ್ಚಾಗಿ ಬೆಳೆಯುವುದರಿಂದ ಈ ಹೆಸರು ಬಂದಿದೆ. ಇದು ಮಧ್ಯಮ ಗಾತ್ರದ ಮರ. ಹೂ ಗಳು ಬಿಳಿ ಬಣ್ಣದವು. ಹಣ್ಣು ಉದ್ದವಾಗಿದೆ. ತಿರುಳು ಸಿಹಿ ಮತ್ತು ತಿನ್ನಲು ಬಹಳ ಮಧುರವಾಗಿರುತ್ತದೆ. ಬೀಜಗಳ ಸಂಖ್ಯೆ ಕಡಿಮೆ. ಗುಜರಾತ್ ರಾಜ್ಯದಲ್ಲಿ ಇದಕ್ಕೆ ಮಧು ಬಿಂದು ಎಂಬ ಹೆಸರುಂಟು.

ಗುಜರಾತ್ : ಇದು ಮಧ್ಯಮ ಗಾತ್ರದ ಮರ. ಅಧಿಕ ಸಂಖ್ಯೆಯ ಫಲ ಕೊಡುತ್ತದೆ. ಎಲೆಯ ತೊಟ್ಟು ಹಸುರು ಅಥವಾ ಹಳದಿ ಮಿಶ್ರಿತ ಹಸುರು ಬಣ್ಣದ್ದು. ಹೂವಿನ ಬಣ್ಣ ಬಿಳಿ. ಹಣ್ಣು ವಾಷಿಂಗ್ಟನ್ ಬಗೆಯ ಹಣ್ಣಿಗಿಂತ ದಪ್ಪ ಮತ್ತು ಉದ್ದ. ಇತರ ಬಗೆಯ ಹಣ್ಣುಗಳಿಗಿಂತ ಸ್ವಲ್ಪ ಒಗರು ರುಚಿಯುಳ್ಳದ್ದು. ಬೀಜಗಳು ಅಸಂಖ್ಯ.

ವೃದ್ಧಿ

ಬದಲಾಯಿಸಿ

ಪಪ್ಪಾಯಿ ಮರವನ್ನು ಬೀಜಗಳಿಂದ ವೃದ್ಧಿ ಮಾಡುವುದು ಮಾತ್ರ ಬಳಕೆಯಲ್ಲಿದೆ. ನಿರ್ಲಿಂಗ ರೀತಿಯಲ್ಲಿ ವೃದ್ಧಿ ಮಾಡುವ ಸಾದ್ಯತೆ ಇದ್ದರೂ ಕೂಡ, ಈ ರೀತಿಯಲ್ಲಿ ವೃದ್ಧಿ ಮಾಡಿದ ಮರಗಳು ನಿಧಾನವಾಗಿ ಬೆಳೆದು ಕಡಿಮೆ ಫಲವನ್ನು ಕೊಡುತ್ತವೆ. ಹಾಗೂ ಫಲ ಗಾತ್ರ, ರುಚಿ, ಬಣ್ಣ ಇತ್ಯಾದಿಗಳಲ್ಲಿ ಕೆಳಮಟ್ಟದ್ದು.

ಆಯ್ದ ಬೀಜಗಳನ್ನು ಮೊದಲು ನೀರಿನಲ್ಲಿ ತೊಳೆದು ಆಮೇಲೆ ಬೂದಿಯಲ್ಲಿ ಬೆರೆಸಿ ನೆರಳಿನಲ್ಲಿ ಒಣಗಿಸುವುದು ಪದ್ಧತಿ. ಬಿತ್ತುವುದಕ್ಕೆ ಮುಂಚೆ ಗಂಜಲದಲ್ಲಿ ನೆನೆಸುವುದು ಕೆಲವು ಕಡೆಗಳಲ್ಲಿ ರೂಢೀಯಲ್ಲಿದೆ. ಹೀಗೆ ನೆನೆಸುವುದರಿಂದ ಬೀಜಗಳ ಮೊಳೆಯುವ ಸಾಮಥ್ರ್ಯ 95% ರಷ್ಟು ಹೆಚ್ಚುತ್ತದೆ ಎನ್ನಲಾಗಿದೆ. ಬೀಜಗಳ ಮೇಲಿನ ಲೋಳೆಯನ್ನು ತೆಗೆಯದೆ ಬಿತ್ತುವುದು ಉತ್ತಮವೆಂಬ ಅಭಿಪ್ರಾಯ ಉಂಟು. ಬೀಜಗಳನ್ನು ಸೆರಾಸನ್ ಅಥವಾ ಅಗ್ರಾಸಾನ್ ಬೀಜಚಿಕಿತ್ಸಾ ರಾಸಾಯನಿಕಗಳೊಂದಿಗೆ ಮಿಶ್ರ ಮಾಡುವ ಕ್ರಮವೂ ಇದೆ. ಒಣಗಿದ ಬೀಜಗಳ ಮೊಳೆಯುವ ಸಾಮಥ್ರ್ಯ ಒಂದು ವರ್ಷದವರೆಗೆ ಇರುತ್ತದೆಯಾದರೂ ತಕ್ಷಣ ನೆಡುವುದೇ ರೂಢಿಯಲ್ಲಿರುವ ಕ್ರಮ. ಹೆಚ್ಚು ದಿವಸ ಬೀಜಗಳನ್ನು ಇಡುವ ಅವಶ್ಯಕತೆ ಬಿದ್ದಾಗ ಗಾಳಿಯಾಡದಂಥ ಡಬ್ಬಗಳಲ್ಲಿ ಶೇಖರಿಸಿಡಲಾಗುತ್ತದೆ.

ಸಾಮಾನ್ಯವಾಗಿ ಎತ್ತರಿಸಿದ ಪಾತಿಗಳಲ್ಲಿ ಬೀಜಗಳನ್ನು ಸಾಲುಗಳಲ್ಲಿ 8 ಸೆಂಮೀ ಅಂತರದಲ್ಲಿ ನೆಟ್ಟು ಒಟ್ಲು ಮಾಡುತ್ತಾರೆ. ಪಾಲಿತೀನ್ ಚೀಲಗಳಲ್ಲಿ ಸಸಿಗಳನ್ನು ಬೆಳೆಯುವುದೂ ಇದೆ. ಪಪ್ಪಾಯಿ ಸಸಿಗಳು ಬಹಳ ಮೃದು, ಒಟ್ಲು ಪಾತಿಯಲ್ಲಿ ಬೆಳೆದ ಸಸಿಗಳನ್ನು ಕಿತ್ತು ತೋಟಕ್ಕೆ ಸಾಗಿಸಿ ನೆಡುವ ಹೊತ್ತಿಗೆ ಬಹು ಸಸಿಗಳು ಸತ್ತುಹೋಗುವ ಸಂಭವವುಂಟು. ಪಾಲಿತೀನ್ ಚೀಲದಲ್ಲಿ ಬೆಳೆಸಿದ ಸಸಿಗಳನ್ನು ನೆಡಲು, ಸಾಗಾಣಿಕೆ ಮಾಡಲು ಸುಲಭ. ಸಸಿಗಳು ವ್ಯರ್ಥವಾಗಿ ಸಾಯುವುದನ್ನು ತಪ್ಪಿಸಬಹುದು. ಬೀಜಗಳು ಸುಮಾರು 15-20 ದಿವಸಗಳಲ್ಲಿ ಮೊಳೆಯುತ್ತವೆ. ಬೀಜಗಳು ಸುಲಭವಾಗಿ ಮತ್ತು ಶೀಘ್ರವಾಗಿ ಮೊಳೆಯುವಂತೆ ಮಾಡಲು ನಯವಾದ ಮಣ್ಣು, ಗೊಬ್ಬರ ಮತ್ತು ಸರಿಯಾದ ಪರಿಮಾಣಗಳಲ್ಲಿ ನೀರು ಬೇಕು. ಬೀಜಗಳನ್ನು ಹೆಚ್ಚು ಆಳವಾಗಿ ಬಿತ್ತಿದರೆ ಮೊಳೆಯುವುದು ನಿಧಾನವಾಗಬಹುದು. ಕೆಲವು ಬಾರಿ ಮೊಳೆಯದೇ ಹೋಗುತ್ತವೆ. ತೋಟದಲ್ಲಿ ಸಸಿಗಳನ್ನು ನಾಟಿ ಮಾಡುವುದಕ್ಕೆ ಎರಡು ತಿಂಗಳ ಮುಂಚೆ ಬೀಜ ಮೊಳಕೆ ಬಿಡಬೇಕು. ನೆಟ್ಟ ಎರಡು ತಿಂಗಳ ಅನಂತರ ಸಸಿಗಳು ನಾಟಿಗೆ ಸಿದ್ಧವಾಗಿರುವುವು. ಒಟ್ಲು ಪಾತಿಯಲ್ಲಿರುವ ಸಸಿಗಳನ್ನು ಹೊರತೆಗೆಯುವಾಗ ಬೇರು ಮುರಿಯದೆ ಮತ್ತು ನೋವು ತಗಲದಂತೆ ಸ್ವಲ್ಪ ಮಣ್ಣಿನ ಸಮೇತ ತೆಗೆದು ಅನಂತರ ಮಧ್ಯದಲ್ಲಿ ಬೇರನ್ನು ಉಳಿಸಿ ಮಣ್ಣನ್ನು ಅಮುಕಲಾಗುತ್ತದೆ. ಪಾಲಿತೀನ ಚೀಲದಲ್ಲಿ ಬೆಳೆಸಿದ ಸಸಿಗಳನ್ನು ಅಗತ್ಯವಿದ್ದಲ್ಲಿ 3-4 ತಿಂಗಳು ಕಾಲಚೀಲಗಳಲ್ಲಿ ಉಳಿಸಬಹುದು. ಆದರೆ ಒಟ್ಲು ಪಾತಿಯಲ್ಲಿರುವ ಸಸಿಗಳನ್ನು ಮೂರು ತಿಂಗಳಿಗೂ ಹೆಚ್ಚು ಕಾಲ ಬಿಟ್ಟರೆ ಅವು ಆಳವಾಗಿ ಬೇರು ಬಿಟ್ಟು, ತೋಟದಲ್ಲಿ ನೆಡಲು ತೆಗೆಯುವಾಗ ಬೇರು ಸರಿಯಾಗಿ ಬಾರದೆ ಸಸಿಗಳು ಹಾಳಾಗುವುದುಂಟು.

ಪಪ್ಪಾಯಿಯನ್ನು ಶುದ್ಧ ಬೆಳೆಯಾಗಿ ಬೆಳೆಯುವುದು ಅಪರೂಪ. ಸಾಧಾರಣವಾಗಿ ಇದನ್ನು ಇತರ ಮುಖ್ಯ ಬೆಳೆಗಳೊಂದಿಗೆ ಮಿಶ್ರ ಬೆಳೆಯಾಗಿ ಬೇಸಾಯ ಮಾಡುವುದಿದೆ. ಮಾವು, ನಿಂಬೆ, ಕಿತ್ತಲೆ, ತರಕಾರಿ, ಎಲೆ ತೋಟಗಳ ಸುತ್ತಲೂ ಇದನ್ನು ಬೆಳೆಸುವುದುಂಟು. ಚಪ್ಪರದವರೆಯನ್ನು ಪಪ್ಪಾಯಿ ಮರದ ಪಕ್ಕಕ್ಕೆ ಬೆಳೆಸಿ ಮರಕ್ಕೆ ಹಬ್ಬಿಸುವುದು ಕೆಲವು ಕಡೆಗಳಲ್ಲಿ ರೂಢಿಯಲ್ಲಿದೆ.

ಪಪ್ಪಾಯಿ ಸಸಿಗಳನ್ನು ಮುಂಗಾರು ಮಳೆ ಪ್ರಾರಂಭದಲ್ಲಿ ನೆಡುವುದು ವಾಡಿಕೆ. ಬೇಸಿಗೆ ಕಾಲದಲ್ಲಿ ನೆಟ್ಟ ಸಸಿಗಳು ಬಿಸಿಲಿನ ತಾಪವನ್ನು ತಾಳಲಾರದೆ ಸತ್ತು ಹೋಗುತ್ತವೆ. ಕರ್ನಾಟಕದಲ್ಲಿ ಜೂನ್ ತಿಂಗಳಿಂದ ಅಕ್ಟೋಬರ ತಿಂಗಳವರೆಗೆ ನೆಡುವ ಕ್ರಮ ಇದೆ. ನೆಡುವ ಕಾಲ ಇಳುವರಿಯ ಮೇಲೆ ನೇರವಾದ ಪರಿಣಾಮವನ್ನು ಉಂಟುಮಾಡುತ್ತದೆ. ಜೂನ ತಿಂಗಳಲ್ಲಿ ನೆಟ್ಟ ಸಸಿಗಳು ತಮ್ಮ ಸಣ್ಣ ವಯಸ್ಸಿನಲ್ಲಿ ಯಥೇಚ್ಛವಾದ ಭೂಮಿಯ ತೇವಾಂಶ ಮತ್ತು ತಂಪಾದ ಹವಾಗುಣದ ಲಾಭವನ್ನು ಪಡೆದು ಶೀಘ್ರವಾಗಿ ಬೆಳೆದು ಫಲವನ್ನು ಕೊಡುತ್ತವೆ. ಈ ಕಾಲದಲ್ಲಿ ಲಭಿಸುವ ದೀರ್ಘಾವಧಿಯ ಭೂಮಿಯ ತೇವಾಂಶ ಮತ್ತು ತಂಪಾದ ಹವಾಗುಣ ಮರವನ್ನು ದಷ್ಟಪುಷ್ಟವಾಗಿ ಬೆಳೆಸುವುದರಿಂದ ಬೇಸಿಗೆ ಉರಿಬಿಸಿಲನ್ನು ಎದುರಿಸುವುದಲ್ಲಿ ಇವು ಯಶಸ್ವಿಯಾಗುತ್ತವೆ.[]

ಪಪ್ಪಾಯಿ ಸಸಿಗಳನ್ನು ಸಾಲಿನಿಂದ ಸಾಲಿಗೆ ಗಿಡದಿಂದ ಗಿಡಕ್ಕೆ 2.5-3 ಮೀಟರ್ ಅಂತರವಿರುವಂತೆ 1 ( 1 ( 1 ಮೀಟರ್ ಗುಂಡಿಗಳಲ್ಲಿ ನಾಟಿ ಮಾಡಲಾಗುತ್ತದೆ. ನಾಟಿ ಮಾಡುವ ಮುನ್ನ ಗೊಬ್ಬರ ಮಿಶ್ರಿತ ಮಣ್ಣನ್ನು ತುಂಬಿ, ಮಣ್ಣನ್ನು ಸಡಿಲಿಸಲಾಗುತ್ತದೆ. ಸಸಿ ನೆಟ್ಟಗೆ ನಿಲ್ಲುವಂತೆ ನೋಡಿಕೊಳ್ಳಲಾಗುತ್ತದೆ.

ಸಸಿಗಳ ಲಿಂಗವನ್ನು ನಿರ್ಧರಿಸುವುದು ಸಾಧ್ಯವಿಲ್ಲದೆ ಇರುವುದರಿಂದ ಒಂದು ಗುಂಡಿಯಲ್ಲಿ ಎರಡು ಸಸಿಗಳನ್ನು ನೆಟ್ಟು ಮುಂದೆ ಫಲ ಬಿಡುವ ಮರವನ್ನು ಉಳಿಸಿಕೊಂಡು ಮಿಕ್ಕುದನ್ನು ತೆಗೆಯಬಹುದು. ಸಸಿಗಳನ್ನು ನೆಟ್ಟ ಮೇಲೆ ಅವು ಮತ್ತೆ ಚಿಗುರುವವರೆಗೆ ಪ್ರತಿನಿತ್ಯ ನೀರು ಹಾಕಬೇಕು. ಹಲವು ಸಾರಿ ಹೆಚ್ಚು ತೇವವಿದ್ದರೂ ಸಸಿಗಳು ಜೋಲು ಬೀಳುತ್ತವೆ. ಭೂಮಿಯ ತೇವವನ್ನು ಅನುಸರಿಸಿ ನೀರು ಹಾಕಬೇಕು. ಸಸಿಗಳನ್ನು ನಾಟಿ ಮಾಡುವ ಬದಲು ಬೀಜಗಳನ್ನು ನೇರವಾಗಿ ಗುಂಡಿಗಳಲ್ಲಿ ನೆಡುವ ಪದ್ಧತಿ ಕೂಡ ಕೆಲವೆಡೆ ರೂಢಿಯಲ್ಲಿದೆ.

ಪಪ್ಪಾಯಿಗೆ ಯಥೇಚ್ಛ ನೀರು ಅಗತ್ಯ. ಮಳೆ ಮತ್ತು ಚಳಿಗಾಲದಲ್ಲಿ 10 ದಿವಸಗಳಿಗೆ ಒಮ್ಮೆ ಬೇಸಿಗೆ ಕಾಲದಲ್ಲಿ 6-7 ದಿವಸಗಳಿಗೊಮ್ಮೆ ನೀರು ಹಾಯಿಸಲಾಗುತ್ತದೆ.

ಪಪ್ಪಾಯಿ ಮರ ಬಹುವಾರ್ಷಿಕ ಬಗೆಯದು. ಆದ್ದರಿಂದ ಇದಕ್ಕೆ ಗೊಬ್ಬರದ ಅಗತ್ಯ ಬಹಳ ಉಂಟು. ವರ್ಷಕ್ಕೆ ಎರಡು ಬಾರಿ ಗೊಬ್ಬರ ಕೊಡುವುವು ರೂಢಿಯಲ್ಲಿದೆ. ಮೊದಲನೆ ಸಲಕೊಡುವುವು ಮಳೆಗಾಲದ ಪ್ರಾರಂಭ, ಮೇ-ಜೂನ್ ತಿಂಗಳಲ್ಲಿ. ಎರಡನೆ ಸಲಕೊಡುವುದು ನವೆಂಬರ್-ಡಿಸೆಂಬರ್ ತಿಂಗಳಲ್ಲಿ. ಪ್ರತಿ ಬಾರಿಯೂ ಮರ ಒಂದಕ್ಕೆ 2.5 ಕೆಜಿ ಕೊಟ್ಟಿಗೆ ಗೊಬ್ಬರ, 1 ಕೆಜಿ ಹರಳು ಹಿಂಡಿ ಹಾಕಲಾಗುತ್ತದೆ. ಉತ್ತರ ಭಾರತದಲ್ಲಿ ಪರಂಗಿ ಮರಕ್ಕೆ ಗೊಬ್ಬರ ಕೊಡುವ ಕಾಲದಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಮೊದಲನೆಯ ಸಲ ಜುಲೈ-ಆಗಸ್ಟ್, ಎರಡನೆಯ ಸಲ ಫೆಬ್ರವರಿ-ಮಾರಚ ತಿಂಗಳಲ್ಲಿ ಗೊಬ್ಬರವನ್ನು ಮರದ ಸುತ್ತಲೂ ಹಾಕಿ, ಗುದ್ದಲಿಯಿಂದ ಕೆದಕಿ ಮಣ್ಣಿನಲ್ಲಿ ಮಿಶ್ರಣ ಮಾಡುತ್ತಾರೆ.

ನೀರಾವರಿಯಲ್ಲಿ ಬೆಳೆಸಿದರೆ ಮಣ್ಣು ಕಚ್ಚಿಕೊಳ್ಳುವ ಸಂಭವವುಂಟು. ಇದರಿಂದ ಮೇಲುಭಾಗ ಗಟ್ಟಿಯಾಗಿ ಸರಾಗವಾಗಿ ಗಾಳಿಯಾಡುವುದಕ್ಕೆ ತಡೆಯುಂಟಾಗಬಹುದು. ಆದ್ದರಿಂದ ನಾಲ್ಕು ಸಾರಿ ನೀರು ಹಾಯಿಸಿದ ಮೇಲೆ ಪಾತಿಯಲ್ಲಿರುವ ಕಳೆಯನ್ನು ತೆಗೆದು ಗುದ್ದಲಿಯಿಂದ ಕೆದಕುವುದು ಒಳ್ಳೆಯದು. ವರ್ಷಕ್ಕೆ ಎರಡು ಸಾರಿ ತೋಟವನ್ನು ಉತ್ತು ಹಲುಬೆ ಹೊಡೆಯುವುದು ಉತ್ತಮ.

ಪಪ್ಪಾಯಿ ಮರ ಬೇಗ ಫಲ ಕೊಡುವ ಹಣ್ಣಿನಮರವೆಂದು ಪ್ರಖ್ಯಾತವಾಗಿದೆ. ಇದು ನೆಟ್ಟ ಅನಂತರ 8 ತಿಂಗಳಿಗೆ ಹೂವು ಬಿಟ್ಟು, ಹೂ ಬಿಟ್ಟ 3-4 ತಿಂಗಳಿಗೆ ಹಣ್ಣು ಕೊಡುತ್ತವೆ. ಇಳುವರಿ ಸುಮಾರು 4- ವರ್ಷ ಲಾಭದಾಯಕವಾಗಿದ್ದು ಕ್ರಮೇಣ ಕಡಿಮೆಯಾಗುತ್ತದೆ.

ಪಪ್ಪಾಯಿ ಹಣ್ಣು ಸಿಹಿ ಮತ್ತು ಮಾಧುರ್ಯಕ್ಕೆ ಹೆಸರಾಗಿದೆ. ಇದರಲ್ಲಿ ಪಪೇಯಿನ್ ಎಂಬ ಕಿಣ್ವವಿರುವುದರಿಂದ ಆಹಾರ ಜೀರ್ಣ ಮಾಡಲು ಬಲೂ ಒಳ್ಳೆಯದು ಎಂದು ಪ್ರಸಿದ್ಧವಾಗಿದೆ. ಇದರಲ್ಲಿ 89.6% ತೇವಾಂಶ; 0.5% ವಿಟಮಿನ್ನುಗಳು; 9.5% ಶರ್ಕರಪಿಷ್ಟಗಳು; 0.4% ಲವಣಾಂಶ; 0.01% ಸುಣ್ಣ; 0.01% ರಂಜಕ ಇವೆಯಲ್ಲದೆ ಪ್ರತೀ ನೂರು ಗ್ರಾಮಿನಲ್ಲಿ 0.4 ಮಿಲಿಗ್ರಾಮ ಕಬ್ಬಿಣ ಇದೆ. ಜೊತೆಗೆ ಹಲವು ವಿಧವಾದ ಸಕ್ಕರೆಗಳು, ಆಮ್ಲಗಳು ಇವೆ. ಕಾಯಿ ಮತ್ತು ಹಣ್ಣುಗಳಲ್ಲಿ ಪೆಕ್ಟಿನ ಇದೆ. ಎ ಮತ್ತು ಸಿ ವಿಟಮಿನ್ ಮತ್ತು ಕೆರೊಟಿನ್ ಅಂಶಗಳೂ ಉಂಟು.ಪಪ್ಪಾಯಿ ಕಾಯೀಗಳಲ್ಲಿ ಹೆಚ್ಚೀನ ಸಿ ವಿಟಮಿನ್ ಇದೆ ಮತ್ತು ಹಣ್ಣಿನಲ್ಲಿ ಅದರ ಪ್ರಮಾಣ ಕಡಿಮೆ.

ರೋಗಗಳು

ಬದಲಾಯಿಸಿ

ಪಪ್ಪಾಯಿಗೆ ಹಲವು ತರಹದ ರೋಗಗಳು ಬರುವುದುಂಟು. ಮುಖ್ಯವಾದವು ಇವು:

1) ಕಾಂಡ ಕೊಳೆತ : ಇದು ಶಿಲೀಂಧ್ರ ರೋಗ. ಸರಿಯಾಗಿ ಜೌಗು ಕಾಲುವೆ ವ್ಯವಸ್ಥೆ ಇಲ್ಲದೆ ಇದ್ದಾಗ ಇದು ಕಾಣಿಸಿಕೊಳ್ಳುತ್ತದೆ. ಕಾಂಡ ನೆಲಕ್ಕೆ ಸೇರಿರುವ ಭಾಗದಲ್ಲಿ ತೇವ ಕಾಣುವುವು ಈ ರೋಗದ ಮೊದಲ ಸೂಚನೆ. ಅನಂತರ ಕೊಳೆಯುವಿಕೆ ಪ್ರಾರಂಭವಾಗುತ್ತದೆ. ಕಾಂಡದ ಬುಡ ಮೊದಲು ಮೃದುಗೊಂಡು ಆಮೇಲೆ ಬಿರುಕು ಬಿಡುತ್ತದೆ. ಈ ಬಿರುಕುಗಳಿಂದ ದುರ್ವಾಸನಾಯುಕ್ತ ದ್ರಾವಣ ಹೊರಬಂದು ಸುತ್ತಲು ಕೆಟ್ಟವಾಸನೆ ವ್ಯಾಪಿಸುತ್ತದೆ. ಕೊಳೆಯುವಿಕೆ ಮುಂದುವರಿದು ಹೆಚ್ಚಾಗಿ ಕೊಳೆತು ಹೋದಾಗ ಮರ ಬಿದ್ದುಹೋಗುತ್ತದೆ.[]

ಈ ರೋಗ ಕಂಡಕೂಡಲೆ ಸರಿಯಾಗಿ ನೀರು ಬಸಿದುಹೋಗುವಂತೆ ಜೌಗುಕಾಲುವೆಗಳನ್ನು ರಚಿಸಿ ರೋಗಪೀಡಿತ ಭಾಗವನ್ನು ಕೊರೆದು ಹಾಕಿ ಟಾರ್ ಬಳಿಯಬೇಕು. ಹೆಚ್ಚು ರೋಗಪೀಡಿತ ಮರಗಳನ್ನು ತೆಗೆದುಹಾಕಿ ಸುಡುವುದು ಉತ್ತಮ.

2) ಆಂತ್ರಕ್ನೋಸ್ : ಇದು ಕೂಡ ಶಿಲೀಂಧ್ರಗಳಿಂದ ಬರುವ ರೋಗ. ಕಾಯಿ, ಹಣ್ಣು ಮತ್ತು ಕಾಂಡಗಳು ಈ ರೋಗಕ್ಕೆ ತುತ್ತಾಗುತ್ತವೆ. ಕಾಯಿ ಅಥವಾ ಹಣ್ಣಿನಲ್ಲಿ ಮೊದಲು ಹಳದಿಯ ಕಲೆಗಳು ಕಾಣಿಸಿಕೊಂಡು ಇವು ಕ್ರಮೇಣ ಕಂದುಬಣ್ಣಕ್ಕೆ ತಿರುಗಿ ಹಣ್ಣು ಮೃದುಗೊಂಡು ಕೊಳೆತು ಹೋಗುತ್ತದೆ. ಈ ರೋಗ ವಯಸ್ಸಾದ ಮರಗಳಿಗೆ ಬರುವುದು ಅಧಿಕ.[]

ಸಾಧ್ಯವಾದಲ್ಲಿ ಮರಗಳಿಗೆ ನೆರಳು ಕೊಡುವ ವ್ಯವಸ್ಥೆ ಮಾಡಬೇಕು. ಬೋರ್ಡೋ ದ್ರಾವಣವನ್ನು ಸಿಂಪಡಿಸುವುದರಿಂದ ಇದನ್ನು ತಡೆಯಬಹುದು.

3. ನಂಜುರೋಗ (ವೈರಸ್ ಮೊಸೇಕ್) : ಈ ರೋಗ ಮೊದಲಬಾರಿ ಫಲ ಬಿಟ್ಟ ತರುವಾಯ ಬರುತ್ತದೆ. ಏಫಿಸ್ ಕೀಟಗಳು ಈ ರೋಗವನ್ನು ಹರಡುವುವು. ರೋಗದಿಂದ ನರಳುವ ಮರಗಳ ಬೆಳವಣಿಗೆ ನಿಂತುಹೋಗುತ್ತದೆ. ಎಲೆಗಳು ಮದುರಿಕೊಂಡು, ಒರಟಾಗಿ ಬಟ್ಟಲಿನ ಆಕಾರವನ್ನು ತಳೆಯುವುವು. ರೋಗಪೀಡಿತ ಎಲೆಗಳ ಮೇಲೆ ಹಳದಿ ಬಣ್ಣದ ಮಚ್ಚೆಗಳು ಮೂಡಿ ಕಾಲಕ್ರಮೇಣ ಅಗಲವಾಗಿ ಹಸುರುಬಣ್ಣಕ್ಕೆ ತಿರುಗುತ್ತವೆ. ಮರ ಈ ಸ್ಥಿತಿಯಲ್ಲಿ 2-3 ತಿಂಗಳು ಇದ್ದು ಅನಂತರ ಸಾಯುತ್ತದೆ. ನಂಜು ರೋಗದಿಂದ ನರಳಿ ಸತ್ತ ಪಪ್ಪಾಯಿ ಮರದ ಅವಶೇಷಗಳು ತೋಟದಲ್ಲಿ ಉಳಿದ ಕ್ರಮೇಣ ಆರೋಗ್ಯವಾಗಿರುವ ಮರಗಳಿಗೆ ಸೋಕಿದರೆ ಅಂಥ ಮರಕ್ಕೂ ನಂಜುರೋಗ ಬರುತ್ತದೆ.[]

ನಂಜು ರೋಗವನ್ನು ಹರಡಲು ಮೂಲಕಾರಣವಾದ ಏಫಿಸ್ ಹುಳುಗಳನ್ನು ಕ್ರಿಮಿ ನಾಶಕಗಳಿಂದ ನಾಶ ಮಾಡುವುದು, ನಂಜುರೋಗದ ಖಚಿತ ಸೂಚನೆ ಕಂಡು ಬಂದ ತಕ್ಷಣ ಮರವನ್ನು ಕಡಿದು ಹಾಕಿ ಸುಡುವುದು, ನಂಜುರೋಗ ಅತಿಯಾದರೆ ಎಲ್ಲ ಮರಗಳನ್ನೂ ಕತ್ತರಿಸಿಹಾಕಿ ಹತ್ತಿ, ಬದನೆ, ಸೌತೆ, ಕುಂಬಳ ಇತ್ಯಾದಿ ಬೆಳೆಯಲು ಪ್ರಾರಂಭಿಸಿ, 1-2 ವರ್ಷ ಇದರ ಬೇಸಾಯವನ್ನು ನಿಲ್ಲಿಸುವುದು ನಂಜು ರೋಗದ ಹತೋಟಿಯ ಕ್ರಮಗಳು.

ಪಪ್ಪಾಯಿ ಮರಗಳಿಗೆ ಯಾವ ಕೀಟದ ಹಾವಳಿಯೂ ಕಂಡುಬಂದಿಲ್ಲ.

ಮಾಗಿದ ಪಪ್ಪಾಯಿ ಹಣ್ಣುಗಳನ್ನು ಹಲವಾರು ಬಗೆಗಳಲ್ಲಿ ತಿನ್ನುವುದು ಪರಿಚಿತ. ತಂಪುಪಾನೀಯ, ಜಾಮ್, ಐಸ್‍ಕ್ರೀಮ್, ಸಿರಪ್ ಮುಂತಾದವುಗಳಲ್ಲೂ ಇದನ್ನು ಬಳಸುವುದಿದೆ. ಕಾಯಿಯನ್ನು ತರಕಾರಿಯಾಗಿ ಉಪಯೋಗಿಸಬಹುದು. ಇದು ಉತ್ತಮ ಜೀರ್ಣಕಾರಿ ಎಂದು ಪ್ರಸಿದ್ಧವಾಗಿದೆ. ಇದಕ್ಕೆ ಕಾರಣ ಇದರಲ್ಲಿರುವ ಪಪೇಯಿನ್ ಎಂಬ ಕಿಣ್ವ. ಹಣ್ಣುಗಳಿಗಿಂತ ಕಾಯಿಗಳಲ್ಲಿ ಹೆಚ್ಚು ಮೊತ್ತದಲ್ಲಿರುವ ಈ ಕಿಣ್ವ ಕಾಯಿಗಳ ಹಾಲ್ನೊರೆಯಲ್ಲಿ ವಿಪುಲವಾಗಿದೆ. ಇದೊಂದು ಪ್ರೊಟೀನ್ ವಿಶ್ಲೇಷಕ ಕಿಣ್ವ. ಪೆಪ್ಸಿನ್ ಕಿಣ್ವದಂತೆ ಕಾರ್ಯ ನಿರ್ವಹಿಸುತ್ತದೆ. ಇದನ್ನು ಮಾಂಸ ಮೃದುಗೊಳಿಸಲು ಬಳಸಲಾಗುತ್ತದೆ. ಚೂಯಿಂಗ್ ಗಮ್, ಅಲಂಕರಣ ಸಾಮಗ್ರಿಗಳು, ಚರ್ಮ ಹದಗಾರಿಕೆ, ಜೀರ್ಣಕಾರಿ ಔಷಧಿ ತಯಾರಿಕೆ, ಸ್ವಾಭಾವಿಕ ರೇಷ್ಮೆಯ ಅಂಟುಪದಾರ್ಥವನ್ನು ತೆಗೆಯುವುದಕ್ಕೆ ಇದನ್ನು ಉಪಯೋಗಿಸುವುದುಂಟು. ಜಾವದಲ್ಲಿ ಪಪ್ಪಾಯಿಯ ಹೂಗಳಿಂದ ಸಿಹಿಭಕ್ಷ್ಯವನ್ನು ತಯಾರಿಸುವರು. ಇದರ ಬೀಜಗಳನ್ನು ಕೆಲವೆಡೆ ಜಂತುನಾಶಕವಾಗಿಯೂ ಮೈಯಿಳಿತಕಾರಕವಾಗಿಯೂ ಬಳಸುವುದಿದೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:



"https://kn.wikipedia.org/w/index.php?title=ಪಪ್ಪಾಯಿ&oldid=1258850" ಇಂದ ಪಡೆಯಲ್ಪಟ್ಟಿದೆ