ಪಂಚಾನನ ಮಹೇಶ್ವರಿ (1904-66)[೧] ಒಬ್ಬ ಪ್ರಸಿದ್ಧ ಸಸ್ಯವಿಜ್ಞಾನಿ.

ಪಂಚಾನನ ಮಹೇಶ್ವರಿ

ಬಾಲ್ಯ, ವಿದ್ಯಾಭ್ಯಾಸ ಬದಲಾಯಿಸಿ

ರಾಜಸ್ಥಾನದ ಜೈಪುರದಲ್ಲಿ 1904 ನವೆಂಬರ್ 9ರಂದು ಜನನ. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಜೈಪುರದಲ್ಲೇ ನಡೆಯಿತು. ತರುವಾಯ ಅಲಹಾಬಾದಿನ ಎವಿಂಗ್ ಕ್ರಿಶ್ಚಿಯನ್ ಕಾಲೇಜು ಸೇರಿ, ಇಂಟರ್‌ಮೀಡಿಯಟ್ (1923), ಬಿ.ಎಸ್ಸಿ (1925) ಪದವಿ ಪಡೆದರು. ತರುವಾಯ ಅಲಹಾಬಾದ್ ವಿಶ್ವವಿದ್ಯಾಲಯದಲ್ಲೇ ಶಿಕ್ಷಣ ಮುಂದುವರಿಸಿ ಎಂ.ಎಸ್ಸಿ (1927), ಡಿ. ಎಸ್ಸಿ (1931) ಪದವಿಗಳನ್ನು ಪಡೆದರು. ಇವರು ಡಾಕ್ಟರೇಟ್ ಪದವಿಗಾಗಿ ಸಂಶೋಧನೆ ನಡೆಸಿದ್ದು ಅಮೆರಿಕೆಯ ಪ್ರತಿಭಾವಂತ ಹಾಗೂ ಪ್ರಸಿದ್ಧ ಸಸ್ಯವಿಜ್ಞಾನಿ ಎನ್ ಫೀಲ್ಡ್ ಡಡ್‌ಜನ್ ಅವರ ಮಾರ್ಗದರ್ಶನದಲ್ಲಿ. ಸಂಶೋಧನೆಗೆ ಅರಿಸಿಕೊಂಡ ವಿಷಯ ಕೆಲವು ಆವೃತಬೀಜ ಸಸ್ಯಗಳ ರಚನೆ, ಕ್ರಿಯೆ ಮತ್ತು ಭ್ರೂಣ ವಿಜ್ಞಾನ.[೨][೩]

ವೃತ್ತಿ ಬದಲಾಯಿಸಿ

ತಾವು ಶಿಕ್ಷಣ ಪಡೆದ ಎವಿಂಗ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿದರು (1928). ಸಂಶೋಧನ ಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಒಪ್ಪಿಸಿದ ಬಳಿಕ (1930) ಆಗ್ರದ ಆಗ್ರ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿ ತಮ್ಮ ಮೊದಲ ಯೂರೋಪ್ ಪ್ರವಾಸ ಕೈಗೊಳ್ಳುವ ವೇಳೆಗೆ (1936) ಸಹಪ್ರಾಧ್ಯಾಪಕರಾಗಿದ್ದರು. ವಿದೇಶ ಪ್ರವಾಸದ ತರುವಾಯ ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ನೇಮಕಗೊಂಡರು. (1037-39). ಸ್ವಲ್ಪಕಾಲ ಲಕ್ನೋ ವಿಶ್ವವಿದ್ಯಾಲಯದಲ್ಲೂ ಕಾರ್ಯ ನಿರ್ವಹಿಸಿದರು (ಜುಲೈ-ಸೆಪ್ಟಂಬರ್ 1939). ತರುವಾಯ ಢಾಕಾ ವಿಶ್ವವಿದ್ಯಾಲಯದಲ್ಲಿ ಉಪಪ್ರಾಧ್ಯಾಪಕರಾಗಿ ಮತ್ತು ಜೀವವಿಜ್ಞಾನ ಇಲಾಖೆಯ ಮುಖ್ಯಸ್ಥರಾಗಿ 1939 ನವೆಂಬರ್ ತಿಂಗಳಲ್ಲಿ ನೇಮಕಗೊಂಡರು. 1945ರಲ್ಲಿ ಯೂರೋಪ್ ಮತ್ತು ಅಮೆರಿಕ ಪ್ರವಾಸ ಕೈಗೊಂಡು 1947ರಲ್ಲಿ ಹಿಂದಿರುಗಿದ ತರುವಾಯ ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ಪಡೆದರು. ವಿಜ್ಞಾನ ವಿಭಾಗದ ಡೀನ ಆಗಿಯೂ ಕೆಲಸ ಮಾಡಿದರು. ಇವರು 1939ರಲ್ಲಿ ಢಾಕಾದಲ್ಲಿ ಜೀವವಿಜ್ಞಾನದಲ್ಲಿ ಬಿ.ಎಸ್ಸಿ., 1947ರಲ್ಲಿ ಸಸ್ಯವಿಜ್ಞಾನದಲ್ಲಿ ಸ್ನಾತಕೋತ್ತರ ತರಗತಿಗಳನ್ನು ಆರಂಭಿಸಿದರು. ಅನಂತರ ದೆಹಲಿ ವಿಶ್ವವಿದ್ಯಾಲಯದ ಕುಲಪತಿ ಸರ್‌ಮೌರಿಸ್‌ಗ್ವೈರ್ ಅವರ ಆಹ್ವಾನ ಸ್ವೀಕರಿಸಿ ಮಾರ್ಚ್ 1949ರಲ್ಲಿ ಸಸ್ಯವಿಜ್ಞಾನ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾದರು.

ಇವರು ಸಮರ್ಥ ಪ್ರಾಧ್ಯಾಪಕ, ಪ್ರಸಿದ್ಧ ಸಂಶೋಧಕ; ಉಪನ್ಯಾಸಗಳನ್ನು ನೀಡಲು ಸಂದರ್ಶಕ ಪ್ರಾಧ್ಯಾಪಕರಾಗಿ ವಿದೇಶಗಳಿಗೆ ಹಲವು ಬಾರಿ ಭೇಟಿ ನೀಡಿದ್ದ ಪ್ರತಿಭಾವಂತ ವಿಜ್ಞಾನಿ. ಆವೃತಬೀಜ, ನಗ್ನಬೀಜ-ಸಸ್ಯಗಳ ರಚನೆ, ಕ್ರಿಯೆ, ಭ್ರೂಣ ವಿಜ್ಞಾನ, ವೈಕಾಸಿಕ ಮತ್ತು ಪ್ರಾಯೋಗಿಕ ಭ್ರೂಣವಿಜ್ಞಾನ ಇವುಗಳಿಗೆ ಸಂಬಂಧಿಸಿದ ಇವರ ಸಂಶೋಧನ ಬರೆಹಗಳೂ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿವೆ. ಇವರ ಉಪನ್ಯಾಸಗಳನ್ನು ಕೇಳಲು, ಇವರ ಮಾರ್ಗದರ್ಶನದಲ್ಲಿ ಸಂಶೋದನೆ ನಡೆಸಲು ಅಧ್ಯಾಪಕರು ವಿದ್ಯಾರ್ಥಿಗಳು ಹಾತೊರೆಯುತ್ತಿದ್ದರು. ಭಾರತದಲ್ಲಿ ಸಸ್ಯವಿಜ್ಞಾನ ಸಂಶೋಧನೆ, ಶಿಕ್ಷಣಗಳ ಅಭಿವೃದ್ಧಿಗೆ ಇವರು ನೀಡಿದ ಕೊಡುಗೆ ಅಪಾರ. ಇವರ ಕೈಕೆಳಗೆ ನುರಿತ ಸಂಶೋಧಕರು, ಅಧ್ಯಾಪಕರು ಇಂದು ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ ವಿಜ್ಞಾನಿಗಳೆನಿಸಿದ್ದಾರೆ.

ಗೌರವಗಳು, ಪ್ರಶಸ್ತಿಗಳು ಬದಲಾಯಿಸಿ

ಇವರಿಗೆ ದೇಶ ವಿದೇಶಗಳಲ್ಲಿ ಸಂದ ಗೌರವಗಳು ಪ್ರಶಸ್ತಿಗಳು ಅನೇಕ. ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್‍ನ ಫೆಲೊ (1934), ನ್ಯಾಷನಲ್ ಇನ್‌ಸ್ಟಿಟೂಟ್ ಆಫ್ ಸೈನ್ಸಸ್ ಆಫ್ ಇಂಡಿಯಾದ ಫೆಲೊ (1935). ಅಮೆರಿಕನ್ ಬಟಾನಿಕಲ್ ಸೊಸೈಟಿಯ ಸದಸ್ಯತ್ವ ಮತ್ತು ಅಮೆರಿಕನ್ ಅಕಾಡಮಿ ಆಫ್ ಆರ್ಟ್ಸ್ ಅಂಡ್ ಸೈನ್ಸಸ್‌ನ ಗೌರವ ವಿದೇಶೀ ಫೆಲೊ (1947). ಜರ್ಮನಿಯ ಹಾಲೆಯಲ್ಲಿಯ ಅಕಾಡೆಮಿಯ ವಿದೇಶೀ ಸದಸ್ಯತ್ವ (1959), ಮಾಂಟ್ರೆಯಲ್ ಮ್ಯಾಕ್‌ಗಿಲ್ ವಿಶ್ವವಿದ್ಯಾಲಯದ ಗೌರವ ಡಾಕ್ಟೊರೇಟ್ ಪದವಿ (1959) ರಾಯಲ್ ಸೊಸೈಟಿಯ ಫೆಲೋ (1965) ಇತ್ಯಾದಿ.

ಸಸ್ಯವಿಜ್ಞಾನಕ್ಕೆ ಇವರು ನೀಡಿದ ಕೊಡುಗೆಗಾಗಿ ಇಂಡಿಯನ್ ಬಟಾನಿಕಲ್ ಸೊಸೈಟಿಯ ಬೀರ್‌ಬಲ್ ಸಾಹ್ನಿ ಪದಕವೂ ದೊರಕಿದೆ.[೪]

ನಿಧನ ಬದಲಾಯಿಸಿ

1965ರಲ್ಲಿ ಆಸ್ಟ್ರೇಲಿಯದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಗಳನ್ನು ನೀಡಿ ಭಾರತಕ್ಕೆ ಹಿಂತಿರುಗಿದ  ತರುವಾಯ ಇವರ ಆರೋಗ್ಯ ಹದಗೆಟ್ಟಿತು. ಜೈಪುರದಲ್ಲಿ ನಡೆಯಲಿದ್ದ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಸಭೆಯ (1967) ಅಧ್ಯಕ್ಷತೆ ವಹಿಸಬೇಕಾಗಿದ್ದ ಇವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ವಿಶೇಷ ವೈದ್ಯಕೀಯ ಶುಶ್ರೂಷೆ ನಡೆದರೂ ಫಲಕಾರಿಯಾಗದೆ 1966 ಏಪ್ರಿಲ್ ತಿಂಗಳಲ್ಲಿ ನಿಧನರಾದರು.

ಉಲ್ಲೇಖಗಳು ಬದಲಾಯಿಸಿ

  1. Steward, F. C. (1967). "Panchanan Maheshwari 1904-1966". Biographical Memoirs of Fellows of the Royal Society. 13: 256–266. doi:10.1098/rsbm.1967.0013.
  2. Maheshwari, Nirmala (25 December 2004). "Remembering Panchanan Maheshwari, an eminent botanist of the twentieth century" (PDF). Current Science. 87 (12). Archived from the original (PDF) on 4 ಮಾರ್ಚ್ 2016. Retrieved 28 ಏಪ್ರಿಲ್ 2023.
  3. Gupta, Arvind. "Panchanan Maheshwari (1904 - 1966)" (PDF). Retrieved 16 January 2014.
  4. "BIRBAL SAHNI MEDAL". Archived from the original on 21 ಅಕ್ಟೋಬರ್ 2013. Retrieved 17 ಜನವರಿ 2014.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: