ನಗ್ನಬೀಜ ಸಸ್ಯಗಳು
ನಗ್ನಬೀಜ ಸಸ್ಯಗಳು - ಬೀಜಸಸ್ಯಗಳ ಒಂದು ಪ್ರಮುಖ ಗುಂಪು (ಜಿಮ್ನೋಸ್ಪರ್ಮ್, ). ಇವು ಕಾಗದ, ಅಂಟು ಮತ್ತು ದಿಮ್ಮಿಗಳಾಗಿ ಬಹು ಉಪಕಾರಿಯಾಗಿವೆ.
ವರ್ಗೀಕರಣಸಂಪಾದಿಸಿ
ಬೀಜಸಸ್ಯಗಳನ್ನು ಸಾಮಾನ್ಯವಾಗಿ ನಗ್ನಬೀಜಸಸ್ಯಗಳು ಮತ್ತು ಆವೃತಬೀಜಸಸ್ಯಗಳು ಎಂಬ ಎರಡು ಪ್ರಧಾನ ಗುಂಪುಗಳನ್ನಾಗಿ ವರ್ಗೀಕರಿಸಲಾಗಿದೆ. ಆವೃತಬೀಜಸಸ್ಯಗಳಲ್ಲಿ ಅಂಡಕಗಳು ಅಂಡಾಶಯದಿಂದ ಆವೃತಗೊಂಡಿರುತ್ತವೆ. ಆದರೆ ನಗ್ನಬೀಜಸಸ್ಯಗಳಲ್ಲಿ ಅಂಡಕಗಳು ಈ ರೀತಿ ಆವೃತವಾಗಿರದೆ ಬಹಿರಂಗವಾಗಿರುತ್ತವೆ.[೧] ಮೇಲಿನ ಅಂಶ ಇವೆರಡು ಗುಂಪುಗಳ ನಡುವಣ ಒಂದು ಉತ್ತಮ ವ್ಯತ್ಯಾಸವಾಗಿದೆಯಾದರೂ, ಕೆಲವು ನಗ್ನಬೀಜಸಸ್ಯಗಳ ಶಂಕುಗಳಲ್ಲಿನ ಬೀಜಗಳು ಪಟ್ಟೆಗಳ ನಡುವೆ ಮುಚ್ಚಿಹೋಗಿರುತ್ತವೆ, ಇಲ್ಲವೆ ಆಳವಾಗಿ ಹೂತುಹೋಗಿರುತ್ತವೆ. ಅಂತೆಯೇ ಕೆಲವು ಆವೃತಬೀಜಸಸ್ಯಗಳಲ್ಲಿ ಅಂಡಕಗಳು ತೆರೆದ ಕಾರ್ಪೆಲ್‍ಗಳಲ್ಲಿ ಸ್ಥಿತವಾಗಿದ್ದು ಬಹಿರಂಗ ಸ್ಥಿತಿಯಲ್ಲಿರುತ್ತವೆ. [೨]ಆದರೆ ಪರಾಗ ಮೊಳೆಯುವ ಕ್ರಮದಲ್ಲಿ ಮಾತ್ರ ಎರಡು ಗುಂಪುಗಳ ನಡುವೆ ವ್ಯತ್ಯಾಸವನ್ನು ಕಾಣಬಹುದು. ಆವೃತಬೀಜಸಸ್ಯಗಳಲ್ಲಿ ಪರಾಗನಳಿಕೆ ಶಲಾಕನಳಿಕೆಯ ಮೂಲಕ ಅಂಡಕವನ್ನು ಪ್ರವೇಶಿಸಿದರೆ ನಗ್ನಬೀಜಸಸ್ಯಗಳಲ್ಲಿ ಅದು ನೇರವಾಗಿ ಅಂಡಕವನ್ನು ಪ್ರವೇಶಿಸುತ್ತದೆ.
ಲಿಂಗ ಮತ್ತು ವಿಕಸನಸಂಪಾದಿಸಿ
ನೀಟಮ್ ಮತ್ತು ವೆಲ್ವಿಶ್ಚಿಯಗಳನ್ನು ಬಿಟ್ಟರೆ, ನಗ್ನಬೀಜ ಸಸ್ಯಗಳ ಗಂಡು ಲಿಂಗಾಣುಜನಕಗಳು, ಆವೃತಬೀಜ ಸಸ್ಯಗಳ ಲಿಂಗಾಣುಜನಕಗಳಿಗಿಂತ ಹೆಚ್ಚು ಬಂಜೆಕೋಶಗಳನ್ನು ಉತ್ಪಾದಿಸುತ್ತದೆ. ಹೆಣ್ಣು ಲಿಂಗಾಣುಜನಕಗಳಿಗೆ ಸಂಬಂಧಪಟ್ಟಂತೆಯೂ ಒಂದು ಮುಖ್ಯ ವ್ಯತ್ಯಾಸವುಂಟು. [೩]ನಗ್ನಬೀಜ ಸಸ್ಯಗಳ ಹೆಣ್ಣು ಲಿಂಗಾಣುಜನಕಗಳು ದೊಡ್ಡ ಗಾತ್ರದವು ಮತ್ತು ನೀಟಮ್ ಹಾಗೂ ವೆಲ್ವಿಶ್ಚಿಯಗಳನ್ನು ಬಿಟ್ಟರೆ ಉಳಿದ ನಗ್ನಬೀಜಸಸ್ಯಗಳಲ್ಲಿ ಆರ್ಕಿಗೋನಿಯಗಳಿವೆ. ಬಹುಭ್ರೂಣತೆಯ (ಪಾಲಿಎಂಬ್ರಿಯಾನಿ) ಲಕ್ಷಣದಲ್ಲೂ ನಗ್ನಬೀಜಸಸ್ಯಗಳು ಆವೃತಬೀಜ ಸಸ್ಯಗಳನ್ನು ಮೀರಿಸಿವೆ. ಒಳರಚನೆಯಲ್ಲೂ ಈ ಎರಡು ಗುಂಪುಗಳ ನಡುವೆ ಕೆಲವು ಮುಖ್ಯ ವ್ಯತ್ಯಾಸಗಳನ್ನು ಕಾಣಬಹುದು. ನಗ್ನಬೀಜಸಸ್ಯಗಳ ಫ್ಲೋಯೆಮಿನ ಜರಡಿಕೋಶಗಳ ಜೊತೆ (ಇವು ಜರಡಿ ನಳಿಕೆಗಳೆಂದು ಕರೆಸಿಕೊಳ್ಳುವಷ್ಟು ವಿಶಿಷ್ಟತೆ ಪಡೆದಿಲ್ಲ) ಸಂಗಾತಿ ಜೀವಕೋಳಗಳಿಲ್ಲ. ಆವೃತಬೀಜಸಸ್ಯಗಳ ವೈಶಿಷ್ಟ್ಯಪೂರ್ಣ ಟ್ರೇಕಿಯಗಳು ನಗ್ನಬೀಜಸಸ್ಯಗಳಲ್ಲಿ (ನೀಟೇಲಿಸ್‍ನಲ್ಲಿ ಕಂಡುಬಂದರೂ ಅವುಗಳ ಉಗಮ ಮತ್ತು ವಿಕಸನಗಳು ಬೇರೆ ಬಗೆಯವು).
ಇತ್ತೀಚಿನ ಅನೇಕ ವರ್ಗೀಕರಣ ಪದ್ಧತಿಗಳಲ್ಲಿ ಸಂತಾನೋತ್ಪಾದಕರಚನೆಗಳಿಗೇ ಹೆಚ್ಚು ಪ್ರಾಮುಖ್ಯ ಕೊಡಲಾಗಿದೆ. ಇಂದಿನ ಎಲ್ಲ ನಗ್ನಬೀಜಸಸ್ಯಗಳಲ್ಲೂ ಎರಡು ಬಗೆಯ ಶಂಕುಗಳಿರುವುದನ್ನು ಕಾಣಬಹುದು. ಅವೇ ಗಂಡು ಮತ್ತು ಹೆಣ್ಣು ಶಂಕುಗಳು. ಇವನ್ನು ಒಮ್ಮೊಮ್ಮೆ, ಕೆಲವು ಸಸ್ಯಗಳಿಗೆ ಸಂಬಂಧಪಟ್ಟಂತೆ (ಉದಾ: ನೀಟೇಲೀಸ್), ಗಂಡು ಮತ್ತು ಹೆಣ್ಣು ಹೂಗಳೆಂದು ಕರೆಯುವುದುಂಟು. ಆದರೆ ಇವು ಔಚಿತ್ಯಪೂರ್ಣ ಹೆಸರುಗಳಲ್ಲ. ಅಂತೆಯೇ ಕೆಲವು ಸಸ್ಯಗಳಲ್ಲಿ ಅಂಡಕಧಾರಿ ರಚನೆಗಳು ಎಷ್ಟು ಕ್ಷೀಣಿಸಿರುತ್ತವೆಂದರೆ ಅವನ್ನು ಹೆಣ್ಣು ಶಂಕುಗಳೆಂದು ಕರೆಯಲು ಸಾಧ್ಯವಾಗುವುದೇ ಇಲ್ಲ. ಕೆಲವು ಗಣಗಳಲ್ಲಿ (ಉದಾ: ಜಿಂಕೋಯೇಲೀಸ್ ಮತ್ತು ಟ್ಯಾಕ್ಸೇಲೀಸ್) ಹೆಣ್ಣು ಶಂಕುಗಳ ಬಗ್ಗೆ ಯಾವ ಪುರಾವೆಯೂ ದೊರಕುವುದಿಲ್ಲ. ಕೆಲವು ಪ್ರಭೇದಗಳಲ್ಲಿ ಗಂಡು ಮತ್ತು ಹೆಣ್ಣು ಶಂಕುಗಳೆರಡೂ ಒಂದು ಸಸ್ಯದಲ್ಲೇ ಕಂಡುಬರುತ್ತವಾದರೆ (ಉದಾ:ಪೈನಸ್) ಮತ್ತೆ ಕೆಲವು ಪ್ರಭೇದಗಳಲ್ಲಿ ಗಂಡು ಮತ್ತು ಹೆಣ್ಣು ಶಂಕುಗಳು ಬೇರೆ ಬೇರೆ ಸಸ್ಯಗಳಿರುತ್ತವೆ. ಇಂಥವು ಏಕಲಿಂಗಿಗಳು. ಪರಾಗವನ್ನು ಉತ್ಪಾದಿಸುವ ಸಸ್ಯ ಗಂಡು, ಬೀಜಗಳನ್ನು ಉತ್ಪಾದಿಸುವುದು ಹೆಣ್ಣು.
ಇತಿಹಾಸಸಂಪಾದಿಸಿ
ನಗ್ನಬೀಜಸಸ್ಯಗಳಲ್ಲಿ ಇತರ ಸಸ್ಯಗುಂಪುಗಳಲ್ಲಿರುವಂತೆಯೇ ಅನೇಕ ಪಳೆಯುಳಿಕೆ ಗುಂಪುಗಳಿವೆ. ಟೆರಿಡೋಸ್ಪರ್ಮೇಲೀಸ್, ಬೆನಟೈಟೇಲೀಸ್, ಪೆಂಟೋಕ್ಸೈಲೇಲೀಸ್, ಕಾರ್ಡೈಟೇಲೀಸ್ ಮತ್ತು ಗತವಂಶಿ ಶಂಕುವೃಕ್ಷಗಳು ಈ ಪೈಕಿ ಕೆಲವು ಪ್ರಧಾನ ಗುಂಪುಗಳಾಗಿವೆ. ಈಗಿರುವ ಅನೇಕ ನಗ್ನಬೀಜಸಸ್ಯಗಳನ್ನು ಜೀವಂತ ಪಳೆಯುಳಿಕೆಗಳು ಎಂದು ಕರೆಯುವ ವಾಡಿಕೆ ಇದೆ. ಇದಕ್ಕೆ ಕಾರಣ ಅವುಗಳ ಮತ್ತು ಪ್ರಾಚೀನ ಕಾಲದ ಅವುಗಳ ಪೂರ್ವಜಸಸ್ಯಗಳ ನಡುವಣ ಸಾಮ್ಯ.
ನಗ್ನಬೀಜಸಸ್ಯಗಳ ಪ್ರಾಚೀನ ಇತಿಹಾಸವನ್ನು ಪೇಲಿಯೊಜೋಯಿಕ್ ಕಾಲದವರೆಗೂ ಗುರುತಿಸಲಾಗಿದೆ. ಇವುಗಳ ಪ್ರಧಾನ ಶಾಖೆಗಳ ಇತಿಹಾಸವನ್ನು ಮತ್ತು ಇವುಗಳ ಸಂಭವನೀಯ ಉಗಮ ಹಾಗೂ ವಿಕಾಸಗಳನ್ನು ನಾವು ಕೂಲಂಕಷವಾಗಿ ಗಮನಿಸಿದರೆ, ಅವು ಮೀಸೋಜೋಯಿಕ್ ಯುಗದಲ್ಲಿ ಪ್ರಧಾನ ಸಸ್ಯಗಳಾಗಿರುವುದು ಎದ್ದು ಕಾಣುತ್ತದೆ.
ಆಯಸ್ಸು ಮತ್ತು ಆಕಾರಸಂಪಾದಿಸಿ
ಜೀವಂತ ನಗ್ನಬೀಜಸಸ್ಯಗಳು ದಾರುಮಯ ಬಹುವಾರ್ಷಿಕ ಸಸ್ಯಗಳಾಗಿವೆ. ಬಹುಪಾಲು ಸಸ್ಯಗಳು ನಿತ್ಯಹರಿದ್ವರ್ಣವೃಕ್ಷಗಳಾಗಿದ್ದು ಕೆಲವು ಮಾತ್ರ ಪೊದೆಗಳ ರೂಪದಲ್ಲಿ ಬೆಳೆಯುವುವು. ಶಂಕುವೃಕ್ಷಗಳ ಪ್ರಭೇದವೊಂದಾದ ಪೋಡೋಕಾರ್ಪಸ್ ಉಸ್ಟಸ್ ಎಂಬುದು ಪರಾವಲಂಬಿಯೆಂದು ಹೇಳಲಾಗಿದೆ. ಇವುಗಳ ಬಾಹ್ಯ ಸ್ವರೂಪವೂ ಕೂಡ ವೈವಿಧ್ಯಮಯವಾದುದೇ. ತಾಳಕಲ್ಪಗಳು ತೆಂಗಿನ ಇಲ್ಲವೇ ವೃಕ್ಷಫರ್ನ್‍ಗಳ ಸ್ವರೂಪ ಪಡೆದಿದ್ದರೆ ಶಂಕುವೃಕ್ಷಗಳು ಶಂಕುವಿನಾಕಾರಕ್ಕೆ ಬೆಳೆಯುತ್ತವೆ. ನೀಟಮಿನ ಕೆಲವು ಪ್ರಭೇದಗಳು ಉಷ್ಣವಲಯದ ಮಳೆ ಕಾಡುಗಳಲ್ಲಿ ದೈತ್ಯಾಕಾರದ ಅಡರುಬಳ್ಳಿಗಳಾಗಿ ಬೆಳೆಯುವುವು. ಕೆಲವು ಪೊದೆಗಳಂತಿದ್ದರೆ ಮತ್ತೆ ಕೆಲವು ಚಿಕ್ಕವಯಸ್ಸಿನಲ್ಲಿ ಶಂಕುವಿನಾಕಾರಕ್ಕಿದ್ದು ವಯಸ್ಸಾದಂತೆ ವಿಪರೀತ ಕವಲೊಡೆಯುವಿಕೆಯಿಂದಾಗಿ ಅನಿಯತ ಆಕಾರ ಪಡೆಯುತ್ತವೆ. ಕೆಲವು ಸಸ್ಯಗಳು ಕೇವಲ ೫ ಸೆಂ ಮೀ.ಗಳಷ್ಟು ಚಿಕ್ಕವಾಗಿದ್ದರೆ (ಉದಾ: eóÉೀಮೀಯ ಪಿಗ್ಮೀಯ) ಅನೇಕ ಶಂಕುವೃಕ್ಷಗಳು ಬೃಹದ್ಗಾತ್ರದ ಗಗನಚುಂಬಿಗಳೂ (ಉದಾ.೧೧೨ ಮೀಟರುಗಳಷ್ಟು ಎತ್ತರ ಬೆಳೆಯುವ ಸಿಕೋಯ ಸೆಂಪರ್‍ವಿರೆನ್ಸ್). [೪]ಕೆಲವು ಸಸ್ಯಗಳು ಅಲ್ಪಾಯುಗಳಾದರೆ ಮತ್ತೆ ಕೆಲವು ದೀರ್ಘಜೀವಿಗಳು (ಅಮೆರಿಕದ ಕ್ಯಾಲಿಫೋರ್ನಿಯದ ಬೆಟ್ಟಗಳಲ್ಲಿರುವ ಪೈನಸ್ ಅರಿಸ್ಟೇಟ ಸಸ್ಯಕ್ಕೆ ೪೦೦೦ ವರ್ಷ ವಯಸ್ಸಾಗಿದೆ ಎನ್ನಲಾಗಿದೆ). ಹೀಗೆ ದೀರ್ಘಾಯುಗಳೂ ಪ್ರಪಂಚದ ಸಸ್ಯಗಳಲ್ಲೆಲ್ಲ ಅತಿ ಎತ್ತರಕ್ಕೆ ಬೆಳೆಯುವ ಸಸ್ಯಗಳೂ ಈ ಗುಂಪಿನಲ್ಲಿರುವುದರಿಂದ ಇವುಗಳ ಬಗ್ಗೆ ಅಧ್ಯಯನ ಮತ್ತು ಸಂಶೋಧನೆಗಳು ಕಳೆದ ಶತಮಾನದಿಂದ ಬಿರುಸಾಗಿ ಸಾಗಿವೆ.
ಆರ್ಥಿಕ ಪ್ರಾಮುಖ್ಯಸಂಪಾದಿಸಿ
ಎಫಿಡ್ರದ ಕೆಲವು ಪ್ರಭೇದಗಳಿಂದ ಎಫಿಡ್ರಿನ್ ಅನ್ನು ಪಡೆಯಲಾಗುತ್ತಿದೆ. ಇದು ಗೂರಲಿಗೆ ಸಿದ್ಧೌಷದ. ಆರ್ಯರು ಸೋಮರಸವನ್ನು ಎಫಿಡ್ರದ ಪ್ರಭೇದವೊಂದರಿಂದ ತಯಾರಿಸುತ್ತಿದ್ದರೆಂದು ಹೇಳಲಾಗಿದೆ. ಇದಕ್ಕೆ ಸಾಕಷ್ಟು ಆಧಾರಗಳಿಲ್ಲ. ಕಾಡುಗಳಲ್ಲಿ ಬೆಳೆಯುವ ನೀಟಮ್ ಪ್ರಭೇದಗಳನ್ನು ಉರುವಲು ಮತ್ತು ಸೌದೆಗಾಗಿ ಬಳಸಿಕೊಳ್ಳಲಾಗುತ್ತಿದೆ.
ಅಂಟು, ಕಾಗದ ತಯಾರಿಕೆಯ ಕಚ್ಚಾ ವಸ್ತುವಾಗಿಯೂ ಇವನ್ನು ಬಳಸಲಾಗುತ್ತದೆ.
ಉಲ್ಲೇಖಗಳುಸಂಪಾದಿಸಿ
- ↑ "ಆರ್ಕೈವ್ ನಕಲು". Archived from the original on 2018-10-18. Retrieved 2019-12-12.
- ↑ http://www.theplantlist.org/browse/G/
- ↑ https://www.ncbi.nlm.nih.gov/pmc/articles/PMC2944650
- ↑ http://biotaxa.org/Phytotaxa/article/download/phytotaxa.261.3.1/20598