ಪಂಚಾಕ್ಷರಿ ಗವಾಯಿಗಳು

(ಪಂಚಾಕ್ಷರಿ ಗವಾಯಿ ಇಂದ ಪುನರ್ನಿರ್ದೇಶಿತ)

ಶ್ರೀ ಪಂಚಾಕ್ಷರ ಗವಯಿಗಳು ಗದುಗಿನಲ್ಲಿರುವ ಪ್ರಸಿದ್ಧ ಸಂಗೀತ ಆಶ್ರಮವಾದ “ಶ್ರೀ ವೀರೇಶ್ವರ ಪುಣ್ಯಾಶ್ರಮ”ದ ಸಂಸ್ಥಾಪಕರು. ಇವರು ಜನಿಸಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ, ದಿನಾಂಕ: ೨, ಫೆಬ್ರುವರಿ ೧೮೯೨ರಂದು. ಇವರ ತಾಯಿ ನೀಲಮ್ಮ ಹಾಗು ತಂದೆ ಗುರುಪಾದಯ್ಯ ಚರಂತಿಮಠ. ಗದಿಗೆಯ್ಯ ಇವರ ಹುಟ್ಟುಹೆಸರು.

ಪಂಚಾಕ್ಷರಿ ಗವಾಯಿಗಳು
ಹಾನಗಲ್ ಕುಮಾರಸ್ವಾಮಿಗಳು

ಗದಿಗೆಯ್ಯ ಹಾಗು ಇವರ ಅಣ್ಣ ಗುರುಬಸಯ್ಯ ಇಬ್ಬರೂ ಹುಟ್ಟುಕುರುಡರು. ಸ್ಥಳೀಯವಾಗಿ ಸಾಧ್ಯವಿದ್ದ ಸಂಗೀತ ಶಿಕ್ಷಣವನ್ನು ಪಡೆದಿದ್ದರು. ಒಮ್ಮೆ ಶ್ರೀ ಹಕ್ಕಲ ಬಸವೇಶ್ವರ ಜಾತ್ರೆಯಲ್ಲಿ ಹಾಡುತ್ತಿದ್ದ ಈ ಕುರುಡು ಬಾಲಕರ ಹಾಡು ಕೇಳಿದ ಪೂಜ್ಯ ಹಾನಗಲ್ ಕುಮಾರಸ್ವಾಮಿಯವರು ಈ ಎಳೆಯರನ್ನು ತಮ್ಮ ಉಡಿಯಲ್ಲಿ ಹಾಕಿಕೊಂಡರು.

ಸಂಗೀತ ಶಿಕ್ಷಣ ಬದಲಾಯಿಸಿ

ಅಣ್ಣತಮ್ಮಂದಿರಿಬ್ಬರಿಗೂ ಅನೇಕ ಗುರುಗಳಿಂದ ಸಂಗೀತ ಶಿಕ್ಷಣ ದೊರೆಯಿತು. ಶ್ರೀ ಕುಮಾರಸ್ವಾಮಿಗಳು ಹಳ್ಳಿಹಳ್ಳಿಗಳಲ್ಲಿ ಭಿಕ್ಷೆ ಎತ್ತಿ ನೆಲವಿಗಿಯಲ್ಲೊಂದು ಶಿವಯೋಗ ಮಂದಿರ ಸ್ಥಾಪಿಸಿದ್ದರು. ಅಲ್ಲಿ ಇತರ ಹುಡುಗರ ಜೊತೆಗೆ ಈ ಹುಡುಗರೂ ಸಹ ಸಂಗೀತಾಭ್ಯಾಸ ಮಾಡುತ್ತಿದ್ದಾಗ ಅಣ್ಣ ಗುರುಬಸಯ್ಯ ಕಾಲರಾ ರೋಗದಿಂದ ಮರಣವನ್ನಪ್ಪಿದ.

ಗದಿಗೆಯ್ಯನಿಗೆ ಹದಿನೆಂಟು ವರ್ಷವಾದಾಗ ಮೈಸೂರಿನಲ್ಲಿ ಗೌರಿಶಂಕರ ಸ್ವಾಮಿಗಳಲ್ಲಿ ಕರ್ನಾಟಕ ಸಂಗೀತ ವಿದ್ಯಾಭ್ಯಾಸವಾಯಿತು. ನಾಲ್ಕು ವರ್ಷ ಮೈಸೂರಿನಲ್ಲಿ ಜೋಳಿಗೆ ಹಿಡಿದು ಹೊಟ್ಟೆ ತುಂಬಿಸಿಕೊಂಡ ಗದಿಗೆಯ್ಯನವರು, ಆ ಬಳಿಕ ಬಾಗಿಲುಕೋಟೆಯಲ್ಲಿ ನಡೆಯುತ್ತಿದ್ದ ಅಖಿಲ ಭಾರತ ವೀರಶೈವ ಮಹಾಸಭೆಯ ಅಧಿವೇಶನದಲ್ಲಿ ಶ್ರೀ ಕುಮಾರಸ್ವಾಮಿಗಳಿಂದ “ಪಂಚಾಕ್ಷರಿ ಗವಾಯಿ” ಎಂದು ಉದ್ಘೋಷಿತರಾದರು. ಆ ಬಳಿಕ ಸಹ ಮತ್ತೆ ನಾಲ್ಕು ವರ್ಷ ಹಿಂದುಸ್ತಾನಿ ಸಂಗೀತವನ್ನು ಅಭ್ಯಸಿಸಿ ಉಭಯ ಸಂಗೀತ ಪಂಡಿತರಾದರು.

ಸಂಗೀತದ ಮೂಲಕವೆ ಸಮಾಜಸೇವೆ ಮಾಡಲು ಬಯಸಿದ್ದ ಪಂಚಾಕ್ಷರಿ ಗವಾಯಿಗಳು ಕಂಚಗಲ್ ಬಿದಿರೆ ಗ್ರಾಮದ ಪ್ರಭುಕುಮಾರ ಶಿವಾಚಾರ್ಯರಿಂದ ಶಿವದೀಕ್ಷೆ ಪಡೆದು ಆಧ್ಯಾತ್ಮಮಾರ್ಗದಲ್ಲೂ ಮುನ್ನಡೆದರು.


ಸಂಗೀತ ಪ್ರಚಾರ ಬದಲಾಯಿಸಿ

ಪಂಚಾಕ್ಷರಿ ಗವಾಯಿಗಳು ನಾಡಿನಲ್ಲೆಲ್ಲ ಸಂಚರಿಸುತ್ತ ಒಂದು ಸಂಚಾರೀ ಪಾಠಶಾಲೆಯನ್ನು ಪ್ರಾರಂಭಿಸಿದರು. ೧೯೧೪ರಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿಕೊಪ್ಪದಲ್ಲಿ ಶಿವಯೋಗ ಮಂದಿರದಲ್ಲಿ ಹನಗಲ್ಲ ಕುಮಾರಸ್ವಾಮಿಗಳವರು ಬಸವ ಜಯ೦ತಿಯ೦ದು ಸ್ಥಾಪಿಸಿಕೊಟ್ಟರು. ಶಾಖೆಯಾಗಿ ಸಂಗೀತ ಶಾಲೆಯೊಂದನ್ನು ಪ್ರಾರಂಭಿಸಿದರು. ಈ ಸಂಗೀತಶಾಲೆಗಳಲ್ಲಿ ಕನ್ನಡ ಮತ್ತು ಸಂಸ್ಕೃತಗಳನ್ನು ಸಹ ಹೇಳಿಕೊಡಲಾಗುತ್ತಿತ್ತು. ಇವರ ಶಿಷ್ಯರಲ್ಲಿ ಇವರ ಉತ್ತರಾಧಿಕಾರಿಯಾಗಿ ದೊರೆತ, ಪ್ರಸಿದ್ಧ ಗವಾಯಿ ಪುಟ್ಟರಾಜರೂ ಸಹ ಕುರುಡರೇ! ಸಂಗೀತಶಾಲೆಗಳ ಖರ್ಚು ತೂಗಿಸಲು ನಾಟಕ ಕಂಪನಿಯೊಂದನ್ನು ಪ್ರಾರಂಭಿಸಿ ಕೈಸುಟ್ಟುಕೊಂಡದ್ದೂ ಆಯಿತು. ಈ ನಡುವೆ ೧೯೩೦ರಲ್ಲಿ ಪಂಚಾಕ್ಷರಿ ಗವಾಯಿಗಳ ರೂವಾರಿಯಾಗಿದ್ದ ಹಾನಗಲ್ ಕುಮಾರಸ್ವಾಮಿಗಳು ಲಿಂಗೈಕ್ಯರಾದರು. ಇದೇ ಸಮಯದಲ್ಲಿ ಬರಗಾಲ ಬಿದ್ದದ್ದರಿಂದ ಪಂಚಾಕ್ಷರಿ ಗವಾಯಿಗಳು ತಮ್ಮ ಶಿಷ್ಯರಿಗಾಗಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಆಗ ಮುಂದೆ ಬಂದು ನೆರವು ನೀಡಿದವರು ಬಸರಿಗಿಡದ ವೀರಪ್ಪನವರು. ಇವರು ಗವಾಯಿಗಳಿಗಾಗಿ ಗದಗಿನಲ್ಲಿಯೇ ತಮ್ಮ ಜಾಗದಲ್ಲಿ ಒಂದು ತಗಡಿನ ಪಾಠಶಾಲೆ ಕಟ್ಟಿಸಿಕೊಟ್ಟು, ಧನ-ಧಾನ್ಯದ ಸಹಾಯವನ್ನು ಸಹ ನೀಡಿದರು. ಈ ಸಂಗೀತಶಾಲೆಗೆ ಗವಾಯಿಗಳು “ ಶ್ರೀ ವೀರೇಶ್ವರ ಪುಣ್ಯಾಶ್ರಮ” ಎಂದೇ ಹೆಸರಿಟ್ಟರು.

ಕನ್ನಡ ಪ್ರೇಮಿ ಬದಲಾಯಿಸಿ

ಎಚ್.ಎಮ್.ವಿ. ಕಂಪನಿಯವರು ಖ್ಯಾತ ಕಲಾವಿದರ ಗಾನಮುದ್ರಿಕೆಗಳನ್ನು ಹೊರತರುವ ಸಲುವಾಗಿ ಅನೇಕ ಕಲಾವಿದರನ್ನು ಮುಂಬಯಿಗೆ ಕರೆಸಿದ್ದರು. ಕನ್ನಡದಲ್ಲಿಯೇ ಗಾಯನ ಮಾಡುವದಾಗಿ ಹಟ ಮಾಡಿದ ಪಂಚಾಕ್ಷರಿ ಗವಾಯಿಗಳು ಕಾರ್ಯಕ್ರಮ ಬಹಿಷ್ಕರಿಸಿ ಹೊರನಡೆದಾಗ, ಕಂಪನಿಯವರು ಗವಾಯಿಗಳ ಆಗ್ರಹಕ್ಕೆ ಮಣಿಯಲೇ ಬೇಕಾಯಿತು.

ಸ್ವದೇಶಾಭಿಮಾನಿ ಬದಲಾಯಿಸಿ

ಪಂಚಾಕ್ಷರಿ ಗವಾಯಿಗಳು ಖಾದಿಯನ್ನೇ ತೊಡುತ್ತಿದ್ದರು. ಉದರ ರೋಗದಿಂದ ಬಳಲುತ್ತಿರುವಾಗ ಆಯುರ್ವೇದದ ಹೊರತಾಗಿ, ಇಂಗ್ಲಿಷ್ ವೈದ್ಯಕೀಯಕ್ಕೆ ಗವಾಯಿಗಳು ಒಪ್ಪಿಕೊಳ್ಳಲಿಲ್ಲ. ಕೊನೆಗೂ ಇದೇ ರೋಗಕ್ಕೆ ಗವಾಯಿಗಳು ಬಲಿಯಾದರು.

ನಿಧನ ಬದಲಾಯಿಸಿ

ಸುಮಾರು ನಾಲ್ಕು ವರ್ಷಗಳವರೆಗೆ ಗವಾಯಿಗಳು ಉದರ ರೋಗದಿಂದ ಬಳಲಿದರು. ಕೊನೆಗೆ ದಿನಾಂಕ ೧೧, ಜೂನ್ ೧೯೪೪ರಂದು ಪಂಚಾಕ್ಷರ ಗವಾಯಿಗಳು ವಿಶ್ವಸಂಗೀತದಲ್ಲಿ ಲೀನರಾದರು ಮತ್ತು ನಿಧನರಾದರು.