ನೆಗೆತವು ಕ್ರಿ.ಪೂ. 1829ರಷ್ಟು ಹಿಂದೆಯೇ ಐರ್ಲೆಂಡಿನ ಟೈಲ್ಟ್ಯೂ ಎಂಬಲ್ಲಿ ನಡೆದಿದ್ದ ಮಾರ್ಗ ಮತ್ತು ಬಯಲು ಕ್ರೀಡೆಗಳ (ಟ್ರ್ಯಾಕ್ ಅಂಡ್ ಫೀಲ್ಡ್ ಇವೆಂಟ್ಸ್) ಪೈಕಿ ಒಂದಾಗಿದ್ದ ಒಂದು ಕ್ರೀಡೆ (ಜಂಪ್). ಪ್ರಾಚೀನ ಒಲಿಂಪಿಕ್ ಕ್ರೀಡೆಗಳಲ್ಲಿ ನಡೆಯುತ್ತಿದ್ದ ಪೆಂಟಾತ್ಲನ್ ಎಂಬ ಕ್ರೀಡಾಸ್ಪರ್ಧೆಗಳಲ್ಲೂ ಇದು ಸೇರಿತ್ತು. ಕೈಯಲ್ಲಿ ಭಾರವಾದ ವಸ್ತುಗಳನ್ನು ಇಟ್ಟುಕೊಂಡು ನಿಂತ ಸ್ಥಳದಿಂದಲೇ ನೆಗೆಯುವುದು, ಓಡುತ್ತ ಬಂದು ನೆಗೆಯುವುದು ಮುಂತಾದ ಸ್ಪರ್ಧೆಗಳು ರೂಢಿಯಲ್ಲಿದ್ದವು. ಇತ್ತೀಚಿನ ದಿವಸಗಳಲ್ಲಿ ನಡೆಯುವ ಕ್ರೀಡೆಗಳಲ್ಲಂತೂ ಇದು ಒಂದು ಶಾಶ್ವತ ಸ್ಥಾನವನ್ನು ಗಳಿಸಿಕೊಂಡಿದೆ.

ನೆಗೆತವನ್ನು ಪ್ರಮುಖವಾಗಿ ಮೂರು ಭಾಗ ಮಾಡಲಾಗಿದೆ: 1. ಎತ್ತರ ನೆಗೆತ (ಹೈ ಜಂಪ್), 2. ದೂರ ನೆಗೆತ (ಲಾಂಗ್ ಜಂಪ್) ಮತ್ತು ಟ್ರಿಪಲ್ ಜಂಪ್ ಅಥವಾ ಹಾಪ್, ಸ್ಟೆಪ್ ಅಂಡ್ ಜಂಪ್.

ಎತ್ತರ ನೆಗೆತ

ಬದಲಾಯಿಸಿ
 
ಎತ್ತರ ನೆಗೆತ

ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ಎಂ.ಜೆ. ಬ್ರೂಕ್ಸ್ ಎಂಬಾತ 1876ರಲ್ಲಿ 189.23 ಸೆಂಮೀ. ಎತ್ತರಕ್ಕೆ ನೆಗೆದು ಎತ್ತರ ನೆಗೆತದ ಪ್ರಥಮ ದಾಖಲೆ ಸ್ಥಾಪಿಸಿದ ಎಂದು ತಿಳಿದುಬರುತ್ತದೆ. ಕ್ಯಾಲಿಫೋರ್ನಿಯದ ಜಿ.ಎಲ್. ಹೊರಿನ್ ಎಂಬಾತ ಎತ್ತರದಲ್ಲಿದ್ದ ಒಂದು ಅಡ್ಡಕೋಲನ್ನು ಕೋಲಿನ ಎದುರು ಬಂದು ಹಾರುವುದರ ಬದಲು ಅದರ ಒಂದು ಬದಿಯಿಂದ ಓಡಿ ಬಂದು ಹಾರಿದ. 1912ರಲ್ಲಿ ಈತ ಸ್ಥಾಪಿಸಿದ ದಾಖಲೆ 201 ಸೆಂಮೀ. ಈ ಬಗೆಯ ನೆಗೆತಕ್ಕೆ ವೆಸ್ಟರ್ನ್ ರೋಲ್ ಎಂಬ ಹೆಸರಿದೆ. ಎತ್ತರ ನೆಗೆತದ ಇನ್ನೊಂದು ವಿಧಾನ ಸ್ಟ್ರ್ಯಾಡ್ಲ್ ರೋಲ್ (ಬೆಲಿ ರೋಲ್). ಇದು ವೆಸ್ಟರ್ನ್ ರೋಲ್ ವಿಧಾನದಲ್ಲಿ ಅಲ್ಪಸ್ವಲ್ಪ ಬದಲಾವಣೆಯಿಂದ ಆದುದು. ಅನೇಕ ರಾಷ್ಟ್ರಗಳಲ್ಲಿ ಎತ್ತರ ನೆಗೆತ ಈಗ ಜನಪ್ರಿಯ ಕ್ರೀಡೆಯಾಗಿದೆ. ಸ್ತ್ರೀ ಪುರುಷರಿಬ್ಬರೂ ಇದರಲ್ಲಿ ಭಾಗವಹಿಸಲು ಅವಕಾಶವಿದೆ. ಹಾರುವ ಉತ್ಸಾಹ, ಸತತ ಅಭ್ಯಾಸ- ಇವು ಎತ್ತರ ನೆಗೆತದಲ್ಲಿ ಪಾಲ್ಗೊಳ್ಳುವ ಆಟಗಾರರಿಗೆ ಇರಬೇಕಾದ ಅಗತ್ಯಗಳು. ಸೋವಿಯತ್ ಒಕ್ಕೂಟದ ವ್ಯಾಲೆರಿ ಬ್ರುಮೆಲ್ ಎಂಬವ 1962ರಲ್ಲಿ ಮಾಸ್ಕೋದಲ್ಲಿ ನಡೆದ ಕ್ರೀಡೆಯಲ್ಲಿ 227 ಸೆಂಮೀನಷ್ಟು ಎತ್ತರ ನೆಗೆದು ಪ್ರಪಂಚದ ದಾಖಲೆ ಸ್ಥಾಪಿಸಿದ. ಭಾರತದ ಭೀಮಸಿಂಗ್ 1968ರ ಮೆಕ್ಸಿಕೋ ಒಲಿಂಪಿಕ್ಸ್‍ನಲ್ಲಿ 208.28 ಸೆಂಮೀ ನೆಗೆದರೂ ಆತ ಅಂತಿಮ ಹಂತ ತಲುಪಲಾಗಲಿಲ್ಲ. ಅಮೆರಿಕದ ಆರ್. ಫಾಸ್ಬರಿ ಎಂಬಾತ ಮೆಕ್ಸಿಕೊ ಒಲಿಂಪಿಕ್ಸ್‍ನಲ್ಲಿ 224 ಸೆಂಮೀ ಎತ್ತರ ನೆಗೆದು ಪ್ರಥಮ ಬಹುಮಾನದ ಬಂಗಾರದ ಪದಕ ಗಳಿಸಿದ. ಆತನ ನೆಗೆತದ ಕ್ರಮ ಹೊಸ ಬಗೆಯದಾಗಿತ್ತು. ಆತ ಅಡ್ಡಕೋಲಿಗೆ ಬೆನ್ನು ಮಾಡಿ ತನ್ನ ಕತ್ತಿನ ಹಿಂಭಾಗದಿಂದ ಆ ಕೋಲಿನ ಇನ್ನೊಂದು ಬದಿಗಿರುವ ಫೋಮ್ ರಬ್ಬರ್ ಹಾಸಿಗೆಯ ಮೇಲೆ ಇಳಿದ. ಈ ವಿಸ್ಮಯಕರ ಎತ್ತರ ನೆಗೆತಕ್ಕೆ ಫಾಸ್ಟರಿ ಫ್ಲಾಪ್ ಎಂದು ಹೆಸರು. ಭಾರತದಲ್ಲಿ, ಇಳಿಯುವ ಅಡ್ಡಕೋಲಿನ ಇನ್ನೊಂದು ಬದಿಗೆ ಉಸುಕಿನ ಚೀಲ ಅಥವಾ ಮರದ ಪುಡಿಯನ್ನು ಹಾಕುತ್ತಾರಾಗಿ ಫಾಸ್ಬರಿ ವಿಧಾನದ ಅನುಸರಣೆಯಿಂದ ಆಟಗಾರರಿಗೆ ಅಪಾಯವಾಗುವ ಸಂಭವವಿದೆ ಎಂದು ಕೆಲವು ಕ್ರೀಡಾತಜ್ಞರು ಅಭಿಪ್ರಾಯಪಡುತ್ತಾರೆ.

ತುಸು ದೂರದಿಂದ ಪುಟಿತ ದೊರೆಯುವಂತೆ ಓಡಿ ಬಂದು ಕಾಲನ್ನು (ಎಡಗಾಲನ್ನಾಗಲೆ ಬಲಗಾಲನ್ನಾಗಲಿ) ಹಾರುವವನ ಅನುಕೂಲಕ್ಕೆ ಅನುಗುಣವಾಗಿ ಬಲವಾಗಿ ಊರಿ ಇನ್ನೊಂದು ಕಾಲನ್ನು ಬಿರುಸಾಗಿ ಬೀಸಿ ಆದಷ್ಟು ಎತ್ತರಕ್ಕೆ ಜಿಗಿದು ಅಡ್ಡಕೋಲನ್ನು ದಾಟಿ ಅದರ ಇನ್ನೊಂದು ಬದಿಯ ಉಸುಕಿನ ಚೀಲದ ಮೇಲಾಗಲಿ ಮರದ ಪುಡಿ ರಾಶಿಯ ಮೇಲಾಗಲಿ ಬೀಳುವುದು ಎತ್ತರ ನೆಗೆತದ ಸಾಮಾನ್ಯ ವಿಧಾನ. ಈ ವಿಧಾನವನ್ನು ಅನುಸರಿಸುವುದಕ್ಕೆ ಹಿಂದೆ ಅನೇಕ ಆಟಗಾರರು ಕತ್ತರಿ ವಿಧಾನವನ್ನು (ಸಿಸರ್ಸ್ ಸ್ಟೈಲ್) ಅನುಸರಿಸುತ್ತಿದ್ದರು. ಇದರಲ್ಲಿ ನೆಗೆಯುವಾತ ಅಡ್ಡಕೋಲಿನ ತಡೆಗೆ 45 ಡಿಗ್ರಿ ಕೋನದಲ್ಲಿ ಓಡಿ ಬಂದು ತನ್ನ ಬಲಗಾಲನ್ನೊ ಎಡಗಾಲನ್ನೊ ಜೋರಾಗಿ ಮೇಲಕ್ಕೆ ಬೀಸಿ ಅನಂತರ ಎಡಗಾಲಿನಿಂದಾಗಲಿ ಬಲಗಾಲಿನಿಂದಾಗಲಿ ನೆಲವನ್ನು ತಳ್ಳಿ ಮೇಲಕ್ಕೆ ಹಾರುತ್ತಾನೆ. ಕೋಲನ್ನು ದಾಟುತ್ತಿರುವಾಗ ಹಾರುವಾತ ಕೋಲಿನ ಮೇಲೆ ಕುಳಿತುಕೊಂಡಂತೆ ಕಾಣುತ್ತದೆ. ಆತ ಬದಿಯಲ್ಲಿರುವ ಮರಳಿನ ಹೊಂಡದೊಳಕ್ಕೆ ತನ್ನ ಬಲಗಾಲು ಅಥವಾ ಎಡಗಾಲನ್ನು ತಗುಲಿಸಿ ಇಳಿಯುತ್ತಾನೆ. 1914ರ ಅನಂತರ ಈ ವಿಧಾನವನ್ನು ಅನುಸರಿಸುವುದು ಕಡಿಮೆಯಾಯಿತು. ಈಗ ವೆಸ್ಟರ್ನ್ ರೋಲ್ ವಿಧಾನವೇ ಹೆಚ್ಚು ಬಳಕೆಯಲ್ಲಿದೆ. ಸ್ಟ್ರ್ಯಾಡ್ಲ್ ರೋಲನ್ನು ಆಟಗಾರರು ಎತ್ತರ ನೆಗೆತಕ್ಕೆ ಬಳಸುತ್ತಾರೆ. 1954ರಲ್ಲಿ ಏಷ್ಯನ್ ಚಾಂಪಿಯನ್ ಆಗಿದ್ದ ಭಾರತದ ಅಜಿತ್‍ಸಿಂಗ್ ಈ ಮೇಲಿನ ವಿಧಾನಗಳನ್ನು ಬಿಟ್ಟು ಈಸ್ಟರ್ನ್ ಕಟ್ ಆಫ್ ರೋಲ್ ಎಂಬ ಮತ್ತೊಂದು ವಿಧಾನವನ್ನು ಬಳಸಿದ್ದ. ಅಮೆರಿಕದ ಡಿ. ಅಲ್ಬ್ರಿಟೋನ್ 1936ರಲ್ಲಿ ಸ್ಟ್ರ್ಯಾಡ್ಲ್ ರೋಲ್ ವಿಧಾನದಿಂದ 207.64 ಸೆಂಮೀ ಎತ್ತರಕ್ಕೆ ನೆಗೆದ. ಇದರಿಂದ ಸ್ಟ್ರ್ಯಾಡ್ಲ್ ರೋಲ್ ಜನಪ್ರಿಯತೆ ಗಳಿಸಿತು. ಅಂದು ಅಲ್ಬ್ರಿಟೋನನ ನೆಗೆತವೇ ಪ್ರಪಂಚದ ದಾಖಲೆಯಾಗಿತ್ತು.

ಎತ್ತರ ನೆಗೆತದಲ್ಲಿ ಆಟಗಾರರು ದೇಹದ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಅತಿಮುಖ್ಯ. ಅಡ್ಡಕೋಲಿನ ಎತ್ತರಕ್ಕೆ ಜಿಗಿದಾಗ ಸಮತೋಲವನ್ನು ಕೇಂದ್ರೀಕರಿಸಿ ಕೈಕಾಲುಗಳನ್ನು ಕೌಶಲದಿಂದ ದೇಹದ ಸುತ್ತ ಇಟ್ಟುಕೊಂಡು ಅಡ್ಡಕೋಲನ್ನು ದಾಟಬೇಕಾಗುವುದು. ವೆಸ್ಟರ್ನ್ ರೋಲ್ ವಿಧನದಲ್ಲಿ ಆಟಗಾರ 45 ಡಿಗ್ರಿ ಕೋನದಲ್ಲಿ ಅಡ್ಡಕೋಲಿನತ್ತ ಸುಮಾರು 10.668 ಮೀಗಳ ದೂರದಲ್ಲಿ ಪುಟಿಯುತ್ತ ಓಡಬಂದು ನೆಗೆಯುತ್ತಾನೆ. ಆಗ ಅಡ್ಡಕೋಲಿಗೆ ಸಮಾಂತರದಲ್ಲಿ ಆಟಗಾರ ತನ್ನ ದೇಹದ ಸಮತೋಲನವನ್ನು ಕೇಂದ್ರೀಕರಿಸುತ್ತಾನೆ. ನೆಲವನ್ನು ತಳ್ಳಿದ ಆತನ ಕಾಲು ಅವನ ದೇಹ ಮತ್ತು ಅಡ್ಡಕೋಲಿನ ಮಧ್ಯದಲ್ಲಿ ದೇಹಕ್ಕೆ ಒತ್ತಿಕೊಂಡಿರುತ್ತದೆ. ಅಡ್ಡಕೋಲನ್ನು ದಾಟುವಾಗ ಎಡಕಾಲು ಇದೇ ರೀತಿಯಾಗಿದ್ದು ಬಲಗಾಲು ನೆಟ್ಟಗಿರುತ್ತದೆ. ಮರಳಿನ ಹೊಂಡ ತಲುಪುವುದು ಎಡಗಾಲು ಮತ್ತು ಎರಡು ಕೈಗಳನ್ನು ಬಳಸುವುದರಿಂದ.

ವೆಸ್ಟರ್ನ್ ರೋಲ್ ವಿಧಾನದ ಅಲ್ಪಸ್ವಲ್ಪ ಬದಲಾವಣೆಯಿಂದಾಗಿರುವ ಸ್ಟ್ರ್ಯಾಡ್ಲ್ ರೋಲನ್ನು ಅನುಸರಿಸುವುದು ವೆಸ್ಟರ್ನ್ ರೋಲ್ ವಿಧಾನವನ್ನು ಅರಿತ ಆಟಗಾರನಿಗೆ ಕಷ್ಟವಾಗುವುದಿಲ್ಲ. ಸ್ಟ್ರ್ಯಾಡ್ಲ್ ರೋಲ್ ವಿಧಾನದಲ್ಲಿ ಆಟಗಾರ ಅಡ್ಡಕೋಲನ್ನು 30 ಡಿಗ್ರಿ ಕೋನದಲ್ಲಿ ಬಂದು ತಲುಪುತ್ತಾನೆ. ಆಟಗಾರನ ದೇಹ ಅಡ್ಡಕೋಲಿಗೆ ಸಮಾಂತರವಾಗಿ ಬಂದಾಗ ಆತನ ಕಾಲುಗಳು ಬೇರೆ ಬೇರೆ ಬದಿಯಲ್ಲಿರುತ್ತವೆ. ಎದೆ, ತಲೆ ಮತ್ತು ಹೊಟ್ಟೆ ಅಡ್ಡಕೋಲಿಗೆ ಎದುರಾಗಿರುತ್ತದೆ. ಎಡಗೈ ಎದೆಗೆ ಹತ್ತಿಕೊಂಡಿರುತ್ತದೆ. ಬಲತೋಲು ಟೊಂಕಕ್ಕಿಂತ ಸ್ವಲ್ಪ ಮೇಲಿರುತ್ತದೆ. ಅಡ್ಡಕೋಲನ್ನು ದಾಟುವಾಗ ಬಲತೋಳು ಮತ್ತು ಬಲಕಾಲು ಮರಳಿನ ಹೊಂಡದತ್ತ ಸಾಗುತ್ತವೆ. ಎಡಗಾಲಿನಿಂದ ಹಾರಿದವನು ಬಲಹೆಗಲಿನ ಮೇಲೆ ಉರುಳುತ್ತಾನೆ. ಉರುಳುವುದು ಬೆನ್ನನ್ನು ಊರಿಯೇ.

ಎತ್ತರ ನೆಗೆತದಲ್ಲಿ ಭಾಗವಹಿಸುವ ಆಟಗಾರರಿಗೆ ಆಗಬಹುದಾದ ಅಪಾಯವನ್ನು ತಪ್ಪಿಸಿಕೊಳ್ಳಬೇಕಾದರೆ ಅವರು ಆದಷ್ಟು ಜಾಗರೂಕತೆಯಿಂದ ಅಡ್ಡಕೋಲನ್ನು ಹಾರಬೇಕು. ಎತ್ತರ ನೆಗೆತದಲ್ಲಿನ ಯಶಸ್ಸು, ಆಟಗಾರನ ಸತತ ಪರಿಶ್ರಮ, ಆಸಕ್ತಿಯನ್ನು ಅವಲಂಬಿಸಿರುತ್ತದೆ. 1963ರಲ್ಲಿ 227 ಸೆಂಮೀ ಎತ್ತರಕ್ಕೆ ನೆಗೆದು ಪ್ರಪಂಚ ದಾಖಲೆ ನಿರ್ಮಿಸಿದ ರಷ್ಯದ ವ್ಯಾಲೆರಿ ಬ್ರುಮೆಲ್ ಎತ್ತರ ನೆಗೆತದ ತರಬೇತಿಗೆ ಪ್ರವೇಶ ಪಡೆಯಲು ಬಂದಾಗ ಆತನಿಗೆ 132 ಸೆಂಮೀಗಿಂತಲೂ ಎತ್ತರಕ್ಕೆ ನೆಗೆಯಲು ಸಾಧ್ಯವಾಗಿರಲಿಲ್ಲ. ಅನಂತರ 12 ವರ್ಷಗಳ ಸತತ ಅಭ್ಯಾಸದ ಮೂಲಕ ಪ್ರಪಂಚ ದಾಖಲೆ ಸ್ಥಾಪಿಸಲು ಅವನಿಗೆ ಸಾಧ್ಯವಾಯಿತು.

ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಕಾಮನ್‍ವೆಲ್ತ್ ಕ್ರೀಡೆಗಳು, ಒಲಿಂಪಿಕ್ ಕ್ರೀಡೆಗಳ ಮಾದರಿಯಲ್ಲಿ ನಡೆಯುವ ಏಷ್ಯನ್ ಕ್ರೀಡೆಗಳು, ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಕ್ರೀಡೆಗಳೂ ಹಾಗೂ ಅಂತರ ವಿಶ್ವವಿದ್ಯಾಲಯದ ಕ್ರೀಡೆಗಳಲ್ಲಿ ಎತ್ತರ ನೆಗೆತಕ್ಕೆ ಸ್ಥಾನವಿದೆ.

ದೂರ ನೆಗೆತ

ಬದಲಾಯಿಸಿ
 
ದೂರ ನೆಗೆತ

ಆಟದ ಮೈದಾನದಲ್ಲಿ ಜರುಗುವ ಕ್ರೀಡೆಗಳಲ್ಲಿ ಸುಲಭ ಸರಳ ಹಾಗೂ ಜನಪ್ರಿಯವಾದದ್ದು. ಇದಕ್ಕೆ ಯಾವುದೇ ಕ್ರೀಡಾಸಾಮಗ್ರಿ ಸಾಧನಗಳ ಅಗತ್ಯವಿಲ್ಲ. ಸ್ತ್ರೀಪುರುಷರಿಬ್ಬರೂ ಭಾಗವಹಿಸಲು ಅವಕಾಶವಿದೆ. ಓಡಿಬಂದ ಆಟಗಾರ ಅಡ್ಡಗೆರೆಯನ್ನು ತುಳಿದು ನೆಗೆದು ಮುಂದಿರುವ ಮರಳಿನ ಹೊಂಡಕ್ಕೆ ಹಾರುತ್ತಾನೆ. ತುಳಿದ ಗೆರೆಯಿಂದ ಪಾದಗಳು ಮರಳಿನಲ್ಲಿ ಉಂಟುಮಾಡಿದ ಗುರುತಿನವರೆಗಿನ ದೂರವನ್ನು ಅಳತೆ ಮಾಡುತ್ತಾರೆ. ಹೆಚ್ಚು ದೂರ ನೆಗೆದವನು ಗೆದ್ದಂತೆ.

ಅಮೆರಿಕದ ಬಾಬ್ ಬೀಮನ್ 8.9 ಮೀ ಉದ್ದ ಜಿಗಿದು ವಿಶ್ವ ದಾಖಲೆ ಸ್ಥಾಪಿಸಿದ. ಪ್ರಪ್ರಥಮವಾಗಿ 1896ರಲ್ಲಿ ಅಥೆನ್ಸಿನಲ್ಲಿ ಜರುಗಿದ ಆಧುನಿಕ ಒಲಿಂಪಿಕ್ ಪಂದ್ಯಗಳಲ್ಲಿ ಉದ್ದ ನೆಗೆತಕ್ಕೆ ಸ್ಥಾನ ದೊರೆಯಿತು. ಅಂದು ಇ. ಕ್ಲಾರ್ಕ್ (ಅಮೆರಿಕ) 6.32 ಮೀ ಉದ್ದ ಹಾರಿ ಪ್ರಥಮ ಸ್ಥಾನ ಪಡೆದ. 1968ರಲ್ಲಿ ನಡೆದ ಮೆಕ್ಸಿಕೋ ಒಲಿಂಪಿಕ್ಸ್‍ನಲ್ಲಿ ರೂಮೇನೀಯದ ವಿಸ್ಕೊಪೊಲೇ 6.82 ಮೀ ಉದ್ದ ಹಾರಿ ಮಹಿಳೆಯರ ವಿಭಾಗದಲ್ಲಿ ಹೊಸ ದಾಖಲೆ ಸ್ಥಾಪಿಸಿದಳು.

ಅಮೆರಿಕದ ಜೆಸಿ ಒವೆನ್ಸ್ 1936ರ ಬರ್ಲಿನ್ ಒಲಿಂಪಿಕ್ಸ್‍ನಲ್ಲಿ ಉದ್ದ ನೆಗೆತದ ಸ್ಪರ್ಧೆಯಲ್ಲಿ ಮಾತ್ರವಲ್ಲದೆ 100 ಮತ್ತು 200 ಮೀಟರ್ ಓಟ ಸ್ಪರ್ಧೆಗಳಲ್ಲೂ ಭಾಗವಹಿಸಿ ಪ್ರಥಮಸ್ಥಾನ ಪಡೆದಿದ್ದ. ದೂರ ನೆಗೆತಕ್ಕೆ ಸಾಧ್ಯವಾದಷ್ಟು ಹೆಚ್ಚಿನ ವೇಗದಿಂದ ಓಡಿಬಂದು ಹಾರಬೇಕಾಗುತ್ತದೆ. ಇಲ್ಲಿ ಆಟಗಾರ ಓಟ ಮತ್ತು ನೆಗೆತಗಳೆರಡರಲ್ಲಿಯೂ ನುರಿತವನಿರಬೇಕು. ಉದಾಹರಣೆಗೆ ಒಬ್ಬ ಆಟಗಾರ 91.44 ಮೀ. ಗಳ ದೂರವನ್ನು 10 ಸೆಕೆಂಡುಗಳಲ್ಲಿ ಕ್ರಮಿಸಲು ಶಕ್ಯನಿದ್ದರೆ ಆತ 7.01 ಮೀ ದೂರವನ್ನು ಅಧಿಕ ಶ್ರಮವಿಲ್ಲದೆ ನೆಗೆಯಬಹುದು.

ವೇಗದಿಂದ ಓಡಿಬಂದು ಅಡ್ಡ ಗೆರೆಯನ್ನು ತುಳಿದು ಅಲ್ಲಿ ಸಾಧ್ಯವಾದಷ್ಟು ಎತ್ತರಕ್ಕೆ ಹಾರಿ ಎರಡು ಕಾಲುಗಳನ್ನು ಮುಂದೆ ಮಾಡಿ ಮರಳಿನ ಮೇಲೆ ಉರುಳುವುದು ಉದ್ದ ನೆಗೆತದಲ್ಲಿನ ಕ್ರಮ. ಆಟಗಾರನ ಹಿಮ್ಮಡಿ ಮೊದಲು ಮರಳನ್ನು ಮುಟ್ಟುವುದು ಅಗತ್ಯ. ಇದರಲ್ಲಿ ತೇಲುವ ವಿಧಾನವೇ ಪ್ರಮುಖವಾದ್ದು. ಇದಕ್ಕೆ ಹಿಟ್‍ಕಿಕ್ ವಿಧಾನ ಎಂದು ಹೇಳುವುದಿದೆ. ಈ ವಿಧಾನದಲ್ಲಿ ಆಟಗಾರ ನೆಲ ಬಿಟ್ಟಕೂಡಲೇ ಕಾಲುಗಳನ್ನು ಸಾಧ್ಯವಾದಷ್ಟು ಮುಂದೆ ಮತ್ತು ಮೇಲಕ್ಕೆ ಚಾಚುತ್ತಾನೆ.

ಹಾರುವಾಗ ಕೈಗಳನ್ನು ರಭಸವಾಗಿ ಬೀಸುತ್ತಾನೆ. ಇದರಿಂದ ಹಾರುವ ವೇಗ ಹೆಚ್ಚಾಗುತ್ತದೆ. ಆಟಗಾರ ಮರಳಿನ ಹೊಂಡವನ್ನು ತಲುಪಿದಾಗ ಆತನ ಕೈಗಳು ಮತ್ತು ತಲೆ ಮುಂದಿರುತ್ತದೆ. ಇನ್ನೊಂದು ಬಗೆಯದಾದ ನೇತಾಡುವ ವಿಧಾನದಲ್ಲಿ ಗೆರೆಯ ಮೇಲೆ ಕಾಲಿಟ್ಟು ಹಾರಿದೊಡನೆ ದೇಹವನ್ನು ಉದ್ದಕ್ಕೆ ಹಿಂದಕ್ಕೆ ಬಿಲ್ಲಿನೋಪಾದಿಯಲ್ಲಿ ಬಾಗಿಸುತ್ತಾನೆ. ಮರಳಿನ ಹೊಂಡವನ್ನು ತಲಪುವ ಮೊದಲು ದೇಹವನ್ನು ಮುಂದಕ್ಕೆ ಬಗ್ಗಿಸಬೇಕಾಗುತ್ತದೆ. ಅನಂತರ ಮರಳಿನ ಹೊಂಡವನ್ನು ಮುಟ್ಟುವಾಗ ಕಾಲುಗಳು ಮುಂದೆ ಬರುತ್ತವೆ. ಬಳಕೆಯಲ್ಲಿರುವ ಮತ್ತೊಂದು ವಿಧಾನ ಎಂದರೆ ಗಾಳಿಯಲ್ಲಿ ನಡೆಯುವ ವಿಧಾನ. ಇದರಲ್ಲಿ ಆಟಗಾರ ಓಡಿಬಂದು ನಿಶ್ಚಿತ ಗೆರೆಯಿಂದ ಮರಳಿನ ಹೊಂಡದತ್ತ ಜಿಗಿದು ಅದನ್ನು ತಲಪುವಾಗ ತನ್ನ ಕಾಲುಗಳನ್ನು ಬೇಗಬೇಗನೆ ಮುಂದಕ್ಕೂ ಹಿಂದಕ್ಕೂ ಚಲಿಸುತ್ತಿರುತ್ತಾನೆ. ಹೀಗೆ ಮಾಡುವುದರಿಂದ ಹಾರುವ ವೇಗ ಹೆಚ್ಚಾಗುತ್ತದೆ.

ದೂರ ನೆಗೆತದಲ್ಲಿ ಹೆಚ್ಚಿನ ಯಶಸ್ಸು ಗಳಿಸಲು ಇಷ್ಟೇ ಎತ್ತರದ ಅಥವಾ ತೂಕದ ದೇಹ ಇರಬೇಕೆಂಬ ನಿಯಮವೇನೂ ಇಲ್ಲ. ಜಪಾನಿನ ಸಿ. ನಂಬು ಎಂಬಾತ ತನ್ನ ಎತ್ತರ ಕಡಿಮೆ ಇದ್ದರೂ 8.9 ಮೀ ದೂರ ನೆಗೆದು ಪ್ರಪಂಚ ದಾಖಲೆ ಸ್ಥಾಪಿಸಿದ. ಅಮೆರಿಕದ ಬಾಬ್ ಬೀಮನ್ ಜಂಬ ಇನ್ನೊಬ್ಬ ಗಿಡ್ಡ 190.5 ಸೆಂಮೀ ಎತ್ತರದಷ್ಟು ಜಿಗಿದಿದ್ದ. ಇವನ ವಿಧಾನಕ್ಕೆ ಬೀಮನ್ ವಿಧಾನ ಎಂದೇ ಹೆಸರಾಯಿತು.

ಕಾಮನ್‍ವೆಲ್ತ್ ಕ್ರೀಡೆಗಳು, ಏಷ್ಯನ್ ಕ್ರೀಡೆಗಳೂ, ಒಲಿಂಪಿಕ್ ಕ್ರೀಡೆಗಳೂ, ರಾಜ್ಯಮಟ್ಟದ ಹಾಗೂ ಅಂತರ ವಿಶ್ವವಿದ್ಯಾನಿಲಯ ಕ್ರೀಡೆಗಳಲ್ಲಿ ದೂರ ನೆಗೆತಕ್ಕೂ ಸ್ಥಾನ ಉಂಟು.

ಟ್ರಿಪಲ್ ಜಂಪ್

ಬದಲಾಯಿಸಿ
 
ಟ್ರಿಪಲ್ ಜಂಪ್

ಈ ನೆಗೆತಕ್ಕೆ ಟ್ರಿಪಲ್ ಜಂಪ್ (ಮೂರು ನೆಗೆತ) ಅಥವಾ ಹಾಪ್, ಸ್ಟೆಪ್ ಅಂಡ್ ಜಂಪ್ (ಕುಂಟು, ಹೆಜ್ಜೆ, ನೆಗೆತ) ಎಂದೂ ಹೆಸರಿದೆ. ಕುಂಟುವುದು ಎಂದರೆ ಒಂದೇ ಕಾಲಿನಿಂದ ಮುಂದಕ್ಕೆ ಹಾರುವುದು. ಹೆಜ್ಜೆಹಾಕುವುದು ಎಂದರೆ ಒಂದು ಪಾದದ ಮೇಲೆ ನಿಂತವನು ಇನ್ನೊಂದು ಪಾದವನ್ನೂ ಊರುವುದು. ( ಚಿತ್ರ-ಪುಟ 428) ನೆಲದಿಂದ ಮೇಲಕ್ಕೆ ಅಥವಾ ದೂರಕ್ಕೆ ಹಾರಿ ಎರಡೂ ಪಾದಗಳನ್ನು ಒಟ್ಟಿಗೆ ಊರುವುದೇ ನೆಗೆತ. ಸೋವಿಯೆತ್ ಒಕ್ಕೂಟದ ವಿಕ್ಟರ್ ಸನೆಯಿವ್ 1968ರ ಮೆಕ್ಸಿಕೋ ಒಲಿಂಪಿಕ್ಸ್‍ನಲ್ಲಿ 17.39 ಮೀ ನಷ್ಟು ದೂರ ಹಾರಿ ಮೂರು ನೆಗೆತದಲ್ಲಿ ಪ್ರಪಂಚ ದಾಖಲೆ ಸೃಷ್ಟಿಸಿ ಸುವರ್ಣ ಪದಕ ಪಡೆದ. ಕಳೆದ ಹಲವು ವರ್ಷಗಳಿಂದಲೂ ಟ್ರಿಪಲ್ ನೆಗೆತದಲ್ಲಿ ಸಾಕಷ್ಟು ಪ್ರಗತಿ ಕಂಡುಬಂದಿದೆ. 1936ರ ಬರ್ಲಿನ್ ಒಲಿಂಪಿಕ್ಸ್‍ನಲ್ಲಿ ಜಪಾನಿನ ತಜಿಮಾ 15,9988 ಮೀ ದೂರ ಹಾರಿದ್ದಳು. ಅವಳ ಪ್ರಥಮ ನೆಗೆತ 6.1976 ಮೀ ನಷ್ಟೂ ದ್ವಿತೀಯದ್ದು 4 ಮೀನಷ್ಟೂ ತೃತೀಯದ್ದು 5.79 ಮೀ ನಷ್ಟೂ ದೂರದ್ದಾಗಿತ್ತು. ಈ ಸ್ಪರ್ಧೆಯಲ್ಲಿ ಆಟಗಾರನ ಮೂರು ನೆಗೆತವನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಆದ್ದರಿಂದ ಆಟಗಾರ ತನ್ನ ಯಾವುದೇ ನೆಗೆತವನ್ನೂ ನಿರ್ಲಕ್ಷಿಸುವಂತಿಲ್ಲ.

ಈ ಬಗೆಯ ನೆಗೆತದಲ್ಲಿ ಭಾಗವಹಿಸುವ ಆಟಗಾರ ಪುಟಿಯಲು, ನೆಗೆಯಲು ಹಾಗೂ ಓಡಲು ಚೆನ್ನಾಗಿ ತಿಳಿದಿರಬೇಕು. ಇದರಲ್ಲಿ ಮೂರು ಬಗೆಯಲ್ಲಿ ನೆಗೆಯಬೇಕಾಗುತ್ತದೆ. ಒಂದೇ ನೆಗೆತದ ಈ ಮೂರು ಹಂತಗಳನ್ನು ಒಮ್ಮೆಗೇ ಒಂದಾದ ಮೇಲೆ ಒಂದರಂತೆ ನಿರ್ವಹಿಸಬೇಕಾಗುತ್ತದಾದ್ದರಿಂದ ಆಟಗಾರನಿಗೆ ಚಳಕದೊಂದಿಗೆ ಸಾಕಷ್ಟು ಶಕ್ತಿಸಾಮಥ್ರ್ಯಗಳು ಇರಬೇಕಾಗುತ್ತದೆ.

ದೂರ ನೆಗೆತಕ್ಕೆ ಬೇಕಾದ ಒಂದು ಮರಳಿನ ಹೊಂಡ ಮತ್ತು ಆಟಗಾರ ಓಡಿ ಬರಲು 30.48 ಮೀ-45.72 ಮೀ ಉದ್ದದ ಸಮತಟ್ಟಾದ ಮಾರ್ಗ ಈ ನೆಗೆತಕ್ಕೂ ಬೇಕು. ನೆಗೆತದ ಗೆರೆ ಮರಳಿನ ಹೊಂಡದಿಂದ ಸುಮಾರು 9.14 ಮೀ ದೂರದಲ್ಲಿರುತ್ತದೆ. ಆಟಗಾರ ಓಡಿ ಬಂದು ನೆಗೆತದ ಗೆರೆಯಲ್ಲಿ ಒಂದು ಪಾದವನ್ನು ಊರಿ ಅದೇ ಪಾದದಿಂದ ಮುಂದಕ್ಕೆ ಜಿಗಿಯುತ್ತಾನೆ. ಇಲ್ಲಿಗೆ ಕುಂಟು (ಹಾಪ್) ಮುಗಿದಂತೆ. ಮುಂದೆ ಆಟಗಾರ ಆದಷ್ಟು ತನ್ನ ಶಕ್ತಿಯನ್ನು ಉಪಯೋಗಿಸಿ ಒಂದು ದೊಡ್ಡ ಹೆಜ್ಜೆ ಹಾಕುತ್ತಾನೆ. ಇದೇ ಎರಡನೆಯ ಜಿಗಿತ (ಸ್ಟೆಪ್). ಅನಂತರ ಆತ ತನ್ನ ಎಲ್ಲ ಶಕ್ತಿಯನ್ನೂ ಪ್ರಯೋಗಿಸಿ ಮರಳಿನ ಹೊಂಡಕ್ಕೆ ನೆಗೆಯುತ್ತಾನೆ (ಜಂಪ್). ಈ ನೆಗೆತದಲ್ಲಿ ಮೊದಲನೆ ಹಂತದಿಂದ ಪ್ರಾರಂಭಿಸಿ ಕೊನೆಯ ಹಂತದವರೆಗಿನ ದೂರವನ್ನು ಅಳೆದು ನೆಗೆತದ ಒಟ್ಟು ದೂರವನ್ನು ನಿಶ್ಚಯಿಸುತ್ತಾನೆ.

ಈ ನೆಗೆತದಲ್ಲಿ ತನ್ನ ಸ್ಥಿರತೆ ಕಾಯ್ದುಕೊಳ್ಳುವುದು ಆಟಗಾರನಿಗೆ ಅಗತ್ಯ. ಮೂರನೆಯ ನೆಗೆತದಲ್ಲಿ ಮರಳನ್ನು ಪ್ರವೇಶಿಸುವಾಗ ಆಟಗಾರ ತನ್ನ ಎರಡು ಮೊಳಕಾಲುಗಳನ್ನು ಒಂದಕ್ಕೊಂದು ಹೊಂದಿಕೊಂಡಂತಿರುವಂತೆ ನೋಡಿಕೊಳ್ಳಬೇಕಲ್ಲದೇ ಮರಳನ್ನು ಮುಟ್ಟುವಾಗ ಕಾಲುಗಳನ್ನು ಮುಂದೆ ಮಾಡಬೇಕಾಗುತ್ತದೆ. ಆಗ ಆತನ ತಲೆ ಮತ್ತು ಎದೆ ಮುಂದೆ ಬಾಗುತ್ತದೆ. ಆತನ ಹಿಮ್ಮಡಿ ಮೊದಲು ಮರಳನ್ನು ತಲಪುತ್ತದೆ. ಹಾರುವಾಗ ಆದಷ್ಟು ಎತ್ತರದಲ್ಲಿ ಹಾರಿದರೆ ಹೆಚ್ಚು ದೂರ ಕ್ರಮಿಸಲು ಅನುಕೂಲವಾಗುವುದು.

ಎತ್ತರ ನೆಗೆತ, ದೂರ ನೆಗೆತಗಳಂತೆ ಟ್ರಿಪಲ್ ಜಂಪಿಗೂ ಸತತ ಅಭ್ಯಾಸಬೇಕು. ಆಟಗಾರ ನಿಂತ ಸ್ಥಳದಿಂದಲೇ ಹಾರುವ ಅಭ್ಯಾಸವನ್ನೂ ಮಾಡಿಕೊಂಡಿರಬೇಕಾಗುತ್ತದೆ.

ಟ್ರಿಪಲ್ ಜಂಪಿನಲ್ಲಿ ಪೋಲಂಡಿನ ವಿಧಾನ ಮತ್ತು ರಷ್ಯನ್ ವಿಧಾನ ಎಂಬ ಎರಡು ವಿಭಾಗಗಳಿವೆ.

ಕಾಮನ್‍ವೆಲ್ತ್ ಕ್ರೀಡೆಗಳು, ಒಲಿಂಪಿಕ್ ಕ್ರೀಡೆಗಳು, ರಾಷ್ಟ್ರೀಯ ಕ್ರೀಡೆಗಳು ಮುಂತಾದವುಗಳಲ್ಲಿ ಟ್ರಿಪಲ್ ಜಂಪಿಗೂ ಸ್ಥಾನ ಉಂಟು.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ನೆಗೆತ&oldid=1232678" ಇಂದ ಪಡೆಯಲ್ಪಟ್ಟಿದೆ