ನುಡಿರಾಣಿಯ ಗುಡಿ ಕುವೆಂಪು

ಕವಿಗಳು ಕಾವ್ಯಾರಂಭದಲ್ಲಿ ತಮ್ಮ ತಮ್ಮ ಇಷ್ಟದೈವವನ್ನು, ಆಶ್ರಿತ ರಾಜರನ್ನು, ಕಾವ್ಯಾಧಿದೇವತೆಯಾದ ಸರಸ್ವತಿಯನ್ನು ಸ್ತುತಿಸುವುದು ಸಂಪ್ರದಾಯ. ಬಹುತೇಕ ಎಲ್ಲ ಸಂಸ್ಕೃತ ಮತ್ತು ಕನ್ನಡ ಕವಿಗಳು ಸರಸ್ವತಿಯನ್ನು ಸ್ತುತಿಸುತ್ತಾ ಬಂದಿದ್ದಾರೆ. ಪ್ರಾರಂಭದಲ್ಲಿ ಸೃಜನಾತ್ಮಕವಾಗಿದ್ದ ಸರಸ್ವತಿಯ ಸ್ತುತಿ ನಂತರ ಕಾಟಾಚಾರದ ಸ್ತುತಿಯಾಗಿ ಮಾರ್ಪಟ್ಟಿದ್ದು ಸಾಹಿತ್ಯ ಚರಿತ್ರೆಯಿಂದ ವೇದ್ಯವಾಗುತ್ತದೆ. ಆದರೆ ಇಪ್ಪತ್ತನೇ ಶತಮಾನದಲ್ಲಿ ಕನ್ನಡ ಸಾಹಿತ್ಯದ ಪುನರುತ್ಥಾನ ನಡೆದು ಹಲವಾರು ಮಹತ್ವಪೂರ್ಣ ಕವಿಗಳೂ ಕಾವ್ಯಗಳೂ ಹುಟ್ಟಿಬಂದಿದ್ದರಿಂದ ಸರಸ್ವತಿಯ ಸ್ತುತಿಗೂ ಹೊಸರೂಪ ದೊರಕಿದೆ.

ಯುಗದ ಕವಿಯೆಂದೇ ಕರೆಯಲ್ಪಡುವ ಕುವೆಂಪು ಎಲ್ಲ ಕವಿಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಸರಸ್ವತಿಯ ಸ್ತುತಿಯನ್ನು ಒಂದು ಕಾವ್ಯ ತಂತ್ರವಾಗಿ ಬಳಸಿಕೊಂಡಿದ್ದಾರೆ. ಹಲವಾರು ಬಿಡಿಕವನಗಳಲ್ಲಿ, ಚಿತ್ರಾಂಗದಾ ಮತ್ತು ಶ್ರೀರಾಮಾಯಣ ದರ್ಶನಂ ಕಾವ್ಯದಲ್ಲಿ ಸಂಪ್ರದಾಯದಂತೆ ಸರಸ್ವತಿಯನ್ನು ಸ್ತುತಿಸಿದ್ದಾರೆ. ಆದರೆ ಶ್ರೀರಾಮಾಯಣದರ್ಶನಂ ಕಾವ್ಯದಲ್ಲಿ ಮಾತ್ರ ಒಂದು ಕಾವ್ಯತಂತ್ರವಾಗಿ ಸರಸ್ವತಿಯ ಸ್ತುತಿಯನ್ನು ವಿಶೇಷ ಬಳಸಿಕೊಂಡಿದ್ದಾರೆ. ಚಿತ್ರಾಂಗದಾ ಕಾವ್ಯದಲ್ಲಿಯೇ ಈ ಬೆಳವಣಿಗೆಯನ್ನು ಕಾಣಬಹುದು. ಪ್ರಸ್ತುತ ಲೇಖನದಲ್ಲಿ ಶ್ರೀರಾಮಾಯಣದರ್ಶನಂ ಮಹಾಕಾವ್ಯದಲ್ಲಿ ಕಾವ್ಯತಂತ್ರವಾಗಿ ಅಂತರ್ಗತವಾಗಿರುವ ಸರಸ್ವತಿಯ ಸ್ತುತಿಯ ಸ್ವರೂಪವನ್ನು ತಿಳಿಯಲು ಯತ್ನಿಸಲಾಗುವುದು. ‘ಶ್ರೀ ವೆಂಕಣ್ಣಯ್ಯನವರಿಗೆ’ ಎಂಬ ಅರ್ಪಣೆಯ ಭಾಗದಲ್ಲಿಯೇ ಸರ್ವಭಾಷಾಮಯಿಯಾದ ಸರಸ್ವತಿಯನ್ನು ವಿಶ್ವಭಾಷಾಮಯೀಯಾಗಿಸಿರುವ ‘"ಕಾವ್ಯಮಂ ವಿಶ್ವವಾಣಿಗೆ ಮುಡಿಯ ಮಣಿ ಮಾಡಿಹೆನ್’" ಮತ್ತು ‘"ವಾಗರ್ಥ ರಥವೇರಿ, ಭಾವದಗ್ನಿಯ ಪಥಂ ಬಿಡಿದು ಬನ್ನಿಂ’" ಎಂಬ ಸಾಲುಗಳು ಸರಸ್ವತಿಯ ದರ್ಶನಕ್ಕೆ ಮುನ್ನುಡಿಯಂತಿವೆ. "‘ಏರುವೆನ್ ವಾಗ್ದೇವಿಯಮೃತ ರಸನೆಯ ಲಸನ್ ನಾವೆಯಂ’" ಎನ್ನುತ್ತಾ ಆದಿಕವಿಗೆ ವಂದಿಸಿ, ‘"ದೇವಕವಿ, ನನ್ನನೊಯ್ಯನೆ ಕಾವ್ಯ ವಿದ್ಯುದ್ ವಿಮಾನದೊಳ್ ನಿರಿಸಿ, ಮೇಣ್ ಸರಸತಿಯನೆನ್ನಾತ್ಮ ಜಿಹ್ವೆಗೆ ಬರಿಸಿ ಹರಕೆಗೆಯ್’" ಎಂದು ಕೇಳುತ್ತಾರೆ. ಸಾಮಾನ್ಯವಾಗಿ ಇದುವರೆಗಿನ ಕವಿಗಳು -‘ಚಿತ್ರಾಂಗದಾ’ದಲ್ಲಿ ಕುವೆಂಪೂ ಸಹ- "ಸರಸ್ವತಿಯು ನಮ್ಮ ನಾಲಗೆಯಲ್ಲಿ ನೆಲಸಲಿ, ನರ್ತಿಸಲಿ"’ ಎಂದು ಪ್ರಾರ್ಥಿಸಿರುವುದನ್ನು ನೋಡಿದ್ದೇವೆ. ಇಲ್ಲಿ ನೇರವಾಗಿ ಸರಸ್ವತಿಯನ್ನು ನಾಲಗೆಗೆ ಆಹ್ವಾನಿಸದೆ, ಆದಿಕವಿಯನ್ನು ‘"ಸರಸತಿಯನೆನ್ನಾತ್ಮ ಜಿಹ್ವೆಗೆ ಬರಿಸಿ ಹರಕೆಗೆಯ್’" ಎಂದು ಪ್ರಾರ್ಥಿಸುತ್ತಿದ್ದಾರೆ. ಇಲ್ಲಿ ‘"ಆತ್ಮಜಿಹ್ವೆ"ಗೆ’ ಎಂಬ ಮಾತು ಹೊಸದಾಗಿ ಬಂದಿದೆ. ಆದಿಕವಿಯೇ ಸರಸ್ವತಿಯನ್ನು ಕವಿಯಾತ್ಮಜಿಹ್ವೆಗೆ ಇರಿಸಿದ ಮೇಲೆ ಸರಸ್ವತಿಯ ಪ್ರಾರ್ಥನೆ ಕೆಳಗಿನಂತೆ ಬಂದಿದೆ.

ಬಾಳು, ವೀಣಾಪಾಣಿ; ಬಾಳು, ಬ್ರಹ್ಮನ ರಾಣಿ;

ಗಾನಗೆಯ್, ಹೇಳು, ಓ ಭಾವಗಂಗಾ ವೇಣಿ.

ನಂದನದಿ ತುಂಬಿಯೋಂಕೃತಿ ತುಂಬಿ ಮೊರೆವಂತೆವೋಲ್

ಕರ್ಣಾಟಕದ ಜನದ ಕರ್ಣವೀಣಾ ತುಂಬಿ

ನಿನ್ನ ವಾಣಿಗೆ ವಿಕಂಪಿಸಿ, ಜೀಂಕೃತಿಯ ಬೀರಿ,

ರಸದ ನವನೀತಮಂ ಹೃದಯದಿ ಮಥಿಸುವಂತೆ

ಗಾನಗೆಯ್, ಹೇಳು, ಓ ಭಾವಗಂಗಾವೇಣಿ. (ಕವಿಕ್ರತು ದರ್ಶನ, ಸಾಲುಗಳು: ೮೭-೮೮)

ಈ ಭಾಗದಲ್ಲಿ ಭಾವಗಂಗಾವೇಣಿ ಎಂಬ ವಿಶೇಷಣ ಗಮನ ಸೆಳೆಯುತ್ತದೆ. ಭಾರತೀಯರಿಗೆ ಗಂಗಾನದಿಯೇ ದೊಡ್ಡನದಿ. ಗಂಗಾವೇಣಿ ಎಂದರೂ ಸಮಾಧಾನವಾಗದ ಕವಿಗೆ, ಸರಸ್ವತಿಯನ್ನು ಭಾವಗಂಗಾವೇಣಿಯನ್ನಾಗಿ ನೋಡುವ ಬಯಕೆ. ಈ ವಿಶೇಷಣ ಸರಸ್ವತಿಯ ಅಲೌಕಿಕ ಪ್ರತಿಮೆಗೆ ಭವ್ಯಭೂಮತೆಯನ್ನು ತಂದುಕೊಟ್ಟಿದೆ. ಮುಂದಿನ ಭಾಗದಲ್ಲಿ ಸರಸ್ವತಿಯ ಸಾಮರ್ಥ್ಯದ ಅರಿವು ಮೂಡುತ್ತದೆ.

ತೀಡಿದರೆ ನಿನ್ನುಸಿರು, ಮದ್ದಿಗೆ ಕಿಡಿ ತಗುಳ್ದು

ಹೊಮ್ಮುವಂದದಿ ಜ್ಯೋತಿ, ಜಡವೆ ಚಿನ್ಮಯವಾಗಿ

ಚಿಮ್ಮಿದಪುದಯ್. ಮುಟ್ಟಿದರೆ ನಿನ್ನ ಮೆಯ್, ರಾಮಾಂಘ್ರಿ

ಸೋಂಕಿದೊಡನೆಯೆ ಕಲ್ಲು ಕಡುಚೆಲ್ವು ಪೆಣ್ಣಾಗಿ

ಸಂಭವಿಸಿದೋಲ್, ಪಂಕದಿಂ ಕಲಾಪಂಕಜಂ

ಕಂಗೊಳಿಪುದಯ್, ಭುವನ ಮನಮಂ ಮೋಹದಿಂದಪ್ಪಿ

ಸೆಳೆದು. ನಿನ್ನ ಕಯ್ ಪಿಳಿಯೆ ಕಬ್ಬಿಣದಿಂದೆಯುಂ

ಪೊರಸೋಸಿದಪುದು ಕಬ್ಬಿನ ರಸಂ. ಮಂತ್ರಮಯಿ

ನೀಂ ಬಡಿಯೆ, ಬಂಡೆಯಿಂ ನೀರಿನೊಳ್ಬುಗ್ಗೆಯಂ

ಹೊಮ್ಮಿ ಚಿಮ್ಮುವುದಲ್ತೆ, ಮುತ್ತು ಚಿಪ್ಪೊಡೆವಂತೆವೋಲ್

ಬಿರಿದು. ರಸಚಿತ್ ತಪೋಬಲಕೆಲ್ಲೆ ತಾನೊಳದೆ

ಪೇಳ್, ಕಲಾಲಕ್ಷ್ಮಿ? ಕೃಪೆಗೆಯ್, ತಾಯೆ, ಪುಟ್ಟನಂ,

ಕನ್ನಡದ ಪೊಸಸುಗ್ಗಿ ಬನದ ಈ ಪರಪುಟ್ಟನಂ. (ಕವಿಕ್ರತು ದರ್ಶನ, ಸಾಲುಗಳು: ೧೨೮-೧೪೦)

ಕಬ್ಬಿಣದಿಂದಲೂ ಕಬ್ಬಿನ ರಸವುಕ್ಕಿಸುವ ವಾಣಿ ಇಲ್ಲಿ ರಸಸರಸ್ವತಿ. ಮಂತ್ರಮಯೀ ನೀನು ಬಡಿದರೆ ಬಂಡೆಯಿಂದಲೂ ನೀರುಕ್ಕುವುದು ಎಂಬ ಮಾತು ಋಗ್ವೇದದ, ರಭಸವಾಗಿ ಹರಿಯುವ ಸರಸ್ವತಿನದಿಯನ್ನು ಸೂಚಿಸುತ್ತದೆ. ‘ಕನ್ನಡದ ಪೊಸಸುಗ್ಗಿ ಬನ’ ಎಂಬ ಮಾತು ನವೋದಯ ಕಾವ್ಯಸಂದರ್ಭವನ್ನು ಧ್ವನಿಸುತ್ತದೆ. ನವೋದಯದ ಕೋಗಿಲೆಯಾದ ನೀನು ನನಗೆ ಕೃಪೆ ಮಾಡು ಎಂಬುದು ಕವಿಯ ಪ್ರಾರ್ಥನೆ.

ಶ್ರೀರಾಮಾಯಣದರ್ಶನಂ’ನ ಕೆಲವು ಸಂಚಿಕೆಗಳು (ಉದಾ: ಅಗ್ನಿಯಾತ್ರೆ ಮತ್ತು ಅತ್ತಲಾ ದೈತ್ಯ ಸಭೆಯೊಳ್) ಆರಂಭದಲ್ಲಿ ಸರಸ್ವತಿಯ ಬದಲು ಆದಿಕವಿ ವಾಲ್ಮೀಕಿಯನ್ನು ಕಾವ್ಯಾವೇಶಕ್ಕಾಗಿ ಸರಸ್ವತಿಯನ್ನು ಸ್ತುತಿಸುವಂತೆಯೇ ಸ್ತುತಿಸಿರುವುದುಂಟು. ಕೆಲವು ಸಂಚಿಕೆಯ ಪ್ರಾರಂಭದಲ್ಲಿ, ಒಮ್ಮೊಮ್ಮೆ ಸಂಚಿಕೆಯ ನಡುವೆಯೂ ಸರಸ್ವತಿಯ ಸ್ತುತಿಯಿದೆ. ಎಂಟನೆಯ ಸಂಚಿಕೆಯ ಆರಂಭದಲ್ಲಿ ಬಂದಿರುವ ಸರಸ್ವತಿಯ ಸ್ತುತಿ ಹೀಗಿದೆ.

ವಾಣಿ, ಓ ಪ್ರಾಣವೀಣಾಪಾಣಿ, ಕವಿಯೆರ್ದೆಯ

ರಸರಾಣಿ, ಮಿಡಿಯೆನ್ನಾತ್ಮತಂತ್ರಿಯಂ; ನುಡಿಸೆನ್ನ

ಹೃದಯಮಂ; ನಡೆಸೆನ್ನ ಈ ಮಹಾಕಾವ್ಯಮಂ,

ತಾಯಿ ಕಂದನ ಕೈಯನಾನುತೆ ನಡೆಯಿಪಂತೆ. (ಕುಣಿದಳುರಿಯ ಉರ್ವಶಿ!, ಸಾಲುಗಳು: ೧-೪)

ಆತ್ಮವೆಂಬ ವೀಣೆಯ ತಂತಿಯನ್ನು ನುಡಿಸುವಂತೆ ರಸರಾಣಿಯನ್ನು ಕವಿ ಕೋರುತ್ತಾರೆ. ಮೊದಲೇ ‘ಪಸುಳೆ ನಾನ್; ತಾಯಿ ನೀನು’ ಎಂದಿರುವುದರಿಂದ ‘ತಾಯಿ ಕಂದನ ಕಯ್ಯನಾನುತೆ ನಡೆಯಿಪಂತೆ’ ಎಂಬ ಉಪಮೆ ಅರ್ಥಪೂರ್ಣವಾಗಿದೆ; ಕವಿಗಳೆಲ್ಲರೂ ಸರಸ್ವತಿಯ ಸುತರು ಎಂಬರ್ಥವನ್ನು ಧ್ವನಿಸುತ್ತದೆ. ಮುಂದುವರೆದು, ತನ್ನ ಮುಂದಿರುವ ಕಾವ್ಯದ ದೂರವನ್ನು, ಕಾವ್ಯದ ಉದ್ದೇಶವನ್ನು ಹೇಳಿ, ಅದಕ್ಕೆ ಸಹಕರಿಸುವಂತೆ ಸರಸ್ವತಿಯನ್ನು ಸ್ತುತಿಸುತ್ತಾರೆ.

........ಪರಕೆಯಿರಲೆನಗೆ

ನಿನ್ನಮೃತ ವರದ ಕರದಾ, ದೇವಿ ಓ ಶಾರದಾ!

ಕೊಲೆಯ ಕಥೆ ಬಗೆಸೆಳೆಯುವಂತೆ ರಾಮನ ಮನದ

ಕಲೆಯ ಕಥೆ ತಾಂ ಬಗೆಗೊಳಿಪುದೇನಳಿವಗೆಯ ರುಚಿಯ

ದೀನರಿಗೆ? ನನ್ನೀ ಕೃತಿಯನೋದುವಾತ್ಮರಾ

ದಾರಿದ್ರ್ಯಮಂ ಪರಿಹರಿಸಿ, ಓ ಸರಸ್ವತಿಯೆ,

ನೆಲಸಲ್ಲರಸಿಯಾಗಿ, ಸಹೃದಯ ಸರಸಲಕ್ಷ್ಮಿ! (ಕುಣಿದಳುರಿಯ ಉರ್ವಶಿ!, ಸಾಲುಗಳು: ೧೪-೨೦)

ಕಾವ್ಯರಚನೆಯಲ್ಲಿ ತೊಡಗಿರುವ ಕವಿಗೆ ಕಾವ್ಯಾವೇಶವನ್ನು ಕೊಡುವಂತೆ, ಕಾವ್ಯವನ್ನು ಓದುವ ಸಹೃದಯರಿಗೂ ಸರಸ್ವತಿಯೆ ಕೃಪೆ ಮಾಡು ಎಂಬುದು ನವೀನವಾಗಿದೆ. ಸಹೃದಯರಿಗೆ ಒಲಿಯುವಳಾದ್ದರಿಂದ ಸರಸ್ವತಿಗೆ ‘ಸಹೃದಯ ಸರಸಲಕ್ಷ್ಮಿ’ ಎಂಬ ವಿಶೇಷಣ ಚೆನ್ನಾಗಿ ಒಪ್ಪುತ್ತದೆ. ‘ಕಿಷ್ಕಿಂಧಾ ಸಂಪುಟ’ದ ಪ್ರಾರಂಭದ ಸಂಚಿಕೆಯಲ್ಲಿ, ಸರಸ್ವತಿಯ ಕಯ್ಯ ವೀಣೆಯನ್ನು ಪ್ರಾರ್ಥಿಸುತ್ತಾರೆ.

ಏಳು, ವೀಣೆಯೆ; ಏಳು, ವಾಕ್ಸುಂದರಿಯ ಕಯ್ಯ

ತ್ರೈಭುವನ ಸಮ್ಮೋಹಿನಿಯೆ, ಕವನಕಮನೀಯೆ!

ಮಂತ್ರದಕ್ಷಿಗಳಿಂದೆ ನೋಳ್ಪ ನೀಂ ಸರ್ವಕ್ಕೆ

ಸಾಕ್ಷಿ. ಕಂಡುದನೆಮಗೆ ಗಾನಗೆಯ್ ಶ್ರೀಕಂಠದಿಂ

ಶತತಂತ್ರಿಯಾ. ಪ್ರತಿಭೆ ತಾಂ ಪ್ರಜ್ವಲಿಸುಗೆಮ್ಮೆರ್ದೆಗೆ

ನಿನ್ನ ದರ್ಶನವೆಮ್ಮ ದರ್ಶನಂ ತಾನಪ್ಪವೋಲ್. (ಲಂಕೇಶನೊಲಿಸಿದನು ಮಾರೀಚನಂ, ಸಾಲುಗಳು: ೧-೬)

ಕವಿಗೆ ಸರಸ್ವತಿ ಮತ್ತು ಸರಸ್ವತಿಯ ವೀಣೆಯ ಬಗೆಗೆ ಯಾವ ಭೇದಭಾವವೂ ಇಲ್ಲ. ಆದರೆ, ಎರಡನ್ನೂ ಬೇರೆ ಬೇರೆ ಎಂಬಂತೆ ಸ್ತುತಿಸುವುದರಿಂದ ವೈವಿಧ್ಯ ಉಂಟಾಗಿದೆ; ಏಕತಾನತೆಯ ಭಯವಿರುವುದಿಲ್ಲ. ಸರಸ್ವತಿಗೆ ‘ಈ’ ‘ಈಕ್ಷತಿ’ ‘ಈಕ್ಷಿತಾ’ ಎಂಬ ಹೆಸರುಗಳೂ ಇವೆ. ಇವುಗಳಿಗೆ ಈಕ್ಷಿಸು, ಅವಲೋಕಿಸು, ಗ್ರಹಿಸು ಮುಂತಾದ ಅರ್ಥಗಳಿವೆ. ‘ನೀಂ ಸರ್ವಕ್ಕೆ ಸಾಕ್ಷಿ’ ಮತ್ತು ‘ಕಂಡುದನೆಮಗೆ ಶತತಂತ್ರಿಯಾ ಶ್ರೀಕಂಠದಿಂ ಗಾನಗೆಯ್’ ಎಂಬ ಪ್ರಯೋಗಗಳಲ್ಲಿ, ಸರಸ್ವತಿಗಿರುವ ಈ ಹೆಸರುಗಳ ಅರ್ಥಪ್ರಸ್ತುತತೆಯನ್ನು ಕಂಡುಕೊಳ್ಳಬಹುದು. ಕಣ್ಣೆದುರಿಗೆ ತಾನು ಕಂಡದ್ದನ್ನು ಕವಿಮನಸ್ಸು ಗ್ರಹಿಸಿ, ಅದನ್ನು ಕಲಾತ್ಮಕವಾಗಿ ಅಭಿವ್ಯಕ್ತಿಸುತ್ತದೆ. ಅದಕ್ಕೆ ‘ಪ್ರತಿಭೆ’ ಎಂಬ ಸಾಮರ್ಥ್ಯ ಬೇಕು. ಆ ಪ್ರತಿಭೆಯೇ ಸರಸ್ವತಿ. ‘ನೀಂ ಸರ್ವಕ್ಕೆ ಸಾಕ್ಷಿ’ ಮತ್ತು ‘ಕಂಡುದನೆಮಗೆ ಗಾನಗೆಯ್’ ‘ಸರ್ವಪಾರದರ್ಶಿಕೆ’ ಮೊದಲಾದ ಪ್ರಯೋಗಗಳನ್ನು ಈ ಹಿನ್ನೆಲೆಯಲ್ಲಿ ಗ್ರಹಿಸಬಹುದಾಗಿದೆ. ಇಲ್ಲಿ ಹಾಡುತ್ತಿರುವವಳು ವೀಣಾಸರಸ್ವತಿ; ಬರೆಯುತ್ತಿರುವವನು ಕವಿ. ಆದ್ದರಿಂದ ಸರಸ್ವತಿಯ ದರ್ಶನವೇ ಕವಿಯ ದರ್ಶನವೂ ಆಗಿರುತ್ತದೆ. ಇಂತಹುದೇ ಮತ್ತೊಂದು ಪ್ರಸಂಗ ‘ರಯ್‌ಗೆ ಕರೆದೊಯ್, ಓ ಅಗ್ನಿ!’ ಸಂಚಿಕೆಯ ಪ್ರಾರಂಭದಲ್ಲಿ ಬಂದಿದೆ.

ಕ್ರಾಂತದರ್ಶಿನಿ, ಈ ಜಗತ್‌ಕಾಂತಿಕರೆ, ಶಾಂತೆ,

ಭ್ರಾಂತಿಹರೆ, ಸುಚಿರೆ, ಸುಸ್ಥಿರೆ, ಪರಾತ್ಪರೆ, ವಾಣಿ,

ಓ ಪರಾತ್ಪರವಾಣಿ, ಮಿಡಿ ನಿನ್ನ ಬೀಣೆಯಂ;

ನುಡಿ ಮುಂದೆ ನಡೆದುದಂ, ನಿನಗೆ ಕಾಣ್ಬಂದದಿಂ (ರಯ್‌ಗೆ ಕರೆದೊಯ್, ಓ ಅಗ್ನಿ!, ಸಾಲುಗಳು: ೧-೫)

ಕಾವ್ಯದ, ಸಾಹಿತ್ಯದ ಅರಿವಿನಿಂದ ನಮ್ಮ ಭ್ರಮೆಗಳು ಕಳೆದು, ಶಾಂತಿ ಲಬಿಸುತ್ತದೆ; ಜಗತ್ತನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ. ಆ ಹಿನ್ನೆಲೆಯಲ್ಲಿ ‘ಭ್ರಾಂತಿಹರೆ’ ‘ಶಾಂತೆ’ ‘ಜಗತ್‌ಕಾಂತಿಕರೆ’ ಎಂಬ ವಿಶೇಷಣಗಳು ಗಮನಸೆಳೆಯುತ್ತವೆ.

‘ಇರ್ದುದು ಮಹೇಂದ್ರಾಚಲಂ'’ ‘ರಾಮಾಯಣದರ್ಶನಂ’ನಲ್ಲಿ ಒಂದು ಪ್ರಮುಖ ಘಟ್ಟ. ಸೀತಾನ್ವೇಷಣೆಗಾಗಿ ದಿಕ್ಕು ದಿಕ್ಕಿಗೆ ಸುಗ್ರೀವನಾಜ್ಞೆ ಹೊತ್ತು ಹೋಗಿದ್ದ ಕಪಿಸೈನ್ಯದ ಕಾರ್ಯಫಲವನ್ನು ಅರಿತು ಮುಂದಿನ ಸಿದ್ಧತೆಗೆ ತೊಡಗುವ ಸಮಯ. ಕಪಿಸೈನ್ಯದ ಹಲವು ಗುಂಪುಗಳ ಕಾರ್ಯಸಾಹಸವನ್ನು ಅರಿಯಲು ಕವಿ ಆಶ್ರಯಿಸುವುದು ಮತ್ತೆ ವಿಪಂಚಿ ಅಂದರೆ ವೀಣೆಯನ್ನೆ!

ಓ, ಏಳ್, ವಿಪಂಚಿಯೆ, ಕಲಾಲತಾಂಗಿಯ ಬೆರಳ್

ತಳಿರ ಸೋಂಕಿನ ಸೊಮ್ಪು ಸಾಲ್ವುದೇನಿನ್ ನಿನಗೆ?

ಪ್ರಳಯ ಭೈರವ ಡಮರು ರೌರವಾವೇಶಮಂ

ಆಹ್ವಾನಗೆಯ್............................................. (ಇರ್ದುದು ಮಹೇಂದ್ರಾಚಲಂ, ಸಾಲುಗಳು: ೧-೪)

ಕಲಾಲತಾಂಗಿಯ ಬೆರಳೆಂಬ ತಳಿರಿನಿಂದ ವೀಣೆಯನ್ನು ಮೀಟಿ ಹೊಮ್ಮಿಸಿದ ನಾದ, ಮುಂದಿನ ಸಾಹಸದ ಕಥೆಯನ್ನು ಹೇಳಲಾರದು. ಸಾಹಸದ ಕಥೆಯಾದ್ದರಿಂದ ಡಮರು ರೌರವಾವೇಶವನ್ನು ಆಹ್ವಾನಗೆಯ್ಯುವಂತೆ ಪ್ರಾರ್ಥಿಸುತ್ತಾರೆ. ಮುಂದುವರೆದು,

ತಾಂಡವ ಶಿವನ ಕಯ್ಯ ಡಮರು ಆವೇಶಮಂ

ಆಹ್ವಾನಗೆಯ್! ಸಾಗರೋಪಮಂ ಗಾನಗೆಯ್

ಆಂಜನೇಯನ ಸಾಗರೋಲ್ಲಂಘನದ ಮಹಾ

ಸಾಹಸ ಕಥಾಸರಿತ್ಸಾಗರದ ಸಂಮಥನಮಂ! (ಇರ್ದುದು ಮಹೇಂದ್ರಾಚಲಂ, ಸಾಲುಗಳು: ೨೬-೨೮)

ಆಂಜನೇಯನ ಸಾಗರೋಲ್ಲಂಘನದ ಸಾಹಸದ ಕಥೆಯಾದ್ದರಿಂದ ಶಿವನ ಡಮರಿನ ಆವೇಶ ಬೇಕೆಂಬುದು ಕವಿಯ ಆಶಯ. ನಿರಂತರವಾಗಿ ಹರಿದ ಕವಿಪ್ರತಿಭೆ ನಿಲುಗಡೆಯ ಬಯಸಿ, ನಿಂತು, ಮುಂದುವರೆಯುವುದಕ್ಕೆ ಮೊದಲು ಮತ್ತೆ ಮತ್ತೆ ಸರಸ್ವತಿಗೆ ಕಾವ್ಯಾವೇಶಕ್ಕಾಗಿ,

.........ದರ್ಶನದೋರೆಮಗೆ,

ಓ ವಾಙ್ಮಯಿಯೆ, ನಿತ್ಯಸತ್ಯಂ ನಿಕ್ವಣಿಸುವೋಲ್

ವಚಸ್‌ತಂತ್ರಿ ಕವಿಯ ಚಿದ್ಯಂತ್ರಸಮ ಹೃದ್ವೀಣೆಯಿಂ! (ಕನಕಲಂಕಾನ್ವೇಷಣಂ, ಸಾಲುಗಳು: ೧೦-೧೨)

ಎಂದು ಬೇಡುತ್ತದೆ. ಸರಸ್ವತಿಯ ಸತ್ಯವಾಣಿ ನಿತ್ಯವಾದುದು. ವಾಣಿಯ ವೀಣೆಯೊರೆದುದನೇ ಹಾಡುವ ಕವಿಯ ಹೃದಯ ವೀಣೆಯೂ ಅದನ್ನೇ ದನಿಗೈಯಬೇಕು. ಆ ದರ್ಶನವನ್ನೇ ಕವಿ ಬೇಡುತ್ತಾನೆ. ಹೀಗೆ ಘಟನೆಯಿಂದ ಘಟನೆಗೆ ಹೊರಳುವ ಮೊದಲು, ಸರಸ್ವತಿಯ ಸ್ತುತಿಯನ್ನು ಪರಿಣಾಮಕಾರಿಯಾಗಿ ‘ತಪಸ್ಸಿದ್ಧಿ’ ಎಂಬ ಸಂಚಿಕೆಯ ಪ್ರಾರಂಭದಲ್ಲಿ ಬಳಸಿಕೊಳ್ಳಲಾಗಿದೆ. ಲಂಕೆಯಲ್ಲಿನ ಯುದ್ಧ, ಯುದ್ಧಾನಂತರದ ಕಾರ್ಯಭರಗಳ ವರ್ಣನೆಯಲ್ಲಿ ಮುಳುಗಿಹೋಗಿದ್ದ ಕವಿಗೆ, ಒಮ್ಮೆಲೆ ಅಯೋಧ್ಯೆಯ ನೆನಪಾಗುತ್ತದೆ. ಆಗ ವಾಗ್ದೇವಿಯನ್ನೇ ಪ್ರಾಥಿಸುತ್ತಾರೆ.

ಸಾಲದೇನಿನಿತೆ ಸೂಚನೆ ನಿನಗೆ, ಓ ವಾಣಿ,

ವಾಗ್ದೇವಿ? ಯಾಚಿಸುವೆ ಕೈಮುಗಿದು. ಪಿಂತಿರುಗು;

ಬಾ, ತಾಯಿ; ಸಾಲ್ಗುಮಾ ಲಂಕೆ, ......................

.....................................................

............... ತೋರೆಮಗೆಂತು

ಸುವ್ರತನ್ ಭರತದೇವಂ? ..............................

............................. ಹಾಡಿ ತೋರೆಮಗೆ, ಓ ತಾಯೆ, ಹೇ

ವಾಗ್ದೇವಿ! (ತಪಸ್ಸಿದ್ಧಿ, ಸಾಲುಗಳು: ೧೫-೨೫)

ಈ ರೀತಿಯ ಕಾವ್ಯತಂತ್ರದ ಭಾಗವಾಗಿ ‘ಶ್ರೀರಾಮಾಯಣದರ್ಶನಂ’ ಮಹಾಕಾವ್ಯದಲ್ಲಿ ಸರಸ್ವತಿಯ ಸ್ತುತಿ ಮತ್ತೆ ಮತ್ತೆ ಬಳಕೆಯಾಗಿದೆ.

ಏನು ಮೌನವಿದೆನ್ನ ಕೋಮಲೆ? ಕೋಪವೆ ನಿನಗೆ

ಕಾಮಿಸಿದನಿನಿಯನೆಂದನ್ಯ ವಿಷಯ ವಧೂ

ಸರೋಜ ಶಾರದೆಗೆ? ತಂಗೆಗೆ ಕರುಬುವರೆ, ಪೇಳ್,

ಉದಾತ್ತೆ ನೀಂ? ರೂಪಕ ರೂಪಿಯಾದೊಡೇನಾ

ಪ್ರೇಮಮುಂ ರಾಮ ಮಹಿಮಾ ಕೀರ್‍ತಿ ಕಥೆಯಲ್ತೆ?

ಕವಿಯೊಲ್ಮೆ ಕಡಲಲ್ತೆ? ಬಡಬ ಕುಂಭೋದ್ಭವರ್

ಕುಡಿದು ಪೂರೈಸುವರೆ? ನಿನಗೆ ರಸಮಿರದವೋಲ್

ಪೀರ್ವಳೆಂತೊರ್ವಳ್ ಕೃಶಾಂಗಿ ತಾನದನ್? ಏಳ್

ಮುನಿಸುನುಳಿ; ಏಳ್, ಕೊಳ್ ಸಹಸ್ರತಂತ್ರಿಯ ನಿನ್ನ

ಗೀರ್ವಾಣ ವೀಣೆಯಂ; ಪೇಳ್, ಮೀಂಟು ಮುಂದಣ ಕಥಾ

ಹರಜಟಾ ಜೂಟಪ್ರಪಾತ ಗಂಗಾ ಸ್ತೋತ್ರಮಂ ಸಂಗೀತಮಂ! (ಸೈನ್ಯಗುಪ್ತಿ, ಸಾಲುಗಳು: ೧-೧೨)

ಸರಸ್ವತಿಯ ಸ್ತುತಿ ಕಾವ್ಯತಂತ್ರವಾಗಿ ಬಳಕೆಯಾಗಿರುವುದಕ್ಕೆ ಒಂದು ಉತ್ತಮ ಉದಾಹರಣೆ ಮೇಲಿನ ಭಾಗ. ಕವಿಪ್ರತಿಭೆ ಅಲೌಕಿಕವಾದರೂ, ಕವಿ ಲೌಕಿಕನೇ! ಕಾವ್ಯ ರಚನೆ ನಿಂತು, ಮತ್ತೆ ಪ್ರಾರಂಭವಾಗಬೇಕಾದಾಗ, ಸರಸ್ವತಿಯನ್ನು ರಮಿಸಿ, ನಮಿಸಿ ಮುಂದುವರೆಯುವ ಸುಂದರ ಚಿತ್ರಣ ಇದಾಗಿದೆ. ಇನಿಯನಾದ ಬ್ರಹ್ಮನೇನಾದರೂ ಅನ್ಯ ವಿಷಯ ವಧೂ ಸರೋಜೆಗೆ ಒಲಿದನೆಂದು ಕೋಪವೆ? ಅದೂ ಒಂದು ಮಹಿಮೆಯಲ್ಲವೆ. ಉದಾತ್ತೆಯಾದ ನೀನು ತಂಗೆಗೆ ಕರುಬುವುದೆ? ಸೃಷ್ಟಿಕರ್ತನೊಲ್ಮೆ ಕಡಂತೆ. ಅದನ್ನು ಕೃಶಾಂಗಿಯಾದ ನಿನ್ನ ತಂಗೆಯೊಬ್ಬಳು ಎಷ್ಟೆಂದು ಕುಡಿಯಬಲ್ಲಳು? ಕೋಪವನ್ನು ಬಿಡು ಎಂದು ಸಂತೈಸಿ, ರಮಿಸಿ, ವೀಣೆಯನ್ನು ಹಿಡಿದು ಮುಂದಿನ ಕಥೆಯನ್ನು ನುಡಿಸುವಂತೆ ಪ್ರಾರ್ಥಿಸುತ್ತಾರೆ.

ಒಳ್ಳೆಯ ಸಾಹಿತ್ಯದಲ್ಲಿ, ಪಾತ್ರಕ್ಕೆ ಒಂದು ಹೆಸರನ್ನಿಟ್ಟರೆ ಕವಿಯ ಕೆಲಸ ಮುಗಿದಂತೆ; ಆ ಪಾತ್ರಗಳು ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳುತ್ತವೆ. ಅಷ್ಟರ ಮಟ್ಟಿಗೆ ಕವಿ ನಿರ್ಲಿಪ್ತನಾಗಿರಬೇಕು. ಹಾಗೇ, ತನ್ನದೇ ಕಾವ್ಯದ ಪಾತ್ರವೊಂದು ಏನೋ ಗಹನವಾದ, ರಹಸ್ಯವಾದ (ಬೇರೆ ಪಾತ್ರಗಳಿಗೆ ತಿಳಿಯದಂತೆ) ಕಾರ್ಯವೊಂದನ್ನು ಎಸಗುತ್ತಿರುತ್ತದೆ. ಆಗ ಸ್ವತಃ ಕವಿಯೇ ಅಚ್ಚರಿಪಡುತ್ತಾನೆ. ಅದೇನೆಂದು ತನ್ನ ಸ್ಫೂರ್ತಿಯ ಸೆಲೆಯಾದ, ತನಗೆ ಕಾವ್ಯವನ್ನು ಹೇಳಿ ಬರೆಸುತ್ತಿರುವ ವಾಗ್ದೇವಿಯ ಮೊರೆಹೋಗುತ್ತಾನೆ. ಸಂದರ್ಭಕ್ಕನುಗುಣವಾದ ವಿಶೇಷಣಗಳೊಂದಿಗೆ, ಅಂತಹದೊಂದು ಸನ್ನಿವೇಶ ‘ದಶಾನನ ಸ್ವಪ್ನಸಿದ್ಧಿ’ ಸಂಚಿಕೆಯ ಆರಂಭದಲ್ಲಿ ಬಂದಿದೆ.

............................ಪೇಳ್ ತಾಯೆ

ಓ ವಾಗಧಿಷ್ಠಾತ್ರಿ, ತೊಡಗಿಹನದೇನಂ

ಮಹತ್ ಪೂಜೆಯಂ ಶರ್ವಮಂದಿರದೊಳೇಕಾಂಗಿ?

ಜ್ಞಾನಾಧಿದೇವಿ ನೀಂ, ಮೇಣ್ ವಿಜ್ಞಾನ ನೇತ್ರಿ:

ಹೊರನನ್ನಿಯೊಂದಲ್ಲದಂತಶ್ಚಕ್ಷು ತಾಂ ಕಾಣ್ಬ

ಲೌಕಿಕಾತೀತಮಹ ನಿತ್ಯಸತ್ಯಂಗಳಂ

ತೋರೆನಗೆ, ದೇವಿ, ವಿಶ್ವಾಂತರಾತ್ಮೆ! ಸ್ಥೂಲಮಂ

ಸೂಕ್ಷ್ಮಮಂ, ಕೋಶಕೋಶಗಳಿತರ ಕಾಲಮಂ

ದೇಶಮಂ, ಕಾರಣವನಂತೆ ಕಾರಣದಾಚೆ

ಲೀಲಾ ಮಹೋದ್ದೇಶಮಂ ಬಲ್ಲೆ ನೀಂ: ಕವಿಗೆ

ಕೃಪೆಗೆಯ್, ಅವಿದ್ಯೆ, ಹೇ ವಿದ್ಯೆ, ವಿದ್ಯಾತೀತೆ! (ದಶಾನನ ಸ್ವಪ್ನಸಿದ್ಧಿ, ಸಾಲುಗಳು: ೫-೧೫)

ಸರಸ್ವತಿಯು ಜ್ಞಾನದೇವಿ, ವಿಜ್ಞಾನ ನೇತ್ರಿ, ವಿಶ್ವಾಂತರಾತ್ಮೆಯಾದ್ದರಿಂದ ಕಾಲ, ದೇಶ, ಕಾರಣ, ಕಾರಣದಾಚೆಗಿನ ಲೀಲಾ, ಉದ್ದೇಶ ಇವೆಲ್ಲವನ್ನೂ ತೋರಿಸಬಲ್ಲಳು. ‘ಅವಿದ್ಯೆ, ವಿದ್ಯೆ ವಿದ್ಯಾತೀತೆ’ ಎಂಬ ಮಾತಂತೂ ಸರಸ್ವತಿಯ ಅಲೌಕಿಕ ಪ್ರತಿಮೆಗೆ ತೊಡಿಸಿದ ನುಡಿಯಾಭರಣವಾಗಿದೆ.

ಕುವೆಂಪು ಅವರ ಸರಸ್ವತಿಯ ವಿರಾಡ್‌ದರ್ಶನವಾಗುವುದು, ಋತಚಿತ್ ಸ್ವರೂಪಿಣಿಯರಾದ ಶಿವೆ, ಸರಸ್ವತಿ ಮತ್ತು ಲಕ್ಷ್ಮಿಯರನ್ನು ವಂದಿಸಿ ಪ್ರಾರಂಭಿಸುವ ‘ಅಭಿಷೇಕ ವಿರಾಡ್‌ದರ್ಶನ’ವೆಂಬ ಕೊನೆಯ ಸಂಚಿಕೆಯಲ್ಲಿ. ಶ್ರೀರಾಮ ಪಟ್ಟಾಭಿಷೇಕದ ವಿಶ್ವರೂಪವನ್ನು ತೋರಿಸಲ್ ಸ್ವತಃ ‘ಅನಾದಿಕವಿ’ಯೇ ಬರುತ್ತಾನೆ. ಇದುವರೆಗೂ ‘ನೀನೊರೆದುದನು ನಾನು ಬರೆವೆನು’ ಎನ್ನುತ್ತಿದ್ದ ಕವಿ, ಆ ಸೃಷ್ಟಿಪ್ರಜ್ಞೆಗೆ ‘ಅನಾದಿಕವಿ’ ಎಂಬ ವಿಶೇಷಣವನ್ನು ಇಲ್ಲಿ ತಂದಿದ್ದಾರೆ. ಪುಲ್ಲಿಂಗವಾಚಿಯಾದರೂ, ‘ಅನಾದಿಕವಿ’ ಕಲ್ಪನೆ ಸರಸ್ವತೀ ತತ್ವದ ವಿಸ್ತೃತ ರೂಪವೇ ಆಗಿದೆ. ‘ನೀನಾರು?’ ಎಂದ ಕವಿಗೆ,

ಅನಾದಿಕವಿ ನಾಂ ಕಣಾ! ವಾಲ್ಮೀಕಿ

ವ್ಯಾಸ ಹೋಮರ್ ದಾಂತೆ ಫಿರ್ದೂಸಿ ಮಿಲ್ಟನ್

ಮಹಾಕವೀಶ್ವರರೆನಗೆ ಬಾಹುಮಾತ್ರಗಳಲ್ತೆ?

ಬಹುನಾಮರೂಪಗಳ್, ಬಹು ಕಾಲದೇಶಗಳ್ ನನಗೆ. ನೀನುಂ ನಾನೆಯೆ, ಕುವೆಂಪು! (ಅಭಿಷೇಕ ವಿರಾಡ್‌ದರ್ಶನಂ, ಸಾಲುಗಳು: ೩೪-೩೮)

ಇಲ್ಲಿ ವ್ಯಕ್ತವಾಗುವ ಸರಸ್ವತಿ ಸ್ವರೂಪ ಕಾಲದೇಶಗಳನ್ನು ಮೀರಿದ್ದು. ಕಾವ್ಯದುದ್ದಕ್ಕೂ, ಸರಸ್ವತಿ ಮತ್ತು ಸರಸ್ವತಿಯ ವೀಣೆಯನ್ನು ಕಾವ್ಯಾವೇಶಕ್ಕಾಗಿ ಬೇಡಿದ ಕವಿಪ್ರತಿಭೆ, ಎಲ್ಲ ಕವಿಗಳಿಗೂ ಮಾತೃರೂಪವಾದ ಪ್ರತಿಭಾಸ್ವರೂಪವನ್ನು ಸರಸ್ವತಿಗೆ ನಿರ್ಮಿಸಿದೆ. ಈ ಸರಸ್ವತಿಯು ಸರ್ವಭಾಷಾಮಯೀ ಮಾತ್ರವಲ್ಲ. ವಿಶ್ವಮಾತೆಯೂ ಹೌದು. ಕಾವ್ಯಾರಂಭದಲ್ಲಿ ಬಂದ ‘ವಿಶ್ವವಾಣ’ ಎಂಬ ಒಂದು ಮಾತು, ವೇದವಾಗುವುದು ಈ ಕೊನೆಯ ಸಂಚಿಕೆಯಲ್ಲಿ. ಸರಸ್ವತಿಯು ನುಡಿಸಿದ್ದನ್ನಷ್ಟೇ ಸರಸ್ವತಿಯ ಬಾಹುರೂಪರಾದ ಕವಿಗಳು ಬರೆಯುವುದು. ಆದ್ದರಿಂದ ಕಾವ್ಯವೆಂಬುದು ಸರಸ್ವತಿಯ ಕೃತಿ, ಭಗವಂತನ ಅವತಾರವಾಗುತ್ತದೆ. ‘ಕೃತಿರೂಪದಿಂದಲೂ ಭಗವಂತನ ಅವತಾರವಾಗುತ್ತದೆ’ ಎಂಬ ಮಾತಿಗೆ ಅನುಗುಣವಾಗಿಯೇ, ಕವಿ ತಾನು ಬರೆದ ‘ಕೃತಿಸರಸ್ವತಿ’ಗೆ ತಾನೇ ಮಣಿಯುತ್ತಾನೆ.

ಅಂದ ಹಾಗೆ ‘ನುಡಿರಾಣಿಯ ಗುಡಿ ಕುವೆಂಪು’ ಎಂಬ ಸಾಲು ಕುವೆಂಪು ಅವರ ‘ಕುವೆಂಪು’ ಎಂಬ ಕವಿತೆಯದ್ದು!