ನೀಳಾದೇವಿಯವರು ೧೯೩೨ ಆಗಸ್ಟ್ ೨೨ರಂದು ಮೈಸೂರಿನಲ್ಲಿ ಜನಿಸಿದರು, ಇವರ ಪ್ರಥಮ ಕತೆ "ಅಪ್ಪಾ, ನಾನೂ ಬರ್ತೀನಪ್ಪಾ" ತಾಯಿನಾಡು ಪತ್ರಿಕೆ ಯಲ್ಲಿ ಪ್ರಕಟವಾದಾಗ ಇವರಿಗೆ ೧೫ ವರ್ಷ. ಕಾದಂಬರಿ, ಕಿರುಗತೆ, ಲಘುಹಾಸ್ಯ, ಶಿಶು ಸಾಹಿತ್ಯ, ನಾಟಕ, ಪ್ರವಾಸ ಕಥನ, ಅನುವಾದಗಳಲ್ಲಿ ಸಮರ್ಥವಾಗಿ ಕೈಯಾಡಿಸಿದ ಹಿರಿಯ ಕಿರುಗತೆಗಳ ಕತೆಗಾರ್ತಿ. ನೀಳಾದೇವಿ, ಅವರ ಅನೇಕ ಕಥಾ ಸಂಗ್ರಹಗಳೂ ಬಂದಿವೆ. ಒಟ್ಟು ೪೦ ಗ್ರಂಥಗಳು. ಇನ್ನಷ್ಟು ಇನ್ನೂ ಪ್ರಕಟಣೆಯ ಹಂತಗಳಲ್ಲಿವೆ. ಅಭಿನಂದನಾ ಗ್ರಂಥಗಳಿಗೆ ಇವರ ಲೇಖನಗಳ ಕೊಡುಗೆ, ಅಪಾರ. ಬೇಡಿಬಂದವಳು, ಇವರ ಒಂದು ಜನಪ್ರಿಯ ಕಾದಂಬರಿ ;ಇದು ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಚಲನಚಿತ್ರವಾಗಿ ತೆರೆ ಕಂಡಿದೆ. ನೀಳಾದೇವಿಯರ ಕೆಲವು ಸಣ್ಣ ಕಥೆಗಳೂ ತೆರೆ ಕಂಡಿವೆ. ಇವರ ಬರಹಗಳು, ಧಾರಾವಾಹಿಗಳು ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಕಾಣಬರುತ್ತವೆ. ಅವರಿಗೆ ಹಲವು ಸನ್ಮಾನಗಳು ಸಂದಿವೆ. ೨೦೦೪ ರಲ್ಲಿ ಅಮೆರಿಕದ ಫ್ಲಾರಿಡಾ ದಲ್ಲಿ ನಡೆದ, ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ದಲ್ಲಿ ಭಾಗವಹಿಸಲು ನೀಳಾದೇವಿಯವರಿಗೆ ವಿಶೇಷ ಆಹ್ವಾನ ಬಂದಿತ್ತು.

ಮನೆಯ ವಾತಾವರಣ

ಬದಲಾಯಿಸಿ

ಮನೆಯ ವಾತಾವರಣ ಸಾಹಿತ್ಯ ಪ್ರೇರಣೆಗೆ, ಸಾಹಿತ್ಯ ಕೃಷಿಗೆ ಕೈಮರವಾಯಿತು. ನೀಳಾದೇವಿಯವರು ಸುಸಂಸ್ಕೃತ, ವಿದ್ಯಾವಂತ, ಹಾಗೂ ಶ್ರೀಮಂತ ಪರಿವಾರದಲ್ಲಿ ಜನ್ಮವೆತ್ತಿದರು. ಮನೆಯಲ್ಲಿ ಅವರನ್ನು ಕಂಡರೆ ಎಲ್ಲರಿಗೂ ಪ್ರಾಣ. ತಮಗೆ ತೋಚಿದ ಸಣ್ಣ ಕಥೆಗಳನ್ನು ತಮ್ಮ ೯ ನೆಯ ವಯಸ್ಸಿನಲ್ಲೇ ಬರೆದರು. ಇವರ ತಾಯಿ ರುಕ್ಮಿಣಿಯಮ್ಮ ; ತಂದೆ ಕೆ.ಎಸ್.ರಾಮಸ್ವಾಮಿ[] . ತಂದೆ-ತಾಯಿಯರು ಬಹಳ ಶಿಸ್ತನ್ನು ಪಾಲಿಸುವವರು ಹಾಗೂ ಎಲ್ಲದರಲ್ಲೂ ಅಚ್ಚುಕಟ್ಟು. ನೀಳಾದೇವಿ ಕೆಲವು ಚಿತ್ರಗಳನ್ನೂ ಬರೆಯುತ್ತಿದ್ದರು. ಅಂತಹ ತರಭೇತಿ ಮನೆಯಲ್ಲಿ ದೊರೆತಿದ್ದು ಅವರ ಅದೃಷ್ಟ. ಅವರ ಪತಿ, ಶ್ರೀನಿವಾಸನ್, ಹತ್ತಿರದ ಸಂಬಂಧಿ. ಚೆನ್ನಾಗಿ ಮನಸ್ಸನ್ನು ಅರ್ಥಮಾಡಿ ಕೊಳ್ಳುವ ಸಹೃದಯಿಗಳು. ಸ್ನೇಹಮಯಿ ಯಾದ ಆತ ನಿಧನ ಆದದ್ದು ವಿದೇಶದಲ್ಲಿ. ಚಿಕ್ಕ ವಯಸ್ಸಿನಲ್ಲಿ ಆದ ಈ ಘಟನೆಯಿಂದ ನೀಳಾಯವರ ಮನಸ್ಸಿಗೆ ಬಹಳ ಆಘಾತವಾಯಿತು. ಅವರ ಹುಟ್ಟು ಹೆಸರು ಗಾಯಿತ್ರಿ ದೇವಿ. ಆದರೆ ಹೇಗೋ ನೀಳಾದೇವಿಯೆಂಬ ಹೆಸರು ನಂತರ ಪ್ರಚಲಿತವಾಯಿತು. ಮುದ್ದಿನ ಮಗಳು, ಗಂಭೀರವಾದ ವ್ಯಕ್ತಿತ್ವ, ತೂಕದ ಮಾತು, ಅವರ ವ್ಯಕ್ತಿತ್ವದ ಪ್ರಮುಖ ವಿಚಾರಗಳು. ಬೆಂಗಳೂರಿಗೆ ಬಂದ ಮೇಲೆ, ಶ್ರೀಮತಿ ಸುನಂದಮ್ಮನವರ ಸ್ನೇಹ, ಒಡನಾಟ, ಮಲ್ಲೇಶ್ವರ ಗುಂಪಿನ ಲೇಖಕಿಯರ ತಂಡ. ಅಲ್ಲಿ ಉತ್ಸಾಹ, ಒಗ್ಗಟ್ಟು, ಚಟುವಟಿಕೆ ಒಡನಾಟ ಇವೆಲ್ಲವೂ ಇದ್ದವು.

'ಸುನಂದಮ್ಮನವರ ಫೇಮಸ್ ೧೪ ಎಂಬ ತಂಡ, ಮುಂದೆ ಲೇಖಕಿಯರ ಸಂಘವಾಗಿ ಬೆಳೆದ ಪ್ರಸಂಗ ರೋಚಕವಾಗಿದೆ. ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಹೆಚ್ಚಾಗಿ ಹೊರಗಡೆ ಹೋಗುವ ಅಭ್ಯಾಸ ತೀರ ಕಡಿಮೆ. ಏನಿದ್ದರೂ ಮನೆಯಲ್ಲಿ ೪ ಗೋಡೆಗಳ ಮಧ್ಯವೇ ಬರೆಯುವುದು. ಹೆಂಗಸರು ಬರೆದದ್ದು ,ಎಂದು ಮೂಲೆ ಗುಂಪು ಮಾಡುತ್ತಿದ್ದ ಕಾಲವದು, ಹೇಗೋ ಕೆಲವು ಲೇಖನಗಳು, ಅಲ್ಲಿ-ಇಲ್ಲಿ ಪ್ರಕಟಣೆಯನ್ನು ಕಂಡಿದ್ದವು. ಪ್ರತಿತಿಂಗಳು ಬರಹಗಾರ್ತಿಯರೆಲ್ಲ ಸುನಂದಮ್ಮನವರ ಮನೆಯಲ್ಲಿ ಸೇರಿ, ಪುಸ್ತಕಗಳ ಬಗ್ಗೆ ಚರ್ಚೆ, ಹೊಸ ಪ್ರಕಟನೆಯ ಬಗ್ಗೆ ತಮ್ಮ ಅನಿಸಿಕೆ ಇತ್ಯಾದಿಗಳನ್ನು ಮುಕ್ತವಾಗಿ ಚರ್ಚಿಸುತ್ತಿದ್ದರು. ಸುನಂದಮ್ಮನವರ ಹೋಂವರ್ಕ, ನಲ್ಲಿ ಹೆಸರು ಬಂದರೆ ಸಾಕು. ಕೆಲವು ಸಲ ಮನೆಯಲ್ಲೇ ಪ್ರಮುಖ ಸಾಹಿತಿಗಳನ್ನು ಕರೆಸಿ, ಚರ್ಚೆ, ಮುಖಾಮುಖಿ, ಮಾತುಕತೆಗಳನ್ನಾಡುತ್ತಿದ್ದರು. ಹೆಣ್ಣು ಮಕ್ಕಳಲ್ಲಿ ಕೆಲವರು ಕೆಲಸಕ್ಕೆ ಹೋಗುತ್ತಿದ್ದರು. ಅವರಲ್ಲಿ ಆಕಾಶವಾಣಿಯ ಶ್ರೀಮತಿ. ಎಚ್.ಎಸ್.ಪಾರ್ವತಿ, ನಾಗಮಣಿ ಎಸ್. ರಾವ್ ಪ್ರಮುಖರು. ಹೀಗೆ ಸುಮಾರು ೧೮ ವರ್ಷಗಳ ಕಾಲ ನಡೆದ ಸ್ತ್ರೀ ಚಟುವಟಿಕೆಗಳಿಗೆ ಮೂರ್ತ ರೂಪು ಕೊಟ್ಟವರು ಜಿ.ನಾರಾಯಣ ರವರು. ಅವರು ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ, ಈ ಚಟುವಟಿಕೆಗಳನ್ನು ರಾಜ್ಯದಾದ್ಯಂತ ವಿಸ್ತರಿಸಲು, ಲೇಖಕಿಯರ ಸಂಘಕ್ಕೆ ಅಸ್ತಿಭಾರ ಹಾಕಿ, ಸಹಾಯ ಮಾಡಿದರು.

'ಮೂಕರಾಗ' ಕಿರುತೆರೆಯ ಮೇಲೆ

ಬದಲಾಯಿಸಿ

ನೀಳಾದೇವಿಯವರ ಅತ್ಯುತ್ತಮ ಕೃತಿ, ಮೂಕರಾಗ, ಕಿರುತೆರೆಯಲ್ಲಿ ಪ್ರಸಿದ್ಧವಾಯಿತು. ವೈಶಾಲಿ ಕಾಸರವಳ್ಳಿಯವರ ನಿರ್ದೇಶನದ ಧಾರಾವಾಹಿಯಾಗಿ ಜನಪ್ರಿಯತೆ ಗಳಿಸಿದ್ದ ಕಾದಂಬರಿ, ಕರುಳಿನ ನೋವಿನ ಎಳೆಗಳಿಂದ ನೇಯ್ದ ದಾರುಣ ವೇದನೆ-ಕಥೆ. ಇಂತಹ ಪರಿಸ್ಥಿತಿ ಅವರ ಜೀವನದಲ್ಲಾದಾಗ, ತಲೆಯ ಮೇಲೆ ಕೈಯೊತ್ತಿ ಕೂಡಲಿಲ್ಲ. ಮಗಳು ಪರಾವಲಂಭಿಯಾಗದಂತೆ ಎಚ್ಚರ ವಹಿಸಿ, ಅವಕಾಶಗಳನ್ನು ಒದಗಿಸಿ ಕೊಟ್ಟರು. ಹಾಗಾಗಿ ಆಕೆ ಬೆಳೆದು, ಇಂದು ಅಂತರಾಷ್ಟ್ರೀಯ ಮಟ್ಟದ ಸಾಹಿತಿ, ಕಲಾವಿದೆ, ಆದರ್ಶ ಗೃಹಿಣಿ, ಒಳ್ಳೆ ತಾಯಿಯಾಗಿ ಬೆಳೆದಿದ್ದಾರೆ. ನಾ ಕಂಡ ಅಖಂಡ-ಅಧ್ಯಯನ ಯೋಗ್ಯ. ಹೊಸಿಲು, ಭಾರತ -ಅಮೆರಿಕ ದೇಶಗಳ ವಿಭಿನ್ನ ಸಂಸ್ಕೃತಿಗಳ ನಡುವಣ ಕಥಾ ವಸ್ತು. ಬೇರಿಂದ ಫಲಕ್ಕೆ-ಚಾರಿತ್ರ್ಯ್ಕಿಕ ಹಿನ್ನೆಲೆಯುಳ್ಳ ಕೃತಿ. ಹುಲ್ಲು ಹಸಿರಾಯಿತು-ಒಡ್ಡರ ಜೀವನವನ್ನು ಕಥಾ ವಸ್ತುವನ್ನಾಗಿ ಆಯ್ಕೆ ಮಾಡಿ ಕೊಂಡು ಬರೆದ ಕಾದಂಬರಿ. ಅಮೆರಿಕದ ವಾಷಿಂಗ್ಟನ್ ಲೈಬ್ರರಿ ಆಫ್ ಕಾಂಗ್ರೆಸ್ ನ ಸಮಾಜ ಶಾಸ್ತ್ರ ವಿಭಾಗದಲ್ಲಿ ಆಯ್ಕೆಯಾಗಿದೆ. ರಾಮಾನುಜಾಚಾರ್ಯರನ್ನು ಸಮಾಜ ಸುಧಾರಕರನ್ನಾಗಿ ಚಿತ್ರಿಸಿದ ಕಥೆ ಅನನ್ಯ. .

ಮಂಡ್ಯದಲ್ಲಿ ನಡೆದ ೬ ನೆಯ ಅಖಿಲ ಕರ್ನಾಟಕ ಲೇಖಕಿಯರ ಸಾಹಿತ್ಯ ಸಮ್ಮೇಳನ, ನವೆಂಬರ್, ೨೫-೨೬, ೨೦೦೭, ರಂದು ಮಂಡ್ಯದ "ರೈತ ಸಭಾಂಗಣ," ದಲ್ಲಿ ನಡೆಯಿತು. ಮೊದಲ ದಿನ ಹೆಣ್ಣು ಮಕ್ಕಳಿಗಿಂತ ಗಂಡಸರೇ ಹೆಚ್ಚಾಗಿ ಭಾಗವಹಿಸಿದ್ದರು. ಎರಡನೆಯ ದಿನವೂ ಅಷ್ಟೆ. ಪ್ರವೇಶ ಧನ ೧೦ ರೂಪಾಯಿಗಳು. ಒಂದು ಬ್ಯಾಗ್ ಉಡುಗೊರೆ ಯೆಂದಾಗ ನೂಕು ನುಗ್ಗಲಾಗಿ, ಹೆಚ್ಚು ಜನ ಸೇರಿದರು. ಸಮ್ಮೇಳನದ ಅಧ್ಯಕ್ಷೆಯಾಗಿ, ನೀಳಾದೇವಿಯವರು ಕಾರ್ಯಕ್ರಮಗಳನ್ನು ಚೆನ್ನಾಗಿ ನಡೆಸಿ ಕೊಟ್ಟರು.

ಕಿರಿಯ ಕವಯಿತ್ರಿಯರಿಗೆ, ಅವರ ಕಿವಿ ಮಾತುಗಳು

ಬದಲಾಯಿಸಿ

ಒತ್ತಡದ ಕಾಲದಲ್ಲೂ ಮನುಷ್ಯನಾದವನು ಆದಷ್ಟು ಮಾನವೀಯತೆ ಮತ್ತು ಶಾಂತಿ ಗುಣಗಳನ್ನು ಬೆಳಸಿ ಕೊಳ್ಳಬೇಕು. ಜಗತ್ತು ಜಾತಿ-ಧರ್ಮ-ಮತ-ಅಧಿಕಾರ ಲಾಲಸೆಗಳಿಂದ ತತ್ತರಿಸುತ್ತಿರುವುದು ಮಾನವೀಯತೆಯ ಕೊರತೆಯಿಂದ. ಇದನ್ನು ಸಾಹಿತಿಗಳು ಸಹ ತಮ್ಮ ಕೃತಿಗಳಲ್ಲಿ ಮೂಡಿಸ ಬೇಕಾಗಿದೆ. ಮುಖ್ಯವಾಗಿ ಮಕ್ಕಳಿಗೆ ನೈತಿಕ ಬಲ ನೀಡುವಂತಹ ಶಿಶು ಸಾಹಿತ್ಯವನ್ನು ನೀಡಬೇಕು ಇತ್ಯಾದಿ. ಅಜ್ಜಿಯಾದ ಮೇಲೆ ಅವರು ಎಂ. ಎ, ಪಿ. ಎಚ್. ಡಿ, ಪದವಿಯನ್ನೂ ಮಾಡಿ ಕೊಂಡಿದ್ದಾರೆ. ಈಗ ಒಳ್ಳೆಯ ಲೇಖಕಿಯರು, ಹೆಚ್ಚಾಗಿ ಬರೆಯುತ್ತಿದ್ದಾರೆ. ಓದಲು ಸಮಯವಿಲ್ಲದೆ, ಇಂದು ಕಾದಂಬರಿಗಳು, ಟಿ.ವಿಯಲ್ಲಿ ಧಾರಾವಾಹಿಗಳ ರೂಪದಲ್ಲಿ ಕಾಣಿಸಿ ಕೊಳ್ಳುತ್ತಿವೆ. ಲೇಖಕಿಯರು ಹೆಚ್ಚಾಗಿ ಸಮ್ಮೆಳನಗಳಲ್ಲಿ ಭಾಗವಹಿಸಿದಾಗ ಮಾತ್ರ ಅವರಿಗೆ, ವಿಷಯ ನಿರೂಪಣೆ, ವಿಷಯ ಮಂಡನೆ ಮತ್ತು ಚರ್ಚೆಗಳಲ್ಲಿ ತಮ್ಮ ಅಭಿಮತವನ್ನು ಕೊಡುವಲ್ಲಿ ವೇದಿಕೆಯು ನಿರ್ಮಾಣವಾಗುತ್ತದೆ. ಪುರುಷರಂತೆ, ಮಹಿಳೆಯರೂ, ಇಂದಿನ ಸಮಾಜದಲ್ಲಿ ಜವಾಬ್ದಾರಿಯುತ ಹುದ್ದೆಗಳನ್ನು ನಿಭಾಯಿಸುತ್ತಿರುವುದರಿಂದ, ಅನೇಕ ಸಮಸ್ಯೆಗಳನ್ನು ಅವರು ಎದುರಿಸ ಬೇಕಾಗಿದೆ. ಅಂತಹ ಮಹಿಳೆಯರ ಸಮಸ್ಯೆಗಳನ್ನು ಚರ್ಚಿಸಲು ಅನಿವಾರ್ಯ ಪರಿಸ್ಥಿತಿ ಇಂದು ಬಂದೊದಗಿದೆ. ಬದುಕನ್ನು ಎದುರಿಸುವ ಕಲೆ, ಸಮ್ಮೇಳನದ ಮೂಲಕ ತನ್ನ ಸಹೋದರಿಯರಿಗೆ, ಸಮಸ್ಯೆಗಳು ಎದುರಾದಾಗ ಋಣಾತ್ಮಕ ಭಾವದಿಂದ ಧನಾತ್ಮಕ ಭಾವದೆಡೆಗೆ ಧೈರ್ಯದಿಂದ ಕಷ್ಟವನ್ನು ಧೈರ್ಯವಾಗಿ ಎದುರಿಸುವ ಕ್ರಮ, ಮಾನವೀಯತೆಯನ್ನು ಬೆಳೆಸಿಕೊಳ್ಳುವಲ್ಲಿ ಸಾರುವುದು, ಇತ್ಯಾದಿಗಳನ್ನು ತನ್ನ ಸ್ತ್ರೀ ಸಮುದಾಯದೊಂದಿಗೆ ಹಂಚಿಕೊಂಡಾಗ ಅನೇಕ ನೈಜ ಸ್ಥಿತಿಗಳು ಬೆಳಕಿಗೆ ಬರುತ್ತವೆ. ಆ ಅನುಭವಗಳು, ನಿಜಕ್ಕೂ ದೈನಂದಿಕ ಜೀವನಕ್ಕೆ ದಾರಿದೀಪ ಗಳಾಗುವುದರಲ್ಲಿ ಸಂಶಯವಿಲ್ಲ.

ಕೃತಿಗಳು

ಬದಲಾಯಿಸಿ

೧.ಕಾದಂಬರಿಗಳು

  • ಅನುರಾಧಾ
  • ಒಲವಿನ ಜಾಲ
  • ಹೊಸಿಲು
  • ಕಣ್ಣು ಮುಚ್ಚಾಲೆ
  • ಹುಲ್ಲು ಹಸಿರಾಯಿತು
  • ಅಂತಃಸರಿತೆ
  • ಅಂತರ
  • ಜೀವನ ಹೆಜ್ಜೆ
  • ಕಾಲ-ಮಾನ
  • ಕಾಗದದ ಚೂರು
  • ಪ್ಲಾಟ್ ಫಾರಂ ಮೇಲೆ ಒಂದು ರಾತ್ರಿ
  • ಮೂಕರಾಗ
  • ದುಂಬಿ ತೊರೆಯಾಸೆ
  • ಬೇಡಿ ಬಂದವಳು

೨.ಕಥಾಸಂಕಲನ

  • ಅಲೆಯ ಆಟ
  • ಮಾಣಿಕ್ಯ
  • ರೂಪದಾಹ

೩.ಪ್ರವಾಸ ಸಾಹಿತ್ಯ

  • ನಾ ಖಂಡ ಆ ಖಂಡ
  • ಸಬಲನ ವಿದೇಶ ಪ್ರವಾಸ

೪.ಮಕ್ಕಳ ಸಾಹಿತ್ಯ

  • ರೆಡ್ ಇಂಡಿಯನ್ ಮಕ್ಕಳ ಜಾನಪದ ಕತೆಗಳು

ಚಲನ ಚಿತ್ರವಾದ ಕೃತಿ

ಬದಲಾಯಿಸಿ
  • 'ಬೇಡಿ ಬಂದವಳು' ಕಾದಂಬರಿ ಚಲನಚಿತ್ರವಾಗಿದೆ.

ಪುರಸ್ಕಾರಗಳು

ಬದಲಾಯಿಸಿ

೧೯೬೭ರಲ್ಲಿ ಸುಧಾ ಕಾದಂಬರಿ ಸ್ಪರ್ಧೆಯಲ್ಲಿ ಇವರ ಕಾದಂಬರಿ "ಕಾಗದದ ಚೂರು"ಗೆ ಬಹುಮಾನ.

ಉಲ್ಲೇಖಗಳು

ಬದಲಾಯಿಸಿ
  1. "ನೀಳಾದೇವಿ". kanaja.in. Archived from the original on 2013-09-20. Retrieved 8-2-2014. {{cite web}}: Check date values in: |accessdate= (help)




-ನುಗ್ಗೆಹಳ್ಳಿ ಪಂಕಜ.