ನಿಕೊಲಾಯ್ ಸ್ಯಿರ್ಗ್ಯಾವ್ಯಿಚ್ ಟ್ರುಬೈಯೆಟ್ಸ್‌ಕೊಯಿ

ನಿಕೊಲಾಯ್ ಸ್ಯಿರ್ಗ್ಯಾವ್ಯಿಚ್ ಟ್ರುಬೈಯೆಟ್ಸ್‌ಕೊಯಿ (1890-1939). - ರಶಿಯಾದ ಭಾಷಾತಜ್ಞ ಮತ್ತು ಇತಿಹಾಸಕಾರ.

ಫರ್ಡಿನ್ಡಾಂಡ್ ಸೋಸ್ಯೂರ್‍ನ ಲೇಖನಗಳಿಂದ ಪ್ರಭಾವಿತನಾಗಿ, ಚೆಕೊಸ್ಲೊವಾಕಿಯಾದ ಮುಖ್ಯನಗರವಾದ ಪ್ರಾಗ್‍ನಲ್ಲಿ 1926ರಲ್ಲಿ ಪ್ರಾರಂಭವಾದ ಭಾಷಾಶಾಸ್ತ್ರಕೇಂದ್ರದ ಪ್ರಮುಖ ವ್ಯಕ್ತಿಗಳಲ್ಲೊಬ್ಬ. ಪ್ರಾಗ್ ವಿದ್ವಾಂಸರ ಭಾಷಾಧ್ಯಯನದ ರೀತಿ ಮತ್ತು ತತ್ತ್ವಗಳನ್ನು ತನ್ನ ಕೊನೆಯ ಆದರೆ ಅತಿ ಮುಖ್ಯವಾದ ಧ್ವನಿಮಾ ವಿಜ್ಞಾನದ ತತ್ತ್ವಗಳು-ಎಂಬ ಗ್ರಂಥದಲ್ಲಿ ಈತ ನಿರೂಪಿಸಿದ್ದಾನೆ. ಈ ಗ್ರಂಥ ಮೊದಲಿಗೆ 1939ರಲ್ಲಿ ಜರ್ಮನ್ ಭಾಷೆಯಲ್ಲಿ ಪ್ರಕಾಶಿತವಾಗಿ ಅನಂತರ 1949ರಲ್ಲಿ ಫ್ರೆಂಚ್ ಅನುವಾದ ರೂಪದಲ್ಲಿ ಹೊರಬಿತ್ತು. 1969ರಲ್ಲಿ ಅದರ ಇಂಗ್ಲಿಷ್ ಆವೃತ್ತಿ ಪ್ರಕಟವಾಗಿದೆ.

ಬದುಕು ಮತ್ತು ಸಾಧನೆ

ಬದಲಾಯಿಸಿ

1890ರಲ್ಲಿ ರಷ್ಯದಲ್ಲಿ ಹುಟ್ಟಿ ಅಲ್ಲಿಯೇ ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆದ ಈ ವಿದ್ವಾಂಸ ಒಂದನೆಯ ಮಹಾಯುದ್ಧ ಮುಗಿದ ಸ್ವಲ್ಪದಿನಗಳಲ್ಲಿಯೇ ಸ್ವದೇಶವನ್ನು ಬಿಟ್ಟು ಹೊರಡಬೇಕಾಯಿತು. 1923ರಿಂದ 1938ರ ವರೆಗೆ ವಿಯನ್ನದಲ್ಲಿ ಪ್ರಾಧ್ಯಾಪಕನಾಗಿ ಈತ ಕೆಲಸ ಮಾಡಿದ. ಯೂರೋಪಿನಲ್ಲೇ ನೆಲಸಿದ್ದರಿಂದ ಅಲ್ಲಿನ ಭಾಷಾಶಾಸ್ತ್ರಜ್ಞರ ಸಿದ್ಧಾಂತಗಳ ಪರಿಚಯ ಬೆಳಸಿಕೊಂಡರೂ ಪ್ರಾರಂಭಿಕ ಶಿಕ್ಷಣದ ಪರಿಣಾಮದಿಂದಾಗಿ ಸ್ಲಾವಿಕ್ ವಿದ್ವಾಂಸರ ಪ್ರಭಾವ ಈತನ ಮೇಲೆ ಹೆಚ್ಚಾಗಿತ್ತು. ಸ್ವದೇಶವನ್ನು ಬಿಡುವ ಮುಂಚೆಯೇ ಅಲ್ಲಿನ ಹಲವಾರು ಭಾಷೆಗಳನ್ನು ಕುರಿತು ಅಧ್ಯಯನ ಮತ್ತು ವಿಶ್ಲೇಷಣೆ ನಡೆಸಿದನಲ್ಲದೆ ಪ್ರಾಯಃ ತನ್ನೊಡನೆ ರಷ್ಯದಿಂದ ಹೊರಬಂದ, ಈಗ ಅಮೆರಿಕದಲ್ಲಿ ನೆಲಸಿರುವ, ರೋಮನ್‍ಯಾಕೊಬ್ ಸನ್ನನೊಡನೆ ಕಲೆತು ಸಸೂರ್‍ನ ಸಿದ್ಧಾಂತಗಳನ್ನುಪಯೋಗಿಸಿಕೊಂಡು ಭಾಷೆಯಲ್ಲಿ ಧ್ವನಿಮಾದ ಸ್ಥಾನ ಮತ್ತು ಪ್ರಯೋಜನಗಳ ಬಗ್ಗೆ ಕೆಲಸ ಮಾಡಿದ. 1928ರಲ್ಲಿ ಹೇಗ್ ನಗರದಲ್ಲಿ ಸೇರಿದ ಅಂತರರಾಷ್ಟ್ರೀಯ ಭಾಷಾಶಾಸ್ತ್ರಜ್ಞರ ಪ್ರಥಮ ಮಹಾಧಿವೇಶನದಲ್ಲಿ ಮೊದಲ ಬಾರಿಗೆ ವರ್ಣನಾತ್ಮಕವಾದ ಅಧ್ಯಯನದಲ್ಲಿ ಹೇಗೋ ಹಾಗೆಯೇ ಭಾಷೆಯನ್ನು ಕುರಿತಾದ ಚಾರಿತ್ರಿಕ ಅಧ್ಯಯನದಲ್ಲಿ ಕೂಡ ಧ್ವನಿಮಾ ವಿಜ್ಞಾನದ ತತ್ತ್ವಗಳನ್ನು ಉಪಯೋಗಿಸಿಕೊಳ್ಳಬಹುದೆಂದು ಈತ ತೋರಿಸಿಕೊಟ್ಟ. ಆ ಕಾಲಕ್ಕೆ ಇದು ಬಹು ದಿಟ್ಟ ಹೆಜ್ಜೆ ಎನ್ನಬಹುದು. ಈ ಪ್ರತಿಪಾದನೆಯಲ್ಲಿ ಈತನಿಗೆ ರೋಮನ್ ಯಾಕೊಬ್‍ಸನ್ ಮತ್ತು ಕರಚೆವ್‍ಸ್ಕಿಗಳ ಬೆಂಬಲವಿತ್ತು. ತನ್ನ ಹಿಂದಿನ ವಿದ್ವಾಂಸ ಬ್ಯೂಲರ್‍ನಂತೆ ಈತ ಕೂಡ ವ್ಯವಹೃತ ಭಾಷೆಯಲ್ಲಿ ಮೂರು ಬಗೆಯ ಲಕ್ಷಣಗಳಿವೆಯೆಂಬುದನ್ನು ತೋರಿಸಿಕೊಟ್ಟ : ಮಾತನಾಡಿದವನನ್ನು ಗುರುತಿಸಲನುಕೂಲವಾದ ಲಕ್ಷಣಗಳು, ಕೇಳಿಸಿಕೊಂಡವನನ್ನು ಆಕರ್ಷಿಸುವ ಲಕ್ಷಣಗಳು ಮತ್ತು ಆಡಿದ ಮಾತಿನ ಅರ್ಥವನ್ನು ಸೂಚಿಸುವ ಲಕ್ಷಣಗಳು. ಹೀಗೆಯೇ ಧ್ವನಿಮಾಗಳಿಗೆ ಕೂಡ ಭಾಷೆಯಲ್ಲಿ ಮೂರು ವಿಧವಾದ ಪ್ರಯೋಜನವಿದೆಯೆಂದು ಪ್ರತಿಪಾದಿಸಿದ. ಅವುಗಳಲ್ಲಿ ಅರ್ಥಭೇದವನ್ನು ಸೂಚಿಸುವ ಧ್ವನಿಮಾಗಳು ಕೆಲವು, ಮಾತಿನಲ್ಲಿ ಪ್ರಾಧಾನ್ಯವುಳ್ಳ ಅಂಶವನ್ನು ಸೂಚಿಸುವ ಧ್ವನಿಮಾಗಳು ಕೆಲವು, ಮತ್ತುಳಿದವುಗಳ ಮತ್ತು ಪದಾಂಶಗಳ ಅವಧಿ ಸೂಚಿಸುವ ಧ್ವನಿಮಾಗಳು. ಯಾವುದೇ ಲಕ್ಷಣ ಒಂದು ವಸ್ತುವಿನಲ್ಲಿ ಕಂಡುಬಂದು ಆ ಲಕ್ಷಣ ಇತರ ವಸ್ತುಗಳಲ್ಲಿ ಇಲ್ಲದಿರುವಾಗ ಆ ವಸ್ತುವನ್ನು ಇತರ ವಸ್ತುಗಳಿಂದ ಬೇರೆಯಾಗಿ ಗುರುತಿಸಬಹುದು. ಹೀಗೆ ವಸ್ತುಭೇದವನ್ನು ತೋರಿಸುವ ಯಾವುದೇ ಲಕ್ಷಣ ಆ ರೀತಿಯ ಎಷ್ಟು ಲಕ್ಷಣಗಳೊಡನೆ ಪ್ರತಿಯೋಗ ಹೊಂದಿದೆ ಎಂಬುದನ್ನವಲಂಬಿಸಿ ಮೂರು ಬಗೆಯ ಪ್ರತಿಯೋಗಗಳನ್ನು ಗುರುತಿಸಬಹುದೆಂದು ಈತ ಸೂಚಿಸಿದ್ದಾನೆ. ಏಕಾಂತಿಕ, ಕ್ರಮಿಕ, ಮತ್ತು ತುಲ್ಯಬಲ-ಎಂಬುವೇ ಆ ಮೂರು ಬಗೆಯ ಪ್ರತಿಯೋಗಗಳು. ಉದಾಹರಣೆಯ ಮೂಲಕ ಅವುಗಳನ್ನು ಹೀಗೆ ವಿವರಿಸಬಹುದು. ಯಾವುದೇ ಲಕ್ಷಣದ ಇರುವಿಕೆ ಅಥವಾ ಅದರ ಅಭಾವದ ಮೇಲೆ ಏಕಾಂತಿಕ ಪ್ರತಿಯೋಗ ನಿಂತಿದೆ. ಕನ್ನಡದ ಪ ಮತ್ತು ಬ ಗಳ ಮಧ್ಯೆ ಇರುವ ಭೇದವೆಂದರೆ ಬ ಘೋಷ ವರ್ಣ, ಪ ಅಘೋಷವರ್ಣ. ಹೀಗೆ ಬ ವರ್ಣದಲ್ಲಿ ನಾದವೆಂಬ ಲಕ್ಷಣ ಇರುವಿಕೆ ಮತ್ತು ಪ ವರ್ಣದಲ್ಲಿ ಅದರ ಅಭಾವದಿಂದ ಪ ಮತ್ತು ಬ ಗಳ ನಡುವಣ ಪ್ರತಿಯೋಗವನ್ನು ಏಕಾಂತವೆನ್ನುತ್ತಾರೆ. ಯಾವುದೇ ಲಕ್ಷಣ ಎಷ್ಟು ಹೆಚ್ಚಾಗಿದೆ ಅಥವಾ ಕಡಿಮೆ ಇದೆ ಎಂಬುದನ್ನವಲಂಬಿಸಿದೆ-ಕ್ರಮಿಕ ಪ್ರತಿಯೋಗ. ವರ್ತುಲೀಕರಣವೆಂಬ ಲಕ್ಷಣವನ್ನು ಉಪಯೋಗಿಸಿಕೊಂಡು ಕನ್ನಡದ ಉ, ಒ ಮತ್ತು ಅ ಗಳನ್ನು ಒಂದು ಶ್ರೇಣಿಯಲ್ಲಿ ಅಳವಡಿಸಬಹುದು. ಉ ವರ್ಣದಲ್ಲಿ ವರ್ತುಲೀಕರಣ ಹೆಚ್ಚಾಗಿಯೂ ಕ್ರಮವಾಗಿ ಈ ಲಕ್ಷಣ ಒ ಮತ್ತು ಅ ವರ್ಣಗಳಲ್ಲಿ ಕಡಿಮೆಯಾಗಿಯೂ ಇದೆ ಎನ್ನಬಹುದು. ಪ ಮತ್ತು ತ ಗಳ ನಡುವಣ ಭೇದ ಹೇಗೋ ಹಾಗೆ ಬ ಮತ್ತು ದ ಗಳ ನಡುವಣ ಭೇದ. ಅಂದರೆ, ಈ ವರ್ಣಯುಗಗಳಲ್ಲಿ ಮೊದಲ ವರ್ಣಗಳಲ್ಲಿ ಒಂದು ಬಗೆಯ ಲಕ್ಷಣ-ಇಲ್ಲಿ ಒಷ್ಯ ಲಕ್ಷಣ, ಎರಡನೆಯ ವರ್ಣಗಳಲ್ಲಿ ಇನ್ನೊಂದು ಬಗೆಯ ಲಕ್ಷಣ-ಇಲ್ಲಿ ದಂತ್ಯ ಲಕ್ಷಣ ಇದೆ ಎನ್ನಬಹುದು. ಒಂದೇ ಯುಗಲದಲ್ಲಿ ಹೀಗೆ ಎರಡು ಲಕ್ಷಣಗಳು ಒಂದೊಂದು ವರ್ಣದಲ್ಲಿ ಒಂದೊಂದು ಲಕ್ಷಣದಂತೆ ಕೂಡಿರುವಂಥ ಪ್ರತಿಯೋಗವನ್ನು ತುಲ್ಯಬಲಪ್ರತಿಯೋಗವೆನ್ನಬಹುದು. ಪ್ರತಿಯೋಗ ಕಲ್ಪನೆ ಪ್ರಾಗ್ ವಿದ್ವಾಂಸರಿಗೆ ಮತ್ತು ಅವರ ಪ್ರಭಾವಕ್ಕೊಳಗಾದ ಇತರ ಯೂರೋಪಿನ ಭಾಷಾಶಾಸ್ತ್ರಜ್ಞರಿಗೆ ಮೀಸಲಾಗಿದೆಯೆನ್ನಬಹುದು. ಅಮೆರಿಕದ ವಿದ್ವಾಂಸರು ಈ ವಿಚಾರವನ್ನು ಕುರಿತು ಚರ್ಚಿಸಿಲ್ಲ. ವರ್ಣಗಳೆರಡರ ನಡುವೆ ಭೇದವನ್ನು ಮಾತ್ರ ಗುರುತಿಸಿದ ಅವರು ಇದರ ಜೊತೆಗೆ ಪ್ರತಿಯೋಗದ ಆವಶ್ಯಕತೆ ಇದೆ ಎಂಬುದನ್ನು ಗಣಿಸಲಿಲ್ಲ. ಪ್ರತಿಯೋಗ, ಉದಾಸಿನೀಕರಣ ಮತ್ತು ಸಂಧಿ ಲಕ್ಷಣ. ಇವನ್ನು ಭಾಷಾಶಾಸ್ತ್ರದಲ್ಲಿ ಮೊದಲ ಬಾರಿಗೆ ಚರ್ಚಿಸಿದವನೆಂದರೆ ಟ್ರುಬೈಯೆಟ್ಸ್ ಕೊಯಿಯೇ.