ನಸುಗುನ್ನಿ ಗಿಡವು ಲೆಗ್ಯೂಮಿನೋಸೀ ಕುಟುಂಬದ ಪ್ಯಾಪಿಲಿಯೋನೇಸೀ ಉಪಕುಟುಂಬಕ್ಕೆ ಸೇರಿದ ಏಕವಾರ್ಷಿಕ ಕಾಡುಗಿಡ. ನಾಯಿಸೊಂಕು ಬಳ್ಳಿ, ತುರಚಿ ಅವರೆ ಪರ್ಯಾಯ ನಾಮಗಳು. ಮ್ಯೂಕ್ಯುನ ಪ್ರೂರಿಟ ಇದರ ಶಾಸ್ತ್ರಿಯ ಹೆಸರು. ಇದಕ್ಕೆ ಕೌಹೇಜ್ ಎಂಬ ಸಾಮಾನ್ಯ ಬಳಕೆಯ ಇಂಗ್ಲಿಷ್ ಹೆಸರುಂಟು. ಉಷ್ಣವಲಯದಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಈ ಗಿಡವನ್ನು ಭಾರತ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಆಫ್ರಿಕ ಮತ್ತು ಅಮೆರಿಕದ ಉಷ್ಣಪ್ರದೇಶಗಳಲ್ಲಿ ಕಾಣಬಹುದು. ಬೇಲಿಗಳಲ್ಲಿ, ತೇವಪೂರಿತ ಜಾಗಗಳಲ್ಲಿ, ಕಾಡುಗಳಲ್ಲಿ ಕಳೆಗಿಡವಾಗಿ ಇದು ಬೆಳೆಯುತ್ತದೆ.

ಇದು ಒಂದು ಬಳ್ಳಿ. ಎಲೆಗಳು ಸಂಯುಕ್ತ ಬಗೆಯವು; ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿದೆ. ಒಂದೊಂದು ಎಲೆಯಲ್ಲೂ ಮೂರು ಕಿರುಪತ್ರಗಳುಂಟು. ಕಿರುಪತ್ರಗಳ ಮೇಲೆ ರೇಷ್ಮೆಯಂತೆ ನುಣುಪಾದ ಹೊಳೆಯುವ ಬಿಳಿಯ ಬಣ್ಣದ ರೋಮಗಳಿವೆ. ಹೂಗಳು ದ್ವಿಲಿಂಗಿಗಳು; ನೇರಳೆ ಬಣ್ಣದವು; ರೆಸೀಮ್ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಪ್ರತಿ ಹೂವಿನಲ್ಲಿ 5 ಪುಷ್ಪಪತ್ರಗಳೂ, 5 ದಳಗಳು, 10 ಕೇಸರಗಳು ಹಾಗೂ ಒಂಟಿ ಕಾರ್ಪೆಲಿನ ಉಚ್ಚ ಅಂಡಾಶಯ ಉಂಟು. ಹೂವಿನ ಮತ್ತು ಹೂಗೊಂಚಲಿನ ತೊಟ್ಟುಗಳ ಮೇಲೆ ರೋಮಗಳಿವೆ. ಕಾಯಿ ಇಂಗ್ಲಿಷ್ ವರ್ಣಮಾಲೆಯ `S' ಅಕ್ಷರದ ಆಕಾರದಲ್ಲಿದೆ. ಕಾಯಿಯ ಮೇಲೆ ನಸುಕಂದು ಬಣ್ಣದ ಕೂದಲುಗಳುಂಟು. ಚರ್ಮಕ್ಕೆ ಇವು ಸೋಕಿದರೆ ತೀವ್ರ ನವೆಯುಂಟಾಗುತ್ತದೆ. ಕೆಲವು ಸಲ ಗುಳ್ಳೆಗಳೇಳುವುದೂ ಚರ್ಮದುರಿತವಾಗುವುದೂ ಉಂಟು. ಹೀಗೆ ನವೆಯುಂಟಾಗುವುದಕ್ಕೆ ನಸುಗುನ್ನಿಯ ಕಾಯಿಗಳ ರೋಮದಲ್ಲಿರುವ ಮ್ಯೂಕ್ಯುಲೈನ್ ಎಂಬ ವಸ್ತುಕಾರಣ. ಆಲ್ಕಲಿ ಅಥವಾ ಅಮೋನಿಯವನ್ನು ಸೇರಿಸಿದ ಬಿಸಿನೀರಿನಿಂದ ತೊಳೆಯುವುದರಿಂದ ಈ ತುರಿಕೆಯನ್ನು ಶಮನಗೊಳಿಸಬಹುದು. ಇಷ್ಟಾದರೂ ಈ ಕೂದಲುಗಳನ್ನು ಜಂತುಹಾರಿಯಾಗಿ ಬಳಸುವುದಿತ್ತು. ಇವನ್ನು ಕೊಬ್ಬಿನೊಂದಿಗೆ ಇಲ್ಲವೆ ಕಾಕಂಬಿ ಅಥವಾ ಜೇನುತುಪ್ಪದೊಂದಿಗೆ ಸೇರಿಸಿ ಸೇವಿಸುವುದಿತ್ತು. ಕೂದಲುಗಳ ಕಷಾಯವನ್ನು ಪಿತ್ತಕೋಶ ಮತ್ತು ಯಕೃತ್ತು ರೋಗಗಳ ಚಿಕಿತ್ಸೆಯಲ್ಲಿ ಬಳಸುವುದಿದೆ.

ನಸುಗುನ್ನಿ ಗಿಡಕ್ಕೆ ಇತರ ಔಷಧೀಯ ಉಪಯೋಗಗಳೂ ಉಂಟು. ಇದರ ಬೇರಿನ ರಸ ಮೂತ್ರಸ್ರಾವ ಉತ್ತೇಜಕ, ಬಲವರ್ಧಕ ಹಾಗೂ ಶುದ್ಧಿಕಾರಕ. ಬೇರನ್ನು ನರಸಂಬಂಧಿ ರೋಗಗಳು, ಮೂತ್ರಪಿಂಡದ ರೋಗ, ಜಲೋದರ, ಕಾಲರಾ ಮತ್ತು ಸನ್ನಿವಾತಕ್ಕೆ ಔಷಧಿಯಾಗಿ ಉಪಯೋಗಿಸಲಾಗುತ್ತದೆ. ಬೇರಿನಿಂದ ತಯಾರಿಸಿದ ಮುಲಾಮನ್ನು ಆನೆಕಾಲುರೋಗ ಚಿಕಿತ್ಸೆಯಲ್ಲಿ ಬಳಸುವರು. ನಸಗುನ್ನಿ ಗಿಡವನ್ನು ಹಸುರುಗೊಬ್ಬರವಾಗಿಯೂ, ಇದರ ಎಳೆಯ ಕಾಯಿ ಹಾಗೂ ಎಲೆಗಳನ್ನು ತರಕಾರಿ ಮತ್ತು ಮೇವಾಗಿಯೂ ಬಳಸುವುದುಂಟು.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: