ನವದರ್ಶನಂ ಮಾನವನ ಅಂತರಂಗ-ಬಹಿರಂಗ ಪರಿಸರಗಳ ಏಳ್ಗೆಗಾಗಿ ದುಡಿಯುತ್ತಿರುವ ಸಂಸ್ಥೆ. ಮಹಾತ್ಮ ಗಾಂಧಿ, ಮಸನೊಬು ಫ಼ುಕಾವುಕಾ, ಐನ್‌ಸ್ಟೈನ್ ಮುಂತಾದ ಮಹನೀಯರ ದರ್ಶನಗಳ ಪ್ರಾಯೋಗಿಕ ಕರ್ಮಭೂಮಿ.

ಸಂಸ್ಥೆಯ ಹಿನ್ನಲೆ

ಬದಲಾಯಿಸಿ

ನವದರ್ಶನಂ ಟ್ರಸ್ಟ್ ಪ್ರಾರಂಭವಾಗಿದ್ದು ೧೯೯೦ ಅಕ್ಟೋಬರ್ ೨ ರ ಗಾಂಧಿ ಜಯಂತಿಯಂದು. ಆದರೆ ಈ ವೃಕ್ಷದ ಬೀಜ ೭೦ ರ ದಶಕದಲ್ಲೇ ಬೌದ್ಧಿಕ ಮಟ್ಟದಲ್ಲಿ ಚಿಗುರೊಡೆಯುತ್ತಿತ್ತು. ಭಾರತೀಯ ತಂತ್ರಜ್ಞಾನ ಸಂಸ್ಥೆ, ದೆಹಲಿಯ ಕೆಲವು ಸಮಾನಮನಸ್ಕ ಚಿಂತಕರ ಚಾವಡಿಯಲ್ಲಿ ವಿಜ್ಞಾನ, ಆಧ್ಯಾತ್ಮ, ಪರಿಸರ ಚಿಂತನೆ ಮುಂತಾದ ವಿವಿಧ ಬಣ್ಣಗಳೊಡನೆ ರೂಪ ತಾಳುತಿತ್ತು. ಮನುಷ್ಯರ ಭೋಗಜೀವನ ಮತ್ತು ಪ್ರಕೃತಿಯೊಂದಿಗಿನ ಪರಕೀಯತೆ, ಸಾಮಾಜಿಕ ಮೌಲ್ಯಗಳ ಸಡಿಲಿಕೆ ಹಾಗು ಪರಿಸರ ಹಾನಿಗೆ ಪೂರಕವಾಗಿ ಕೆಲಸ ಮಾಡುತ್ತಿವೆ ಎಂದು ಮನಗಂಡಿದ್ದು ಈ ಕಾಲದಲ್ಲೇ. ಇವೆಲ್ಲ ಹಿನ್ನಲೆಯೊಂದಿಗೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಥಳಿ ಪ್ರದೇಶದ “ಅತೀತ ಆಶ್ರಮ”ದಲ್ಲಿದ್ದ ಸ್ವಾಮೀಜಿ ಸಹಜಾನಂದರ ಸಹಕಾರದೊಂದಿಗೆ ಇದೇ ಥಳಿ ಸಂರಕ್ಷಿತ ಅರಣ್ಯ ಪ್ರದೇಶದ ಹತ್ತಿರವಿದ್ದ ಗಂಗನಹಳ್ಳಿ ಗ್ರಾಮದ ಪಕ್ಕ ಸುಮಾರು ೧೧೫ ಎಕರೆ ಭೂಮಿಯನ್ನು ಖರೀದಿಸಿ, ತಮ್ಮ ಸೈದ್ಧಾಂತಿಕ ನಿಲುವುಗಳ ಪ್ರಾಯೋಗಿಕ ಆಚರಣೆಗೆ ಆಡುಂಬೊಲವಾಗಿಸಿಕೊಂಡರು. ಗ್ರಾಮ ಜೀವನದ ಅನುಭವವಿಲ್ಲದಿದ್ದರೂ, ಉತ್ಸಾಹ ಅಳುಕು ಇವೆಲ್ಲದರ ಜೊತೆಗೆ ಈ ಹೊಸ ಸಾಹಸಕ್ಕೆ ಕೈ ಹಾಕಿದರು. ಆಗ ಅವರ ಮುಂದಿದ್ದ ಸ್ಪಷ್ಟ ಉದ್ದೇಶಗಳಿವು. ೧. ಮನುಷ್ಯನ ಅಂತರಂಗ-ಬಹಿರಂಗ ಅವಶ್ಯಕತೆಗಳನ್ನು ಪೂರೈಸಲು, ಪರಿಸರಸ್ನೇಹಿ ಹಾಗು ಇಡಿಯಾದ ದೃಷ್ಟಿಕೋನವಿರುವ ಜೀವನ ವಿಧಾನಗಳನ್ನು ಅನ್ವೇಷಿಸುವುದು. ೨. ಪ್ರಕೃತಿ ಹಾಗು ಸೃಷ್ಟಿಶಕ್ತಿ ಗಳ ನಡುವಿನ ಮನುಷ್ಯ ಸಂಬಂಧಗಳ ಪುನರಾನ್ವೇಷಣೆ. ೩. ಭೋಗ ಜೀವನವನ್ನು ಪುಷ್ಠೀಕರಿಸುವ ಅಭಿವೃದ್ಧಿಯನ್ನು ನಿರಾಕರಿಸುವುದು. ೪. ಸೃಷ್ಟಿಶಕ್ತಿಯ ಕಡೆಗಿನ ಆತ್ಮೋನ್ನತಿಗಾಗಿ ಪರಿಶ್ರಮ ಪಡುವುದು.

ಈ ಎಲ್ಲಾ ಉದ್ದೇಶಗಳನ್ನು ಗುರಿಯಾಗಿಸಿಕೊಂಡ ನವದರ್ಶನಂ ಈ ಕೆಳಕಂಡ ಕಾರ್ಯಕ್ರಮಗಳ ಮೂಲಕ ಈ ಗುರಿ ಸಾಧನೆಗೆ ಶ್ರಮ ಪಡುತ್ತಲಿದೆ.

ಸಂಸ್ಥೆಯ ಕಾರ್ಯಕ್ರಮಗಳು

ಬದಲಾಯಿಸಿ

ಬಾಹ್ಯ ಕಾರ್ಯಗಳು

ಬದಲಾಯಿಸಿ

ಅ. ಪರಿಸರ ಪುನರುಜ್ಜೀವನ: ಕಳೆದ ೨೦ ವರ್ಷಗಳ ಹಿಂದೆ ಬೆಂಗಾಡಿನಂತಿದ್ದ ನವದರ್ಶನಂ ಜಾಗ ಇಂದು ಎಲೆ ಉದುರುವ ಕಾಡಾಗಿ ಪುನರುತ್ಥಾನಗೊಂಡಿದೆ. ಆಕಳು, ಕುರಿ, ಆಡುಗಳು ಮೇಯದಂತೆ ತಡೆದು ಮತ್ತು ಆನೆಗಳ ಹಾವಳಿ ತಪ್ಪಿಸಿ, ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಕೃತಿಯ ಸಹಜ ಅಭಿವ್ಯಕ್ತಿಗೆ ಅನುವು ಮಾಡಿಕೊಟ್ಟಿದೆ. ಮುತ್ತುಗ, ಅರ್ಜುನ, ಜೀಡಿ, ಹಿಪ್ಪೆ, ಶ್ರೀಗಂಧ, ಕಕ್ಕೆ, ಬೂರುಗ, ಕೌಳಿ, ಕದಿರಾ, ಟಪಾಲ, ಬಾಗೆ, ಗೊರವಿ, ಹೊಂಗೆ ಮುಂತಾದ ಮರಗಿಡ ಬಳ್ಳಿಗಳು ಇಲ್ಲಿ ನಿತ್ಯ ಉಸಿರಾಡುತ್ತಿವೆ. ಕೋಗಿಲೆ, ಪಿಕಳಾರ, ಬದನಿಕೆ, ಸೂರಕ್ಕಿ, ರಾಜಕ್ಕಿ, ಜೇನ್ನೊಣಹಿಡುಕ ಮುಂತಾದ ಹಲವು ಖಗ ಮಿತ್ರರು ಇಲ್ಲಿ ನೆಲೆಯೂರಿ ಕಾಡು ಬೆಳೆಸುತ್ತಿದ್ದಾರೆ. ಆನೆ, ಚಿರತೆ, ಹೆಬಾವು ಮುಂತಾದವು ಇಲ್ಲಿಗೆ ಖಾಯಂ ಭೇಟಿ ನೀಡುವ ಅತಿಥಿಗಳು. ಆನೆಗಳಿಂದ ರಕ್ಷಣೆಗಾಗಿ ಇಡೀ ಆವರಣದ ಸುತ್ತೆಲ್ಲಾ ವಿದ್ಯುತ್ ಬೇಲಿ ಇದೆ. ಇದಲ್ಲದೇ ಮಳೆ ನೀರನ್ನು ಇಂಗಿಸುವುದಕ್ಕೆ ಕಟ್ಟೆ ಹಾಗು ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ. ಒಟ್ಟಿನಲ್ಲಿ ಥಳಿ ಪ್ರದೇಶಕ್ಕೆ ಹೊಂದಿಕೊಂಡಂತೆ ಈ ಕಾಡು ಸಮೃದ್ಧವಾಗಿ ಬೆಳೆಯುತ್ತಿದೆ.

ಆ. ನೈಸರ್ಗಿಕ ಕೃಷಿ: ಫ಼ುಕಾವುಕಾರ ದರ್ಶನ ಈ ಟ್ರಸ್ಟ್‌ನ ಮುಖ್ಯ ಅಂಗಗಳಲ್ಲೊಂದು ಅಂತ ಮೊದಲೇ ತಿಳಿಸಿದ ಹಾಗೆ ಇಲ್ಲಿ ನೈಸರ್ಗಿಕ ಹಾಗು ಸಾವಯವ ತತ್ವಗಳ ಅನುಸಾರ ಕೃಷಿ ಮಾಡಲಾಗುತ್ತಿದೆ. ಅಲ್ಲದೇ ಈ ಕೃಷಿ ತತ್ವಗಳ ಪ್ರಚಾರವನ್ನು ಕಮ್ಮಟಗಳ ಮೂಲಕ ಕೈಗೊಳ್ಳಲಾಗಿದೆ.

ಇ. ಆಹಾರ ಹಾಗು ಆರೋಗ್ಯ: “ಅತೀತ ಆಶ್ರಮ”ದ ಆಹಾರ ಮತ್ತು ಆರೋಗ್ಯ ತತ್ವಗಳನ್ನು ಇಲ್ಲಿ ಅಳವಡಿಸಿಕೊಂಡು ಹಲವಾರು ಆರೋಗ್ಯಕರ ಹಾಗು ರುಚಿಕರ ಆಹಾರ ಪದಾರ್ಥಗಳನ್ನು ಅಭಿವೃದ್ಧಿಪಡಿಸಲಾಗಿದೆ. ಟ್ರಸ್ಟ್‌ನ ಆಶ್ರಯದಲ್ಲಿ ಗಂಗನಹಳ್ಳಿಯ ಸ್ವ-ಸಹಾಯ ಗುಂಪು ಈ ಕೆಲಸದಲ್ಲಿ ನಿರತವಾಗಿದ್ದು, ಈ ಪದಾರ್ಥಗಳನ್ನು ಬೆಂಗಳೂರಿನ ಆಸಕ್ತ ಜನರಿಗೆ " ನಾಮಧಾರಿ’ಸ್ ಫ಼್ರೆಶ್” ಮಳಿಗೆ ಹಾಗು ಇತರೆ ಜನರ ಮೂಲಕ ಮಾರಾಟ ಮಾಡಲಾಗುತ್ತಿದೆ. ಪಾಲಿಷ್ ಇಲ್ಲದ ಕೆಂಪು ಅಕ್ಕಿ, ಹರ್ಬಲ್ ಟೀ, ಉಪ್ಪಿನಕಾಯಿ, ನೈಸರ್ಗಿಕ ಬೆಲ್ಲ ಮುಂತಾದ ಒಟ್ಟು ೩೫ ಉತ್ಪನ್ನಗಳನ್ನು ತಯಾರಿಸಿ ವಿತರಿಸಲಾಗುತ್ತಿದೆ.

ಈ. ಪರ್ಯಾಯ ತಂತ್ರಜ್ಞಾನ ಬಳಕೆ ಮತ್ತು ಅಭಿವೃದ್ಧಿ: ಗೃಹ ನಿರ್ಮಾಣ, ಶಕ್ತಿ ಹಾಗು ಅಡಿಗೆ ಇಂಧನಗಳ ಬಗ್ಗೆ ಪರಿಸರ ಸ್ನೇಹಿ ತಂತ್ರಜ್ಞಾನ ಬಳಕೆ ಮತ್ತು ಅಭಿವೃದ್ಧಿಯಲ್ಲಿ ಕೂಡ ಟ್ರಸ್ಟ್ ಕಾರ್ಯೋನ್ಮುಖವಾಗಿದೆ. ಟ್ರಸ್ಟ್‌ನ ಒಟ್ಟು ವಿದ್ಯುತ್ ಪೂರೈಕೆಗೆ ಸೌರಶಕ್ತಿ ಹಾಗು ಗಾಳಿಯಂತ್ರವೇ ಮೂಲ. ಇದಲ್ಲದೇ ಎಲ್.ಇ.ಡಿ ದೀಪಗಳನ್ನು ವ್ಯಾಪಕವಾಗಿ ಬಳಸಲಗುತ್ತಿದೆ. ವಿಶಿಷ್ಟ ರೀತಿಯ ಮಡಿಕೆ ತಯಾರಿಸುವ ಕೇಂದ್ರ ಕೂಡ ರೂಪುಗೊಳ್ಳುತ್ತಿದೆ.

ಆಂತರಿಕ ಕಾರ್ಯಗಳು:

ಬದಲಾಯಿಸಿ

ಟ್ರಸ್ಟ್ ಧ್ಯಾನ, ಯೋಗ, ಉಪವಾಸ ಮುಂತಾದ ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಹಾಗು ಪ್ರಜಾಪ್ರಭುತ್ವ, ಗಾಂಧಿ ಮಾರ್ಗದ ಪ್ರಸ್ತುತತೆ ಮುಂತಾದ ಸಾಮಾಜಿಕ ವಿಚಾರಗಳ ಬಗ್ಗೆ ಹೆಚ್ಚಿನ ಅಧ್ಯಯನ ಮತ್ತು ತರಬೇತಿ ನಡೆಸುತ್ತಲಿದೆ. ಈ ನಿಟ್ಟಿನಲ್ಲಿ ಇಲ್ಲಿಯವರೆಗೂ ಹಲವಾರು ಕಮ್ಮಟಗಳು ನಡೆದಿವೆ.

ಚಿತ್ರ ಶಾಲೆ

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ