ನಡೆದೆ ಬಂದಿಹಳಿಂದು ತಾಯಿ ಮ್ಯಾಗ್ನೋಲಿಯಾ


ಚಳಿ ಹೆಚ್ಚಾಗಿರುವ ಪ್ರದೇಶದಲ್ಲಿ ಬೆಳೆಯುವ ಮ್ಯಾಗ್ನೋಲಿಯಾ ಗ್ರಾಂಡಿಫ್ಲೋರಾ ಗಿಡವೊಂದು ಮೈಸೂರಿನ ಸಿ.ಎಫ್.ಟಿ.ಆರ್.ಐ. ಆವರಣದಲ್ಲಿತ್ತು. ಅದನ್ನು ನೋಡಿದ್ದ ಕುವೆಂಪು ದಂಪತಿಗಳು, ತಮ್ಮ ಹೋತೋಟದಲ್ಲಿಯೂ ಅಂತಹ ಗಿಡವೊಂದನ್ನು ಬೆಳೆಸಲು ಉತ್ಸಕರಾಗಿದ್ದರು. ಬೆಂಗಳೂರಿನ ಲಾಲ್‌ಬಾಗಿನಲ್ಲಿ ನಿರ್ದೇಶಕರಾಗಿದ್ದಗ ಮರಿಗೌಡ ಎಂಬುವವರಿಗೆ ಹೇಳಿ, ಊಟಿಯಿಂದ ತರಿಸಿಕೊಂಡು ಬೆಳೆಸುತ್ತಾರೆ. ಸುಮಾರು ಆರೇಳು ವರ್ಷಗಳ ನಿರಂತರ ಹಾರೈಕೆಯ ಬಳಿಕ ಅದರಲ್ಲಿ ಹೂವು ಅರಳುತ್ತದೆ. ಆ ಸಂದರ್ಭವನ್ನು ಶ್ರೀಮತಿ ತಾರಿಣಿಯವರು ಹೀಗೆ ದಾಖಲಿಸಿದ್ದಾರೆ: ಗ್ರಾಂಡಿಫ್ಲೋರಾ ಮೊಗ್ಗು ಬಿಟ್ಟಾಗಿನಿಂದ ದೊಡ್ಡದಾಗಿ ಹೂ ಅರಳುವವರೆಗೂ ತಂದೆಯವರು ದಿನವೂ ಗಮನಿಸುತ್ತಲೇ ಇದ್ದರು. ಮೊದಲ ಹೂ ಕತ್ತರಿಸಿ ಹೂಜಿಯಲ್ಲಿ ಹಾಕಿ ದೇವರ ಮನೆಯಲ್ಲಿ ಇಟ್ಟರು. ಹೂ ಎರಡು ದಿನಗಳು ಬಾಡದೆ ಉಳಿಯಿತು. ಮೊದಲ ದಿನ ಹೂ ಅರಳಿ ಸಂಜೆ ಮುಚ್ಚಿಕೊಂಡು ಮೊಗ್ಗಿನಂತಾಯಿತು . ಮಾರನೆ ದಿನ ಪೂರ್ಣ ಅರಳಿ ನಾನಾ ವಿನ್ಯಾಸದಿಂದ ಪರಾಗ ಉದುರಿಸುವ ದೃಶ್ಯವಂತೂ ಅದ್ಭುತ ರಮ್ಯ. ತಂದೆಯವರು ಹೇಳುವಂತೆ ಈ ದಿನ ಹೂವರಳಿದೆ. ಅದರ ಅರಳುವಿಕೆಯ ವೈಭವವೇ ವೈಭವ. ತಂದೆಯವರು ಎರಡು ದಿನಗಳೂ ದೇವರ ಮನೆಯಲ್ಲಿ ಹೆಚ್ಚು ಹೊತ್ತು ಕಳೆಯುತ್ತಿದ್ದರು. ಕೊನೆಗೂ ಅಪ್ಪಮ್ಮನವರ ಆಸೆ ನೆರವೇರಿತು. ಕವನದಲ್ಲಿ ಹೇಳುವಂತೆ ಉಗಾದಿ ದಿನವೇ ಮೊದಲ ಹೂ ಅರಳಿತು. ಅಣ್ಣ ಚೈತ್ರನ ಆಗಮನವೂ ಆಯಿತು. ತಂದೆಯವರು ಹೇಳಿದರು ಅಂತೂ ಅಮ್ಮನ ಶ್ರಮ ಸಾರ್ಥಕವಾಯಿತು ಎಂದು. ಆ ಒಂದು ಹೂ ಅರಳುವಿಕೆ ಕವಿಗೆ ವಿಭೂತಿಯ ಆಗಮನದಂತೆ ಭಾಸವಾಗಿದೆ. ಕವಿತೆಯ ಶೀರ್ಷಿಕೆಯೇ 'ಮ್ಯಾಗ್ನೋಲಿಯಾ ಗ್ರಾಂಡಿಫ್ಲೋರಾ ಅಥವಾ ವಿಭೂತಿ ಆಗಮನ',

ಓ ನೋಡು ಬಾರಾ:
ಗಿಡದ ಕೈಮುಗಿಹ ಮೊಗ್ಗಾಗಿ ಮೈದೋರುತಿದೆ
ಮ್ಯಾಗ್ನೋಲಿಯಾ ಗ್ರಾಂಡಿಫ್ಲೋರಾ!
ತೇರ ಚಲನೆಯ ಸಾರ್ವಭೌಮಿಕ ಉದಾಸೀನ
ನಿರ್ವೇಗದಲಿ, ಎನಿತೊ ದಿನಗಳಿಂದುದ್ಯಾನ
ಯಜ್ಞವೇದಿಯೊಳುದಿಸಿ, ಕವಿ ಮನೋಧ್ಯಾನ
ದೇವತಾ ವಸ್ತುವಾಗಿಹುದೀ ಮಹಾ ಕುಟ್ಮಲಾಕಾರ:
ಹೇವಿಳಂಬಿಯೊಳುದಿಸಿ, ಅರಳಿದೆ ವಿಳಂಬಿಯಲಿ!

ವಿಳಂಬಿ ಸಂವತ್ಸರದ ಮೊದಲ ದಿನ ಯುಗಾದಿಯಂದು ಹೂವು ಅರಳಿದೆ. ಆದರೆ ಮೊಗ್ಗಾಗಿದ್ದು ಹಿಂದಿನ ಹೇವಿಳಂಬಿ ಸಂವತ್ಸರದಲ್ಲಿ! ಜಗತ್ತಿನ ಸರ್ವವ್ಯಾಪಾರಗಳಿಗೂ ಉದಾಸೀನವಾಗಿರುವಂತೆ ಕಂಡರೂ, ಉದ್ಯಾನವನ ಎಂಬ ಯಜ್ಞವೇದಿಕಯಲ್ಲಿ ಉದ್ಭವವಾಗಿ ಕವಿಮನದಲ್ಲಿ ಧ್ಯಾನಗೊಳ್ಳುತ್ತಿರುವ ದೇವತಾಸ್ವರೂಪವಾಗಿ ಹೂವು ಅರಳಿದೆ.

ಋತು ವಸಂತನ ಸಖನ ಚೈತ್ರನಾಗಮನಕ್ಕೆ
ಸ್ವಾಗತವ ಬಯಸುವಂತೆ!
ಇಂದೆಮ್ಮ ಕೋಕಿಲೋದಯ ಚೈತ್ರನುಂ ಮನೆಗೆ
ಹಬ್ಬಕ್ಕೆ ಬರುವನಿಂತೆ!

ವಸಂತನ ಸಖ ಚೈತ್ರನಾಗಮನವಾಗುವ ಮತ್ತು ಕೋಕಿಲೋದಯ ಚೈತ್ರ ಉದಯರವಿಗೆ ಹಬ್ಬಕ್ಕೆ ಬರುವ ದಿನದಂದೇ ಹೂವು ಅರಳಿದೆ. ಅರಳಿರುವ ರೀತಿಯನ್ನು ಕವಿಮಾತುಗಳಲ್ಲಿಯೇ ಕಾಣಬಹುದು.

ಇನಿತು ಕಿರುಗಿಡದೊಳೆನಿತು ಹಿರಿ ಹೂವು ಅಃ
ಬೆಳ್ಳಿಬಿಳಿ ಕಲಶಶಿಶು ಬಾಯ್‌ದುಟಿಯ ತೆರೆವಂತೆ
ಅಲರುತಿದೆ ಮೂರುಲೋಕದ ಮೋಹ ಕರೆವಂತೆ
ದುಗ್ಧಧವಳಿಮ ಮುಗ್ಧತೆಯೆ ಮೈ ಹೊರೆಯುವಂತೆ
ದಿವ್ಯ ಧಾಮದ ಗರ್ಭಗೃಹವೆ ಕಣ್ ತೆರೆಯುವಂತೆ
ಪುಂಡರೀಕಂಗಂದು ಆ ಮಹಾಶ್ವೇತೆ ಮೈದೋರಿದಂತೆ!

ಪುಂಡರೀಕನೆದುರು ಮಹಾಶ್ವೇತೆ ಪ್ರತ್ಯಕ್ಷವಾದಂತೆ ಅರಳಿದ ಈ ಹೂ ಭೀಮ ದ್ರೌಪದಿಗೆ ತಂದುಕೊಟ್ಟ ಸೌಗಂಧಿಕಾ ಪುಷ್ಪಕ್ಕಿಂತ, ಕೃಷ್ಣ ಸತ್ಯಭಾಮೆಗಿತ್ತ ಪಾರಿಜಾತಕ್ಕಿಂತ ಹೆಚ್ಚಿನದು ಕವಿಗೆ!

ಭೀಮ ತಂದ ಸೌಗಂಧಿಕಾ ಕುಸುಮ
ಇದಕೆ ಅಸಮ!
ಸತ್ಯಭಾಮೆಗಾ ಶ್ರೀ ಕೃಷ್ಣನಿತ್ತ
ಹೂ ಅದೆತ್ತ?

ಹೀಗೆ ಅರಳಿದ ಹೂವು ಧನ್ಯತೆಯನ್ನು ಅನುಭವಿಸುತ್ತದೆ.

ಅಃ ಇಂತೆ ನಾನರಳಿದರೆ ಧನ್ಯನಲ್ತೆ?
ಬೆಳಕು ಮಾಡೆ ಮಲರಿ,
ಮುಳುಗೆ ಮುಗುಳಿ,
ಬೆಣ್ಣೆಬಿಳಿ ಬಾಳ ಹೂವೆಸಳುಗಳನರಳಿ
ರಾಜರಾಜೇಶ್ವರರ ಸಿರಿಯನಿಳಿಕೆಗೈದು
ಕವಿಯ ಋಷಿಯ ಆಶೀರ್ವಾದಗಳ ಸೂರೆಗೈದು
ಅಃ ಇಂತೆನ್ನ ಬಾಳರಳಿದರೆ ಧನ್ಯನಲ್ತೆ!

ಹೇವಿಳಂಬಿಯಲ್ಲಿ ಮೊಗ್ಗಾಗಿದ್ದು, ವಿಳಂಬಿಯಲ್ಲಿ ಹೂವಾಗಿ ಅರಳಿದ್ದನ್ನು ಕವಿ, ಹೇವಿಳಂಬಿಯಲ್ಲಿ ಉದಯರವಿಗೆ ದರ್ಶನವಿತ್ತ ನರವಿಭೂತಿ ವಿನೋಬಾಜಿಯವರ ಜೊತೆಗೆ ಸಮೀಕರಿಸಿ, ಹೂ ಅರಳುವಿಕೆಯನ್ನು ವಿಭೂತಿ ಆಗಮನ ಎಂದು ಭಾವಿಸುತ್ತಾರೆ. ವಿನೋಬಾಜಿಯವರಲ್ಲಿ ನರವಿಭೂತಿಯನ್ನು ಕಂಡಂತೆ ಮ್ಯಾಗ್ನೋಲಿಯಾ ಗ್ರಾಂಡಿಫ್ಲೋರಾ ಹೂವಿನಲ್ಲಿ ಸುಮವಿಭೂತಿಯನ್ನು ಕಾಣುತ್ತಾರೆ.

ಹೇವಿಳಂಬಿಯಲ್ಲಿ ಆ ಕೊಡಗುದಾರಿಯಲಿ
ನಡೆದು ಬಂದರು ಅಂದು ಉದಯರವಿಗಾ
ನರವಿಭೂತಿ ಶ್ರೀ ವಿನೋಬಾಜಿ:
ವಿಳಂಬಿಯಲಿ ಗಿಡದ ಈ ಮೈ ಹಸುರು ದಾರಿಯಲಿ
ನಡೆದೆ ಬಂದಿಹಳಿಂದು ತಾಯಿ ಮ್ಯಾಗ್ನೋಲಿಯಾ
ಸುಮವಿಭೂತಿ ಶ್ರೀ ದಿವ್ಯರಾಜ್ಙಿ!
ಧನ್ಯ ಹೇವಿಳಂಬಿ!....
ಧನ್ಯ ವಿಳಂಬಿ!

ಒಂದು ಹೂವು ಅರಳುವ ಪ್ರಕೃತಿ ಸಹಜವಾದ ಕ್ರಿಯೆಯಲ್ಲಿ ಭಗವಂತನ ಆಗಮನವನ್ನು ಕವಿಯ ಮನಸ್ಸು ಕಂಡಿದೆ. ಅದರಿಂದ ಯುಗಯುಗಳೇ ಧನ್ಯತೆಯನ್ನು ಅನುಭವಿಸುತ್ತವೆ. ಈ ಹೂವಿನ ಆಕರ್ಷಣೆ ಕುವೆಂಪು ಇದ್ದಷ್ಟೂ ಕಾಲ, ಅಲ್ಲಿ ಹೂವು ಅರಳುತ್ತಿದ್ದಾಗಲೆಲ್ಲಾ ಕವಿಗೆ ರಸಾನುಭವವಾಗುತ್ತಿತ್ತು ಎಂದು ಶ್ರೀಮತಿ ತಾರಿಣಿಯವರ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ಹೂವನ್ನು ಹೂಜಿಗೆ ಹಾಕಿಟ್ಟಾಗ ಅದರ ಸೌಂದರ್ಯವನ್ನು ಹತ್ತಿರದಿಂದ ಇನ್ನೂ ಚೆನ್ನಾಗಿ ನೋಡಬಹುದು ಎಂಬುದು ಕವಿಯ ಅಭಿಪ್ರಾಯ. ಅಂತೆಯೇ ಹೂವನ್ನು ಹೂಜಿಯಲ್ಲಿ ಹಾಕಿ ದೇವರ ಮನೆಯಲ್ಲಿಟ್ಟರೆ ಅಲ್ಲಿಗೂ ಜೇನುಗಳ ಆಗಮನವಾಗುತ್ತದೆ! ಅದನ್ನು ಕಂಡು ಈ ದಿನ ದೇವರ ಮನೆಯಲ್ಲಿ ಹೂವಿಗೆ ಜೇನುಗಳು ಹಿಂಡು ಹಿಂಡಾಗಿ ಮುತ್ತಿ ಮೊರೆಯುತ್ತಿವೆ. ನೋಡಲು ಆಲಿಸಲೂ ರಸದೌತಣ ಎನ್ನುತ್ತಿದ್ದರಂತೆ. ಜೇನುಗಳ ಝೇಂಕಾರವನ್ನು ಕೇಳುತ್ತಾ, ಅವುಗಳು ಹೂವಿನೊಂದಿಗೆ ಆಡುವ ಚೆಲ್ಲಾಟವನ್ನು ನೋಡುತ್ತಾ ಕುಳಿತಿರುತ್ತಿದ್ದ ಕವಿ, ಹುಳುಗಳು ಕಾಳಿಗೆ ಕುಚ್ಚು ಕಟ್ಟಿದಂತೆ ಬಣ್ಣದ ಪರಾಗ ಹುಡಿಯನ್ನು ಅಂಟಿಸಿಕೊಂಡು ಹಾರಿಹೋಗುವ ಸೂಕ್ಷ್ಮವನ್ನು, ಅದ್ಭುತವನ್ನು ಗಮನಿಸುತ್ತಾರೆ. 'ಜಗನ್ಮಾತೆಯ ಸೃಷ್ಟಿಯ ಅದ್ಭುತ ಪ್ರಜ್ಞೆಯಿಂದ ನಾನು ಆಶ್ಚರ್ಯ ಚಕಿತನಾಗಿ ವೀಕ್ಷಿಸುತ್ತಿದ್ದೇನೆ. ಈ ಹುಳುಗಳು ಹೂವನ್ನು ತೊಳೆದು ಒರೆಸಿದಂತೆ ಒಳಗಿನ ಪರಾಗವನ್ನು ಹೊತ್ತು ಹೋಗುವ ಈ ಹೂವಿನ ರಮ್ಯಕರ್ಮವನ್ನು ಅವಳೇ ನಡೆಸುತ್ತಿರುವಳೆಂದು ಭಾವಿಸುತ್ತಾ ಇರುವೆ' ಎನ್ನುತ್ತಾ ದೇವರ ಮನೆಯಲ್ಲೇ ಹೂವಿನ ಸಾನಿಧ್ಯದಲ್ಲೇ ಹೆಚ್ಚು ಹೊತ್ತು ಕುಳಿತಿದ್ದರಂತೆ. ಒಮ್ಮೆ 'ಗ್ರಾಂಡಿಫ್ಲೋರಾ ಹೂ ಮನೆಯೊಳಗೆ ಇಟ್ಟಿದ್ದರೂ ಈ ದಿನವೇ ಪರಾಗ ಚಲ್ಲುತ್ತವೆ ತಮಗೆ ಸಿಗುತ್ತದೆ ಎಂದು ಆ ಜೇನಿಗೆ ಹೇಗೆ ಗೊತ್ತಾಗುತ್ತದೆಯೇ, ಆ ದೇವರಿಗೇ ಗೊತ್ತು?' ಎಂದಿದ್ದರಂತೆ. ಪರಾಗ ಉದುರುವ ಸಮಯವನ್ನು ಗಮನಿಸಿ ಕಿಟಕಿಗಳನ್ನು ಸ್ವತಃ ತಾವೇ ತೆರೆದಿಟ್ಟು ಹುಳುಗಳು ಬಂದು ಹೋಗುವುದನ್ನು ಗಮನಿಸಿ ಇತರರಿಗೂ ತೋರುತ್ತಿದ್ದರಂತೆ. ಒಮ್ಮೆ, 'ಏನು ಮಾಡುತ್ತವೆ ನೋಡೋಣ' ಎಂದು ಕಿಟಕಿಯನ್ನು ಮುಚ್ಚಿ ನೋಡುತ್ತಾ ಕುಳಿತಿದ್ದಾಗ, ಆ ಬುದ್ಧಿವಂತ ಹುಳುಗಳು ಬಾಗಿಲಿನ ಮೂಲಕ ಒಳಬಂದು, ದೇವರ ಮನೆ ಹೊಕ್ಕು ಪರಾಗವನ್ನು ಕೊಂಡೊಯ್ವಂತೆ! 'ಜೇನಿನ ಝೇಂಕಾರವೇ ಒಂದು ದಿವ್ಯತರವಾದ ಓಂಕಾರದಂತಿದೆ. ತುಂಬ ಹೊತ್ತು ಧ್ಯಾನ ಮಾಡಬಹುದು' ಎಂದು ಹೆಚ್ಚು ಹೊತ್ತು ಧ್ಯಾನ ಮಾಡುತ್ತಾ ಕುಳಿತುಬಿಡುತ್ತಿದ್ದರಂತೆ.

ಹೂವಿಗೂ ಕವಿಗೂ ಏನು ಬಂಧವೋ!?