ಧನುಷ್ಕೋಡಿ

ಭಾರತ ದೇಶದ ಗ್ರಾಮಗಳು

ಧನುಷ್ಕೋಡಿ ಅಥವಾ ದನುಷ್ಕೋಡಿ (ತಮಿಳ್ : தனுஷ்கோடி) ರಾಮೇಶ್ವರಂ ದ್ವೀಪದ ದಕ್ಷಿಣದ ತುತ್ತತುದಿಯಲ್ಲಿರುವ ಒಂದು ಪಟ್ಟಣ/ಗ್ರಾಮವಾಗಿದ್ದು,ಭಾರತತಮಿಳುನಾಡುರಾಜ್ಯದ ಪೂರ್ವ ತೀರದಲ್ಲಿದೆ.

ಧನುಷ್ಕೋಡಿ
Dhanushkodi
town

ಧನುಷ್ಕೋಡಿಯು ಪಾಂಬನ್ ನ ಆಗ್ನೇಯ ದಿಕ್ಕಿನಲ್ಲಿದೆ. ಧನುಷ್ಕೋಡಿಯು ಶ್ರೀಲಂಕಾದ ತಲೈಮನ್ನಾರ್ ನ ಪಶ್ಚಿಮದಿಂದ ಸುಮಾರು 18 ಮೈಲಿಗಳ ಅಂತರದಲ್ಲಿದೆ. 1964ರಲ್ಲಿ ಪಾಂಬನ್ ನಿಲ್ದಾಣದಿಂದ ಸಾಗಿಬರುವ ರೈಲು ಹಳಿಗಳು ಚಂಡಮಾರುತದ ಧಾಳಿಯಿಂದ ನಾಶಹೊಂದಿ, 100 ಪ್ರಯಾಣಿಕರನ್ನು ಒಯ್ಯುತ್ತಿದ್ದ ರೈಲೊಂದು ಸಮುದ್ರದಲ್ಲಿ ಮುಳುಗಿಹೋಯಿತು.

ಹಿಂದೂ ಪುರಾಣ

ಬದಲಾಯಿಸಿ

ಹಿಂದೂ ಪುರಾಣಗ್ರಂಥಗಳು ಹೇಳುವುದೇನೆಂದರೆ; ರಾವಣನ ತಮ್ಮನೂ, ರಾಮನ ಪಕ್ಷಪಾತಿಯೂ ಆದ ವಿಭೀಷಣನ ಕೋರಿಕೆಯನ್ನು ಮನ್ನಿಸಿ, ತನ್ನ ಬಿಲ್ಲಿನ ಒಂದು ತುದಿಯಿಂದ ರಾಮನು ಈ ಸೇತುವೆಯನ್ನು ಮುರಿದುದರಿಂದ ಈ ಸ್ಥಳಕ್ಕೆ ಧನುಷ್ಕೋಡಿ ಧನುಷ್ ಎಂದರೆ ಬಿಲ್ಲು, ಕೋಡಿ ಎಂದರೆ ತುದಿ) ಎಂಬ ಹೆಸರು ಬಂದಿತು. ರಾಮನು ಈ ಸ್ಥಳವನ್ನು ಸೇತುವೆಯ ನಿರ್ಮಾಣಕ್ಕೆ ಸೂಕ್ತವಾದ ಜಾಗವೆಂದು ತನ್ನ ಕೀರ್ತಿವೆತ್ತ ಬಿಲ್ಲಿನ ತುದಿಯಿಂದ ಗುರುತು ಹಾಕಿದನು ಎಂಬ ಮಂಡಣೆಯೂ ಇದೆ. ರಾಮೇಶ್ವರಕ್ಕೆ ಹೋಗುವ ಯಾತ್ರಿಗಳು ಎರಡು ಸಮುದ್ರಗಳು ಸೇರುವ ಈ ಸ್ಥಳದಲ್ಲಿ ಸ್ನಾನ ಮಾಡುವುದು ರೂಢಿಯಲ್ಲಿದೆ. ಒಂದೇ ಸರಳರೇಖೆಯಲ್ಲಿರುವ ಹಲವಾರು ಬಂಡೆಗಳು ಮತ್ತು ಪುಟ್ಟ ದ್ವೀಪಗಳ ಸಾಲನ್ನು ಹಳೆಯ ಸೇತುವೆಯ ಪಳಿಯುಳಿಕೆ ಎನ್ನುವರಲ್ಲದೆ ಇದನ್ನು ರಾಮಸೇತು ಎಂದೂ ಕರೆಯುತ್ತಾರೆ.

ಕಾಶಿಗೆ ಹೋಗಿಬಂದ ತೀರ್ಥಯಾತ್ರೆಯ ಫಲವು ಸಂಪೂರ್ಣವಾಗಿ ಸಿದ್ಧಿಸಬೇಕಾದರೆ ರಾಮೇಶ್ವರದಲ್ಲಿ ಪೂಜೆ ಹಾಗೂ ಧನುಷ್ಕೋಡಿಯಲ್ಲಿ ಮಹೋದಧಿ (ಬಂಗಾಳ ಕೊಲ್ಲಿ), ಮತ್ತು ರತ್ನಾಕರ (ಹಿಂದೂ ಮಹಾಸಾಗರ)ಗಳ ಸಂಗಮದಲ್ಲಿ ಪುಣ್ಯಸ್ನಾನ ಮಾಡಬೇಕು ಎಂಬ ಪ್ರತೀತಿ ಇದೆ. ಸೇತುವೆ ಅಥವಾ ಹಳ್ಳದಾಟಲು ನಿರ್ಮಿಸಿದ ನಿರ್ಮಾಣಕ್ಕೆ ಸಂಸ್ಕೃತದಲ್ಲಿ ಸೇತು ಎಂದು ಕರೆಯುತ್ತಾರೆ. ಅದು ಈಗ ರಾಮನು ಲಂಕೆಗೆ ಹೋಗಲೆಂದು ಸಮುದ್ರ ದಾಟಲು ನಿರ್ಮಿಸಿದ ಸೇತುವೆ ಎಂಬ ಅರ್ಥವನ್ನು ಪಡೆದು ವಿಶೇಷವಾದ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

1964ರ ಚಂಡಮಾರುತ

ಬದಲಾಯಿಸಿ

ಪಾಕ್ ಜಲಸಂಧಿಯ ಮರಳಿನ ದಿಣ್ಣೆಯ ಪ್ರದೇಶವಾದ, ಕೇವಲ ಐವತ್ತು ಗಜಗಳಷ್ಟು ಉದ್ದವಿದ್ದು ಜಗತ್ತಿನಲ್ಲಿಯೇ ಎರಡು ದೇಶಗಳ ನಡುವಿನ ಅತಿ ಕಡಿಮೆ ಅಂತರವಿರುವ ಭೂ ಗಡಿಪ್ರದೇಶವೆಂದು ಹೆಸರಾದ, ಶ್ರೀಲಂಕಾ ಮತ್ತು ಭಾರತದ ನಡುವಿನ ಗಡಿಪ್ರಾಂತ್ಯವು, ಧನುಷ್ಕೋಡಿಯಲ್ಲಿದೆ. 1964ರ ಚಂಡಮಾರುತಕ್ಕೆ ಮುನ್ನ ಧನುಷ್ಕೋಡಿಯು ಒಂದು ಉತ್ತಮ ಪ್ರವಾಸಿ ಹಾಗೂ ತೀರ್ಥಯಾತ್ರಾ ಸ್ಥಳವಾಗಿತ್ತು. ಸಿಲೋನ್ (ಈಗ ಶ್ರೀಲಂಕಾ) ಕೇವಲ 18 ಮೈಲಿಗಳ ಅಂತರದಲ್ಲಿದ್ದುದರಿಂದ. ಧನುಷ್ಕೋಡಿ ಮತ್ತು ತಲೈಮನ್ನಾರ್ ಗಳ ನಡುವೆ ಪ್ರತಿ ವಾರವೂ ದೋಣಿಗಳ ಮೂಲಕ ಪ್ರವಾಸಿಗರನ್ನು ಮತ್ತು ಸಾಮಾನು ಸರಂಜಾಮುಗಳನ್ನು ಸಾಗಿಸುವ ಸೇವೆಯ ಸೌಲಭ್ಯವಿರುತ್ತಿತ್ತು. ಹೊಟೆಲ್ ಗಳು, ನೇಯ್ಗೆಯ ವಸ್ತುಗಳ ಮಳಿಗೆಗಳು ಮತ್ತು ಧರ್ಮಶಾಲೆಗಳು ಯಾತ್ರಿಕರ ಹಾಗೂ ಪ್ರವಾಸಿಗರ ಬೇಡಿಕೆಗಳನ್ನು ಪೂರೈಸುತ್ತಿದ್ದವು. ಧನುಷ್ಕೋಡಿಗೆ ಇದ್ದ ರೈಲು ಮಾರ್ಗವು - ಆಗ ಅದು ರಾಮೇಶ್ವರದವರೆಗೂ ತಲುಪುತ್ತಿರಲಿಲ್ಲ ಹಾಗೂ 1964ರ ಚಂಡಮಾರುತದಲ್ಲಿ ನಾಶಗೊಂಡಿತು - ಮಂಡಪಂ ನಿಂದ ನೇರವಾಗಿ ಧನುಷ್ಕೋಡಿಯನ್ನು ತಲುಪುತ್ತಿತ್ತು. ಒಂದು ರೈಲು ನಿಲ್ದಾಣ, ಒಂದು ಸಣ್ಣ ರೈಲು ವಿಭಾಗದವರ ಆಸ್ಪತ್ರೆ, ಒಂದು ಅಂಚೆ ಕಚೇರಿ ಮತ್ತು ಮೀನುಗಾರಿಕೆ ಇಲಾಖೆಯಂತಹ ಕೆಲವು ರಾಜ್ಯಸರ್ಕಾರದ ವಿಭಾಗಗಳನ್ನು ಹೊಂದಿದಂತಹ ಹೆಮ್ಮೆಯನ್ನು ಧನುಷ್ಕೋಡಿಯು ಆ ದಿನಗಳಲ್ಲಿ ಪಡೆದಿತ್ತು. 1893ರ ಸೆಪ್ಟೆಂಬರ್ ನಲ್ಲಿ ಅಮೆರಿಕದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಅದ್ಭುತವಾದ ಕೀರ್ತಿ ಗಳಿಸಿದ ಸ್ವಾಮಿ ವಿವೇಕಾನಂದರು ಅಲ್ಲಿಂದ ಮರಳಿಬಂದು ಕೊಲಂಬೋದಿಂದ ಭಾರತವನ್ನು ಪ್ರವೇಶಿಸುವ ಮಾರ್ಗವನ್ನು ಹಿಡಿದು, 1897ರ ಜನವರಿಯಲ್ಲಿ, ಭಾರತದ ಮಣ್ಣಿನ ಮೇಲೆ ಮೊದಲ ಪಾದಸ್ಪರ್ಶ ಮಾಡಿದ್ದು ಧನುಷ್ಕೋಡಿಯಲ್ಲೇ.

ಚಂಡಮಾರುತಕ್ಕೆ ಮುನ್ನ, ಮದ್ರಾಸ್ ಎಗ್ಮೋರ್ (ಈಗ ಚೆನ್ನೈ ಎಗ್ಮೋರ್)ನಿಂದ ಧನುಷ್ಕೋಡಿಯವರೆಗೆ ಬೋಟ್ ಮೇಯ್ಲ್ ಎಂಬ ಒಂದು ರೈಲಿನ ಸೌಲಭ್ಯವಿತ್ತು ಹಾಗೂ ಆ ರೈಲು ಒಂದು ಹಡಗಿನ ಸಂಪರ್ಕದ ಮೂಲಕ ಪ್ರಯಾಣಿಕರನ್ನು ಸಿಲೋನ್ ಗೆ ತಲುಪಿಸಲು ಸಹಾಯಕವಾಗಿತ್ತು. 1964ರ ಚಂಡಮಾರುತದ ಸಮಯದಲ್ಲಿ, ಸುಮಾರು 20 ಅಡಿ ಎತ್ತರದ ಬೃಹತ್ ಅಲೆಯೊಂದು ಪಾಕ್ ಜಲಸಂಧಿ/ಕೊಲ್ಲಿಯ ಪಟ್ಟಣದ ಪೂರ್ವಭಾಗವನ್ನು ಅಪ್ಪಳಿಸಿತು ಹಾಗೂ ಇಡೀ ಪಟ್ಟಣವನ್ನು, ಪ್ರಯಾಣಿಕರನ್ನು ಹೊತ್ತ ಒಂದು ರೈಲನ್ನು ಮತ್ತು ಪಾಂಬನ್ ರೈಲು ಸೇತುವೆಯನ್ನು ಧ್ವಂಸ ಮಾಡಿತು - ವಿಷಾದದ ಅಂಶವೆಂದರೆ ಈ ವಿನಾಶವು ಮಧ್ಯರಾತ್ರಿಯ ಕಗ್ಗತ್ತಲಿನಲ್ಲಿಯೇ ನಡೆದುಹೋಯಿತು.

ಆ ಚಂಡಮಾರುತವು ಹಲವಾರು ವಿಧಗಳಲ್ಲಿ ವಿಶಿಷ್ಟವಾದುದಾಗಿತ್ತು. ಅವೆಲ್ಲ ಆರಂಭವಾದುದು 17ನೆಯ ಡಿಸೆಂಬರ್ 1964ರಂದು ದಕ್ಷಿಣ ಅಂಡಮಾನ್ ಸಮುದ್ರದಲ್ಲಿ 5N 93E ಅಕ್ಷಂಶಗಳಲ್ಲಿ ತನ್ನ ಮೂಲವನ್ನಿಡರಿಸಿಕೊಂಡು ರಚಿತವಾದ ಒಂದು ಹವಾಮಾನದಲ್ಲಿನ ಒತ್ತಡದ ತಗ್ಗುವಿಕೆಯಿಂದ. ಡಿಸೆಂಬರ್ 19ರಂದು ಅದು ತೀವ್ರಗೊಂಡು ಚಂಡಮಾರುತವಾಗಿ ರೂಪಗೊಂಡಿತು. 5Nನಷ್ಟು ಕೆಳಮಟ್ಟದಲ್ಲಿ ಒತ್ತಡ ತಗ್ಗುವಿಕೆ ಸಂಭವಿಸುವುದು ಭಾರತದ ಸಮುದ್ರಗಳಲ್ಲಿ ಬಹಳ ಅಪರೂಪವಾದರೂ ವಾಯುವ್ಯದ ದೇಶಗಳಲ್ಲಿ ಸಮಭಾಜಕರೇಖೆಯಿಂದ ಕೇವಲ 5 ಅಡಿಗಳ ಅಂತರದಲ್ಲಿ ಇಂತಹ ಚಂಡಮಾರುತಗಳು ಏಳುವುದು ಹಲವಾರು ಬಾರಿ ವರದಿಯಾಗಿದೆ. ರಾಮೇಶ್ವರದ ಚಂಡಮಾರುತವು ಆ ತಗ್ಗಿದ ಅಕ್ಷಾಂಶದಲ್ಲಿ ರಚಿತವಾದುದಷ್ಟೇ ಅಲ್ಲದೆ, ಸರಿಸುಮಾರು ಅದೇ ಅಕ್ಷಾಂಶದಲ್ಲಿ ಭಯಂಕರ ಚಂಡಮಾರುತವಾಗಿ ಬೆಳೆದುದು ಬಹಳ ಅಪರೂಪದ ಪ್ರಸಂಗಗಳಲ್ಲಿ ಒಂದೆನಿಸಿದೆ. 1964ರ ಡಿಸೆಂಬರ್ 21ರ ನಂತರ ಅದು ಪಶ್ಚಿಮ ದಿಕ್ಕಿನಲ್ಲಿ ಸಾಗಿ, ಸುಮಾರು ಸರಳರೇಖೆಯ ಮಾರ್ಗದಲ್ಲಿ ದಿನಕ್ಕೆ 250ರಿಂದ 350 ಮೈಲಿಗಳ ವೇಗದಲ್ಲಿ ಮುಂದುವರೆಯಿತು. ಡಿಸೆಂಬರ್ 22ರಂದು ಅದು ಸಿಲೋನ್ (ಈಗಿನ ಶ್ರೀಲಂಕಾ) ನ ವಾವುನಿಯಾ ಪ್ರದೇಶವನ್ನು ದಾಟುವಾಗ ಅದರ ವಾಯುವೇಗವು ೧೫೦ ನಾಟ್ (ಗಂಟೆಗೆ 270 ಕಿ.ಮೀ.) ಇದ್ದು, ಹಾಗೆಯೇ ಮುಂದುವರಿದ ಚಂಡಮಾರುತವು ಪಾಕ್ ಜಲಸಂಧಿಯನ್ನು ರಾತ್ರಿಯಲ್ಲಿ ಹೊಕ್ಕು, 1964ರ ಡಿಸೆಂಬರ್ 22-23ರ ರಾತ್ರಿ ರಾಮೇಶ್ವರ ದ್ವೀಪದ ಧನುಷ್ಕೋಡಿಯನ್ನು ಬಿರುಸಾಗಿ ಅಪ್ಪಳಿಸಿತು. ರಾಮೇಶ್ವರವನ್ನು ದಾಟುವಾಗ ಚಂಡಮಾರುತದಿಂದುಟಾದ ಅಲೆಗಳು ಸುಮಾರು ಎಂಟು ಗಜದಷ್ಟು ಎತ್ತರ ಇದ್ದವೆಂದು ಅಂದಾಜಿಸಲಾಯಿತು. ಶಶಿ ಎಂ ಕುಲಶ್ರೇಷ್ಠ ಮತ್ತು ಮದನ್ ಜಿ. ಗುಪ್ತ ರವರು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಚಂಡಮಾರುತದ ಬಗ್ಗೆ ಬರೆದ 'ಸ್ಯಾಟಿಲೈಟ್ ಸ್ಟಡಿ ಆಫ್ ರಾಮೇಶ್ವರಮ್ ಸ್ಟಾರ್ಮ್' ಈ ಕೆಳಗಿನ ಕೊಂಡಿಯಲ್ಲಿ ನೀಡಲ್ಪಟ್ಟಿದೆ [೧]

ಆ ಕರಾಳ ದಿನದಂದು (ಡಿಸೆಂಬರ್ 22) 23:55ರ ಸಮಯದಲ್ಲಿ ಧನುಷ್ಕೋಡಿಯನ್ನು ಪ್ರವೇಶಿಸುತ್ತಿದ್ದ ರೈಲು ಸಂಖ್ಯೆ 653, ಪಾಂಬನ್-ಧನುಷ್ಕೋಡಿ ಪ್ಯಾಸೆಂಜರ್, ಎಂದಿನಂತೆಯೇ ಅಂದೂ ಸಹ 110 ಜನ ಪ್ರಯಾಣಿಕರು ಮತ್ತು 5 ರೈಲ್ವೇ ಸಿಬ್ಬಂದಿಗಳನ್ನು ಹೊತ್ತು ಸಾಗುತ್ತಾ, ಧನುಷ್ಕೋಡಿಯ ರೈಲು ನಿಲ್ದಾಣದಿಂದ ಕೆಲವೇ ಗಜಗಳಷ್ಟು ದೂರವಿದ್ದಾಗ ಒಂದು ದೈತ್ಯ ಅಲೆಯು ಅದನ್ನು ಅಪ್ಪಳಿಸಿತು. ಆ ರಭಸಕ್ಕೆ ಇಡಿಯ ರೈಲೇ ಕೊಚ್ಚಿಕೊಂಡು ಹೋಯಿತು ಮತ್ತು ಅದರಲ್ಲಿದ್ದ ಎಲ್ಲಾ 115 ಪ್ರಯಾಣಿಕರೂ ಸ್ಥಳದಲ್ಲೇ ಮೃತರಾದರು. ಆ ಚಂಡಮಾರುತದಲ್ಲಿ ಒಟ್ಟಾರೆ 1800 ಜನರು ಮೃತರಾದರು. ಧನುಷ್ಕೋಡಿಯ ಎಲ್ಲಾ ವಸತಿ ಗೃಹಗಳು ಮತ್ತು ಇತರ ಕಟ್ಟಡಗಳು ಚಂಡಮಾರುತದಲ್ಲಿ ಎದ್ದ ಅಲೆಗಳಲ್ಲಿ ಮುಳುಗಿಹೋದವು. ಆಗ ಎದ್ದ ದೈತ್ಯ ಅಲೆಗಳು ದ್ವೀಪದಲ್ಲಿ ಸುಮಾರು 10 ಕಿಲೋಮೀಟರ್ ಗಳವರೆಗೆ ನುಗ್ಗಿ ಪಟ್ಟಣವನ್ನು ಸಂಪೂರ್ಣವಾಗಿ ಹಾಳು ಮಾಡಿದವು. ಈ ದೈತ್ಯ ಅಲೆಗಳ ರಭಸಕ್ಕೆ ಪಾಂಬನ್ ಸೇತುವೆ ಕೊಚ್ಚಿಕೊಂಡು ಹೋಯಿತು. ರಭಸದಿಂದ ಮುನ್ನುಗ್ಗುತ್ತಿದ್ದ ನೀರಿನ ಅಲೆಗಳು ಚಂಡಮಾರುತದಿಂದ ತಪ್ಪಿಸಿಕೊಳ್ಳಲೆಂದು ನೂರಾರು ಜನರು ಆಶ್ರಯ ಪಡೆದಿದ್ದ ರಾಮೇಶ್ವರದ ಪ್ರಮುಖ ದೇವಸ್ಥಾನಕ್ಕಿಂತ ಕೊಂಚ ದೂರದವರೆಗೆ ಆಕ್ರಮಿಸಿ ನಿಂತವು ಎಂದು ಅದನ್ನು ಕಣ್ಣಾರೆ ಕಂಡ ಜನಗಳು ವರದಿ ಮಾಡಿದ್ದಾರೆ. ಈ ವಿನಾಶದ ನಂತರ, ಮದ್ರಾಸ್ ಸರ್ಕಾರವು ಈ ಪಟ್ಟಣವನ್ನು ದೆವ್ವಗಳ ಪಟ್ಟಣ ಎಂದು ಘೋಷಿಸಿ, ಚಂಡಮಾರುತದ ನಂತರ ಈ ಪ್ರದೇಶವು ವಾಸಿಸಲು ಯೋಗ್ಯವಾದುದಲ್ಲವೆಂದು ನಿರ್ಣಯ ನೀಡಿತು. ಕೆಲವೇ ಬೆಸ್ತರು ಈಗ ಅಲ್ಲಿ ಜೀವಿಸುತ್ತಿದ್ದಾರೆ.

ಧನುಷ್ಕೋಡಿಯಲ್ಲಿ ಬಲಿಯಾದವರಿಗಾಗಿ ಸ್ಮಾರಕ

ಧನುಷ್ಕೋಡಿ ಬಸ್ ನಿಲ್ದಾಣದ ಬಳಿ ನಿಲ್ಲಿಸಿರುವ ಸ್ಮಾರಕದಲ್ಲಿ ಈ ರೀತಿ ಬರೆಯಲಾಗಿದೆ: "ತೀವ್ರ ವಾಯುವೇಗ ಮತ್ತು ಬೃಹತ್ ಅಲೆಗಳನ್ನು ಒಳಗೊಂಡ ಚಂಡಮಾರುತವು 22ನೆಯ ಡಿಸೆಂಬರ್ 1964ರ ಮಧ್ಯರಾತ್ರಿಯಿಂದ 1964ರ ಡಿಸೆಂಬರ್ 25ರ ಸಾಯಂಕಾಲದವರೆಗೂ ಧನುಷ್ಕೋಡಿ ಪಟ್ಟಣವನ್ನು ಅಪ್ಪಳಿಸಿ, ತೀವ್ರವಾದ ಹಾನಿಯನ್ನು ಉಂಟುಮಾಡಿದುದಲ್ಲದೆ ಇಡೀ ಧನುಷ್ಕೋಡಿ ಪಟ್ಟಣವನ್ನೇ ನಾಶಗೊಳಿಸಿತು."

 
ಧನುಷ್ಕೋಡಿಯ ಭೂಪಟ

ರಾಮೇಶ್ವರಂನಿಂದ ಧನುಷ್ಕೋಡಿಯವರೆಗೂ ರೈಲುಮಾರ್ಗವಿದ್ದು, ಆ ಮಾರ್ಗದಲ್ಲಿ ದಿನವೂ ಆ ದಿನಗಳಲ್ಲಿ ಪ್ಯಾಸೆಂಜರ್ ರೈಲು ಸಂಚಾರ ಮಾಡುತ್ತಿದ್ದಿತಾದರೂ, ಚಂಡಮಾರುತ ಬೀಸಿದ ನಂತರ ಆ ಹಳಿಗಳು ಹಾನಿಗೊಂಡವು ಹಾಗೂ ಕಾಲಕ್ರಮೇಣ ಮರಳಿನ ದಿಣ್ಣೆಗಳಿಂದ ಮುಚ್ಚಲ್ಪಟ್ಟವಾದುದರಿಂದ ರೈಲು ಸಂಚಾರವನ್ನು ಸ್ಥಗಿತಗೊಳಿಸಬೇಕಾಯಿತು. ಧನುಷ್ಕೋಡಿಯನ್ನು ತಲುಪಬೇಕಾದರೆ ಸಮುದ್ರತೀರದ ಗುಂಟ ಮರಳಿನ ದಿಬ್ಬಗಳನ್ನೇರುತ್ತಾ ಕಾಲ್ನಡಿಗೆಯಲ್ಲಿ ಸಾಗಬೇಕು ಅಥವಾ ಬೆಸ್ತರು ಹೊಂದಿರುವ ಜೀಪ್ ಮತ್ತು ಟೆಂಪೋಗಳನ್ನು ಅವಲಂಬಿಸಬೇಕು.

ಇಲ್ಲಿ ರಾಮನ ಹಲವಾರು ದೇವಸ್ಥಾನಗಳಿವೆ. ಈ ಹಳ್ಳಿಗೆ ಗುಂಪು ಗುಂಪಾಗಿ ಬೆಳಗ್ಗೆ ಬಂದು ಸೂರ್ಯ ಮುಳುಗುವ ಮುನ್ನ ರಾಮೇಶ್ವರಂಗೆ ಮರಳುವುದು ಸೂಕ್ತ; ಏಕೆಂದರೆ ಇಲ್ಲಿನ ಇಡೀ 15 ಕಿಲೋಮೀಟರ್ ಪ್ರಾಂತ್ಯವು ನಿರ್ಜನವಾಗಿದೆ ಹಾಗೂ ಬೀತಿ ಮೂಡಿಸುವಂತಹುದಾಗಿದೆ.ಆದರೂ ಇಲ್ಲಿಯ ನಿಗೂಢಭರಿತತೆ ಕುತೂಹಲಕರವಾಗಿದೆ. ಈ ಪ್ರದೇಶದಲ್ಲಿ ಪ್ರವಾಸೋದ್ಯಮವು ವೃದ್ಧಿಯಾಗುತ್ತಿದೆ ಮತ್ತು ಪ್ರವಾಸಿಗರ ರಕ್ಷಣೆಗಾಗಿ ಸಾಕಷ್ಟು ಪ್ರಮಾಣದ ಪೊಲೀಸ್ ಪಡೆಯನ್ನೂ ನಿಯಮಿಸಲಾಗಿದೆ. ಸಮುದ್ರವನ್ನು ಕಾಯಲು ಮುಂಚೂಣಿಯ ನಿರೀಕ್ಷಣಾ ಪಹರೆಯೊಂದನ್ನು ಭಾರತೀಯ ನೌಕಾಪಡೆಯು ಸ್ಥಾಪಿಸಿದೆ. ಧನುಷ್ಕೋಡಿಯಲ್ಲಿ ಹಿಂದೂ ಮಹಾಸಾಗರದ ಆಳವಾದ ಹಾಗೂ ರಭಸಭರಿತ ಜಲವು ಆಳವಿಲ್ಲದ ಹಾಗೂ ಶಾಂತವಾದ ಬಂಗಾಳಕೊಲ್ಲಿಯ ಜಲವನ್ನು ಸೇರುವುದನ್ನು ಕಾಣಬಹುದು ಇಲ್ಲಿ ಸಮುದ್ರದ ಆಳವು ಕಡಿಮೆ ಇರುವುದರಿಂದ ಬಂಗಾಳ ಕೊಲ್ಲಿಗೆ ಈ ಸ್ಥಳದಲ್ಲಿ ಇಳಿದು ನಡೆದು ವರ್ಣಭರಿತವಾದ ಹವಳಗಳು, ಮೀನುಗಳು, ಸಮುದ್ರಸಸ್ಯಗಳುಮ ನಕ್ಷತ್ರಮೀನುಗಳು, ಸಾಗರ ಸೌತೆ, ಇತ್ಯಾದಿಗಳನ್ನು ಕಾಣಬಹುದು.

ಪ್ರಸ್ತುತದಲ್ಲಿ ಪ್ರತಿದಿನವೂ ಸುಮಾರು 500 ಯಾತ್ರಿಕರು ಧನುಷ್ಕೋಡಿಗೆ ಭೇಟಿ ನೀಡುತ್ತಿದ್ದು, ಹಬ್ಬ, ಹರಿದಿನಗಳು, ಹಾಗೂ ಹುಣ್ಣಿಮೆ ಹಾಗೂ ಅಮಾವಾಸ್ಯೆಯಂತಹ ದಿನಗಳಂದು ಸಾವಿರಾರು ಯಾತ್ರಿಕರು ಇಲ್ಲಿಗೆ ಆಗಮಿಸುತ್ತಾರೆ. ನಿಯಮಿತ ಬಸ್ ಸೌಲಭ್ಯವು ಕೋದಂಡರಾಮ ದೇವಸ್ಥಾನವನ್ನು ಹಾದು ರಾಮೇಶ್ವರದಿಂದ ಕೊಂಚ ದೂರದವರೆಗೂ ಮಾತ್ರ ಲಭ್ಯವಿದ್ದು, ಧನುಷ್ಕೋಡಿಯಲ್ಲಿ ಧಾರ್ಮಿಕ ವಿಧಿಗಳನ್ನು ಆಚರಿಸಲು ಇಚ್ಛಿಸುವ ಹಲವಾರು ಯಾತ್ರಿಕರು ಖಾಸಗಿ ವ್ಯಾನ್ ಗಳನ್ನು ಅವಲಂಬಿಸಬೇಕಾಗಿದೆ; ಆ ವ್ಯಾನ್ ಗಳವರು, ಯಾತ್ರಿಕರ ಸಂಖ್ಯೆಯನ್ನವಲಂಬಿಸಿ, ಪ್ರತಿ ಪ್ರಯಾಣಿಕನಿಂದ ಐವತ್ತರಿಂದ ನೂರು ರೂಪಾಯಿಗಳವರೆಗೂ ಶುಲ್ಕ ಪಡೆಯುತ್ತಾರೆ. ಭಾರತದ ಎಲ್ಲಾ ಮೂಲೆಗಳಿಂದಲೂ ರಾಮೇಶ್ವರಕ್ಕೆ ಭೇಟಿ ನೀಡುವ ಸಾರ್ವಜನಿಕರ ಬೇಡಿಕೆಯ ಮೇರೆಗೆ, 2003ರಲ್ಲಿ, ದಕ್ಷಿಣ ರೈಲ್ವೆಯು ಧನುಷ್ಕೋಡಿಯಿಂದ ರಾಮೇಶ್ವರದವರೆಗೆ ಹೋಗಲು ಕೈಗೊಳ್ಳಬೇಕಾದ ಹದಿನಾರು ಕಿಲೋ ಮೀಟರ್ ಗಳ ರೈಲುಮಾರ್ಗದ ಮರುಸ್ಥಾಪನೆಯ ಯೋಜನೆಯ ಕರಡನ್ನು ಕೇಂದ್ರ ರೈಲು ಸಚಿವಾಲಯಕ್ಕೆ ಕಳಿಸಿತು; ಅದರ ಹಣೆಬರಹ ಏನಾಯಿತೆಂಬುದು ಇನ್ನೂ ಚಿದಂಬರ ರಹಸ್ಯವಾಗಿಯೇ ಉಳಿದಿದೆ.

ಸೂರ್ಯ ಗ್ರಹಣ:

ಜನವರಿ 15, 2010ರ ಕಂಕಣ ಸೂರ್ಯಗ್ರಹಣವು ಈ ಸ್ಥಳದಲ್ಲೇ ಗೋಚರಿಸಿತು.

ಗ್ಯಾಲರಿ

ಬದಲಾಯಿಸಿ

ಆಕರಗಳು

ಬದಲಾಯಿಸಿ


9°09′07″N 79°26′45″E / 9.152011°N 79.445851°E / 9.152011; 79.445851

9°09′07″N 79°26′45″E / 9.152011°N 79.445851°E / 9.152011; 79.445851{{#coordinates:}}: cannot have more than one primary tag per page