ದ ಗಾಡ್‍ಫ಼ಾದರ್ ಪಾರ್ಟ್ ಟೂ (ಚಲನಚಿತ್ರ)

ದ ಗಾಡ್‍ಫ಼ಾದರ್ ಪಾರ್ಟ್ ಟೂ ೧೯೭೪ರ ಒಂದು ಅಮೇರಿಕನ್ ಅಪರಾಧಕೇಂದ್ರಿತ ಚಲನಚಿತ್ರ. ಇದರ ಚಿತ್ರಕಥೆಯನ್ನು ಮಾರಿಯೊ ಪ್ಯೂಜ಼ೊರೊಂದಿಗೆ ಬರೆದ ಫ್ರಾಂಸಿಸ್ ಫೋರ್ಡ್ ಕೊಪ್ಪಲಾ ಈ ಚಲನಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರೂ ಆಗಿದ್ದಾರೆ. ತಾರಗಣದಲ್ಲಿ ಆಲ್ ಪಸಿನೊ ಮತ್ತು ರಾಬರ್ಟ್ ಡಿ ನಿರೋ ಇದ್ದಾರೆ. ಪ್ಯೂಜ಼ೊರ ೧೯೬೯ರ ಕಾದಂಬರಿ ದ ಗಾಡ್‍ಫ಼ಾದರ್ ಮೇಲೆ ಭಾಗಶಃ ಆಧಾರಿತವಾದ ಈ ಚಲನಚಿತ್ರವು ದ ಗಾಡ್‍ಫ಼ಾದರ್ ಚಿತ್ರದ ಉತ್ತರಭಾಗ ಮತ್ತು ಪೂರ್ವಭಾಗ ಎರಡೂ ಆಗಿದೆ. ಈ ಚಿತ್ರದಲ್ಲಿ ಎರಡು ಸಮಾನಾಂತರ ಘಟನಾಸರಣಿಗಳನ್ನು ಪ್ರಸ್ತುತಪಡಿಸಲಾಗಿದೆ: ಒಂದು ತನ್ನ ಜೀವದ ಮೇಲಾದ ಪ್ರಯತ್ನದ ನಂತರ ಕುಟುಂಬದ ವ್ಯವಹಾರವನ್ನು ರಕ್ಷಿಸುತ್ತಿರುವ, ಕೊರ್ಲಿಯೋನಿ ಅಪರಾಧ ಕುಟುಂಬದ ಹೊಸ ಡಾನ್ ಆದ ಮೈಕಲ್ ಕೊರ್ಲಿಯೋನಿಯ (ಪಚೀನೊ) ೧೯೫೮ರ ಕಥೆಯನ್ನು ಆಯ್ದುಕೊಳ್ಳುತ್ತದೆ; ಪೂರ್ವಭಾಗವು ಸಿಸಿಲಿಯಲ್ಲಿನ ಅವನ ತಂದೆಯ ಬಾಲ್ಯದಿಂದ ಹಿಡಿದು ನ್ಯೂ ಯಾರ್ಕ್ ನಗರದಲ್ಲಿ ಅವನ ಕುಟುಂಬ ಉದ್ಯಮದ ಸ್ಥಾಪನೆವರೆಗೆ ಅವನ ತಂದೆ ವಿಟೊ ಕೊರ್ಲಿಯೋನಿಯ ಪ್ರಯಾಣವನ್ನು ಚಿತ್ರಿಸುತ್ತದೆ.

ದ ಗಾಡ್‍ಫ಼ಾದರ್ ಪಾರ್ಟ್ ಟೂ
ಚಿತ್ರಮಂದಿರ ಬಿಡುಗಡೆಯ ಪೋಸ್ಟರ್
ನಿರ್ದೇಶನಫ಼್ರಾಂಸಿಸ್ ಫ಼ೋರ್ಡ್ ಕೋಪಲ
ನಿರ್ಮಾಪಕಫ಼್ರಾಂಸಿಸ್ ಫ಼ೋರ್ಡ್ ಕೋಪಲಾ
ಚಿತ್ರಕಥೆ
  • ಫ಼್ರಾಂಸಿಸ್ ಫ಼ೋರ್ಡ್ ಕೋಪಲಾ
  • ಮಾರಿಯೊ ಪೂಜ಼ೊ
ಆಧಾರಮಾರಿಯೊ ಪೂಜ಼ೊರ "ದ ಗಾಡ್‍ಫ಼ಾದರ್" ಮೇಲೆ ಆಧಾರಿತ
ಪಾತ್ರವರ್ಗ
  • ಆಲ್ ಪಚೀನೊ
  • ರಾಬರ್ಟ್ ಡುವಾಲ್
  • ಡಯಾನ್ ಕೀಟನ್
  • ರಾಬರ್ಟ್ ಡಿ ನೀರೊ
  • ಟಾಲಿಯಾ ಶಾಯರ್
  • ಮೊರ್ಗ್ಯಾನಾ ಕಿಂಗ್
  • ಜಾನ್ ಕಜ಼ಾಲೆ
  • ಮಾರಿಯಾನಾ ಹಿಲ್
  • ಲೀ ಸ್ಟ್ರ್ಯಾಸ್‍ಬರ್ಗ್
ಸಂಗೀತನೀನೊ ರೋಟಾ
ಛಾಯಾಗ್ರಹಣಗಾರ್ಡನ್ ವಿಲಿಸ್
ಸಂಕಲನ
  • ಪೀಟರ್ ಜ಼ಿನರ್
  • ಬ್ಯಾರಿ ಮಾಲ್ಕಿನ್
  • ರಿಚರ್ಡ್ ಮಾರ್ಕ್ಸ್
ವಿತರಕರುಪ್ಯಾರಮೌಂಟ್ ಪಿಕ್ಚರ್ಸ್
ಬಿಡುಗಡೆಯಾಗಿದ್ದು
  • ಡಿಸೆಂಬರ್ 12, 1974 (1974-12-12) (ನ್ಯೂ ಯಾರ್ಕ್ ನಗರ)
  • ಡಿಸೆಂಬರ್ 20, 1974 (1974-12-20) (ಅಮೇರಿಕ)
ಅವಧಿ200 ನಿಮಿಷಗಳು[]
ದೇಶಅಮೇರಿಕ ಸಂಯುಕ್ತ ಸಂಸ್ಥಾನ
ಭಾಷೆ
  • ಇಂಗ್ಲಿಷ್
  • ಸಿಸಿಲಿಯನ್
ಬಂಡವಾಳ$13 ಮಿಲಿಯನ್[][]
ಬಾಕ್ಸ್ ಆಫೀಸ್$88 ಮಿಲಿಯನ್[]

ಮೊದಲ ಚಿತ್ರದ ಯಶಸ್ಸಿನ ನಂತರ, ಪ್ಯಾರಮೌಂಟ್ ಪಿಕ್ಚರ್ಸ್ ಆ ಚಿತ್ರದ ಮುಂಬರಿವನ್ನು ಅಭಿವೃದ್ಧಿಪಡಿಸಲು ಆರಂಭಿಸಿತು. ಪಾತ್ರವರ್ಗ ಮತ್ತು ಸಿಬ್ಬಂದಿ ಬಹುತೇಕವಾಗಿ ಮೊದಲ ಚಿತ್ರದವರೇ ಆಗಿದ್ದರು. ವಿಟೊನ ಏಳಿಗೆ ಮತ್ತು ಮೈಕಲ್‍ನ ಪತನದ ಕಥೆಯನ್ನು ಹೇಳಲು ಮೊದಲ ಚಿತ್ರಕ್ಕೆ ಪೂರ್ವಭಾಗ ಮತ್ತು ಉತ್ತರಭಾಗವನ್ನು ತಯಾರಿಸಲು ಬಯಸಿದ್ದ ಕೋಪಲಾಗೆ ಚಿತ್ರದ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡಲಾಗಿತ್ತು.

ಪ್ರಧಾನ ಛಾಯಾಗ್ರಹಣವು ಅಕ್ಟೋಬರ್ ೧೯೭೩ರಲ್ಲಿ ಆರಂಭವಾಗಿ ಜೂನ್ ೧೯೭೪ರಲ್ಲಿ ಮುಗಿಯಿತು. ದ ಗಾಡ್‍ಫ಼ಾದರ್ ಪಾರ್ಟ್ ಟೂ ಚಿತ್ರವು ಡಿಸೆಂಬರ್ ೨೦, ೧೯೭೪ರಂದು ಬಿಡುಗಡೆಗೊಂಡಿತು ಮತ್ತು ವಿಮರ್ಶಕರಿಂದ ಪರ ಹಾಗೂ ವಿರೋಧದ ವಿಮರ್ಶೆಗಳನ್ನು ಪಡೆಯಿತು. ಆದರೆ, ಇದರ ಖ್ಯಾತಿ ಕ್ಷಿಪ್ರವಾಗಿ ಸುಧಾರಿಸಿತು ಮತ್ತು ಇದು ಬೇಗನೇ ವಿಮರ್ಶಾತ್ಮಕ ಮರುಪರಿಶೀಲನೆಯ ವಸ್ತುವಾಯಿತು. $13 ಮಿಲಿಯನ್ ಬಂಡವಾಳದಲ್ಲಿ ನಿರ್ಮಾಣಗೊಂಡಿದ್ದ ಈ ಚಿತ್ರವು ವಿಶ್ವಾದ್ಯಂತ $88 ಮಿಲಿಯನ್‍ನಷ್ಟು ಹಣಗಳಿಸಿತು. ೪೭ನೇ ಅಕ್ಯಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಈ ಚಿತ್ರವು ಹನ್ನೊಂದು ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತ್ತು ಮತ್ತು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಗೆದ್ದ ಮೊದಲ ಉತ್ತರಭಾಗವಾಯಿತು. ಇದರ ಆರು ಆಸ್ಕರ್ ವಿಜಯಗಳಲ್ಲಿ ಕೋಪಲಾಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ಡಿ ನೀರೊಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ಕೋಪಲಾ ಹಾಗೂ ಪ್ಯೂಜ಼ೊರಿಗೆ ಅತ್ಯುತ್ತಮ ರೂಪಾಂತರಿತ ಚಿತ್ರಕಥೆ ಪ್ರಶಸ್ತಿ ಕೂಡ ಸೇರಿದ್ದವು. ಪಚೀನೊ ಬ್ಯಾಫ಼್ಟಾ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದರು ಮತ್ತು ಅಕ್ಯಾಡೆಮಿ ಅತ್ಯುತ್ತಮ ನಟ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿದ್ದರು. ದ ಗಾಡ್‍ಫ಼ಾದರ್ ಪಾರ್ಟ್ ಟೂ ಮತ್ತು ಇದರ ಮೊದಲ ಭಾಗ ಎರಡೂ ಬಹಳ ಪ್ರಭಾವಿ ಚಲನಚಿತ್ರಗಳಾಗಿ ಉಳಿದಿವೆ, ವಿಶೇಷವಾಗಿ ಸುಲಿಗೆಕೂಟ ಪ್ರಕಾರದಲ್ಲಿ, ಮತ್ತು ಮೊದಲ ಭಾಗವನ್ನು ಪುನರ್ಮೌಲ್ಯ ಮಾಡಲಾಗಿದೆ. ೧೯೯೭ರಲ್ಲಿ, ಅಮೇರಿಕನ್ ಚಲನಚಿತ್ರ ಸಂಸ್ಥೆಯು ಈ ಚಿತ್ರಕ್ಕೆ ಅಮೇರಿಕದ ಚಿತ್ರ ಇತಿಹಾಸಲ್ಲಿ ೩೨ನೇ ಶ್ರೇಷ್ಠ ಚಲನಚಿತ್ರದ ಸ್ಥಾನವನ್ನು ನೀಡಿತು.

ಕೆಲವರು ಇದು ದ ಗಾಡ್‍ಫ಼ಾದರ್ಗಿಂತ ಶ್ರೇಷ್ಠವಾಗಿದೆ ಎಂದು ಪರಿಗಣಿಸಿದ್ದಾರೆ.[] ೧೯೯೩ರಲ್ಲಿ ಇದನ್ನು ಕಾಂಗ್ರೆಸ್‍ನ ಗ್ರಂಥಾಲಯದ ಅಮೇರಿಕದ ರಾಷ್ಟ್ರೀಯ ಚಲನಚಿತ್ರ ನೋಂದಣಿ ಕಚೇರಿಯಲ್ಲಿ ಸಂರಕ್ಷಣೆಗಾಗಿ ಆಯ್ಕೆಮಾಡಲಾಯಿತು ಮತ್ತು ಸಾಂಸ್ಕೃತಿಕವಾಗಿ, ಐತಿಹಾಸಿಕವಾಗಿ, ಅಥವಾ ಕಲಾತ್ಮಕವಾಗಿ ಗಮನಾರ್ಹವಾಗಿದೆ ಎಂದು ಪರಿಗಣಿತವಾಯಿತು.[] ಚಿತ್ರತ್ರಯದಲ್ಲಿನ ಕೊನೆಯ ಚಿತ್ರವಾದ ದ ಗಾಡ್‍ಫ಼ಾದರ್ ಪಾರ್ಟ್ ಥ್ರೀ ಅನ್ನು ೧೯೯೦ರಲ್ಲಿ ಬಿಡುಗಡೆ ಮಾಡಲಾಯಿತು.

ಕಥಾವಸ್ತು

ಬದಲಾಯಿಸಿ
೧೯೦೧ರಲ್ಲಿ, ಅವನ ತಂದೆಯು ಸ್ಥಳೀಯ ಮಾಫ಼ಿಯಾ ಮುಖ್ಯಸ್ಥ ಡಾನ್ ಚೀಚಿಯೊನನ್ನು ಅವಮಾನಿಸಿದ ನಂತರ, ಒಂಬತ್ತು ವರ್ಷದ ವಿಟೊ ಅಂಡೊಲಿನಿಯ ಕುಟುಂಬವು ಕೊರ್ಲಿಯೊನಿ, ಸಿಸಿಲಿಯಲ್ಲಿ ಕೊಲೆಗೀಡಾಗುತ್ತದೆ. ವಿಟೊ ನ್ಯೂ ಯಾರ್ಕ್ ನಗರಕ್ಕೆ ತಪ್ಪಿಸಿಕೊಳ್ಳುತ್ತಾನೆ ಮತ್ತು ಎಲಿಸ್ ದ್ವೀಪದಲ್ಲಿ "ವಿಟೊ ಕೊರ್ಲಿಯೋನಿ" ಎಂದು ನೋಂದಾಯಿತನಾಗುತ್ತಾನೆ.

೧೯೫೮ರಲ್ಲಿ, ಟಾಹೊ ಸರೋವರದ ಬಳಿ ತನ್ನ ಮಗನ ಮೊದಲ ಕಮ್ಯೂನಿಯನ್ ಪಾರ್ಟಿಯ ವೇಳೆ, ತನ್ನ ಅಪರಾಧಿಕ ಕುಟುಂಬದ ಡಾನ್ ಎಂಬ ತನ್ನ ಪಾತ್ರದಲ್ಲಿ ಮೈಕಲ್ ಕೊರ್ಲಿಯೋನಿ ಅನೇಕ ಸಭೆಗಳನ್ನು ನಡೆಸುತ್ತಾನೆ. ತನ್ನ ಬ್ರೂಕ್ಲಿನ್ ಪ್ರಾಂತವನ್ನು ಮೈಕಲ್‍ನ ವ್ಯವಹಾರದ ಜೊತೆಗಾರ ಹೈಮನ್ ರಾತ್‍ಗಾಗಿ ಕೆಲಸ ಮಾಡುವ ರೊಸಾಟೊ ಸೋದರರ ವಿರುದ್ಧ ರಕ್ಷಿಸಿಕೊಳ್ಳುವುದಕ್ಕೆ ಸಹಾಯಮಾಡಲು ಮೈಕಲ್ ನಿರಾಕರಿಸಿದನು ಎಂದು ಕೊರ್ಲಿಯೋನಿಯ ಕ್ಯಾಪೊರೆಜೀಮ್ ಫ಼್ರ್ಯಾಂಕ್ ಪೆಂಟ್ಯಾಂಜೆಲಿ ನಿರಾಶನಾಗುತ್ತಾನೆ. ಆ ರಾತ್ರಿ, ತನ್ನ ಮನೆಯಲ್ಲಿ ಕೊಲೆ ಪ್ರಯತ್ನದಿಂದ ಪಾರಾದ ನಂತರ ಮೈಕಲ್ ನೆವಾಡಾವನ್ನು ತೊರೆಯುತ್ತಾನೆ.

೧೯೧೭ರಲ್ಲಿ, ವಿಟೊ ಕೊರ್ಲಿಯೋನಿ ತನ್ನ ಹೆಂಡತಿ ಕಾರ್ಮೆಲಾ ಮತ್ತು ಮಗ ಸನಿಯೊಂದಿಗೆ ನ್ಯೂ ಯಾರ್ಕ್ ನಲ್ಲಿ ವಾಸಿಸುತ್ತಿರುತ್ತಾನೆ. ಡಾನ್ ಫ಼ನೂಚಿ ತನ್ನ ಸೋದರಳಿಯನು ಅಲ್ಲಿ ಕೆಲಸ ಮಾಡಬೇಕೆಂದು ಒತ್ತಿಹೇಳಿದ ಕಾರಣದಿಂದ ತನ್ನ ಕೆಲಸವನ್ನು ಕಳೆದುಕೊಳ್ಳುತ್ತಾನೆ; ಕನ್ನಗಳವಿನಲ್ಲಿ ಅರಿಯದೆ ಭಾಗವಹಿಸಲು ಪೀಟರ್ ಕ್ಲೆಮೆಂಜ಼ಾ ವಿಟೊನನ್ನು ಆಹ್ವಾನಿಸುತ್ತಾನೆ.

ಕೊಲೆಯನ್ನು ರಾತ್ ಯೋಜಿಸಿದ್ದನು ಎಂದು ಮೈಕಲ್ ಶಂಕಿಸುತ್ತಾನೆ, ಆದರೆ ಮಯಾಮಿಯಲ್ಲಿ ಅವನನ್ನು ಭೇಟಿಯಾಗಿ ಅಜ್ಞಾನದ ಸೋಗುಹಾಕುತ್ತಾನೆ. ನ್ಯೂ ಯಾರ್ಕ್‌ನಲ್ಲಿ, ರೊಸಾಟೊ ಕುಟುಂಬದೊಂದಿಗೆ ಶಾಂತಿ ಮಾಡಿಕೊಳ್ಳುವ ಮೂಲಕ ಪೆಂಟ್ಯಾಂಜೆಲಿ ಮೈಕಲ್‍ನ ತೋರಿಕೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾನೆ, ಆದರೆ ಅವರು ಅವನನ್ನು ಸಾಯಿಸಲು ಪ್ರಯತ್ನಿಸುತ್ತಾರೆ. ರಾತ್, ಮೈಕಲ್ ಮತ್ತು ಅವನ ಹಲವು ಜತೆಗಾರರು ಫ಼ುಲ್ಜೆಂಚಿಯೊ ಬಟಿಸ್ಟಾನ ಸಹಕಾರಿ ಸರ್ಕಾರದ ಕೆಳಗೆ ತಮ್ಮ ಭವಿಷ್ಯದ ಕ್ಯೂಬನ್ ಸಾಧ್ಯತೆಗಳನ್ನು ಚರ್ಚಿಸಲು ಹವಾನಾಗೆ ಪ್ರಯಾಣಿಸುತ್ತಾರೆ. ನಡೆಯುತ್ತಿರುವ ಕ್ಯೂಬನ್ ಕ್ರಾಂತಿಯ ಕಾರ್ಯಸಾಧ್ಯತೆಯನ್ನು ಪುನಃ ಪರಿಶೀಲಿಸಿ ಮೈಕಲ್‍ಗೆ ಹಿಂಜರಿಕೆಯಾಗುತ್ತದೆ. ಹೊಸ ವರ್ಷದ ಮುನ್ನಾ ದಿನದಂದು, ಅವನು ರಾತ್ ಮತ್ತು ರಾತ್‍ನ ಬಲಗೈ ಬಂಟ ಜಾನಿ ಓಲಾನನ್ನು ಸಾಯಿಸಲು ಪ್ರಯತ್ನಿಸುತ್ತಾನೆ, ಆದರೆ ಮೈಕಲ್‍ನ ಅಂಗರಕ್ಷಕನು ಪತ್ತೆಯಾಗಿ ಪೋಲಿಸರ ಗುಂಡಿನಿಂದ ಸಾಯಿಸಲ್ಪಟ್ಟಾಗ ರಾತ್ ಬದುಕುಳಿಯುತ್ತಾನೆ. ಫ಼್ರೆಡೊ ತಾನು ಮತ್ತು ಓಲಾ ಎಂದೂ ಭೇಟಿಯಾಗಿಲ್ಲ ಎಂದು ಸಾಧಿಸಿ ನಂತರ ಅನುದ್ದಿಷ್ಟವಾಗಿ ತನಗೆ ಓಲಾ ಗೊತ್ತು ಎಂದು ಬಹಿರಂಗಪಡಿಸಿದಾಗ, ತನ್ನ ಸೋದರ ಫ಼್ರೆಡೊ ತನಗೆ ದ್ರೋಹ ಮಾಡಿದ್ದಾನೆಂದು ಮೈಕಲ್ ಕಂಡುಕೊಳ್ಳುತ್ತಾನೆ. ಬಂಡಾಯಗಾರರ ಮುಂದುವರಿಕೆಗಳ ಕಾರಣ ಬಟಿಸ್ಟಾ ಥಟ್ಟನೇ ರಾಜೀನಾಮೆ ನೀಡುತ್ತಾನೆ. ನಂತರದ ಅವ್ಯವಸ್ಥೆಯ ವೇಳೆ, ಮೈಕಲ್, ಫ಼್ರೆಡೊ ಮತ್ತು ರಾತ್ ಪ್ರತ್ಯೇಕವಾಗಿ ಅಮೇರಿಕಕ್ಕೆ ತಪ್ಪಿಸಿಕೊಂಡು ಹೋಗುತ್ತಾರೆ. ಮನೆಗೆ ವಾಪಸಾದ ಮೇಲೆ, ತನ್ನ ಹೆಂಡತಿ ಕೇಗೆ ಅಕಾಲಪ್ರಸವವಾಯಿತು ಎಂದು ಮೈಕಲ್‍ಗೆ ಗೊತ್ತಾಗುತ್ತದೆ.

೧೯೨೦ರ ವೇಳೆಗೆ, ವಿಟೊ ಮತ್ತು ಕಾರ್ಮೆಲಾಗೆ ಇನ್ನಿಬ್ಬರು ಪುತ್ರರು ಹುಟ್ಟುತ್ತಾರೆ, ಫ಼್ರೆಡೊ ಮತ್ತು ಮೈಕಲ್. ವಿಟೊನ ಅಪರಾಧಿಕ ನಡತೆಯು ಫ಼ನೂಚಿಯ ಗಮನವನ್ನು ಸೆಳೆದು, ಅವನು ವಿಟೊನನ್ನು ಬೆದರಿಸಿ ಹಣ ಕೇಳುತ್ತಾನೆ. ಅವನ ಜತೆಗಾರರಾದ ಕ್ಲೆಮೆಂಜ಼ಾ ಮತ್ತು ಸಾಲ್ವಟೋರೆ ಟೆಸಿಯೊ ಪೂರ್ಣವಾಗಿ ಹಣ ಕೊಟ್ಟು ತೊಂದರೆಯನ್ನು ತಪ್ಪಿಸಿಕೊಳ್ಳಲು ಬಯಸುತ್ತಾರೆ, ಆದರೆ ಅವನು ತಿರಸ್ಕರಿಸದ ಪ್ರಸ್ತಾಪವನ್ನು ಮಾಡಿ ಫ಼ನೂಚಿ ಸಣ್ಣ ಸಂದಾಯವನ್ನು ಒಪ್ಪುವಂತೆ ಮನವರಿಕೆ ಮಾಡಬಲ್ಲೆ ಎಂದು ವಿಟೊ ಒತ್ತಿಹೇಳುತ್ತಾನೆ. ನೆರೆಹೊರೆಯ ಒಂದು ಹಬ್ಬದ ಸಂದರ್ಭದಲ್ಲಿ, ಅವನು ಫ಼ನೂಚಿಯನ್ನು ಅವನ ಅಪಾರ್ಟ್‌ಮೆಂಟ್‍ಗೆ ಹಿಂಬಾಲಿಸಿ ಅವನಿಗೆ ಗುಂಡಿಕ್ಕಿ ಸಾಯಿಸುತ್ತಾನೆ.

ವಾಷಿಂಗ್ಟನ್ ಡಿ.ಸಿ.ಯಲ್ಲಿ, ಸಂಘಟಿತ ಅಪರಾಧದ ಮೇಲಿನ ಒಂದು ಸೆನೇಟ್ ಸಮಿತಿಯು ಕೊರ್ಲಿಯೋನಿ ಕುಟುಂಬವನ್ನು ವಿಚಾರಣೆ ಮಾಡುತ್ತಿರುತ್ತದೆ. ತನ್ನ ಪ್ರಾಣದ ಮೇಲಿನ ಹಿಂದಿನ ಪ್ರಯತ್ನದಿಂದ ಬದುಕುಳಿದ ಪೆಂಟ್ಯಾಂಜೆಲಿ ಮೈಕಲ್‍ನ ವಿರುದ್ಧ ಸಾಕ್ಷಿಹೇಳಲು ಒಪ್ಪಿಕೊಳ್ಳುತ್ತಾನೆ. ಮೈಕಲ್ ತನ್ನನ್ನು ವಂಚಿಸಿದ್ದಾನೆಂದು ಅವನು ನಂಬಿರುತ್ತಾನೆ, ಮತ್ತು ಅವನನ್ನು ಸಾಕ್ಷಿ ರಕ್ಷಣೆಯಲ್ಲಿ ಇರಿಸಲಾಗಿರುತ್ತದೆ.

ತನ್ನ ಸಮುದಾಯದಲ್ಲಿ ಗೌರವಾನ್ವಿತ ವ್ಯಕ್ತಿಯಾದ ವಿಟೊನನ್ನು ಒಬ್ಬ ವಿಧವೆಯು ತನ್ನ ಹೊರಹಾಕುವಿಕೆಯ ಸಂಬಂಧ ಸಹಾಯಕ್ಕಾಗಿ ಸಮೀಪಿಸುತ್ತಾಳೆ. ವಿಟೊನೊಂದಿಗೆ ಅಸಫಲ ಸಂಧಾನದ ನಂತರ, ವಿಧವೆಯ ಭೂಮಾಲೀಕನು ಜನರೊಂದಿಗೆ ವಿಚಾರಿಸಿ, ವಿಟೊನ ಪ್ರಸಿದ್ಧಿಯ ಬಗ್ಗೆ ಅರಿತುಕೊಂಡು, ವಿಧವೆಯು ಬಹಳ ಅನುಕೂಲಕರವಾದ ಶರತ್ತುಗಳಡಿ ಅಲ್ಲಿರಲು ತರಾತುರಿಯಿಂದ ಒಪ್ಪಿಕೊಳ್ಳುತ್ತಾನೆ. ವಿಟೊ ಮತ್ತು ಅವನ ಜತೆಗಾರರು ತಮ್ಮ ವ್ಯವಹಾರವಾದ "ಜೆಂಕೊ ಪ್ಯೂರಾ ಆಲಿವ್ ಎಣ್ಣೆ ಕಂಪನಿ"ಯಲ್ಲಿ ಮತ್ತಷ್ಟು ಹೆಚ್ಚು ಸಫಲರಾಗುತ್ತಿರುತ್ತಾರೆ.

ನೆವಾಡಾಗೆ ಮರಳಿದ ಮೇಲೆ, ಫ಼್ರೆಡೊ ಏಕಾಂತದಲ್ಲಿ ತನ್ನನ್ನು ಮೈಕಲ್‍ಗೆ ವಿವರಿಸಿಕೊಳ್ಳುತ್ತಾನೆ; ನಿರ್ಲಕ್ಷಿತವೆನಿಸಿ ಸಿಟ್ಟಿನ ಅನುಭವವಾಗಿ, ಪ್ರತಿಯಾಗಿ ಏನಾದರೂ ಸಿಗುವ ನಿರೀಕ್ಷೆಯಲ್ಲಿ ತಾನು ರಾತ್‍ಗೆ ಸಹಾಯ ಮಾಡಿದ್ದೆ—ಆದರೆ ಮೈಕಲ್‍ನ ಪ್ರಾಣದ ಮೇಲಿನ ಪಿತೂರಿಯ ಬಗ್ಗೆ ಗೊತ್ತಿರಲಿಲ್ಲ ಎಂದು ವಾದಿಸುತ್ತಾನೆ. ಸೆನೇಟ್‍ನ ವಕೀಲ ಕ್ವೆಸ್ಟಾಟ್ ರಾತ್‍ನಿಗಾಗಿ ಕೆಲಸ ಮಾಡುತ್ತಿದ್ದಾನೆಂದೂ ಮೈಕಲ್‍ಗೆ ತಿಳಿಸುತ್ತಾನೆ. ಮೈಕಲ್ ಪ್ರತಿಕ್ರಿಯಿಸುತ್ತಾ ಫ಼್ರೆಡೊನಿಂದ ಸಂಬಂಧ ಕಡಿದುಕೊಳ್ಳುತ್ತಾನೆ, ಮತ್ತು ತಮ್ಮ ತಾಯಿಯು ಬದುಕಿರುವಾಗ ಫ಼್ರೆಡೊಗೆ ಏನೂ ಆಗಬಾರದೆಂದು ತನ್ನ ಕ್ಯಾಪೊಗೆ ಹೇಳುತ್ತಾನೆ. ಭಾರಿ ರಕ್ಷಣೆಯಲ್ಲಿರುವ ಪೆಂಟ್ಯಾಜೆಲಿಯನ್ನು ತಲುಪಲು ಮೈಕಲ್‍ಗೆ ಆಗುವುದಿಲ್ಲ, ಹಾಗಾಗಿ ಸಿಸಿಲಿಯಿಂದ ಪೆಂಟ್ಯಾಂಜೆಲಿಯ ಸೋದರನನ್ನು ಕರಿಸುತ್ತಾನೆ, ಪರಿಣಾಮವಾಗಿ ಪೆಂಟ್ಯಾಂಜೆಲಿ ತನ್ನ ಹಿಂದಿನ ಹೇಳಿಕೆಯನ್ನು ತ್ಯಜಿಸುತ್ತಾನೆ; ವಿಚಾರಣೆಯು ಕೋಲಾಹಲದಲ್ಲಿ ರದ್ದಾಗುತ್ತದೆ.

ತಾನು ವಾಸ್ತವವಾಗಿ ಗರ್ಭಪಾತ ಮಾಡಿಸಿಕೊಂಡೆ, ಅಕಾಲ ಪ್ರಸವವಲ್ಲ ಎಂದು ಕೇ ಮೈಕಲ್‍ಗೆ ಬಹಿರಂಗಪಡಿಸುತ್ತಾಳೆ, ಮತ್ತು ತಮ್ಮ ಮಕ್ಕಳನ್ನು ಮೈಕಲ್‍ನ ಅಪರಾಧದ ಜೀವನದಿಂದ ತೆಗೆದುಹಾಕುವ ಉದ್ದೇಶ ಹೊಂದಿದ್ದೇನೆ ಎಂದು ಹೇಳುತ್ತಾಳೆ. ಆಕ್ರೋಶಗೊಂಡು, ಮೈಕಲ್ ಕೇಗೆ ಹೊಡೆಯುತ್ತಾನೆ, ಅವಳನ್ನು ಕುಟುಂಬದಿಂದ ಹೊರಗೆ ಹಾಕುತ್ತಾನೆ, ಮತ್ತು ಮಕ್ಕಳನ್ನು ವಶಕ್ಕೆ ತೆಗೆದುಕೊಳ್ಳುತ್ತಾನೆ.

೧೯೨೩ರಲ್ಲಿ, ವಿಟೊ ತನ್ನ ಕುಟುಂಬದೊಂದಿಗೆ, ವಲಸೆ ಹೋದಾಗಿನಿಂದ ಮೊದಲ ಬಾರಿ ಸಿಸಿಲಿಗೆ ಭೇಟಿ ನೀಡುತ್ತಾನೆ. ಅವನು ಮತ್ತು ಅವನ ವ್ಯವಹಾರ ಜೊತೆಗಾರ ಟೋಮಸೀನೊಗೆ ಡಾನ್ ಚೀಚಿಯೊನ ಪೌಳಿಯೊಳಗೆ ಹೋಗಲು ಅನುಮತಿ ಸಿಗುತ್ತದೆ, ತೋರಿಕೆಗೆ ತಮ್ಮ ಆಲಿವ್ ಎಣ್ಣೆಯ ಉದ್ಯಮಕ್ಕೆ ಚೀಚಿಯೊನ ಆಶೀರ್ವಾದವನ್ನು ಕೇಳಲು. ತನ್ನ ಹಿಂದಿನ ಗುರುತನ್ನು ಬಹಿರಂಗಪಡಿಸಿ ವಿಟೊ ಚೀಚಿಯೊನನ್ನು ಸಾಯಿಸಿ ತನ್ನ ಬಾಲ್ಯದ ಸೇಡನ್ನು ತೀರಿಸಿಕೊಳ್ಳುತ್ತಾನೆ, ಆದರೆ ಅವರು ತಪ್ಪಿಸಿಕೊಳ್ಳುವಾಗ, ಟೋಮಸೀನೊನ ಕಾಲಿಗೆ ಗುಂಡು ಬಡಿದು ಅವನು ಶಾಶ್ವತ ಅಂಗವಿಕಲತೆಯನ್ನು ಅನುಭವಿಸುತ್ತಾನೆ.

ಕಾರ್ಮೆಲಾ ಕೊರ್ಲಿಯೋನಿ ಸಾಯುತ್ತಾಳೆ. ಅಂತ್ಯಕ್ರಿಯೆಯಲ್ಲಿ, ಮೈಕಲ್ ಫ಼್ರೆಡೊನನ್ನು ಕ್ಷಮಿಸಿದಂತೆ ಕಾಣುತ್ತದೆ.

ರಾತ್‍ಗೆ ಆಶ್ರಯವನ್ನು ನಿರಾಕರಿಸಲಾಗುತ್ತದೆ ಮತ್ತು ಇಸ್ರೇಲ್‍ಗೆ ಪ್ರವೇಶಿಸುವ ಅವಕಾಶ ಸಿಗುವುದಿಲ್ಲ. ಅವನು ಒತ್ತಾಯಪೂರ್ವಕವಾಗಿ ಅಮೇರಿಕಕ್ಕೆ ಹಿಂತಿರುಗಬೇಕಾಗುತ್ತದೆ. ಕೊನ್ಸಿಲಿಯರಿ ಟಾಮ್ ಹೇಗನ್‍ನ ಅಸಮ್ಮತಿಯ ನಡುವೆಯೂ, ಆಗಮಿಸಿದ ತಕ್ಷಣ ರಾತ್‍ನನ್ನು ಅಡ್ಡಗಟ್ಟಿ ಗುಂಡುಹೊಡೆದು ಸಾಯಿಸಲು ಮೈಕಲ್ ಕ್ಯಾಪೊರೆಜೈಮ್ ರೊಕೊ ಲ್ಯಾಂಪೋನಿಯನ್ನು ಕಳಿಸುತ್ತಾನೆ. ತನ್ನ ಕೆಲಸವನ್ನು ಮುಗಿಸಿದ ಮೇಲೆ ರಾಕೊನನ್ನು ಸರ್ಕಾರಿ ಗೂಢಚಾರಿಗಳು ಗುಂಡಿಕ್ಕಿ ಸಾಯಿಸುತ್ತಾರೆ. ಸಾಕ್ಷಿ ರಕ್ಷಣಾ ಆವರಣದಲ್ಲಿ, ರೋಮನ್ ಸಾಮ್ರಾಟರ ವಿರುದ್ಧದ ವಿಫಲ ಪಿತೂರಿಗಾರರು ಹಲವುವೇಳೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ಎಂದು ಹೇಗನ್ ಪೆಂಟ್ಯಾಜೆಲಿಗೆ ನೆನಪಿಸುತ್ತಾನೆ ಮತ್ತು ಅವನ ಕುಟುಂಬವನ್ನು ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡುತ್ತಾನೆ. ಆಮೇಲೆ ಪೆಂಟ್ಯಾಂಜೆಲಿ ತನ್ನ ಸ್ನಾನದ ತೊಟ್ಟಿಯಲ್ಲಿ ತನ್ನ ಮಣಿಕಟ್ಟನ್ನು ಸಿಗಿದುಕೊಳ್ಳುತ್ತಾನೆ. ಮೈಕಲ್‍ನ ಆದೇಶಗಳನ್ನು ನಿರ್ವಹಿಸುತ್ತಾ ಆಲ್ ನೇರಿ ಫ಼್ರೆಡೊನನ್ನು ಸರೋವರದಲ್ಲಿ ಹತ್ಯೆ ಮಾಡುತ್ತಾನೆ.

ಡಿಸೆಂಬರ್ ೭, ೧೯೪೧ರಂದು, ವಿಟೊಗೆ ಅವನ ಹುಟ್ಟಿದ ಹಬ್ಬದಂದು ಚಕಿತಗೊಳಿಸಲು ಕೊರ್ಲಿಯೋನಿ ಕುಟುಂಬವು ಊಟದ ಕೋಣೆಯಲ್ಲಿ ಸೇರುತ್ತದೆ. ಪರ್ಲ್ ಹಾರ್ಬರ್ ಮೇಲಿನ ದಾಳಿಗೆ ಪ್ರತಿಕ್ರಿಯೆಯಾಗಿ, ತಾನು ಕಾಲೇಜು ಬಿಟ್ಟು ಅಮೇರಿಕದ ಮರೀನ್ ಕೋರ್‌ಗೆ ದಾಖಲಾಗಿದ್ದೇನೆ ಎಂದು ಮೈಕಲ್ ಘೋಷಿಸುತ್ತಾನೆ, ಪ್ರತಿಯಾಗಿ ಸನಿ ಸಿಟ್ಟಾಗುತ್ತಾನೆ, ಟಾಮ್‍ಗೆ ನಂಬಲಾಗುವುದಿಲ್ಲ ಮತ್ತು ಫ಼್ರೆಡೊ ಒಬ್ಬನೇ ಆಧಾರವಾಗಿರುವ ಸೋದರನಾಗಿರುತ್ತಾನೆ. ಕೋಣೆಯ ಬಳಿ ವಿಟೊನ ಧ್ವನಿ ಕೇಳುತ್ತದೆ ಮತ್ತು ಮೈಕಲ್‍ನ ಹೊರತಾಗಿ ಎಲ್ಲರೂ ಅವನನ್ನು ಸ್ವಾಗತಿಸಲು ಕೋಣೆಯನ್ನು ಬಿಡುತ್ತಾರೆ.

ಮೈಕಲ್ ಒಬ್ಬನೇ ಕೆರೆಯ ಪಕ್ಕದಲ್ಲಿ ಕುಟುಂಬ ಆವರಣದಲ್ಲಿ ಕೂಡುತ್ತಾನೆ.

ಪಾತ್ರವರ್ಗ

ಬದಲಾಯಿಸಿ

೧೯೫೮ರ ದೃಶ್ಯಭಾಗಗಳು

  • ಮೈಕಲ್ ಕೊರ್ಲಿಯೋನಿ ಆಗಿ ಆಲ್ ಪಚೀನೊ
  • ಟಾಮ್ ಹೇಗನ್ ಆಗಿ ರಾಬರ್ಟ್ ಡುವಾಲ್
  • ಕೇ ಆ್ಯಡಮ್ಸ್-ಕೊರ್ಲಿಯೋನಿ ಆಗಿ ಡಯಾನ್ ಕೀಟನ್
  • ಫ಼್ರೆಡೊ ಕೊರ್ಲಿಯೋನಿ ಆಗಿ ಜಾನ್ ಕಜ಼ಾಲೆ
  • ಕಾನಿ ಕೊರ್ಲಿಯೋನಿ ಆಗಿ ಟಾಲಿಯಾ ಶಾಯರ್
  • ಹೈಮನ್ ರಾತ್ ಆಗಿ ಲೀ ಸ್ಟ್ರ್ಯಾಸ್‍ಬರ್ಗ್
  • ಫ಼್ರ್ಯಾಂಕ್ ಪೆಂಟ್ಯಾಂಜೆಲಿ ಆಗಿ ಮೈಕಲ್ ಗಾಟ್ಸೊ
  • ಕಾರ್ಮೆಲಾ ಕೊರ್ಲಿಯೋನಿ ಆಗಿ ಮೊರ್ಗ್ಯಾನಾ ಕಿಂಗ್
  • ಸೆನೇಟರ್ ಪ್ಯಾಟ್ ಗೀಯರಿ ಆಗಿ ಜಿ. ಡಿ. ಸ್ಪ್ರ್ಯಾಡ್ಲಿನ್
  • ಆಲ್ ನೇರಿ ಆಗಿ ರಿಚರ್ಡ್ ಬ್ರೈಟ್
  • ರಾಕೊ ಲ್ಯಾಂಪೋನಿ ಆಗಿ ಟಾಮ್ ರೊಸ್‍ಕ್ವಿ
  • ಡಿಯಾನಾ ಕೊರ್ಲಿಯೋನಿ ಆಗಿ ಮಾರಿಯಾನಾ ಹಿಲ್
  • ಮರ್ಲ್ ಜಾನ್ಸನ್ ಆಗಿ ಟ್ರಾಯ್ ಡಾನಹ್ಯೂ
  • ವಿಲಿ ಚೀಚಿ ಆಗಿ ಜೋ ಸ್ಪಿನೆಲ್
  • ಜಾನಿ ಓಲಾ ಆಗಿ ಡಾಮಿನಿಕ್ ಚಿಯಾನೀಸ್
  • ಜೆಂಕೊ ಆಬ್ಬಂಡಾಂಡೊ ಆಗಿ ಫ಼್ರ್ಯಾಂಕೊ ಕೊರ್ಸಾರೊ
  • ಮೈಕಲ್‍ನ ಅಂಗರಕ್ಷಕನಾಗಿ ಅಮೇರಿಗೊ ಟಾಟ್
  • ಯೊಲಾಂಡಾ ಆಗಿ ಇವೊನೆ ಕೊಲ್
  • ಸ್ಯಾಮ್ ರಾತ್ ಆಗಿ ಜೂಲಿಯನ್ ವೊಲೊಶಿನ್
  • ಮಿಸಸ್ ರಾತ್ ಆಗಿ ಫ಼ೇ ಸ್ಪೇನ್
  • ಕಾರ್ಮೀನ್ ರೊಸಾಟೊ ಆಗಿ ಕಾರ್ಮೀನ್ ಕಾರೀಡಿ
  • ಟೋನಿ ರೊಸಾಟೊ ಆಗಿ ಡ್ಯಾನಿ ಆಯೆಲ್ಲೊ
  • ವಿಂಚೆಂಜ಼ೊ ಪೆಂಟ್ಯಾಂಜೆಲಿ ಆಗಿ ಸಾಲ್ವಟೋರ್ ಪೋ
  • ಎಫ಼್‍ಬಿಐ ಗೂಢಚಾರಿ ಆಗಿ ಹ್ಯಾರಿ ಡೀನ್ ಸ್ಟ್ಯಾಂಟನ್

ಮರುಕಳಿಕೆಯ ದೃಶ್ಯಭಾಗಗಳು

  • ವಿಟೊ ಕೊರ್ಲಿಯೋನಿ ಆಗಿ ರಾಬರ್ಟ್ ಡಿ ನಿರೋ
    • ಯುವ ವಿಟೊ ಕೊರ್ಲಿಯೋನಿ ಆಗಿ ಒರೇಸ್ಟೆ ಬಾಲ್ಡೀನಿ
  • ಯುವ ಹೈಮನ್ ರಾತ್ ಆಗಿ ಜಾನ್ ಮೆಗ್ನಾ
  • ಯುವ ಕಾರ್ಮೆಲಾ ಕೊರ್ಲಿಯೋನಿ ಆಗಿ ಫ಼್ರಾಂಚೆಸ್ಕಾ ಡೆ ಸಾಪಿಯೊ
  • ಡಾನ್ ಫ಼ನೂಚಿ ಆಗಿ ಗ್ಯಾಸ್ಟೋನೆ ಮೊಸ್ಕಿನ್
  • ಯುವ ಜೆಂಕೊ ಅಬ್ಬಂಡಾಂಡೊ ಆಗಿ ಫ಼್ರ್ಯಾಂಕ್ ಸಿವೆರೊ
  • ಯುವ ಪೀಟರ್ ಕ್ಲೆಮೆಂಜ಼ಾ ಆಗಿ ಬ್ರೂನೊ ಕರ್ಬಿ
  • ಯುವ ಸಾಲ್ವಟೋರೆ ಟೆಸಿಯೊ ಆಗಿ ಜಾನ್ ಏಪ್ರಿಯಾ
  • ಸಂಯೋಜಕನಾಗಿ ಎಟ್ಸಿಯೊ ಫ಼್ಲಜೆಲ್ಲೊ
  • ಕಾರ್ಲಾ ಆಗಿ ಕ್ಯಾಥ್ಲೀನ್ ಬೆಲರ್
  • ವಿಟೊ ಕೊರ್ಲಿಯೋನಿಯ ತಾಯಿಯಾಗಿ ಮಾರಿಯಾ ಕಾರ್ಟಾ
  • ಡಾನ್ ಫ಼್ರಾಂಚೆಸ್ಕೊ ಚೀಚಿಯೊ ಆಗಿ ಜೂಸೆಪ್ಪೆ ಸಿಲ್ಲಾಟೊ
  • ಯುವ ಸ್ಯಾಂಟೀನೊ ಕೊರ್ಲಿಯೋನಿ ಆಗಿ ರೋಮನ್ ಕೋಪಲಾ
  • ಸಿನ್ಯೋರ್ ರೊಬೆರ್ತೊ ಆಗಿ ಲಿಯೊಪೊಲ್ಡೊ ಟ್ರಿಯೆಸ್ಟೆ
  • ವಿಟೊನ ಚಿಕ್ಕಪ್ಪನಾಗಿ ಲ್ಯಾರಿ ಗಾರ್ಡೀನೊ

ತಯಾರಿಕೆ

ಬದಲಾಯಿಸಿ

ಬೆಳವಣಿಗೆ

ಬದಲಾಯಿಸಿ

ಈ ಚಲನಚಿತ್ರದ ಮೂಲ ಬಂಡವಾಳವು $6 ಮಿಲಿಯನ್ ಆಗಿತ್ತು ಆದರೆ ವೆಚ್ಚಗಳು $11 ಮಿಲಿಯನ್‍ಗಿಂತ ಹೆಚ್ಚಾದವು, ಮತ್ತು ವೆರೈಟಿಯ ವಿಮರ್ಶೆಯು ಇದು $15 ಮಿಲಿಯನ್‍ಗಿಂತ ಹೆಚ್ಚಾಗಿತ್ತು ಎಂದು ಸಾಧಿಸಿತು.

ಪಾತ್ರ ನಿರ್ಧಾರಣ

ಬದಲಾಯಿಸಿ

ಹುಟ್ಟುಹಬ್ಬದ ಹಿನ್ನೋಟ ನಿರೂಪಣಾ ಅನುಕ್ರಮದಲ್ಲಿನ ಸನಿಯ ಪಾತ್ರವನ್ನು ಪುನರಾವರ್ತಿಸಲು ಜೇಮ್ಸ್ ಕಾನ್ ಸಮ್ಮತಿಸಿದರು, ಮತ್ತು ಆ ಒಂದೇ ದೃಶ್ಯಕ್ಕೆ ಮೊದಲ ಚಿತ್ರಕ್ಕಾಗಿ ಪಡೆದಷ್ಟೇ ಸಂಭಾವನೆಯನ್ನು ನೀಡಬೇಕೆಂಬ ಬೇಡಿಕೆ ಇಟ್ಟರು.

ಮೊದಲ ಚಿತ್ರದಲ್ಲಿನ ಹಲವು ನಟರು ಉತ್ತರಭಾಗಕ್ಕೆ ಮರಳಲಿಲ್ಲ. ಮರ್ಲಾನ್ ಬ್ರಾಂಡೊ ಆರಂಭದಲ್ಲಿ ಒಪ್ಪಿದರೂ, ಪ್ಯಾರಮೌಂಟ್ ತಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿತೆಂದು ಅನಿಸಿ ಒಂದೇ ದಿನದ ಚಿತ್ರೀಕರಣಕ್ಕಾಗಿ ಬರಲಿಲ್ಲ. ಮೊದಲ ಚಿತ್ರದಲ್ಲಿ ಪೀಟರ್ ಕ್ಲೆಮೆಂ‍ಜ಼ಾನ ಪಾತ್ರವನ್ನು ನಿರ್ವಹಿಸಿದ್ದ ರಿಚರ್ಡ್ ಕಾಸ್ಟೆಯಾನೊ ಕೂಡ ಬರಲು ನಿರಾಕರಿಸಿದರು. ಮೂಲತಃ ಮುಂದಿನ ದಿನದ ಕ್ಲೆಮೆಂಜ಼ಾರಿಗೆ ಉದ್ದೇಶಿತವಾಗಿದ್ದ ಕಥೆಯಲ್ಲಿನ ಭಾಗವನ್ನು ಆಮೇಲೆ, ಮೈಕಲ್ ವಿ. ಗಾಟ್ಸೊ ನಿರ್ವಹಿಸಿದ ಫ಼್ರ್ಯಾಂಕ್ ಪೆಂಟ್ಯಾಂಜೆಲಿಯ ಪಾತ್ರವು ತುಂಬಿತು.[]

ಚಿತ್ರೀಕರಣ

ಬದಲಾಯಿಸಿ

ದ ಗಾಡ್‍ಫ಼ಾದರ್ ಪಾರ್ಟ್ ಟೂವನ್ನು ಅಕ್ಟೋಬರ್ ೧, ೧೯೭೩ ಹಾಗೂ ಜೂನ್ ೧೯, ೧೯೭೪ರ ನಡುವೆ ಚಿತ್ರೀಕರಿಸಲಾಯಿತು. ಕ್ಯೂಬಾದಲ್ಲಿ ನಡೆದ ದೃಶ್ಯಗಳನ್ನು ಡೊಮಿನಿಕ ಗಣರಾಜ್ಯದಲ್ಲಿ ಚಿತ್ರೀಕರಿಸಲಾಗಿತ್ತು.

ಮೊದಲ ಚಿತ್ರದಿಂದ ಭಿನ್ನವಾಗಿ, ಕೋಪಲಾರಿಗೆ ಚಿತ್ರ ತಯಾರಿಕೆ ಮೇಲೆ ಬಹುತೇಕ ಸಂಪೂರ್ಣ ನಿಯಂತ್ರಣವನ್ನು ನೀಡಲಾಗಿತ್ತು. ಇದರಿಂದಾಗಿ, ಬಹು ಸ್ಥಳಗಳು ಮತ್ತು ಒಂದೇ ಚಲನಚಿತ್ರದೊಳಗೆ ಎರಡು ಕಥೆಗಳು ಸಮಾನಾಂತರವಾಗಿ ನಡೆದಿರುವುದರ ಹೊರತಾಗಿಯೂ ಚಿತ್ರೀಕರಣವು ಬಹಳ ಸರಾಗವಾಗಿ ನಡೆಯಿತು.

ಚಿತ್ರೀಕರಣ ಆರಂಭವಾಗುವ ಮೊದಲು ಕಥೆಯನ್ನು ಪಚೀನೊ ಇಷ್ಟಪಟ್ಟಿರಲಿಲ್ಲ ಮತ್ತು ಹಾಗಾಗಿ ಚಿತ್ರವನ್ನು ನಿರಾಕರಿಸಿದ್ದರು. ಒಂದು ಇಡೀ ರಾತ್ರಿ ಕಥೆಯನ್ನು ಮತ್ತೆ ಬರೆಯುವುದಕ್ಕೆ ಕಳೆದು ಕೋಪಲಾ ಆ ಕಥೆಯನ್ನು ಪಚೀನೊರಿಗೆ ಪರಿಶೀಲನೆಗಾಗಿ ಕಳಿಸಿದರು. ಪಚೀನೊ ಅದಕ್ಕೆ ಒಪ್ಪಿದ ಮೇಲೆ ತಯಾರಿಕೆ ಮುಂದುವರಿಯಿತು.

ಈ ಚಿತ್ರದ ಯಶಸ್ಸು ಸಂಖ್ಯಾ ನಿರ್ದೇಶಿತ ಉತ್ತರಭಾಗಗಳ ಸಾಮಾನ್ಯ ಅಭ್ಯಾಸವನ್ನು ಆರಂಭಿಸಿತು.

ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ

ಬದಲಾಯಿಸಿ

ದ ಗಾಡ್‍ಫ಼ಾದರ್ ಪಾರ್ಟ್ ಟೂಗೆ ಸಿಕ್ಕ ಆರಂಭಿಕ ವಿಮರ್ಶಾತ್ಮಕ ಪ್ರತಿಕ್ರಿಯೆಯು ಭಿನ್ನವಾಗಿತ್ತು,[] ಮತ್ತು ಕೆಲವರು ಈ ತಯಾರಿಕೆಯನ್ನು ಕಡೆಗಣಿಸಿದರೆ ಇತರರು ಇದು ಮೊದಲ ಚಿತ್ರಕ್ಕಿಂತ ಶ್ರೇಷ್ಠವಾಗಿದೆಯೆಂದು ಘೋಷಿಸಿದರು.[][೧೦] ಇದರ ಛಾಯಾಗ್ರಹಣ ಮತ್ತು ಅಭಿನಯವನ್ನು ತಕ್ಷಣ ಮೆಚ್ಚಲಾಯಿತಾದರೂ, ಅನೇಕರು ಇದನ್ನು ಅತಿಯಾಗಿ ನಿಧಾನ ಗತಿಯುಳ್ಳದ್ದು ಮತ್ತು ಸಂಕೀರ್ಣವಾದದ್ದು ಎಂದು ಟೀಕಿಸಿದರು.

ಈ ಚಲನಚಿತ್ರವು ಬೇಗನೇ ವಿಮರ್ಶಾತ್ಮಕ ಮರುಮೌಲ್ಯಮಾಪನದ ವಿಷಯವಾಯಿತು.[೧೧] ಪ್ರತ್ಯೇಕವಾಗಿ ಪರಿಗಣಿಸಿದರೂ ಅಥವಾ ಅದರ ಪೂರ್ವಭಾಗದೊಂದಿಗೆ ಒಂದು ತಯಾರಿಕೆಯಾಗಿ ಪರಿಗಣಿಸಿದರೂ, ಈಗ ದ ಗಾಡ್‍ಫ಼ಾದರ್ ಪಾರ್ಟ್ ಟೂವನ್ನು ವಿಶ್ವದ ಅತ್ಯಂತ ಶ್ರೇಷ್ಠ ಚಲನಚಿತ್ರಗಳಲ್ಲಿ ಒಂದು ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಅನೇಕ ವಿಮರ್ಶಕರು ಮೂಲ ಚಿತ್ರದೊಂದಿಗೆ ಇದನ್ನು ಸಕಾರಾತ್ಮಕವಾಗಿ ಹೋಲಿಸುತ್ತಾರೆ – ಆದರೆ, "ಶ್ರೇಷ್ಠ" ಚಲನಚಿತ್ರಗಳ ಪಟ್ಟಿಗಳಲ್ಲಿ ಇದು ಅಪರೂಪವಾಗಿ ಹೆಚ್ಚಿನ ಸ್ಥಾನವನ್ನು ಪಡೆಯುತ್ತದೆ.

ದ ಗಾಡ್‍ಫ಼ಾದರ್ ಪಾರ್ಟ್ ಟೂನಲ್ಲಿನ ಪಚೀನೊರ ನಟನೆಯು ಅವರ ಅತ್ಯಂತ ಶ್ರೇಷ್ಠ ನಟನಾ ಕಾರ್ಯವೆಂದು ಅನೇಕರು ನಂಬುತ್ತಾರೆ, ಮತ್ತು ಆ ವರ್ಷದ ಅಕ್ಯಾಡೆಮಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಬೇರೆಯವರಿಗೆ ಕೊಟ್ಟಿದ್ದಕ್ಕೆ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್‍ನ್ನು ಟೀಕಿಸಲಾಯಿತು. ಈಗ ಅದನ್ನು ಚಿತ್ರ ಇತಿಹಾಸದಲ್ಲಿನ ಅತ್ಯಂತ ಶ್ರೇಷ್ಠ ಅಭಿನಯಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

ಬಾಕ್ಸ್ ಆಫ಼ಿಸ್

ಬದಲಾಯಿಸಿ

ದ ಗಾಡ್‍ಫ಼ಾದರ್ ಪಾರ್ಟ್ ಟೂ ವಾಣಿಜ್ಯಿಕವಾಗಿ ಮೂಲ ಚಲನಚಿತ್ರವನ್ನು ಮೀರಿಸಲಿಲ್ಲ. ಅಮೇರಿಕ ಮತ್ತು ಕ್ಯಾನಡಾದಲ್ಲಿ ಇದು $47.5 ಮಿಲಿಯನ್‍ನಷ್ಟು ಹಣಗಳಿಸಿತು. ಈ ಚಲನಚಿತ್ರವು ವಿಶ್ವಾದ್ಯಂತ $88 ಮಿಲಿಯನ್‍ನಷ್ಟು ಹಣಗಳಿಸಿತು.

ದೂರದರ್ಶನಕ್ಕಾಗಿ ಬಿಡುಗಡೆಗಳು ಮತ್ತು ವೀಡಿಯೊ

ಬದಲಾಯಿಸಿ

೧೯೭೫ರ ಬಿಡುಗಡೆಯಲ್ಲಿ ಕೇವಲ ಅಮೇರಿಕದ ದೂರದರ್ಶನಕ್ಕಾಗಿ ಕೋಪಲಾ ದ ಗಾಡ್‍ಫ಼ಾದರ್ ಸಾಗಾವನ್ನು ಸೃಷ್ಟಿಸಿದರು. ಇದು ದ ಗಾಡ್‍ಫ಼ಾದರ್ ಮತ್ತು ದ ಗಾಡ್‍ಫ಼ಾದರ್ ಪಾರ್ಟ್ ಟೂಗಳನ್ನು ಜತೆಗೂಡಿಸಿತ್ತು. ಇದು ಹಿಂಸಾತ್ಮಕ, ಕಾಮಪ್ರಚೋದಕ ಹಾಗೂ ಅಶ್ಲೀಲ ವಸ್ತುವನ್ನು ಕಡಿಮೆ ಆಕ್ಷೇಪಣಕಾರಿಯಾಗಿಸಿತು. ಎನ್‍ಬಿಸಿ ಯಲ್ಲಿ ನವೆಂಬರ್ ೧೮, ೧೯೭೭ರಲ್ಲಿ ಪ್ರಥಮ ಪ್ರದರ್ಶನ ಕಂಡಿತು.

ದ ಗಾಡ್‍ಫ಼ಾದರ್ ಡಿವಿಡಿ ಕಲೆಕ್ಷನ್ ಅನ್ನು ಅಕ್ಟೋಬರ್ ೯, ೨೦೦೧ ರಂದು ಸಂಗ್ರಹದ ರೂಪದಲ್ಲಿ ಬಿಡುಗಡೆ ಮಾಡಲಾಯಿತು. ಇದು ಎಲ್ಲ ಮೂರು ಚಲನಚಿತ್ರಗಳನ್ನು ಹೊಂದಿತ್ತು.

ಮೂಲರೂಪಕ್ಕೆ ತರುವಿಕೆ

ಬದಲಾಯಿಸಿ

ಮೊದಲ ಎರಡು ಚಲನಚಿತ್ರಗಳನ್ನು ಎಚ್ಚರಿಕೆಯಿಂದ ಮೂಲರೂಪಕ್ಕೆ ತಂದ ನಂತರ, ದ ಗಾಡ್‍ಫ಼ಾದರ್ ಚಲನಚಿತ್ರಗಳನ್ನು ದ ಗಾಡ್‍ಫ಼ಾದರ್: ದ ಕೋಪಲಾ ರೆಸ್ಟರೇಷನ್ ಎಂಬ ಶೀರ್ಷಿಕೆಯಡಿ ಡಿವಿಡಿ ಹಾಗೂ ಬ್ಲೂ-ರೇ ಡಿಸ್ಕ್‌ನಲ್ಲಿ ಸೆಪ್ಟೆಂಬರ್ ೨೦೦೮ರಂದು ಬಿಡುಗಡೆ ಮಾಡಲಾಯಿತು.

ಪ್ರಶಸ್ತಿ ಗೌರವಗಳು

ಬದಲಾಯಿಸಿ

ದ ಗಾಡ್‍ಫ಼ಾದರ್ ಮತ್ತು ದ ಗಾಡ್‍ಫ಼ಾದರ್ ಪಾರ್ಟ್ ಟೂ ಎರಡೂ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದ ಏಕೈಕ ಮೂಲ/ಉತ್ತರಭಾಗ ಕೂಟವಾಗಿವೆ.[೧೨] ದ ಲಾರ್ಡ್ ಆಫ಼್ ದ ರಿಂಗ್ಸ್ ಜೊತೆಗೆ, ದ ಗಾಡ್‍ಫ಼ಾದರ್ ಚಿತ್ರತ್ರಯವು ಒಂದೇ ತ್ರಯದ ಎಲ್ಲ ಕಂತುಗಳು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡ ಗೌರವವನ್ನು ಹಂಚಿಕೊಂಡಿದೆ.

ಉಲ್ಲೇಖಗಳು

ಬದಲಾಯಿಸಿ
  1. "The Godfather II". British Board of Film Classification. Archived from the original on July 17, 2015. Retrieved December 20, 2014.
  2. "The Godfather Part II (1974)". Box Office Mojo. Archived from the original on May 29, 2014. Retrieved May 26, 2014.
  3. "The Godfather: Part II (1974) – Financial Information". The Numbers. Archived from the original on April 6, 2015. Retrieved December 20, 2014.
  4. Thompson, Anne (December 24, 1990). "Is 'Godfather III' an offer audiences cannot refuse?". Variety. p. 57.
  5. "The National Film Registry List – Library of Congress". loc.gov. Archived from the original on April 7, 2014. Retrieved March 12, 2012.
  6. Canby, Vincent (December 13, 1974). "'Godfather, Part II' Is Hard To Define: The Cast". The New York Times. Archived from the original on March 12, 2017. Retrieved March 8, 2017.
  7. Eagan, Daniel (2009). America's Film Legacy: The Authoritative Guide to the Landmark Movies in the National Film Registry. Bloomsbury Publishing USA. p. 712. ISBN 1-4411-1647-8.
  8. Biskind, Peter (1991). The Godfather Companion. Wildside Press. ISBN 0-8095-9036-0.
  9. "The Godfather, Part II". Turner Classic Movies, Inc. Archived from the original on March 12, 2017. Retrieved March 8, 2017.
  10. Garner, Joe (2013). Now Showing: Unforgettable Moments from the Movies. Andrews McMeel Publishing. ISBN 1-4494-5009-1. Archived from the original on March 12, 2017. Retrieved March 8, 2017.
  11. McNamara, Mary (December 2, 2010). "Critic's Notebook: Can 'Harry Potter' ever capture Oscar magic?". Los Angeles Times. Archived from the original on December 7, 2013. Retrieved December 3, 2013.

ಬಾಹ್ಯ ಸಂಪರ್ಕಗಳು

ಬದಲಾಯಿಸಿ