ದತ್ತಾತ್ರೇಯ ಬಾಲಕೃಷ್ಣ ಕುಲಕರ್ಣಿಯವರು (೧೯೧೬-೧೯೬೩) ೧೯೧೬ರಲ್ಲಿ ಜನಿಸಿದರು.

ಕತೆಗಾರರಾಗಿ, ಪ್ರಬಂಧಕಾರರಾಗಿ, ಮನೋಹರ ಗ್ರಂಥ ಭಂಡಾರದ ಒಡೆಯರಾಗಿ ಸಾಹಿತ್ಯ ಪ್ರಪಂಚಕ್ಕೆ ಚಿರಪರಿಚಿತರಾದ ಇವರ ಸಂಕ್ಷಿಪ್ತನಾಮ ದ.ಬಾ.ಕು.[] ಇವರು ನವೋದಯ ಕಾಲದ ಹೆಸರಾಂತ ಸಾಹಿತಿ. ಧಾರವಾಡದಲ್ಲಿ ಲಲಿತ ಸಾಹಿತ್ಯ ಮಾಲೆ ಹಾಗು ಮನೋಹರ ಗ್ರಂಥ ಭಂಡಾರ ಪ್ರಾರಂಭಿಸಿದರು. ಹಿರಿಯ ಮಿತ್ರರಿಗೆ ದತ್ತನಾಗಿ, ಓರಗೆಯವರಿಗೆ ದ.ಬಾ.ಕು. ಆಗಿ, ಮನೆಯವರಿಗೆಲ್ಲ ದತ್ತಣ್ಣನಾಗಿ ೪೭ ವರ್ಷಗಳ ಹರೆಯದಲ್ಲಿಯೆ ಮುಪ್ಪಿನ ತಂದೆತಾಯಿಗಳನ್ನೂ ಹೆಂಡತಿ ಮಕ್ಕಳನ್ನೂ ಬಾಳಮುನ್ನೀರಿನಲ್ಲಿ ನೂಕಿ ಕಣ್ಮರೆಯಾದರು. ಜನ್ಮಿಸಿದ್ದು ೨೩-೩-೧೯೧೬ರಲ್ಲಿ, ಸತ್ತಿದ್ದು ೧೧-೮-೧೯೬೩ರಲ್ಲಿ.

ಕೊಡಗಿನ ಪ್ರಮುಖ ಕತೆಗಾರ್ತಿ ಗೌರಮ್ಮನವರ ದುರಂತವನ್ನು ನೆನೆದು ದ.ಬಾ.ಕು. ತಮ್ಮ ಅಳಲನ್ನು ತೋಡಿಕೊಂಡುದೆ ಹೃದ್ಯವಾದ ವ್ಯಕ್ತಿಚಿತ್ರವಾಗಿ ಅವರನ್ನು ಉತ್ತಮ ಸಾಹಿತಿಯ ಮಟ್ಟಕ್ಕೆ ಏರಿಸಿತು. ಅಂದಿನಿಂದ ದ.ಬಾ.ಕು. ವ್ಯಕ್ತಿಚಿತ್ರಣದಲ್ಲಿ ಎತ್ತಿದ ಕೈಯೆನಿಸಿ ಹಕ್ಕಿಯ ನೋಟವೊಂದನ್ನು ಕನ್ನಡಕ್ಕೆ ನೀಡಿದರು. ಮುಂದೆ ಸೀಮಾಪುರುಷರು ಇದೇ ನಿಟ್ಟಿನಲ್ಲಿ ಇನ್ನೊಂದು ಉಡುಗೊರೆಯಾಗಿ ಬಂತು. ಸ್ಮೃತಿ ಚಿತ್ರಗಳು ಎಂಬ ಇನ್ನೊಂದು ವ್ಯಕ್ತಿ ಚಿತ್ರ ಸಂಗ್ರಹ ಸಿದ್ಧವಾಯಿತು-ಮೂಲ ಮರಾಠಿಯ ಅನುವಾದವಾಗಿ. ಇದು ಇನ್ನೂ ಅಪ್ರಕಟಿತ.

ಕನ್ನಡ ಪ್ರಾಥಮಿಕ ಶಿಕ್ಷಣದ ಮುಲ್ಕೀ ಪರೀಕ್ಷೆಯನ್ನು ಪಾಸುಮಾಡಿ ದ.ಬಾ.ಕುಲಕುರ್ಣಿಯವರು ಧಾರವಾಡಕ್ಕೆ ತಮ್ಮ ಸೋದರ ಮಾವನಾದ ಗೆಳೆಯರ ಗುಂಪಿನ ಖ್ಯಾತ ಸಾಹಿತಿ ಗೋವಿಂದರಾವ್ ಚುಳಕಿಯವರ ಬಳಿ ಬಾಲಾಗಸಿಯಾಗಿ ಬಂದು ನಿಂತರು. ದ.ಬಾ.ಕು ಅವರ ಅಣ್ಣ (ದೊಡ್ಡಮ್ಮನ ಮಗ) ಪ್ರಹ್ಲಾದನೂ ಸೋದರಮಾವನ ಸೆರಗಿಗೇ ಅಂಟಿಕೊಂಡ. ಉಭಯತ್ರರಿಗೂ ಉದ್ಯೋಗದ ದಾರಿ ತೋರಬೇಕೆಂದು ಚುಳಕಿಯವರು (ಚಾಲುಕ್ಯರು) ಅವರಿಗಾಗಿ ಮನೋಹರ ಗ್ರಂಥಭಂಡಾರ ತೆರೆದರು. ಗೆಳೆಯರ ಗುಂಪಿನ ತರುವಾಯ ಎರಡು ಸಾಹಿತ್ಯ ಸಂಸ್ಥೆಗಳು ಧಾರವಾಡದಲ್ಲಿ ಸ್ಥಾಪಿತವಾದುವು-ಒಂದು ಮನೋಹರ ಗ್ರಂಥಮಾಲಾ ಎಂಬ ಪ್ರಕಾಶನ ಸಂಸ್ಥೆ; ಇನ್ನೊಂದು ಮನೋಹರಗ್ರಂಥ ಭಂಡಾರ ಎಂಬ ಪುಸ್ತಕ ವ್ಯಾಪಾರಸಂಸ್ಥೆ. ಪ್ರಹ್ಲಾದ ಪುಸ್ತಕದ ಅಂಗಡಿಯಲ್ಲಿ ಕೂತು ವ್ಯಾಪಾರ ಮಾಡಿದರೆ ದ.ಬಾ. ಅದರ ಜಂಗಮ ಅಂಗವಾಗಿ ಹೆಗಲ ಮೇಲೆ ಸರಸ್ವತಿಯನ್ನು ಹೊತ್ತುಕೊಂಡು ಮೈಸೂರು, ಕೊಡಗು, ಹೈದರಾಬಾದು, ಮುಂಬಯಿ, ಮದ್ರಾಸುಗಳನ್ನೆಲ್ಲ ಸುತ್ತಿದರು. ಹೈಸ್ಕೂಲು, ಕಾಲೇಜು, ವಿಶ್ವವಿದ್ಯಾನಿಲಯಗಳಿಗೆಲ್ಲ ಅಲೆದದ್ದೆ ಅಲೆದದ್ದು. ಪ್ರವಾಸದ ವೆಚ್ಚ, ಊಟದ ವೆಚ್ಚ, ಪುಸ್ತಕದ ಮೂಲವೆಚ್ಚ ಕಳೆದು ಉಳಿಯುತ್ತಿದ್ದುದು ಅತ್ಯಲ್ಪ. ಇಂಥ ಬಡತನದಲ್ಲಿ ಉದರನಿರ್ವಾಹ ನಡೆಯುತ್ತಿತ್ತು. ಪುಸ್ತಕಗಳ ನಗದು ವ್ಯಾಪಾರವಾಗದಿದ್ದರೆ ಇತರ ಪ್ರಕಾಶಕರೊಂದಿಗೆ ಪುಸ್ತಕಗಳನ್ನು ವಿನಿಮಯ ಮಾಡಿಕೊಂಡು ವಿನಿಮಯದ ಸಾಹಿತ್ಯವನ್ನು ಮತ್ತೆ ಧಾರವಾಡದ ಅಂಗಡಿಯಲ್ಲಿಟ್ಟು ವ್ಯಾಪಾರ ಮಾಡುತ್ತ ಭಂಡಾರ ವೈವಿಧ್ಯಪೂರ್ಣವಾಗಿ ವಿಸ್ತಾರಗೊಂಡಿತು. ಯಾವುದೇ ಸಾಹಿತ್ಯ ಸಮ್ಮೇಳನದಲ್ಲಿ ಮ. ಗ್ರ. ಭಂಡಾರದ ಒಂದು ಅಂಗಡಿ ಇರುತ್ತಿತ್ತು. ಇದರಿಂದ ದ.ಬಾ.ಕು. ಸಾಹಿತ್ಯ ವ್ಯಾಪಾರದೊಡನೆ ಸ್ನೇಹ ಸಂಪಾದನೆಯನ್ನೂ ಮಾಡಿದರು. ತಮ್ಮ ಆಹ್ಲಾದಕ ವರ್ತನೆಯಿಂದ ಬೇಂದ್ರೆ, ಗೋಕಾಕ, ಕಾರಂತ, ಮಾಸ್ತಿ-ಅವರಂಥ ಹಿರಿಯ ಸಾಹಿತಿಗಳ ಪ್ರೀತಿಗೆ ಪಾತ್ರರಾದರು. ಸಾಹಿತಿಗಳ ಬಳಗವನ್ನೆ ಕಟ್ಟಿದರು. ಪ್ರಸ್ತಕ ವ್ಯಾಪಾರಿಯಷ್ಟೆ ಆಗಿದ್ದರೆ ದ.ಬಾ.ಕು. ಅವರ ಹೆಸರು ಈ ಪರಿ ಹಸಿರಾಗಿ ಉಳಿಯುತ್ತಿರಲಿಲ್ಲ. ಪುಸ್ತಕ ವ್ಯಾಪಾರದಿಂದ ಜೀವನವನ್ನು ಪ್ರಾರಂಭಿಸಿದ ಅನಂತರ ಈತ ಪ್ರಕಾಶಕರೂ ಆದರು. ಲೇಖಕರೂ ಆದರು. ಲಲಿತ ಸಾಹಿತ್ಯಮಾಲೆ ಎಂಬ ಪ್ರಕಾಶನ ಸಂಸ್ಥೆಯೂ ಪ್ರಾರಂಭವಾಯಿತು.

ಪುಸ್ತಕ ವ್ಯಾಪಾರ ಮಾಡುತ್ತಿದ್ದಂತೆಯೆ ಲೇಖಕ ದ.ಬಾ.ಕು. ಮಾನವ ಸ್ವಭಾವವನ್ನೂ ಅರಿತು ಅಳೆಯುತ್ತಿದ್ದರು. ಅವರ ಭಂಡಾರ ಲೇಖಕರ ಕ್ಲಬ್ಬೂ ಆಗುತ್ತಿತ್ತು. ಪುಸ್ತಕ ವ್ಯಾಪಾರಿಯ ಬಳಿ ಬರುವ ಸಾಹಿತ್ಯ ಗಿರಾಕಿಗಳ ಅಭಿರುಚಿಗಳು ಎಷ್ಟು ವಿಧ, ಎಷ್ಟೆಷ್ಟು ಹದವಾಗಿರುತ್ತವೆಂಬುದನ್ನು ಒಂದು ಕಥನದಲ್ಲಿ ಇವರು ಚಿತ್ರಿಸಿದ್ದಾರೆ. ಇವರ ಹಾಸುಹೊಕ್ಕು ಎಂಬ ಪ್ರಕಟಣೆ ಬಾಳಿನ ನೂಲು, ರೇಶಿಮೆ, ಜರಿ ಎಲ್ಲವನ್ನೂ ಬಳಸಿಕೊಂಡು ಕನ್ನಡತಾಯಿಗೆ ನೀಡಿರುವ ನಯನವಾದ ಉಡುಗೊರೆಯಾಗಿದೆ. ಹಕ್ಕಿಯ ನೋಟ ಸಂಗ್ರಹ ಕನ್ನಡನಾಡಿನ ಮಾದರಿಯ ಸಾಹಿತಿ, ಕಲಾವಿದ ವ್ಯಕ್ತಿಗಳ ಬಗ್ಗೆ ಇವರು ರಚಿಸಿದ ಉತ್ತಮ ಜೀವನ ಚಿತ್ರಣವಾಗಿದೆ.

ದ. ಬಾ. ಕು. ಅವರು ಕಲೆಗಾರಿಕೆಯಲ್ಲಿ ಹೆಚ್ಚು ಕೃಷಿ ಮಾಡಿದರು. ಕೊಡಗಿನ ಗೌರಮ್ಮ, ಧಾರವಾಡದ ಗೀತಾ ಕುಲಕರ್ಣಿ - ಇವರು ಕತೆಗಾರ್ತಿಯರಾಗಿ ಹೆಸರು ಗಳಿಸಿದುದು ದ.ಬಾ.ಕು ಅವರ ಪ್ರಕಾಶನ ಸ್ಪೂರ್ತಿಯಿಂದಲೆ. ಸ್ವತಃ ಕತೆಗಾರರಾಗಿ ದ.ಬಾ.ಕು. ಅವರು ಹಾಸುಹೊಕ್ಕು, ಕಪ್ಪು ಹುಡಿಗೆ, ನಾಳಿನ ಕನಸು ಎಂಬ ಮೂರು ಸಂಗ್ರಹಗಳಲ್ಲಿ ಅನೇಕ ಅಪೂರ್ವ ಮಾದರಿಯ ಕತೆಗಳನ್ನು ಪ್ರಕಟಿಸಿದ್ದಾರೆ. ಪರಿಹಾರ ಎಂಬ ಒಂದು ಕಾದಂಬರಿಯೂ ಪ್ರಕಟವಾಗಿದೆ. ಗೋವಾ ಎಂಬ ಕಾದಂಬರಿಯೊಂದನ್ನು ಅವರು ಬರೆಯಲು ಆಲೋಚಿಸಿದ್ದಂತೆ ತೋರುತ್ತದೆ. ಹೃದಯಾಘಾತದಿಂದ ಸಾಯುವ ಮುನ್ನ ಅದರ ಒಂದು ಪ್ಯಾರಾವನ್ನವರು ಬರೆದಂತೆ ತಿಳಿದುಬರುತ್ತದೆ.

ದ.ಬಾ.ಕು. ಅವರು ಕನ್ನಡ ಸಾಹಿತ್ಯದಲ್ಲಿ ಕತೆಗಾರರಾಗಿ, ವ್ಯಕ್ತಿಚಿತ್ರಕಾರರಾಗಿ ತಮ್ಮದೇ ಒಂದು ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಸಮಕಾಲೀನ ಸಾಮಾಜಿಕ ಪರಿಸ್ಥಿತಿ, ಇತರ ಸ್ಥಿತ್ಯಂತರಗಳು, ಆಧುನಿಕ ಜೀವನಕ್ರಮ, ಅನಿವಾರ್ಯವಾಗಿ ಸಡಿಲಗೊಂಡಿರುವ ಸಂಪ್ರದಾಯದ ಕಟ್ಟುಗಳು, ಬದಲಿಸುವ ನೀತಿಮೌಲ್ಯಗಳು ಇವೆಲ್ಲಾ ನಾಳಿನ ಕನಸು ಎಂಬ ಕಥಾಸಂಗ್ರಹದ ವೈಶಿಷ್ಟ್ಯಗಳೆಂದು ಮುನ್ನುಡಿಕಾರ ವ್ಯಾಸರಾಯ ಬಲ್ಲಾಳರು ಎತ್ತಿ ತೋರಿದ್ದಾರೆ. ನಮ್ಮನ್ನು ಕೆಣಕಿಕಾಡುತ್ತಿರುವ ಸಾಮಾಜಿಕ ಸಮಸ್ಯೆಗಳು, ಹಳೆ-ಹೊಸದರ ಲೆಕ್ಕಾಚಾರಗಳು, ದಾಂಪತ್ಯದ ಸರಸ-ವಿರಸಗಳು ಕತೆಯ ಸಾಮಗ್ರಿಯಾಗಿವೆಯೆಂದು ಕಪ್ಪು ಹುಡಿಗೆ ಎಂಬ ಕಥಾಸಂಗ್ರಹದಲ್ಲಿ ರಾ.ಕು. ಮುನ್ನುಡಿದಿದ್ದಾರೆ.

ದ.ಬಾ.ಕು. ಅವರು ಕೇವಲ ಹತ್ತು ಗ್ರಂಥಗಳನ್ನು ಬರೆದಿರುವರಾದರೂ ಯೋಗ್ಯತೆಯ ದೃಷ್ಠಿಯಿಂದ ಅವು ಗಮನಾರ್ಹ ಕೃತಿಗಳಾಗಿವೆ.

ಸಾವಧಾನವೆಂಬುದು ದ.ಬಾ.ಕು ಅವರ ಪ್ರಬಂಧ ಸಂಕಲನ. ಇವರು ಸಜ್ಜಾಗಿ ಹರಟೆ ಹೊಡೆಯಬಲ್ಲವರಾಗಿದ್ದರು. ಹಾಸ್ಯವೆ ಇವರ ಹರಟೆಯ ರಹಸ್ಯ. ಈ ಹಾಸ್ಯಗಾರಿಕೆಯನ್ನು ಜೀವನದಲ್ಲಿಯೂ ಬೆಳಸಿಕೊಂಡು, ಬಳಸಿಕೊಂಡು ಬಂದಿದ್ದರೂ ಬಡತನದ ಕಷಾಯಕ್ಕೆ ಇವರ ಹಾಸ್ಯ ಹಾಲು-ಸಕ್ಕರೆಯಂತಿತ್ತು. ದ.ಬಾ.ಕು. ಧಾರವಾಡದ ಸಾರ್ವಜನಿಕ ನಗೆಯ ಬೆಳಕಾಗಿದ್ದರು.

ಇವರ ಕೆಲ ಕೃತಿಗಳು:

  • ಹಕ್ಕಿ ನೋಟ (ವ್ಯಕ್ತಿ ಚಿತ್ರ)
  • ನಾ ಕಂಡ ಗೌರಮ್ಮ (ವ್ಯಕ್ತಿ ಚಿತ್ರ)
  • ಸಾವಧಾನ (ಪ್ರಬಂಧ ಸಂಕಲನ)
  • ಕಪ್ಪು ಹುಡುಗಿ ( ಕಥಾ ಸಂಕಲನ)
  • ನಾಳಿನ ಮನಸು ( ಕಥಾ ಸಂಕಲನ)
  • ಹಾಸು ಹೊಕ್ಕು ( ಕಥಾ ಸಂಕಲನ)

ದ.ಬಾ.ಕುಲಕರ್ಣಿಯವರು ತಮ್ಮ ಎಳೆವಯಸ್ಸಿನಲ್ಲಿಯೆ ೧೯೬೩ರಲ್ಲಿ ತೀರಿಕೊಂಡರು.

ಉಲ್ಲೇಖಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: