ವರದಹಳ್ಳಿಯ ಶ್ರೀ ದುರ್ಗಾಂಬಾ

(ದುರ್ಗಾಂಬಾ ಇಂದ ಪುನರ್ನಿರ್ದೇಶಿತ)

ಶಿವಮೊಗ್ಗ ಜಿಲ್ಲೆಯ ತಾಲೂಕು ಕೇಂದ್ರವಾದ ಸಾಗರದಿಂದ ಕೇವಲ ೮ ಕಿಲೋಮೀಟರ್ ದೂರದಲ್ಲಿ ಪಶ್ಚಿಮ ಘಟ್ಟದ ವನಸಿರಿಯ ಮಡಿಲಲ್ಲಿ ಇರುವ ಪರಮ ಪಾವನ ಕ್ಷೇತ್ರವೇ ವರದಹಳ್ಳಿ (ಆಡು ಭಾಷೆಯಲ್ಲಿ ವದ್ದಳ್ಳಿ). ಇಲ್ಲೇ ಶ್ರೀ ದುರ್ಗಾಂಬಾ ದೇವಿಯ ಸನ್ನಿಧಿ. ಈ ಸ್ಥಳಕ್ಕೆ ವರದಹಳ್ಳಿ ಅಥವಾ ವರದಪುರ ಎಂಬುದಾಗಿಯೂ ಕರೆಯುತ್ತಾರೆ. ಇಲ್ಲಿಯ ದುರ್ಗಾಂಬಾ ದೇವಿಯು ಭಗವಾನ್ ವ್ಯಾಸಮಹರ್ಷಿಗಳಿಂದ ಪ್ರತಿಷ್ಠಾಪಿಸಲ್ಪಟ್ಟು ಐತಿಹ್ಯ ಹೊಂದಿ ಇಂದಿಗೂ ಭಕ್ತಿ-ಶಕ್ತಿಯ ಅಧಿದೇವತೆಯಾಗಿ ಭಕ್ತಾದಿಗಳ ಅಭೀಷ್ಠಗಳನ್ನು ನೆರವೇರಿಸುತ್ತಾ ಶ್ರೀಕ್ಷೇತ್ರದಲ್ಲಿ ನೆಲೆ ನಿಂತು ಲೋಕಪ್ರಖ್ಯಾತಳಾಗಿದ್ದಾಳೆ.

ಶ್ರೀ ದುರ್ಗಾಂಬಾ ಅಮ್ಮನವರು

ಶ್ರೀಕ್ಷೇತ್ರ ವರದಪುರದ ಪಾವಿತ್ರ್ಯವನ್ನು ಎಷ್ಟು ವರ್ಣಿಸಿದರೂ ಶಬ್ದಗಳು ಸೋಲುತ್ತವೆ. ಪ್ರಕೃತಿಯೇ ಸಾಕಾರ ದೇವತೆಯಾಗಿ ಇಲ್ಲಿ ಆವಿರ್ಭವಿಸಿದ್ದಾಳೆ. ಇಲ್ಲಿಯ ಮಣ್ಣಿನ ಕಣಕಣವೂ ದೈವೀಶಕ್ತಿಯ ಆವಿರ್ಭಾವವೇ ಆಗಿದೆ. ಪೌರಾಣಿಕೆ ಹಿನ್ನೆಲೆ ಇಲ್ಲಿಯ ಭೌಗೋಳಿಕ ಸಂದರ್ಭಕ್ಕೆ ಸುವರ್ಣಚೌಕಟ್ಟನ್ನು ಕಟ್ಟಿದೆ.

ಕ್ಷೇತ್ರದ ಇತಿಹಾಸ

ಬದಲಾಯಿಸಿ

ಮಹಿಷಾಸುರನನ್ನು ಶ್ರೀಮಾತೆಯು ಕಾಲಿನಿಂದ ವದೆದಿದ್ದರಿಂದ ಇದು "ವದ್ದಳ್ಳಿ" ಎಂದು ಗ್ರಾಮೀಣ ಸೊಬಗನ್ನು ಮೈಗೂಡಿಸಿಕೊಂಡಿದೆ. ಆ ದೇವಿಯು ಶಕ್ತಿರೂಪಿಣಿಯಾಗಿ ಇಲ್ಲಿ ಭಕ್ತಾನುಗ್ರಹಕ್ಕೆ ಕಾತರಳಾಗಿದ್ದಾಳೆ.

ಇದು ಪೌರಾಣಿಕ ಹಿನ್ನೆಲೆಯ ಜಾಗೃತ ಕ್ಷೇತ್ರವಾಗಿರುವುದರ ಜೊತೆಜೊತೆಗೆ ಗಂಗೆ-ಯಮುನೆಯರ,ತುಂಗೆ-ಭದ್ರೆಯರ ಭಾವಸಂಗಮದಂತೆ ಶ್ರೀಮಾತೆಯ ಸನ್ನಿಧಿಯ ಪಾವಿತ್ರ್ಯದೊಂದಿಗೆ,ದತ್ತ ಪರಂಪರೆಯ,ಶ್ರೀ ರಾಮದಾಸರ ಮುಂದಿನ ಕೊಂಡಿಯಾಗಿ ಅವಧೂತರಾಗಿ, ನಡೆದಾಡುವ ದೇವರಾಗಿ ಬಾಳಿ ಬದುಕಿದ ಪರಮಪೂಜ್ಯ ಶ್ರೀ ಶ್ರೀಧರ ಸ್ವಾಮಿಗಳ ತಪೋಭೂಮಿಕೆಯಾದದ್ದು ವಿಶೇಷ. ಅವರ ಅಂತಶ್ಚಕ್ಷು,ದಿವ್ಯದೃಷ್ಟಿ ಮತ್ತಾವ ತಾಣವನ್ನೂ ಅರಸದೆ ಇದನ್ನೇ ಸಾಧನೆಯ ಕ್ಷೇತ್ರವನ್ನಾಗಿ ಆಯ್ದುಕೊಂಡದ್ದು ಈ ಸ್ಥಳದ ಮಹಿಮೆಯನ್ನು ಸಾರುತ್ತದೆ.


ದೈವಾಂಶ ಸಂಭೂತರಾದ ಪರಮಹಂಸ ಪರಿವ್ರಾಜಕಾಚಾರ್ಯ ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳು ಈ ಕ್ಷೇತ್ರಕ್ಕೆ ಆಗಮಿಸಿ, ಕ್ಷೇತ್ರದಲ್ಲಿ ಮಹರ್ಷಿಗಳು,ಸಾಧು ಸಂತರು ನೆಲೆಸಿ ತಪಗೈದ ಮಹತ್ವ ಮನಗಂಡು ಶ್ರೀ ದುರ್ಗಾಂಬಾ ದೇವಿಯ ಕ್ಷೇತ್ರದ ಜೀರ್ಣೋದ್ಧಾರ ಮತ್ತು ಧರ್ಮ ಸಂಸ್ಥಾಪನಾ ಸಂಕಲ್ಪದಿಂದ ಶ್ರೀ ದುರ್ಗಾ ದೇವಿಗೆ ಅಷ್ಟಬಂಧ ನಡೆಸಿದರಂತೆ. ಶ್ರೀ ಕ್ಷೇತ್ರದ ಹೆಸರು ದೇಶ-ವಿದೇಶಗಳಲ್ಲಿ ಬೆಳಕು ಕಂಡಿದ್ದು ಶ್ರೀಧರರ ಕೃಪೆಯಿಂದಲೇ. ಶ್ರೀ ದುರ್ಗಾಂಬಾ ದೇವಾಲಯದಿಂದಾಗಿ ಶ್ರೀಧರರು ವರದಳ್ಳಿಯಲ್ಲಿ ನೆಲೆಸಿರುವುದೂ ಅಲ್ಲದೆ ಇಲ್ಲಿಯೇ ಮುಕ್ತರಾಗಿರುವುದೂ ಶ್ರೀ ದೇವಿಯ ಮೇಲೆ ಶ್ರೀ ಸದ್ಗುರುವಿಗೆ ಇರುವ ಅಪಾರ ಭಕ್ತಿಯಿಂದ ಎಂದು ಆಸ್ತಿಕರು ನಂಬುತ್ತಾರೆ.

ಶ್ರೀಧರ ಸಿಂಹಾಸನ

ಬದಲಾಯಿಸಿ

ದೇವಾಲಯದ ಆವರಣ ಪ್ರವೇಶಿಸುತ್ತಿದಂತೆಯೇ ಎಡ ಭಾಗದ ಚಂದ್ರ ಸಾಲೆಯ ಆರಂಭದಲ್ಲಿ ಶ್ರೀ ಶ್ರೀಧರರ ಭಾವಚಿತ್ರವಿರುವ ಸಿಂಹಾಸನವೊಂದು ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಶ್ರೀ ಶ್ರೀಧರರು ತಮ್ಮ ಜೀವಮಾನದಲ್ಲಿ ಹೆಚ್ಚಿನ ಪ್ರವಚನವನ್ನು ಇದೇ ಕಟ್ಟೆಯಲ್ಲಿ ಕುಳಿತು ಮಾಡಿದ್ದಾರಂತೆ. ಉತ್ಸವಕಟ್ಟೆ ಅಥವಾ ಶ್ರೀಧರ ಪ್ರವಚನ ಕಟ್ಟೆ ಎಂದೂ ಇದನ್ನು ಸ್ಥಳೀಯರು ಕರೆಯುತ್ತಾರೆ.

ದೇವಿಯ ಸಾಲಿಗ್ರಾಮಶಿಲಾ ಮೂರ್ತಿ

ಬದಲಾಯಿಸಿ

ದುಷ್ಟ ರಕ್ಕಸ ಮಹಿಷಾಸುರನನ್ನು ಕಾಲಿನಿಂದ ಒದೆದ ಭಂಗಿಯಲ್ಲೇ ಇರುವ ದೇವಿಯ ಮೂರ್ತಿಯು ಸಾಲಿಗ್ರಾಮ ಶಿಲೆಯಿಂದ ಕೆತ್ತಲ್ಪಟ್ಟಿದೆ. ಹಾಗಾಗಿ ಇಲ್ಲಿ ವಿಷ್ಣು ಶಕ್ತಿಯೂ ಅಡಕವಾಗಿದೆ ಎನ್ನುತ್ತಾರೆ ಪ್ರಧಾನ ಅರ್ಚಕ ಶ್ರೀಧರ ಭಟ್. ನವರಾತ್ರಿಯಂತಹ ವಿಶೇಷ ದಿನಗಳಲ್ಲಿ ಬೆಳ್ಳಿಯ ಮುಖವಾಡದಿಂದ ಸರ್ವಾಲಂಕೃತಳಾಗುವ ದೇವಿಯನ್ನು ಕಣ್ಣ ತುಂಬಾ ನೋಡಿದರೆ ಎಂತಹ ನಾಸ್ತಿಕರೂ ಆಸ್ತಿರಾಗುವುದರಲ್ಲಿ ಸಂದೇಹವೇ ಇಲ್ಲ.

ವ್ಯಾಸತೀರ್ಥ

ಬದಲಾಯಿಸಿ

ಚಂದ್ರಸಾಲೆಯ ಹಿಂಭಾಗದ ಮೂಲೆಯಲ್ಲಿ ವ್ಯಾಸತೀರ್ಥ ಮತ್ತು ಆಹ್ನಿಕ ತೀರ್ಥ ಕೂಡ ಭಕ್ತರನ್ನು ಸೆಳೆಯುತ್ತದೆ. ಪುಟ್ಟ ಕೊಳದಂತಿರುವ ಇಲ್ಲಿ ಪುಟ್ಟ ಪುಟ್ಟ ಮೀನುಗಳು ಆಟ ಆಡುವುದನ್ನು ಕಂಡು ಪುಟ್ಟ ಮಕ್ಕಳೂ ಸಂತಸಪಡುತ್ತಾರೆ.

ವ್ಯಾಸ ಗುಹೆ

ಬದಲಾಯಿಸಿ

ದೇವಾಲಯದ ಹಿಂಭಾಗದ ಪಾಕಶಾಲೆಯ ಪಕ್ಕದಲ್ಲಿರುವ ವ್ಯಾಸಗುಹೆಯಲ್ಲಿ ಹಿಂದೆ ವ್ಯಾಸಮುನಿಗಳು ತಪಸ್ಸು ಮಾಡುತ್ತಿದ್ದರಂತೆ. ಈಗ ಅದರ ಕುರುಹನ್ನಷ್ಟೇ ನಾವು ಕಾಣಬಹುದು. ಶ್ರೀ ಶ್ರೀಧರರು ಇದೇ ಗುಹೆಯಿಂದ ಗುಪ್ತವಾಗಿ ಕಾಶಿಗೂ ಹೋಗುತ್ತಿದ್ದರೆಂಬ ಪ್ರತೀತಿ ಇದೆ.

ಪುಷ್ಕರಿಣಿ-ದೇವಿ ತೀರ್ಥ

ಬದಲಾಯಿಸಿ

ದೇವಾಲಯದ ಗುಡ್ಡದ ಮೂಲದಿಂದ ಬರುವ ದೇವೀ ತೀರ್ಥವು ದೇವಾಸ್ಥಾನದ ಪಕ್ಕದಲ್ಲಿರುವ ಪುಷ್ಕರಿಣಿಯಲ್ಲಿ ಶೇಖರವಾಗುತ್ತದೆ. ಪಾವಿತ್ರ್ಯ ಭರಿತ ಈ ತೀರ್ಥಪಾನದಿಂದ ಸಕಲ ದುರಿತಗಳೂ,ಭವರೋಗವೂ ನಿವಾರಣೆಯಾಗುತ್ತದೆ.

ಯತಿ ಪರಂಪರೆಯ ಶ್ರೀ ರಾಮ ದೇವಾಲಯ

ಬದಲಾಯಿಸಿ

ಹಿಂದೆ ಯಾವುದೋ ಕಾಲದಲ್ಲಿ ಮಠವೊಂದು ಇಲ್ಲಿ ಇತ್ತಂತೆ. ಆ ಮಠದ ಯತಿಗಳಿಂದ ಸ್ಥಾಪಿತವಾದ ಈ ರಾಮದೇವಾಲಯದಲ್ಲಿ ಇಂದಿಗೂ ಪೂಜೆ ನಡೆದುಕೊಂಡು ಬರುತ್ತಿದೆ.

ಸಾಕ್ಷಾತ್ ಶ್ರೀ ಶ್ರೀಧರ ಸ್ವಾಮಿಗಳಿಂದ ಪ್ರತಿಷ್ಠಾಪನೆಗೊಂಡ ನಾಗಬನ ಹಿಂಭಾಗದ ಗುಡ್ಡದ ಮೇಲಿದೆ. "ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಯಾವ ರೀತಿ ನೀನು ಭಕ್ತರ ಹರಕೆಯನ್ನು ಸ್ವೀಕರಿಸಿ ಭಕ್ತಾದಿಗಳನ್ನು ಹರುಸುವೆಯೊ ಅದೇ ರೀತಿ ಇಲ್ಲಿ ಕೂಡ ಭಕ್ತರಿಗೆ ಅನುಗ್ರಹಿಸು" ಎಂದು ಪ್ರತಿಷ್ಠಾಪನೆಯಲ್ಲಿ ಶ್ರೀ ಶ್ರೀಧರರು ಸುಬ್ರಹ್ಮಣ್ಯ ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದರಂತೆ. ಅಂತೆಯೇ ಇಂದಿಗೂ ಭಕ್ತಿಯಿಂದ ಇಲ್ಲಿ ನಾಗದೇವರಿಗೆ ಪೂಜೆ ಸಲ್ಲಿಸುವವರಿಗೆ ಇಷ್ಟಾರ್ಥ ಸಿದ್ಧಿಯಾಗುತ್ತಿದೆ.