ದುಪಟ್ಟ
ದುಪಟ್ಟ
ಬದಲಾಯಿಸಿದುಪಟ್ಟ ಅನ್ನುವುದು ಒಂದು ಶಾಲು ಮಾದರಿಯ ಸ್ಕಾರ್ಫ್ ಆಗಿದ್ದು, ಇದು ಭಾರತೀಯ ಉಪಖಂಡದ ಅನೇಕ ಮಹಿಳಾ ಉಡುಪುಗಳಿಗೆ ಅವಶ್ಯಕವಾಗಿದೆ. ದುಪಟ್ಟವನ್ನು ಸಾಮಾನ್ಯವಾಗಿ ಮಹಿಳಾ ಸಲ್ವಾರ್ ಕಮೀಜ್ ಉಡುಪುಗಳ ಭಾಗವಾಗಿ ಅಥವಾ ಜೊತೆಯಾಗಿ ಬಳಸಲಾಗುತ್ತದೆ. ಹಾಗೆಯೇ ಕುರ್ತಾ ಮತು ಘರಾರಗಳ ಮೇಲೆಯೂ ಇದನ್ನು ಧರಿಸಲಾಗುತ್ತದೆ. ಆದರೆ ಇದು ಮೂಲತಃ ಗಾಗ್ರಾ ಚೋಲಿ ವಿನ್ಯಾಸದ ಉಡುಪಿನ ಭಾಗವಾಗಿದೆ. ಧೀರ್ಘ ಕಾಲದಿಂದಲೂ ಭಾರತೀಯ ಉಪಖಂಡದ ಉಡುಪಿನ ಶೈಲಿಯಲ್ಲಿ ದುಪಟ್ಟವು ನಮ್ರತೆಯ ಸಂಕೇತವಾಗಿದೆ. ಇದೆಲ್ಲದರ ಹೊರತಾಗಿಯು ಇತ್ತೀಚಿನ ದಿನಗಳಲ್ಲಿ ಪುರುಷರ ಕುರ್ತಾ ಅಥವಾ ಶೆರ್ವಾನಿಗಳ ಮೇಲೆ ದುಪಟ್ಟವನ್ನು ಬಳಸುವುದು ಸಾಮಾನ್ಯ ಪ್ರವೃತ್ತಿಯಾಗಿ ಗೋಚರಿಸಲಾರಂಭಿಸಿದೆ.
ಇತಿಹಾಸ ಮತ್ತು ಮೂಲ
ಬದಲಾಯಿಸಿದುಪಟ್ಟ ಎಂಬ ಪದವು ಮೂಲತಃ ಸಂಸ್ಕøತ ಭಾಷೆಯಿಂದ ಹುಟ್ಟಿದ್ದು, ‘ದು’- ಎಂದರೆ ಎರಡು, ‘ಪಟ್ಟ’- ಎಂದರೆ ಬಟ್ಟೆಯ ತುಂಡು ಎಂಬ ಅರ್ಥವನ್ನು ನೀಡುತ್ತದೆ. ದುಪಟ್ಟದ ಬಗೆಗಿನ ಸಾಕ್ಷ್ಯ ಅಥವಾ ಅದರ ಹಿನ್ನೆಲೆಯನ್ನು ಸಿಂಧೂ ಕಣಿವೆ ನಾಗರಿಕತೆಯಿಂದ ಗುರುತಿಸಬಹುದಾಗಿದ್ದು, ಅಲ್ಲಿ ಪಾದ್ರಿ ರಾಜನ ಶಿಲ್ಪದಲ್ಲಿ ರಾಜನ ಎಡ ಬದಿಯ ಭುಜದ ಮೇಲೆ ದುಪಟ್ಟ ಮಾದರಿಯನ್ನು ಹೋಲುವ ಬಟ್ಟೆಯನ್ನು ಗುರುತಿಸಬಹುದಾಗಿದ್ದು, ಇದು ದುಪಟ್ಟ ಬಳಕೆಯ ಹಿನ್ನೆಲೆಯನ್ನು ತಿಳಿಯಪಡಿಸುತ್ತದೆ[೧]. ಸಂಸ್ಕøತ ಸಾಹಿತ್ಯವು ಪ್ರಾಚೀನ ಕಾಲದಲ್ಲಿ ಮಹಿಳೆಯರು ಬಳಸುವ ಮುಸುಕುಗಳು ಮತ್ತು ಸ್ಕಾರ್ಫ್‍ಗಳ ಪದಗಳ ವಿಶಾಲ ಶಬ್ದಕೋಶವನ್ನು ಹೊಂದಿದೆ. ಉದಾಹರಣೆಗೆ ಶಿರೋವಸ್ತ್ರ ಅಂದರೆ ತಲೆ ಮುಸುಕು, ಮುಖಪಟ ಅಂದರೆ ಮುಖ ಮುಸುಕು ಹೀಗೆ ಅನೆಕ ಪದಗಳ ಬಳಕೆಗಳಿವೆ. ದುಪಟ್ಟವು ಪುರಾತನ ಉತ್ತರಿಯಾ ಅಂದರೆ ಭುಜದ ಮುಸುಕಿನಿಂದ ವಿಕಸನಗೊಂಡಿದೆ ಎಂದು ನಂಬಲಾಗಿದೆ. ಭಾರತೀಯ ಉಪಖಂಡದಲ್ಲಿ ಹಲವಾರು ಪ್ರಾದೇಶಿಕ ಶೈಲಿಯ ದುಪಟ್ಟಾಗಳನ್ನು ಧರಿಸಲಾಗುತ್ತದೆ. ಮೂಲತಃ ಇದು ನಮ್ರತೆಯ ಸಂಕೇತವೆಂದು ಧರಿಸಲ್ಪಡಲಾಗುತ್ತಿತ್ತು. ಆ ಸಾಂಕೇತಿಕತೆಯು ಇನ್ನೂ ಮುಂದುವರಿಯುತ್ತಾ ಇದ್ದರೂ, ಇತ್ತೀಚಿಗಿನ ದಿನಗಳಲ್ಲಿ ಅನೇಕರು ಅದನ್ನು ಅಲಂಕಾರಿಕ ಸಾಧನವಾಗಿ ಧರಿಸುತ್ತಾರೆ. ದುಪಟ್ಟವನ್ನು ಹೀಗೇ ಧರಿಸಬೇಕು ಎನ್ನುವ ಕಟ್ಟು ಪಾಡುಗಳಿಲ್ಲ, ಹಾಗಾಗಿ ಸಮಯದ ವಿಕಸನ ಮತ್ತು ಫ್ಯಾಷನ್ನಿನ ಆಧುನಿಕರಣದೊಂದಿಗೆ ದುಪಟ್ಟಗಳ ಶೈಲಿಯೂ ವಿಕಸನಗೊಂಡಿತು.
ಬಳಕೆ
ಬದಲಾಯಿಸಿಒಂದು ದುಪಟ್ಟವನ್ನು ಸಾಂಪ್ರದಾಯಿಕವಾಗಿ ತಲೆಯ ಮತ್ತು ಭುಜಗಳ ಸುತ್ತಲೂ ಧರಿಸಲಾಗುತ್ತದೆ. ಅದಲ್ಲದೆಯೂ ದುಪಟ್ಟವನ್ನು ಇಡೀ ತಲೆಯ ಸುತ್ತಲೂ ಧರಿಸಬಹುದಾಗಿದೆ. ದುಪಟ್ಟಾ ತಯಾರಿಸಲು ಬಳಸಲಾಗುವ ಕಚ್ಛಾವಸ್ತುಗಳು ದುಪಟ್ಟದ ಮಾದರಿಯ ಮೇಲೆ ಅವಲಂಬಿತವಾಗಿರುತ್ತದೆ. ದುಪಟ್ಟವನ್ನು ಧರಿಸಲು ಹಲವಾರು ವಿಧಾನಗಳಿವೆ. ಅಂತಹ ವಿಧಾನಗಳಲ್ಲಿ ಸಾಂಪ್ರದಾಯಿಕ ಶೈಲಿಯಂತೆ ತಲೆಯ ಸುತ್ತಲೂ ಧರಿಸದೇ ಇದ್ದಾಗ, ಸಾಮಾನ್ಯವಾಗಿ ದುಪಟ್ಟದ ಮಧ್ಯಮ ಭಾಗವು ಎದೆಯ ಮೇಲೆ ವಿಶ್ರಮಿಸಿಕೊಂಡಿರುತ್ತದೆ ಮತ್ತು ಅದರ ಎರಡು ತುದಿ ಭಾಗಗಳು ಎರಡೂ ಭುಜದ ಮೇಲೆ ಎಸೆಯಲ್ಪಟ್ಟಿರುತ್ತದೆ. ದುಪಟ್ಟವನ್ನು ಸಲ್ವಾರ್ ಕಮೀಜ್‍ನೊಂದಿಗೆ ಧರಿಸಿದಾಗ ಅದನ್ನು ಸಾಮಾನ್ಯವಾಗಿ ಎದುರು ಬದಿ ಮತ್ತು ಹಿಂಬದಿಗಳಲ್ಲಿ ಹರಿಯಬಿಟ್ಟಂತೆ ಧರಿಸಲಾಗುತ್ತದೆ. ಇತ್ತೀಚಿಗಿನ ಪ್ರವೃತ್ತಿಯು ಚಿಕ್ಕದಾದ ದುಪಟ್ಟವನ್ನು ಧರಿಸುವುದಾಗಿದೆ. ಕುರ್ತಿಗಳೊಂದಿಗೆ ಚಿಕ್ಕದಾದ ದುಪಟ್ಟವು ಬಹಳ ಹೊಂದಾಣಿಕೆ ಆಗುತ್ತದೆ. ಸಾಮಾನ್ಯವಾಗಿ ದುಪಟ್ಟವು ಭಾರತೀಯ ಸಂಸ್ಕøತಿಯ ಪ್ರತೀಕವೆಂದೂ ಹೇಳಲಾಗುತ್ತದೆ. ಇದನ್ನು ಕುರ್ತಿ ಮತ್ತು ಇಂಡೋ ಪಾಶ್ಚಾತ್ಯ ಉಡುಪುಗಳೊದಿಗೆ ವಿನೂತನವಾಗಿ ಧರಿಸುತ್ತಾರೆ. ದುಪಟ್ಟವನ್ನು ನಗರ ಶೈಲಿಯ ಪ್ರಸ್ತುತ ಪರಿಕರವನ್ನಾಗಿ ಪರಿಗಣಿಸಲಾಗುತ್ತದೆ. ಸಾಂಪ್ರದಾಯಿಕ ಭಾವನಾತ್ಮಕ ರಾಷ್ಟ್ರವಾಗಿರುವ ಭಾರತದಲ್ಲಿ ಮೊದಲೆಲ್ಲಾ ಸಂಪ್ರದಾಯಿಕ ಚೌಕಟ್ಟಿನ ಹಿನ್ನೆಲೆಯಲ್ಲಿ ದುಪಟ್ಟವನ್ನು ದುಪಟ್ಟವನ್ನು ಧರಿಸಲಾಗುತ್ತಿತ್ತು. ಆದರೆ ಆಧುನಿಕತೆ ಚಿಗುರಿದಂತೆ ದುಪಟ್ಟದ ಬಳಕೆಯ ವಿಧಾನದಲ್ಲೂ ಬದಲಾವಣೆಗಳು ಆಗಲಾರಂಭಿಸಿತು. ನವ ವಿನ್ಯಾಸದ ಉಡುಗೆ ತೊಡುಗೆಗಳ ನಡುವೆ ಪ್ರಾಚೀನ ದುಪಟ್ಟವೂ ತನ್ನದೇ ಆದ ರೀತಿಯಲ್ಲಿ ಮಹಿಳೆಯರ ವಸ್ತ್ರಾಲಂಕಾರಕ್ಕೆ ಕೊಡುಗೆ ನೀಡುತ್ತಾ, ಸಾಂಪ್ರದಾಯಿಕತೆ ಹಾಗೂ ಆಧುನಿಕತೆಗಳ ನಡುವೆ ಈಗಲೂ ಎಲ್ಲರ ಮನಸೂರೆಗೊಳ್ಳುತ್ತಿದೆ. ಮಸೀದಿ, ದರ್ಗಾ, ಚರ್ಚ್, ಗುರುದ್ವಾರ ಅಥವಾ ಮಂದಿರಕ್ಕೆ ಪ್ರವೇಶಿಸುವಾಗ ಮಹಿಳೆಯರು ತಮ್ಮ ತಲೆಯನ್ನು ಒಂದು ದುಪಟ್ಟದೊಂದಿಗೆ ಆವರಿಸುತ್ತಾರೆ. ಈ ಮೂಲಕ ದುಪಟ್ಟವು ಸಿಂಧೂ ಕಣಿವೆ ನಾಗರೀಕತೆಯಿಂದ ಹಿಡಿದು, ನೇಪಾಳ, ಬಾಂಗ್ಲಾದೇಶ ಸೇರಿದಂತೆ ಪಾಶ್ಚಾತ್ಯ ದೇಶಗಳಲ್ಲೂ ಪ್ರಸಿದ್ಧಿ ಪಡೆದಿದೆ. ದುಪಟ್ಟವು ಸಾಂಪ್ರದಾಯಿಕ ಮುಸುಕಿನಿಂದ ಫ್ಯಾಷನ್ ಸ್ಕಾಫ್‍ನತ್ತ ಜಹಳ ದೂರ ಬಂದಿದೆ. ಈ ಆಕರ್ಷಕ ಬದಲಾವಣೆಗಳಿಗೆ ಪಾಶ್ಚಾತ್ಯ ಶೈಲಿ ಹಾಗೂ ಭಾರತೀಯ ಸಂಸ್ಕøತಿಯ ಜಾದುವೇ ಕಾರಣ ಎಂದು ಹೇಳಲಾಗುತ್ತದೆ. ದುಪಟ್ಟವನ್ನು ಹೊದಿಕೆ ಎಂದೇ ಕರೆಯಲಾಗುತ್ತದೆ. ಅದರಲ್ಲೂ ಕೆಲವು ಪಾರದರ್ಶಕವಾದ ದುಪಟ್ಟವೂ ಸೇರುತ್ತದೆ. ಇದನ್ನು ಎದೆಯ ಮೇಲೆ, ಬೆನ್ನಿನ ಭಾಗ, ಭುಜಗಳು ಮತ್ತು ತಲೆಯ ಮೇಲೆ ಹೊದಿಕೆಯಾಗಿ ಬಳಸಲಾಗುತ್ತದೆ. ದುಪಟ್ಟಗಳು ಈಗಿನ ಕಾಲಘಟ್ಟದಲ್ಲಿ ಹೇಗೆ ಪ್ರಸ್ತುತದಲ್ಲಿದೆಯೋ ಹಾಗೇ 80ರ ದಶಕದಲ್ಲೂ ಫ್ಯಾಷನ್ ಆಗಿತ್ತು. ಸಿನಿಮಾಗಳಲ್ಲಿ ನಟಿಯರು ಹಲವಾರು ವಿಧದ ದುಪಟ್ಟಗಳನ್ನು ಪ್ರಚಲಿತಗೊಳಿಸುತ್ತಿದ್ದರು. ಆಧುನಿಕತೆ ಬೆಳೆದಂತೆ ದುಪಟ್ಟದಲ್ಲೂ ಆಧುನಿಕತೆಯ ಕಂಪು ಬೀರಲಾರಂಭಿಸಿತು. ಬಣ್ಣ ಬಣ್ಣದ ದುಪಟ್ಟಾಗಳು ಎಲ್ಲಾ ವಿಧದ ಬಟ್ಟೆಗಳಿಗೂ ಹೊಂದಿಕೆಯಾಗುತ್ತಿತ್ತು. ಸಲ್ವಾರ್ ಧರಿಸಿದಾಗ ದುಪಟ್ಟವನ್ನು ಕುತ್ತಿಗೆಯ ಸುತ್ತಲೂ ಸುತ್ತಿಕೊಳ್ಳುವ ವಿಭಿನ್ನ ಫ್ಯಾಷನ್ ಕೂಡ ಒಂದು ಕಾಲದಲ್ಲಿ ಪ್ರಚಲಿತದಲ್ಲಿತ್ತು. ಕೇವಲ ಒಂದು ಭುಜದ ಮೇಲೆ ಅಚ್ಚುಕಟ್ಟಾದ ಪದರಗಳನ್ನು ಮಾಡಿ ಅದಕ್ಕೆ ಪಿನ್ ಮಾಡುವ ಮೂಲಕ ದುಪಟ್ಟದ ಬಳಕೆಯ ವಿಶಿಷ್ಟ ವಿಧಾನವನ್ನು ಕೂಡ ಪರಿಚಯಿಸಲಾಗಿತ್ತು. ದುಪಟ್ಟ ಮೊದಲಿನಿಂದಲೇ ಇದ್ದರೂ ಅದರ ಬಳಕೆಯ ಕ್ರಮದಲ್ಲಿ ಯಾವುದೇ ಹಿನ್ನಡೆಯಾಗಿಲ್ಲ, ಜೀನ್ಸ್ ಪ್ಯಾಟು ಮತ್ತು ಶರ್ಟುಗಳೊಂದಿಗೂ ದುಪಟ್ಟ ಧರಿಸುವುದು ಈಗಿನ ಹೊಸ ಪ್ರವೃತ್ತಿಗಳಲ್ಲೊಂದಾಗಿದೆ.[೨]
ವಿವಿಧ ಮಾದರಿಯ ದುಪಟ್ಟಗಳು
ಬದಲಾಯಿಸಿ- ಬನಾರಸಿ ಸಿಲ್ಕ್ ದುಪಟ್ಟ
- ನೆಟ್ ದುಪಟ್ಟ
- ಮಧುಬನಿ ದುಪಟ್ಟ
- ಕಾಟನ್ ಸಿಲ್ಕ್ ದುಪಟ್ಟ
- ಪಟಚಿತ್ರ ಪೈಂಟೆಡ್ ದುಪಟ್ಟ
- ಕಾಂತ ಎಂಬ್ರೋಯ್ಡೆರ್ಡ್ ದುಪಟ್ಟ
- ಚಂದೆರಿ ದುಪಟ್ಟ
- ತುಸ್ಸಾರ್ ಸಿಲ್ಕ ದುಪಟ್ಟ
- ಚಿಫೋನ್ ದುಪಟ್ಟ
- ಪೊಮ್ ಪೊಮ್ ದುಪಟ್ಟ
- ಇಕತ್ ದುಪಟ್ಟ
- ವೆಲ್ವೆಟ್ ದುಪಟ್ಟ
- ಕಲಂಕರಿ ದುಪಟ್ಟ
- ಜಾರ್ಜೆಟ್ ದುಪಟ್ಟ
- ಜರ್ಡೋಸಿ ವರ್ಕ್ ದುಪಟ್ಟ
- ಪಾಶ್ಮಿನ ದುಪಟ್ಟ
ಉಲ್ಲೇಖಗಳು
ಬದಲಾಯಿಸಿ