ದಿ ಕಮ್ಯೂನಿಸ್ಟ್
ದಿ ಕಮ್ಯೂನಿಸ್ಟ್ : ಮಾರ್ಕ್ಸ್ ವಾದ, ಲೆನಿನ್ ವಾದದ ತಾತ್ತ್ವಿಕ ಪ್ರತಿಪಾದನೆಯೇ ಮುಖ್ಯ ಉದ್ದೇಶವೆಂದು ಘೋಷಿಸಿಕೊಂಡು ಕೆ.ದಾಮೋದರನ್ ಸಂಪಾದಕತ್ವದಲ್ಲಿ 1945ರಲ್ಲಿ ಆರಂಭವಾದ ಕೇರಳದ ಪತ್ರಿಕೆ.
ಇದರ ಪ್ರಾರಂಭದ ಕೆಲವು ಸಂಚಿಕೆಗಳಲ್ಲಿ ಕೆ.ದಾಮೋದರನ್, ಇ.ಎಂ.ಎಸ್. ನಂಬೂದರಿಪಾದ್, ಎಂ.ಎಸ್.ದೇವದಾಸ್, ಸಿ.ಉನ್ನಿರಾಜ ಮೊದಲಾದವರ ಲೇಖನಗಳು ಪ್ರಕಟವಾದವು. ಪತ್ರಿಕೆಯಲ್ಲಿ ದಿನವಹಿ ವಿಚಾರ ವ್ಯವಹಾರಗಳಲ್ಲದೆ ಕಮ್ಯೂನಿಸ್ಟ್ ಪಕ್ಷದ ತಾತ್ತ್ವಿಕ ಸಮಸ್ಯೆಗಳ ಬಗ್ಗೆ ಪಕ್ಷದ ಸದಸ್ಯರ ದೀರ್ಘ ಚರ್ಚೆಗಳು ಬರುತ್ತಿದ್ದವು. 1946ರ ಹೊತ್ತಿಗೆ ಎಲ್ಲಾ ಕಮ್ಯೂನಿಸ್ಟ್ ಮುಖಂಡರು ಭೂ ಮಾಲೀಕರಿಂದ ಬತ್ತ ವಶಪಡಿಸಿಕೊಳ್ಳುವ ಹೋರಾಟದ ಸಂಬಂಧದಲ್ಲಿ ಬಂಧನಕ್ಕೊಳಗಾಗಿದ್ದರು. 1947 ಆಗಸ್ಟ್‌ನಲ್ಲಿ ಅವರೆಲ್ಲ ಸೆರೆಯಿಂದ ಬಿಡುಗಡೆ ಹೊಂದಿದರಾದರೂ 1948 ಮಾರ್ಚ್ನಲ್ಲಿ ಬಿ.ಟಿ.ರಣದೇವೆಯಿಂದ ಸಂಘಟಿತವಾದ ಕಾನೂನುಬಾಹಿರ ಕಾರ್ಯಕ್ರಮಗಳ ಸಂಬಂಧವಾಗಿ ಅವರಲ್ಲಿ ಅನೇಕರು ಭೂಗತರಾದರು; ಉಳಿದವರು ಬಂಧಿತರಾದರು. ಏತನ್ಮಧ್ಯೆ ಕಮ್ಯೂನಿಸ್ಟ್ ಪತ್ರಿಕೆ ಅವಸಾನ ಹೊಂದಿತು. ಪತ್ರಿಕೆಯನ್ನು ಪೋಷಿಸುವವರೇ ಇಲ್ಲವಾದದ್ದು ಕಮ್ಯೂನಿಸ್ಟ್ ಪಕ್ಷದವರು ಕೋಲ್ಕೊತ್ತದಲ್ಲಿ ಸ್ವೀಕರಿಸಿದ ಉಗ್ರ ನೀತಿಯೂ ಇದರ ಅವನತಿಗೆ ಕಾರಣ.