ದಿ ಅನಾಟಮಿ ಆಫ್ ಮೆಲಂಕಲಿ

ಅನಾಟಮಿ ಆಫ್ ಮೆಲಂಕಲಿ, ಹದಿನೇಳನೆಯ ಶತಮಾನದ ಇಂಗ್ಲಿಷ್ ಗದ್ಯಸಾಹಿತಿ ಹಾಗೂ ಕ್ರೈಸ್ತ ಉಪದೇಶಕ ರಾಬರ್ಟ್ ಬರ್ಟನ್‍ನ ಕೃತಿ (1621).

ದಿ ಅನಾಟಮಿ ಆಫ್ ಮೆಲಂಕಲಿ
Frontispiece for the 1638 edition
ಲೇಖಕರುRobert Burton
ಚಿತ್ರಲೇಖಕChristian Le Blon
ದೇಶBritain
ಭಾಷೆಇಂಗ್ಲೀಷ್
ಪ್ರಕಟವಾದ ದಿನಾಂಕ
೧೬೨೧
ಮಾಧ್ಯಮ ಪ್ರಕಾರPrint

ಅವಲೋಕನ

ಬದಲಾಯಿಸಿ

ಉತ್ತಮ ಶೈಲಿ, ಕುತೂಹಲಕಾರಿ ವಿಷಯಸಂಗ್ರಹಣ, ಕರ್ತೃವಿನ ಜೀವನ ವಿವೇಕ, ಹಾಸ್ಯ ಹಾಗೂ ಸಹಾನುಭೂತಿ, ತನ್ನ ಕಾಲದ ಎಲ್ಲ ತಾತ್ತ್ವಿಕ ಹಾಗೂ ಮನಶ್ಶಾಸ್ತ್ರೀಯ ಜ್ಞಾನಸಂಗ್ರಹಣ-ಇವುಗಳಿಂದಾಗಿ ಈ ಗ್ರಂಥ ಒಂದು ಮಹಾಕೃತಿಯಾಗಿದೆ. ಇಲ್ಲಿ ಮೆಲಂಕಲಿ ಅಥವಾ ವಿಷಣ್ಣತೆ ಎಂದರೆ ವಿದ್ವತ್ತು ಮತ್ತು ಜೀವನವನ್ನು ಕುರಿತು ಆಳವಾದ ವಿವೇಚನೆಯಿಂದ ಬರುವ, ಮುಂದೆ ರೊಮ್ಯಾಂಟಿಕ್ ಬರಹಗಾರರು ಹೊಗಳಿದ, ವಿಷಣ್ಣತೆಯಲ್ಲ. ಇದು ಒಂದು ದೈಹಿಕ ಅಸ್ವಸ್ಥತೆ, ಮಾನಸಿಕ ಆರೋಗ್ಯವನ್ನು ಕೆಡಿಸಿ ಹುಚ್ಚನ್ನೇ ತರಬಲ್ಲದ್ದು. ಎಲ್ಲರಲ್ಲಿ ಹುದುಗಿರುವ ವಿಷಣ್ಣತೆಯನ್ನು ಕುರಿತ ವೈದ್ಯಕೀಯ ಗ್ರಂಥ ಎನ್ನುವ ದೃಷ್ಟಿಯಿಂದ ರಚಿತವಾದರೂ ಇದರಲ್ಲಿ ಧಾರ್ಮಿಕ ಹಾಗೂ ವೈದ್ಯಶಾಸ್ತ್ರರೀತ್ಯ ವಿಷಣ್ಣತೆಯನ್ನು ಕೂಲಂಕಷವಾಗಿ ಚರ್ಚಿಸಲಾಗಿದೆ. ವಿವೇಚನೆ ಮತ್ತು ಸಹಾನುಭೂತಿ ಬೆರೆತ ಇವನ ಜೀವನದೃಷ್ಟಿ ಮತ್ತು ವ್ಯಂಗ್ಯಗಳು ಮಾಂಟೇನ್‍ನನ್ನು ನೆನಪಿಗೆ ತರುತ್ತವೆ. ಇವನು ಅಸಾಧಾರಣಪಾಂಡಿತ್ಯದ ಪ್ರಭು. ಈ ಕೃತಿಯಲ್ಲಿ ಪ್ರತ್ಯಕ್ಷವಾಗಿ ಇಲ್ಲವೆ ಪರೋಕ್ಷವಾಗಿ ಈತ ಪ್ರಸ್ತಾಪಿಸುವ ಎಲ್ಲ ಕೃತಿಗಳ ಪಟ್ಟಿ ಇಂದಿಗೂ ಸಂಪೂರ್ಣವಾಗಿ ಸಿದ್ಧವಾಗಿಲ್ಲ. ಆದರೂ ಒಣಪಾಂಡಿತ್ಯವನ್ನು ಬರ್ಟನ್ ಹಾಸ್ಯ ಮಾಡಬಲ್ಲ, ತನ್ನನ್ನು ತಾನೇ ಕಂಡು ನಗಬಲ್ಲ, ತನ್ನ ನಾಡಿನ ಗುಣಾವಗುಣಗಳನ್ನು ಬೆರಳಿಟ್ಟು ತೋರಿಸಬಲ್ಲ,[] . ಈ ಕೃತಿ ಒಂದು ದೃಷ್ಟಿಯಿಂದ ಮನಶ್ಶಾಸ್ತ್ರಕ್ಕೆ ಸಂಬಂಧಿಸಿದ್ದು. ಈತ ನೀಡುವ ಬುದ್ಧಿವಾದ ಎಷ್ಟೋ ಬಾರಿ ಆಧುನಿಕ ಮನಶ್ಶಾಸ್ತ್ರಕ್ಕೆ ಒಪ್ಪಿಗೆಯಾಗವಂಥದು. ಶಬ್ದಸಂಪತ್ತು ಮತ್ತು ವಾಕ್ಯಲಯದ ವಿಷಯದಲ್ಲಿ ಈತ ತುಂಬ ಎಚ್ಚರಿಕೆ ವಹಿಸಿದ್ದಾನೆ. ಬರೆದುದನ್ನು ಮತ್ತೆಮತ್ತೆ ತಿದ್ದಿ ಅದಕ್ಕೆ ಕಲೆಯ ಮೆರುಗು ಕೊಟ್ಟಿದ್ದಾನೆ. ವಿಚಾರಪ್ರವೃತ್ತಿಯೊಡನೆ ಬೆರೆತು, ಎದ್ದು ಕಾಣದಿರುವ ಹಾಸ್ಯ ಇವನ ಕೃತಿಯ ಒಂದು ಸಾಧನೆ. ದೀರ್ಘವಾಕ್ಯಗಳ ಶೈಲಿಪ್ರಿಯವಾಗಿರುವ ಇವನ ಯುಗದಲ್ಲಿಯೂ ಇವನ ಅನೇಕ ವಾಕ್ಯಗಳು ಆಶ್ಚರ್ಯವನ್ನು ಉಂಟು ಮಾಡುವಷ್ಟು ದೀರ್ಘವಾಗಿವೆ. ವಾಕ್ಯದ ಬೇರೆ ಬೇರೆ ಭಾಗಗಳಲ್ಲಿ ಇತರರಿಂದ ಉದ್ಧರಿಸಿದ ಭಾಗಗಳನ್ನೊ ಇತರರಿಂದ ಪ್ರಚೋದಿತವಾದ ವಿಚಾರಗಳನ್ನೊ ಹೆಣೆಯುತ್ತಾನೆ. ಇಷ್ಟಾದರೂ ಇವನದು ಅರ್ಥವಾಗದ ಶೈಲಿಯಲ್ಲ. ಇವನ ಕೃತಿಯಲ್ಲಿ ಅಪೂರ್ವ ವಿದ್ವತ್ತು, ಅಷ್ಟೇ ಅಪೂರ್ವ ಸೂಚನೆಗಳು (ಅಲ್ಯೂಷನ್ಸ್) ಇದ್ದರೂ ಶೈಲಿ ಆಡಂಬರರಹಿತ (ಹೋಮ್ಲಿ) ಎನ್ನಿಸುತ್ತದೆ. ಸಹಜವಾಗಿ ಸಂಭಾಷಣೆಯ ರೀತಿಯಲ್ಲಿ ತನ್ನ ವಿಚಾರಸರಣೆಯನ್ನು ಈತ ನಿರೂಪಿಸಿಲ್ಲ. ಇವನ ವ್ಯಕ್ತಿತ್ವ ಕೃತಿಯಲ್ಲಿ ಎದ್ದು ಕಾಣುತ್ತದೆ. ಮನುಷ್ಯನ ಸ್ವಭಾವವನ್ನು ನಿಚ್ಚಳ ದೃಷ್ಟಿಯಿಂದ ಈತ ವಿಭಜನೆ ಮಾಡಿ ಅವನ ಗುಣದೋಷಗಳನ್ನು ಮತ್ತು ವೈಚಿತ್ರ್ಯಗಳನ್ನು ಬೆರಳಿಟ್ಟು ತೋರಿಸುತ್ತಾನೆ. ಆದರೆ ತನ್ನೆಲ್ಲ ವಿಮರ್ಶೆಯಲ್ಲೂ ಮಾನವೀಯ ಸಹಾನುಭೂತಿಯನ್ನೂ ತೋರುತ್ತಾನೆ.

ಉಲ್ಲೇಖಗಳು

ಬದಲಾಯಿಸಿ
  1. Émile Legouis, A History of English Literature (1926)

ಬಾಹ್ಯ ಸಂಪರ್ಕಗಳು

ಬದಲಾಯಿಸಿ