ಕನ್ನಡಿ
ಕನ್ನಡಿ : ಪ್ರತಿಫಲನದಿಂದ ವಸ್ತುಗಳ ಪ್ರತಿಬಿಂಬವನ್ನು ಉಂಟುಮಾಡುವ ಉಪಕರಣ (ಮಿರರ್). ಸಾಮಾನ್ಯವಾಗಿ ಬೆಳಕನ್ನು ಪ್ರತಿಫಲಿಸುವ ಉಪಕರಣವನ್ನು ಕನ್ನಡಿ ಎಂದರೂ ಶಬ್ದ ರೇಡಿಯೋ ತರಂಗ ಮುಂತಾದುವನ್ನು ಪ್ರತಿಫಲಿಸುವ ಕನ್ನಡಿಗಳೂ ಇವೆ. ವಸ್ತುಗಳು ನಮಗೆ ಕಾಣಿಸಬೇಕಾದರೆ ಬೆಳಕು ಅಗತ್ಯ. ಸ್ವಪ್ರಕಾಶವಿರುವ ವಸ್ತುವಿನ ಬೆಳಕು ನಮ್ಮ ಕಣ್ಣನ್ನು ಪ್ರವೇಶಿಸುವುದರಿಂದ ಆ ವಸ್ತು ನಮಗೆ ಕಾಣಿಸುತ್ತದೆ. ಉದಾಹರಣೆಗೆ ದೀಪ. ಆದರೆ ಪ್ರಕಾಶರಹಿತವಾದ ವಸ್ತು ನಮಗೆ ಕಾಣಿಸುವುದು. ಅದರ ಮೇಲೆ ಬಿದ್ದು, ಅದರಿಂದ ಚದುರಿಸಲ್ಪಟ್ಟ ಬೆಳಕು ನಮ್ಮ ಕಣ್ಣನ್ನು ಪ್ರವೇಶಿಸುವುದರಿಂದ. ಉದಾಹರಣೆಗೆ ಈ ಪುಟ. ಇದು ಬೆಳಕನ್ನು ಚದುರಿಸುತ್ತದೆಯಾದರೂ ಇದನ್ನು ಕನ್ನಡಿ ಎನ್ನುವುದಿಲ್ಲ. ಆದರೆ ಬೆಳಕನ್ನು ಕ್ರಮವಾಗಿ ಪ್ರತಿಫಲಿಸುವಂಥ, ಮೇಲ್ಮೈಗೆ ಹೊಳಪು ಕೊಟ್ಟಿರುವ ಲೋಹ ಫಲಕ ಅಥವಾ ಹಿಂಭಾಗದಲ್ಲಿ ಲೋಹದ ತೆಳುಲೇಪನ ಇರುವ ನಯವಾದ ಗಾಜನ್ನು ಕನ್ನಡಿ ಎನ್ನುತ್ತೇವೆ.
ಉಪಯೋಗಗಳು
ಬದಲಾಯಿಸಿಕನ್ನಡಿಗಳನ್ನು ನೋಡಿಕೊಳ್ಳಲು ಉಪಯೋಗಿಸುತ್ತಾರೆ. ಚಿಕ್ಕ ಅಂಗಡಿಯಲ್ಲಿ ಗೋಡೆಗಳನ್ನೆಲ್ಲ ಕನ್ನಡಿಯಿಂದ ಮುಚ್ಚಿ ಅಂಗಡಿ ವಿಶಾಲವಾಗಿ ಕಾಣುವಂತೆ ಮಾಡುತ್ತಾರೆ. ಕನ್ನಡಿಯು ಕಿರಣದೂರವನ್ನು (ಆಪ್ಟಿಕಲ್ ಪಾತ್) ಮಡಚುವಂತೆ ಮಾಡುವುದರಿಂದ ಬೆಳಕಿನ ಉಪಕರಣಗಳ ಉದ್ದ ಕಡಿಮೆ ಮಾಡಲು ಕನ್ನಡಿ ಯನ್ನು ಉಪಯೋಗಿಸು ತ್ತಾರೆ. ದಾರಿಯ ತಿರುವು ಗಳಲ್ಲಿ ಕನ್ನಡಿಯಿಟ್ಟು ನಾವು ತಿರುಗುವ ಮೊದಲೇ ತಿರುವಿನ ಆ ಕಡೆಯಿಂದ ಬರುತ್ತಿರುವ ವಾಹನಗಳು ನಮಗೆ ಕಾಣಿಸುವಂತೆ ಮಾಡುತ್ತಾರೆ. ಜಲಾಂತರ್ಗಾಮಿ ನೀರಿನಲ್ಲಿ ಮುಳುಗಿರುವಾಗ ನೀರಿನ ಮೇಲಿರುವ ಹದಗುಗಳನ್ನೊ ವಸ್ತುಗಳನ್ನೋ ನೋಡಲು ಮತ್ತು ಕಂದಕದಲ್ಲಿ ಅಡಗಿ ಮೇಲೆ ವೈರಿಗಳ ಚಲನವಲನ ಗಳನ್ನು ನೋಡಲು ಉಪ ಯೋಗಿಸುವ ಪರಿಸ್ಕೋಪುಗಳಲ್ಲಿ ಉದ್ದವಾದ ಕೊಳವೆಯಲ್ಲಿ ಎರಡು ಕನ್ನಡಿಗಳನ್ನು ಊಧರ್ವ್ ದಿಕ್ಕಿಗೆ 45º ಕೋನ ಉಂಟುಮಾಡಿ ಪರಸ್ಪರ ಸಮಾನಾಂತರವಾಗಿರುವಂತೆ ಇಟ್ಟಿರುತ್ತಾರೆ. ಆಗ ಮೇಲಿರುವ ವಸ್ತುಗಳಿಂದ ಹೊರಟ ಬೆಳಕಿನ ಕಿರಣಗಳು ಎರಡು ಕನ್ನಡಿಗಳಲ್ಲೂ ಪ್ರತಿಫಲನಗೊಂಡು ಕೆಳಗೆ ಇರುವವರ ಕಣ್ಣನ್ನು ಪ್ರವೇಶಿಸುವುದರಿಂದ ಅವರಿಗೆ ಕಾಣಿಸುತ್ತದೆ. ಕಲೈಡೋಸ್ಕೋಪಿನಲ್ಲಿ ಮೂರು ಉದ್ದವಾದ ಕನ್ನಡಿಗಳನ್ನು ಪರಸ್ಪರ 60º ಕೋನ ಉಂಟುಮಾಡುವಂತೆ ಒಂದು ಕೊಳವೆಯಲ್ಲಿ ಜೋಡಿಸಿರುತ್ತಾರೆ. ಇದರ ಒಂದು ತುದಿಯಲ್ಲಿರುವ ಬಣ್ಣಬಣ್ಣದ ಚೂರುಗಳನ್ನು ಇನ್ನೊಂದು ತುದಿಯಿಂದ ನೋಡುತ್ತ ಇದನ್ನು ತಿರುಗಿಸಿದರೆ ಚಿತ್ರವಿಚಿತ್ರ ವಿನ್ಯಾಸಗಳು ಕಾಣಿಸುತ್ತವೆ. ಈ ಕಲೈಡೋಸ್ಕೋಪನ್ನು ಮಕ್ಕಳ ಆಟಕ್ಕೂ ಬಟ್ಟೆಗಳ ಮೇಲೆ ಮುದ್ರಿಸಬೇಕಾದ ಚಿತ್ರ ವಿನ್ಯಾಸಗಳನ್ನು ಕಂಡಹಿಡಿಯಲು ಉಪಯೋಗಿಸುತ್ತಾರೆ.
ಗೋಳ ಕನ್ನಡಿ
ಬದಲಾಯಿಸಿಕನ್ನಡಿಯು ಪ್ರತಿಫಲಿಸುವ ಮೈಗೋಳದ ಒಂದು ಭಾಗವಾದಾಗ ಅದಕ್ಕೆ ಗೋಳಕನ್ನಡಿ ಎಂದು ಹೆಸರು. ಗೋಳ ಕನ್ನಡಿ ಯಾವ ಗೋಳದ ಭಾಗವೆಂದು ಪರಿಗಣಿಸಬಹುದೋ ಅದರ ಕೇಂದ್ರವನ್ನು ಕನ್ನಡಿಯ ವಕ್ರತಾಕೇಂದ್ರ ಎಂದೂ ಆ ಗೋಳದ ತ್ರಿಜ್ಯವನ್ನು ವಕ್ರತಾ ತ್ರಿಜ್ಯ ಎಂದೂ ಕರೆಯುತ್ತೇವೆ. ಕನ್ನಡಿಯನ್ನು ನಾವು ನೋಡುವಾಗ ಅದರಲ್ಲಿ ತಗ್ಗು ಇದ್ದಹಾಗೆ ಕಂಡರೆ ಅಥವಾ ಅದರ ಪ್ರತಿಫಲಿಸುವ ಮೈ ಗೋಳ ಕೇಂದ್ರದ ವಿರುದ್ಧ ದಿಕ್ಕಿಗೆ ಇದ್ದರೆ ಅದನ್ನು ಉಬ್ಬು ಕನ್ನಡಿ ಎಂದೂ ಕರೆಯುತ್ತೇವೆ. ಗೋಳ ಕನ್ನಡಿಯ ಮಧ್ಯ ಬಿಂದುವಿನ ಹೆಸರು ಧ್ರುವ; ದೃಶ್ಯಭಾಗದ ವ್ಯಾಸದ ಹೆಸರು ದೃಗ್ವ್ಯಾಸ. ಕನ್ನಡಿಯ ಧ್ರುವವನ್ನು ಅದರ ವಕ್ರತಾಕೇಂದ್ರಕ್ಕೆ ಸೇರಿಸುವ ಸರಳರೇಖೆಗೆ ಕನ್ನಡಿಯ ಪ್ರಧಾನ ಅಕ್ಷ ಎಂದು ಹೆಸರು. ಪ್ರಧಾನ ಅಕ್ಷಕ್ಕೆ ಸಮಾನಾಂತರವಾದ ಕಿರಣಾವಳಿ ಗೋಳ ಕನ್ನಡಿಯಿಂದ ಪ್ರತಿಫಲನಗೊಂಡು ಅಕ್ಷದ ಮೇಲಿನ ಒಂದು ಬಿಂದುವನ್ನು ಹಾದುಹೋಗುತ್ತದೆ (ತಗ್ಗು ಕನ್ನಡಿಯಲ್ಲಿ); ಅಥವಾ ಪ್ರಧಾನ ಅಕ್ಷದ ಮೇಲಿನ ಒಂದು ಬಿಂದುವಿನಿಂದ ಹೊರಟ ಹಾಗೆ ಕಾಣುತ್ತದೆ (ಉಬ್ಬು ಕನ್ನಡಿಯಲ್ಲಿ). ಆ ಬಿಂದುವಿಗೆ ಕನ್ನಡಿಯ ನಾಭೀಬಿಂದು (ಫೋಕಲ್ ಪಾಯಿಂಟ್) ಎಂದೂ ಧ್ರುವದಿಂದ ಅದಕ್ಕೆ ಇರುವ ದೂರಕ್ಕೆ ಆ ಕನ್ನಡಿಯ ನಾಭೀದೂರ (ಫೋಕಲ್ ಲೆಂತ್) ಎಂದು ಹೆಸರು ನಾಭೀದೂರ ವಕ್ರತಾತ್ರಿಜ್ಯದ ಅರ್ಧದಷ್ಟು ಇರುತ್ತದೆಂದು ಜ್ಯಾಮಿತಿ ಮತ್ತು ಪ್ರತಿಫಲನ ನಿಯಮಗಳಿಂದ ತೋರಿಸಬಹುದು. ವಸ್ತುವಿನ ಒಂದು ಬಿಂದುವಿನಿಂದ ಪ್ರಧಾನ ಅಕ್ಷಕ್ಕೆ ಸಮಾನಾಂತರವಾಗಿ ಹೊರಟ ಕಿರಣ ಪ್ರತಿಫಲನಗೊಂಡು ನಾಭಿಯನ್ನು ಹಾದುಹೋಗುವುದೆಂಬುದನ್ನೂ ವಸ್ತುವಿನ ಅದೇ ಬಿಂದುವಿನಿಂದ ಕೇಂದ್ರವನ್ನು ಹಾದುಹೋಗುವ ಕಿರಣ ಪ್ರತಿಫಲನಗೊಂಡು ಅದೇ ದಾರಿಯಲ್ಲಿ ಹಿಂತಿರುಗುತ್ತದೆಂಬುದನ್ನೂ ಉಪಯೋಗಿಸಿ ಗೋಳ ಕನ್ನಡಿಯಿಂದ ಉಂಟಾಗುವ ಬಿಂಬದ ಸ್ಥಾನವನ್ನು ಕಂಡುಹಿಡಿಯುತ್ತೇವೆ. ಈ ಎರಡು ಪ್ರತಿಫಲಿತ ಕಿರಣಗಳು ಸಂಧಿಸುವ ಬಿಂದುವೇ ಬಿಂಬಬಿಂದು. ಸಮತಲ ಕನ್ನಡಿಯಲ್ಲಿ ಮಾಡಿದಂತೆ ಇಲ್ಲಿಯೂ ಹೊಗೆಪಟ್ಟಿಗೆಯನ್ನು ಉಪಯೋಗಿಸಿ ಕಿರಣಗಳ ದಾರಿಯನ್ನು ನೋಡಬಹುದು. ಕನ್ನಡಿ ಎಂತಹುದು ಮತ್ತು ಅದರ ಮುಂದೆ ಇರುವ ವಸ್ತುವಿನ ದೂರವೆಷ್ಟು ಎಂಬುದನ್ನು ಅವಲಂಬಿಸಿ ಬಿಂಬದ ಸ್ಥಾನ, ಗಾತ್ರ ಮತ್ತು ಬಿಂಬ ನೆಟ್ಟಗಿದೆಯೋ ತಲೆಕೆಳಗಾಗಿದೆಯೋ ಸತ್ಯವೋ ಮಿಥ್ಯವೋ ಎಂಬ ಅಂಶಗಳು ಇರುತ್ತವೆ. ಹೆಚ್ಚು ನಾಭೀದೂರದ ತಗ್ಗು ಕನ್ನಡಿಗಳನ್ನು ದೂರದರ್ಶಕಗಳಲ್ಲೂ ಉಪಯೋಗಿಸುತ್ತಾರೆ. ಕಾರು, ಬಸ್ಸು, ರೈಲುಗಳ ತಲೆದೀಪ ಮತ್ತು ಶೋಧನದೀಪಗಳ ಹಿಂದೆ ತಗ್ಗುಕನ್ನಡಿ ಅಥವಾ ಪ್ಯರಾಬೊಲಾಕಾರದ ಕನ್ನಡಿಗಳನ್ನು ಅಳವಡಿಸಿರುತ್ತಾರೆ. ನಾಭಿಗೂ ತಗ್ಗು ಕನ್ನಡಿಗೂ ನಡುವೆ ಇರುವ ವಸ್ತುವಿನ ದೊಡ್ಡದಾದ, ನೆಟ್ಟಗಿರುವ ಮಿಥ್ಯಬಿಂಬ ಉಂಟಾಗುವುದರಿಂದ ಮುಖಕ್ಷೌರ ಮಾಡಿಕೊಳ್ಳುವಾಗ ತಗ್ಗು ಕನ್ನಡಿಯನ್ನು ಉಪಯೋಗಿಸುತ್ತಾರೆ. ಉಬ್ಬು ಕನ್ನಡಿ ಯಾವಾಗಲೂ ನೆಟ್ಟಗಿರುವ, ಚಿಕ್ಕದಾದ ಪ್ರತಿಬಿಂಬವನ್ನೇ ಕೊಟ್ಟರೂ ಅದು ಕಾಣುವ ಕ್ಷೇತ್ರದ ವಿಸ್ತೀರ್ಣ ಹೆಚ್ಚಾದ್ದರಿಂದ ಅದನ್ನು ವಾಹನಗಳಲ್ಲಿ ಚಾಲಕರು ಹಿಂದಿನಿಂದ ಬರುತ್ತಿರುವ ಇತರ ವಾಹನಗಳನ್ನು ನೋಡಲು ಉಪಯೋಗಿಸುತ್ತಾರೆ.
ಕನ್ನಡಿಯ ಲೇಪನ
ಬದಲಾಯಿಸಿಸಾಮಾನ್ಯವಾಗಿ ಎಲ್ಲ ಕನ್ನಡಿಗಳನ್ನೂ ಸರಿಯಾದ ಆಕಾರದ ಗಾಜಿನ ಮೇಲ್ಮೈ ಪ್ರತಿಫಲಿಸುವ ವಸ್ತುವಿನ ತೆಳು ಲೇಪ ಕೊಟ್ಟು ಮಾಡುತ್ತಾರೆ. ಮೊದಲು ಹಂತ ಹಂತಕ್ಕೂ ಹೆಚ್ಚು ಹೆಚ್ಚು ನಯವಾದ ಘರ್ಷಕಗಳಿಂದ ಉಜ್ಜಿ ನಮಗೆ ಬೇಕಾದ ವಕ್ರತೆಯುಳ್ಳ ನಯವಾದ ಮೇಲ್ಮೈಯನ್ನು ಪಡೆದು ಅನಂತರ ಅದರ ಮೇಲೆ ಹೊಳಪನ್ನು ಕೊಡುತ್ತಿದ್ದರು; ಅಥವಾ ಲೋಹದ ಲೇಪವನ್ನು ರಾಸಾಯನಿಕ ರೀತ್ಯ ಮಾಡುತ್ತಿದ್ದರು. ಆದರೆ, ಈಗ ಯಾವ ಗಾಜಿಗೆ ಲೇಪನ ಮಾಡಬೇಕೋ ಅದರ ಮುಂದೆ ಹತ್ತಿರದಲ್ಲಿ ಯಾವ ವಸ್ತುವಿನ ಲೇಪನವನ್ನು ಕೊಡಬೇಕೋ ಆ ವಸ್ತುವಿನ ಚೂರನ್ನು ಟಂಗ್ಸ್ಟನ್ ತಂತಿಗಳಿಗೆ ಜೋಡಿಸಿ ಇಡುತ್ತಾರೆ. ಇದನ್ನು ಒಂದು ಪಾತ್ರೆಯಲ್ಲಿಟ್ಟು ಆ ಪಾತ್ರೆಯಲ್ಲಿ ನಿರ್ವಾತ ಉಂಟಾಗುವಂತೆ ಅದರಲ್ಲಿನ ಗಾಳಿಯನ್ನೆಲ್ಲ ಪಂಪಿನ ಸಹಾಯದಿಂದ ಹೊರತೆಗೆಯುತ್ತಾರೆ. ಆಮೇಲೆ ವಿದ್ಯುತ್ ಪ್ರವಾಹದಿಂದ ಆ ಲೇಪನ ವಸ್ತುವನ್ನು ಹಬೆಯಾಗಿಸಿದರೆ ಗಾಳಿಯ ಅಣುಗಳ ತಡೆ ಸಹ ಇಲ್ಲದೆ ಆ ಹಬೆ ಗಾಜಿನ ಮೇಲೆ ಬಿದ್ದು, ಘನೀಕರಿಸಿ ಅತಿ ಪ್ರತಿಫಲನ ಶಕ್ತಿ ಹೊಂದಿರುವ ಸು. 10-5 ಸೆಂ.ಮೀ. ದಪ್ಪದ ಲೇಪ ಉಂಟಾಗುತ್ತದೆ. ಈ ರೀತಿಯ ನಿರ್ವಾತ ಲೇಪಗಳ ಪ್ರತಿಫಲನ ಶಕ್ತಿ ಲೇಪನ ಮಾಡುವ ವಿಧಾನವನ್ನು ಅವಲಂಬಿಸಿದೆ. ಸಾಮಾನ್ಯವಾಗಿ ಹೆಚ್ಚು ಬಾಳಿಕೆ ಮತ್ತು ಹೆಚ್ಚು ಪ್ರತಿಫಲನ ಶಕ್ತಿ ಹೊಂದಲು ಆ ಗಾಜಿನ ಮೇಲ್ಮೈ ಶುದ್ಧವಾಗಿರಬೇಕು. ನಿರ್ವಾತ ಆದಷ್ಟೂ ಪುರ್ಣ (10-5 ಮಿಮೀ ಪಾದರಸ) ಆಗಿರಬೇಕು ಮತ್ತು ಲೇಪನ ಆದಷ್ಟೂ ಕ್ಷಿಪ್ರವಾಗಿ ಆಗಬೇಕು. ಲೇಪನ ವಸ್ತುವನ್ನು ಆ ಕನ್ನಡಿಯನ್ನು ಉಪಯೋಗಿಸುವ ರೋಹಿತ ವ್ಯಾಪ್ತಿಯನ್ನು (ಸ್ಪೆಷಲ್ ರೇಂಜ್) ಅನುಸರಿಸಿ ಆಯ್ಕೆ ಮಾಡುತ್ತಾರೆ. ಕಣ್ಣಿಗೆ ಕಾಣುವ ಬೆಳಕಿನ (3500-7000ºಂ) ಕನ್ನಡಿಗಳಲ್ಲಿ ಬಳಸಲು ಅತಿ ಹೆಚ್ಚು ಪ್ರತಿಫಲನ ಶಕ್ತಿ ಇರುವ ಬೆಳ್ಳಿ ಉತ್ತಮ. ಆದರೂ ಸಾಮಾನ್ಯವಾಗಿ ಅಲ್ಯೂಮಿನಿಯಮನ್ನೇ ಉಪಯೋಗಿಸುತ್ತಾರೆ. ಏಕೆಂದರೆ ಗಾಳಿಯ ಸಂಪರ್ಕದಿಂದ ಅದರ ಮೇಲೆ ಉಂಟಾಗುವ ಅತಿ ತೆಳುವಾದ, ರಾಸಾಯನಿಕ ನಿಷ್ಕ್ರಿಯದ ಆಕ್ಸೈಡ್ ಪದರದಿಂದ ಅದರ ಬಾಳಿಕೆ ಹೆಚ್ಚಾಗುತ್ತದೆ. ಅತಿರಕ್ತ ಕಿರಣಗಳ ಕನ್ನಡಿಯಲ್ಲಿ ಬಳಸಲು ಅತಿ ಹೆಚ್ಚು ಪ್ರತಿಫಲನ ಶಕ್ತಿ ಇರುವ ಚಿನ್ನವಿದ್ದರೂ ಅಲ್ಯೂಮಿನಿಯಂ ಅಥವಾ ನಿಕ್ಕಲ್ಅನ್ನು ಉಪಯೋಗಿಸುವುದು ವಾಡಿಕೆ. ಅಲ್ಯೂಮಿನಿಯಂ ಹೆಚ್ಚು ಗಟ್ಟಿಯಾಗಿರುವುದೇ ಇದರ ಕಾರಣ. ಅತಿನೇರಳೆ ಕಿರಣಗಳ ಕನ್ನಡಿಗೆ ಅಲ್ಯೂಮಿನಿಯಮ್ಮೇ ಅತ್ಯುತ್ತಮ. ಆದರೆ ತರಂಗದೂರ 1000ºಂ ಗಿಂತ ಕಡಿಮೆಯಾದರೆ ಅಲ್ಯೂಮಿನಿಯಂ ಪಾರದರ್ಶಕವಾಗುವುದರಿಂದ ಅತಿ ಹೆಚ್ಚು ಪ್ರತಿಫಲನ ಶಕ್ತಿ ಇರುವ ಪ್ಲಾಟಿನಮ್ಅನ್ನು ಉಪಯೋಗಿಸುತ್ತಾರೆ. ಗಾಜಿನಲ್ಲಿನ ಅವಶೋಷಣೆ (ಅಬ್ಸಾಪರ್ಷ್‌ನ್) ಮತ್ತು ವಕ್ರೀಭವನವನ್ನು ತಪ್ಪಿಸಬೇಕಾದಲ್ಲಿ ಮುಂದುಗಡೆಯ ಮೈಮೇಲೆ ಲೇಪನ ಮಾಡುತ್ತಾರೆ. ಮೈಕಲ್ಸನ್ ಆತಂಕಮಾಪಕ ಮುಂತಾದ ಉಪಕರಣಗಳಲ್ಲಿ ಹೀಗೆ ಮೇಲ್ಮೈ ಲೇಪನವಿರುವ ಕನ್ನಡಿಗಳನ್ನು ಉಪಯೋಗಿಸುತ್ತಾರೆ.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Mirror Manufacturing and Composition, Mirrorlink Archived 2015-02-14 ವೇಬ್ಯಾಕ್ ಮೆಷಿನ್ ನಲ್ಲಿ.
- Video of Mirror Making on YouTube
- The Mirror: A History by Sabine Melchior-Bonnet at Google Books
- How Mirrors Are Made (video) Archived 2007-11-30 ವೇಬ್ಯಾಕ್ ಮೆಷಿನ್ ನಲ್ಲಿ., Glass Association of North America (GANA)