ದಬಂಗ್-೨ (ಚಲನಚಿತ್ರ)

(ದಬಂಗ್ ೨ ಇಂದ ಪುನರ್ನಿರ್ದೇಶಿತ)

ಧಬಂಗ್-೨ ಇದು ೨೦೧೨ರಲ್ಲಿ ಬಿಡುಗಡೆಯಾದ ಸಲ್ಮಾನ್ ಖಾನ್, ಸೊನಾಕ್ಷಿ ಸಿನ್ಹಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ಸಾಹಸ-ಹಾಸ್ಯ ವರ್ಗಕ್ಕೆ ಸೇರಿಸಬಹುದಾದ ಬಾಲಿವುಡ್ ಚಲನಚಿತ್ರ. ಈ ಚಿತ್ರವನ್ನು ಅರ್ಬಾಜ಼್ ಖಾನ್ ನಿರ್ಮಿಸಿ ನಿರ್ದೇಶಿಸಿದ್ದಾರೆ. ಈ ಚಿತ್ರದ ಖಳನಾಯಕರಾಗಿ ಪ್ರಕಾಶ್ ರೈ (ರಾಜ್) ಅಭಿನಯಿಸಿದ್ದಾರೆ. ಇದು ೨೦೧೦ ರಲ್ಲಿ ಬಿಡುಗಡೆಯಾದ ಧಬಂಗ್ ಚಿತ್ರದ ಮುಂದುವರಿದ ಭಾಗ. ಈ ಚಿತ್ರದ ಕಥೆಯು ಕಾನ್ಪುರ್ ನಗರದಲ್ಲಿ ನಡೆಯುತ್ತದೆ. ಈ ಚಿತ್ರಕ್ಕೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಬರದಿದ್ದರೂ ಗಲ್ಲಾಪೆಟ್ಟಿಗೆಯಲ್ಲಿ ಬಹಳ ಯಶಸ್ವಿಯಾಯಿತು.

ಕಥಾ ಸಾರಾಂಶ

ಬದಲಾಯಿಸಿ

ಚುಲ್ಬುರ್ ಪಾಂಡೆ (ಸಲ್ಮಾನ್ ಖಾನ್) ಕಾನ್ಪುರಕ್ಕೆ ತನ್ನ ಹೆಂಡತಿ ರಜ್ಜೊ (ಸೊನಾಕ್ಷಿ ಸಿನ್ಹಾ ) ತಮ್ಮ ಮಖ್ಹಿ (ಅರ್ಬಾಜ಼್ ಖಾನ್) ಹಾಗೂ ಮಲತಂದೆ (ವಿನೋದ್ ಖನ್ನಾ) ರೊಂದಿಗೆ ಕಾನ್ಪುರಕ್ಕೆ ವರ್ಗವಾಗಿ ಹೋಗುತ್ತಾರೆ. ಕಾನ್ಪುರದಲ್ಲಿ ಕೊಲೆಗಾರನೊಬ್ಬ ಆ ಊರಿನ ಡಾನ್ ವಿರುದ್ದ ಸಾಕ್ಷಿ ಹೇಳಲಿದ್ದ ವ್ಯಕ್ತಿಯೊಬ್ಬನನ್ನು ಕೊಂದುಹಾಕುತ್ತಾನೆ. ಚುಲ್ಬುಲ್ ಆ ಕೊಲೆಗಾರನನ್ನು ಕಂಡು ಹಿಡಿದು ಕೊಂದುಹಾಕುತ್ತಾನೆ. ಆದರೆ ಆ ಡಾನ್ ಬಚ್ಚಾ (ಪ್ರಕಾಶ್ ರೈ) ಆ ಊರಿನ ರಾಜಕಾರಣಿಯೂ ಆಗಿರುತ್ತಾನೆ. ಹಾಗೂ ಈ ಬಾರಿಯ ಚುನಾವಣೆಯಲ್ಲಿ ನಿಲ್ಲಲು ಅಣಿಯಾಗುತ್ತಿರುತ್ತಾನೆ. ಈ ಕೊಲೆಯಿಂದಾಗಿ ಬಚ್ಚಾ ನ ತಮ್ಮ ಜೆಂಡಾ ತನ್ನ ಅಣ್ಣನಿಗೆ ಚುಲ್ಬುಲ್ ನನ್ನು ಕೊಂದುಹಾಕುವುದಾಗಿ ತಿಳಿಸುತ್ತಾನೆ. ಜೆಂಡಾ ಚುಲ್ಬುಲ್ ನ ಮಲತಂದೆಗೆ ಬೆದರಿಕೆ ಹಾಕಿ, ತಮ್ಮ ಸಹವಾಸಕ್ಕೆ ಬಂದರೆ ಚುಲ್ಬುಲ್ ನ ಪರಿವಾರವನ್ನೇ ನಾಶಮಾಡುವುದಾಗೆ ಚುಲ್ಬುಲ್ ಗೆ ತಿಳಿಸುವಂತೆ ಹೇಳಿ ಹೋಗುತ್ತಾನೆ.

ಆ ನಂತರ ಜೆಂಡಾ ಮದುವೆಯ ಮನೆಯೊಂದರಲ್ಲಿ ಮದುವೆ ಹೆಣ್ಣಿಗೆ ತೊಂದರೆ ಕೊಡುತ್ತಿರುವಾಗ ಅಲ್ಲಿಗೆ ಬಂದ ಚುಲ್ಬುಲ್ ಆತನ ಕುತ್ತಿಗೆಯನ್ನು ಮುರಿದು ಕೊಂದು ಹಾಕುತ್ತಾನೆ. ಇದರಿಂದ ಕುಪಿತಗೊಂಡ ಬಚ್ಚಾ ತನ್ನ ತಮ್ಮನ ಕೊಂದ ಚುಲ್ಬುಲ್ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಪಣ ತೊಡುತ್ತಾನೆ.

ಈ ಮಧ್ಯೆ ಚುಲ್ಬುಲ್ ಗೆ ತನ್ನ ಹೆಂಡತಿ ಗರ್ಭಿಣಿ ಎಂದು ತಿಳಿದುಬರುತ್ತದೆ. ಇದರಿಂದಾಗಿ ಎಲ್ಲರು ಚುಲ್ಬುಲ್ ಗೆ ಬಚ್ಚಾ ನನ್ನು ಬಿಟ್ಟು ಮನೆಯ ಕಡೆ ಗಮನ ಕೊಡುವಂತೆ ಸಲಹೆ ಮಾಡುತ್ತಾರೆ. ಆದರೆ ಬಚ್ಚಾ ತನ್ನ ತಮ್ಮನನ್ನು ಕೊಂದವನನ್ನು ಬಿಡಬಾರದೆಂದು ರಜ್ಜೊ ಹಾಗೂ ಮಖ್ಹಿ ದೆವಸ್ಥಾನಕ್ಕೆ ಹೋದ ಸಂಧರ್ಭದಲ್ಲಿ ವಿಚಾರಣೆ ಮಾಡುತ್ತಾನೆ. ಈ ಸಂಧರ್ಭ ದಲ್ಲಿ ರಜ್ಜೊ ಮೆಟ್ಟಲಿನಿಂದ ಬಿದ್ದು ತನ್ನ ಹೊಟ್ಟೆಯಲ್ಲಿರುವ ಮಗುವನ್ನು ಕಳೆದುಕೊಳ್ಳುತ್ತಳೆ ಹಾಗೂ ಮಖ್ಹ್ಹಿ ಗೆ ಗುಂಡೇಟು ಬೀಳುತ್ತದೆ. ಆದರೆ ಅವರಿಬ್ಬರೂ ಪ್ರಾಣಾಪಾಯದಿಂದ ಪಾರಾಗುತ್ತಾರೆ.

ಇದರಿಂದ ಕುಪಿತನಾದ ಚುಲ್ಬುಲ್ ಬಚ್ಚಾ ನ ಜಾಗಕ್ಕೆ ಹೋಗಿ ಆತನ ಸಹಚರರನ್ನೆಲ್ಲಾ ಕೊಂಂದು ಹಾಕಿ, ಬಚ್ಚಾ ನನ್ನು ಬಂಧಿಸಲು ಪ್ರಯತ್ನಿಸುತ್ತಾನೆ. ಆದರೆ ಬಚ್ಚಾ ಆತನನ್ನು ಅಣಕಿಸುತ್ತಾನೆ. ಇದರಿಂದಾಗಿ ಚುಲ್ಬುಲ್ ಬಚ್ಚಾ ನನ್ನು ಕೂಡಲೇ ಕೊಂದುಹಾಕುತ್ತಾನೆ.