ದತ್ತರಾಜ್ ದೇಶಪಾಂಡೆ

ದತ್ತರಾಜ್ ದೇಶಪಾಂಡೆ ಕರ್ನಾಟಕದ ಮೌಖಿಕ ಪರಂಪರೆಯ ಋಗ್ವೇದ ಘನಪಾಠೀ ಯಾಗಿದ್ದು ಪ್ರಸಿದ್ಡ ವೈದಿಕ ವಿದ್ವಾಂಸರಾಗಿದ್ದಾರೆ. ಸಂಪೂರ್ಣ ಋಗ್ವೇದ ಸಂಹಿತೆಯ ಮೂಲ, ಪದ ಪಾಠ, ಕ್ರಮ ಪಾಠ ಹಾಗೂ ಜಟಾ, ಮಾಲಾ, ಶಿಖಾ, ರೇಖಾ, ಧ್ವಜ, ದಂಡ, ಹಾಗೂ ಘನಪಾಠಗಳನ್ನು ಪುಸ್ತಕದ ಸಹಾಯವಿಲ್ಲದೆ ನಿರರ್ಗಳವಾಗಿ ಸ್ವರಸಂಚಾರ ಸಹಿತವಾಗಿ ಪಠಿಸಬಲ್ಲ, ಸಂಪೂರ್ಣ ವೇದವನ್ನು ಹಾಗೂ ಅದರ ಮೂರು ಪ್ರಕೃತಿ ಪಾಠಗಳು ಹಾಗೂ ಎಂಟು ವಿಕೃತಿ ಪ್ರಕಾರಗಳನ್ನೂ ಕಂಠಸ್ಥ ಹೊಂದಿರುವ ಕರ್ನಾಟಕದ ಬೆರಳೆಣಿಕೆಯಷ್ಟು ವಿದ್ವಾಂಸರಲ್ಲಿ ಒಬ್ಬರಾಗಿದ್ದಾರೆ. ಶಾಲಾ-ಕಾಲೇಜುಗಳಿಗೆ ಹೋಗದೇ ಇದ್ದರೂ ಸಪ್ರಯತ್ನದಿಂದ ಭಾಷೆಯನ್ನ ಕಲಿತು ಕನ್ನಡ, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಬರಹಗಾರ ಹಾಗೂ ಅನುವಾದಕರಾಗಿ ಅನೇಕ ಲೇಖನಗಳನ್ನು ಹಾಗೂ ಪುಸ್ತಕಗಳನ್ನು ಬರೆದಿದ್ದಾರೆ.

ದತ್ತರಾಜ್ ದೇಶಪಾಂಡೆ
ಜನನ೧೭-೦೭-೧೯೮೬
ಮುಳಮುತ್ತಲ, ಧಾರವಾಡ ಜಿಲ್ಲೆ
ವೃತ್ತಿಮಾರ್ಕೆಟಿಂಗ್ ಮ್ಯಾನೇಜರ್, ಹಾಗೂ ಬರಹಗಾರರು
ಭಾಷೆಕನ್ನಡ ತೆಲುಗು, ಹಿಂದಿ, ಸಂಸ್ಕೃತ
ವಿದ್ಯಾಭ್ಯಾಸಋಗ್ವೇದ ಘನಪಾಠಿ
ಪ್ರಕಾರ/ಶೈಲಿಮೌಖಿಕ/ಗುರು ಶಿಷ್ಯ ಪರಂಪರೆ

ಹಿನ್ನೆಲೆ - ಬಾಲ್ಯ

ಬದಲಾಯಿಸಿ

ಹುಟ್ಟಿದ್ದು ಧಾರವಾಡ ಜಿಲ್ಲೆಯ ಮುಳಮುತ್ತಲ ದಲ್ಲಿ. ದೂರದ ಸಂಬಂಧಿಯೊಬ್ಬರ ಮನೆಯಲ್ಲಿ ಮನೆಗೆಲಸ, ದನ ಕಾಯುವುದು ತೋಟ ಕಾಯುವುದನ್ನು ಮಾಡಿಕೊಂಡಿದ್ದರು. ಎಂಟನೇಯ ವಯಸ್ಸಿಗೆ ಸಂಬಂಧಿಕರ ಮನೆಯಿಂದ ಓಡಿ ಹೋಗಿ ಹೊಸಪೇಟೆಯ ವಿದ್ಯಾರಣ್ಯ ವಿದ್ಯಾಪೀಠ ಸೇರಿದರು. ಅಲ್ಲಿ ಮೌಖಿಕ ಪರಂಪರೆಯಲ್ಲಿ ಕಂಠಸ್ಥೀಕರಣ ಪದ್ಧತಿಯಂತೆ ವೇದಾಧ್ಯಯನ ಪ್ರಾರಂಭವಾಯಿತು. ವಿದ್ಯಾಪೀಠ ತೊರೆದು ಮುಂದೆ ಆಂಧ್ರದ ಕೆಲಕಡೆ, ಹಾಗೂ ತಮಿಳುನಾಡಿನ ವಿದ್ವಾಂಸರ ಮನೆಗಳಲ್ಲಿ ಇದ್ದುಕೊಂಡು ಗುರುಸೇವೆ ಮಾಡಿಕೊಂಡು ವೇದಾಧ್ಯಯನ ಮುಂದುವರೆಸಿದರು. ಬೆಣ್ಣೆಗುಡ್ಡೆ ಶಂಕರ ಭಟ್ ಘನಪಾಠಿಗಳ ಬಳಿ ಘನದವರೆಗಿನ ಕೊನೆಯ ಹಂತದ ಮತ್ತು ಘನ ಲಕ್ಷಣದ ಅಭ್ಯಾಸವನ್ನು ಮಾಡಿದ್ದಾರೆ.

ವೃತ್ತಿ ಬದುಕು

ಬದಲಾಯಿಸಿ

ಋಗ್ವೇದದ ಅಧ್ಯಯನ ಕಾಲದಲ್ಲಿಯೇ ಹದಿಮೂರನೇಯ ವಯಸ್ಸಿನಲ್ಲಿ ದೇವಸ್ಥಾನವೊಂದರ ಬೆಳಗಿನ ಪೂಜಾರಿಯಾಗಿ ವೃತ್ತಿಜೀವನ ಪ್ರಾರಂಭ. ಮಧ್ಯಕಾಲದಲ್ಲಿ ಅಂಗಡಿಗಳಿಗೆ ತರಕಾರಿ, ಹಣ್ಣುಗಳನ್ನ ಹಾಕಿ ಬರುವುದು, ವಾರದ ಸಂತೆಯಲ್ಲಿ ತರಕಾರಿ ವ್ಯಾಪಾರ, ಪೌರೋಹಿತ್ಯದಂಥ ಕೆಲ ಕೆಲಸಗಳನ್ನು ಮಾಡಿಕೊಂಡೇ ಅಧ್ಯಯನ ಮುಂದುವರಿಸಿದರು. ೨೦೦೪ ರಲ್ಲಿ ಘನಾಂತದ ವರೆಗೆ ಅಧ್ಯಯನ ಮುಗಿದ ಕೂಡಲೇ ಬೀದರ್ ಜಿಲ್ಲೆಯ ಮಾಣಿಕಪ್ರಭು ವೇದ ಪಾಠಶಾಲೆಯಲ್ಲಿ ಋಗ್ವೇದ ಅಧ್ಯಾಪಕರಾಗಿ ನಿಯುಕ್ತರಾದರು. ಕೇವಲ ಎರಡು ವರ್ಷಗಳಲ್ಲಿ ಆ ಗುರುಕುಲದ ಪ್ರಧಾನ ಅಧ್ಯಾಪಕರಾಗಿ ಬಡ್ತಿ ಪಡೆದರು. ೨೦೦೪-೨೦೧೦ ಈ ಆರು ವರ್ಷಗಳಲ್ಲಿ ೨೬ ವಿದ್ಯಾರ್ಥಿಗಳಿಗೆ ಸಂಪೂರ್ಣ ಋಗ್ವೇದ ಸಂಹಿತೆಯನ್ನು ಪಾಠ ಮಾಡಿ ಮುಗಿಸಿ ರಾಷ್ಟ್ರ ಮಟ್ಟದ ಮೌಖಿಕ ಪರೀಕ್ಷೆಗಳಿಗೆ ಆ ವಿದ್ಯಾರ್ಥಿಗಳನ್ನು ಕಳಿಸಿದರು. ಈ ಸಾಧನೆಗೆ ಭಾರತ ಸರ್ಕಾರದ ಅಧೀನ ಸಂಸ್ಥೆ ಮಹರ್ಷಿ ಸಾಂದಿಪನಿ ರಾಷ್ಟೀಯ ವೇದ ವಿದ್ಯಾ ಪ್ರತಿಷ್ಠಾನವು ಋಗ್ವೇದ ಅಭಿಜ್ಞ ಪುರಸ್ಕಾರವನ್ನು ನೀಡಿತು. ಮಹಾರಾಷ್ಟ್ರದ ಸಾಂಗ್ಲಿಯ ಜಯಂತಿ ವಾಸುದೇವ್ ಸ್ಮಾರಕ ಸಂಸ್ಥೆಯು ೨೦೧೦ ನೇ ಸಾಲಿನ ಪುರುಷೋತ್ತಮ್ ಪುರಸ್ಕಾರವನ್ನು ನೀಡಿ ಗೌರವಿಸಿದೆ. ೨೦೦೭ರಲ್ಲಿ ಮಧ್ಯಪ್ರದೇಶದ ಉಜ್ಜೈನಿಯಲ್ಲಿ ನಡೆದ ವಿಶ್ವ ವೇದ ಸಮ್ಮೇಳನದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಆಧುನಿಕ ಭಾರತದಲ್ಲಿ ಮೌಖಿಕ ಪರಂಪರೆಯ ಸ್ಥಿತಿಗತಿಗಳು ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ್ದಾರೆ ಹಾಗೂ ಆ ಸಮ್ಮೇಳನದಲ್ಲಿ ಭಾಗವಹಿಸಿದ ಅತೀ ಕಿರಿಯ ವಯಸ್ಸಿನ ವಿದ್ವಾಂಸರಾಗಿದ್ದಾರೆ. ಕೌಟುಂಬಿಕ ಕಾರಣಗಳಿಂದಾಗಿ ಕೆಲಸಕ್ಕೆ ರಾಜೀನಾಮೆ ನೀಡಿ ೨೦೧೦ ರಲ್ಲಿ ಬೆಂಗಳೂರಿಗೆ ಬಂದು ಜೀವನ ನಿರ್ವಹಣೆಗೆ ಗೃಹಬಳಕೆ ವಸ್ತುಗಳ ವ್ಯಾಪಾರ, ಅಫಿಲಿಯೇಟ್ ಮಾರ್ಕೆಟಿಂಗ್, ಫ್ರೀಲ್ಯಾನ್ಸ್ ಅನುವಾದ, ಕಂಟೆಂಟ್ ಬರಹ, ಮುಂತಾದ ಕೆಲಸಗಳನ್ನು ಮಾಡಿ ಈಗ ರಿಯಲ್ ಎಸ್ಟೇಟ್ ಕಂಪನಿಯೊಂದರಲ್ಲಿ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ಮು ಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇಂದಿಗೂ ಮನೆಯಲ್ಲಿಯೇ ಹಾಗೂ ಆನ್ ಲೈನ್ ಮೂಲಕ ನೂರಕ್ಕೂ ಹೆಚ್ಚು ಆಸಕ್ತರಿಗೆ ವೇದ ಪಾಠವನ್ನು ಉಚಿತವಾಗಿ ಹೇಳಿಕೊಡುವುದನ್ನು ಮುಂದುವರೆಸಿದ್ದಾರೆ.


ಬರವಣಿಗೆ

ಬದಲಾಯಿಸಿ

೨೦೦೫ ರಿಂದ ೨೦೧೦ ರ ವರೆಗೆ ಮಾಣಿಕ ರತ್ನ ಎಂಬ ಆಧ್ಯಾತ್ಮಿಕ ಮಾಸಪತ್ರಿಕೆಯ ತೆಲುಗು ಅವತರಣಿಕೆಯ ಅನುವಾದ/ಸಂಪಾದನೆ
ಹಿಂದಿ ಮಿಲಾಪ್, ಸಂಯುಕ್ತ ಕರ್ನಾಟಕ, ಬೋಧಿವೃಕ್ಷ, ಕರ್ಮವೀರ, ಮುಂತಾದ ಪತ್ರಿಕೆಗಳಿಗೆ ನೂರಕ್ಕೂ ಹೆಚ್ಚು ಲೇಖನ ಬರಹ.
ವಾಕ್ಚಿತ್ರ ಡಾಟ್ ಕಾಂ, ಕೆಂಡ ಸಂಪಿಗೆ, ಅವಧಿ, ವಾರ್ತಾ ಭಾರತಿ ಮುಂತಾದ ಪತ್ರಿಕೆಗಳಲ್ಲಿ ಹಾಗೂ ಬ್ಲಾಗ್ ಗಳಲ್ಲಿ ೨೫ ಕ್ಕೂ ಹೆಚ್ಚು ಸಿನೆಮಾ ಕುರಿತ ಬರಹಗಳು
ಕನ್ನಡ ಮತ್ತು ಹಿಂದಿ ಭಾ‍ಷೆಗಳಲ್ಲಿ ನೂರಕ್ಕೂ ಹೆಚ್ಚು ಕವಿತೆಗಳು

ಪುಸ್ತಕಗಳು
ಬದಲಾಯಿಸಿ

೨೦೦೭ ಗಾಯತ್ರಿ ಮಂತ್ರ್- ಏಕ್ ಲಘು ಪರಿಚಯ್ ( ಪರಿಚಯಾತ್ಮಕ ಗ್ರಂಥ ಹಿಂದಿಯಲ್ಲಿ)
೨೦೦೮ ಖಿಲ್ತೆ ಹೈ ಗುಲ್ ಯಹಾಂ (ಹಿಂದಿ ಕವಿತೆಗಳು)
೨೦೦೮ ಶ್ರೀ ಮಾಣಿಕ ಪ್ರಭು ಚರಿತ್ರೆ (ಅನುವಾದ)
೨೦೧೨ ಬಿಡುಗಡೆಯ ಹಾದಿ

 
ಅಖಿಲ ಕರ್ನಾಟಕ ಆಗಮತ್ರಯ ಮಹಾ ಮಂಡಳಿಯಿಂದ ಸನ್ಮಾನ ಪಡೆದು ಮಾಧ್ಯಮಗಳಿಗೆ ಪ್ರತಿಕ್ರಯಿಸುವಾಗ

ವೈಯಕ್ತಿಕ ಆಸಕ್ತಿ ಮತ್ತು ಹವ್ಯಾಸಗಳು

ಬದಲಾಯಿಸಿ

ಅನೇಕ ಭಾಷೆಗಳ ಸಿನೆಮಾಗಳನ್ನು ನೋಡುವುದು, ಅವುಗಳ ಬಗ್ಗೆ ಬರೆಯುವುದು, ಸ್ಟ್ರೀಟ್ ಫೋಟೋಗ್ರಫಿ, ಭಗವದ್ಗೀತೆ, ಬ್ರಹ್ಮಸೂತ್ರ ಹಾಗೂ ಉಪನಿಷತ್ತುಗಳ ಮೇಲೆ ಶಂಕರಾಚಾರ್ಯರು ಬರೆದ ಭಾಷ್ಯಗಳನ್ನು ಅಧ್ಯಯನ ಮಾಡುವುದು, ಯೋಗಸಾಧನೆ, ರಾಮನಾಮ ಜಪಸಾಧನೆ ಮುಂತಾದವುಗಳು ಇವರ ವೈಯಕ್ತಿಕ ಆಸಕ್ತಿ ಹಾಗೂ ಅಭಿರುಚಿಗಳು