ದಕ್ಷಿಣ ಭಾರತದ ಶಾಸನಗಳಲ್ಲಿ ಕಾಲಗಣನೆ


ಸೂರ್ಯನ ಉದಯಾಸ್ತಗಳ ಆವರ್ತನ, ಚಂದ್ರ ಬಿಂಬದ ವೈರೂಪ್ಯಗಳ ಅವರ್ತನ, ಹಾಗೇ ಋತುಗಳ ಮತ್ತು ಆಕಾಶದಲ್ಲಿನ ನಕ್ಷತ್ರಗಳ ಆವರ್ತನ; ಇವುಗಳು ಕ್ರಮವಾಗಿ ದಿನ, ತಿಂಗಳು ಹಾಗೂ ವರ್ಷಗಳೆಂಬ ಕಾಲಾವಧಿಯ ಗಣನೆಗೆ ನಾಂದಿಯಾಯಿತು. ಹೀಗೆ ರೂಪುಗೊಂಡಿದ್ದ ಕಾಲಗಣನೆ ಬಹು ಪ್ರಾಚೀನ ಕಾಲದಿಂದಲೇ ವಿಶ್ವದಾದ್ಯಂತ ಬೇರೆ ಬೇರೆ ಪ್ರದೇಶಗಳಲ್ಲಿ ವಿಭಿನ್ನ ರೀತಿ ಮತ್ತು ಹೆಸರುಗಳಲ್ಲಿ ಬಳಕೆಗೆ ಬಂದಿದೆ.ಹೀಗಾಗಿ ದಕ್ಷಿಣ ಭಾರತ ಶಾಸನ ಪ್ರಸಿದ್ಧಿ ಪಡೆದಿತ್ತು.

ರಾಜನ ಆಡಳಿತ ವರ್ಷವನ್ನು ಗಣಿಸುವ ಪದ್ದತಿ

ಬದಲಾಯಿಸಿ

ಭಾರತದಲ್ಲಿ ಸುಮಾರು ಕ್ರಿಸ್ತಶಕದ ಆರಂಭದ ಕಾಲಕ್ಕಾಗಲೇ ರಾಜನ ಆಡಳಿತ ವರ್ಷವನ್ನು ಗಣಿಸುವ ಪದ್ದತಿ ಬಳಕೆಯಲ್ಲಿದ್ದ ಬಗ್ಗೆ ಶಾಸಗಳು ಆಧಾರವಾಗಿವೆ.‘ದುವಾದಸ ವಸಾಭಿಸಿತೇನ ಮೇ ಇಯಂ ಅನಪಯಿತೆ’ [ನನ್ನ (ಪಟ್ಟಾಭಿಷೇಕವಾದ) ೧೨ ವರ್ಷಗಳು ಆಗಿರುವಾಗ ಈ ಆಜ್ಞೆಯನ್ನು ಹೊರಡಿಸಿರುತ್ತೇನೆ] ಎಂಬ ಮಾತು ಅಶೋಕನ ಶಾಸನಗಳಲ್ಲೇ ಉಕ್ತವಾಗಿದೆ. ಹಾಗೇ, ರಾಜರು ತಮ್ಮ ಆಡಳಿತ ವರ್ಷವನ್ನು ಉಲ್ಲೇಖಿಸುವ ಪ್ರವೃತ್ತಿ ದಖ್ಖನ್ನಿನ ಶಾತವಾಹನ, ಬಂಗಾಳದ ಪಾಲರು, ಚಂದ್ರರು; ಅಸ್ಸಾಮಿನ ಬ್ರಹ್ಮಪಾಲ ದೊರೆಗಳು; ದಕ್ಷಿಣ ಭಾರತದ ಪಲ್ಲವ, ಚೋಳ, ಪಾಂಡ್ಯ, ಹಾಗೇ ಕ್ರಿ.ಶ. ೬ನೆಯ ಶತಮಾನಕ್ಕಿಂತ ಹಿಂದಿನ ಕರ್ನಾಟಕದ ಪ್ರಸಿದ್ಧ ಅರಸು ಮನೆತನಗಳವರಾದ ಪ್ರಾಚೀನ ಗಂಗ, ಕದಂಬ ಹಾಗೂ ಬಾದಾಮಿಯ ಚಲುಕ್ಯರ ಆಳ್ವಿಕೆಯ ಕಾಲದ ಶಾಸನಗಳಲ್ಲೂ ಕಂಡುಬರುತ್ತದೆ.

ಶಾತವಾಹನರ ಮಾಂಡಲಿಕರಾಗಿದ್ದ ಚುಟುಗಳ ಬನವಾಸಿಯ ನಾಗಾ ಶಾಸನದಲ್ಲಿ ‘ಸಂವತ್ಸರ ೧೦-೨ ಹೇಮಂತಾನ ಪಖೋ ೨ ದಿವಸ ೧’ ಎಂಬ ಉಲ್ಲೇಖವಿದೆ. ಇಲ್ಲಿ ಒಂದು ವರ್ಷಕ್ಕೆ ಮೂರು ಋತುಗಳು; ಅಂದರೆ: ಗ್ರೀಷ್ಮ, ವರ್ಷ ಮತ್ತು ಹೇಮಂತ (ಬೇಸಿಗೆ, ಮಳೆಗಾಲ ಮತ್ತು ಚಳಿಗಾಲ), ಒಂದು ಋತುವಿಗೆ ಎಂಟು ಪಕ್ಷಗಳು, ಒಂದು ಪಕ್ಷಕ್ಕೆ ಹದಿನೈದು ದಿನಗಳು - ಎಂಬ ಗಣನೆ ಬಳಕೆಯಲ್ಲಿದ್ದುದು ಗೋಚರಿಸುತ್ತದೆ. ಶಾತವಾಹನರ ಅನಂತರ ದಕ್ಷ್ಷಿಣ ಭಾರತ ಪ್ರದೇಶಗಳು ಪಲ್ಲವ, ಗಂಗ, ಕದಂಬ, ಚೋಳ, ಚೇರ ಪಾಂಡ್ಯರೇ ಮೊದಲಾದವರ ಆಳ್ವಿಕೆಗೆ ಒಳಪಟ್ಟಿದ್ದಿತು. ಅವರ ಪ್ರಾಚೀನ ಶಾಸನಗಳಲ್ಲಿ ರಾಜನ ಆಡಳಿತ ವರ್ಷ ಗಣನೆಯೇ ವಿಶೇಷವಾಗಿ ಬಳಕೆಯಾಗಿರುವುದು ಕಂಡು ಬರುತ್ತದೆ. ಋತು, ಪಕ್ಷ ಮತ್ತು ದಿನಗಳ ಗಣನೆಯ ಜೊತೆಗೆ ಹಲವು ಸಂದರ್ಭಗಳಲ್ಲಿ ನಕ್ಷತ್ರ, ಮೂಹೂರ್ತಗಳ ಉಲ್ಲೇಖಗಳೂ ಇರುವುದುಂಟು.

ಕದಂಬ ಮೃಗೇಶವರ್ಮನ ಎರಡನೆಯ ವರ್ಷದ ತಾಮ್ರ ಶಾಸನದಲ್ಲಿ ‘ಶ್ರೀ ವಿಜಯ ಶಿವಮೃಗೇಶವರ್ಮ್ಮಣಃ ವಿಜಯವೈಜಯಿಕಃ ಸಂವತ್ಸರಃ ದ್ವಿತೀಯಃ ಹೇಮಂತ ಪಕ್ಷಃ ಚತುರ್ತ್ಥ ತಿಥಿರ್ದ್ದಶಮೀ’ (ಎರಡನೆಯ ವರ್ಷದ ಹೇಮಂತ ಋತುವಿನ ೪ನೆಯ ಪಕ್ಷ ೧೦ನೆಯ ತಿಥಿ) ಎಂದು ಉಕ್ತವಾಗಿದೆ.

ಗಂಗರಸರ ಕಾಲದ ಹಿಂದೂಪುರ ತಾಲೂಕಿನ ಶಾಸನಕೋಟೆ ಗ್ರಾಮದ ತಾಮ್ರ ಶಾಸನದಲ್ಲಿ ‘ಪ್ರಥಮೇ ಸಂವತ್ಸರೇ ಫಾಲ್ಗುನ ಮಾಸೆ ಶುಕ್ಲಪಕ್ಷೇ ತಿಥೌದಶಮ್ಯಾಂ’ಎಂದು ಉಕ್ತವಾಗಿದೆ. ಗಂಗ ದುರ್ವಿನೀತನ ಉತ್ತನೂರು ತಾಮ್ರ ಶಾಸನದಲ್ಲಿ ‘.............ವರ್ತಮಾನೇ ವಿಂಶತ್ತಮೇ ವಿಜಯ ಸಂವತ್ಸರೇ ಕಾರ್ತಿಕ ಮಾಸೆ ಪೌರ್ಣಮ್ಯಾಸಂ ತಿಥೌ ಕೃತ್ತಿಕ ನಕ್ಷತ್ರೇ ಅಭಿಜಿತ್ ಮೂಹೂರ್ತೆ’ ಎಂದು ಮೂಹೂರ್ತದ ಉಲ್ಲೇಖ ಕೂಡ ಬಂದಿದೆ. ಹಾಗೇ ಪಲ್ಲವರ ತಾಮ ಶಾಸನದಲ್ಲಿ ‘ಧರ್ಮ್ಮಮಹಾರಾಜಃ ಶ್ರೀಕಂದವರ್ಮ್ಮಣಃ ಪ್ರವರ್ದ್ಧಮಾನ ವಿಜಯರಾಜ್ಯ ದ್ವಿತೀಯ ಸಂವತ್ಸರೇ......’ (ಪಲ್ಲವ ಶ್ರೀಕಂದವರ್ಮನ ತಾಮ್ರಶಾಸನಗಳು; ಇತಿಹಾಸ ದರ್ಶನ, ಸಂಪುಟ ೨೫, ಪುಟ ೨೬-೨೮) ಎಂದು ಉಲ್ಲೇಖವಾಗಿದೆ.

ಮುಳಬಾಗಲು ತಾಲೂಕು ಭೈರಕೂರು ಸ್ಥಳದಲ್ಲಿನ ಚೋಳರಾಜ ರಾಜೇಂದ್ರ ಚೋಳನ ಕನ್ನಡ ಶಾಸನದಲ್ಲಿ ‘ಸ್ವಸ್ತಿ ಮದಿರೆಗೊಣ್ಡ ಕೊಪ್ಪರಗೇಶರಿ ವರ್ಮ್ಮಂಗೆ ವರಿಷಮಿರ್ಪ್ಪತ್ತೊಮ್ಬತ್ತರೊಳ್ಬಯ್ದಕೂರ ಮಾರೆಮ್ಮ .......’ (ಎ.ಕ.೧೦, ರೈಸ್ ಆವೃತ್ತಿ, ಮುಳಬಾಗಲು ೨೦೩) ಎಂಬ ಉಲ್ಲೇಖವಿದೆ.

‘ಸ್ವಸ್ತಿ ಶ್ರೀ ಕೋ ಮಾರಪನ್ಮರಾನ ಸುಂದರಪಾಂಡಿಯ ದೇವರ್‌ಕ್ಕು ಯಾಣ್ಡು ೩ವದು......’ (ವೇ. ವೇದಾಚಲಂ., ಪಾಂಡ್ಯನಾಟ್ಟಿಲ್ ವಾಣಾದಿರಾಯರ್‌ಗಳ್, ೧೯೮೭, ಪು. ೧೮೨) ಎಂಬ ಉಲ್ಲೇಖ ಪಾಂಡ್ಯರಾಜರ ಶಾಸನವೊಂದರಲ್ಲಿ ಬಂದಿದೆ.

ಹೀಗೇ ಶಾಸನಗಳಲ್ಲಿ ರಾಜನ ಆಡಳಿತ ವರ್ಷಗಳೇ ಪ್ರಧಾನವಾಗಿ ಗಣನೆಯಾಗುತ್ತಿದುದು ಕಂಡುಬರುತ್ತದೆ.

ಶಕ ವರ್ಷಗಳು ಮತ್ತು ಶಾಲಿವಾಹನ ಶಕೆ

ಬದಲಾಯಿಸಿ

ಮುಂದೆ ಆರನೆಯ ಶತಮಾನದ ಅನಂತರದಲ್ಲಿ ‘ಶಕ’ ವರ್ಷದ ಉಲ್ಲೇಖಗಳು ಶಾಸನಗಳಲ್ಲಿ ಕಂಡುಬರುತ್ತದೆ. ‘ಶಕ’ವರ್ಷವೆಂಬುದು ಕುಷಾಣರ ದೊರೆ ಕಾನಿಷ್ಕನ ಆಡಳಿತ ವರ್ಷವೆಂದೂ ಹೇಳಲಾಗಿದೆ. ಆದರೆ, ವಾಸ್ತವವಾಗಿ ಅದು ದಖ್ಖನ್ನಿನ ಪ್ರಸಿದ್ಧ ಅರಸನಾದ ಶಾತವಾಹನ ವಂಶದ ಗೌತಮಿಪುತ್ರ ಶಾತಕರ್ಣಿಯ ಆಡಳಿತ ವರ್ಷವೆಂದು ಹಿರಿಯ ಸಂಶೋಧಕರಾಗಿದ್ದ ಮಾನ್ಯ ಎಂ. ಗೋವಿದ ಪೈ ಅವರು ಪ್ರತಿಪಾದಿಸಿದ್ದಾರೆ. ಆರನೆಯ ಶತಮಾನದ ನಂತರದ ದಕ್ಷಿಣ ಭಾರತದ, ಅಂದರೆ; ಕರ್ನಾಟಕದ ಬಾದಾಮಿ ಚಲುಕ್ಯರೇ ಮೊದಲಾದವರ ಶಾಸನಗಳಲ್ಲಿ ಈ ಶಕ ವರ್ಷಗಳ ಉಲ್ಲೇಖಗಳು ವಿಶೇಷವಾಗಿ ಕಾಣಿಸಿಕೊಂಡಿರುವುದನ್ನು ಗಮನಿಸಬಹುದಾಗಿದೆ. ‘ಶಕ ವರ್ಷ್ಷೇಷು ಚತುಶ್ಶತೇಷು ಪಞ ಷಷ್ಟಿಯುತೇಷು’ (೪೬೫=ಕ್ರಿ.ಶ.೫೪೩) ಎಂಬ ಉಲ್ಲೇಖವಿರುವ ಶಾಸನ ಬಾದಾಮಿಯಲ್ಲಿದ್ದು ಮೊದಲನೆಯ ಪುಲಿಕೇಶಿಯದಾಗಿದೆ. ಇದು ಕರ್ನಾಟಕದಲ್ಲಿ ದೊರೆತಿರುವ ಪ್ರಾಚೀನತಮವಾದ ಶಕವರ್ಷದ ಉಲ್ಲೇಖವಿರುವ ಶಾಸನವಾಗಿದೆ. ಇದು ಕ್ರಿ.ಶ. ೭೮ ರಿಂದ ಆರಂಭವಾಗುತ್ತದೆ.

ಚಲುಕ್ಯ ದೊರೆ ಮಂಗಲೀಶನ ಶಾಸನವೊಂದರಲ್ಲಿ ‘ಶ್ರೀಮಂಗಲೀಶ್ವರ ರಣವಿಕ್ರಾನ್ತಃ ಪ್ರವರ್ದ್ಧಮಾನ ರಾಜ್ಯ ಸಂವತ್ಸರೇ ದ್ವಾದಶೇ ಶಕನೃಪ ರಾಜ್ಯಾಭಿಷೇಕ ಸಂವತ್ಸರೇಷ್ಟೆತಿಕ್ರಾನ್ತೇಷು ಪಂಚಸುತೇಷು’ ಎಂದು ತನ್ನ ಆಡಳಿತದ ೧೨ನೆಯ ವರ್ಷ ಹಾಗೂ ಶಕನೃಪತಿ ರಾಜ್ಯಾಭಿಷೇಕದ ೫೦೦ನೆಯ ವರ್ಷವನ್ನು ಉಲ್ಲೇಖಿಸಲಾಗಿದೆ. ಇದೇ ವಂಶದ ವಿನಯಾದಿತ್ಯ, ಕೀರ್ತಿವರ್ಮರ ಶಾಸನಗಳಲ್ಲೂ ಶಕವರ್ಷವನ್ನು ಬಳಸಿರುವುದು ಕಂಡುಬರುತ್ತದೆ, ‘ಶಾಲಿವಾಹನ ಶಕ ೧೧೧೦ರ ಉಲ್ಲೇಖ ಪಂಡರಾಪುರದ ಮರಾಠಿ ಶಾಸನದಲ್ಲಿ ಬಂದಿದ್ದು, ಇದೇ ಪ್ರಾಯಶಃ ‘ಶಾಲಿವಾಹನ ಶಕೆ’ ಎಂಬುದರ ಪ್ರಾಚೀನತಮ ಉಲ್ಲೇಖವಿದ್ದಂತೆ ತೋರುತ್ತದೆ. ಸೇಉಣರ ಶಾಸನಗಳಲ್ಲೂ ಅನಂತರದ ಅನೇಕ ದಾಖಲೆಗಳಲ್ಲಿಯೂ ವಿಶೇಷವಾಗಿ ವಿಜಯನಗರದ ಅರಸರ ಶಾಸನಗಳಲ್ಲಿ ‘ಶಾಲಿವಾಹನಶಕೆ’ಯ ಪ್ರಯೋಗ ಹೆಚ್ಚಾಗಿ ಕಂಡು ಬರುತ್ತದೆ.

ಶಕವರ್ಷವನ್ನು ಕರ್ನಾಟಕದ ಪ್ರಸಿದ್ಧ ಅರಸುಮನೆತನಗಳಾದ ರಾಷ್ಟ್ರಕೂಟ, ಕಲ್ಯಾಣದ ಚಾಳುಕ್ಯ, ಮತ್ತು ಅವರ ಮಾಂಡಲಿಕರಾಗಿದ್ದ ಕಳಚೂರ್ಯು, ಸೇಉಣ ಹಾಗೂ ಹೊಯ್ಸಳರು ವ್ಯಾಪಕವಾಗಿ ಬಳಸಿರುವುದು ಕಂಡುಬರುತ್ತದೆ. ಇಂದಿಗೂ ಭಾರತದಾದ್ಯಂತ ತಮ್ಮ ಪಾರಂಪರಿಕ ಪಂಚಾಂಗಗಳಲ್ಲಿ ವಿಶೇಷವಾಗಿ ಬಳಕೆಗೊಳ್ಳುತ್ತಿರುವ ಶಕೆಯೆಂದರೆ, ‘ಶಾಲಿವಾಹನ ಶಕೆ’ಯೇ ಆಗಿದೆ. ಅಲ್ಲದೆ ಇದು ಇಂದು ಭಾರತ ಸರ್ಕಾರದ ರಾಷ್ಟ್ರೀಯ ಪಂಚಾಂಗದಲ್ಲೂ ತನ್ನ ಸ್ಥಾನವನ್ನು ಉಳಿಸಿಕೊಡಿದೆ.

ದಕ್ಷಿಣ ಭಾರತದ ಶಾಸನಗಳಲ್ಲಿ ಈ ‘ಶಾಲಿವಾಹನಶಕೆಯನ್ನು ಮಾತ್ರವಲ್ಲದೆ ‘ಕಲಿಯುಗ ಸಂವತ್ಸರ’, ‘ಕೊಲ್ಲಂ ಸಂವತ್ಸರ’, ‘ಚಾಳುಕ್ಯ ವಿಕ್ರಮ ವರ್ಷ’,‘ಪುದುವೈಪ್ಪು ಸಂವತ್ಸರ’, ‘ಹಿಜಿ’, ‘ಫಸ್ಲಿ’, ‘ಶೂಹೂರ್’, ‘ಮೌಲಾದಿ ಸಂವತ್ಸರ’ಗಳೂ ಶಾಸನಗಳಲ್ಲಿ ಕಂಡುಬರುತ್ತವೆ. ಈ ಸಂವತ್ಸರಗಳಲ್ಲಿ ಕೆಲವು ಚಾಂದ್ರಸೌರಮಾನ, ಸೌರಮಾನ ಹಾಗೂ ಚಾಂದ್ರಮಾನ ಪದ್ಧತಿಗಳಲ್ಲಿ ಗಣನೆ ಮಾಡುತ್ತಿರುವುದು ಕಂಡುಬರುತ್ತದೆ. ಈ ಪದ್ಧತಿಗಳ ಜೊತೆ ಜೊತೆಗೇ, ಬ್ರಾಹ್ಸ್ಪತ್ಯ ಮಾನದ ಅರವತ್ತು ವರ್ಷ ಚಕ್ರದ ಸಂವತ್ಸರದ ಗಣನೆಯನ್ನು ನಿಯತವಾಗಿ ಬಳಸಿರುವುದು ಕೂಡ ಕಂಡುಬರುತ್ತದೆ.

ತಿಂಗಳ ಗಣನೆಗೆ ಚಂದ್ರನ ಚಲನೆಯನ್ನೂ, ವರ್ಷದ ಗಣನೆಗೆ ಸೂರ್ಯನ ಚಲನೆಯನ್ನು ಸಮೀಕಣಗೊಳಿಸಿ ಬೇಸಿಗೆ, ಮಳೆ, ಚಳಿಗಾಲಗಳು ಎಂಬ ಋತುಮಾನಗಳಿಗೆ ಹೊಂದಾಣಿಕೆ ಯಾಗುವಂತೆ ರೂಪಿಸಿಕೊಂಡ ಪಂಚಾಂಗವೇ ಚಾಂದ್ರಸೌರಮಾನ ಪಂಚಾಂಗ. ಈ ಪಂಚಾಂಗದ ಗಣನೆಯಲ್ಲೂ ತಿಂಗಳುಗಳನ್ನು ಅಮಾವಾಸ್ಯೆಯ ನಂತರದಿಂದ ಗಣಿಸುಸುವುದು; ಪೌರ್ಣಮೆಯ ನಂತರದಿಂದ ಗಣಿಸುವುದು, ಎಂಬ ಎರಡು ವಿಧಗಳಿವೆ. ದಕ್ಷಿಣ ಭಾರತದ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ಅಲ್ಲದೆ ಉತ್ತರ ಭಾರತದ ಗುಜರಾತ್, ಒರಿಸ್ಸಾಗಳಲ್ಲೂ ತಿಂಗಳ ಗಣನೆ ‘ಅಮಾಂತ’ ಅಂದರೆ; ಅಮಾವಾಸ್ಯೆಯ ನಂತರದಿಂದ ಗಣಿಸುವುದು ರೂಢಿಯಲ್ಲಿದೆ. ಭಾರತದ ಉಳಿದ ಪ್ರದೇಶಗಳೆಂದರೆ; ಮಧ್ಯ ಪ್ರದೇಶ, ರಾಜಾಸ್ಥಾನ, ಉತ್ತರ ಪ್ರದೇಶ, ಬಿಹಾರ, ಜಮ್ಮು ಕಾಶ್ಮೀರ, ಹಾಗೂ ಹಿಮಾಚಲ ಪ್ರದೇಶಗಳಲ್ಲಿ ‘ಪೂರ್ಣಮಾಂತ’ವಾಗಿ ಬಳಕೆಯಲ್ಲಿದೆ.

ಸೌರಮಾನ ಪದ್ಧತಿಯ ಕಾಲಗಣನೆ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ತಮಿಳುನಾಡು, ಕೇರಳ ಹಾಗೂ ಕರ್ನಾಟಕದ ತುಳುನಾಡು ಪ್ರದೇಶಗಳಲ್ಲಿ ಬಳಕೆಯಲ್ಲಿರುವುದು ಕಂಡುಬರುತ್ತದೆ. ಹಾಗೇ ಉತ್ತರ ಭಾರತದ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂಗಳಲ್ಲೂ ಬಳಕೆ ಇದೆ. ಈ ಸೌರಮಾನದಲ್ಲೂ ತಿಂಗಳ ಗಣನೆಯನ್ನು ಅಮಾಂತದಿಂದ ಇಲ್ಲವೇ ಪೂರ್ಣಮಾಂತದಿಂದ ಗಣಿಸುವುದು ಕಂಡುಬರುತ್ತದೆ. ದಕ್ಷಿಣ ಭಾರತದ ತಮಿಳುನಾಡು, ಕೇರಳ ಹಾಗೂ ಉತ್ತರ ಭಾರತದ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂಗಳಲ್ಲಿ ತಿಂಗಳ ಗಣನೆ ಅಮಾಂತದಿಂದ ಮಾಡಿದರೆ, ಜಾರ್ಖಾಂಾಡ್, ಹರಿಯಾಣ, ಪಂಜಾಬ್, ತ್ರಿಪುರ, ನೇಪಾಳ, ಭೂತಾನ್‌ಗಳಲ್ಲಿ ತಿಂಗಳ ಗಣನೆ, ಸೌರಮಾನವಾಗಿರಲೀ, ಚಾಂದ್ರಸೌರಮಾನವಾಗಿರಲಿ; ಅಮಾಂತವಾಗಿಯೇ ಗಣಿಸುಸುವುದು ವಿಶೇಷ.

ದಕ್ಷಿಣ ಭಾರತದಲ್ಲಿ ಚಾಂದ್ರಸೌರಮಾನ ಪದ್ಧತಿಯಲ್ಲಿ ತಿಂಗಳುಗಳ ಹೆಸರುಗಳನ್ನು ರಾಶಿಚಕ್ರದ ನಕ್ಷತ್ರಗಳ ಹಿನ್ನೆಲೆಯಲ್ಲಿ ಹೆಸರಿಸಲಾಗಿದೆ. ಅಂದರೆ: ಚೈತ್ರ, ವೈಶಾಖ, .... ಇತ್ಯಾದಿ ತಿಂಗಳುಗಳ ಹೆಸರುಗಳನ್ನಾಗಿ ಗುರತಿಸಿದರೆ; ಉತ್ತರ ಕೇರಳ ಪ್ರದೇಶದಲ್ಲಿ ದ್ವಾದಶಿ ರಾಶಿಗಳ ಹೆಸರುಗಳಿಂದ ಅಂದರೆ: ಮೇಷ, ವೃಷಭ, ಮಿಥುನ, ಕರ್ಕಟ, ಸಿಂಹ, ಕನ್ಯಾ, ... ಇತ್ಯಾದಿ ಹೆಸರುಗಳಿಂದ ತಿಂಗಳುಗಳನ್ನು ಕರೆದಿರುವುದು ಕಂಡುಬರುತ್ತದೆ. ಸೌರಮಾನ ಪದ್ಧತಿಯನ್ನು ಅನುಸರಿಸುವ ತಮಿಳುನಾಡು ಪ್ರದೇಶದಲ್ಲಿ ತಿಂಗಳುಗಳ ಹೆಸರುಗಳು; ಚಾಂದ್ರಸೌರ ಪದ್ಧತಿಯಂತೆ ನಕ್ಷತ್ರಗಳನ್ನೇ ಪ್ರಧಾನವಾಗಿ ಅನುಸರಿಸಿದರೂ, ತಿಂಗಳ ಹೆಸರುಗಳು ತುಸು ಭಿನ್ನವಾಗಿ ಕಂಡುಬರುತ್ತವೆ. ಅವುಗಳ ಪರಸ್ಪರ ಸಂಬಂಧ ಹೋಲಿಕೆಗಳ ಕೋಷ್ಠಕಕವನ್ನು ಮುಂದೆ ನೀಡಲಾಗಿದೆ.

ವರ್ಷದ ಆರಂಭದ ತೇದಿ ಬೇರೆ ಬೇರೆ ಪಂಚಾಂಗಗಳಲ್ಲಿ ಅನುಸರಿಸುವ ಪ್ರದೇಶಗಳಲ್ಲಿ ಭಿನ್ನವಾಗಿರುವುದುಂಟು.

ಚಾಂದ್ರಸೌರ ಪಂಚಾಂಗದಲ್ಲಿ ವರ್ಷದ ಆರಂಭ ಚೈತ್ರದಿಂದ (ಚೈತ್ರಾದಿ) ಆರಂಭವಾದರೆ, ಕೇರಳದ ಸೌರ ಪಂಚಾಂಗ ಕೊಲ್ಲಂ ಸಂವತ್ಸರವನ್ನು ಪ್ರಧಾನವಾಗಿ ರಾಶಿ ಚಕ್ರದ ಸಿಂಹ ಸಂಕ್ರಾಂತಿಯಿಂದ ಗಣಿಸಲಾಗುತ್ತದೆ.

ಒಟ್ಟಾರೆ ವರ್ಷದ ಆರಂಭದ ದಿನಗಳು ವಿಭಿನ್ನ ಪದ್ಧತಿಯ ಪಂಚಾಂಗಗಳಲ್ಲಿ ಹಾಗೂ ಪ್ರದೇಶಗಳಲ್ಲಿ ವಿಭಿನ್ನವಾಗಿರುವುದನ್ನು ಗಮನಿಸಬಹುದಾಗಿದೆ.

ಸೌರ ತಿಂಗಳುಗಳ ಮತ್ತು ರಾಶಿಗಳ ನಡುವಿನ ಸಂಬಂಧಸೌರ ತಿಂಗಳುಗಳ ಮತ್ತು ರಾಶಿಗಳ ನಡುವಿನ ಸಂಬಂಧ

ರಾಶಿ ಸಂಖ್ಯೆ ರಾಶಿಯ ಹೆಸರು ಬಹುತೇಕ ಸೌರಮಾನ ಪಂಚಾಂಗಳಲ್ಲಿನ ತಿಂಗಳ ಹೆಸರುಗಳು /ಪರ್ಯಾುಯಗಳು ತಮಿಳು ಸೌರಮಾನ ಪಂಚಾಂಗದಲ್ಲಿನ ತಿಂಗಳ ಹೆಸರು ಮಲೆಯಾಳ (ಕೇರಳ) ಸೌರ ಪಂಚಾಂಗದ ತಿಂಗಳ ಹೆಸರು ರಾಶಿ ರಾಶಿ ಸಂಖ್ಯೆ ರಾಶಿ ಸಂಖ್ಯೆ ರಾಶಿಯ ಹೆಸರು ರಾಶಿಯ ಹೆಸರು ರಾಶಿಯ ಹೆಸರು ಬಹುತೇಕ ಸೌರಮಾನ ಪಂಚಾಂಗಳಲ್ಲಿನ ತಿಂಗಳ ಹೆಸರುಗಳು ಬಹುತೇಕ ಸೌರಮಾನ ಪಂಚಾಂಗಳಲ್ಲಿನ ತಿಂಗಳ ಹೆಸರುಗಳು /ಪರ್ಯಾಯಯಗಳು ಬಹುತೇಕ ಸೌರಮಾನ ಪಂಚಾಂಗಳಲ್ಲಿನ ತಿಂಗಳ ಹೆಸರುಗಳು /ಪರ್ಯಾ ಯಗಳು ತಮಿಳು ಸೌರಮಾನ ಪಂಚಾಂಗದಲ್ಲಿನ ತಿಂಗಳ ಹೆಸರು ತಮಿಳು ಸೌರಮಾನ ಪಂಚಾಂಗದಲ್ಲಿನ ತಿಂಗಳ ಹೆಸರು ತಮಿಳು ಸೌರಮಾನ ಪಂಚಾಂಗದಲ್ಲಿನ ತಿಂಗಳ ಹೆಸರು ಮಲೆಯಾಳ (ಕೇರಳ) ಸೌರ ಪಂಚಾಂಗದ ಮಲೆಯಾಳ (ಕೇರಳ) ಸೌರ ಪಂಚಾಂಗದ ತಿಂಗಳ ಹೆಸರು ಮಲೆಯಾಳ (ಕೇರಳ) ಸೌರ ಪಂಚಾಂಗದ ತಿಂಗಳ ಹೆಸರು ರಾಶಿ ಸಂಖ್ಯೆ ರಾಶಿಯ ಹೆಸರು ಬಹುತೇಕ ಸೌರಮಾನ ಪಂಚಾಂಗಳಲ್ಲಿನ ತಿಂಗಳ ಹೆಸರುಗಳು /ಪರ್ಯಾಸಯಗಳು ತಮಿಳು ಸೌರಮಾನ ಪಂಚಾಂಗದಲ್ಲಿನ ತಿಂಗಳ ಹೆಸರು ಮಲೆಯಾಳ (ಕೇರಳ) ಸೌರ ಪಂಚಾಂಗದ ತಿಂಗಳ ಹೆಸರು

೧ ೧ ಮೇಷ ಮೇಷ ವೈಶಾಕ * /ಮಾಧವ ವೈಶಾಕ * /ಮಾಧವ (ರಾಧ) ವೈಶಾಕ * /ಮಾಧವ (ರಾಧ) ಚಿತ್ತರೈ * ಚಿತ್ತರೈ * ಮೇಷ ಮೇಷ ೧ ಮೇಷ ವೈಶಾಕ * /ಮಾಧವ (ರಾಧ) ಚಿತ್ತರೈ * ಮೇಷ
೨ ೨ ವೃಷಭ ವೃಷಭ ಜ್ಯೇಷ್ಠ ಜ್ಯೇಷ್ಠ / ಶುಕ್ರ ಜ್ಯೇಷ್ಠ / ಶುಕ್ರ ವೈಕಾಸಿ ವೈಕಾಸಿ ವೃಷಭ ವೃಷಭ ೨ ವೃಷಭ ಜ್ಯೇಷ್ಠ / ಶುಕ್ರ ವೈಕಾಸಿ ವೃಷಭ
೩ ೩ ಮಿಥುನ ಮಿಥುನ ಆಷಾಡ ಆಷಾಡ / ಶುಚಿ ಆಷಾಡ / ಶುಚಿ ಆಣಿ ಆಣಿ ಮಿಥುನ ಮಿಥುನ ೩ ಮಿಥುನ ಆಷಾಡ / ಶುಚಿ ಆಣಿ ಮಿಥುನ
೪ ೪ ಕರ್ಕಟ ಕರ್ಕಟ ಶ್ರಾವಣ ಶ್ರಾವಣ / ನಭ ಶ್ರಾವಣ / ನಭ ಆಡಿ ಆಡಿ ಕರ್ಕಟ ಕರ್ಕಟ ೪ ಕರ್ಕಟ ಶ್ರಾವಣ / ನಭ ಆಡಿ ಕರ್ಕಟ
೫ ೫ ಸಿಂಹ ಸಿಂಹ ಭಾದ್ರಪದ ಭಾದ್ರಪದ / ನಭಸ್ಯ ಭಾದ್ರಪದ / ನಭಸ್ಯ ಆವಣಿ ಆವಣಿ ಸಿಂಹ * ಸಿಂಹ * ೫ ಸಿಂಹ ಭಾದ್ರಪದ / ನಭಸ್ಯ ಆವಣಿ ಸಿಂಹ *
೬ ೬ ಕನ್ಯಾ ಕನ್ಯಾ ಆಶ್ವೀಜ ಆಶ್ವೀಜ / ಇಷ ಆಶ್ವೀಜ / ಇಷ ಪುರಟ್ಟಾಸಿ ಪುರಟ್ಟಾಸಿ ಕನ್ಯಾ ಕನ್ಯಾ ೬ ಕನ್ಯಾ ಆಶ್ವೀಜ / ಇಷ ಪುರಟ್ಟಾಸಿ ಕನ್ಯಾ
೭ ೭ ತುಲಾ ತುಲಾ ಕಾರ್ತಿಕ ಕಾರ್ತಿಕ / ಊರ್ಜ್ಜ ಕಾರ್ತಿಕ / ಊರ್ಜ್ಜ ಅರ್ಪ್ಪಸಿ ಅರ್ಪ್ಪಸಿ ತುಲಾ ತುಲಾ ೭ ತುಲಾ ಕಾರ್ತಿಕ / ಊರ್ಜ್ಜ ಅರ್ಪ್ಪಸಿ ತುಲಾ
೮ ೮ ವೃಶ್ಚಿಕ ವೃಶ್ಚಿಕ ಮಾರ್ಗಶಿರ ಮಾರ್ಗಶಿರ / ಸಹಸ್ಸು ಮಾರ್ಗಶಿರ / ಸಹಸ್ಸು ಕಾರ್ತಿಗೈ ಕಾರ್ತಿಗೈ ವೃಶ್ಚಿಕ ವೃಶ್ಚಿಕ ೮ ವೃಶ್ಚಿಕ ಮಾರ್ಗಶಿರ / ಸಹಸ್ಸು ಕಾರ್ತಿಗೈ ವೃಶ್ಚಿಕ
೯ ೯ ಧನುಸ್ ಧನುಸ್ ಪೌಷ ಪೌಷ / ಸಹಹ್ಯ ಪೌಷ / ಸಹಹ್ಯ ಮಾರ್ಗಳಿ ಮಾರ್ಗಳಿ ಧನುಸ್ ಧನುಸ್ ೯ ಧನುಸ್ ಪೌಷ / ಸಹಹ್ಯ ಮಾರ್ಗಳಿ ಧನುಸ್
೧೦ ೧೦ ಮಕರ ಮಕರ ಮಾಘ ಮಾಘ / ತಪಸ್ಸು ಮಾಘ / ತಪಸ್ಸು ತೈ ತೈ ಮಕರ ಮಕರ ೧೦ ಮಕರ ಮಾಘ / ತಪಸ್ಸು ತೈ ಮಕರ
೧೧ ೧೧ ಕುಂಭ ಕುಂಭ ಪಾಲ್ಗುಣ ಪಾಲ್ಗುಣ / ತಪಸ್ಯ ಪಾಲ್ಗುಣ / ತಪಸ್ಯ ಮಾಸಿ ಮಾಸಿ ಕುಂಭ ಕುಂಭ ೧೧ ಕುಂಭ ಪಾಲ್ಗುಣ / ತಪಸ್ಯ ಮಾಸಿ ಕುಂಭ
೧೨ ೧೨ ಮೀನ ಮೀನ ಚೈತ್ರ ಚೈತ್ರ / ಮಧು ಚೈತ್ರ / ಮಧು ಪಂಗುಣಿ ಪಂಗುಣಿ ಮೀನ ಮೀನ ೧೨ ಮೀನ ಚೈತ್ರ / ಮಧು ಪಂಗುಣಿ ಮೀನ

ಸೂಚನೆ: * ಈ ಚಿಹ್ನೆ, ವರ್ಷದ ಆರಂಭದ ತಿಂಗಳನ್ನು ಸೂಚಿಸುತ್ತದೆ.

ದಕ್ಷಿಣ ಭಾರತದ ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರ ಪ್ರದೇಶಗಳಲ್ಲಿ ಚಾಂದ್ರಸೌರಮಾನದ ಪಂಚಾಂಗವೇ ಬಳಕೆಯಲ್ಲಿದ್ದು ; ‘ಚಾಂದ್ರಮಾನ ಉಗಾದಿ’ಯಂದು ವರ್ಷದ ಮೊದಲನೆಯ ದಿನ ಆರಂಭವಾಗುರುತ್ತದೆ.

ತಮಿಳುನಾಡು, ಕೇರಳ ಮತ್ತು ತುಳುನಾಡು ಪ್ರದೇಶಗಳಲ್ಲಿ ಸೌರಮಾನ ಪಂಚಾಂಗವನ್ನು ಬಳಸುತ್ತಿದ್ದು ಬಹುಮಟ್ಟಿಗೆ ಚೈತ್ರಾದಿ ಕ್ರಮವನ್ನೇ ಬಳಸಿದರೂ ಮಲೆಯಾಳ ಪ್ರದೇದಲ್ಲಿ ಮಾತ್ರ ‘ಸಿಂಹ ಮಾಸ’ (ಭಾದ್ರಪದ=ಆಗಸ್ಟ್-ಸೆಪ್ಟಂಬರ್) ದಿಂದ ನೂತನ ವರ್ಷ (ಓಣಂ) ಆರಂಭಗೊಳ್ಳುತ್ತದೆ. ಇಲ್ಲಿ ತಿಂಗಳುಗಳಿಗೆ ರಾಶಿಯ ಹೆಸರನ್ನೇ ನೀಡಿರುವುದನ್ನು ಗಮನಿಸ ಬಹುದಾಗಿದೆ.

ಒಂದು ಚಾಂದ್ರ ತಿಂಗಳ ಸರಾಸರಿ ವ್ಯಾಪ್ತಿ ೨೯.೫೩೦೬ ದಿನಗಳು. ಸೌರ ತಿಂಗಳ ಸರಾಸರಿ ವ್ಯಾಪ್ತಿ ೩೦.೪೩೬೯ ದಿನಗಳು, ಅಂದರೆ: ಒಂದು ವಾಸ್ತವ ಸೌರಮಾನ ವರ್ಷಕ್ಕೂ ಚಾಂದ್ರಮಾನದ ವರ್ಷಕ್ಕೂ ಸ್ಥೂಲವಾಗಿ ಸುಮಾರು ೧೧ ದಿನಗಳ ವ್ಯತ್ಯಾಸವಿರುತ್ತದೆ. ಹಾಗಾಗಿ ಚಾಂದ್ರಮಾನದ ವರ್ಷವನ್ನು ಋತುಮಾನಗಳಿಗೆ ಅನುಸಾರವಾಗಿರುವ ಸೌರಮಾನದ ವರ್ಷದೊಂದಿಗೆ ಸರಿದೂಗಿಸಿಕೊಳ್ಳಲು ಮಾಡಿಕೊಂಡಿರುವುದೆ ಚಾಂದ್ರಸೌರಮಾನ ಸಂವತ್ಸರದ ಪಂಚಾಂಗ ವ್ಯವಸ್ಥೆಯಾಗಿದೆ. ಇದನ್ನು ಹಿಂದೂಗಳು ಸಾಮಾನ್ಯವಾಗಿ ಚಾಂದ್ರಮಾವೆಂದೇ ಕರೆಯುತ್ತಾರೆ. ಈ ಪದ್ಧತಿಯೇ ಭಾರತದಾದ್ಯಂತ ಹೆಚ್ಚು ಪ್ರಚಲಿತವಿರುವುದಾಗಿದೆ.

ಅನುಸರಿಸುವ ಪಂಚಾಂಗ ಚಾಂದ್ರಮಾನವಾಗಲೀ ಚಾಂದ್ರಸೌರಮಾನವಾಗಿರಲೀ, ಸೌರಮಾನವಾಗಲಿ - ಧಾರ್ಮಿಕ ಆಚರಣೆಗಳಿಗೆ ತಿಥಿ, ವಾರ, ನಕ್ಷತ್ರಗಳ ಗಣನೆಯೇ ಪ್ರಧಾನವಾಗುವುದರಿಂದ ಈ ರೀತಿಯ ಹೊಂದಾಣಿಕೆ ತೀರ ಅಗತ್ಯವಾಗುತ್ತದೆ. ಆ ಕಾರಣದಿಂದಲೇ ಚಾಂದ್ರಸೌರ ಪಂಚಾಂಗ ವ್ಯವಸ್ಥೆಯಲ್ಲಿ ನಿಯತ ಕಾಲದಲ್ಲಿ ಅಧಿಕ ಅಥವಾ ಶೂನ್ಯ ತಿಂಗಳುಗಳ ವ್ಯವಸ್ಥೆಯನ್ನು ಮಾಡಿಕೊಂಡಿರುವುದು.

ದಕ್ಷಿಣ ಭಾರತದಲ್ಲಿ ಪ್ರಚಲಿತವಿರುವ ‘ಶಾಲಿವಾಹನ ಶಕೆ’, ‘ಕಲಿಯುಗ’ ಸಂವತ್ಸರಗಳ ಗಣನೆಯಲ್ಲಿ ಚೈತ್ರಾದಿ (ಮಾರ್ಚಿ-ಎಪ್ರಿಲ್) ಕ್ರಮವನ್ನು ಅನುಸರಿಸಿದ ಚಾಂದ್ರಸೌರ ಪದ್ಧತಿಯೇ ಪ್ರಧಾನವಾಗಿದ್ದರೆ, ಸೌರ ಪದ್ಧತಿಯಲ್ಲಿ ವೈಶಾಖಾದಿ ಅಥವಾ ಸಿಂಹಾದಿ (ಭಾದ್ರಪದ) ಪದ್ಧತಿಗಳನ್ನು ಅನುಸರಿಸಿರುವುದು ಕಂಡುಬರುತ್ತದೆ.

ಶಾಲಿವಾಹನ ಶಕೆಯ ಬಗ್ಗೆ ಹಿಂದಿನ ಪುಟಗಳಲ್ಲಿ ಸ್ಥೂಲ ವಿವರಣೆಯನ್ನು ನೀಡಲಾಗಿದೆ. ಪ್ರಸ್ತುತ ದಕ್ಷಿಣ ಭಾರತ ಪ್ರದೇಶದಲ್ಲಿನ ಶಾಸನಗಳಲ್ಲಿ ಉಕ್ತವಾಗಿರುವ ಸಂವತ್ಸರಗಳ ಬಗ್ಗೆ ಗಮನಿಸೋಣ.

ಕಲಿಯುಗ ಸಂವತ್ಸರ

ಬದಲಾಯಿಸಿ

ಬಾದಾಮಿ ಚಲುಕ್ಯರ ಕಾಲದಲ್ಲೇ ಕಲಿಯುಗ ಸಂವತ್ಸರದ ಉಲ್ಲೇಖ ಬಂದಿದೆ. ಮಹಾಭಾರತದ ಯುದ್ಧವು ಕ್ರಿ.ಪೂ. ೩೧೦೨ ರಲ್ಲಿ ನಡೆಯಿತು. ಆ ಯುದ್ಧದ ನಂತರ ಕಲಿಯುಗ ಪ್ರಾರಂಭವಾಯಿತು. ಅಂದರೆ ಮಹಾಭಾರತದ ಧರ್ಮರಾಯ (ಯುಧಿಷ್ಠಿರ)ನು ಪಟ್ಟಕ್ಕೆ ಬಂದ ಕಾಲ ಎಂಬ ಹೇಳಿಕೆಗಳ ಆಧಾರದ ಮೇಲೆ ಈ ಸಂವತ್ಸರದ ಗಣನೆ ನಿಂತಿದೆ. ಇದು ದಕ್ಷಿಣ ಭಾರತದ ಅನೇಕ ಶಾಸನಗಳಲ್ಲಿ ಕಾಣಿಸಿಕೊಂಡಿದೆ. ಬಹುತೇಕ ಸಂದರ್ಭಗಳಲ್ಲಿ ಶಕ(ಶಾಲಿವಾಹನ ಶಕ) ಇಲ್ಲವೆ ಇತರ ಸಂವತ್ಸರಗಳೊಂದಿಗೆ ಇದು ಬಳಕೆಯಾಗಿದೆ. ಇಂದಿಗೂ ಭಾರತದ ಪಾರಂಪರಿಕ ಪಂಚಾಂಗಗಳಲ್ಲಿ ಇದು ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಕ್ರಿ.ಶ. ೬೩೪ ರ ಐಹೊಳೆಯ ಶಾಸನದಲ್ಲಿ ಈ ಸಂವತ್ಸರದ ಉಲ್ಲೇಖವಿದ್ದು ಶಕ ೫೫೬, ಭಾರತ ಯುದ್ಧದಿಂದ ೩೭೩೫ ವರ್ಷಗಳು ಸಂಧಿಸಿದ ಕಲಿಕಾಲದಲ್ಲಿ ಅಂದರರೆ ಕಲಿಯುಗ ಸಂವತ್ಸರ ೩೭೩೫ ನೆಯ ವರ್ಷದಂದು ಶಾಸನ ಹಾಕಿಸಿದ ವಿವರ ಬಂದಿದೆ. ‘ಸ್ವಸ್ತಿ ಕಲಿವರುಷ ೪೫೧೮ ಶಕಾಬ್ದ ೧೩೩೯ನೆಯ ಮೇಲೆ ಸಲ್ಲುವ ಹೇವಿಳಂಬಿ ಸಂವತ್ಸರದ ಆಷಾಢ ಶು ಸೋ’ ಎಂಬ ಉಲ್ಲೇಖ ಕೋಲಾರ ಜಿಲ್ಲೆಯ ಶಾಸನವೊಂದರಲ್ಲಿ ಬಂದಿದೆ. ಇಲ್ಲಿ ಪಕ್ಷ ಮತ್ತು ವಾರಗಳನ್ನು ಸೂಚಿಸಲು ಶು. ಸೋ. ಎಂಬ ಸಂಕ್ಷೇಪಗಳನ್ನು ಕಾಣಬಹುದಾಗಿದೆ. ಈ ರೀತಿಯ ಸಂಕ್ಷೇಪಗಳ ಬಳಕೆ ಶಾಸನಗಳ ಕಾಲಗಣನಾ ಭಾಗದಲ್ಲಿ ಬಹು ಪ್ರಾಚೀನ ಕಾಲದಿಂದಲೇ ಬಳಕೆಗೊಂಡಿರುವುದನ್ನು ಕಾಣಬಹುದಾಗಿದೆ.

ಕೊಲ್ಲಂ ಸಂವತ್ಸರ

ಬದಲಾಯಿಸಿ

ಕೇರಳದ ಕೊಚಿನ್ ಪ್ರದೇಶದ ಕೊಲಂಬಪಟ್ಟಣ (ಕ್ಯುಲಾನ್)ದ ಸ್ಥಾಪನೆಯ ಸಂದರ್ಭದಲ್ಲಿ ಆರಂಭಿಸಿದ ಸಂವತ್ಸರ ಗಣನೆಯೇ ‘ಕೊಲ್ಲಂ ಆಂಡು’ಅಥವಾ ‘ಕೊಲಂಬ ಸಂವತ್ಸರ’ ಎಂದು ಭಾವಿಸಲಾಗಿದೆ. ಇದು ಮಲಯಾಳ ಭಾಷೆ ಮಾತನಾಡುವ ಪ್ರದೇಶ ಹಾಗೂ ಇಂದಿನ ತಮಿಳುನಾಡಿನ ತಿರುನಲ್ವೇಲಿ ಮತ್ತು ಕನ್ಯಾಕುಮಾರಿ ಪ್ರದೇಶಗಳಲ್ಲಿ ಪ್ರಚಿಲಿತವಿದೆ. (ಇದನ್ನು ಪೌರಾಣಿಕ ಲೆಖ್ಖಾಚಾರದ ಹಿನ್ನೆಲೆಯಲ್ಲಿ ‘ಪರುಷುರಾಮ ಸಂವತ್ಸರ’ವೆಂದು ಕೂಡ ಹೇಳುವುದುಂಟು. ಸೌರ ಪದ್ಧತಿಗೆ ಸೇರಿದ ಇದರ ಆರಂಭವನ್ನು ಕೇರಳದ ಉತ್ತರದ ಭಾಗದಲ್ಲಿ ‘ಕನ್ಯಾ ಸಂಕ್ರಾಂತಿ’ಯಿಂದ ಅಂದರೆ ಸೌರ ಅಶ್ವಿನ ೧ ರಿಂದ ಗಣಿಸುತ್ತಾರೆ. ಆದರೆ ತಿರುನಲ್ವೇಲಿ ಮತ್ತು ಅದರ ನೆರೆ ಹೊರೆಯ ಪ್ರದೇಶಗಳಲ್ಲಿ ಇದನ್ನು ‘ಸಿಂಹ ಸಂಕ್ರಾಂತಿ’ಯಿಂದ ಅಂದರೆ ಸೌರಭಾದ್ರಪದ ೧ರಿಂದ ಗಣಿಸಲಾಗುತ್ತದೆ. ಉತ್ತರ ಕೇರಳದಲ್ಲಿ ತಿಂಗಳುಗಳ ಹೆಸರುಗಳನ್ನು ಮೇಷ, ವೃಷಭ, ... ಇತ್ಯಾದಿ ರಾಶಿಗಳ ಹೆಸರಿನಲ್ಲಿ ಕರೆದರೆ; ದಕ್ಷಿಣದಲ್ಲಿ ನಕ್ಷತ್ರಗಳ ಹಿನ್ನೆಲೆಯುಳ್ಳ ಚೈತ್ರ, ವೈಶಾಖ, ... ಕ್ರಮದಲ್ಲಿ ಗಣಿಸಲಾಗುತ್ತದೆ. ವೀರ ರವಿವರ್ಮನ ತಿರುವನಂತಪುರದ ಶಾಸನದಲ್ಲಿ ‘ಕೊಲ್ಲಂಸಂವತ್ಸರ’ದ ಉಲ್ಲೇಖ ಬಂದಿದೆ. ‘ಕಲಿವರ್ಷ ೪೭೦೨ ಕೊಲ್ಲಂ ವರ್ಷ ೭೭೬’ ಎಂದು ಉಲ್ಲೇಖಿತವಾಗಿದೆ. ಹಾಗಾಗಿ ಕಲಿವರ್ಷ ಹಾಗೂ ಕೊಲ್ಲಂ ಸಂವತಸರಗಳ ನಡುವೆ ೩೯೨೫ ವರ್ಷಗಳ ಅಂತರವಿದೆ. ಕೊಲ್ಲಂ ವರ್ಷಕ್ಕೆ ೮೨೫ನ್ನು ಕೂಡುವುದರಿಂದ ಪ್ರಚಲಿತ ಕ್ರಿಸ್ತಶಕೆ ಬರುತ್ತದೆ.

ಚಾಳುಕ್ಯ ವಿಕ್ರಮ ವರ್ಷ

ಬದಲಾಯಿಸಿ

ದಕ್ಷಿಣ ಭಾರತದಲ್ಲಿ ರಾಷ್ಟ್ರಕೂಟರ ಆಳ್ವಿಕೆಯ ನಂತರ ಅಧಿಕಾರಕ್ಕೆ ಬಂದ ದಕ್ಷಿಣ ಭಾರತದ ವಿಶಾಲ ಪ್ರದೇಶದ ಒಡೆಯರಾದವರು ಕಲ್ಯಾಣದ ಚಾಳುಕ್ಯರು. ಇವರು ಮೂಲತಃ ಬಾದಾಮಿ ಚಲುಕ್ಯರ ಸಂತತಿಯವರು. ಇವರಲ್ಲಿ ಶಕ ೯೮೮ ರಲ್ಲಿ ಅಂದರೆ ಕ್ರಿ. ಶ. ೧೦೭೬ರಲ್ಲಿ ಪಟ್ಟಕ್ಕೆ ಬಂದ ಆರನೆಯ ವಿಕ್ರಮಾದಿತ್ಯನು ಬಹು ಪ್ರಸಿದ್ಧ ಸಾಮ್ರಾಟ. ಈತನು ತನ್ನದೇ ಆದ ‘ಚಾಲುಕ್ಯವಿಕ್ರಮ ವರ್ಷ’ವನ್ನು ಆರಂಭಿಸಿದನು. ಇದು ಆತನು ಪಟ್ಟಕ್ಕೆ ಬಂದ ದಿನದಿಂದ ಆರಂಭಗೊಂಡಿತು. ಇದನ್ನು ಮುಂದೆ ಸುಮಾರು ಒಂದುನೂರು ವರ್ಷಗಳ ಕಾಲ ಕಲ್ಯಾಣದ ಚಾಳುಕ್ಯ ಮತ್ತು ಅವರ ಮಾಂಡಲಿಕ ಅರಸರು ಬಳಸಿರುವುದು ಕಂಡುಬರುತ್ತದೆ. ಈ ಚಾಳುಕ್ಯ ವಿಕ್ರಮ ವರ್ಷದ ಉಲ್ಲೇಖವಿರುವ ಶಾಸನಗಳು ವಿಶೇಷವಾಗಿ ಉತ್ತರ ಕರ್ನಾಟಕ ಮತ್ತು ಅದಕ್ಕೆ ಹೊಂದಿಕೊಂಡಿರುವ ಆಂಧ್ರ ಮತ್ತು ಮಹಾರಾಷ್ಟ್ರ ಪ್ರದೇಶಗಳಲ್ಲಿ ಹಾಗೂ ದಕ್ಷಿಣ ಕರ್ನಾಟಕದ ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳ ಶಾಸನಗಳಲ್ಲೂ ಕಾಣಬಹುದಾಗಿದೆ. ಉದಾ: ‘ಚಾಳುಕ್ಯ ವಿಕ್ರಮ ಕಾಲದ ೪೮ ಕ್ರೋಧಿ ಸಂವತ್ಸರದ ಉತ್ತರಾಯಣ ಸಂಕ್ರಾಂತಿ ತ್ರಯೋದಶಿ ಆದಿವಾರ’ದಂದು (ಈ ವಿವರಗಳು ಕ್ರಿ.ಶ. ೧೧೨೫ ಜನವರಿ ೪, ಭಾನುವಾರಕ್ಕೆ ಸರಿಹೊಂದುತ್ತದೆ.) ಆರನೆಯ ವಿಕ್ರಮಾದಿತ್ಯನ ಮರಣದ ನಂತರವೂ ಈ ‘ಚಾಳುಕ್ಯ ವಿಕ್ರಮ ವರ್ಷ’ದ ಬಳಕೆ ಕ್ವಚಿತ್ತಾಗಿ ಮುಂದುವರಿದಿತ್ತಾದರೂ, ಮುಂದೆ ಪಟ್ಟಕ್ಕೆ ಬಂದ ಅದೇ ವಂಶದ ಹಾಗೂ ಕಲಚುರ್ಯ್, ಹೊಯ್ಸಳ, ಸೇಉಣ, ಹಾನಗಲ್ ಕದಂಬರ ಕೆಲವು ಅರಸರೂ ತಮ್ಮ ತಮ್ಮ ಹೆಸರಿನ ಆಡಳಿತ ವರ್ಷಗಳನ್ನು ಸ್ಥಾಪಿಸಿಕೊಂಡಿದ್ದುದು ಶಾಸನಗಳಿಂದ ಮನಗಾಣಬಹುದಾಗಿದೆ. ಹಾಗೆ ಸ್ಥಾಪಿತವಾದ ಬಹುತೇಕ ಸಂವತ್ಸರಗಳೆಲ್ಲಾ ಆಯಾ ಅರಸರ ಅಡಳಿತ ಅವಧಿಯಲ್ಲಷ್ಟೇ ಬಳಕೆಯಲ್ಲಿದ್ದು ಅನಂತರದಲ್ಲಿ ಮೂಲೆಗುಂಪಾಗಿರುವುದುಂಟು.

ಪುದುವೈಪ್ಪು ಸಂವತ್ಸರ

ಬದಲಾಯಿಸಿ

ಕೇರಳದ ಕೊಚಿನ್‌ನ ಉತ್ತರಕ್ಕಿರುವ ‘ಬೀಪೀನ್’ ಎಂದು ಕರೆಯುವ ಸುಮಾರು ೨೧ ಕಿ.ಮೀ. ಉದ್ದ, ೧.೬ ಕಿ.ಮೀ. ಅಗಲದಷ್ಟು ವಿಸ್ತಾರವಿರುವ ಒಂದು ದ್ವೀಪವಿದೆ. ಆ ಪ್ರದೇಶದಲ್ಲಿ ಪುದು=ಹೊಸದಾಗಿ ವೆಪ=ವಸತಿ ಸೌಕರ್ಯವನ್ನು ಕಲ್ಪಿಸಿದ ನೆನಪಿಗಾಗಿ ‘ಪುದುವೈಪ್ಪು’ ಸಂವತ್ಸರವನ್ನು ಕ್ರಿ.ಶ. ೧೩೪೧ರಲ್ಲಿ ಆರಂಭಿಸಲಾಯಿತು. ಕೊಚಿನ್ ರಾಜ್ಯ ಮತ್ತು ಡಚ್ ಈಸ್ಟ್ ಇಂಡಿಯಾ ಕಂಪನಿಯವರ ನಡುವೆ ಏರ್ಪಟ್ಟ ಒಪ್ಪಂದವನ್ನು ಒಳಗೊಂಡ ತಾಮ್ರ ಶಾಸನದಲ್ಲಿ ‘ಪುದುವೈಪ್ಪು ಸಂವತ್ಸರ ೩೨೨, ಮೀನ ೧೪’ ಎಂಬ ಉಲ್ಲೇಖ ಬಂದಿದೆ. ಈ ತೇದಿ ವಿವರಗಳು ಕ್ರಿ.ಶ. ೧೬೬೩ರ ಮಾರ್ಚಿ ೨೨ಕ್ಕೆ ಸರಿಹೊಂದುತ್ತದೆ. ಈ ಸಂವತ್ಸರ ಗಣನೆಯು ಕೊಚಿನ್ ಪ್ರದೇಶದಲ್ಲಿ ಕೆಲಕಾಲ ಬಳಕೆಯಲ್ಲಿತ್ತು.

ಅರವತ್ತು ವರ್ಷ ಚಕ್ರದ ಬ್ರಾಹಸ್ಪತ್ಯಮಾನ

ಬದಲಾಯಿಸಿ

ಭಾರತದ ಶಾಸನಗಳಲ್ಲಿ ಸಾಮಾನ್ಯವಾಗಿ ಶಕವರ್ಷ ಅಥವಾ ಇತರ ಸಂವತ್ಸರಗಳೊಂದಿಗೆ ಪ್ರಭವಾದಿಯ ೬೦ ಸಂವತ್ಸರ ಚಕ್ರದ ಬ್ರಾಹಸ್ಪತ್ಯಮಾನದ ಗಣನೆಯ ವರ್ಷಗಳ ಹೆಸರುಗಳ ಬಳಕೆಯಲ್ಲಿರುವುದು ಕಂಡುಬರುತ್ತದೆ. ಈ ಸಂವತ್ಸರದ ಹೆಸರುಗಳನ್ನು ಕೆಲವು ಸಂದರ್ಭಗಳಲ್ಲಿ ಸ್ವತಂತ್ರವಾಗಿಯೂ ಬಳಸಿರುವುದುಂಟು. ಬೃಹಸ್ಪತಿ ಎಂದರೆ ಗುರು, ನಕ್ಷತ್ರವು ಒಂದು ನಿರ್ದಿಷ್ಟ ರಾಶಿಚಕ್ರದ ಚಿಹ್ನೆಯಲ್ಲಿ ನೆಲೆಸುವ ಅವಧಿಯು ೩೬೧ ದಿನ, ೨ ಘಟಿಕಾ ಮತ್ತು ೫ ಪಲಗಳಗಿರುತ್ತದೆ. ಇದು ಸೌರವರ್ಷಕ್ಕೆ ೪ ದಿನ ೧೩ ಘಟಿಕಾ ಮತ್ತು ೨೬ ಪಲಗಳಷ್ಟು ಕಿರಿದಾಗಿರುತ್ತದೆ. ಹಾಗಾಗಿ ೮೫ ವರ್ಷಗಳಲ್ಲಿ ಒಂದು ‘ಬೃಹಸ್ಪತ್ಯ ವರ್ಷ’ಕ್ಷಯವಾಗುತ್ತದೆ. ಈ ೬೦ ವರ್ಷ ಚಕ್ರದ ಬೃಹಸ್ಪತ್ಯಮಾನದ ಪ್ರತಿ ವರ್ಷಕ್ಕೂ ಪ್ರತ್ಯೇಕ ಹೆಸರುಗಳಿರುತ್ತವೆ. ಅವೇ: ಪ್ರಭವ, ವಿಭವ, ಶುಕ್ಲ, ಪ್ರಮೋಧೂತ, ಪ್ರಜಾಪತಿ.... ಇತ್ಯಾದಿ ಹೆಸರುಗಳು.

ಹನ್ನೆರಡು ಹದಿಮೂರನೆಯ ಶತಮಾನದ ಅನಂತರದಲ್ಲಿ ದಕ್ಷಿಣ ಭಾರತದ ಮೇಲೆ ಮುಸ್ಲಿಮರ ಆಕ್ರಮಣಗಳು ನಡೆದವು. ಅವರ ಕಾಲದ ಅನೇಕ ಪಾರ್ಸಿ, ಅರಬ್ಬಿ ಮತ್ತು ಉರ್ದು ಶಾಸನಗಳು ಹಾಗೂ ಕಾಗದ ಪತ್ರಗಳು ದಕ್ಷಿಣ ಭಾರತದಾದ್ಯಂತ ಕಂಡುಬಂದಿವೆ. ಅವುಗಳಲ್ಲಿ ಹಿಜ್ರಿ, ಫಸ್ಲಿ, ಮೃಗಸಾಲ್, ಸುರ್ ಹಾಗೂ ಮೌಲೂದಿ ಸಂವತ್ಸರಗಳ ಉಲ್ಲೇಖಗಳು ಕಾಣಿಸಿಕೊಂಡಿವೆ.

ಹಿಜ್ರಿ ಸಂವತ್ಸರ

ಬದಲಾಯಿಸಿ

ಇಸ್ಲಾಂ ಧರ್ಮದ ಸ್ಥಾಪಕ ಮಹಮ್ಮದನು ಕ್ರಿ.ಶ. ೬೨೨ ಜುಲೈ ೧೫ರಂದು ಮಕ್ಕಾದಿಂದ ಮದೀನಕ್ಕೆ ತೆರಳಿದ ದಿನದಿಂದ ಈ ಕಾಲವನ್ನು ಗಣಿಸಲಾಗುತ್ತದೆ. ಹಿಜ್ರಿ ಸಂವತ್ಸರವು ಶುದ್ಧ ಚಾಂದ್ರಮಾನ ಪದ್ಧತಿಯದಾಗಿದೆ. ಅಮಾವಾಸ್ಯೆಯ ನಂತರ ಚಂದ್ರ ಸಂಜೆ ಕಾಣಿಸಿಕೊಳ್ಳುವ ದಿನದಿಂದ ತಿಂಗಳು ಆರಂಭವಾಗುತ್ತದೆ. ದಿನದ ಗಣನೆ ಆಯಾ ದಿನದ ಸಂಜೆಯಿಂದ ಮುಂದಿನ ದಿನದ ಸಂಜೆಯವರೆಗೆ ಆಗಿರುತ್ತದೆ. ಈ ಸಂವತ್ಸರವು ಸೌರ ಸಂವತ್ಸರಕ್ಕಿಂತ ಸುಮಾರು ೧೧ ದಿನಗಳಷ್ಟು ಕಿರಿದಾಗಿರುವುದರಿಂದ ೧೦೦ ಸೌರ ಸಂವತ್ಸರಗಳಿಗೆ ೧೦೩ ಹಿಜ್ರಿ ವರ್ಷಗಳು ಬರುತ್ತವೆ. ಈ ಸಂವತ್ಸರವು ಸೌರ ವರ್ಷದ ಯಾವುದೇ ತಿಂಗಳಲ್ಲಿ ಋತುಮಾನದ ಅಂಕೆಯಿಲ್ಲದೆ ಬರಬಹುದಾಗಿದೆ. ಈ ಸಂವತ್ಸರದ ಉಲ್ಲೇಖವು ಕೆಲವು ಪಾರ್ಸಿ, ಅರಾಬಿಕ್ ಶಾಸನಗಳಲ್ಲಷ್ಟೆ ಅಲ್ಲದೆ ಸಂಸ್ಕೃತ ಮತ್ತು ದೇಶೀಯ ಭಾಷೆಯ ಶಾಸನಗಳಲ್ಲೂ ಕಂಡುಬಂದಿದೆ.

ಫಸ್ಲಿ ಸಂವತ್ಸರ

ಬದಲಾಯಿಸಿ

ಇದು ಚಾಂದ್ರಸೌರ ಪದಧ್ಧತಿಯ ಸಂವತ್ಸರವಾಗಿದೆ. ಮೊಗಲ್ ದೊರೆ ಅಕ್ಬರನು ಕ್ರಿ.ಶ. ೧೫೬೩ರಲ್ಲಿ ಹಿಜ್ರಿ ವರ್ಷ ೯೭೧ನ್ನು ಸೌರಮಾನವಾಗಿ ಪರಿವರ್ತಿಸಿ‘ಫಸ್ಲಿ ವರ್ಷ’ವನ್ನು ಜಾರಿಗೆ ತಂದನು. ಇದು ಭಾರತದ ಬೇರೆ ಬೇರೆ ಭಾಗಗಳಲ್ಲಿ ಸುಮಾರು ೨ ೧/೪ ವರ್ಷಗಳ ವ್ಯತ್ಯಾಸದಲ್ಲಿ ಬಳಕೆಯಲ್ಲಿತ್ತು. ದಕ್ಷಿಣ ಭಾರತದ ಫಸ್ಲಿ ಉತ್ತರದ ಫಸ್ಲಿ ವರ್ಷಕ್ಕಿಂತ ಸುಮಾರು ೨ ೧/ ವರ್ಷಗಳಷ್ಟು ಮುಂದಕ್ಕೆ ಇದೆ. ಷಹಜಹಾನನು ಹಿಜ್ರಿ ೧೦೪೬ ಅಂದರೆ ಕ್ರಿ.ಶ. ೧೬೩೬ರಿಂದ ದಕ್ಷಿಣಭಾರತದಲ್ಲಿ ಇದನ್ನು ಜಾರಿಗೆ ತಂದನು. ಪ್ರಚಲಿತ ಫಸ್ಲಿ ವರ್ಷಕ್ಕೆ ೫೯೦-೯೧ನ್ನು ಕೂಡುವುದರ ಮೂಲಕ ಪ್ರಚಲಿತ ಕ್ರಿಸ್ತ ಶಕೆಯನ್ನು ಪಡೆಯಬಹುದು. ಕ್ರಿ.ಶ. ೧೮೦೦ರಲ್ಲಿ ಜುಲೈ ೧೩ರಿಂದ ಆರಂಭವಾಗುತ್ತಿದ್ದ ಫಸ್ಲಿ ವರ್ಷ ಕ್ರಿ.ಶ. ೧೮೫೫ ರಿಂದ ಜುಲೈ ೧ರಿಂದ ಗಣಿಸಲಾಗುತ್ತದೆ. ಫಸ್ಲಿ ಎಂಬುದು ಫಸಲಿಗೆ ಅಂದರೆ ಬೆಳೆಗಳಿಗೆ ಸಂಬಧಿಸಿದ್ದು ಎಂದರ್ಥ. ಮುಸ್ಲಿಂ ದೊರೆಗಳು ಕಂದಾಯಾದಿಗಳನ್ನು ವಸೂಲು ಮಾಡಲು ಈ ಕಾಲ ಗಣನೆಯನ್ನು ಬಳಸಿದರು.

ಶೂಹೂರ್ ಸಂವತ್ಸರ

ಬದಲಾಯಿಸಿ

ದಕ್ಷಿಣ ಭಾರತದ ಸರಿಸುಮಾರು ಕೇಂದ್ರ ಸ್ಥಾನದಲ್ಲಿರುವ ಬಿಜಾಪುರದಿಂದ ಆಳ್ವಿಕೆ ನಡೆಸಿದ ಆದಿಲ್ ಶಾಹಿಗಳು ತಮ್ಮ ಫರ್ಮಾನ್‌ಗಳಲ್ಲಿ, ಹಿಜ್ರಿ ವರ್ಷದ ಮತ್ತೊಂದು ಪರಿವರ್ತಿತ ‘ಶೂಹೂರ್’ ‘ಶಾಹೂರ್’ ಅಥವಾ ‘ಸುರ್’ ಎಂಬ ಹೆಸರಿನ ಸಂವತ್ಸರವನ್ನು ಬಳಕೆಗೆ ತಂದರು. ಇದು ‘ಫಸ್ಲಿ’ಯಂತೆ ಸೌರಮಾನಕ್ಕೆ ಪರಿವರ್ತಿತವಾದ ಸಂವತ್ಸರವಾಗಿದೆ. ಇದನ್ನು ‘ಅರ್ಬಿ’ ಅಥವಾ ‘ಮೃಗಸಾಲ್’ ಎಂದೂ ಕರೆದಿರುವುದುಂಟು ಸೂರ್ಯನು ಮೃಗಶಿರಕ್ಕೆ ಪ್ರವೇಶಿಸುವ ತಿಂಗಳಿನಿಂದ ಈ ವರ್ಷವು ಆರಂಭವಾಗುವುದರಿಂದ ಇದಕ್ಕೆ ‘ಮೃಗಸಾಲ್’ ಎಂಬ ಅನ್ವಯಿಕ ಹೆಸರು ಪ್ರಾಪ್ತವಾಗಿದೆ. ಉಲ್ಲೆಖಿತ ಶೂಹೂರ್ ವರ್ಷಕ್ಕೆ ೫೯೯-೬೦ ನ್ನು ಕೂಡುವುದರಿಂದ ಕ್ರಿಸ್ತ ಶಕೆಯನ್ನು ಪಡೆಯಬಹುದು. ಇದನ್ನು ಸುಲ್ತಾನ್ ಮಹಮ್ಮದ್ ಬಿನ್ ತೊಗಲಕ್ (೧೩೨೫-೫೧)ನು ಸೇಉಣರ ರಾಜಧಾನಿಯಾದ ದೇವಗಿರಿ (ದೌಲತಬಾದ್)ನ್ನು ಆಕ್ರಮಿಸಿದಾಗಿನಿಂದ ಗಣನೆ ಆರಂಭವಾಗಿದೆಯೆಂದು ಊಹಿಸಲಾಗಿದೆ. ಇದು ವಿಶೇಷವಗಿ ಮರಾಠರ ದಾಖಲೆಗಳಲ್ಲಿ ಕಂಡು ಬಂದಿದೆ.

ಮೌಲೂದಿ ಸಂವತ್ಸರ

ಬದಲಾಯಿಸಿ

ಕ್ರಿ.ಶ. ೧೭೮೩ರಲ್ಲಿ ಸಿಂಹಾಸನವೇರಿದ ಮೈಸೂರಿನ ಹುಲಿ ಟೀಪೂ ಸುಲ್ತಾನನು ‘ಮೌಲೂದಿ’ ಎಂಬ ಚಾಂದ್ರಸೌರ ಪದ್ಧತಿಯ ಸಂವತ್ಸರದ ಗಣನೆಯನ್ನು ತನ್ನ ಆಳ್ವಿಕೆ ಕಾಲದಲ್ಲಿ ಜಾರಿಗೆ ತಂದನು. ಅದು ಪ್ರವಾದಿ ಮಹಮ್ಮದನು ಹುಟ್ಟಿದ ಅಂದರೆ ಕ್ರಿ. ಶ. ೫೭೨ನೆಯ ವರ್ಷದಿಂದ ಚಾಂದ್ರಸೌರ ಪದ್ಧತಿಯಂತೆ ಸಂವತ್ಸರಗಳನ್ನು ಲೆಖ್ಖಮಾಡಿ ಶಕ ೧೭೦೫ ಶೋಭನ ಸಂವತ್ಸರ (ಸಂವತ್ಸರ ಸಂಖ್ಯೆ ೩೭)=ಕ್ರಿ.ಶ. ೧೭೮೩ನ್ನು ಮೌಲೂದಿ ವರ್ಷದ ೧೨೧೧ ಎಂದು ಗುರುತಿಸಿ ಬಳಕೆಗೆ ತರಲಾಯಿತು. ಅದು ಟೀಪೂ ಸುಲ್ತಾನನು ಪಟ್ಟಕ್ಕೆ ಬಂದ ವರ್ಷವೂ ಹೌದು. ಇಲ್ಲಿ ಉಕ್ತವಾಗಿರುವ ಶೋಭನ ಸಂವತ್ಸರವು ಪ್ರಭವಾದಿ ಬ್ರಾಹಸ್ಪತ್ಯ ಚಕ್ರ ಸಂವತ್ಸರದ ೩೭ನೆಯದ್ದಾಗಿದ್ದು, ಆ ಸಂಖ್ಯೆಯನ್ನು ಅಬ್ಜಾದ್ ಪದ್ಧತಿಯಂತೆ ನಿರ್ಧರಿಸಲಾಗುತ್ತದೆ. ಅಬ್ಜಾದ್ ಪದ್ಧತಿ ಎಂದರೆ ಅರಾಬಿಕ್ ವರ್ಣಮಾಲೆಯ ಅಕ್ಷರಗಳಿಗೆ ಹಳೇ ಹಿಬ್ರು ವರ್ಣಮಾಲೆಯ ಕ್ರಮದಲ್ಲಿ ಸಂಖ್ಯೆಯನ್ನು ಗೊತ್ತು ಮಾಡುವುದು. (ಅಲಿಪ್=೧,ಬೇ=೨,ಜೀಮ್=೩ ಇತ್ಯಾದಿ). ಹಾಗಾಗಿ ಟೀಪೂ ಪಟ್ಟಕ್ಕೆ ಬಂದ ೩೭ನೆಯ ಸಂಖ್ಯೆಯ ಶೋಭನ ಸಂವತ್ಸರವನ್ನು ಝಕಿ ಸಂವತ್ಸರ ಎಂದೂ ಅನಂತರದ ಸಂವತ್ಸರಗಳನ್ನು ಅಝಲ್, ಜಲವ್, ದಲತ್ ಎಂದು ಮುಂತಾಗಿ ನಿರ್ದೇಶಿಸಲಾಗಿದೆ. ಟೀಪೂ ಸುಲ್ತಾನನ ಆಳ್ವಿಕೆಯ ಕಾಲದಲ್ಲಿ ಶ್ರೀರಂಗಪಟ್ಟಣ ಮುಂತಾದೆಡೆಗಳಲ್ಲಿ ಮೌಲೂದಿ ವರ್ಷದ ಉಲ್ಲೇಖವಿರುವ ಶಾಸನಗಳಿವೆ. ಉದಾ: ‘ಷುಮಾರ್ ಇ ಸಾಲ್ ಅಹಮದ್ ಬುದ್ ಜಿ ಮೌಲೂದ್ ಬತಾರೀಖ್ ನುಹುಮ್ ರೋಜ್ ಇ ಸೆಷಮಾ ’ ಎಂಬ ಉಲ್ಲೇಖ (ಎ.ಕ. ೬, ಶ್ರೀರಂಗಪಟ್ಟಣ ೪೬) ಬಂದಿದೆ. ಈ ಸಂವತ್ಸರದ ಗಣನೆಯನ್ನು ಸ್ವತಂತ್ರವಾಗಿ ಇಲ್ಲವೆ, ಬಹುಮಟ್ಟಿಗೆ ಹಿಜ್ರಿ ವರ್ಷದ ಜೊತೆಯಲ್ಲೇ ಉಲ್ಲೇಖಿಸಿರುವುದು ಕಂಡುಬರುತ್ತದೆ.

ಗ್ರಿಗೋರಿಯನ್ ಅಥವಾ ಕ್ರಿಸ್ತಶಕೆ

ಬದಲಾಯಿಸಿ

ಇದು ಇಂದು ಪ್ರಪಂಚದಾದ್ಯಂತ ಹೆಚ್ಚು ಪ್ರಚಲಿತವಿರುವ ಕಾಲಗಣನೆಯಾಗಿದೆ. ‘ಕ್ರಿಸ್ತ ಶಕೆ’ ಅಥವಾ ‘ಗ್ರಿಗೋರಿಯನ್ ವರ್ಷ’ದ ಮೂಲ ರೋಮ್. ಮೂಲತಃ ಶುದ್ಧ ಚಾಂದ್ರಮಾನ ಪದ್ಧತಿಯ ಕಾಲಗಣನೆ ಇದಾಗಿದ್ದಿತು. ಚಾಂದ್ರ ಪದ್ಧತಿಯ ಕಾಲಗಣನೆ ಋತುಮಾನಗಳನ್ನು ಸರಿಯಾಗಿ ಪ್ರತಿನಿಧಿಸುವುದಿಲ್ಲವಾದ್ದರಿಂದ ಅದನ್ನು ಸೌರ ಪದ್ಧತಿಗೆ ಅಳವಡಿಸುವ ಅಗತ್ಯತೆ ಕಂಡುಬಂದಿತು. ಹಾಗಾಗಿ ರೋಮ್‌ನ ಜೂಲಿಯಸ್ ಸೀಸರನ ಕಾಲದಲ್ಲಿ ನಡೆದ ಸುಧಾರಣೆಯ ಪರಿಣಾಮವಾಗಿ ಅದನ್ನು ಸೌರಮಾನಕ್ಕೆ ಪರಿವರ್ತಿತವಾಯಿತು. ಆದರೂ ಕ್ರಿ.ಶ. ೧೫೭೨ರ ವೇಳೆಗೆ ಪುಣ್ಯಕಾಲಗಳ ಮತ್ತು ತಾರಿಖುಗಳ ಹೊಂದಾಣಿಕೆ ಸರಿಯಾಗಿ ಆಗದೆ ಸುಮಾರು ೧೦ ದಿನಗಳ ವ್ಯತ್ಯಾಸ ಕಂಡು ಬಂದಿತು. ಅದನ್ನು ಸರಿಪಡಿಸಲು ಮೂರನೆಯ ಪೋಫ್ ಗ್ರಿಗೋರಿ ಕ್ರಮ ತೆಗೆದು ಕೊಂಡನು. ಅದರ ಪರಿಣಾಮವಾಗಿ ಕ್ರಿ.ಶ. ೧೫೭೨ರಲ್ಲಿ, ಅಕ್ಟೋಬರ್ ೫ನ್ನು ೧೫ನೆಯ ತಾರೀಖೆಂದು ಮಾರ್ಪಡಿಸಿ ಆಜ್ಞೆ ಹೊರಡಿಸಲಾಯಿತು. ಜನವರಿ ೧, ವರ್ಷದ ಆರಂಭವೆಂದು ಪರಿಗಣಿಸಲಾಯಿತು. ಮೂರನೆಯ ಪೋಪ್ ಗ್ರಿಗೋರಿಯ ಈ ಸುಧಾರಣೆಯು ರೋಮ್, ಸ್ಪಾನಿಷ್ ಮತ್ತು ಪೋರ್ಚುಗೀಸ್‌ಗಳಲ್ಲಿ ಕೂಡಲೇ ಜಾರಿಗೆ ಬಂದಿತು. ಅನಂತರದ ಕಾಲದಲ್ಲಿ ಫ್ರಾನ್ಸ್ ಜರ್ಮನಿಗಳಲ್ಲಿ ಜಾರಿಯಾಯಿತು. ಕ್ರಿ.ಶ. ೧೯೧೭ರಲ್ಲಿ ರಷ್ಯನ್ನರು ಗ್ರಿಗೋರಿಯನ್ ಕ್ಯಾಲೆಂಡರನ್ನು ತಮ್ಮ ದೇಶದಲ್ಲಿ ಜಾರಿಗೆತಂದರು. ಭಾರತದ ದೇಶದಲ್ಲಿ; ಪಾಶ್ಚಾತ್ಯರ ಆಳ್ವಿಕೆ ಆರಂಭಗೊಂಡಮೇಲೆ ಈ ಶಕೆಯು ದಕ್ಷಿಣ ಭಾರತವೂ ಸೇರಿದಂತೆ ಭಾರತದಲ್ಲಿ ನೆಲೆಗೊಂಡಿತು. ಈಶಕೆಯನ್ನು ಶಾಸನಗಳಲ್ಲಿ ಬಳಸಿರುವ ಸಾಕಷ್ಟು ಉದಾಹರಣೆಗಳಿವೆ. ಇಂಗ್ಲಿಷು ಸನ್ ೧೮೬೦ ನೇ ಮೇ ತಾರೀಖು ೫ರಲ್ಲೂ ಯೀ ಮಹಾರಾಜ ಸಂತಾನಾಂಬುಜವು.. ; ‘ಸನ್ ೧೮೫೫ ನೇ ಯ್ಸಿವಿ ಪೆಪುರುವರ್ರಿ /ತ// ೧೨ ಯಫ್ರೆಲು ೨೬ ಲು’ಎಂಬ ಉಲ್ಲೇಖಗಳನ್ನು ಗಮನಿಸಬಹುದಾಗಿದೆ.

ರಾಷ್ಟ್ರೀಯ ಪಂಚಾಂಗ

ಬದಲಾಯಿಸಿ

ಭಾರತಕ್ಕೆ ಸ್ವತಂತ್ರ ಬಂದ ನಂತರ ರಾಜ್ಯಾಂಗದ ಭಾಗವಾಗಿ ರಾಷ್ಟ್ರೀಯ ಪಂಚಾಂಗದ ಅಗತ್ಯತೆ ಉಂಟಾಯಿತು, ಹಾಗಾಗಿ ಕ್ರಿ.ಶ. ೧೯೫೨ರ ನವೆಂಬರ್ ನಲ್ಲಿ ಭಾರತ ಸರ್ಕಾರವು ರಾಷ್ಟ್ರೀಯ ಪಂಚಾಂಗದ ರಚನೆಗಾಗಿ ಸಮಿತಿಯೊಂದನ್ನು ನೇಮಿಸಿತು. ಅದು ಕ್ರಿ.ಶ. ೧೯೫೭ ಮಾರ್ಚಿ ೨೨ನೆಯ ತಾರೀಖಿನಿಂದ ಜಾರೀಗೆ ಬರುವಂತೆ ‘ರಾಷ್ಟ್ರೀಯ ಪಂಚಾಂಗ’ವನ್ನು ಪ್ರಕಟಿಸಿತು. ಇದು ಶುದ್ಧ ಸೌರ ಪಂಚಾಂಗವಾಗಿದ್ದು ಋತುಮಾನಕ್ಕೆ ಅನುಗುಣವಾಗಿದೆ. ಇದರಲ್ಲಿ ತಿಂಗಳುಗಳ ಹೆಸರುಗಳು ಚೈತ್ರ, ವೈಶಾಖ, ಜ್ಯೇಷ್ಠ, ... ಎಂದು ಮುಂತಾಗಿದ್ದು ಅವುಗಳಲ್ಲಿ ವೈಶಾಖದಿಂದ ಭಾದ್ರಪದದ ವರೆಗಿನ ತಿಗಳುಗಳಿಗೆ ತಲಾ ಮೂವತ್ತೊಂದು ದಿನಗಳು, ಉಳಿದ ತಿಂಗಳುಗಳಲ್ಲಿ ೩೦ ದಿನಗಳು ಇರುವಂತೆ ನಿರ್ಧರಿಸಲಾಗಿದೆ. ಅಧಿಕಮಾಸವಿದ್ದಾಗ ಮಾತ್ರ ಆ ವರ್ಷದ ಚೈತ್ರ ತಿಂಗಳಿಗೆ ೧ ದಿನ ಸೇರಿಸಿ ೩೧ ದಿನದ ಅಧಿಕ ಮಾಸವೆಂದು ಪರಿಗಣಿಸ ಲಾಗುತ್ತದೆ. ಹಾಗಾಗಿ ಪ್ರತಿ ವರ್ಷ ಮಾರ್ಚಿ ೨೧/೨೨ ರಂದು ರಾಷ್ಟ್ರೀಯ ಪಂಚಾಂಗದ ನೂತನ ವರ್ಷ ಆರಂಭವಾಗುತ್ತದೆ.

ರಾಷ್ಟ್ರೀಯ ಪಂಚಾಂಗದ ತಿಂಗಳುಗಳ ಹೆಸರುಗಳು ಮತ್ತು ಅವುಗಳ ವ್ಯಾಪ್ತಿ ಹಾಗೂ ಗ್ರಿಗೋರಿಯನ್ ಕ್ಯಾಲೆಂಡಿರಿನಂತೆ ತಿಂಗಳ ಮೊದಲ ದಿನಗಳು

ಕ್ರಮ ಕ್ರಮ ಸಂಖ್ಯೆ ಕ್ರಮ ಸಂಖ್ಯೆ ತಿಂಗಳ ಹೆಸರು ಮತ್ತು ವ್ಯಾಪ್ತಿwAUÀ¼À ºÉ¸ÀgÀÄ ªÀÄvÀÄÛ ªÁå¦Û ತಿಂಗಳ ಹೆಸರು ಮತ್ತು ವ್ಯಾಪ್ತಿ ಗ್ರಿಗೋರಿಯನ್ ದಿನಾಂಕ ತಿಂಗಳು VæUÉÆÃjAiÀÄ£ï ¢£ÁAPÀ wAUÀ¼ÀÄ ಗ್ರಿಗೋರಿಯನ್ ದಿನಾಂಕ ತಿಂಗಳು ಕ್ರಮ ಕ್ರಮ ಸಂಖ್ಯೆ ಕ್ರಮ ಸಂಖ್ಯೆ ತಿಂಗಳ ಹೆಸರು ತಿಂಗಳ ಹೆಸರು ಮತ್ತು ವ್ಯಾಪ್ತಿ ತಿಂಗಳ ಹೆಸರು ಮತ್ತು ವ್ಯಾಪ್ತಿ ಗ್ರಿಗೋರಿಯನ್ ಗ್ರಿಗೋರಿಯನ್ ದಿನಾಂಕ ತಿಂಗಳು ಗ್ರಿಗೋರಿಯನ್ ದಿನಾಂಕ ತಿಂಗಳು ಕ್ರಮ ಸಂಖ್ಯೆ ತಿಂಗಳ ಹೆಸರು ಮತ್ತು ವ್ಯಾಪ್ತಿ ಗ್ರಿಗೋರಿಯನ್ ದಿನಾಂಕ ತಿಂಗಳು ಕ್ರಮ ಸಂಖ್ಯೆ ತಿಂಗಳ ಹೆಸರು ಮತ್ತು ವ್ಯಾಪ್ತಿ ಗ್ರಿಗೋರಿಯನ್ ದಿನಾಂಕ ತಿಂಗಳು

೧ ೧ ಚೈತ್ರ ೩೦/೩೧ ಚೈತ್ರ ೩೦/೩೧ ೨೨/೨೧ ಮಾರ್ಚಿ ೨೨/೨೧ ಮಾರ್ಚಿ ೭ ೭ ಆಶ್ವೀಜ ೩೦ ಆಶ್ವೀಜ ೩೦ ೨೩ ಸೆಪ್ಟಂಬರ್ ೨೩ ಸೆಪ್ಟಂಬರ್ ೧ ಚೈತ್ರ ೩೦/೩೧ ೨೨/೨೧ ಮಾರ್ಚಿ ೭ ಆಶ್ವೀಜ ೩೦ ೨೩ ಸೆಪ್ಟಂಬರ್
೨ ೨ ವೈಶಾಖ ೩೧ ವೈಶಾಖ ೩೧ ೨೧ ಏಪ್ರಿಲ್ ೨೧ ಏಪ್ರಿಲ್ ೮ ೮ ಕಾರ್ತೀಕ ೩೦ ಕಾರ್ತೀಕ ೩೦ ೨೩ ಅಕ್ಟೋಬರ್ ೨೩ ಅಕ್ಟೋಬರ್ ೨ ವೈಶಾಖ ೩೧ ೨೧ ಏಪ್ರಿಲ್ ೮ ಕಾರ್ತೀಕ ೩೦ ೨೩ ಅಕ್ಟೋಬರ್
೩ ೩ ಜೇಷ್ಠ ೩೧ ಜೇಷ್ಠ ೩೧ ೨೨ ಮೇ ೨೨ ಮೇ ೯ ೯ ಮಾರ್ಗಶಿರ ೩೦ ಮಾರ್ಗಶಿರ ೩೦ ೨೨ ನವೆಂಬರ್ ೨೨ ನವೆಂಬರ್ ೩ ಜೇಷ್ಠ ೩೧ ೨೨ ಮೇ ೯ ಮಾರ್ಗಶಿರ ೩೦ ೨೨ ನವೆಂಬರ್
೪ ೪ ಆಷಾಡ ೩೧ ಆಷಾಡ ೩೧ ೨೨ ಜೂನ್ ೨೨ ಜೂನ್ ೧೦ ೧೦ ಪುಷ್ಯ ೩೦ ಪುಷ್ಯ ೩೦ ೨೨ ಡಿಸೆಂಬರ್ ೨೨ ಡಿಸೆಂಬರ್ ೪ ಆಷಾಡ ೩೧ ೨೨ ಜೂನ್ ೧೦ ಪುಷ್ಯ ೩೦ ೨೨ ಡಿಸೆಂಬರ್
೫ ೫ ಶ್ರಾವಣ ೩೧ ಶ್ರಾವಣ ೩೧ ೨೩ ಜುಲೈ ೨೩ ಜುಲೈ ೧೧ ೧೧ ಮಾಘ ೩೦ ಮಾಘ ೩೦ ೨೧ ಜನವರಿ ೨೧ ಜನವರಿ ೫ ಶ್ರಾವಣ ೩೧ ೨೩ ಜುಲೈ ೧೧ ಮಾಘ ೩೦ ೨೧ ಜನವರಿ
೬ ೬ ಭಾದ್ರಪದ ೩೧ ಭಾದ್ರಪದ ೩೧ ೨೩ ಆಗಸ್ಟ್ ೨೩ ಆಗಸ್ಟ್ ೧೨ ೧೨ ಪಾಲ್ಗುಣ ೩೦ ಪಾಲ್ಗುಣ ೩೦ ೨೦ ಫೆಬ್ರ್ರವರಿ ೨೦ ಫೆಬ್ರ್ರವರಿ ೬ ಭಾದ್ರಪದ ೩೧ ೨೩ ಆಗಸ್ಟ್ ೧೨ ಪಾಲ್ಗುಣ ೩೦ ೨೦ ಫೆಬ್ರ್ರವರಿ

ವರ್ಷ ಅಥವಾ ಶಕೆಗಳ ಗಣನೆಯನ್ನು ಅಂಕಿಗಳಲ್ಲಿ ಅಥವಾ ಅಕ್ಷರಗಳಲ್ಲಿ ಮಾತ್ರವಲ್ಲದೆ ಕೆಲವೊಮ್ಮೆ ಸಂಕೇತಗಳ ಮೂಲಕವೂ ಬರೆದಿರುವುದುಂಟು. ಅಂಕಿಗಳಿಗೆ ಸಾಮಾನ್ಯವಾಗಿ ಮುಂದಿನಂತೆ ಸಂಕೇತಗಳನ್ನು ಬಳಸಿರುವುದು ಕಂಡುಬರುತ್ತದೆ:

೧ = ಶಶಿ, ಸೋಮ, ಶಶಾಂಕ ತತ್ಯಾದಿ. ೨ = ಅಕ್ಷಿ, ಕರ್ಣ, ಔಷ್ಠ, ಪಕ್ಷ ಇತ್ಯಾದಿ. ೩ = ಅಗ್ನಿ, ರಾಮ, ಪುರೀ, ಗುಣ, ಸಂಧ್ಯಾ, ಇತ್ಯಾದಿ. ೪ = ಅಬ್ದ, ಸಾಗರ, ಆಶ್ರಮ, ವೇದ, ಜಾತಿ ಇತ್ಯಾದಿ, ೫ = ಇಂದ್ರಿಯ, ಇಕ್ಷು, ಭೂತ,ಪ್ರಾಣ, ಕನ್ಯಾ, ಪಾಂಡವ ಇತ್ಯಾದಿ. ೬ = ಶಾಸ್ತ್ರ, ಋತು, ಅಂಗ, ರಸ ಇತ್ಯಾದಿ. ೭ = ಶೈಲ, ದ್ವೀಪ, ವಾಯು, ಮುನಿ, ವಾರ, ರಾಜ್ಯಾಂಗ, ಸ್ವರ, ವಿಭಕ್ತಿ, ಇತ್ಯಾದಿ. ೮ = ಗಜ, ದಿಕ್ಪಾಲ, ಸಿದ್ಧಿ, ಯೋಗ, ಅನುಷ್ಟುಪ್, ನಾಗ, ಇತ್ಯಾದಿ. ೯ = ನವರತ್ನ, ನಿಧಿ, ಖಂಡ, ದ್ವಾರ, ಗ್ರಹ, ಧೇನು, ಇತ್ಯಾದಿ. ೧೦ = ಹಸ್ತಾಂಗುಲಿ, ರಾವಣ ಮೌಲಿ, ರೂಪಕ, ಇತ್ಯಾದಿ. ೧೧ = ಮಹಾದೇವ, ರುದ್ರ, ಕಾರಣ, ತ್ರಿಷ್ಟುಪ್ ಇತ್ಯಾದಿ. ೧೨ = ಅರ್ಕ, ಮಾಸ, ರಾಶಿ, ದಿವಾಕರ ಇತ್ಯಾದಿ. ೧೩ = ತಾಂಬೂಲ ಗುಣ, ವಿಶ್ವದೇವ, ಅತಿಗತೀ ಇತ್ಯಾದಿ. ಹೀಗೆ ಇತರ ಅಂಕೆಗಳಿಗೂ ಸಂಕೇತಗಳನ್ನು ಕಲ್ಪಿಸಿ ಉಪಯೋಗಿಸಿರುವುದು ಕಂಡುಬರುತ್ತದೆ. ಇವಲ್ಲದೆ ಇನ್ನೂ ಬೇರೆ ಬೇರೆ ಶಬ್ದಗಳನ್ನು ಪ್ರಯೋಗಿಸಿರುವುದುಂಟು. ಅಂಕನಾಮ್ ವಾಮತೋಗತಿ: ಎಂಬಂತೆ ವಿಪರೀತವಾಗಿ (ಹಿಂದು ಮುಂದಾಗಿ) ಆ ಸಂಖ್ಯೆಗಳಿಗೆ ಅಂಕೆಗಳನ್ನು ಅನ್ವಯಿಸಿ ಕಾಲದ ವರ್ಷ ಸಂಖ್ಯೆಯನ್ನು ನಿರ್ಧರಿಸಿಕೊಳ್ಳಬೇಕು.

ಉದಾ: ೧) ಶಕಾಬ್ದೇ ನಿಧಿ ಗಗನಗುಣಕ್ಷ್ಮಾಮಿತೇ ಪ್ರಭವಾದ್ಯೇ ಮಾಸೇತತ್ಪೂರ್ಣಿಮಾಯಾಂ - ಇಲ್ಲಿ ನಿಧಿ = ೯, ಗಗನ = ೦, ಗುಣ = ೩, ಕ್ಷಮಾ=೧ ಅಂದರೆ: ಶಾಲಿವಾನ ಶಕ ೧೩೦೯; ಪ್ರಭವ ಸಂವತ್ಸರ, ಆದ್ಯಮಾಸೇ= ಚೈತ್ರ ಮಾಸ (ಕ್ರಿ. ಶ. ೧೩೮೭ ಏಪ್ರಿಲ್).

೨) ಶಕಾಬ್ದೇ ಗೃಹಶರರಸಭೂ ಸಮ್ಮಿತೇ ನಳ ನೈಜ ಜೇಷ್ಠೇ ತತ್ಕೃಷ್ಣ ಪಞ್ಚಮ್ಯ ಸಮ ಗುರು ಇನೇ - ಇಲ್ಲಿ ಗ್ರ-೯, ಶರ=೫. ರಸ=೬ ಭೂ=೧ ಅಂದರೆ ಶಾಲಿವಾಹನ ಶಕ ೧೬೫೯, ನಳ ಸಂವತ್ಸರ, ನಿಜ ಜ್ಯೇಷ್ಠ ಬಹುಳ ಪಂಚಮೀ, ಅಸಮಗುರುದಿನೇ=ಗುರುವಾರ(ಕ್ರಿ. ಶ. ೧೭೩೬,ಜೂನ್ ೧೭). ಇತ್ಯಾದಿ.

ಕಟಪಯಾದಿ ಪದ್ಧತಿ: ಕ್ವಚಿತ್ತಾಗಿ ‘ಕಟಪಯಾದಿ’ ಎಂಬ ಮತ್ತೊಂದು ತೆರನಾದ ಅಂಕಿಗಳ ನಿರ್ದೇಶನ ಪದ್ಧತಿಯೂ ಶಾಸನಗಳಲ್ಲಿ ಬಳಕೆಯಾಗಿರುವುದು ಕಂಡುಬರುತ್ತದೆ. ಕದಿಂದ ಞ ವರೆಗಿನ ಅಕ್ಷರಗಳಿಗೆ ಕ್ರಮವಾಗಿ ೧ ರೀಂದ ೦, ಹಾಗೆಯೇ ಟ ದಿಂದ ನ ವರೆಗೆ ಮತ್ತು ಯ ದಿಂದ ಕ್ಷ ವರೆಗೆ.ಗೆ. ಪ ದಿಂದ ಮ ವರೆಗೆ ೧ ರಿಂದ ೫.

ಉದಾ; ೧) ಶಕಾಬ್ದೆ ರಂಗಲೋಕಾಬ್ದೆ (ಎ.ಕ. ೯, ರೈಸ್ ಆವೃತ್ತಿ, ಹೊಸಕೋಟೆ ೩೪). ಇಲ್ಲಿ ರಂ=೨, ಗ=೩, ಲೋ=೩, ಕ=೧ ಅಂದರೆ ಶಾಲಿವಾಹನ ಶಕ ೧೩೩೨. ೨) ಸಕವರ್ಷ ಮಧ್ಯ ಹಸಿನಯ (ಎ.ಕ. ೩, ಪರಿಷ್ಕೃತ, ನಂಜನಗೂಡು ೨೪೩). ಇಲ್ಲಿ ಹ=೮, ಸಿ=೭, ನ=೦, ಯ=೧ ಅಂದರೆ ಶಾಲಿವಾಹನ ಶಕ ೧೦೭೮.

ಶಾಸನಗಳಲ್ಲಿ ವಡ್ಡವಾರ, ಸ್ಥಿರವಾರ, ಬೃಹವಾರ ಇತ್ಯಾದಿಗಳ ಉಲ್ಲೇಖಗಳು ಕಂಡುಬರುತ್ತವೆ. ಇಲ್ಲಿ ಬೃಹವಾರ ಎಂಬುದು ಬೃಹಸ್ಪತಿ ಅಂದರೆ ಗುರುವಾರ ಎಂಬುದು ನಿಸ್ಸಂಶಯ. ಸ್ಥಿರವಾರ ಎಂಬುದು ಶನಿವಾರ ಎಂದು ದೃಢಪಟ್ಟಿದೆ. ಆದರೆ ವಿದ್ವಾಂಸರು ವಡ್ಡವಾರವನ್ನು ವಿಭಿನ್ನವಾಗಿ ಅರ್ಥೈಸಿರುವುದು ಕಂಡು ಬರುತ್ತದೆ. ಅಂತಿಮವಾಗಿ ವಡ್ಡವಾರವೆಂದರೆ ಶನಿವಾರವೆಂದು ತೀರ್ಮಾನವಾದಂತೆ ತೋರುತ್ತದೆ. ಬೃಹತ್ ಎಂಬುದರ ಪ್ರಾಕೃತ ರೂಪ ವಡ್ಡ, ಬೃಹತ್ ಕಥಾ=ವಡ್ಡಕಥೆ; ಹಾಗಾಗಿ ವಡ್ಡವಾರ ಎಂಬುದು ಬಹುಮಟ್ಟಿಗೆ ಗುರುವಾರವೇ ಆಗಿರುತ್ತದೆ. ಕೆಲವೇ ಸಂದರ್ಭಗಳಲ್ಲಿ ಅದು ಶನಿವಾರವಾಗಿರುವುದುಂಟು. ಈ ನಿಟ್ಟಿನಲ್ಲಿ ಮರು ವಿಶ್ಲೇಷಣೆ ಅಗತ್ಯವಿದೆ.

ಸಾಮಾನ್ಯವಾಗಿ ದಾನಿಗಳು ದಾನ ದತ್ತಿಗಳನ್ನು ವ್ಯತಿಪಾತ, ಸೂರ್ಯ ಗ್ರಹಣ, ಚಂದ್ರ ಗ್ರಹಣ ಹಾಗೂ ಉತ್ತರಾಯಣ ಸಂಕ್ರಾಂತಿ ಮುಂತಾದ ಪುಣ್ಯ ದಿನಗಳಂದು ನೀಡಿರುವ ಸಂಗತಿ ಶಾಸಗಳಿಂದ ತಿಳಿದು ಬರುತ್ತದೆ. ಶಾಸ್ತ್ರಕಾರರು ಈ ದಿನಗಳಂದು ದಾನ ಮಾಡಿದರೆ ಅಗಣಿತ ಪುಣ್ಯ ಪ್ರಾಪ್ತವಾಗುವುದೆಂದು ಪ್ರತಿಪಾದಿಸಿರುವುದು ಸರಿಯಷ್ಟೆ. ಹಾಗಾಗಿ ಅಂತಹ ಪುಣ್ಯ ದಿನಗಳಂದು ದಾನ ನೀಡುವುದು ಶ್ರೇಯಸ್ಕರವೆಂದು ಭಾವಿಸಿ ದಾನಿಗಳು ದಾನ ದತ್ತಿಗಳನ್ನು ನೀಡಿರುತ್ತಾರೆ. ಅಂತಹ ಶಾಸನಗಳಲ್ಲಿ ಉಕ್ತವಾಗಿರುವ ತೇದಿ ವಿವರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಅನೇಕ ಶಾಸನಗಳಲ್ಲಿ ಉಲ್ಲೇಖಿತ ದಿನಗಳಂದು ವಾಸ್ತವವಾಗಿ ಗ್ರಹಣವಾಗಲೀ ಸಂಕ್ರಾಂತಿ ಅಥವಾ ವ್ಯತಿಪಾತಗಳಾಗಲೀ ಬಂದಿರುವ ಸಾಧ್ಯತೆಗಳೇ ಇರುವುದಿಲ್ಲ. ಆದರೂ ಆ ದಿನಗಳನ್ನು ಪುಣ್ಯದಿನಗಳನ್ನಾಗಿ ಗ್ರಹಿಸಿ ಆ ದಿನಕ್ಕೆ ಗೌರವ ಸೂಚಕವಾಗಿ ಅದನ್ನು ಜೋಡಿಸಿ ಉಲ್ಲೇಖಿಸುವ ಪರಂಪರೆ ಇದ್ದಿತೆಂದು ತೋರುತ್ತದೆ. ಹಾಗಾಗಿ ಶಾಸನೋಕ್ತ ಎಷ್ಟೋ ವಿವರಗಳು ಹೊಂದಾಣಿಕೆಯಾಗದೆ ಹೋಗುವುದು ಸಾಮಾನ್ಯ ಸಂಗತಿ. ಪ್ರಾಯಶಃ ಈ ತೊಡಕುಗಳನ್ನು ಗಮನಿಸಿಯೇ ವಿದ್ವಾಸರಾದ ಡಾ. ಎ. ವೆಂಕಟಸುಬ್ಬಯ್ಯನವರು ‘ಸಮ್ ಶಕ ಡೇಟ್ಸ್ ಇನ್ ಇನ್ಸಕ್ರಿಪ್ಷನ್ಸ್’ ಎಂಬ ಕೃತಿಯನ್ನು ರಚಿಸಿ ಆ ತೊಡುಕುಗಳಿಗೆ ಕಾರಣವೇನಿದ್ದಿರಬಹುದು ಎಂಬುನ್ನು ವಿಶ್ಲೇಷಿಸಿ ಅವುಗಳನ್ನು ಸರಿಪಡಿಸಬೇಕಾದ ಬಗೆಯನ್ನು ತೋರಿಸಿದರು. ಆದರೆ ಮುಂದೆ ಯರೂ ಆ ಕ್ರಮವನ್ನು ಅನುಸರಿಸಿದಂತೆ ತೊರುತ್ತಿಲ್ಲ.

ದಕ್ಷಿಣ ಭಾರತದ ಶಾಸಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕಾಲಗಣನೆಗೆ ಸಂಬಂಧಿಸಿದ ವಿವರಗಳ ಹಿನ್ನೆಲೆಯಲ್ಲಿ ಒಂದು ಸ್ಥೂಲ ಪರಿಚಯವನ್ನು ಇಲ್ಲಿ ನೀಡಲು ಪ್ರಯತ್ನಿಸಲಾಗಿದೆ. ಭಾರತ ಸರ್ಕಾರವು ಅಂಗೀಕರಿಸಿ ಜಾರಿಗೆ ತಂದಿರುವ ರಾಷ್ಟ್ರೀಯ ಪಂಚಾಂಗದ ಬಗ್ಗೆಯೂ ಕೆಲವು ವಿವರಗಳನ್ನೂ ನೀಡಲಾಗಿದೆ. ಅಲ್ಲದೆ ಶಾಸನಗಳಲ್ಲಿ ಉಕ್ತವಾಗಿರುವ ಕಾಲಗಣನೆಯ ಬಗ್ಗೆ ಖ್ಯಾತ ವಿದಾಂಸರ ಅಧ್ಯಯನ ಹಾಗೂ ಸಂಶೋಧನ ಫಲಿತಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಒಟ್ಟಾರೆ ರಾಜಕೀಯ ಸಾಂಸ್ಕೃತಿಕ ಇತಿಹಾಸ ರಚನೆಯಲ್ಲಿ ಕಾಲಗಣನೆಯ ಪಾತ್ರ ಅದ್ವಿತಿವಾದುದು ಎಂಬುದನ್ನು ನಾವು ಮರೆಯುವಂತಿಲ್ಲ.