ಥಾರ್‌ಪಾರ್ಕರ್ (ಗೋವಿನ ತಳಿ)
ಇದು ಶತಮಾನಗಳಿಂದ ಭಾರತೀಯರಿಗೆ ಹಾಲುಣ್ಣಿಸುತ್ತಿರುವ ಶುಧ್ಧ ಭಾರತೀಯ ತಳಿ. ಥಾರ್‌ಪಾರ್ಕರ್ ತನ್ನ ಹುಟ್ಟೂರು ಸಿಂಧ್ ಪ್ರಾಂತ್ಯದ ಥಾರ್‌ಪಾರ್ಕರ್‌ನಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಥಾರ್ ಮರುಭೂಮಿಯ ಕಾರಣದಿಂದ ಥಾರಿ ಅಂತ ಕರೆಯಲ್ಪಟ್ಟರೆ, ಥಾರ್‌ಪಾರ್ಕರ್ ಪ್ರದೇಶದ ದಕ್ಷಿಣಕ್ಕಿರುವ ಕಚ್ಚ್ ಪ್ರಾಂತ್ಯದಲ್ಲಿ ಕಚ್ಚಿ ಅಂತಲೂ ಕರೆಸಿಕೊಳ್ಳುತ್ತದೆ. ಮೂಲ ಹೆಸರು ಬಿಳಿಸಿಂಧಿ ಅನ್ನುತ್ತಾರಾದರೂ ಆ ಹೆಸರು ಹೆಚ್ಚು ಪ್ರಚಲಿತದಲ್ಲಿಲ್ಲ. ಆ ಹೆಸರು ಮುಂಚೆ ಇತ್ತೇನೊ ಅನ್ನಿಸುವಂತೆ ಮಾಡುವುದು ಸಿಂಧ್ ಪ್ರಾಂತ್ಯದ ಕೆಂಪುಸಿಂಧಿ ಹಸುಗಳಿಗೂ ಇವುಗಳಿಗೂ ಇರುವ ಅಗಾಧ ಸಾಮ್ಯ. ಭಾರತದಲ್ಲಿ ಜೋ ಹಾಗೂ ಕಛ್ ಭಾಗಗಳು ಥಾರಿ ಹೆಚ್ಚಾಗಿ ಕಂಡುಬರುವ ಪ್ರದೇಶಗಳು. ಪಕ್ಕದ ಪಾಕಿಸ್ತಾನದ ಉಮರ್ಕೋಟ್, ಇಸ್ಲಾಂಕೋಟ್ ಪ್ರದೇಶಗಳ ಕೊಟ್ಟಿಗೆಗಳಲ್ಲಿ ಕೂಡ ಇವುಗಳದೆ ಸಾಮ್ರಾಜ್ಯ. ಮೊದಲನೇ ವಿಶ್ವ ಸಮರದಲ್ಲಿ east army ಕ್ಯಾಂಪುಗಳ ಉಪಯೋಗಕ್ಕೊಸ್ಕರ ಭಾರತಾದಾದ್ಯಂತ ಹಳ್ಳಿಗಳಿಂದ ಕರೆತಂದ ಹಸುಗಳಲ್ಲಿ ತಮ್ಮ ಅತ್ಯುತ್ತಮ ಹಾಲಿನ ಇಳುವರಿಯಿಂದ ಗುರುತಿಸಟ್ಟವು ಥಾರಿಗಳು. ಥಾರಿ ಬಾಸ್ ಇಂಡಿಕಸ್ ಜಾತಿಯ ಉಭಯೋದ್ದೇಶ ತಳಿ.
ಥಾರ್‌ಪಾರ್ಕರ್ | |
---|---|
ತಳಿಯ ಹೆಸರು | ಥಾರ್‌ಪಾರ್ಕರ್ |
ಮೂಲ | ಸಿಂಧ್ ಪ್ರಾಂತ್ಯದ ಥಾರ್‌ಪಾರ್ಕರ್ |
ವಿಭಾಗ | ಹಾಲಿನ ತಳಿ |
ಬಣ್ಣ | ಬಿಳಿ |
ಕೊಂಬು | ಮೇಲಕ್ಕೆ ಬಾಗುತ್ತಾ ಹೋಗಿರುವ ಕೋಡು |
ಕಾಲುಗಳು | ಗಿಡ್ಡ |
ಕಿವಿ | ಮುಮ್ಮುಖವಾಗಿ ಚಾಚಿರುವ ಉದ್ದ ಅಗಲಕಿವಿ |
ಸಿಂಧ್ ಪ್ರಾಂತ್ಯಗಳಲ್ಲಿ ಥಾರಿಗಳನ್ನು ಸಾಕುವುದು ೫೦-೩೦೦ ಹಸುಗಳ ಮಂದೆಯಲ್ಲಿ. ಈ ಹಸು ಮಂದೆಯ ಎಲ್ಲ ಜವಾಬ್ದಾರಿ, ಉಸ್ತುವಾರಿ ಮಲ್ದಾರ್ ಎಂದು ಕರೆಯಲ್ಪಡುವ ವೃತ್ತಿಪರ ಹಸು ಸಾಕಣಿಕೆದಾರರ ಕೈಯ್ಯಲ್ಲಿರುತ್ತದೆ. ಏಕೆಂದರೆ ಥಾರಿಗಳನ್ನು ಸಾಕುವುದು ಇತರ ಹಸುಗಳನ್ನು ಸಾಕಿದಂತಲ್ಲ. ಇವು ಪಕ್ಕಾ ಭಾವಜೀವಿಗಳು! ಈ ಅಭಿಪ್ರಾಯಕ್ಕೆ ಕಾರಣ ಥಾರಿಗಳು ಆಗಾಗ ಮನುಷ್ಯರ ಸಂಪರ್ಕಕ್ಕೆ ಬರದೆ ಹೋದರೆ ಅತಿಯಾದ ನಾಚಿಕೆ ಹಾಗೂ ತುಂಟತನ ಪ್ರದರ್ಶಿಸತೊಡಗುತ್ತವೆ ಎಂಬುದು. ಹಾಗಾಗಿ ಇವುಗಳನ್ನು ದಿನವೂ ಒಮ್ಮೆಯಾದರೂ ಮನುಷ್ಯರ ಸಂಪರ್ಕಕ್ಕೆ ಬರುವಂತೆ ನೋಡಿಕೊಳ್ಳಲೇಬೇಕು. ಇವುಗಳದ್ದು ಸದಾ ಎಚ್ಚರಿಕೆಯಿಂದಿರುವ ಸ್ವಭಾವ. ಸುತ್ತಮುತ್ತಲಿನ ಸಣ್ಣಪುಟ್ಟ ಬದಲಾವಣೆಗಳನ್ನೂ ಇವು ಗುರುತಿಸುತ್ತವೆ, ಪ್ರತಿಸ್ಪಂದಿಸುತ್ತವೆ ಕೂಡ.
ಥಾರ್‌ಪಾರ್ಕರ್ ಮಧ್ಯಮ ಗಾತ್ರದ ಹಸು. ಬಣ್ಣ ಬಿಳಿ. ಬಣ್ಣ ಕಾಲಕ್ಕನುಗುಣವಾಗಿ ಸೂಕ್ಷ್ಮ ಬದಲಾವಣೆ ಹೊಂದುವುದು ಇವುಗಳ ಒಂದು ವಿಶೇಷ. ಮುಮ್ಮುಖವಾಗಿ ಚಾಚಿರುವ ಉದ್ದ ಅಗಲಕಿವಿ, ಮೇಲಕ್ಕೆ ಬಾಗುತ್ತಾ ಹೋಗಿರುವ ಕೋಡು, ದೊಡ್ಡ ಕಣ್ಣು ಹಾಗೂ ಗಿಡ್ಡ ಕಾಲುಗಳು ಥಾರ್‌ಪಾರ್ಕರ್‌ನ ಮುಖ್ಯ ಲಕ್ಷ್ಯಣಗಳು. ೪೦೦-೪೫೦ ಕೇಜಿ ತೂಕ. ಹಾಲು ದಿನಕ್ಕೆ ಸುಮಾರು ಹತ್ತು ಲೀಟರುಗಳಷ್ಟು. ರೋಗ ನಿರೋಧಕತೆಯಂತೂ ಅಪೂರ್ವವೆನ್ನಿಸುವಷ್ಟು.
ಇಂತಿದ್ದರೂ ದಿನದಿನಕ್ಕೂ ಇವುಗಳ ಸಂಖ್ಯೆಯಲ್ಲಿ ಆಘಾತಕಾರಿ ಪ್ರಮಾಣದಲ್ಲಿ ಇಳಿಕೆ ಕಂಡು ಬರುತ್ತಿರುತ್ತಿದೆ.
ಚಿತ್ರಗಳು
ಬದಲಾಯಿಸಿ-
ಗಂಡು
-
ಹೆಣ್ಣು
ಆಧಾರ/ಆಕರ
ಬದಲಾಯಿಸಿ'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ Archived 2018-11-24 ವೇಬ್ಯಾಕ್ ಮೆಷಿನ್ ನಲ್ಲಿ.