ತಿರುಮಳಿಶೈ ಆಳ್ವಾರ್

ಇವರು ಮೊದಲ ಮೂರು ಆಳ್ವಾರುಗಳ ಸಮಕಾಲೀನರು. ಆ ಆಳ್ವಾರುಗಳು ಹುಟ್ಟಿದ ವರ್ಷದಲ್ಲಿಯೇ ಮಕರ ಮಾಸದ ಮಖಾ ನಕ್ಷತ್ರದಲ್ಲಿ ಇವರು ಉದಿಸಿದರೆಂದು ಗುರುಪರಂಪರಾಪ್ರಭಾವ ತಿಳಿಸುತ್ತದೆ. ಇವರ ಜನ್ಮಸ್ಥಳ ತಿರುಮಳಿಶೈ. ಇವರಜನಕ ಭೃಗುಮಹರ್ಷಿಯೆಂದೂ ಜನನಿ ಅವರ ತಪಸ್ಸನ್ನು ಕೆಡಿಸಲು ಬಂದ ದೇವಸ್ತ್ರೀ ಎಂದೂ ತಂದೆತಾಯಿಗಳಿಗೆ ಬೇಡದ ಈ ಕೂಸನ್ನು ತಿರುವಾಳನ್ ಎಂಬ ಬೇಡನೂ ಆತನ ಹೆಂಡತಿ ಪಂಗಯಚ್ಚೆಲ್ವಿಯಾರ್ ಎಂಬಾಕೆಯೂ ಬಾಲ್ಯ ತೀರುವವರೆಗೂ ಸಾಕಿಸಲಹಿದರೆಂದೂ ಗುರುಪರಂಪರಾ ಪ್ರಭಾವದಿಂದ ತಿಳಿದುಬರುತ್ತದೆ. ಸುಸ್ನಿಗ್ಧನಾದ ಕಣಿಕೃಷ್ಣ ಎಂಬ ಚತುರ್ಥವರ್ಣದ ಶಿಷ್ಯ-ಮಿತ್ರ ಈ ಆಳ್ವಾರರಿಗೆ ಬಾಲ್ಯದಿಂದಲೂ ದೊರೆತ. ಈತನೋ ಬಹು ಕುಶಲ. ವಿದ್ಯಾವಂತ ಮತ್ತು ಮಮತೆಯುಳ್ಳವ. ತಿರುಮಳಿಶೈ ಆಳ್ವಾರರು ಯಾರಿಂದ ವಿದ್ಯೆಗಳನ್ನು ಕಲಿತರೋ ತಿಳಿಯದು. ಆದರೆ ಆಳ್ವಾರ್ಗಳ ಪೈಕಿ ಇವರು ತುಂಬ ವಿದ್ಯಾಸಂಪನ್ನರೆಂದೂ ವೇದಶಾಸ್ತ್ರಗಳಲ್ಲಲ್ಲದೆ ಇತರ ಸಮಯಗಳಲ್ಲೂ ಇವರಿಗೆ ಪ್ರವೇಶವಿತ್ತೆಂದೂ ವಿಪ್ರರು ಮೊದಮೊದಲು ಇವರನ್ನು ಹೀನಾಯವಾಗಿ ಕಂಡರೂ ಕೊನೆಕೊನೆಗೆ ಮರ್ಯಾದೆಯಿಂದ ಕಂಡು ಆದರಿಸುತ್ತಿದ್ದರೆಂದೂ ಇವರ ವಿಷಯಕವಾದ ಕಥೆಗಳಿಂದ ತಿಳಿದುಬರುತ್ತದೆ. ಭಕ್ತರಲ್ಲಿ ಈತ ಏಕಾಂತಿ. ವಿಷ್ಣುವನ್ನಲ್ಲದೆ ಬೇರಾವ ದೈವವನ್ನೂ ನೆನೆಯಲೊಲ್ಲದವರು; ಇದರಿಂದ ಇವರು ಭಕ್ತಿಸಾರ ಎಂಬ ಬಿರುದಿಗೂ ಪಾತ್ರರಾಗಿದ್ದಾರೆ. ಇವರ ಎರಡು ಪ್ರಬಂಧಗಳು ನಾಲ್ಕು ಸಾವಿರದಲ್ಲಿ ಸೇರಿವೆ; ತಿರುಚ್ಚಂದವಿರುತ್ತಂ ಎಂಬುದರಲ್ಲಿ 120 ಬಿಡಿ ಪದ್ಯಗಳೂ ನಾನ್ಮುಹನ್ ತಿರುವನ್ದಾದಿ ಎಂಬುದರಲ್ಲಿ 96 ಬಿಡಿ ಪದ್ಯಗಳೂ ಇದ್ದು, ಒಟ್ಟು 216 ಪಾಶುರಗಳು ಇವರಿಂದ ಶ್ರೀವೈಷ್ಣವರಿಗೆ ಪ್ರಾಪ್ತವಾಗಿರುವ ನಿಧಿ. ಭಗವಂತನ ಚಕ್ರಾಂಶರೆಂದು ಸಂಪ್ರದಾಯ ಈ ಆಳ್ವಾರರನ್ನು ಪರಿಭಾವಿಸುತ್ತದೆ.