ತಿರುಮಲಾಂಬ (ಮಾರ್ಚ್ ೨೫, ೧೮೮೭ - ಆಗಸ್ಟ್ ೩೧ ೧೯೮೨) ಹೊಸಗನ್ನಡದ ಲೇಖಕಿ, ಪತ್ರಿಕಾ ಸಂಪಾದಕಿ, ಪ್ರಕಾಶಕಿ ಹಾಗೂ ಮುದ್ರಕಿ.

ನಂಜನಗೂಡು ತಿರುಮಲಾಂಬ
ಜನನಮಾರ್ಚ್ ೨೫, ೧೮೮೭
ನಂಜನಗೂಡು
ಮರಣಆಗಸ್ಟ್ ೩೧, ೧೯೮೨
ವೃತ್ತಿಲೇಖಕಿ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಕಥೆ, ಕವನ, ಕಾದಂಬರಿ, ನಾಟಕ
ವಿಷಯಜೀವನ, ಸ್ತ್ರೀಪರ ಕಾಳಜಿ
ಸಾಹಿತ್ಯ ಚಳುವಳಿನವೋದಯ

ಜೀವನಸಂಪಾದಿಸಿ

ಹೊಸಗನ್ನಡದ ಮೊದಲ ಲೇಖಕಿ, ಪತ್ರಿಕಾ ಸಂಪಾದಕಿ, ಪ್ರಕಾಶಕಿ, ಮುದ್ರಕಿ ಎಂದು ಪ್ರಖ್ಯಾತರಾಗಿ ಸ್ತ್ರೀ ಕುಲದ ಏಳಿಗೆಗೆ ಹಗಲಿರುಳೂ ಶ್ರಮಿಸಿದವರು ತಿರುಮಲಾಂಬ. ಅವರು ಮಾರ್ಚ್ 25, 1887ರ ವರ್ಷದಲ್ಲಿ ನಂಜನಗೂಡಿನಲ್ಲಿ ಜನಿಸಿದರು. ಇವರ ತಂದೆ ವೆಂಕಟಕೃಷ್ಣ ಅಯ್ಯಂಗಾರ್ ವಕೀಲರಾಗಿದ್ದರು. ತಾಯಿ ಅಲಮೇಲಮ್ಮನವರು. ಶ್ರೀವೈಷ್ಣವ ಪದ್ಧತಿಯ ಮನೆಗಳ ಪದ್ಧತಿಯಂತೆ ಇವರ ಮನೆಯ ಭಾಷೆ ತಮಿಳು. ಊರಭಾಷೆಯಾದ ಕನ್ನಡದ ಬಗ್ಗೆ ಇವರಲ್ಲಿ ವಿಶೇಷ ಪ್ರೀತಿ. ಕನ್ನಡ, ತಮಿಳಿನ ಜೊತೆಗೆ ತೆಲುಗು ಭಾಷೆಯೂ ಇವರಿಗೆ ಪರಿಚಿತವಾಗಿತ್ತು.

ಬಾಲ್ಯವಿವಾಹವೆಂಬುದು ಸಹಜವಾಗಿದ್ದ ಅಂದಿನ ಕಾಲದಲ್ಲಿ ತಿರುಮಲಾಂಬ ಅವರಿಗೂ ಹತ್ತನೇ ವಯಸ್ಸಿನಲ್ಲಿಯೇ ಮದುವೆಯಾಯಿತು. ಆದರೆ ಹದಿನಾಲ್ಕನೆಯ ವಯಸ್ಸಿನಲ್ಲಿಯೇ ಅವರಿಗೆ ಪತಿವಿಯೋಗ ಉಂಟಾಯಿತು. ಸಾಹಿತ್ಯ ಪ್ರಿಯರಾಗಿದ್ದ ತಂದೆ ವೆಂಕಟಕೃಷ್ಣ ಅಯ್ಯಂಗಾರ್ಯರು ವಿಶಾಲ ಮನೋಭಾವದವರಾಗಿದ್ದು, ತಾವು ಓದಿದ್ದ ಶ್ರೇಷ್ಠತೆಗಳನ್ನು ತಮ್ಮ ಮಗಳಿಗೂ ದೊರಕುವಂತೆ ಮಾಡಿದರು. ಹೀಗಾಗಿ ಪುಸ್ತಕಗಳೇ ಅವರ ಸಂಗಾತಿಗಳಾದವು. ರಾಮಾಯಣ, ಮಹಾಭಾರತ, ಭಾಗವತಗಳ ವಾಚನವಷ್ಟೇ ಅಲ್ಲದೆ ನಂಜನಗೂಡು ಶ್ರೀಕಂಠಶಾಸ್ತ್ರಿ, ಬೆಳ್ಳಾವೆ ಸೋಮನಾಥಯ್ಯ, ಎಂ. ವೆಂಕಟಾದ್ರಿ ಶಾಸ್ತ್ರಿ ಮುಂತಾದ ಕಥೆ ನಾಟಕಗಳನ್ನು ಅವರು ವ್ಯಾಪಕವಾಗಿ ಓದತೊಡಗಿದರು. ಹೀಗೆ ತಮ್ಮ ಓದುಗಳಿಂದ ಆಂತರ್ಯವನ್ನು ಗಟ್ಟಿಗೊಳಿಸುತ್ತಾ ಮುನ್ನಡೆದ ತಿರುಮಲಾಂಬ ಅವರು ತಮ್ಮ ವೈಯಕ್ತಿಕ ಬದುಕಿಗೆ ಕಂಬನಿ ಮಿಡಿಯದೆ, ಲೋಕದ ಜನರ ಕಷ್ಟಕಾರ್ಪಣ್ಯಗಳ ಕಡೆಗೆ ತಮ್ಮ ಮನಸ್ಸನ್ನು ಓಗೊಡಿಸುವುದರತ್ತ ಮನಮಾಡಿ ನಿಂತರು.

ಶಿಕ್ಷಕಿಯಾಗಿಸಂಪಾದಿಸಿ

ತಮ್ಮ ಬಿಡುವಿನ ವೇಳೆಯಲ್ಲಿ ಆಚೀಚಿನ ಮಕ್ಕಳಿಗೆ ಪಾಠ ಹೇಳಿಕೊಡಲು ಪ್ರಾರಂಭಿಸಿದ ತಿರುಮಲಾಂಬ ಅವರ ಮನೆ ಕ್ರಮೇಣವಾಗಿ ಒಂದು ಪಾಠಶಾಲೆಯಾಗಿಯೇ ರೂಪುಗೊಂಡಿತು. ಮಕ್ಕಳು ಮಾತ್ರವಲ್ಲದೆ ನೆರೆಹೊರೆಯ ಮಹಿಳೆಯರೂ ತಮ್ಮ ಕೆಲಸ ಕಾರ್ಯಗಳನ್ನು ಆದಷ್ಟು ಬೇಗ ಮುಗಿಸಿ ತಮ್ಮ ಮಕ್ಕಳೊಂದಿಗೆ ತಾವೂ ಕಲಿಯತೊಡಗಿದರು. ಹೀಗೆ ಕ್ರಮೇಣದಲ್ಲಿ ಇದು "ಮಾತೃಮಂದಿರ" ಎಂಬ ಹೆಸರು ಪಡೆಯಿತು. ಈ ದಿನಗಳಲ್ಲಿ ತಮ್ಮ ನೆಚ್ಚಿನ ವಿದ್ಯಾರ್ಥಿಗಳಿಗಾಗಿ ತಿರುಮಲಾಂಬ ಅವರು "ಸನ್ಮಾರ್ಗದರ್ಶಿನಿ" ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು.

ತಮ್ಮ ಅಧ್ಯಯನ ವೇಳೆಯಲ್ಲಿ ತಮಗೆ ಇಷ್ಟವಾದದ್ದನ್ನು ಬರೆದಿಟ್ಟುಕೊಳ್ಳುವುದು ತಿರುಮಲಾಂಬ ಅವರಿಗಿದ್ದ ಒಂದು ವಾಡಿಕೆ. ಇದಕ್ಕೆ ಚಿಂತನೆಗಳ ವ್ಯಾಪ್ತಿಯೂ ಒಡಗೂಡತೊಡಗಿದಂತೆ ಅವರ ಬರಹಗಳ ವ್ಯಾಪ್ತಿ ನಾಟಕ, ಕಾದಂಬರಿ, ಕತೆ, ಭಕ್ತಿಗೀತೆಗಳಿಗೆ ವಿಸ್ತರಿಸತೊಡಗಿತು. ಇವರ ಬರಹಗಳಿಗೆ ಅವರ "ಮಾತೃಮಂದಿರ" ಸಭಿಕರನ್ನು ಯಥೇಚ್ಛವಾಗಿ ಒದಗಿಸುತ್ತಿತ್ತು. ಹೀಗಾಗಿ ಹೆಚ್ಚು ಹೆಚ್ಚು ವಿಷಯಗಳನ್ನು ತಮ್ಮ ಆಪ್ತ ಸಭಿಕರಿಗೆ ಮುಟ್ಟಿಸುವ ನಿಟ್ಟಿನಲ್ಲಿ ತಿರುಮಲಾಂಬ ಅವರು ಹೆಚ್ಚು ಹೆಚ್ಚು ಬರೆಯತೊಡಗಿದರು.

ಬರಹಗಾರ್ತಿಯಾಗಿಸಂಪಾದಿಸಿ

ಒಮ್ಮೆ "ಮಧುರವಾಣಿ" ಎಂಬ ಮೈಸೂರಿನಲ್ಲಿದ್ದ ಮಾಸ ಪತ್ರಿಕೆ ಒಂದು ಕಥಾಸ್ಪರ್ಧೆಯನ್ನು ಏರ್ಪಡಿಸಿದ್ದ ಸಂದರ್ಭದಲ್ಲಿ ತಿರುಮಲಾಂಬ ಅವರೂ ತಮ್ಮ ಕತೆಯನ್ನು ಕಳುಹಿಸಿಕೊಟ್ಟರು. ಇಷ್ಟು ಸುಂದರವಾದ ಕಥೆ ಬರೆದ ಲೇಖಕಿಯನ್ನು ಹುಡುಕಿಕೊಂಡು ಸ್ವಯಂ "ಮಧುರವಾಣಿ"ಯ ಸಂಪಾದಕರಾದ ಶ್ರೀ ಕೆ. ಹನುಮಾನ್ ಅವರೇ ತಿರುಮಲಾಂಬ ಅವರ ಮನೆಗೆ ಬಂದರಂತೆ. ಆಗ ಅಲ್ಲಿ ಅವರಿಗೆ ಕಂಡದ್ದು ಹಲವಾರು ಬರಹಗಳ ಕಣಜ. ಹಲವು ಕತೆಗಳು, ಕಾದಂಬರಿ, ನಾಟಕ, ಪ್ರಬಂಧಗಳು ಹೀಗೆ ವೈವಿಧ್ಯಮಯ ಬರಹಗಳು ಆ ಕಣಜದಲ್ಲಿದ್ದವು. ಇವುಗಳಲ್ಲಿ "ವಿಧವಾ ಕರ್ತವ್ಯ" ಎಂಬ ಬರಹದಿಂದ ಪ್ರಭಾವಿತರಾದ ಹನುಮಾನರು ಅದನ್ನು ತಮ್ಮ "ಮಧುರವಾಣಿ" ಪತ್ರಿಕೆಯಲ್ಲಿ ಪ್ರಕಟಿಸಿದರು. ಅಂದಿನ ಮಡಿವಂತಿಕೆಯ ಸಮಾಜದಲ್ಲಿ ಅದರ ಕುರಿತು ಹಲವಾರು ಟೀಕೆಗಳು ಬಂದುವಾದರೂ ಅವಕ್ಕೆಲ್ಲ ದೃತಿಗೆಡದ ತಿರುಮಲಾಂಬ ಅವರು, ತಮಗೆ ಸರಿ ಎನಿಸುವುದನ್ನು ಆತ್ಮವಿಶ್ವಾಸದಿಂದ ಮಾಡುತ್ತಾ ಹೋದರು. ಇದಕ್ಕೆ ಅವರ ವಾತ್ಸಲ್ಯಮಯಿ ತಂದೆಯ ಬೆಂಬಲ ಆಶೀರ್ವಾದಗಳೂ ಜೊತೆಗಿದ್ದವು. ಮುಂದೆ ತಿರುಮಲಾಂಬ ಅವರು "ಸತೀ ಹಿತೈಷಿಣಿ" ಗ್ರಂಥಮಾಲೆಯನ್ನು ಪ್ರಾರಂಭಿಸಿದರು.

ಪ್ರಕಾಶಕಿಯಾಗಿಸಂಪಾದಿಸಿ

"ಸತೀಹಿತೈಷಿಣಿ"ಯ ಪ್ರಥಮ ಪ್ರಕಟಣೆಯಾಗಿ ತಿರುಮಲಾಂಬ ಅವರ "ಸುಶೀಲೆ" ಕಾದಂಬರಿ 1913ರ ವರ್ಷದಲ್ಲಿ ಪ್ರಕಟಗೊಂಡಿತು. ಆ ಕಾದಂಬರಿ ಪ್ರಕಟಗೊಂಡ ಕ್ಷಿಪ್ರ ಅವಧಿಯಲ್ಲೇ ನಾಲ್ಕು ಆವೃತ್ತಿಗಳನ್ನು ಕಂಡು 7000ಕ್ಕೂ ಹೆಚ್ಚು ಪ್ರತಿಗಳ ಮಾರಾಟವನ್ನು ಕಂಡಿತು.

"ಸತೀಹಿತೈಷಿಣಿ" ಸಂಸ್ಥೆಯಿಂದ ಕೇವಲ ತಿರುಮಲಾಂಬ ಅವರ ಪ್ರಕಟಣೆಗಳು ಮಾತ್ರವಲ್ಲದೆ "ಸನ್ಮಾನ ಗ್ರಂಥಾವಳೀ", "ಸನ್ಮಾರ್ಗದರ್ಶಿ ಗ್ರಂಥ ಮಾಲಿಕಾ", "ನಂದಿನಿ ಗ್ರಂಥಮಾಲಾ" (ಪಾನ್ಯಂ ಸುಂದರಶಾಸ್ತ್ರಿ, ಸರಗೂರ ವೆಂಕಟ ವರದಾಚಾರ್ಯ), ಲಕ್ಷ್ಯಲಕ್ಷಣಗಳ ಬಗ್ಗೆ ಹೇಳುವ "ಅಲಂಕಾರ ಶಾಸ್ತ್ರ ಗ್ರಂಥ" (ಡಾ. ಎಸ್ .ಎನ್. ನರಸಿಂಹಯ್ಯ), "ಸೂಕ್ಷ್ಮಾಯುರ್ವೇದ ಚಿಕಿತ್ಸಾ ಪ್ರಯೋಗ", "ಸರಳ ಯೂನಿಪ್ಯಾಥಿ ಚಿಕಿತ್ಸಕ" ಎಂಬ ವೈದ್ಯಶಾಸ್ತ್ರ ಗ್ರಂಥ (ಡಾ. ಶ್ರೀನಿವಾಸ ಮೂರ್ತಿ) ಅಂತಹ ಶ್ರೇಷ್ಠ ಪುಸ್ತಕಗಳೂ ಪ್ರಕಟಗೊಂಡವು. ಅಷ್ಟೊಂದು ಶ್ರೇಷ್ಠ ಮನೋಭಾವನೆ ತಿರುಮಲಾಂಬ ಅವರಲ್ಲಿತ್ತು. 1913-16ರ ಅವಧಿಯಲ್ಲಿ ತಿರುಮಲಾಂಬ ಅವರ "ನಭಾ", "ವಿದ್ಯುಲ್ಲತಾ", "ಹರಿಣ" ಮುಂತಾಗಿ ಒಟ್ಟು ಹನ್ನೊಂದು ಪುಸ್ತಕಗಳು ಪ್ರಕಟಗೊಂಡವು. ಕತೆ, ಕಾದಂಬರಿ, ಕಿರುಕಾದಂಬರಿ, ಪತ್ತೇದಾರಿ ಕಾದಂಬರಿ, ಪ್ರಬಂಧ, ಪದ್ಯ, ನಾಟಕ ಅಂತ ಅವರು ಬರೆದ ಒಟ್ಟು ಕೃತಿಗಳು ಸುಮಾರು ಇಪ್ಪತ್ತೆಂಟು. ತಿರುಮಲಾಂಬ ಅವರು 1939ರಲ್ಲಿ ರಚಿಸಿದ "ಮಣಿಮಾಲ" ಅವರ ಕೊನೆಯ ಕಾದಂಬರಿ.

ಇವರ ಪೂರ್ಣಕಲಾಗ್ರಂಥ, ದಕ್ಷಕನ್ಯಾ, ಮತ್ತು ವಿದ್ಯುಲ್ಲತಾ ಕೃತಿಗಳು ಮೈಸೂರು ವಿಶ್ವವಿದ್ಯಾಲಯದ ಇಂಟರಮೀಡಿಯೆಟ್ ಹಾಗು ಬಿ.ಎಸ್.ಸಿ. ತರಗತಿಗಳಿಗೆ ಪಠ್ಯಪುಸ್ತಕಗಳಾಗಿದ್ದವು.

ಪತ್ರಿಕಾ ಸಂಪಾದಕಿಯಾಗಿಸಂಪಾದಿಸಿ

ಮುಂದೆ ತಿರುಮಲಾಂಬ ಅವರು "ಕರ್ನಾಟಕ ನಂದಿನಿ" ಮಾಸಪತ್ರಿಕೆಯನ್ನು ಪ್ರಾರಂಭಿಸಿದರು. "ನಾನು ವಿದ್ಯಾಗಂಧವನ್ನೇ ತಿಳಿಯದ ಅಲ್ಪಮತಿಯಾದ ಸಾಮಾನ್ಯ ಸ್ತ್ರೀ. ನವ ನಾಗರಿಕತೆಯ ಸುಳಿವಾಗಲೀ, ತಿಳಿವಳಿಕೆ ತಿರುಳಾಗಲೀ ತಿಳಿಯದ ಬಾಲಿಕೆ. ಆದರೂ ನಮ್ಮ ಸೋದರೀ ವರ್ಗಕ್ಕೆ ನನ್ನ ಕೈಯಲ್ಲಾಗುವ ಸೇವೆಯನ್ನು ಮಾಡಬೇಕೆಂಬ ಅತ್ಯುತ್ಕಟೇಚ್ಛೆಯು ನನ್ನನ್ನು ಬಿಡಲೊಲ್ಲದು" ಎಂದು ಹೇಳುತ್ತಿದ್ದ ತಿರುಮಲಾಂಬ ಅವರ ಈ ಮಾಸಪತ್ರಿಕೆ ಸ್ತ್ರೀ ಸಮುದಾಯಕ್ಕೆ ಕೊಟ್ಟ ವಿಶಿಷ್ಟ ಕೊಡುಗೆಯಾಗಿತ್ತು. "ನಂದಿನಿ"ಗೆ ಕವಿತೆ ಕಳಿಸಿದವರಲ್ಲಿ ಎಳವೆಯಲ್ಲೇ ತೀರಿಕೊಂಡ ಉಡುಪಿಯ ತುಳಸೀಬಾಯಿ ಎಂಬ ಲೇಖಕಿಯೂ ಒಬ್ಬರು. ಕಡೆಂಗೋಡ್ಲು ಶಂಕರಭಟ್ಟರು ತಮ್ಮ ಕೆಲ ಬರಹಗಳನ್ನು ನಂದಿನಿಗೆ ಕಳುಹಿಸುತ್ತಿದ್ದರು. ಪತ್ರಿಕೆಯಲ್ಲಿ "ಕನ್ನಡ ರನ್ನಗನ್ನಡಿ" ಎಂಬೊಂದು ಪುಟ ಕನ್ನಡದ ಕೈಂಕರ್ಯ ನಡೆಸಿದವರಿಗಾಗಿಯೇ ಮೀಸಲಾಗಿತ್ತು. ಶಿಕ್ಷಿತ ಮಹಿಳೆಯರನ್ನು "ನಂದಿನಿ"ಗೆ ಬರೆಯಲು ಅವರು ಕೋರಿಕೊಳ್ಳುತ್ತಿದ್ದರು. ಬರೆದವರು ಬೆರಳೆಣಿಕೆಯಷ್ಟು ಮಾತ್ರವೇ ಇದ್ದಿದ್ದರಿಂದ ಪುಟ ತುಂಬಿಸಲು ಸ್ವಯಂ ತಿರುಮಲಾಂಬ ಅವರೇ ಬೇರೆ ಬೇರೆ ಹೆಸರುಗಳಲ್ಲಿ ನಿರಂತರವಾಗಿ ಬರೆಯಬೇಕಾಗುತ್ತಿತ್ತು. ಈ ಪತ್ರಿಕೆಯನ್ನು ಬಹುಕಾಲ ನಡೆಸಲು ಸಾಧ್ಯವಾಗದೆ ನಿಲ್ಲಿಸಬೇಕಾಗಿ ಬಂತು.

ಕೊನೆಯ ದಿನಗಳುಸಂಪಾದಿಸಿ

ಈ ಮಧ್ಯೆ ತಮ್ಮ ತಂದೆಯವರ ಮರಣ ತಿರುಮಲಾಂಬ ಅವರಿಗೆ ಆಘಾತವನ್ನು ತಂದಿತ್ತು. ಹೀಗಾಗಿ ಅವರು ಹೆಚ್ಚು ಹೆಚ್ಚು ಅಂತರ್ಮುಖಿಗಳಾದ ತಿರುಮಲಾಂಬ ಅವರು ತಮ್ಮ ಬರವಣಿಗೆಯನ್ನು ಅಧ್ಯಾತ್ಮದೆಡೆಗೆ ತಿರುಗಿಸಿದರು. ಮುಂದೆ ಬರವಣಿಗೆಯೂ ಬೇಡವೆಂದೆನಿಸಿ, ಅವರ ಮನಸ್ಸು ಮೌನಕ್ಕೆ ತಿರುಗಿತು.

ತೊಂಬತ್ತೈದು ವರ್ಷಗಳ ತಮ್ಮ ಸುದೀರ್ಘ ಜೀವನದಲ್ಲಿ ಕಷ್ಟಕಾರ್ಪಣ್ಯ, ಟೀಕೆ ಟಿಪ್ಪಣಿಗಳು, ಲಾಭ ನಷ್ಟಗಳು ಇವೆಲ್ಲವನ್ನೂ ಮೀರಿ ನಡೆಸಿದ ಮೌಲ್ಯಯುತ ಬದುಕು ಈ ಲೋಕದ ಜನರಿಗೆ ದಾರಿದೀಪವಾಗುವಂತದ್ದು. ಹೊಸಕನ್ನಡದ ಈ ಪ್ರಪ್ರಥಮ ಲೇಖಕಿ, ಪತ್ರಿಕಾ ಸಂಪಾದಕಿ, ಪ್ರಕಾಶಕಿ ಶ್ರೀಮತಿ ನಂಜನಗೂಡು ತಿರುಮಲಾಂಬ ಅವರು 1982ರ ಆಗಸ್ಟ್ 31ರಂದು ಈ ಲೋಕದಿಂದ ಮರೆಯಾದರು. ಅವರ ಬದುಕು, ಆ ಬದುಕು ತೋರಿದ ಬೆಳಕು ಎಂದೆಂದೂ ಅಳಿಸಲಾರದಂತದ್ದು.

ಪ್ರಶಸ್ತಿ ಪುರಸ್ಕಾರ ಗೌರವಗಳುಸಂಪಾದಿಸಿ

"ಸತೀ ಹಿತೈಷಿಣಿ" ಗ್ರಂಥಮಾಲೆಯಿಂದ ಹೊರಬಂದ "ಮಾತೃನಂದಿನಿ", "ಚಂದ್ರವದನಾ", "ರಮಾನಂದ" ಮುಂತಾದ ಕೃತಿಗಳು ಮದ್ರಾಸ್ ಸ್ಕೂಲ್ ಬುಕ್ ಏಂಡ್ ಲಿಟರೇಚರ್ ಸೊಸೈಟಿಯ ಬಹುಮಾನ ಪಡೆದವು. ಕರ್ನಾಟಕ ವಿದ್ಯಾವರ್ಧಕ ಸಂಘ "ರಮಾನಂದ" ಮತ್ತು "ಪೂರ್ಣಕಲಾ" ಕೃತಿಗಳಿಗೆ ಪುರಸ್ಕಾರ ನೀಡಿತು. ಮೈಸೂರು, ಮದರಾಸು, ಮುಂಬಯಿ ಸರಕಾರಗಳು ತಿರುಮಲಾಂಬ ಅವರ ಹಲವಾರು ಕೃತಿಗಳಿಗೆ ಬಹುಮಾನಗಳನ್ನು ನೀಡಿದ್ದವು. ೧೯೮೦ರ ವರ್ಷದಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯು ತಿರುಮಲಾಂಬ ಅವರನ್ನು ಗೌರವಿಸಿತು.

1917ರಿಂದ ಸುಮಾರು ಎರಡು ದಶಕಗಳ ಕಾಲ ಪ್ರತೀವರ್ಷ ಅವರ ಕೃತಿಗಳು ಮದ್ರಾಸು, ಮೈಸೂರು, ಮುಂಬಯಿ ರಾಜ್ಯಗಳ ಶಾಲಾಕಾಲೇಜುಗಳಲ್ಲಿ ಪಠ್ಯವಾಗಿದ್ದವು.

ತಿರುಮಲಾಂಬ ಪ್ರಶಸ್ತಿಸಂಪಾದಿಸಿ

ತಿರುಮಲಾಂಬ ಅವರ ಹೆಸರನ್ನು ಚಿರಸ್ಥಾಯಿಗೊಳಿಸಲು ಚಿ.ನ.ಮಂಗಳಾ ಅವರು ರೂಪಿಸಿದ "ಶಾಶ್ವತಿ" ಸಂಸ್ಥೆ ತಿರುಮಲಾಂಬಾ ಅವರ ಜನ್ಮಶತಾಬ್ದಿಯ ಅಂಗವಾಗಿ ಮಾರ್ಚಿ ೨೫ ೧೯೮೭ ರಂದು ನಡೆದ ಸಮಾರಂಭದ ಸಂದರ್ಭದಲ್ಲಿ 'ಶ್ರೀಮತಿ ನಂಜನಗೂಡು ತಿರುಮಲಾಂಬಾ ಪ್ರಶಸ್ತಿ'ಯನ್ನು ಸ್ಥಾಪಿಸಿತು. ಈ ಪ್ರಶಸ್ತಿಯನ್ನು ಪ್ರತಿವರ್ಷ ಶ್ರೇಷ್ಠ ಮಹಿಳಾ ಬರಹಗಾರ್ತಿಯೊಬ್ಬರಿಗೆ "ತಿರುಮಲಾಂಬ ಪ್ರಶಸ್ತಿ" ನೀಡುತ್ತ ಬಂದಿದೆ.

ಕೃತಿಗಳುಸಂಪಾದಿಸಿ

ಕಾದಂಬರಿಗಳುಸಂಪಾದಿಸಿ

  • ಸುಶೀಲ(ಇದರಲ್ಲಿ 'ಕಾದಂಬರಿ'ಎಂಬ ಪದ ಬಳಕೆ)
  • ನಭಾ
  • ವಿದ್ಯುಲ್ಲತಾ
  • ವಿರಾಗಿಣಿ
  • ದಕ್ಷಕನ್ಯೆ (ಪತ್ತೇದಾರಿ)
  • ಮಣಿಮಾಲ

ನಾಟಕಗಳುಸಂಪಾದಿಸಿ

  • ಸಾವಿತ್ರಿ ಚರಿತ್ರೆ
  • ಜಾನಕೀ ಕಲ್ಯಾಣ
  • ಚಂದ್ರವದನಾ,
  • ರಮಾನಂದ,

ಮಾಹಿತಿ ಕೃಪೆಸಂಪಾದಿಸಿ

ವೈದೇಹಿ ಅವರ ತಿರುಮಲಾಂಬ ಅವರ ಕುರಿತ ಬರಹ