ತಾಳೆಬೆಕ್ಕು ಕಾರ್ನಿವೊರ ಗಣದ ವೈವೆರಿಡೇ ಕುಟುಂಬಕ್ಕೆ ಸೇರಿದ ಒಂದು ಬಗೆಯ ಕಾಡುಬೆಕ್ಕು (ಪಾಮ್ ಸಿವೆಟ್, ಟಾಡಿ ಕ್ಯಾಟ್). ಪ್ಯಾರಾಡಾಕ್ಸ್ಯೂರಸ್ ಹರ್ಮಾಫ್ರೊಡಿಟಸ್ ಇದರ ವೈಜ್ಞಾನಿಕ ಹೆಸರು.[] ಮರಬೆಕ್ಕು, ಮಂಟಬೆಕ್ಕು ಎಂಬ ಹೆಸರುಗಳೂ ಇದಕ್ಕೆ ಉಂಟು. ಭಾರತದಾದ್ಯಂತ ಇದು ಕಾಣದೊರೆಯುವುದು.

ದೇಹ ರಚನೆ

ಬದಲಾಯಿಸಿ

ತೂಕ ಸುಮಾರು 4 ಕಿ.ಗ್ರಾಂ. ಮನೆಯ ಬೆಕ್ಕಿಗಿಂತ ಕೊಂಚ ದೊಡ್ಡ ಗಾತ್ರದ ಪ್ರಾಣಿಯಿದು. ದೇಹದ ಉದ್ದ 60 ಸೆಂ.ಮೀ. ಅಷ್ಟೇ ಉದ್ದದ ಬಾಲ ಉಂಟು. ದೇಹದ ಮೇಲೆ ಬಿರುಸಾದ ಉದ್ದನೆಯ ಕೂದಲುಗಳಿವೆ. ದೇಹದ ಬಣ್ಣ ಕಪ್ಪು ಇಲ್ಲವೇ ಕಪ್ಪುಮಿಶ್ರಿತ ಕಂದು. ಉದರ ಭಾಗ ಮಾತ್ರ ಬಿಳಿ. ಮಾಸಲು ಬಿಳಿ ಇಲ್ಲವೆ ಹಳದಿ, ವರ್ಷಕ್ಕೊಮ್ಮೆ ಮೈಮೇಲಿನ ತುಪ್ಪುಳು ಉದುರಿಹೋಗುವುದು. ಹೊಸ ತುಪ್ಪುಳ ಮೂಡುವಾಗ ಬೆನ್ನಿನ ಮೇಲೆ ಉದ್ದುದ್ದನೆಯ ಪಟ್ಟೆಗಳೂ ಪಾಶ್ರ್ವ, ಭುಜ ಮತ್ತು ತೊಡೆಗಳ ಮೇಲೆ ಮಚ್ಚೆಗಳೂ ಕಾಣುತ್ತವೆ. ಕಣ್ಣಿನ ಕೆಳಗೆ, ಕೆನ್ನೆಯ ಮೇಲೆ ಬಿಳಿ ಮಚ್ಚೆ ಉಂಟು.

ವಾಸದ ಸ್ಥಳ

ಬದಲಾಯಿಸಿ

ತಾಳೆಬೆಕ್ಕು ವನ್ಯವಾಸಿ, ಇದರ ವಾಸವೆಲ್ಲ ಬಹುವಾಗಿ ಮರಗಳ ಮೇಲೆಯೆ, ತಾಳೆಮರ, ಮಾವಿನ ಮರ ಮುಂತಾದ ಮರಗಳ ರೆಂಬೆಗಳಲ್ಲೊ ಪ್ರಧಾನ ಕಾಂಡದ ಪೊಟರೆಗಳಲ್ಲೊ ಹಗಲೆಲ್ಲ ಅವಿತಿದ್ದು ರಾತ್ರಿ ಆಹಾರಾನ್ವೇಷಣೆಗೆಂದು ಹೊರ ಹೊರಡುತ್ತದೆ. ಕೆಲವು ಸಲ ಹಳ್ಳ, ಊರುಗಳಲ್ಲೂ ತಾಳೆಬೆಕ್ಕು ಸೇರಿಕೊಂಡುಬಿಡುವುದುಂಟು. ಆಗ ಮನೆಗಳ ಮಾಡುಗಳಲ್ಲಿ, ಚರಂಡಿ ಸಂದುಗಳಲ್ಲಿ ಅಡಗಿಕೊಂಡು ವಾಸಿಸುತ್ತದೆ.

ಇಲಿ, ಅಳಿಲು, ಸಣ್ಣ ಪುಟ್ಟ ಹಕ್ಕಿಗಳು ಇದರ ಮುಖ್ಯ ಆಹಾರವಾದರೂ ವಿವಿಧ ಬಗೆಯ ಹಣ್ಣು ಕಾಯಿಗಳನ್ನು ತಿನ್ನುವುದುಂಟು. ಕೆಲವು ಸಲ ಕೋಳಿಮರಿಗಳನ್ನು ಹಿಡಿದು ತಿನ್ನುತ್ತದೆ. ಕಾಫಿತೋಟ, ಅನಾನಸ್ ತೋಟಗಳಿಗೆ ನುಗ್ಗಿ ಹಾಳುಮಾಡುವುದೂ ಉಂಟು. ಈಚಲು ಮರದಿಂದ ಹೆಂಡ ಇಳಿಸಲೆಂದು ಕಟ್ಟುವ ಮಡಕೆಗಳನ್ನು ಕೊಳ್ಳೆ ಹೊಡೆದು ಹೆಂಡವನ್ನು ಕುಡಿಯುವ ವಿಚಿತ್ರ ಪರಿಪಾಟಿಯೂ ಇದಕ್ಕೆ ಇದೆಯೆಂದು ಹೇಳಲಾಗಿದೆ.

ತಾಳೆಬೆಕ್ಕು ಒಂದು ಸಲಕ್ಕೆ ಸಾಮಾನ್ಯವಾಗಿ 3-4ಮರಿಗಳನ್ನು ಈಯುತ್ತದೆ. ಮರಿಗಳನ್ನು ಈಯಲು ನಿರ್ದಿಷ್ಟ ಪ್ರಾಯವಿಲ್ಲ. ತಾಳೆಬೆಕ್ಕುಗಳನ್ನು ಸಾಕುವುದುಂಟು. ದಕ್ಷಿಣ ಭಾರತದಲ್ಲಿ ಪ್ಯಾರಡಾಕ್ಸ್ಯೂರಸ್ ಜೆರ್ಡೋನೈ ಎಂಬ ಹೆಸರಿನ ಇನ್ನೊಂದು ಬಗೆಯ ತಾಳೆಬೆಕ್ಕು ಕಾಣಸಿಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Wozencraft, W. C. (2005). "Species Paradoxurus hermaphroditus". In Wilson, D. E.; Reeder, D. M (eds.). Mammal Species of the World (3rd ed.). Johns Hopkins University Press. pp. 532–628. ISBN 978-0-8018-8221-0. OCLC 62265494. {{cite book}}: Invalid |ref=harv (help); no-break space character in |first= at position 3 (help)


ಹೊರಗಿನ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: