ತಕ್ಕಡಿ
ತಕ್ಕಡಿ ವಸ್ತುಗಳ ತೂಕವನ್ನು ಅಳತೆ ಮಾಡುವ ಒಂದು ಸಾಧನ.ಇದು ಅನಾದಿ ಕಾಲದಿಂದಲೂ ಬಳಕೆಯಲ್ಲಿರುವ ಸಧನವಾಗಿದೆ. ಇದರಲ್ಲಿ ಹಲವಾರು ಬಗೆಗಳಿವೆ.ಸರಳವಾದ ತಕ್ಕಡಿಯಲ್ಲಿ ಒಂದು ಲೋಹದ ಹಾಳೆಗೆ ಉದ್ದವಾದ ಕೋಲನ್ನು ಮದ್ಯಭಾಗದಲ್ಲಿ ಸಿಕ್ಕಿಸಿ ಅದರ ಒಂದು ತುದಿಯಲ್ಲಿ ತೂಕದ ಮಾಪಕವನ್ನು ಇಟ್ಟು ಇನ್ನೊಂದು ತುದಿಯಲ್ಲಿ ತೂಕ ಮಾಡಬೇಕಾದ ವಸ್ತುವನ್ನು ಇಡುತ್ತಾರೆ.ವಸ್ತುವಿನ ತೂಕಕ್ಕೆ ಅನುಗುಣವಾಗಿ ಮಾಪಕವನ್ನು ಬದಲಾಯಿಸಿ ತೂಕವನ್ನು ಕಂಡುಕೊಳ್ಳುತ್ತಾರೆ.
ತ್ರಾಸು, ಚಿಂತಾಲು ಪರ್ಯಾಯ ಪದಗಳು. ತಕ್ಕಡಿಯ ಬಳಕೆಯಿಂದ ತಿಳಿಯುವುದು ವಸ್ತುವಿನ ರಾಶಿಯಾದರೂ ರೂಢಿಯಲ್ಲಿ ಈ ಕ್ರಿಯೆಗೆ ತೂಕಮಾಡುವುದು (ವೇಯಿಂಗ್) ಎಂಬ ಹೆಸರಿದೆ. ದಿನಬಳಕೆಯ ಸಾಮಗ್ರಿ ಮತ್ತು ಸರಕುಗಳನ್ನು ತೂಕಮಾಡಲು ತಕ್ಕಡಿಗಳು ಇರುವಂತೆಯೇ ಕೈಗಾರಿಕೆ, ಪ್ರಯೋಗಶಾಲೆ, ರಾಸಾಯನಿಕ ವಿಶ್ಲೇಷಣೆ ಹಾಗೂ ಅಧ್ಯಯನಗಳಲ್ಲಿ ಉಪಯುಕ್ತವಾಗುವಂಥ ವಿಶೇಷ ರೀತಿಯಲ್ಲಿ ನಿರ್ಮಿಸಲಾದ ತಕ್ಕಡಿಗಳು ಇವೆ. ಉದಾಹರಣೆಗೆ ರಾಸಾಯನಿಕ ತಕ್ಕಡಿ, ಕಡಿಮೆ ತೂಕದ ಸರಕು ಸಾಮಗ್ರಿಗಳನ್ನು ತೂಕ ಮಾಡುವುದಕ್ಕೆ ದೂಲಮಾದರಿಯ (ಬೀಮ್ ಟೈಪ್) ಸಾಮಾನ್ಯ ತಕ್ಕಡಿಗಳನ್ನೂ ಹೆಚ್ಚು ಪರಿಮಾಣದ ಸರಕು ಸಾಮಗ್ರಿಗಳನ್ನು ತೂಕಮಾಡಲು ಹೆಚ್ಚು ದೃಢವಾದ ತೂಕಯಂತ್ರಗಳನ್ನೂ (ವೇಯಿಂಗ್ ಮಶೀನ್ಸ್) ಬಳಸುತ್ತಾರೆ. ಇಂಥ ತೂಕಯಂತ್ರಗಳನ್ನು ರೇಲ್ವೆ ನಿಲ್ದಾಣ, ಬಸ್‍ನಿಲ್ದಾಣ, ನಿಯಂತ್ರಿತ ಮಾರುಕಟ್ಟೆ, ಉಗ್ರಾಣ ಸ್ಥಳ, ಹಡಗು ಹಾಗೂ ಬಂದರು ಕಟ್ಟೆ, ಕಾರ್ಖಾನೆಗಳು-ಮುಂತಾದ ಸ್ಥಳಗಳಲ್ಲಿ ಕಾಣಬಹುದು.
ಇತಿಹಾಸ
ಬದಲಾಯಿಸಿಕ್ರಿ.ಪೂ. 5000ರಲ್ಲಿ ಈಜಿಪ್ಷಿಯನ್ನರು ಸಮಬಾಹು ತಕ್ಕಡಿಯನ್ನು ಮೊದಲಿಗೆ ರಚಿಸಿದರು. ಅದರ ನಡುದಂಡದ ಮೇಲ್ತುದಿಯಲ್ಲಿ ಒಂದು ದೂಲವಿತ್ತು. ದೂಲದ ಬಾಹುಗಳ (ಆಮ್ರ್ಸ್) ಎರಡು ತುದಿಗಳಲ್ಲಿ ದಾರಗಳಿಂದ ತೂಗಹಾಕಲಾಗಿದ್ದ ಒಂದೇ ತೂಕದ ಎರಡು ತಟ್ಟೆಗಳಿದ್ದುವು. ಕಾಲಕ್ರಮೇಣ ತಕ್ಕಡಿಯ ಈ ವ್ಯವಸ್ಥೆಯಲ್ಲಿ ಸುಧಾರಣೆ ಕಂಡುಬಂತು. ಕ್ರಿಸ್ತಶಕದ ವೇಳೆಗೆ ರೋಮನರು ನಡುದಂಡದ ತುದಿಗೆ ಒಂದು ಧಾರಕವನ್ನು (ಬ್ಯಾರಿಂಗ್) ಅಳವಡಿಸಿದರು. ಚೂರಿ ಅಲಗನ್ನು ತಕ್ಕಡಿಗಳಲ್ಲಿ ಉಪಯೋಗಿಸುವುದು ಹದಿನೆಂಟನೆಯ ಶತಮಾನದಲ್ಲಿ ರೂಢಿಗೆ ಬಂತು. ಹತ್ತೊಂಬತ್ತನೆಯ ಶತಮಾನದ ಕೊನೆಯ ವೇಳೆಗೆ ನಿಖರವಾದ ತಕ್ಕಡಿಗಳ ನಿರ್ಮಾಣವಾಯಿತು. ಇಪ್ಪತ್ತನೆಯ ಶತಮಾನದಲ್ಲಿ ಆಗಿರುವ ಸುಧಾರಣೆಗಳಿಂದ ಹೆಚ್ಚು ನಾಜೂಕಾಗಿರುವ ಹಾಗೂ ವಸ್ತುಗಳ ತೂಕವನ್ನು ದಶಮಾಂಶದ ಹೆಚ್ಚಿನ ಸ್ಥಾನಗಳಿಗೆ ಅಳೆಯುವಂಥ ತಕ್ಕಡಿಗಳ ನಿರ್ಮಾಣ ಆಗಿದೆ. ಕ್ರಿ.ಪೂ. ನಾಲ್ಕನೆಯ ಶತಮಾನದ ರಚನೆ ಎಂದು ನಂಬಲಾಗಿರುವ ಕೌಟಿಲ್ಯನ ಅರ್ಥಶಾಸ್ತ್ರ ಎಂಬ ಗ್ರಂಥದಲ್ಲಿ ತೂಕ ಮತ್ತು ಅಳತೆಗಳ ಸವಿವರ ಚರ್ಚೆಗೆಂದೇ ಮೀಸಲಾದ ಒಂದು ಪ್ರಕರಣ ಉಂಟು. ತೂಕಸಾಧನಗಳನ್ನು ನಿರ್ಮಿಸುವ ಬಗ್ಗೆ ವ್ಯಾಪಕ ನಿರ್ದೇಶನಗಳನ್ನು ಇದರಲ್ಲಿ ನೋಡಬಹುದು.
ಸಾಮಾನ್ಯ ತಕ್ಕಡಿ
ಬದಲಾಯಿಸಿಒಂದು ಕೋಲಿನ ಎರಡು ತುದಿಗಳಲ್ಲೂ ಒಂದೊಂದು ತಟ್ಟೆಯನ್ನು ಅಥವಾ ಬಟ್ಟಲುಗಳನ್ನು ದಾರಗಳಿಂದ ಇಲ್ಲವೇ ಸರಪಳಿಗಳಿಂದ ನೇತುಹಾಕಿರುವಂಥ ಸರಳ ತಕ್ಕಡಿಯ ಸುಧಾರಿತ ರೂಪವಿದು. ಇದರಲ್ಲಿ ದೃಢ ಹಾಗೂ ಹಗುರವಾದ ಒಂದು ದೂಲ (ಬೀಮ್) ಉಂಟು. ದೂಲದ ನಡುವೆ ಅದರ ಕೆಳಭಾಗದಲ್ಲೂ ಅದರ ತುದಿಗಳ ಬಳಿ, ಅದರ ನಡುಭಾಗದಿಂದ ಸಮದೂರದಲ್ಲೂ ಅಗೇಟಿನಿಂದ ಮಾಡಿದಂಥ ಚೂರಿಅಲಗುಗಳು (ನೈಫ್ ಎಜ್ಜಸ್) ಇವೆ. ದೂಲದ ನಡುವೆ ಇರುವ ಚೂರಿಅಲಗು ತಕ್ಕಡಿಯ ಮುಖ್ಯ ಆಧಾರ ಸ್ತಂಭದ ಮೇಲ್ತುದಿಗೆ ಹೊಂದಿಕೊಂಡಿರುವುದು. ಚೂರಿಅಲಗಿನ ಮೇಲೆ ದೂಲ ಎಡಕ್ಕೂ ಬಲಕ್ಕೂ ಸಲೀಸಾಗಿ ಊಧ್ರ್ವ ತಳದಲ್ಲಿ ಹೊರಳಬಲ್ಲುದು. ದೂಲದ ಆಚೀಚೆ ಇರುವ ಚೂರಿಅಲಗುಗಳ ಕೆಳಭಾಗದಲ್ಲಿ ಒಂದೊಂದು ರಿಕಾಪು (ಸ್ಟಿರಪ್) ಉಂಟು. ರಿಕಾಪುಗಳ ಕೆಳಗೆ ಒಂದೇ ಆಕಾರ ಮತ್ತು ಗಾತ್ರದ ಎರಡು ತಟ್ಟೆಗಳನ್ನು (ಪ್ಯಾನ್ಸ್) ತೂಗಹಾಕಿದೆ. ಒಂದು ತಟ್ಟೆಯಲ್ಲಿ ವಸ್ತುವನ್ನೂ ಇನ್ನೊಂದರಲ್ಲಿ ಬಟ್ಟುಗಳನ್ನೂ (ವೇಟ್ಸ್) ಇಡಬಹುದು. ಉತ್ತಮ ಹಾಗೂ ನಾಜೂಕಿನ ತಕ್ಕಡಿಗಳಲ್ಲಿ ಹೆಚ್ಚು ಸಂಖ್ಯೆಯ ಚೂರಿಅಲಗುಗಳನ್ನು ವಿಶಿಷ್ಟ ಉದ್ದೇಶಗಳಿಗಾಗಿ ಬಳಸುವುದುಂಟು. ದೂಲದ ನಡುಭಾಗಕ್ಕೆ ಉದ್ದದ ಒಂದು ತೋರುಮುಳ್ಳನ್ನು (ಪಾಯಿಂಟರ್) ಅಳವಡಿಸಿರುತ್ತದೆ. ಇದು ಆಧಾರಸ್ತಂಭದ ಮುಂಭಾಗದಲ್ಲಿರುವುದು. ಇದರ ತುದಿಭಾಗ ಒಂದು ಮಾನಕದ (ಸ್ಕೇಲ್) ಮೇಲೆ ಹಾದು ಹೋಗುವಂತಿದೆ. ದೂಲದ ಬಲಭಾಗ ಕೆಳಗೆ ಬಂದಾಗ ತೋರುಮುಳ್ಳಿನ ತುದಿಮಾನಕದ ಎಡಭಾಗಕ್ಕೂ ದೂಲದ ಎಡಭಾಗ ಕೆಳಗೆ ಬಂದಾಗ ತೋರುಮುಳ್ಳಿನ ತುದಿ ಅಳತೆಪಟ್ಟಿಯ ಬಲಭಾಗಕ್ಕೂ ಚಲಿಸುತ್ತದೆ. ದೂಲ, ಆಧಾರಸ್ತಂಭ, ರಿಕಾಪುಗಳಲ್ಲಿರುವ ತಟ್ಟೆಗಳು, ತೋರುಮುಳ್ಳು ಹಾಗೂ ಮಾನಕ-ಇವೆಲ್ಲವನ್ನೂ ಒಂದು ಮರದ ಆಧಾರಹಲಗೆಯ (ಬೇಸ್‍ಬೋರ್ಡ್) ಮೇಲೆ ಅಳವಡಿಸಲಾಗಿರುತ್ತದೆ. ಕೆಲವು ತಕ್ಕಡಿಗಳಲ್ಲಿ ದೂಲದ ಆಂದೋಳನಗಳನ್ನು (ಆಸಿಲೇಷನ್ಸ್) ಗಮನಿಸಲು ಅದರ ತೋರುಮುಳ್ಳನ್ನು ಅಳತೆಗೆರೆಗಳಿರುವ ಕನ್ನಡಿಯ ಮುಂದೆ ಚಲಿಸುವಂತೆ ಮಾಡಿರುವುದುಂಟು. ಸಮಗ್ರ ವ್ಯವಸ್ಥೆಯನ್ನು ಒಂದು ಗಾಜಿನ ಪೆಟ್ಟಿಗೆಯಲ್ಲಿ ಮಡಗುವುದು ವಾಡಿಕೆ, ಪೆಟ್ಟಿಗೆಯ ಮುಂಭಾಗದ ಗಾಜಿನ ಬಾಗಿಲನ್ನು ಮೇಲಕ್ಕೆ ಸರಿಯುವಂತೆ ಮಾಡಬಹುದು.
ಇದಕ್ಕೆ ವಿಶ್ಲೇಷಣ (ಅನಲಿಟಿಕಲ್) ತಕ್ಕಡಿ ಎಂದು ಹೆಸರು. ಈ ಬಗೆಯ ತಕ್ಕಡಿಗಳಲ್ಲಿ ಸರಳವಾದ್ದು ಕಾಣಿ (ರೈಡರ್) ತಕ್ಕಡಿ. 5 ಅಥವಾ 10 ಮಿಲಿ ಗ್ರಾಮ್‍ವರೆಗಿನ ಬಟ್ಟುಗಳನ್ನು ಇಲ್ಲಿ ಬಳಸಲಾಗುತ್ತದೆ. ಅಗತ್ಯವಾದ ಇನ್ನಿತರ ತೂಕಗಳನ್ನು ಕಾಣಿಯ ಸಹಾಯದಿಂದ ಹೊಂದಿಸಲಾಗುವುದು. ಇದನ್ನು ಮಾಡಲು ತಕ್ಕಡಿಯ ದೂಲದ ಪಾಶ್ರ್ವದ ಮೇಲೆ ಗುರುತು ಗೆರೆಗಳನ್ನು ಮಾಡಿ, ಒಂದೊಂದು ಗುರುತುಗೆರೆಯೂ ಒಂದು ನಿರ್ದಿಷ್ಟ ತೂಕವನ್ನು ಸೂಚಿಸುವಂತೆ ಮಾಡಿದೆ. ಸಾಧಾರಣವಾಗಿ ಎರಡು ಗುರುತುಗೆರೆಗಳ ನಡುವಿನ ಅಂತರ 0.1 ಮಿಲಿಗ್ರಾಮಿಗೆ ಸಮ. ಕಾಣಿಯನ್ನು ಸಾಮಾನ್ಯವಾಗಿ ಅಲ್ಯೂಮಿನಿಯಮ್‍ನಿಂದ ತಯಾರಿಸಲಾಗಿದ್ದು ಅದು ದೂಲದ ಯಾವ ಭಾಗಕ್ಕೆ ಬೇಕಾದರೂ ಸಲೀಸಾಗಿ ಜಾರಬಲ್ಲುದು.
ಛಾಯಾಂಕಣ
ಬದಲಾಯಿಸಿ-
Weighing dishes from the island of Thera, Minoan civilization, 2000–1500 BC
-
Assyrian lion weights (8th century BC) in the British Museum
-
Emperor Jahangir (reigned 1605–1627) weighing his son Shah Jahan on a weighing scale by artist Manohar (AD 1615, Mughal dynasty, India).
ತೂಗುವ ವಿಧಾನ
ಬದಲಾಯಿಸಿವಸ್ತುಗಳನ್ನು ತಕ್ಕಡಿಯಲ್ಲಿಟ್ಟು ತೂಗುವಾಗ ಸಾಮಾನ್ಯವಾಗಿ ನೇರವಿಧಾನವನ್ನೇ ಅನುಸರಿಸಲಾಗುತ್ತದೆ. ವಸ್ತುವನ್ನು ಒಂದು ತಟ್ಟೆಯಲ್ಲೂ ದಂಡ ಸಮತೋಲಸ್ಥಿತಿಗೆ ಬರಲು ಬೇಕಾಗುವಷ್ಟು ಸರಿಸುಮಾರಾದ ಬಟ್ಟುಗಳನ್ನು ಇನ್ನೊಂದರಲ್ಲೂ ಇಡಲಾಗುತ್ತದೆ. ತಟ್ಟೆಗಳು ಖಾಲಿಯಿದ್ದಾಗ ಲಭಿಸುವ ಓದಿಕೆ (ರೀಡಿಂಗ್) ಮತ್ತು ತಟ್ಟೆಯಲ್ಲಿ ವಸ್ತುವಿದ್ದಾಗ ಲಭಿಸುವ ಓದಿಕೆ— ಇವುಗಳ ನಡುವಿನ ವ್ಯತ್ಯಾಸ ವಸ್ತುವಿನ ತೂಕಕ್ಕೆ ಸಮ. ಇಲ್ಲಿ ಓದಿಕೆಯನ್ನು ಪಡೆಯುವುದೆಂದರೆ ಮಾನಕದ ಹಿನ್ನೆಲೆಯಲ್ಲಿ ತೋರುಮುಳ್ಳಿನ ತುದಿ ಯಾವ ಸ್ಥಾನದಲ್ಲಿ ನಿಲ್ಲುತ್ತದೆ ಎಂಬುದನ್ನು ಗುರುತು ಹಾಕಿಕೊಳ್ಳುವ ವಿಧಿ. ಪ್ರತಿಯೊಂದು ಸಂದರ್ಭದಲ್ಲಿಯೂ ತುದಿಯ ಸ್ಥಾನಪಲ್ಲಟಗಳಲ್ಲಿ ಆಗುವ ಬದಲಾವಣೆಗಳನ್ನು ಗುರುತು ಮಾಡಿಕೊಂಡು ವಸ್ತುವಿನ ತೂಕವನ್ನು ಕಂಡುಹಿಡಿಯಬಹುದು. ಇದೇ ನೇರವಿಧಾನ (ಡೈರೆಕ್ಟ್ ಮೆಥಡ್). ಇದನ್ನು ಅನುಸರಿಸಬೇಕಾದರೆ ತಕ್ಕಡಿಯ ದೂಲದ ಬಾಹುಗಳ ಎಡ ಮತ್ತು ಬಲಭಾಗದ ಉದ್ದ ಒಂದೇ ಆಗಿರಬೇಕು. ನವೀನ ಬಗೆಯ ವಿಶ್ಲೇಷಣ ತಕ್ಕಡಿಗಳಲ್ಲಿ ಈ ನೇರವಿಧಾನವನ್ನು ಅನುಸರಿಸಲಾಗುವುದು. ಅಸಮ ಉದ್ದದ ಬಾಹುಗಳಿರುವ ತಕ್ಕಡಿಗಳಿಂದ ವಸ್ತುವಿನ ತೂಕವನ್ನು ನಿಖರವಾಗಿ ಕಂಡುಹಿಡಿಯಲು ಬದಲಿ ವಿಧಾನ (ಸಬ್ಸ್‍ಟಿಟ್ಯೂಷನ್ ಮೆಥಡ್) ಬಹಳ ಉಪಯುಕ್ತ. ಒಂದು ತಟ್ಟೆಯಲ್ಲಿ ವಸ್ತುವನ್ನೂ ಇನ್ನೊಂದರಲ್ಲಿ ಬಟ್ಟುಗಳನ್ನೂ ಹಾಕಿ ದೂಲವನ್ನು ಸಮತೋಲಸ್ಥಿತಿಗೆ ಮೊದಲು ತರಬೇಕು. ಆನಂತರ ವಸ್ತುವನ್ನು ಹೊರತೆಗೆದು ಅದರ ಬದಲಿಗೆ ಅದರ ತೂಕದಷ್ಟು ಬಟ್ಟುಗಳನ್ನಿಟ್ಟು ಮತ್ತೆ ದೂಲ ಸಮತೋಲ ಸ್ಥಿತಿಗೆ ಬರುವಂತೆ ಮಾಡಬೇಕು. ಬಾಹುಗಳ ಉದ್ದದಲ್ಲಿ ವ್ಯತ್ಯಾಸವಾಗಕೂಡದು. ಅಸಮತೆಯ ನ್ಯೂನತೆ ತೂಗುವ ಎರಡು ಸನ್ನಿವೇಶಗಳಲ್ಲಿಯೂ ಒಂದೇ ಆಗುವುದರಿಂದ ಅದು ವರ್ಜಿತವಾಗುತ್ತದೆ. ವಸ್ತುಗಳ ತೂಕಗಳನ್ನು ಇನ್ನೂ ಹೆಚ್ಚು ನಿಖರವಾಗಿ ಈ ತಕ್ಕಡಿಯ ಸಹಾಯದಿಂದ ಕಂಡುಹಿಡಿಯಬೇಕಾದರೆ ಅದನ್ನು ಎರಡು ಅಥವಾ ಹೆಚ್ಚು ಸಲ ತೂಗಬೇಕಾಗುತ್ತದೆ. ವಸ್ತುವನ್ನೂ ಬಟ್ಟುಗಳನ್ನು ಅದಲುಬದಲು ಮಾಡಿ ದೂಲವನ್ನು ಸಮತೋಲ ಸ್ಥಿತಿಗೆ ತರಬೇಕು. ಎರಡು ಸಲ ಬಳಸಿದ ಬಟ್ಟುಗಳ ಸರಾಸರಿ ತೂಕವೇ ವಸ್ತುವಿನ ತೂಕಕ್ಕೆ ಸಮ. ಈ ವಿಧಾನಕ್ಕೆ ಸ್ಥಳಪಲ್ಲಟನ ವಿಧಾನ (ಟ್ರಾನ್ಸ್ ಪೊಸಿಷನ್ ಮೆಥಡ್) ಎಂದು ಹೆಸರು. ಬದಲಿ ವಿಧಾನಕ್ಕಿಂತ ಹೆಚ್ಚು ನಿಖರವಾದ ವಿಧಾನವಿದು. ಒಂದು ಪಕ್ಷ ಬಾಹುನಿಷ್ಪತ್ತಿ (ಆರ್ಮ್‍ರೇಷ್ಯೊ) ಒಂದೇ ಎಡೆಗೆ ಸರಿದಿದ್ದರೂ ವಸ್ತು ಮತ್ತು ಬಟ್ಟುಗಳನ್ನು ಅದಲುಬದಲು ಮಾಡುವುದರಿಂದ ಉಂಟಾಗುವ ನ್ಯೂನತೆ ವಜ್ರ್ಯವಾಗುತ್ತದೆ. ವಸ್ತುಗಳನ್ನು ಹಾಗೂ ಬಟ್ಟುಗಳನ್ನು ಅನೇಕ ಸಲ ಅದಲುಬದಲು ಮಾಡಿ ವಸ್ತುವಿನ ತೂಕವನ್ನು ನಿಖರವಾಗಿ ಗೊತ್ತು ಮಾಡಿಕೊಳ್ಳುವುದು ಸಾಧ್ಯ.
ಯಾವುದೇ ಬಲ ದೂಲದ ಮೇಲೆ ತಟ್ಟೆಯ ಮೇಲೆ ವರ್ತಿಸಿದರೂ ತಕ್ಕಡಿ ಪ್ರತಿಕ್ರಿಯೆ ತೋರುತ್ತದೆ. ಆದ್ದರಿಂದ ತೂಗುವ ವೇಳೆಯಲ್ಲಿ ವಾಯು, ಉಷ್ಣ, ತೇವಾಂಶದಲ್ಲಿ ವ್ಯತ್ಯಾಸ, ಕಾಂತ ಮತ್ತು ವಿದ್ಯುತ್ ಪ್ರಭಾವ, ಕಂಪನ, ವಾಯುವಿನ ಪ್ಲವನತೆ, ಮತ್ತು ತಟ್ಟೆಗಳ ಆಂದೋಲನ ಮುಂತಾದವುಗಳ ಪರಿಣಾಮ ಆದಷ್ಟು ಕಡಿಮೆ ಇರಬೇಕು. ನಿಖರವಾದ ಫಲಿತಾಂಶಗಳನ್ನು ಪಡೆಯಲು ತಕ್ಕಡಿಯನ್ನು ಶಿಷ್ಟ ವಾತಾವರಣ ಸ್ಥಿತಿ ಕೊಠಡಿಯಲ್ಲಿಡುವುದು ಅವಶ್ಯಕ. ಉಕ್ಕಿನ ದೆಸೆಯಿಂದ ಮತ್ತು ವಿದ್ಯುದ್ವಾಹಕಗಳಿಂದ ಅಸಮಕಾಂತ ಕ್ಷೇತ್ರ ಉಂಟಾಗುವುದು ಸಾಧ್ಯ. ತಕ್ಕಡಿಯ ಭಾಗಗಳನ್ನು ಕಾಂತೀಯ ವಸ್ತುಗಳಿಂದ ನಿರ್ಮಿಸಿದ್ದರೆ, ಅಸಮ ಕಾಂತಕ್ಷೇತ್ರ ವಿಶ್ರಾಂತಿ ಬಿಂದುವಿನ ಮೇಲೆ ಪರಿಣಾಮ ಬೀರುತ್ತದೆ. ತಕ್ಕಡಿ ಇರುವ ಆವರಣದಲ್ಲಿ ಭೂಕಾಂತಕ್ಷೇತ್ರ ಸಮವಾಗಿರುತ್ತದೆಂದು ಭಾವಿಸಿಕೊಂಡರೂ ಯಾವಾಗಲೂ ಶಿಷ್ಟವಾಗಿರುತ್ತದೆ ಎಂದು ಹೇಳಲಾಗುವುದಿಲ್ಲ. ವಾಯುವಿನ ಪ್ಲವನಶೀಲತೆ ತಕ್ಕಡಿಯ ಮೇಲೆ ನೇರ ಪರಿಣಾಮವನ್ನು ಉಂಟುಮಾಡುವುದರಿಂದ ಈ ಬಲ ವರ್ತಿಸದಂತೆ ನೋಡಿಕೊಳ್ಳಬೇಕಾದುದು ಅಗತ್ಯ.
ಕಾರ್ಯನಿರ್ವಹಣೆ
ಬದಲಾಯಿಸಿಆದರ್ಶ ಸ್ಥಿತಿಯಲ್ಲಿ ತುಲಾಯಂತ್ರಗಳಿಂದ ಪಡೆಯಬಹುದಾದ ಅತ್ಯಂತ ಹೆಚ್ಚು ನಿಖರತೆ, ತಟ್ಟೆಯಲ್ಲಿ ಒಂದು ಕಿಲೊಗ್ರಾಮ್ ತೂಕವಿದ್ದಾಗ. ಸಾಪೇಕ್ಷ ನಿಖರತೆ ಒಂದು ಕಿಲೊಗ್ರಾಮಿಗಿಂತ ಹೆಚ್ಚು ಅಥವಾ ಕಡಿಮೆ ತೂಕಗಳಿಗೆ ಕಡಿಮೆ ಆಗಿರುತ್ತದೆ. ರಾಸಾಯನಿಕ ಕ್ರಿಯೆ ಮುಂತಾದವುಗಳಲ್ಲಿ ವಸ್ತುವಿನ ರಾಶಿ ನಿಯತವಾಗಿರುತ್ತದೆ ಎಂಬುದನ್ನು ಕಂಡುಹಿಡಿಯಲು ನಿಖರವಾಗಿ ತೂಕವನ್ನು ನಿರ್ಧರಿಸುವುದರಿಂದ ಮಾತ್ರ ಸಾಧ್ಯ.
ತೂಕದ ಬಟ್ಟುಗಳು
ಬದಲಾಯಿಸಿಇವನ್ನು ಶಿಷ್ಟ ಬಟ್ಟುಗಳು (ಸ್ಟ್ಯಾಂಡರ್ಡ್ ವೇಟ್ಸ್) ಎಂದೂ ಕರೆಯುವುದಿದೆ. ಕರಾರುವಾಕ್ಕಾದ ಉಲ್ಲೇಖಗಳುಳ್ಳ ಬಟ್ಟುಗಳ ತಯಾರಿಕೆಗೆ, ಅಂತರರಾಷ್ಟ್ರೀಯ ತೂಕ ಮತ್ತು ಅಳತೆ ಸಂಸ್ಥೆ ಉಪಯೋಗಿಸಿರುವ 90% ಭಾಗ ಪ್ಲಾಟಿನಮ್ ಮತ್ತು 10% ಭಾಗ ಇಂಡಿಯಮ್‍ನ ಮಿಶ್ರಲೋಹವೇ ಇಂದಿಗೂ ಉತ್ಕøಷ್ಟವಾದುದೆಂದು ಪರಿಗಣಿಸಲಾಗಿದೆ. ಇದೇ ಮಿಶ್ರಲೋಹದಿಂದ ಅಂತರರಾಷ್ಟ್ರೀಯ ಕಿಲೊಗ್ರಾಮ್ ಮತ್ತು ಇತರ ರಾಷ್ಟ್ರೀಯ ಮೂಲರೂಪ ಕಿಲೊಗ್ರಾಮುಗಳನ್ನು ಮಾಡಿದ್ದಾರೆ. ಈ ಬಟ್ಟುಗಳನ್ನು ಹಲವಾರು ವರ್ಷಗಳ ಅನಂತರ ಮರುಪರೀಕ್ಷೆಗೆ ಒಳಪಡಿಸಿದಾಗ ಅವುಗಳ ತೂಕದಲ್ಲಿ ಗಣನೀಯ ಪ್ರಮಾಣದಲ್ಲಿ ವ್ಯತ್ಯಾಸವಾಗದಿರುವುದು ಕಂಡುಬಂದಿತು.
ತಕ್ಕಡಿಯ ಆಂದೋಳನ ಕಾಲವನ್ನು ದಂಡದ ಬಾಹುಗಳ ಉದ್ದ, ಹೊರೆಗಳ (ಲೋಡ್) ರಾಶಿ, ದಂಡದ ರಾಶಿ ಮತ್ತು ದಂಡದ ಜಡತ್ವದ ಭ್ರಮಣಾಂಕ (ಮೊಮೆಂಟ್ ಆಫ್ ಇನರ್ಷಿಯ) ನಿರ್ಧರಿಸುತ್ತವೆ. ಬಾಹುಗಳು ಉದ್ದವಾದಂತೆ ಮತ್ತು ತಟ್ಟೆಗಳಲ್ಲಿ ಆಂದೋಳನಾವಧಿ ಸೂಕ್ಷ್ಮತೆಯ ವರ್ಗ ಮೂಲಕ್ಕೆ ವ್ಯಸ್ತಪ್ರಮಾಣದಲ್ಲಿರುವುದು. ತಕ್ಕಡಿ ದಂಡಗಳನ್ನು ಹೆಚ್ಚು ದೃಢವಾದ ಪುಟಿತ ಗುಣ, ಅಧಿಕ ಗ್ರಾಹ್ಯೋಷ್ಣ ಮತ್ತು ಉಷ್ಣವಾಹಕತ್ವ ಗುಣಾಂಕ ಇರುವ ಹಾಗೂ ಕಡಿಮೆ ಸಾಂದ್ರತೆ ಮತ್ತು ವ್ಯಾಕೋಚನ ಗುಣಾಂಕ ಇರುವ ವಸ್ತುವಿನಿಂದ ರಚಿಸಬೇಕು. ಸಾಮಾನ್ಯವಾಗಿ ಈ ಎಲ್ಲ ಗುಣಗಳನ್ನು ಪಡೆದಿರುವ ಯಾವುದಾದರೊಂದು ಮಿಶ್ರಲೋಹದಿಂದ ದಂಡಗಳನ್ನು ಮಾಡುವರು. ಇದಕ್ಕೆ ಅಲ್ಯೂಮಿನಿಯಮ್ ಮತ್ತು ತಾಮ್ರಗಳ ಮಿಶ್ರಲೋಹಗಳು ಉತ್ತಮ.
ಚೂರಿ ಅಲಗುಗಳು ಮತ್ತು ತಿರುಗಣಿಗಳು
ಬದಲಾಯಿಸಿದಂಡೆ ಆಂದೋಲಿಸುವಾಗ ಅದು ಬಲು ಕಡಿಮೆ ಪರಿಮಾಣದ ಕೋನದ ಮೂಲಕ ತಿರುಗುವುದರಿಂದ ಸಣ್ಣ ದಂಡಗಳನ್ನು (ಷ್ಯಾಫ್ಟ್ಸ್) ಉಪಯೋಗಿಸಿ ಘರ್ಷಣೆಯನ್ನು ಕಡಿಮೆ ಮಾಡಬಹುದು. ಈ ಹಿಡಿಕೆಯೇ ತ್ರಿಕೋನಾಕಾರದ ಚೂರಿ ಅಲಗು. ಧಾರಕದಿಂದ ಚೂರಿ ಅಲಗು ಹೊರಗೆ ಹೋಗದಂತೆ ಮಾಡಲು ತಿರುಗಣಿಯಲ್ಲಿ ಹೊರ ಅಂಚು ಉಂಟು. ಸಮತಲ ತಿರುಗಣಿಯನ್ನು ಉಪಯೋಗಿಸಿದರೆ ತೂಕಗಳನ್ನು ತಟ್ಟೆಗೆ ಹಾಕುವಾಗ ಮತ್ತು ತೆಗೆಯುವಾಗ ತುಲಾತಕ್ಕಡಿ ವಿಶ್ರಾಂತಿ ಸ್ಥಿತಿಯಲ್ಲಿರಬೇಕು. ತಿರುಗಣಿ ಗೂಟ (ಪಿವೊಟ್), ತಿರುಗಣಿ ಮತ್ತು ಚೂರಿಅಲಗುಗಳನ್ನು ಮಾಡುವ ವಸ್ತು ದೃಢ ಹಾಗೂ ಬಾಳಿಕೆ ಬರುವಂಥದ್ದಾಗಿರಬೇಕು. ಈ ಎಲ್ಲ ಗುಣಗಳೂ ಅಗೇಟಿಗೆ ಇವೆ. ಆದರೆ ಇದು ತೇವಾಂಶಗ್ರಾಹಿ. ಸಾಪೇಕ್ಷ ತೇವಾಂಶ ಮತ್ತು ಉಷ್ಣತೆ ವ್ಯತ್ಯಾಸವಾದಾಗ ಅಗೇಟಿನ ರೂಪ ಮತ್ತು ಗಾತ್ರಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಕಾರ್ವಿನ್ ಎಂಬಾತ ತೇವಾಂಶಗ್ರಾಹಿಯಲ್ಲದ ಅಕಾಂತೀಯ ಅಗೇಟಿಗಿಂತ ದೃಢವಾದ—ಬೋರಾನ್ ಕಾರ್ಬೈಡ್ ಎಂಬ ಉತ್ತಮ ವಸ್ತುವನ್ನು ಶಿಫಾರಸು ಮಾಡಿದ್ದಾನೆ.
ತಕ್ಕಡಿಯ ದಂಡ ಆಂದೋಲಿಸಿದಾಗ ಘರ್ಷಣೆಯಿಂದ ಪಾರ (ಆ್ಯಂಪ್ಲಿಟ್ಯೂಡ್) ಕಡಿಮೆಯಾಗುತ್ತ ಹೋಗುತ್ತದೆ. ಪಾರ ಕಡಿಮೆಯಾಗುವ ಪರಿಮಾಣ ಆಂದೋಲನ ವೇಗಕ್ಕೆ ಸರಳ ಪ್ರಮಾಣದಲ್ಲಿದೆ. ಬೇರೆ ಬೇರೆ ಪಾರಗಳಿಗೂ ಆಂದೋಲನಾವಧಿ ನಿಯತವಾದ್ದರಿಂದ ಪಾರದಲ್ಲಾಗುವ ವ್ಯತ್ಯಾಸ ಓಲಾಡುವ ಉದ್ದಕ್ಕೆ ಸರಳ ಪ್ರಮಾಣದಲ್ಲಿರುವುದು. ಒಂದೇ ದಿಕ್ಕಿನಲ್ಲಿ ಅನುಕ್ರಮ ಓಲಾಡುವ ಉದ್ದಗಳ ಪ್ರಮಾಣಕ್ಕೆ ಮಂದಕಾರಿ ಸ್ಥಿಕಾಂಕ (ಡ್ಯಾಂಪಿಂಗ್ ಕಾನ್‍ಸ್ಟೆಂಟ್) ಎಂದು ಹೆಸರು. ಈ ಸ್ಥಿರಾಂಕದ ಲಘುಗಣಕವನ್ನು ಲಘುಗಣಕ ಕುಗ್ಗುವಿಕೆ ಎನ್ನುವರು. ಸರಾಸರಿ ವಿಶ್ರಾಂತಿಬಿಂದುವನ್ನು ಲೆಕ್ಕಹಾಕಲು ಇದನ್ನು ಬಳಸಲಾಗುವುದು. ಇಂಥದೇ ಕುಗ್ಗುವಿಕೆಯನ್ನು ದ್ರವಗಳಲ್ಲಿ, ಅನಿಲಗಳಲ್ಲಿ ಕಾಂತ ಮತ್ತು ವಿದ್ಯುತ್ ಕ್ಷೇತ್ರಗಳಲ್ಲಿ ಕಾಣಬಹುದು.
ವಿಶ್ರಾಂತೀಕರಣ
ಬದಲಾಯಿಸಿರಿಕಾಪು ಚೂರಿ ಅಲಗಿನ ಮೇಲೆ ಯಾವುದಾದರೂ ನೇರದಲ್ಲಿ ಸ್ಥಳಾಂತರಿಸಲ್ಪಟ್ಟರೆ ಬಾಹುವಿನ ಉದ್ದ ಮತ್ತು ಸೂಕ್ಷ್ಮತೆಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಚೂರಿಅಲಗು ಮತ್ತು ತಿರುಗಣಿಗಳನ್ನು ಹಿಂದಿನ ಸ್ಥಾನಕ್ಕೆ ಪ್ರತಿಸಲವೂ ತರುವುದು ವಿಶ್ರಾಂತೀಕರಣದ ಮೂಲ ಉದ್ದೇಶ. ಅತಿಸೂಕ್ಷ್ಮಯಂತ್ರಗಳಲ್ಲಿ ತಟ್ಟೆಗಳು, ರಿಕಾಪು, ಮತ್ತು ದೂಲ ಇವುಗಳಿಗೆ ಆಧಾರಗಳುಂಟು. ವಿಶ್ರಾಂತಿ ಸ್ಥಿತಿಯಲ್ಲಿ ಮೂರು ತಿರುಗಾಣಿಗಳು ಚೂರಿ ಅಲಗಿನಿಂದ ಬೇರೆ ಮಾಡಲ್ಪಟ್ಟಿರುತ್ತವೆ. ತಕ್ಕಡಿಯನ್ನು ವಿಶ್ರಾಂತೀಕರಿಸುವಾಗ ದೂಲ ಊಧ್ರ್ವತಳದಲ್ಲಿ ಕೆಳಗಿಳಿಯುತ್ತದೆ. ವಿಶ್ರಾಂತೀಕರಿಸುವಾಗ ಮತ್ತು ಕಾರ್ಯೋನ್ಮುಖ ಮಾಡುವಾಗ ದೂಲವೂ ರಿಕಾಪೂ ಮೇಲಕ್ಕೆ ಏಳುತ್ತವೆ. ದಂಡ ಮಧ್ಯದ ತಿರುಗಣಿಯ ಮೇಲೆಯೂ ರಿಕಾಪು ಚೂರಿಅಲಗುಗಳ ಮೇಲೆಯೂ ಕುಳಿತುಕೊಳ್ಳುತ್ತವೆ. ಹಲವು ಸಲ ರಿಕಾಪುಗಳನ್ನು ಮೂರು ಸಂದುಗಳಲ್ಲಿ ಎತ್ತಲಾಗುವುದರಿಂದ ತಿರುಗಣಿ ತಳ ತಿರುಚುವುದಿಲ್ಲ ಪ್ರತಿ ಬಿಲವೂ ರಿಕಾಪು ಒಂದೇ ಜಾಗದಲ್ಲಿರುವಂತೆ ಮಾಡಬಹುದು. ದಂಡ ವಿಶ್ರಾಂತ ಸ್ಥಿತಿಯಲ್ಲಿದ್ದಾಗ ನಾಲ್ಕು ಬಿಂದುಗಳಲ್ಲಿ ಆಧಾರವನ್ನು ಸ್ಪರ್ಶಿಸಿರುತ್ತದೆ: ಕೊನೆಗಳಲ್ಲಿರುವ ಚೂರಿಅಲಗುಗಳ ಪಕ್ಕಗಳಲ್ಲಿ ಒಂದೊಂದು ಮತ್ತು ಮಧ್ಯೆ ಚೂರಿ ಅಲಗಿನ ಎರಡು ಕೊನೆಗಳಲ್ಲಿ ಎರಡು. ವಿಶ್ರಾಂತ ಸ್ಥಿತಿಯಲ್ಲಿ ತೋರು ಮುಳ್ಳು , ಸಣ್ಣ ತಂತಿಯೊಂದನ್ನು ಸ್ಪರ್ಶಿಸಿ ದೂಲದ ಅಂದೋಲನವನ್ನು ಕಡಿಮೆ ಮಾಡುತ್ತದೆ. ಲೋಹ-ಲೋಹ ಸ್ಪರ್ಶವಿದ್ದಾಗ ಒಂದಕ್ಕೊಂದು ಅಂಟುವ ಸಂಭವ ಇರುವುದರಿಂದ ಎಲ್ಲ ಸ್ಪರ್ಶತಳಗಳನ್ನು ಪೈರೆಕ್ಸ್ ಗಾಜಿನಿಂದ ಮಾಡಿರುತ್ತದೆ.
ಶೀಘ್ರವಾಗಿ ತೂಕ ಮಾಡುವ ವಿಧಾನ:- ಶೀಘ್ರವಾಗಿ ವಸ್ತುಗಳನ್ನು ತೂಕ ಮಾಡಲು ಅನೇಕ ವಿಧಾನಗಳುಂಟು. ಅವುಗಳಲ್ಲಿ ಅಳವಡಿಸಬಹುದಾದ ಸೂಕ್ಷ್ಮತೆ, ಕೀಬೋರ್ಡ್ ನಿಯಂತ್ರಿತ ತೂಕಗಳ ಅಳವಡಿಕೆ, ಸರಪಳಿ, ಕಾಂತೀಯ ಅಥವಾ ಅನಿಲ ಕುಗ್ಗಿಸುವಿಕೆ- ಇವು ಮುಖ್ಯವಾದವು. ಮೆರಗು ಕೊಟ್ಟಿರುವ ಒಂದು ಗುಂಡನ್ನು ದಂಡಕ್ಕೆ ತೂಗುಹಾಕುವುದರಿಂದ ಸೂಕ್ಷ್ಮತೆಯನ್ನು ನೂರು ಪಟ್ಟು ಕಡಿಮೆ ಮಾಡಬಹುದು. ಆಗ ವಸ್ತುವನ್ನು ತಟ್ಟೆಯಲ್ಲಿಟ್ಟು ಬಟ್ಟುಗಳಿಂದ ಸರಿದೂಗಿಸಬೇಕು. ಹತ್ತು ಮಿಲಿಗ್ರಾಮ್ ತೂಕವನ್ನು ಒಂದು ತಟ್ಟೆಗೆ ಹಾಕಿದಾಗ ಮಾನಕದ ಗುರುತಿನ ಮೇಲೆ ಕಂಡು ಬರುವ ಬದಲಾವಣೆ ಎರಡು ತಟ್ಟೆಗಳಲ್ಲಿರುವ ತೂಕಗಳ ವ್ಯತ್ಯಾಸಕ್ಕೆ ಸಮ. ಅನಂತರ ಗುಂಡನ್ನು ತೆಗೆದರೆ ಮಾನಕದ ಗುರುತಿನ ಮೇಲೆ ಕಂಡುಬರುವ ವ್ಯತ್ಯಾಸ ಮಿಲಿಗ್ರಾಮಿನ ಸಾವಿರದಲ್ಲಿ ಒಂದು ಭಾಗಕ್ಕೆ ಸಮ. ಆದ್ದರಿಂದ ಪದೇ ಪದೇ ತೂಕಮಾಡುವುದು ತಪ್ಪುತ್ತದೆ. ಕೀಬೋರ್ಡ್ ನಿಯಂತ್ರಿತ ಮಾದರಿಯಲ್ಲಿ ಬಟ್ಟುಗಳನ್ನು ರಿಕಾಪಿನ ಮೇಲೆ ಅಳವಡಿಸಿರುವುದರಿಂದ, ಮೊಳೆಗಳನ್ನು(ಕೀ) ಒತ್ತಿ ತಕ್ಕಡಿಯ ಪೆಟ್ಟಿಗೆಯನ್ನು ತೆಗೆಯದೆ ಶೀಘ್ರವಾಗಿ ಬಟ್ಟುಗಳನ್ನು ಹಾಕಿ ವಸ್ತುವನ್ನು ಸರಿದೂಗಿಸಬಹುದು. ಸರಪಳಿ ಸಹಾಯದಿಂದ ತೂಕ ಮಾಡುವ ವಿಧಾನದಲ್ಲಿ ಸರಪಳಿಯ ಒಂದು ತುದಿಯನ್ನು ದೂಲಕ್ಕೂ ಇನ್ನೊಂದು ತುದಿಯನ್ನು ಮಾನಕದ ಮೇಲೆ ಚಲಿಸುವ ವ್ಯವಸ್ಥೆಗೂ ಬಂಧಿಸಲಾಗಿರುತ್ತದೆ. ಸರಪಳಿಯ ಕೊಂಡಿಗಳ ತಿಕ್ಕಾಟದಿಂದ ದೂಲದ ಆಂದೋಲನ ಶೀಘ್ರವಾಗಿ ಕಡಿಮೆ ಆಗುವುದರಿಂದ ಕಡಿಮೆ ವೇಳೆಯಲ್ಲಿ ವಸ್ತುಗಳನ್ನು ತೂಕ ಮಾಡಬಹುದು. ಇದರಲ್ಲಿ ನಿಖರತೆ ಕಡಿಮೆ ಆಗುತ್ತದೆ.
ರಾಸಾಯನಿಕ ತಕ್ಕಡಿ
ಬದಲಾಯಿಸಿಕೈಗಾರಿಕೆಗಳಲ್ಲಿಯೂ ಪ್ರಯೋಗಶಾಲೆಗಳಲ್ಲಿಯೂ ರಾಸಾಯನಿಕ ವಿಶ್ಲೇಷಣೆ ಹಾಗೂ ಅಧ್ಯಯನಗಳ ಸಲುವಾಗಿ ಸೂಕ್ಷ್ಮ ಪ್ರಮಾಣಗಳಲ್ಲಿ ಆಯ್ದ ವಸ್ತುಗಳ ತೂಕಗಳನ್ನು ನಿಖರವಾಗಿ ನಿರ್ಧರಿಸಲು ಬಳಸುವ ಉಪಕರಣ (ಕೆಮಿಕಲ್ ಬ್ಯಾಲೆನ್ಸ್). ಸೂಕ್ಷ್ಮ ಪ್ರಮಾಣಗಳಲ್ಲಿ ವಸ್ತುಗಳನ್ನು ತೆಗೆದುಕೊಂಡು ಅವುಗಳ ರಾಶಿಗಳನ್ನು ಖಚಿತವಾಗಿ ನಿರ್ಧರಿಸುವುದು ರಾಸಾಯನಿಕ ವಿಶ್ಲೇಷಣೆಯ ಒಂದು ಮುಖ್ಯ ಅಂಗ. ರಾಸಾಯನಿಕ ತಕ್ಕಡಿ ಸರಳ ಸನ್ನೆಯಂತಿದೆ. ಅದರ ಲೋಹದ ದೂಲ(ಬೀಮ್) ಚಾಕುವಿನ ಮೊನೆಯಂತಿರುವ ಅಗೇಟಿನ ಧಾರೆಯ ಮೇಲೆ ಆಧರಿತವಾಗಿದೆ. ಚಾಕುವಿನ ಮೊನೆ ಮುಖ್ಯ ಆಧಾರಸ್ತಂಭ(ಒ)ನ ಮೇಲಿರುವ ಅಗೇಟ್ ತಟ್ಟೆಯ ಮೇಲಿದೆ. ದೂಲದ ಒಂದು ಕೊನೆಗೆ ತಗುಲಿಸಿರುವ ತಟ್ಟೆಯ(P) ಮೇಲೆ ತೂಗಬೇಕಾದ ವಸ್ತುಗಳನ್ನು ಮಡಗಿ ಮತ್ತೊಂದು ಕೊನೆಯಲ್ಲಿನ ತಟ್ಟೆಯ ಮೇಲೆ ತೂಕದ ಬಟ್ಟುಗಳನ್ನು ಇರಿಸಿ ಸಂತುಲಿಸಿ ವಸ್ತುವಿನ ರಾಶಿಯನ್ನು ನಿರ್ಧರಿಸಬೇಕು. ವಸ್ತುವಿನ ರಾಶಿ ತೂಕದ ಬಟ್ಟಿನ ರಾಶಿಗೆ ಸಮವಾದಾಗ ತಕ್ಕಡಿಯ ದೂಲ ಸಂಪೂರ್ಣ ಕ್ಷಿತಿಜೀಯವಾಗಿ ನಿಲ್ಲುತ್ತದೆ. ತಂತಿಸೂಚಿ(ಈ) ಕ್ಷಿತಿಜೀಯ ಸ್ಥಾನದಿಂದ ದೂಲದ ವಿಚಲನೆಯನ್ನು ತೋರಿಸುವುದು. ತಕ್ಕಡಿಯ ಬುಡದಲ್ಲಿರುವ ಮಾನಕದ ಎದುರು ಈ ಸೂಚಿಗೆ ಹಂದಾಡಲು ಮಾನಕದ ಕೇಂದ್ರದಲ್ಲಿ ಸೂಚಿ ನಿಂತಾಗ ಯಾ ಕೇಂದ್ರದ ಉಭಯಪಾಶ್ರ್ವಗಳಲ್ಲಿ ಅದು ಸಮಾಂತರವಾಗಿ ತೊನೆದಾಗ ದೂಲ ಕ್ಷಿತಿಜೀಯವಾಗಿದೆಯೆಂದು ಭಾವಿಸಬಹುದು. ಆಗ ಬಟ್ಟಿನ ಮತ್ತು ವಸ್ತುವಿನ ತೂಕ ಸರಿಸಮವಾಗಿರುತ್ತದೆ. ತೂಕದ ಪೆಟ್ಟಿಗೆಯಲ್ಲಿರುವ ಸಾಮಾನ್ಯ ತೂಕದ ಬಟ್ಟುಗಳು ಗ್ರಾಮುಗಳಲ್ಲಿ ಈ ರೀತಿ ಇವೆ: 100, 50,20, 20, 10, 5, 2, 2, 1, ಮತ್ತು ಮಿಲಿಗ್ರಾಮುಗಳಲ್ಲಿ ಈ ರೀತಿ ಇವೆ; 500, 200, 200, 100, 50, 20, 20, 10. ಈ ಬಟ್ಟುಗಳ ನೆರವಿನಿಂದ ತೂಕವನ್ನು ಎರಡನೆಯ ದಶಮಾಂಶ ಸ್ಥಾನಕ್ಕೆ ಕರಾರುವಕ್ಕಾಗಿ ಅಳೆಯಬಹುದು. ತೂಕವನ್ನು ನಾಲ್ಕನೆಯ ದಶಮಾಂಶ ಸ್ಥಾನಕ್ಕೆ ಸರಿಯಾಗಿ ನಿರ್ಧರಿಸಲೋಸ್ಕರ ದೂಲದ ಮೇಲ್ಭಾಗದಲ್ಲಿರುವ ಮಾನಕದ ಮೇಲೆ ಒಂದು ಕಾಣಿಯನ್ನು (ರೈಡರ್) ಇಟ್ಟಿರುವರು. ಮಾನಕದ ವಿಭಾಗಗಳು ಕಾಣಿಯ ಪರಿಣಾಮಕಾರಿ ತೂಕವನ್ನು ಸೂಚಿಸುತ್ತವೆ. ಕಾಣಿಯನ್ನು ಸಾಧಾರಣವಾಗಿ ದೂಲದ ಮಾನಕದ ಮೇಲೆ ಜರಗಿಸಲು ಅವಕಾಶ ಉಂಟು. ಮಾನಕದ ಕೇಂದ್ರದ ಬಲಭಾಗದಲ್ಲಿ ಕಾಣಿಯನ್ನು ಮಡಗಿದಾಗ ದೂಲ ಸಂಕುಚಿತವಾದರೆ ಕಾಣಿಯ ತೂಕವನ್ನು ಬಟ್ಟಿನ ತೂಕಕ್ಕೆ ಸೇರಿಸಬೇಕು. ಹಾಗಲ್ಲದೇ ಎಡಭಾಗದಲ್ಲಿ ಕಾಣಿ ಇದ್ದರೆ ಅದರ ತೂಕವನ್ನು ಕಳೆಯಬೇಕು.
ಸರಪಳಿ ತಕ್ಕಡಿಗಳು
ಬದಲಾಯಿಸಿಕಾಣಿ ತಕ್ಕಡಿಗಳ ಬಳಕೆ ಇಂದು ಶಾಲೆ, ಕಾಲೇಜುಗಳಲ್ಲಿ ಶಿಕ್ಷಣಕ್ಕೆ ಮಾತ್ರ ಮೀಸಲು. ಕೈಗಾರಿಕಾ ಪ್ರಯೋಗಶಾಲೆಗಳಲ್ಲಿ ತೂಕದ ಶೀಘ್ರ ನಿರ್ಧಾರ ಅಗತ್ಯ. ಇದಕ್ಕಾಗಿ ಸರಪಳಿ ತಕ್ಕಡಿಗಳನ್ನಾಗಲಿ ಸ್ವಯಂಮಾಪಕ ತಕ್ಕಡಿಗಳನ್ನಾಗಲಿ ಉಪಯೋಗಿಸಬಹುದು. ಸರಪಳಿ ತಕ್ಕಡಿಗಳಲ್ಲಿ ಗ್ರಾಮ್‍ಗಿಂತ ಕನಿಷ್ಠ ಬಟ್ಟುಗಳನ್ನಾಗಲಿ ಕಾಣಿಯನ್ನಾಗಲಿ ಬಳಸುವುದಿಲ್ಲ. ಇದಕ್ಕೆ ಬದಲಾಗಿ ದೂಲ ಒಂದು ಕೊನೆಗೆ ತಗಲಿಸಿರುವ ಸರಪಳಿಯ ನೆರವಿನಿಂದ ತೂಕ ನಿರ್ಧಾರ ಮಾಡಲಾಗುವುದು. ಸರಪಳಿಯ ಇನ್ನೊಂದು ಕೊನೆ ಮೇಲಕ್ಕೂ ಕೆಳಕ್ಕೂ ತೆನೆಯಬಲ್ಲ ಆಧಾರದ ಮೇಲಿದೆ. ಆಧಾರದ ಚಲನೆಯೊಂದಿಗೆ ಸರಪಳಿಯ ತೂಕ ಬದಲಾಯಿಸಿ ಸರಪಳಿ ತೂಕದ ಬಟ್ಟಿನಂತೆ ವರ್ತಿಸುತ್ತದೆ. ಸಾಮಾನ್ಯವಾಗಿ ಸರಪಳಿಯಿಂದ ದೊರಕುವ ತೂಕ 0.1mg. ಸರಪಳಿಯ ಕಾಣಿಯನ್ನು ಮಾನಕದ ಮೇಲೆ ಮಡಗಿರುವುದರಿಂದ ಸರಪಳಿಯ ತೂಕವನ್ನು ನೇರವಾಗಿ ಓದಲು ಸಾಧ್ಯ. ಮಾನಕದ ಒಡನಿರುವ ವರ್ನಿಯರ್ ಸಲಕರಣೆಯಿಂದ ತೂಕವನ್ನು 0.1mg ನಿಖರತೆಗೆ ಸರಿಯಾಗಿ ಶೋಧಿಸಬಹುದು.
ಸ್ವಯಂಮಾಪಕ ತಕ್ಕಡಿ
ಬದಲಾಯಿಸಿಸರಪಳಿ ತಕ್ಕಡಿಗಳಿಗಿಂತ ಶೀಘ್ರವಾಗಿ ಸ್ವಯಂಮಾಪಕ ತಕ್ಕಡಿಯಲ್ಲಿ ತೂಕವನ್ನು ನಿರ್ಧರಿಸಬಹುದು. ಕೈಗಾರಿಕೆಗಳಲ್ಲಿ ಮತ್ತು ಆಧುನಿಕ ಪ್ರಯೋಗಶಾಲೆಗಳಲ್ಲಿ ಇಂಥ ತಕ್ಕಡಿಗಳ ಬಳಕೆ ದಿನೇ ದಿನೇ ಹೆಚ್ಚುತ್ತಿದೆ. ಸಾಮಾನ್ಯವಾಗಿ ಇವುಗಳಲ್ಲಿ ಒಂದೇ ಒಂದು ತಟ್ಟೆ ಇರುವುದು. ಇವುಗಳ ಮುಂಭಾಗದಲ್ಲಿರುವ ಮುಖಫಲಕಗಳನ್ನು ತಿರುಗಿಸಿ ತೂಕಗಳನ್ನು ಬದಲಾಯಿಸುವ ಸಲಕರಣೆ ಉಂಟು. ಫಲಕದ ಸೂಚಿತಂತಿ ಫಲಕದ ತೂಕವನ್ನು ಸೂಚಿಸುತ್ತದೆ. ಸ್ಟಾಂಟನ್ ಮತ್ತು ಮೆಟಾಲಾಕ್ ತಕ್ಕಡಿಗಳು ಈ ವಿಧದವು.ಅತಿ ಸೂಕ್ಷ್ಮ ರಾಸಾಯನಿಕ ತಕ್ಕಡಿಗಳು ಮತ್ತು ಸೂಕ್ಷ್ಮ ರಾಸಾಯನಿಕ ತಕ್ಕಡಿಗಳು ಸಂಶೋಧನೆಯಲ್ಲಿ ಅತ್ಯಂತ ಅಗತ್ಯ ಸಲಕರಣೆಗಳು. ಕೆಲವು ಸೂಕ್ಷ್ಮ ರಾಸಾಯನಿಕ ತಕ್ಕಡಿಗಳ ಸೂಕ್ಷ್ಮತೆ ಮೈಕ್ರೊ ಗ್ರಾಮಿಗೆ ಒಂದು ಮಾನಕ ವಿಭಾಗವಾಗಿರುವುದೂ ಉಂಟು.ರಾಸಾಯನಿಕ ತಕ್ಕಡಿಗಳ ಸೂಕ್ಷ್ಮತೆ= ವಿಚಲನೆ/ಅನುಗುಣವಾದ ತೂಕ ಬದಲಾವಣೆ.
ಸೂಕ್ಷ್ಮ ತಕ್ಕಡಿಗಳು
ಬದಲಾಯಿಸಿಸಾಮಾನ್ಯ ತಕ್ಕಡಿಗಳಿಗಿಂತ ನಿಖರವಾದ, ಕ್ವಾಟ್ರ್ಸ್‍ನಿಂದ ಮಾಡಿದ ಸೂಕ್ಷ್ಮ ತಕ್ಕಡಿಗಳ(ಮೈಕ್ರೊಬ್ಯಾಲೆನ್ಸಸ್) ನೆರವಿನಿಂದ ಒಂದು ಗ್ರಾಮ್‍ನ ಭಿನ್ನಾಂಶ ತೂಕವಿರುವ ವಸ್ತುಗಳ ತೂಕಗಳನ್ನು ಕಂಡುಹಿಡಿಯಬಹುದು. ಕಡಿಮೆ ಪರಿಮಾಣದಲ್ಲಿ ದೊರೆಯುವ ಅನಿಲಗಳ ಸಾಂದ್ರತೆಯನ್ನು ಶೋಧಿಸಲು ಮುಖ್ಯವಾಗಿ ಈ ತಕ್ಕಡಿಗಳ ಬಳಕೆ ಇದೆ. ತಕ್ಕಡಿಯನ್ನು ಅನಿಲಬಂಧ ಕೊಠಡಿಯ ಒಳಗೆ ಇರಿಸಿರುವರು. ಅನಿಲವನ್ನು ಕೊಠಡಿಯ ಒಳಗೆ ಹಾಯಿಸಿದಾಗ ತೂಕದಲ್ಲಿ ಆಗುವ ಬದಲಾವಣೆಯನ್ನು ಅನಿಲದ ಪ್ಲವನತೆಯ ಬಲವನ್ನು ಅಳೆದು ನಿರ್ಧರಿಸಲಾಗುವುದು. ಪ್ಲವನತೆಯ ಬಲವನ್ನು ಅನಿಲದ ಒತ್ತಡವನ್ನು ನಿರ್ದೇಶಿಸಿ, ಪಾದರಸದ ಮಾನೋಮೀಟರನಿಂದ ಅಳೆಯಬಹುದು. ಆಧುನಿಕ ಸೂಕ್ಷ್ಮ ತಕ್ಕಡಿಗಳಲ್ಲಿ ದೂಲವನ್ನು ಚೂರಿ ಅಲಗಿನ ಮೇಲಿರಿಸುವ ಬದಲು ಕ್ವಾಟ್ರ್ಸ್ ತಂತಿಯಿಂದ ತೂಗಹಾಕಿರುತ್ತದೆ. ಹಾನ್ಸ್ ಪ್ಯಾಟರ್‍ಸನ್ ಎಂಬಾತ ಈ ತಕ್ಕಡಿಯಿಂದ 250 ಗ್ರಾಮ್ ತೂಕವನ್ನು ತಟ್ಟೆಯಲ್ಲಿ ಹಾಕಿ, ಅನಿಲವನ್ನು ಮಂದಿರದೊಳಗೆ ಹಾಯಿಸಿದಾಗ 0.2್ಠ510-6 ಮಿಲಿಗ್ರಾಮಿನಷ್ಟು ತೂಕ ವ್ಯತ್ಯಾಸವನ್ನು ಗಮನಿಸಿದ.
ಅತಿ ಸೂಕ್ಷ್ಮ ತಕ್ಕಡಿಗಳು
ಬದಲಾಯಿಸಿಸೂಕ್ಷ್ಮ ತಕ್ಕಡಿಗಳಲ್ಲಿ ಗಣಿಸಲು ಸಾಧ್ಯವಾಗದ ಬಲು ಕಡಿಮೆ ತೂಕವುಳ್ಳ ವಸ್ತುಗಳ ತೂಕಗಳನ್ನು ನಿರ್ಧರಿಸಲು ಇಂಥ ತಕ್ಕಡಿಗಳನ್ನು(ಅಲ್ಟ್ರಾ ಮೈಕ್ರೊ ಬ್ಯಾಲೆನ್ಸಸ್) ಬಳಸುವರು. ಮೈಕ್ರೊ ಗ್ರಾಮ್ ವ್ಯಾಪ್ತಿಯಲ್ಲಿ ಚೂರಿ ಅಲಗನ್ನು ಉಪಯೋಗಿಸಿ ರಚಿಸಿರುವ ತಕ್ಕಡಿಗಳು ಉಪಯೋಗಿಸಲು ಅರ್ಹವಾಗಿಲ್ಲದಿರುವುದರಿಂದ ಬೇರೆ ತಂತ್ರವನ್ನು ಅಳವಡಿಸಿ ಈ ತಕ್ಕಡಿಗಳನ್ನು ರಚಿಸಲಾಗಿದೆ. ಕಾಂತೀಯ ಮತ್ತು ವಿದ್ಯುತ್ ಕ್ಷೇತ್ರಗಳಿಂದ ಸರಿದೂಗಿಸುವಿಕೆ, ಅನಿಲಗಳಲ್ಲಾಗುವ ಸ್ಥಳಾಂತರ ಮತ್ತು ತಕ್ಕಡಿಯನ್ನು ರಚಿಸುವ ವಸ್ತುಗಳ ಪುಟಿತತೆ- ಈ ತತ್ತ್ವಗಳನ್ನು ಅಳವಡಿಸಲಾಗಿರುತ್ತದೆ. ಅತಿ ಸೂಕ್ಷ್ಮರಾಶಿಯಿಂದ ತಕ್ಕಡಿಯ ದೂಲಕ್ಕಾಗುವ ಸ್ಥಳಾಂತರವನ್ನು ದ್ಯುತಿ, ವಿದ್ಯುತ್ ಅಥವಾ ವಿಕಿರಣ ವಿಧಾನದಿಂದ ಶೋಧಿಸುವರು ಮತ್ತು ತಕ್ಕಡಿಯ ದೂಲವನ್ನು ಯಥಾಸ್ಥಿತಿಗೆ ತರಲು ಬೇಕಾದ ಬಲವನ್ನು ವಿದ್ಯುತ್ ವಿಧಾನದಿಂದ ಅಳೆದು ವಸ್ತು ತೂಕವನ್ನು ನಿರ್ಧರಿಸುವರು.
ಸಾಮಾನ್ಯ ಪುಟಿತ ತಕ್ಕಡಿಗಳು
ಬದಲಾಯಿಸಿಎಲ್ಲ ಮಾದರಿಯ ತಕ್ಕಡಿಗಳ ಯಶಸ್ಸಿನ ನಿರ್ವಹಣೆ ಯಂತ್ರದ ರಚನೆಯಲ್ಲಿ ಉಪಯೋಗಿಸುವ ವಸ್ತುಗಳ ಗುಣದ ಮೇಲೆ ಅವಲಂಬಿತವಾಗಿದ್ದು, ಇದಕ್ಕೆ ಕ್ವಾಟ್ರ್ಸ್‍ನಂಥ ವಸ್ತುಗಳು ಬಹಳ ಉತ್ತಮವಾದವು. ಏಕೆಂದರೆ ಇವುಗಳಿಗೆ ಹೆಚ್ಚಿನ ಅತಿ ದೃಢತೆ, ಪುಟಿತತೆ ಮತ್ತು ಉಷ್ಣತಾ ಬದಲವಣೆ ಸಹಿಷ್ಟುತೆಯ ಸಾಮಥ್ರ್ಯ ಉಂಟು. ಪುಟಿತ ತಕ್ಕಡಿಗಳು ಸರಳವೂ ಸೂಕ್ಷ್ಮವೂ ಆದವು. ಗುರುತ್ವ ಕ್ಷೇತ್ರದಲ್ಲಿನ ಭೌಗೋಳಿಕ ಬದಲಾವಣೆಗಳಿಂದ ಹೊರತಾಗಿರುತ್ತವೆ. ಇ. ಸಾಲ್ವಿಯಾನ್ ಎಂಬ ವಿe್ಞÁನಿ, ಒಂದು ಸರಳವಾದ ಪುಟಿತ ತಕ್ಕಡಿಯನ್ನು ರಚಿಸಿದ (1901). ಇದರಲ್ಲಿ ತೆಳುವಾದ ಗಾಜಿನ ಎಳೆಯ ಒಂದು ಕೊನೆಯನ್ನು ಆಧಾರಕ್ಕೆ ಬಂಧಿಸಿ, ಇನ್ನೊಂದು ಕೊನೆಗೆ ಸಣ್ಣ ತಟ್ಟೆಯನ್ನು ತೂಗಹಾಕಿರುತ್ತದೆ. ಈ ಎಳೆಯ ವ್ಯವಸ್ಥೆ ಸಮತಳದಲ್ಲಿರುವುದು. ವಸ್ತುವನ್ನು ತಟ್ಟೆಗೆ ಹಾಕಿದಾಗ ಅದರ ತೂಕಕ್ಕೆ ಎಳೆ ಬಾಗುವುದು. ಬಾಗುವಿಕೆಯನ್ನು ನಿಶ್ಚಲ ಮಾನಕದ ಸಹಾಯದಿಂದ ಅಳೆಯಬಹುದು. ಆಧುನಿಕ ಉಪಕರಣದಲ್ಲಿ ಗಾಜಿನ ಎಳೆಗೆ ಬದಲಾಗಿ ಕ್ವಾಟ್ರ್ಸ್ ಎಳೆಯನ್ನು ಬಳಸಲಾಗುತ್ತದೆ. ಇಂಥ ತಕ್ಕಡಿಗಳಲ್ಲಿ ವಸ್ತುಗಳನ್ನು ಹಾಕಿದಾಗ ಉಂಟಾಗುವ ಬಾಗುವಿಕೆಯನ್ನು ಸೂಕ್ಷ್ಮದರ್ಶಕದಿಂದ ನಿರ್ಧರಿಸಲಾಗುವುದು.
ಇತರ ಕೆಲವು ಮಾದರಿಯ ಪುಟಿತ ತಕ್ಕಡಿಗಳನ್ನು ಕ್ವಾಟ್ರ್ಸ್ ಶಿಲೆಯ ಸಮತಳ ಸುರುಳಿಯನ್ನು ಉಪಯೋಗಿಸಿ ರಚಿಸಿರುವರು. ಇಲ್ಲಿ ಸುರುಳಿಯನ್ನು ಒಂದು ಆಧಾರದಿಂದ ತೂಗಹಾಕಿ ಇನ್ನೊಂದು ಕೊನೆಗೆ ವಸ್ತುವನ್ನು ತೂಗ ಹಾಕಿದಾಗ ಅದರ ರೂಪ ಬದಲಾಗುವುದು. ಎರಡು ಸಣ್ಣ ದರ್ಪಣಗಳನ್ನು ಎದುರುಬದಿರಾಗಿ ಸುರುಳಿಗೆ ಬಂಧಿಸಿರುವರು. ಒಂದು ದರ್ಪಣದಿಂದ ಇನ್ನೊಂದು ದರ್ಪಣಕ್ಕೆ Z ಆಕಾರದಲ್ಲಿ ಹಾದುಹೋಗುವ ಬೆಳಕಿನ ಕಿರಣದ ದಿಕ್ಪಲ್ಲಟ ಸುರುಳಿಯ ಸುತ್ತಿನ ದಿಕ್ಪಲ್ಲಟವನ್ನು ತೋರಿಸುತ್ತದೆ. ಈ ದಿಕ್ಪಲ್ಲಟ ಸುರುಳಿಯ ಕೆಳಕೊನೆಯಲ್ಲಿ ತೂಗಹಾಕಿರುವ ವಸ್ತುವಿನ ತೂಕಕ್ಕೆ ಅನುಗುಣವಾಗಿದೆ.
ತಿರುಚು ತಕ್ಕಡಿಗಳು
ಬದಲಾಯಿಸಿಅನೇಕ ಪ್ರಾಯೋಗಿಕ ಮತ್ತು ಜಯಪ್ರದ ಅತಿಸೂಕ್ಷ್ಮ ತಕ್ಕಡಿಗಳು ಕ್ವಾಟ್ರ್ಸ್ ಶಿಲೆಯ ಎಳೆಯ ಮೇಲೆ ಭ್ರಾಮಕತೆಯನ್ನು (ಟಾರ್ಕ್) ಆರೋಪಿಸಿ ವಸ್ತುಗಳ ತೂಕವನ್ನು ಸರಿದೂಗಿಸುವ ತತ್ತ್ವವನ್ನು ಆಧರಿಸಿವೆ. ಎಚ್.ವಿ.ನೆಹರ್ ಎಂಬಾತನಿಂದ ರೂಪಿಸಲ್ಪಟ್ಟಿರುವ ಮಾದರಿಯಲ್ಲಿ(ಟಾರ್ಷನ್ ಬ್ಯಾಲೆನ್ಸ್) ಒಂದು ದೃಢ ತಂತಿಯನ್ನು ಸಮತಲ ದಂಡದಂತೆ ಇದಕ್ಕೆ ಲಂಬವಾಗಿ ಸಮತಲದಲ್ಲಿರುವ ಇನ್ನೊಂದು ಕ್ವಾಟ್ರ್ಸ್ ಶಿಲೆಯ ತಿರುಚು ತಂತಿಯಿಂದ ಮಧ್ಯೆ ಬಂಧಿಸಿದೆ. ದೂಲದ ಎರಡು ಕೊನೆಗಳಲ್ಲಿ ಬಹಳ ಚಿಕ್ಕವೂ ಹಗುರವೂ ಆದ ಎರಡು ತಟ್ಟೆಗಳನ್ನು ತೂಗಹಾಕಿರುತ್ತದೆ. ಒಂದು ತಟ್ಟೆಯಲ್ಲಿ ವಸ್ತುವನ್ನು ಮಡಗಿದಾಗ ದೂಲದ ದಿಕ್ಪಲ್ಲಟ ಲಂಬನೇರದಲ್ಲಿ ಆಗುತ್ತದೆ. ಆಗ ಕ್ವಾಟ್ರ್ಸ್ ಶಿಲೆಯ ತಂತಿ ತಿರುಚಲ್ಪಡುತ್ತದೆ. ದಂಡ ಯಥಾಸ್ಥಿತಿಗೆ ಬರುವವರೆಗೂ ತಿರುಚುತಂತಿಯ ಮೇಲೆ ಬಲಯುಗ್ಮವನ್ನು ಆರೋಪಿಸಲಾಗುವುದು. ತಟ್ಟೆಗೆ ಹಾಕಿದ ತೂಕವನ್ನು ಸರಿದೂಗಿಸಲು ಬೇಕಾದ ಭ್ರಾಮಕತೆಯನ್ನು ತಿರುಚುತಂತಿಯ ಕೊನೆಯಲ್ಲಿ ಅಳವಡಿಸಿರುವ ಫಲಕದ ಸಹಾಯದಿಂದ ಕಂಡು ಹಿಡಿಯಬಹುದು. ಇಂಥ ತಕ್ಕಡಿಗಳಿಂದ 0.001 ಮೈಕ್ರೊಗ್ರಾಮ್ ವ್ಯಾಪ್ತಿಯ ಸೂಕ್ಷ್ಮತೆಯನ್ನು ಪಡೆಯಬಹುದು.
ಕಾಂತೀಯ ತಕ್ಕಡಿಗಳು
ಬದಲಾಯಿಸಿಮೊತ್ತ ಮೊದಲಿಗೆ ಎಫ್. ಎಮಿಚ್ ಎಂಬಾತ ಕಾಂತೀಯ ತಕ್ಕಡಿಯನ್ನು (ಮ್ಯಾಗ್ನೆಟಿಕ್ ಬ್ಯಾಲೆನ್ಸ್) ರೂಪಿಸಿದ. ಇಂಥ ತಕ್ಕಡಿಯಲ್ಲಿ ವಸ್ತುಗಳ ತೂಕವನ್ನು ಸರಿದೂಗಿಸಲು ಬೇಕಾದ ಕಾಂತಕ್ಷೇತ್ರವನ್ನು ಅಳೆದು ತೂಕವನ್ನು ನಿರ್ಧರಿಸಲಾಗುವುದು. ಹೆಚ್ಚು ತೂಕವಿರುವ ವಸ್ತುಗಳ ತೂಕವನ್ನು ಇಂಥ ತಕ್ಕಡಿಯಿಂದ ನಿರ್ಧರಿಸಲಾಗುವುದಿಲ್ಲ.ಅತಿಸೂಕ್ಷ್ಮ ತಕ್ಕಡಿಗಳ ಕ್ರಮಾಂಕನ (ಕ್ಯಾಲಿಬ್ರೇಷನ್) ನಿರ್ಣಯ ಅತಿ ಕಷ್ಟವಾದರೂ ಅದು ಅವಶ್ಯಕ. ಅತಿ ಸಣ್ಣದಾದರೂ ಗೊತ್ತಾದ ತೂಕವನ್ನು ಬಳಸಿ ನಿರ್ಣಯಿಸಬೇಕು. ಒಂದು ವಸ್ತುವಿನ ರಾಶಿಯನ್ನು [ಮಾಸ್, ಅಂದರೆ ಆ ವಸ್ತುವಿನಲ್ಲಿನ ದ್ರವ್ಯದ (ಮ್ಯಾಟರ್) ಮೊತ್ತ] ನಿರ್ಧರಿಸಲು ತಕ್ಕಡಿಯನ್ನು (ಅದು ಸಾಮಾನ್ಯ ಬಗೆಯದ್ದಾಗಿರಬಹುದು ಇಲ್ಲವೆ ಸುಧಾರಿತ ರೂಪದ್ದಿರಬಹುದು) ಬಳಸುವುದಿದೆ. ಒಂದು ವಸ್ತುವಿನ ತೂಕವನ್ನು (ವೇಯ್ಟ್) ಅಂದರೆ, ಭೂಮಿ ಯಾವ ಬಲದಿಂದ ಆ ರಾಶಿಯಿರುವ ವಸ್ತುವನ್ನು ತನ್ನ ಕೇಂದ್ರದೆಡೆಗೆ ಆಕರ್ಷಿಸುವುದೋ ಆ ಬಲವನ್ನು ನಿರ್ಧರಿಸಲು ವಿಶೇಷ ರೀತಿಯ ತಕ್ಕಡಿಗಳನ್ನು ಉಪಯೋಗಿಸುತ್ತಾರೆ. ಇಂಥವನ್ನು ಸುರುಳಿ ತಕ್ಕಡಿಗಳೆಂದು (ಸ್ಪ್ರಿಂಗ್ ಬ್ಯಾಲೆನ್ಸ್) ಕರೆಯುವುದಿದೆ.ವಸ್ತುವನ್ನು ತೂಗುವ ಕ್ರಮದಲ್ಲಿ ಭಾರತದ ಹಳ್ಳಿಗಾಡಿನ ಜನ ತಮ್ಮದೇ ಆದ ತೂಗುವ ಸಾಧನಗಳನ್ನು ಬಳಸುತ್ತಿದ್ದುದುಂಟು. ಅನೇಕ ಹಳ್ಳಿಗಳಲ್ಲಿ ಈಗಲೂ ಬೆಣ್ಣೆ ಮುಂತಾದ ಪದಾರ್ಥಗಳನ್ನು ತೂಗಬೇಕಾದರೆ ತೂಗುವ ಕೋಲನ್ನೇ ಬಳಸುತ್ತಾರೆ.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- National Conference on Weights and Measures, NIST Handbook 44, Specifications, Tolerances, And Other Technical Requirements for Weighing and Measuring Devices, 2003
- Analytical Balance article at ChemLab Archived 2005-08-23 ವೇಬ್ಯಾಕ್ ಮೆಷಿನ್ ನಲ್ಲಿ.
- "The Precious Necklace Regarding Weigh Scales" is an 18th-century manuscript by Abd al-Rahman al-Jabarti about the "design and operation" of scales
- The history of weighing scale, The balance, Romans, Da vinci y roberval Archived 2019-02-17 ವೇಬ್ಯಾಕ್ ಮೆಷಿನ್ ನಲ್ಲಿ.