ಸಿ. ಪಿ. ರವಿಕುಮಾರ್
(ಡಾ. ಸಿ.ಪಿ.ರವಿಕುಮಾರ್ ಇಂದ ಪುನರ್ನಿರ್ದೇಶಿತ)
ಡಾ.ಸಿ.ಪಿ.ರವಿಕುಮಾರ್ ಅವರು ಕಂಪ್ಯೂಟರ್ ತಂತ್ರಜ್ಞರು ಹಾಗೂ ಲೇಖಕರು. ಐಐಟಿ ದೆಹಲಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಪ್ರಸ್ತುತ 'ಅಮೆರಿಕದ ಟೆಕ್ಸಾಸ್ ಇನ್ಸ್‌ಟ್ರುಮೆಂಟ್ಸ್ ಸಂಸ್ಥೆ'ಯಲ್ಲಿ ಕೆಲಸ ಮಾಡುತ್ತಿದ್ದಾರೆ.[೧] ವಿಜ್ಞಾನ-ತಂತ್ರಜ್ಞಾನದ ಬರಹಗಳನ್ನು ಮತ್ತು ಕಂಪ್ಯೂಟರ್ ವಿಜ್ಞಾನ ಕುರಿತು ಕನ್ನಡದಲ್ಲಿ ಲೇಖನಗಳನ್ನು ಬರೆಯುತ್ತಿದ್ದಾರೆ.
ರವಿಕುಮಾರ್ ಪರಿಚಯ
ಬದಲಾಯಿಸಿ- ಸಿ.ಪಿ. ರವಿಕುಮಾರ್ ಅವರು ಪ್ರಸಕ್ತ ಟೆಕ್ಸಾಸ್ ಇಂಸ್ಟ್ರುಮೆಂಟ್ಸ್ ಸಂಸ್ಥೆಯ ಭಾರತೀಯ ಕಚೇರಿಯಲ್ಲಿ 'ಟೆಕ್ನಿಕಲ್ ಟ್ಯಾಲೆಂಟ್ ಡೆವಲೆಪ್ಮೆಂಟ್' ಶಾಖೆಯ ನಿರ್ದೇಶಕರಾಗಿ ಕೆಲಸ ಮಾಡುತಿದ್ದಾರೆ. ಐಐಟಿ (ಮದ್ರಾಸ್) ಸಂಸ್ಥೆಯಲ್ಲಿ ಅವರು ವಿದ್ಯುತ್ ವಿಭಾಗದಲ್ಲಿ ಗೌರವ ಪ್ರಾಧ್ಯಾಪಕ ರಾಗಿದ್ದಾರೆ. ಇದಕ್ಕೆ ಮುಂಚೆ ಅವರು ಐಐಟಿ (ದೆಹಲಿ) ಸಂಸ್ಥೆಯಲ್ಲಿ ವಿದ್ಯುತ್ ವಿಭಾಗದಲ್ಲಿ ಕೆಲಸ ನಿರ್ವಹಿಸಿದ್ದಾರೆ (೧೯೯೧-೨೦೦೧). ಸದರ್ನ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಅವರು ಒಂದು ವರ್ಷ ಭೇಟಿಯಿತ್ತು ವಿದ್ಯುತ್ ವಿಭಾಗದಲ್ಲಿ ಪ್ರೊ ಆಲಿಸ್ ಪಾರ್ಕರ್ ಅವರ ಜೊತೆ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದರು (೧೯೯೫-೧೯೯೬). ಹಾಗೇ ಗೋವಾ ರಾಜ್ಯದಲ್ಲಿರುವ ಕಂಟ್ರೋಲ್ ನೆಟ್ ಎಂಬ ಸಂಸ್ಥೆಯಲ್ಲಿ ವೈಸ್ ಪ್ರೆಸಿಡೆಂಟ್, ಟೆಕ್ನಿಕಲ್ ಟ್ರೇನಿಂಗ್ ಎಂಬ ಹುದ್ದೆಯನ್ನು ನಿರ್ವಹಿಸಿದರು (೨೦೦೦-೨೦೦೧).
- ಸಿ.ಪಿ. ರವಿಕುಮಾರ್ ಅವರು ದೆಹಲಿ ಕನ್ನಡ ಶಾಲೆ ಮತ್ತು ನ್ಯಾಷನಲ್ ಹೈಸ್ಕೂಲ್ (ಬೆಂಗಳೂರು) ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಪಡೆದರು. ನ್ಯಾಷನಲ್ ಕಾಲೇಜ್ (ಬಸವನಗುಡಿ) ಯಲ್ಲಿ ಅವರು ಪ್ರಿಯೂನಿವರ್ಸಿಟಿ ಶಿಕ್ಷಣ ಪಡೆದರು. ಮೊದಲ ವರ್ಷ ಪಿಯೂಸಿ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಒಂಬತ್ತನೇ ರಾಂಕ್ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ರಾಂಕ್ ಗಳಿಸಿದರು. ಮುಂದೆ ಬೆಂಗಳೂರು ವಿಶ್ವವಿದ್ಯಾಲಯದ ಯುವಿಸಿಈ (ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್) ನಲ್ಲಿ ಬಿ.ಇ. (ಎಲೆಕ್ಟ್ರಾನಿಕ್ಸ್) ಪ್ರಥಮ ರಾಂಕ್ ಪಡೆದು ಉತ್ತೀರ್ಣರಾಗಿ ಚಿನ್ನದ ಪದಕದ ವಿಜೇತರಾದರು.
- ನಂತರ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಟಾಟಾ ವಿಜ್ಞಾನ ಸಂಸ್ಥೆ) ಯಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ಎಂ.ಇ. ಪದವಿ ಪಡೆದು ತರಗತಿಯಲ್ಲಿ ಪ್ರಥಮ ರಾಂಕ್ ನೊಂದಿಗೆ ಉತ್ತೀರ್ಣರಾದರು. ಅಮೆರಿಕದ ಸದರ್ನ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ (ಲಾಸ್ ಏಂಜಲೀಸ್ ) ವಿದ್ಯುತ್ ವಿಭಾಗ (ಸಿಸ್ಟಮ್ಸ್) ನಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಪಿಎಚ್ ಡಿ ಪದವಿ ಗಳಿಸಿದರು. ಅಂತರ್ರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲಿ ಮತ್ತು ಸಮ್ಮೇಳನಗಳಲ್ಲಿ ಇನ್ನೂರಕ್ಕೂ ಹೆಚ್ಚು net/profile /CP _Ravikumar ಸಂಶೋಧನಾ ಪ್ರಬಂಧಗಳನ್ನು ರವಿಕುಮಾರ್ ಪ್ರಕಟಿಸಿದ್ದಾರೆ.
- ವಿ.ಎಲ್. ಎಸ್ ಐ ಡಿಸೈನ್ ಅಂಡ್ ಟೆಸ್ಟ್ ಸಿಂಪೋಸಿಯಮ್ ಎಂಬ ವಾರ್ಷಿಕ ಸಮ್ಮೇಳನವನ್ನು ರವಿಕುಮಾರ್ ಪ್ರಾರಂಭಿಸಿ ಹದಿನೈದು ವರ್ಷಗಳ ಕಾಲ ನಡೆಸಿ ಅದನ್ನು ಅಂತರ್ರಾಷ್ಟ್ರೀಯ ಗುಣಮಟ್ಟದ ಸಮ್ಮೇಳನವಾಗಿ ಬೆಳೆಸಿದರು. ಒಂದು ಸಂಶೋಧನಾ ಪುಸ್ತಕದ ಲೇಖಕ ಮತ್ತು ಹದಿನೈದು ಸಂಶೋಧನಾ ಪುಸ್ತಕಗಳ ಸಂಪಾದಕರಾಗಿದ್ದಾರೆ. ಅನೇಕ ಪ್ರಮುಖ ಸಂಶೋಧನಾ ನಿಯತಕಾಲಿಕೆಗಳಿಗೆ ಸಂಪಾದಕ ಮಂಡಳಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದಾರೆ (ಜರ್ನಲ್ ಆಫ್ ಎಲೆಕ್ಟ್ರಾನಿಕ್ ಟೆಸ್ಟಿಂಗ್, ಜರ್ನಲ್ ಆಫ್ ಲೋ ಪವರ್ ಎಲೆಕ್ಟ್ರಾನಿಕ್ಸ್ ಪ್ರಮುಖವಾದವು). ಇದಲ್ಲದೆ ಅನೇಕ ಅಂತರ್ರಾಷ್ಟ್ರೀಯ ಮಟ್ಟದ ಸಮ್ಮೇಳನಗಳನ್ನು ಆಯೋಜಿಸಿದ್ದಾರೆ. ಈ ಸಂಸ್ಥೆ ನಡೆಸುವ ಎರಡು ಸಂಶೋಧನಾ ಸಮ್ಮೇಳನಗಳಲ್ಲಿ ಇವರಿಗೆ ಅತ್ಯುತ್ತಮ ಪ್ರಬಂಧ ಪ್ರಶಸ್ತಿ ದೊರಕಿದೆ.
- ಒಂದು ಸಮ್ಮೇಳನದಲ್ಲಿ ಅತ್ಯುತ್ತಮ ವಿದ್ಯಾರ್ಥಿ ಪ್ರಬಂಧ ಪ್ರಶಸ್ತಿ ದೊರಕಿದೆ. ರವಿಕುಮಾರ್ ಐಈಈಈ ಸಂಸ್ಥೆಯ ಹಿರಿಯ ಸದಸ್ಯರು. ಈ ಸಂಸ್ಥೆಯ ಸರ್ಕ್ಯೂಟ್ಸ್ ಅಂಡ್ ಸಿಸ್ಟೆಂಸ್ ಸೊಸೈಟಿಯ ಬೆಂಗಳೂರು ವಿಭಾಗವನ್ನು ಹುಟ್ಟು ಹಾಕಿ ಅದರ ಗೌರವ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಭಾರತೀಯ ವಿಎಲ್ಎಸ್ ಐ ಸೊಸೈಟಿಯ ಗೌರವ ಸದಸ್ಯ ರಾಗಿ (೨೦೦೩-೨೦೧೧) ಎಂಟು ವರ್ಷ ಕೆಲಸ ಮಾಡಿ ಅದನ್ನು ಒಂದು ಉತ್ತಮ ಸಂಘವನ್ನಾಗಿ ಬೆಳೆಸಿದ್ದಾರೆ. ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆಯ 'ಯೂನಿವರ್ಸಿಟಿ ರಿಲೇಶನ್ಸ್' ಸಂಸ್ಥೆಯ ನಿರ್ದೇಶಕರಾಗಿ ಅವರು ಭಾರತೀಯ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಐನೂರಕ್ಕೂ ಹೆಚ್ಚು ಪ್ರಯೋಗಶಾಲೆಗಳನ್ನು ಕಟ್ಟುವುದ್ರಲ್ಲಿ ನೆರವಾಗಿದ್ದಾರೆ. ಈ ದಿಕ್ಕಿನಲ್ಲಿ ಅವರ ಕೊಡುಗೆಯನ್ನು ಗಮನಿಸಿ ಜಿನೋವ್ ಸಂಸ್ಥೆ ಅವರಿಗೆ ಪ್ರಶಸ್ತಿಯನ್ನು ಕೊಟ್ಟಿದೆ.
- ಕನ್ನಡದಲ್ಲಿ ಕಂಪ್ಯೂಟರ್ ತಂತ್ರಜ್ಞಾನ ಕುರಿತಾಗಿ ಅವರು ೧೯೯೦ ದಶಕದಲ್ಲಿ ಕನ್ನಡಪ್ರಭ ಪತ್ರಿಕೆಗೆ ಬರೆದ ಲೇಖನಗಳು ಮುಂದೆ 'ಕಂಪ್ಯೂಟರ್ ಗೊಂದು ಕನ್ನಡಿ' ಎಂಬ ಶೀರ್ಷಿಕೆಯೊಂದಿಗೆ ಪುಸ್ತಕರೂಪದಲ್ಲಿ ಪ್ರಕಟವಾಯಿತು (ಅಭಿನವ ಪ್ರಕಾಶನ, ೧೯೯೬). ೨೦೧೪ ಜೂನ್ ತಿಂಗಳಿಂದ ಅವರು 'ವಿಜಯಕರ್ನಾಟಕ' ಪತ್ರಿಕೆಗೆ 'ಜನಮುಖಿ ತಂತ್ರಲೋಕ' ಎಂಬ ಪಾಕ್ಷಿಕ ಕಾಲಂ ಬರೆಯುತ್ತಿದ್ದಾರೆ. 'ಸಿ.ಪಿ. ಸಂಪದ' ಎಂಬ ಬ್ಲಾಗ್ ಮೂಲಕ ಅವರು ತಂತ್ರಜ್ಞಾನ/ಗಣಿತ ಕುರಿತಾದ ವಿಷಯಗಳ ಬಗ್ಗೆ ಬ್ಲಾಗ್ ಪ್ರಕಟಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಅಭಿರುಚಿಯುಳ್ಳ ಸಿ.ಪಿ.ರವಿಕುಮಾರ್ ವಿದ್ಯಾರ್ಥಿಯಾಗಿದ್ದಾಗಿನಿಂದ 'ಕನ್ನಡಪ್ರಭ', 'ಪ್ರಜಾವಾಣಿ', 'ಮಯೂರ', 'ಸುಧಾ' ಮೊದಲಾದ ಪತ್ರಿಕೆಗಳಲ್ಲಿ ತಮ್ಮ ಬರಹಗಳನ್ನು ಪ್ರಕಟಿಸಿದ್ದಾರೆ.
- ನವಕರ್ನಾಟಕ ಸಂಸ್ಥೆ ಪ್ರಕಟಿಸಿದ 'ವಿಶ್ವಕಥಾಕೋಶ' ಎಂಬ ಕಥಾಮಾಲಿಕೆಯಲ್ಲಿ ಇವರು 'ಕಾಡಿನಲ್ಲಿ ಬೆಳದಿಂಗಳು' ಎಂಬ ಹೆಸರಿನಲ್ಲಿ ವಿಯಟ್ನಾಮ್ ಕತೆಗಳನ್ನು ಅನುವಾದಿಸಿ ಪ್ರಕಟಿಸಿದ್ದಾರೆ. ಇವರು ಭಾಷಾಂತರ ಮಾಡಿದ 'ಕುರಿ' ನಾಟಕವನ್ನು (ಹಿಂದಿ ಮೂಲ : ಸರ್ವೇಶ್ವರ್ ದಯಾಳ್ ಸಕ್ಸೇನಾ, ನಿರ್ದೇಶನ: ಎಂ.ಎಸ್. ಸತ್ಯು, ಸಂಗೀತ: ರಾಜೀವ ತಾರನಾಥ್) ಸಮುದಾಯ ತಂಡದವರು ಅಭಿನಯಿಸಿ ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಭಾರತೀಯ ಪ್ರಕಾಶನ ವಿಭಾಗ ಸಂಸ್ಥೆಯು ಇವರ 'ಮೌಲಾನಾ ಅಬುಲ್ ಕಲಾಂ ಆಜಾದ್' ಜೀವನ ಚರಿತ್ರೆಯ ಕನ್ನಡ ಅನುವಾದವನ್ನು ಪ್ರಕಟಿಸಿದೆ.
- ಕ್ರೈಸ್ಟ್ ಕಾಲೇಜ್ ಕನ್ನಡ ಸಂಘದವರು ನಡೆಸುತ್ತಿದ್ದ ಅ.ನ.ಕೃ. ಸ್ಮಾರಕ ಪ್ರಬಂಧ ಸ್ಪರ್ಧೆಯಲ್ಲಿ ಮೂರು ಸಲ ಬಹುಮಾನ ಪಡೆದಿದ್ದಾರೆ; ಇದೇ ಸಂಸ್ಥೆಯವರು ನಡೆಸಿದ ಬೇಂದ್ರೆ ಸ್ಮಾರಕ ಕವನ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ. ಕ್ರೈಸ್ಟ್ ಕಾಲೇಜ್ ಕನ್ನಡ ಸಂಘದ ದಿವಂಗತ ಶ್ರೀನಿವಾಸ ರಾಜು ಇವರ ಕನ್ನಡ ಕವಿತೆಗಳನ್ನು 'ದಂತಪಂಕ್ತಿ' ಎಂಬ ಸಂಗ್ರಹದಲ್ಲಿ ಪ್ರಕಟಿಸಿದ್ದಾರೆ (೧೯೯೩). ರವಿಕುಮಾರ್ ಅನೇಕ ಬ್ಲಾಗ್ ಗಳ ಮೂಲಕ ತಮ್ಮ ಬರವಣಿಗೆಯನ್ನು ಮುಂದುವರೆಸಿದ್ದಾರೆ -
- ರವಿ ಕಾಣದ್ದು ಕನ್ನಡದಲ್ಲಿ ಕವಿತೆ/ಕಥೆ/ಅನುವಾದಗಳು
- CP's Corner ಇಂಗ್ಲಿಷ್ ಬರಹಗಳು
- An English Mirror for Kannada Poetry ಕನ್ನಡ ಕವಿತೆಗಳ ಇಂಗ್ಲಿಷ್ ಭಾಷಾಂತರಗಳು
- समुन्दर और सीपी ಹಿಂದಿ ರಚನೆಗಳು/ಹಿಂದಿ ಕವಿತೆಗಳ ಇಂಗ್ಲಿಷ್ ಭಾಷಾಂತರಗಳು
- ಸಿ.ಪಿ. ಸಂಪದ ಕಂಪ್ಯೂಟರ್ ವಿಜ್ಞಾನ/ಗಣಿತ ಕುರಿತ ಕನ್ನಡ ಬರಹಗಳು
- 'ಸಿ.ಪಿ. ಸಂಪದ'ಬ್ಲಾಗ್ ನಲ್ಲಿ [೨] ರವಿಕುಮಾರ್,ತಮ್ಮ ಹೊಸ ಬರಹಗಳನ್ನು ನಿಯಮಿತವಾಗಿ ಪ್ರಕಟಿಸುತ್ತಾ ಬಂದಿದ್ದಾರೆ.
ವಿಜ್ಞಾನ ಸಂವಹನಕಾರರು
ಬದಲಾಯಿಸಿದಿವಂಗತ 'ಡಾ.ನಿರಂಜನ', ಸಂಪಾದಿಸಿದ 'ಜ್ಞಾನಗಂಗೋತ್ರಿಯ ಸಂಪುಟಗಳು' ರವಿಯವರ ಮೇಲೆ ಗಾಢವಾದ ಪರಿಣಾಮ ಬೀರಿದವು. ಕನ್ನಡದಲ್ಲಿ ವೈಜ್ಞಾನಿಕ ಬರಹಗಳು ಕಡಿಮೆ; ಕೇವಲ ಜನಪ್ರಿಯ ವಿಜ್ಞಾನದ ಸ್ತರದಲ್ಲಿ ಕೆಲಸ ಸಾಗುತ್ತಿದೆ. ಇಂಜಿನಿಯರಿಂಗ್, ಮೆಡಿಕಲ್ ಕಾಲೇಜು ಗಳಲ್ಲಿ ಕನ್ನಡ ಬಳಸುವಂತೆ ಆಗಬೇಕು. ಕನ್ನಡದಲ್ಲಿ ಸಂಶೋಧನಾ ಮಟ್ಟದ ಪ್ರಬಂಧಗಳನ್ನು ಬರೆಯುವುದು, ಮಂಡಿಸುವುದು ಸಾಧ್ಯವಾಗಬೇಕು. ಆಗ ಶಾಲಾ ಕಾಲೇಜುಗಳಲ್ಲಿ ಕನ್ನಡಕ್ಕೆ ಮಹತ್ವ ಬರುವ ಸಾಧ್ಯತೆ ಹೆಚ್ಚು.
ಇತರ ಆಸಕ್ತಿಗಳು
ಬದಲಾಯಿಸಿ- ಕಂಪ್ಯೂಟರ್ ಇಂಜಿನಿಯರಿಂಗ್ ನಲ್ಲಿ ಪಿಎಚ್.ಡಿ. ಪಡೆದು, 'ವಿಎಲ್ಎಸ್ಐ, ಕಂಪ್ಯೂಟರ್ ಆರ್ಕಿಟೆಕ್ಚರ್',[೩] 'ಪ್ಯಾರಲೆಲ್ ಪ್ರಾಸೆಸಿಂಗ್,' ಮೊದಲಾದ ಕಾರ್ಯಕ್ಷೇತ್ರಗಳಲ್ಲಿ ಸಂಶೋಧನೆ ಮಾಡಿದ್ದಾರೆ.
- ಐಐಟಿ ಮದ್ರಾಸ್‌ನಲ್ಲಿ ಗೌರವ ಪ್ರಾಧ್ಯಾಪಕರಾಗಿದ್ದಾರೆ.
- ಕನ್ನಡದಿಂದ ಇಂಗ್ಲಿಷಿಗೆ, ಇಂಗ್ಲಿಷ್ ಮತ್ತು ಹಿಂದಿಯಿಂದ ಕನ್ನಡಕ್ಕೆ ಕತೆ/ಕವಿತೆಗಳನ್ನು ಭಾಷಾಂತರಿಸುವುದು
- 'ವಿಜಯ ಕರ್ನಾಟಕ' ದೈನಿಕದಲ್ಲಿ ಅವರು 'ಜನಮುಖಿ ತಂತ್ರಲೋಕ' ಅಂಕಣವನ್ನೂ ಬರೆಯುತ್ತಿದ್ದಾರೆ.
- 'ಇಜ್ಞಾನ ಡಾಟ್ ಕಾಮ್' ಸಂಪಾದಕ, ಟಿ ಜಿ ಶ್ರೀನಿಧಿ, [೪] ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಉಲ್ಲೇಖಗಳು
ಬದಲಾಯಿಸಿ- ↑ "'T1: CHALLENGES IN DESIGNING EMBEDDED SYSTEMS ON CHIP' Dr. C.P.Ravikumar". Archived from the original on 2016-04-04. Retrieved 2014-08-17.
- ↑ 'ನನ್ನ ಹೊಸ ಬ್ಲಾಗ್,'
- ↑ "'Advances in VSLI Desigh Dr C.P.Ravikumar" (PDF). Archived from the original (PDF) on 2012-06-17. Retrieved 2014-08-17.
- ↑ ಇ-ಜ್ಞಾನ-'ಡಾ.ರವಿಕುಮಾರ್ ಹೇಳುತ್ತಾರೆ. "ಕನ್ನಡದಲ್ಲಿ ಸಂಶೋಧನಾ ಪ್ರಬಂಧಗಳನ್ನು ಬರೆಯುವುದು, ಮಂಡಿಸುವುದು ಸಾಧ್ಯವಾಗಬೇಕು"
- ಸಿ.ಪಿ. ಸಂಪದ - ಸಿ ಪಿ ರವಿಕುಮಾರ್ ಅವರು ಬರೆಯುವ ವಿಜ್ಞಾನ/ಕಂಪ್ಯೂಟರ್/ಗಣಿತ ವಿಷಯಗಳ ಕುರಿತ ಬ್ಲಾಗ್ ಬರಹಗಳು
- ಸಿ ಪಿ ರವಿಕುಮಾರ್ ಅವರ ಸಂಶೋಧನಾ ಲೇಖನಗಳು
- ಎಲೆಕ್ಟ್ರಾನಿಕ್ಸ್/ಕಂಪ್ಯೂಟರ್ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಸಂಘಸಂಸ್ಥೆಗಳಿಗೆ ಸಿ.ಪಿ. ರವಿಕುಮಾರ್ ಅವರ ಕೊಡುಗೆಗಳು