ಡಮ್ ಡಮ್
ಡಮ್ ಡಮ್ - ಪಶ್ಚಿಮ ಬಂಗಾಲದ ಇಪ್ಪತ್ನಾಲ್ಕು ಪರಗಣ ಜಿಲ್ಲೆಯ ಒಂದು ಪಟ್ಟಣ. ಕಲ್ಕತ್ತದ ಈಶಾನ್ಯಕ್ಕೆ 12 ಕಿ.ಮೀ. ದೂರದಲ್ಲಿದೆ. ಕಲ್ಕತ್ತದ ವಿಮಾನ ನಿಲ್ದಾಣ ಇಲ್ಲಿದೆ. ಇದು ಡಮ್ ಡಮ್, ಉತ್ತರ ಡಮ್ ಡಮ್ ಮತ್ತು ದಕ್ಷಿಣ ಡಮ್ ಡಮ್ ಎಂದು ಮೂರು ಪೌರಾಡಳಿತ ಪ್ರದೇಶಗಳಾಗಿ ವಿಗಂಡವಾಗಿದೆ. ಇವುಗಳ ಜನಸಂಖ್ಯೆ(1971) ಅನುಕ್ರಮವಾಗಿ 31,363; 63,873 ಮತ್ತು 1,74,342. ಡಮ್ ಡಮ್ ವಿಮಾನ ನಿಲ್ದಾಣ ಪ್ರದೇಶದ ಜನಸಂಖ್ಯೆ 4,234. ಉತ್ತರ ಡಮ್ ಡಮ್‍ನಲ್ಲಿ ಈಗಲೂ ದೊಡ್ಡ ಗ್ರಾಮಗಳು ಅಡಕವಾಗಿವೆ. ದಕ್ಷಿಣ ಡಮ್ ಡಮ್ ಮೇಲೆ ಕಲ್ಕತ್ತದ ನಾಗರಿಕ ಜೀವನ ತನ್ನ ಮುದ್ರೆಯೊತ್ತಿದೆ. 1783ರಲ್ಲಿ ನಿರ್ಮಿತವಾದ ಡಮ್ ಡಮ್ ದಂಡಿನ ಪ್ರದೇಶ 1853ರವರೆಗೂ ಬಂಗಾಲ ಕಾಲ್ದಳದ ಠಾಣ್ಯವಾಗಿತ್ತು. ಅದೀಗ ಕಲ್ಕತ್ತದ ಪ್ರಮುಖ ಕೈಗಾರಿಕಾ ಕೇಂದ್ರಗಳಲ್ಲಿ ಒಂದು; ಅನೇಕ ಎಂಜಿನಿಯರಿಂಗ್ ಕಾರ್ಖಾನೆಗಳು ಈ ಭಾಗದಲ್ಲಿವೆ. ಇಲ್ಲಿಯ ಮದ್ದು ಗುಂಡುಗಳ ಕಾರ್ಖಾನೆ ಪ್ರಸಿದ್ಧವಾದ್ದು. ಇಲ್ಲಿ ಪ್ರಥಮವಾಗಿ ತಯಾರಾದ ಡಮ್ ಡಮ್ ಅರುಳುವ ಗುಂಡು (ಎಕ್ಸ್‍ಪ್ಯಾಂಡಿಂಗ್ ಬುಲೆಟ್) ಇತಿಹಾಸ ಪ್ರಸಿದ್ಧವಾದ್ದು. 1899ರ ಜುಲೈ 29ರಂದು ಹೇಗ್ ಅಂತರರಾಷ್ಟ್ರೀಯ ಪರಿಷತ್ತಿನಲ್ಲಿ ಈ ಗುಂಡಿನ ಬಳಕೆಯನ್ನು ನಿಷೇಧಿಸಲಾಯಿತು. ಡಮ್ ಡಮ್ ಈಗ ಬೃಹತ್ ಕಲ್ಕತ್ತ ವಲಯದಲ್ಲಿ ಸೇರಿಹೋಗಿದೆ. ಇಲ್ಲಿ ಕಲ್ಕತ್ತ ವಿಶ್ವವಿದ್ಯಾಲಯಕ್ಕೆ ಸೇರಿದ ಕಾಲೇಜುಗಳೂ ಸುಂದರವಾದ ಸೇಂಟ್ ಸ್ಟೀಫನ್ ಚರ್ಚೂ ಇವೆ.