ಟ್ವೆಲ್ವ್ ಆ್ಯಂಗ್ರಿ ಮೆನ್ (ಚಲನಚಿತ್ರ)

ಟ್ವೆಲ್ವ್ ಆ್ಯಂಗ್ರಿ ಮೆನ್ ೧೯೫೭ರ ಒಂದು ಅಮೇರಿಕನ್ ನ್ಯಾಯಾಲಯ ನಾಟಕ ಚಲನಚಿತ್ರ. ರೆಜಿನಲ್ಡ್ ರೋಜ಼್ ಬರೆದ ಇದೇ ಹೆಸರಿನ ದೂರದರ್ಶನ ನಾಟಕದಿಂದ ರೂಪಾಂತರಿಸಲಾದ ಇದನ್ನು ಸಿಡ್ನಿ ಲ್ಯೂಮೆಟ್‌ ನಿರ್ದೇಶಿಸಿದರು.[೬][೭] ಈ ನ್ಯಾಯಾಲಯ ನಾಟಕವು ೧೨ ವ್ಯಕ್ತಿಗಳ ನ್ಯಾಯದರ್ಶಿ ಮಂಡಲಿಯು ನ್ಯಾಯಸಮ್ಮತ ಸಂದೇಹದ ಆಧಾರದ ಮೇಲೆ ೧೮ ವರ್ಷ ವಯಸ್ಸಿನ ಒಬ್ಬ ಪ್ರತಿವಾದಿಯ ಅಪರಾಧ ಸ್ಥಾಪನೆ ಅಥವಾ ಖುಲಾಸೆಯನ್ನು ಚರ್ಚಿಸುವ ಕಥೆಯನ್ನು ಹೇಳುತ್ತದೆ. ಈ ವೇಳೆಯಲ್ಲಿ ನ್ಯಾಯದರ್ಶಿಗಳು ತಮ್ಮ ನೀತಿಗಳು ಮತ್ತು ಮೌಲ್ಯಗಳನ್ನು ಒತ್ತಾಯಪೂರ್ವಕವಾಗಿ ಪ್ರಶ್ನಿಸಿಕೊಳ್ಳಬೇಕಾಗುತ್ತದೆ.

ಟ್ವೆಲ್ವ್ ಆ್ಯಂಗ್ರಿ ಮೆನ್
ಚಿತ್ರಮಂದಿರ ಬಿಡುಗಡೆಯ ಪೋಸ್ಟರ್
ನಿರ್ದೇಶನಸಿಡ್ನಿ ಲ್ಯೂಮೆಟ್
ನಿರ್ಮಾಪಕ
  • ಹೆನ್ರಿ ಫ಼ೊಂಡಾ
  • ರೆಜಿನಲ್ಡ್ ರೋಜ಼್
ಚಿತ್ರಕಥೆರೆಜಿನಲ್ಡ್ ರೋಜ಼್
ಕಥೆರೆಜಿನಲ್ಡ್ ರೋಜ಼್
ಪಾತ್ರವರ್ಗ
  • ಹೆನ್ರಿ ಫ಼ೊಂಡಾ
  • ಲೀ ಜೆ. ಕಾಬ್
  • ಎಡ್ ಬೆಗ್ಲಿ
  • ಇ. ಜಿ. ಮಾರ್ಷಲ್
  • ಜ್ಯಾಕ್ ವಾರ್ಡನ್
ಸಂಗೀತಕೆನ್ಯನ್ ಹಾಪ್ಕಿನ್ಸ್
ಛಾಯಾಗ್ರಹಣಬೋರಿಸ್ ಕೌಫ಼್‍ಮನ್
ಸಂಕಲನಕಾರ್ಲ್ ಲರ್ನರ್
ಸ್ಟುಡಿಯೋಒರಾಯನ್-ನೋವಾ ಪ್ರೊಡಕ್ಷನ್ಸ್
ವಿತರಕರುಯುನೈಟಡ್ ಆರ್ಟಿಸ್ಟ್ಸ್
ಬಿಡುಗಡೆಯಾಗಿದ್ದು
  • ಏಪ್ರಿಲ್ 10, 1957 (1957-04-10)[೧][೨]
ಅವಧಿ96 ನಿಮಿಷಗಳು
ದೇಶಅಮೇರಿಕ
ಭಾಷೆಇಂಗ್ಲಿಷ್
ಬಂಡವಾಳ$337,000[೩][೪]
ಬಾಕ್ಸ್ ಆಫೀಸ್$2,000,000 (ಬಾಡಿಗೆ ಆದಾಯ)[೫]

ಟ್ವೆಲ್ವ್ ಆ್ಯಂಗ್ರಿ ಮೆನ್ ಒಮ್ಮತ ನಿರ್ಮಾಣದ ಅನೇಕ ತಂತ್ರಗಳನ್ನು ಮತ್ತು ಈ ಪ್ರಕ್ರಿಯೆಯಲ್ಲಿ ಈ ವ್ಯಕ್ತಿಗಳ ಗುಂಪಿನಲ್ಲಿ ಎದುರಾದ ತೊಂದರೆಗಳನ್ನು ಅನ್ವೇಷಿಸುತ್ತದೆ. ಈ ವ್ಯಕ್ತಿಗಳ ವ್ಯಕ್ತಿತ್ವದ ವ್ಯಾಪ್ತಿಯು ತೀವ್ರತೆ ಮತ್ತು ಸಂಘರ್ಷವನ್ನು ಹೆಚ್ಚಿಸುತ್ತದೆ. ಇದು ಬದಲಾವಣೆಯನ್ನು ಹೊರಡಿಸುವ ಒಬ್ಬ ವ್ಯಕ್ತಿಗಿರುವ ಶಕ್ತಿಯನ್ನು ಕೂಡ ಅನ್ವೇಷಿಸುತ್ತದೆ. ನ್ಯಾಯದರ್ಶಿ ಮಂಡಲಿಯ ಸದಸ್ಯರನ್ನು ಕೇವಲ ಸಂಖ್ಯೆಯಿಂದ ಗುರುತಿಸಲಾಗಿದೆ; ಅತ್ಯಂತ ಕೊನೆಯಲ್ಲಿ ಸಂಭಾಷಣೆಯ ವಿನಿಮಯ ಆಗುವವರೆಗೆ ಯಾವುದೇ ಹೆಸರುಗಳನ್ನು ಬಹಿರಂಗಪಡಿಸಲಾಗುವುದಿಲ್ಲ. ಚಿತ್ರವು ನ್ಯಾಯದರ್ಶಿಗಳ ವ್ಯಕ್ತಿತ್ವ, ಅನುಭವಗಳು ಮತ್ತು ಕ್ರಿಯೆಗಳನ್ನು ಗಮನಿಸುವುದರ ಮೂಲಕ ಪಾತ್ರಗಳು ಮತ್ತು ಪ್ರೇಕ್ಷಕರು ತಮ್ಮ ಸ್ವಂತದ ಸ್ವಚಿತ್ರಚನ್ನು ಮೌಲ್ಯಮಾಪಿಸುವಂತೆ ಒತ್ತಾಯಿಸುತ್ತದೆ. ಚಲನಚಿತ್ರವು ಒಂದೇ ರಂಗಸಜ್ಜಿನ ಬಹುತೇಕ ಪ್ರತ್ಯೇಕ ಬಳಕೆಗೆ ಕೂಡ ಗಮನಾರ್ಹವಾಗಿದೆ. ಇದೇ ರಂಗಸಜ್ಜಿನಲ್ಲಿ ಚಲನಚಿತ್ರದ ಮೂರು ನಿಮಿಷಗಳ ಹೊರತಾಗಿ ಎಲ್ಲ ಭಾಗ ನಡೆಯುತ್ತದೆ.

೨೦೦೭ರಲ್ಲಿ, ಸಾಂಸ್ಕೃತಿಕವಾಗಿ, ಐತಿಹಾಸಿಕವಾಗಿ ಅಥವಾ ಸೌಂದರ್ಯದ ದೃಷ್ಟಿಯಿಂದ ಗಮನಾರ್ಹವಾಗಿರುವುದರಿಂದ ಕಾಂಗ್ರೆಸ್ ಗ್ರಂಥಾಲಯವು ರಾಷ್ಟ್ರೀಯ ಚಲನಚಿತ್ರ ನೋಂದಣಿ ಕಚೇರಿಗಾಗಿ ಈ ಚಿತ್ರವನ್ನು ಆಯ್ಕೆಮಾಡಿತು. ಅಮೇರಿಕದ ಚಲನಚಿತ್ರ ಸಂಸ್ಥೆಯು ಈ ಚಿತ್ರವನ್ನು ಎರಡನೇ ಅತ್ಯುತ್ತಮ ನ್ಯಾಯಾಲಯ ನಾಟಕ ಚಿತ್ರವೆಂದು ಆಯ್ಕೆಮಾಡಿತು.[೮]

ಕಥಾವಸ್ತು ಬದಲಾಯಿಸಿ

೧೯೫೦ರ ದಶಕದ ಮಧ್ಯದ ನ್ಯೂ ಯಾರ್ಕ್ ಕೌಂಟಿ ನ್ಯಾಯದಮನೆಯಲ್ಲಿ, ಬೇಸರಗೊಂಡಂತೆ ಕಾಣುವ ನ್ಯಾಯಾಧೀಶನು ತನ್ನ ತಂದೆಯನ್ನು ಚೂರಿ ಇರಿದು ಕೊಂದನೆಂದು ಊಹಿಸಲಾದ ವಿಚಾರಣೆಯಲ್ಲಿರುವ ೧೮ ವರ್ಷದ ಕೊಳೆಗೇರಿ ಯುವಕನ ಮೊಕದ್ದಮೆಯ ಪರ್ಯಾಲೋಚನೆಯನ್ನು ಆರಂಭಿಸಲಿರುವ ನ್ಯಾಯದರ್ಶಿ ಮಂಡಲಿಗೆ ಸಮಂಜಸವಾದ ಸಂದೇಹವಿದ್ದರೆ ಅವರು ತಪ್ಪಿತಸ್ಥನಲ್ಲವೆಂಬ ತೀರ್ಪನ್ನು ನೀಡಬೇಕು ಎಂದು ಆದೇಶಿಸುತ್ತಾನೆ. ತಪ್ಪಿತಸ್ಥನೆಂದು ಕಂಡುಬಂದರೆ, ಪ್ರತಿವಾದಿಗೆ ಮರಣದಂಡನೆಯು ದೊರೆಯುವುದು. ತೀರ್ಪು ಒಮ್ಮತದ್ದಾಗಿರಬೇಕು ಎಂದೂ ನ್ಯಾಯದರ್ಶಿ ಮಂಡಲಿಗೆ ಆದೇಶಿಸಲಾಗುತ್ತದೆ.

ಆರಂಭಿಕ ಮತದಲ್ಲಿ, ನ್ಯಾಯದರ್ಶಿ 8ರ ಹೊರತಾಗಿ ಎಲ್ಲರೂ "ತಪ್ಪಿತಸ್ಥ" ಎಂದು ಮತನೀಡುತ್ತಾರೆ. ಬೇಗನೇ "ತಪ್ಪಿತಸ್ಥ" ತೀರ್ಪನ್ನು ತಲುಪುವ ಮುನ್ನ ಮೊಕದ್ದಮೆ ಬಗ್ಗೆ ಸ್ವಲ್ಪಾದರೂ ಚರ್ಚೆಯಾಗಬೇಕು ಎಂದು ನ್ಯಾಯದರ್ಶಿ 8 ತಿಳಿಸುತ್ತಾನೆ. ಅವನು ಇಬ್ಬರು ಸಾಕ್ಷಿಗಳ ವಿಶ್ವಾಸಾರ್ಹತೆಯನ್ನು ಮತ್ತು ಕೊಲೆಯ ಆಯುಧವಾದ ಸ್ವಿಚ್ ಅಲಗು ಅಪರೂಪದ್ದು ಎಂದು ಹೇಳಿದ ಫಿರ್ಯಾದಿ ಪಕ್ಷದ ಪ್ರತಿಪಾದನೆಯನ್ನು ಪ್ರಶ್ನಿಸಿ ಅದೇ ರೀತಿಯ ಚಾಕುವನ್ನು ಹಾಜರುಪಡಿಸುತ್ತಾನೆ. ಸಮಂಜಸವಾದ ಸಂದೇಹವಿರುವುದರಿಂದ ತಾನು "ತಪ್ಪಿತಸ್ಥ" ಎಂದು ಮತನೀಡಲಾರೆ ಎಂದು ನ್ಯಾಯದರ್ಶಿ 8 ವಾದಿಸುತ್ತಾನೆ.

ನ್ಯಾಯದರ್ಶಿ ಮಂಡಲಿಯು ತ್ರಿಶಂಕು ಸ್ಥಿತಿಗೆ ತಲುಪಿದ್ದಕ್ಕೆ, ನ್ಯಾಯದರ್ಶಿ 8 ಇತರ ಹನ್ನೊಂದರ ನಡುವೆ ರಹಸ್ಯ ಮತದಾನದ ಸಲಹೆ ನೀಡುತ್ತಾನೆ; ಉಳಿದ ಎಲ್ಲ ನ್ಯಾಯದರ್ಶಿಗಳು ಆಗಲೂ "ತಪ್ಪಿತಸ್ಥ" ಎಂದು ಮತ ನೀಡಿದರೆ, ತಾನು ಒಪ್ಪಿಕೊಳ್ಳುವೆ. ಮತದಾನವು ಒಂದು "ತಪ್ಪಿತಸ್ಥನಲ್ಲ" ಎಂಬ ಮತವನ್ನು ಬಹಿರಂಗಪಡಿಸುತ್ತದೆ. ನ್ಯಾಯದರ್ಶಿ 3 ಕೊಳೆಗೇರಿಯಲ್ಲಿ ಬೆಳೆದ ನ್ಯಾಯದರ್ಶಿ 5 ಸಹಾನುಭೂತಿಯಿಂದ ತನ್ನ ಮತವನ್ನು ಬದಲಾಯಿಸಿದನು ಎಂದು ಆರೋಪ ಮಾಡುತ್ತಾನೆ, ಆದರೆ ನ್ಯಾಯದರ್ಶಿ 9 ತಾನು ತನ್ನ ಮತವನ್ನು ಬದಲಾಯಿಸಿದೆನೆಂದು ಬಹಿರಂಗಪಡಿಸುತ್ತಾನೆ, ಮತ್ತು ಇನ್ನಷ್ಟು ಚರ್ಚೆಯಾಗಬೇಕೆಂದು ಒಪ್ಪುತ್ತಾನೆ.

ಒಬ್ಬ ಸಾಕ್ಷಿಯು ತಾನು ಪ್ರತಿವಾದಿಯು ಅವನ ತಂದೆಗೆ "ನಾನು ನಿನ್ನನ್ನು ಸಾಯಿಸುತ್ತೇನೆ" ಎಂದು ಬೆದರಿಸಿದ್ದನ್ನು ಕೇಳಿದೆ ಎಂಬುದನ್ನು ಸಾಗುತ್ತಿರುವ ಟ್ರೇನಿನ ಶಬ್ದವು ಮಂಕಾಗಿಸಿರಬಹುದು ಎಂದು ನ್ಯಾಯದರ್ಶಿ 8 ವಾದಿಸುತ್ತಾನೆ. ನ್ಯಾಯದರ್ಶಿ 5 ತನ್ನ ಮತವನ್ನು ಬದಲಾಯಿಸುತ್ತಾನೆ, ಜೊತೆಗೆ ನ್ಯಾಯದರ್ಶಿ 11 ಕೂಡ, ಪ್ರತಿವಾದಿಯು ಅಪಾರ್ಟ್‌ಮಂಟ್‍ಗೆ ಮರಳಿ ಪೋಲಿಸರನ್ನು ಭೇಟಿಯಾದ ಮೇಲೆ, ಕೊಲೆಯ ಆಯುಧವನ್ನು ಪಡೆಯಲು ಪ್ರಯತ್ನಿಸುತ್ತಿದ್ದಿಲ್ಲ ಏಕೆಂದರೆ ಅದರಿಂದ ಬೆರಳಿನ ಗುರುತುಗಳನ್ನು ಆಗಲೇ ಅಳಿಸಲಾಗಿತ್ತು ಎಂದು ಅವನು ನಂಬುತ್ತಾನೆ. ಅಕ್ಷರಶಃ ಹಾಗೆ ಉದ್ದೇಶಿಸದೇ ಜನರು ಹಲವುವೇಳೆ "ನಾನು ನಿನ್ನನ್ನು ಸಾಯಿಸುವೆ" ಎಂದು ಹೇಳುತ್ತಾರೆ ಎಂದು ನ್ಯಾಯದರ್ಶಿ 8 ನೆನಪಿಸುತ್ತಾನೆ.

ನ್ಯಾಯದರ್ಶಿಗಳು 5, 6, ಮತ್ತು 8 ತಂದೆಯ ಶವವು ನೆಲಕ್ಕೆ ಅಪ್ಪಳಿಸುವುದನ್ನು ಕೇಳಿಸಿಕೊಂಡ ನಂತರ ೧೫ ಸೆಕೆಂಡುಗಳಲ್ಲಿ ಆರೋಪಿ ಪರಾರಿಯಾಗುವುದನ್ನು ನೋಡುವಷ್ಟು ಸಮಯದಲ್ಲಿ ಬಾಗಿಲ ಬಳಿ ಹೋಗುವ ಸಾಕ್ಷಿಯ ಸಾಮರ್ಥ್ಯವನ್ನು ಪ್ರಶ್ನಿಸುತ್ತಾರೆ. ನ್ಯಾಯದರ್ಶಿ 3 ಕೋಪಗೊಳ್ಳುತ್ತಾನೆ, ಮತ್ತು ಅವನು ಹಿಂಸಾನಂದ ಅನುಭವಿಸುವ ಸಾರ್ವಜನಿಕವಾಗಿ ಸೇಡು ತೀರಿಸಿಕೊಳ್ಳುವವ ಎಂದು ನ್ಯಾಯದರ್ಶಿ 8 ಆರೋಪಿಸುತ್ತಾನೆ. ನ್ಯಾಯದರ್ಶಿ 3 ನ್ಯಾಯದರ್ಶಿ 8ನ ಮೇಲೆ ದಾಳಿ ಮಾಡಲು ಪ್ರಯತ್ನಿಸಿ, "ನಾನು ಅವನನ್ನು ಸಾಯಿಸುತ್ತೇನೆ!" ಎಂದು ಕಿರುಚುತ್ತಾನೆ, ಮತ್ತು ನ್ಯಾಯದರ್ಶಿ 8 "ನೀನು ನಿಜವಾಗಿಯೂ ನನ್ನನ್ನು ಸಾಯಿಸಬೇಕೆಂದು ಉದ್ದೇಶಿಸಿಲ್ಲ, ಅಲ್ಲವೇ?" ಎಂದು ಶಾಂತವಾಗಿ ಉತ್ತರಿಸಿ ತನ್ನ ಹಿಂದಿನ ಅಂಶವನ್ನು ಸಾಬೀತುಮಾಡುತ್ತಾನೆ. ನಂತರ ನ್ಯಾಯದರ್ಶಿಗಳು 2 ಮತ್ತು 6 ತಮ್ಮ ಮತಗಳನ್ನು ಬದಲಾಯಿಸುತ್ತಾರೆ, ಮತ್ತು ತೀರ್ಪು 6–6 ಆಗಿ ಸಮವಾಗುತ್ತದೆ ಮತ್ತು ಗುಡುಗು ಸಹಿತ ಬಿರುಗಾಳಿ ಶುರುವಾಗುತ್ತದೆ.

ಕೆಲವು ವಿವರಗಳನ್ನು ನೆನಪಿಸಿಕೊಳ್ಳುವ ಹುಡುಗನ ಅಸಾಮರ್ಥ್ಯದ ಆಧಾರದ ಮೇಲೆ, ಆರೋಪಿಯ ಗೈರುಹಾಜರಿಯ ಸಾಕ್ಷ್ಯವನ್ನು ನ್ಯಾಯದರ್ಶಿ 4 ಸಂದೇಹಿಸುತ್ತಾನೆ, ಮತ್ತು ನ್ಯಾಯದರ್ಶಿ 8 ನ್ಯಾಯದರ್ಶಿ 4ನ ಸ್ವಂತದ ಸ್ಮರಣಶಕ್ತಿಯನ್ನು ಪರೀಕ್ಷಿಸುತ್ತಾನೆ. ಅವನು ಸ್ವಲ್ಪ ಕಷ್ಟಪಟ್ಟು ಹಿಂದಿನ ಏಳು ದಿನಗಳ ಘಟನೆಗಳನ್ನು ನೆನಪಿನಲ್ಲಿಡಬಲ್ಲನು. ತನ್ನ ತಂದೆಗಿಂತ ಏಳು ಅಂಗುಲ ಗಿಡ್ಡವಿರುವ ಆರೋಪಿಯು ಕೆಳದಿಕ್ಕಿನ ಇರಿತದ ಗಾಯವನ್ನು ಉಂಟುಮಾಡಿರಬಹುದಾದ ಸಾಧ್ಯತೆಯನ್ನು ನ್ಯಾಯದರ್ಶಿ 2 ಪ್ರಶ್ನಿಸುತ್ತಾನೆ. ನ್ಯಾಯದರ್ಶಿಗಳು 3 ಮತ್ತು 8 ಇದನ್ನು ಅಭಿನಯಿಸಿ ತೋರಿಸುತ್ತಾರೆ ಮತ್ತು ಇದು ಸಾಧ್ಯತೆಯನ್ನು ದೃಢಪಡಿಸುತ್ತದೆ. ಆದರೆ, ನ್ಯಾಯದರ್ಶಿ 5 ಸ್ವಿಚ್ ಅಲಗನ್ನು ಹಿಡಿಯುವ ಮತ್ತು ಬಳಸುವ ಸರಿಯಾದ ರೀತಿಯನ್ನು ತೋರಿಸಿಕೊಡುತ್ತಾನೆ. ಹುಡುಗನಂತೆ ಸ್ವಿಚ್ ಅಲಗಲ್ಲಿ ಕುಶಲವಾದ ಯಾರಾದರೂ ಯಾವಾಗಲೂ ಉದ್ದಗಿರುವ ಎದುರಾಳಿಗೆ ಮೇಲ್ದಿಕ್ಕಿನ ಕೋನದಲ್ಲಿ ತೋಳಿನ ಅಡಿಯಿಂದ ಇರಿಯುವರು ಎಂದು ಇದರಿಂದ ಸಾಬೀತಾಗುತ್ತದೆ.

ಆ ರಾತ್ರಿಯ ಬೇಸ್‍ಬಾಲ್ ಪಂದ್ಯಕ್ಕೆ ಟಿಕೇಟುಗಳನ್ನು ಹೊಂದಿರುವ ಕಾರಣ ಹೊರಡಲು ಉತ್ಸುಕನಾಗಿದ್ದ ನ್ಯಾಯದರ್ಶಿ 7 ತನ್ನ ಮತವನ್ನು ಬದಲಾಯಿಸಿದಾಗ ಇತರ ನ್ಯಾಯದರ್ಶಿಗಳ ಕೋಪಕ್ಕೆ ಗುರಿಯಾಗುತ್ತಾನೆ, ವಿಶೇಷವಾಗಿ 11 ರ; ಪ್ರತಿವಾದಿಯು ತಪ್ಪಿತಸ್ಥನಲ್ಲ ಎಂದು ತಾನು ನಿಜವಾಗಿಯೂ ನಂಬಿರುವೆ ಎಂದು ಅವನು ಒಪ್ಪಿಸಲಾಗದೆ ಒತ್ತಿಹೇಳುತ್ತಾನೆ. ಆಮೇಲೆ ನ್ಯಾಯದರ್ಶಿಗಳು 1 ಮತ್ತು 12 ತಮ್ಮ ಮತಗಳನ್ನು ಬದಲಾಯಿಸುತ್ತಾರೆ, ಮತ್ತು ನ್ಯಾಯದರ್ಶಿಗಳು 3, 4, ಮತ್ತು 10 ಮಾತ್ರ ಉಳಿದುಕೊಳ್ಳುತ್ತಾರೆ. ನ್ಯಾಯದರ್ಶಿ 10 ಕೊಳೆಗೇರಿ ಜನರ ವಿರುದ್ಧ ದ್ವೇಷಕಾರುತ್ತಾನೆ. 7 ಮತ್ತು 4 ರ ಹೊರತಾಗಿ, ಉಳಿದ ನ್ಯಾಯದರ್ಶಿಗಳು ಒಬ್ಬೊಬ್ಬರಾಗಿ ಅವನಿಗೆ ತಮ್ಮ ಬೆನ್ನು ತೋರಿಸುತ್ತಾರೆ, ಮತ್ತು "ಕುಳಿತುಕೊ, ಮತ್ತೆ ಬಾಯಿ ತೆಗೆಯಬೇಡ" ಎಂದು ನ್ಯಾಯದರ್ಶಿ 4 ಅವನಿಗೆ ಹೇಳುತ್ತಾನೆ. ವೈಯಕ್ತಿಕ ಪೂರ್ವಾಗ್ರಹವು ತೀರ್ಮಾನಗಳನ್ನು ಮಸುಕಾಗಿಸಬಹುದು ಎಂದು ನ್ಯಾಯದರ್ಶಿ 8 ಉಳಿದವರಿಗೆ ನೆನಪಿಸುತ್ತಾನೆ. ರಸ್ತೆಯ ಇನ್ನೊಂದು ಕಡೆಯಿಂದ ಕೊಲೆಯನ್ನು ನೋಡಿದ ಮಹಿಳೆಯು ಮಜಬೂತಾದ ಸಾಕ್ಷಿಯೆಂದು ನ್ಯಾಯದರ್ಶಿ 4 ಘೋಷಿಸುತ್ತಾನೆ. ನ್ಯಾಯದರ್ಶಿ 12 ತನ್ನ ಮತವನ್ನು ಮೊದಲಿನ ಸ್ಥಿತಿಗೆ ತರುತ್ತಾನೆ, ಮತ್ತು ಮತ ಫಲಿತಾಂಶ 8–4 ಆಗುತ್ತದೆ.

ನ್ಯಾಯದರ್ಶಿ 4 ತನ್ನ ಕನ್ನಡಕದಿಂದ ಕಿರಿಕಿರಿಗೊಂಡು ತನ್ನ ಮೂಗನ್ನು ಉಜ್ಜಿಕೊಳ್ಳುವುದನ್ನು ನೋಡಿ ಸಾಕ್ಷಿಯ ಮೂಗಿನ ಮೇಲೆ ಗುರುತುಗಳಿದ್ದವು ಎಂದು ನ್ಯಾಯದರ್ಶಿ 9 ಗೆ ಅರಿವಾಗುತ್ತದೆ, ಮತ್ತು ಅವಳು ಕನ್ನಡಕವನ್ನು ಧರಿಸುತ್ತಾಳೆ ಆದರೆ ನ್ಯಾಯಾಲಯದಲ್ಲಿ ಧರಿಸಿರಲಿಲ್ಲ ಎಂದು ಸೂಚಿತವಾಗುತ್ತದೆ. ಇತರ ನ್ಯಾಯದರ್ಶಿಗಳು ಅದನ್ನು ದೃಢಪಡಿಸುತ್ತಾರೆ, ಮತ್ತು ಅವಳು ಕನ್ನಡಕವನ್ನು ಮಲಗುವಾಗ ಧರಿಸಿರಲಿಕ್ಕಿಲ್ಲ, ಮತ್ತು ದಾಳಿಯು ಎಷ್ಟು ವೇಗವಾಗಿ ನಡೆದಿತ್ತೆಂದರೆ ಅವಳಿಗೆ ಅದನ್ನು ಧರಿಸಲು ಸಮಯ ಸಿಕ್ಕಿರದಿರಬಹುದು ಎಂದು ನ್ಯಾಯದರ್ಶಿ 8 ಸೇರಿಸುತ್ತಾನೆ. ನಂತರ ನ್ಯಾಯದರ್ಶಿಗಳು 12, 10 ಮತ್ತು 4 ತಮ್ಮ ಮತವನ್ನು "ತಪ್ಪಿತಸ್ಥನಲ್ಲ" ಎಂದು ಬದಲಾಯಿಸುತ್ತಾರೆ, ಮತ್ತು ಕೇವಲ ನ್ಯಾಯದರ್ಶಿ 3 ಉಳಿದುಕೊಳ್ಳುತ್ತಾನೆ.

ನ್ಯಾಯದರ್ಶಿ 3 ತನ್ನ ಸ್ವಂತ ಮಗನೊಂದಿಗಿನ ತನ್ನ ಅಹಿತಕರ ಸಂಬಂಧದ ಬಗ್ಗೆ ಹೇಳಿದ ಮುಂಚಿನ ಹೇಳಿಕೆಗಳನ್ನು ವಿಸ್ತರಿಸಿ, ಆರೋಪಿಯು ತಪ್ಪಿತಸ್ಥನಾಗಬೇಕೆಂಬುದಕ್ಕೆ ತನ್ನ ಕಾರಣದ ಬಹಳ ಯಾತನಾಮಯ ವಾದಗಳ ಸರಣಿಯನ್ನು ನೀಡುತ್ತಾನೆ. ಅವನು ತನ್ನ ಮತ್ತು ತನ್ನ ಮಗನಿರುವ ಛಾಯಾಚಿತ್ರವನ್ನು ಹರಿದುಹಾಕುತ್ತಾನೆ ಮತ್ತು ಬಹುತೇಕ ತಕ್ಷಣ ಅಳಲು ಆರಂಭಿಸುತ್ತಾನೆ ಮತ್ತು "ತಪ್ಪಿತಸ್ಥನಲ್ಲ" ಎಂದು ಪಿಸುಮಾತಿನಲ್ಲಿ ಹೇಳುತ್ತಾನೆ ಮತ್ತು ಹಾಗಾಗಿ ಒಮ್ಮತ ಮೂಡುತ್ತದೆ. ಇತರರು ಹೊರಟುಹೋದಾಗ, ಅನುಕಂಪ ತೋರಿಸಲು ನ್ಯಾಯದರ್ಶಿ 8 ತಲ್ಲಣಗೊಂಡ ನ್ಯಾಯದರ್ಶಿ 3 ಗೆ ಕೋಟು ಹಾಕಿಕೊಳ್ಳಲು ನೆರವಾಗುತ್ತಾನೆ. ಪ್ರತಿವಾದಿಯು "ತಪ್ಪಿತಸ್ಥನಲ್ಲ" ಎಂದು ಕಂಡುಬರುತ್ತದೆ ಮತ್ತು ನ್ಯಾಯದರ್ಶಿಗಳು ನ್ಯಾಯದ ಮನೆಯಿಂದ ಹೊರಡುತ್ತಾರೆ. ಸಂಕ್ಷಿಪ್ತ ಹಿನ್ನುಡಿಯಲ್ಲಿ, ನ್ಯಾಯದ ಮನೆಯ ಮೆಟ್ಟಿಲುಗಳ ಮೇಲೆ, ಹೊರಡುವ ಮುನ್ನ ನ್ಯಾಯದರ್ಶಿಗಳು 8 ಮತ್ತು 9 ಮೊದಲ ಬಾರಿಗೆ ತಮ್ಮ ಹೆಸರುಗಳಿಂದ (ಅನುಕ್ರಮವಾಗಿ ಡೇವಿಸ್ ಮತ್ತು ಮೆಕಾರ್ಡಲ್) ಒಬ್ಬರನ್ನೊಬ್ಬರು ಪರಿಚಯಿಸಿಕೊಳ್ಳುತ್ತಾರೆ.

ಪಾತ್ರವರ್ಗ ಬದಲಾಯಿಸಿ

  • ನ್ಯಾಯದರ್ಶಿ 1 ಆಗಿ ಮಾರ್ಟಿನ್ ಬಾಲ್ಸಮ್
  • ನ್ಯಾಯದರ್ಶಿ 2 ಆಗಿ ಜಾನ್ ಫ಼ೀಡ್ಲರ್
  • ನ್ಯಾಯದರ್ಶಿ 3 ಆಗಿ ಲೀ ಜೆ. ಕಾಬ್
  • ನ್ಯಾಯದರ್ಶಿ 4 ಆಗಿ ಇ. ಜಿ. ಮಾರ್ಶಲ್
  • ನ್ಯಾಯದರ್ಶಿ 5 ಆಗಿ ಜ್ಯಾಕ್ ಕ್ಲಗ್‍ಮನ್
  • ನ್ಯಾಯದರ್ಶಿ 6 ಆಗಿ ಎಡ್ವರ್ಡ್ ಬಿನ್ಸ್
  • ನ್ಯಾಯದರ್ಶಿ 7 ಆಗಿ ಜ್ಯಾಕ್ ವಾರ್ಡನ್
  • ನ್ಯಾಯದರ್ಶಿ 8 ಆಗಿ ಹೆನ್ರಿ ಫ಼ೊಂಡಾ
  • ನ್ಯಾಯದರ್ಶಿ 9 ಆಗಿ ಜೋಸಫ಼್ ಸ್ವೀನಿ
  • ನ್ಯಾಯದರ್ಶಿ 10 ಆಗಿ ಎಡ್ ಬೆಗ್ಲಿ
  • ನ್ಯಾಯದರ್ಶಿ 11 ಆಗಿ ಜಾರ್ಜ್ ವಸ್ಕೋವೆಕ್
  • ನ್ಯಾಯದರ್ಶಿ 12 ಆಗಿ ರಾಬರ್ಟ್ ವೆಬರ್

ಮಾನ್ಯತೆ ಪಡೆಯದವರು

  • ನ್ಯಾಯಾಧೀಶನಾಗಿ ರೂಡಿ ಬಾಂಡ್
  • ಶೀಘ್ರಲಿಪಿಕಾರನಾಗಿ ಟಾಮ್ ಗಾರ್ಮನ್
  • ಅಮೀನನಾಗಿ ಜೇಮ್ಸ್ ಕೆಲಿ
  • ನ್ಯಾಯಾಲಯದ ಗುಮಾಸ್ತನಾಗಿ ಬಿಲಿ ನೆಲ್ಸನ್
  • ಪ್ರತಿವಾದಿಯಾಗಿ ಜಾನ್ ಸವೋಕಾ
  • ವಾಲ್ಟರ್ ಸ್ಟಾಕರ್
ಚಿತ್ರದ ಟ್ರೇಲರ್

ತಯಾರಿಕೆ ಬದಲಾಯಿಸಿ

ಟ್ವೆಲ್ವ್ ಆ್ಯಂಗ್ರಿ ಮೆನ್ಗಾಗಿ ರೆಜಿನಲ್ಡ್ ರೋಜ಼್‍ರ ಚಿತ್ರಕಥೆಯನ್ನು ಮೊದಲು ದೂರದರ್ಶನಕ್ಕಾಗಿ ತಯಾರಿಸಲಾಗಿತ್ತು.

ದೂರದರ್ಶನ ತಯಾರಿಕೆಯ ಯಶಸ್ಸು ಚಲನಚಿತ್ರ ರೂಪಾಂತರಕ್ಕೆ ಕಾರಣವಾಯಿತು. ನಿರ್ದೇಶನ ಮಾಡಲು ಹೆನ್ರಿ ಫ಼ೊಂಡಾ ಮತ್ತು ರೋಜ಼್ ಸಿಡ್ನಿ ಲ್ಯೂಮೆಟ್‌ರನ್ನು ನೇಮಕ ಮಾಡಿದರು. ಟ್ವೆಲ್ವ್ ಆ್ಯಂಗ್ರಿ ಮೆನ್ ಲ್ಯೂಮೆಟ್‍ರ ಮೊದಲ ಚಲನಚಿತ್ರವಾಗಿತ್ತು, ಮತ್ತು ಫ಼ೊಂಡಾ ಹಾಗೂ ರೋಜ಼್‍ರ ಏಕಮಾತ್ರ ನಿರ್ಮಾಣ ಕೊಡುಗೆಯಾಗಿದೆ.[೩]

ಚಲನಚಿತ್ರವನ್ನು ನ್ಯೂ ಯಾರ್ಕ್‌ನಲ್ಲಿ ಚಿತ್ರೀಕರಿಸಲಾಯಿತು ಮತ್ತು ಲಘು ಆದರೆ ಕಠೋರ ಪೂರ್ವಾಭ್ಯಾಸ ವೇಳಾಪಟ್ಟಿಯ ನಂತರ, ಮೂರು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಮುಗಿಯಿತು. ಇದರ ಬಂಡವಾಳ $337,000 (೨೦೧೯ರಲ್ಲಿ $3,068,000 ಕ್ಕೆ ಸಮಾನ) ನಷ್ಟಾಗಿತ್ತು. ರೋಜ಼್ ಮತ್ತು ಫ಼ೊಂಡಾ ಸಂಬಳವನ್ನು ತೆಗೆದುಕೊಳ್ಳುವುದನ್ನು ಮುಂದೂಡಿದರು.[೩]

ಚಿತ್ರದ ಆರಂಭದಲ್ಲಿ, ಕ್ಯಾಮರಾಗಳನ್ನು ಕಣ್ಣಿನ ಮಟ್ಟದ ಮೇಲೆ ಇರಿಸಲಾಗಿದೆ ಮತ್ತು ಅಗಲ ಕೋನದ ಮಸೂರಗಳನ್ನು ಕೂಡಿಸಲಾಗಿದೆ. ಇದು ವ್ಯಕ್ತಿಗಳ ನಡುವೆ ಹೆಚ್ಚಿನ ಆಳದ ನೋಟವನ್ನು ನೀಡುತ್ತದೆ. ಆದರೆ ಚಿತ್ರವು ಮುಂದುವರಿದಂತೆ ಮಸೂರಗಳ ನಾಭಿದೂರವನ್ನು ಕ್ರಮೇಣವಾಗಿ ಹೆಚ್ಚಿಸಲಾಗಿದೆ. ಚಿತ್ರದ ಅಂತ್ಯದ ವೇಳೆಗೆ, ಕೆಳಗಿನ ಕೋನದಿಂದ ದೂರ ಛಾಯಾಚಿತ್ರ ಮಸೂರಗಳನ್ನು ಬಳಸಿ ಬಹುತೇಕ ಎಲ್ಲರನ್ನು ಸಮೀಪದರ್ಶನದಲ್ಲಿ ತೋರಿಸಲಾಗಿದೆ. ಇದು ಕ್ಷೇತ್ರದ ಆಳವನ್ನು ಕಡಿಮೆ ಮಾಡುತ್ತದೆ. ಬಹುತೇಕ ಸ್ಪರ್ಶಿಸಬಲ್ಲ ಸಂವರಣ ಭೀತಿಯನ್ನು ಸೃಷ್ಟಿಸುವುದು ಈ ತಂತ್ರಗಳನ್ನು ಬಳಸುವ ಉದ್ದೇಶವಾಗಿತ್ತು.[೯]

ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಬದಲಾಯಿಸಿ

ಆರಂಭಿಕ ಪ್ರತಿಕ್ರಿಯೆ ಬದಲಾಯಿಸಿ

ಮೊದಲು ಬಿಡುಗಡೆಯಾದಾಗ, ಟ್ವೆಲ್ವ್ ಆ್ಯಂಗ್ರಿ ಮೆನ್ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು.

ಆದರೆ, ಚಲನಚಿತ್ರವು ಅಮೇರಿಕದ ಬಾಕ್ಸ್ ಆಫ಼ಿಸ್‍ನಲ್ಲಿ ನಿರಾಶಾದಾಯಕವಾಗಿತ್ತು ಆದರೆ ವಿದೇಶದಲ್ಲಿ ಹೆಚ್ಚು ಉತ್ತಮವಾಗಿ ಓಡಿತು.[೩] ವರ್ಣ ಮತ್ತು ಅಗಲಪರದೆಯ ತಯಾರಿಕೆಗಳು ಇದರ ನಿರಾಶಾದಾಯಕ ಬಾಕ್ಸ್ ಆಫ಼ಿಸ್ ಪ್ರದರ್ಶನಕ್ಕೆ ಕೊಡುಗೆ ನೀಡಿರಬಹುದು. ದೂರದರ್ಶನದಲ್ಲಿ ಮೊದಲ ಬಾರಿಗೆ ಪ್ರಸಾರವಾದಾಗ ಈ ಚಿತ್ರವು ಅಂತೂ ಕೊನೆಗೆ ತನ್ನ ಪ್ರೇಕ್ಷಕರನ್ನು ಕಂಡುಕೊಂಡಿತು.

ಚಿತ್ರದ ಕೊಡುಗೆ ಬದಲಾಯಿಸಿ

ಚಿತ್ರವನ್ನು ಶ್ರೇಷ್ಠಕೃತಿಯಾಗಿ ಕಾಣಲಾಗುತ್ತದೆ, ವಿಮರ್ಶಾತ್ಮಕ ಮತ್ತು ಜನಪ್ರಿಯ ಎರಡೂ ದೃಷ್ಟಿಗಳಿಂದಲೂ ಬಹಳ ಮನ್ನಣೆ ಪಡೆಯುತ್ತದೆ. ೨೦೧೧ರಲ್ಲಿ, ಈ ಚಲನಚಿತ್ರವು ಯುನೈಟಡ್ ಕಿಂಗ್ಡಮ್‍ನಲ್ಲಿನ ಪ್ರೌಢಶಾಲೆಗಳಲ್ಲಿ ಎರಡನೇ ಅತಿ ಹೆಚ್ಚು ಪ್ರಸಾರ ಮಾಡಲಾದ ಚಿತ್ರವಾಗಿತ್ತು.[೧೦]

ಪ್ರಶಸ್ತಿಗಳು ಬದಲಾಯಿಸಿ

ಈ ಚಲನಚಿತ್ರವು ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಲನಚಿತ್ರ ಮತ್ತು ರೂಪಾಂತರಿತ ಚಿತ್ರಕಥೆಯ ಅತ್ಯುತ್ತಮ ಬರಹದ ವರ್ಗಗಳಲ್ಲಿ ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತ್ತು. ಎಲ್ಲ ಮೂರು ವರ್ಗಗಳಲ್ಲಿ ಇದು ದ ಬ್ರಿಜ್ ಆನ್ ದ ರಿವರ್ ಕ್ವಾಯ್ಗೆ ಸೋತಿತು. ೭ನೇ ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರವು ಗೋಲ್ಡನ್ ಬೇರ್ ಪ್ರಶಸ್ತಿಯನ್ನು ಗೆದ್ದಿತು.[೧೧]

ಸಾಂಸ್ಕೃತಿಕ ಪ್ರಭಾವಗಳು ಬದಲಾಯಿಸಿ

ಕಾಲೇಜಿನಲ್ಲಿದ್ದಾಗ ಟ್ವೆಲ್ವ್ ಆ್ಯಂಗ್ರಿ ಮೆನ್ ನೋಡಿದ್ದು ಕಾನೂನು ವೃತ್ತಿಯನ್ನು ಬೆನ್ನಟ್ಟುವ ತಮ್ಮ ನಿರ್ಧಾರದ ಮೇಲೆ ಪ್ರಭಾವ ಬೀರಿತು ಎಂದು ಅಮೇರಿಕದ ಸುಪ್ರೀಮ್ ಕೋರ್ಟ್ ನ್ಯಾಯಾಧೀಶೆ ಸೊಟೊಮಾಯರ್ ಹೇಳಿದ್ದಾರೆ.

ಈ ಚಿತ್ರದ ಅನೇಕ ರೂಪಾಂತರಗಳಿವೆ, ಗುಂಟರ್ ಗ್ರಾವರ್ಟ್ ನಿರ್ದೇಶಿಸಿದ ಜರ್ಮನ್ ಟಿವಿ ತಯಾರಿಕೆ ಡೈ ಜ಼್ವೋಲ್ಫ್ ಗೆಶ್ವೋರೆನೆನ್, ಜಪಾನ್‍ನ ಜುನಿನಿನ್ ನೋ ಯಾಸಾಶಿ ನಿಹೋಂಜಿನ್ ("೧೨ ಸೌಮ್ಯ ಜಾಪಾನೀಯರು"). ೧೯೮೭ರ ಹಿಂದಿ ಚಲನಚಿತ್ರ ಏಕ್ ರುಕಾ ಹುವಾ ಫೈಸ್ಲಾ ಮತ್ತು ಕನ್ನಡ ಚಲನಚಿತ್ರ ದಶಮುಖ ಈ ಚಿತ್ರದ ರೀಮೇಕ್‍ಗಳಾಗಿವೆ ಮತ್ತು ಬಹುತೇಕವಾಗಿ ಸಮಾನವಾದ ಕಥಾಹಂದರವನ್ನು ಹೊಂದಿವೆ. ಇತರ ರೂಪಾಂತರಗಳೆಂದರೆ ರಷ್ಯನ್ ನಿರ್ದೇಶಕ ನಿಕಿತಾ ಮಿಖಾಲ್ಕೊವ್‍ರ ೨೦೦೭ರ 12, ೨೦೧೫ರ ಚೈನೀಸ್ ಚಲನಚಿತ್ರ ಟ್ವೆಲ್ವ್ ಸಿಟಿಜ಼ನ್ಸ್.

ಉಲ್ಲೇಖಗಳು ಬದಲಾಯಿಸಿ

  1. "12 Angry Men – Details". AFI Catalog of Feature Films. Retrieved July 8, 2018.
  2. "New Acting Trio Gains Prominence". Los Angeles Times. April 9, 1957. p. 23.
  3. ೩.೦ ೩.೧ ೩.೨ ೩.೩ Hy Hollinger (December 24, 1958). "Telecast and Theatre Film, Looks As If '12 Angry Men' May Reap Most Dough As Legit Play". Variety. p. 5. Retrieved May 21, 2019 – via Archive.org.
  4. Anita Ekberg Chosen for 'Mimi' Role Louella Parsons:. The Washington Post and Times Herald (1954–1959) Washington, D.C., 8 Apr 1957: A18.
  5. "Top Grosses of 1957", Variety, 8 January 1958: 30
  6. Hy Hollinger (February 27, 1957). "Film reviews: 12 Angry Men". Variety. p. 6. Retrieved June 7, 2019 – via archive.org.
  7. "12 Angry Men". Harrison's Reports. March 2, 1957. p. 35. Retrieved June 7, 2019 – via archive.org.
  8. "AFI's 10 Top 10 Courtroom Drama". American Film Institute. 2008-06-17. Retrieved 2014-11-29.
  9. "Evolution of Twelve Angry Men". Playhouse Square. Archived from the original on January 6, 2009. Retrieved September 11, 2008.
  10. "Top movies for schools revealed". BBC News. December 13, 2011. Retrieved January 4, 2012.
  11. "7th Berlin International Film Festival: Prize Winners". berlinale.de. Archived from the original on ಏಪ್ರಿಲ್ 4, 2014. Retrieved December 28, 2009.
ಉಲ್ಲೇಖ ದೋಷ: <ref> tag with name "12AngryMen1957film-r1" defined in <references> is not used in prior text.

ಹೆಚ್ಚಿನ ಓದಿಗೆ ಬದಲಾಯಿಸಿ

  • Lumet, Sidney (1995). Making Movies.  ISBN 978-0-679-75660-6
  • Ellsworth, Phoebe C. (2003). "One Inspiring Jury [Review of 'Twelve Angry Men']". Michigan Law Review. 101 (6): 1387–1407. doi:10.2307/3595316. JSTOR 3595316. In depth analysis compared with research on actual jury behaviour.
  • The New York Times, April 15, 1957, "12 Angry Men", review by A. H. Weiler
  • Munyan, Russ (2000). Readings on Twelve Angry Men, Greenhaven Press,  ISBN 978-0-7377-0313-9
  • Chandler, David (2005). "The Transmission model of communication" Communication as Perspective Theory. Sage publications. Ohio University
  • Lanham, Richard (2003). Introduction: The Domain of Style analyzing prose. New York: Continuum

ಬಾಹ್ಯ ಸಂಪರ್ಕಗಳು ಬದಲಾಯಿಸಿ